ನಾನಲ್ಲ, ನಾವು ಎಂಬ ಭಾವ ರಾಜಕೀಯದಲ್ಲಿ ಮೂಡಲಿ

ಪಕ್ಷಕ್ಕಿಂತ ವ್ಯಕ್ತಿ ದೊಡ್ಡವ ಎಂದುಕೊಳ್ಳುವುದು ವಿಕೃತ ಮಾನಸಿಕತೆ ಎಂದಿದ್ದರು ಮೋದಿ  !
ಅನಿರೀಕ್ಷಿತ ಬೆಳವಣಿಗೆಯಲ್ಲಿ ಉತ್ತರಾಖಂಡ ರಾಜ್ಯದ ಮುಖ್ಯಮಂತ್ರಿಯಾಗಿ ವಾರ ಕಳೆಯುವಷ್ಟರಲ್ಲೆ ಅಚ್ಚರಿಯ ಹೇಳಿಕೆಗಳನ್ನು ನೀಡಿದವರು ತೀರ್ಥ್ ಸಿಂಗ್ ರಾವತ್. ಹರಿದ್ವಾರದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾವತ್, ಈ ಹಿಂದೆ ಶ್ರೀರಾಮನು ಸಮಾಜಕ್ಕೆ ಉತ್ತಮ ಕೆಲಸ ಮಾಡಿದ್ದರಿಂದ ನಂತರ ಜನರು ರಾಮನನ್ನು ದೇವರೆಂದು ಪರಿಗಣಿಸಲು ಆರಂಭಿಸಿದರು. ಅದೇ ರೀತಿ ಪ್ರಧಾನಿ ನರೇಂದ್ರ ಮೋದಿಯವರನ್ನೂ ಮುದೊಂದು ದಿನ ಜನರು ದೇವರಂತೆ ಕಾಣುತ್ತಾರೆ ಎಂದರು.
ಹೌದು. ಮಾನವನು ಮಾಧವನಾಗಬಲ್ಲ ಭಾರತ ದೇಶ ಇದು. ತನ್ನ ಕಾರ್ಯ, ಬುದ್ಧಿಯ ಬಲದಿಂದ ದೇವರ ಸ್ಥಾನವನ್ನು ಪಡೆದ ಸಾಧು ಸಂತರಿಗೆ ಇಲ್ಲಿ ಲೆಕ್ಕವಿಲ್ಲ. ಶ್ರೀಕೃಷ್ಣನಿಂದ ಆರಂಭವಾಗಿ ಸಾಯಿಬಾಬಾವರೆಗೆ ಯಾವುದೇ ಜಾತಿ, ಸಮುದಾಯದಲ್ಲಿ ಜನಿಸಿರಲಿ, ಅವರ ಜೀವನಾದರ್ಶಗಳನ್ನು ಕಂಡ ಸಮಾಜ ದೇವರ ಪಟ್ಟ ಕಟ್ಟಿದೆ, ದೇವಸ್ಥಾನವನ್ನೂ ಕಟ್ಟಿ ಪೂಜಿಸುತ್ತಿದೆ. ಮಾನವ, ದೇವರಾಗುವ ಪ್ರಕ್ರಿಯೆ ಇಲ್ಲಿ ನಿರಂತರ. ಸಮಾಜಕ್ಕೆ ತನ್ನನ್ನು ಕಾಪಾಡುವ “ಮೆಸ್ಸಯ್ಯ”(ಆಪದ್ಬಾಂಧವ) ಇರಲೇಬೇಕು. ತನ್ನ ಕಷ್ಟಗಳನ್ನು ಹೇಳಿಕೊಳ್ಳಲು, ಸಮಸ್ಯೆಯನ್ನು ಪರಿಹರಿಸಲು ದೇವರು ಬೇಕು. ಹೊಸ ಸಮಸ್ಯೆ ಬಂದಾಗ ಹೊಸ ದೇವರನ್ನು ಹುಟ್ಟುಹಾಕುವ ಸಂಪ್ರದಾಯವೂ ಇದೆ. ಇಷ್ಟೆಲ್ಲ ಹಿನ್ನೆಲೆಯುಳ್ಳ ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇವರಿಗೆ ಹೋಲಿಕೆ ಮಾಡಿದರೆ ತಪ್ಪೇನು ಎಂದೆನಿಸಬಹುದು. ರಾವತ್ ಅವರ ಅಂದಿನ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಅದೇ ರೀತಿ, ಇದು ಅತಿಯಾಯಿತು ಎಂದವರೂ ಇದ್ದಾರೆ.
ಹಾಗಾದರೆ ಅತಿಯಾಯಿತು ಎಂದು ಹೇಳಲು ಕಾರಣವೇನು? ನಿಜಕ್ಕೂ ರಾವತ್ ಪ್ರತಿನಿಧಿಸುವ ಪಕ್ಷದ ಸಂಪ್ರದಾಯವೇ ಇದು? ಅವರೇ ಒಪ್ಪಿ, ಅಪ್ಪಿರುವ ಭಾರತೀಯ ಜನತಾ ಪಕ್ಷದ ಸಂವಿಧಾನ ಇದಕ್ಕೆ ಅವಕಾಶ ನೀಡುತ್ತದೆಯೇ? ಈ ಸಿದ್ಧಾಂತದ ಪ್ರವರ್ತಕರು, ಪಕ್ಷದ ಪೂರ್ವಸೂರಿಗಳು, ಪ್ರಮುಖ ನಾಯಕರು ಯಾವ ನಿಲುವು ಹೊಂದಿದ್ದರು ಎಂಬುದನ್ನು ಅವಲೋಕಿಸಿದರೆ ಕೆಲ ಉತ್ತರಗಳು ಲಭಿಸುತ್ತವೆ.
1975ರಲ್ಲಿ ಪ್ರಧಾನಿ ಇಂದಿರಾಗಾಂಧಿ ತುರ್ತುಪರಿಸ್ಥಿತಿ ಘೋಷಣೆ ಮಾಡುವ ಮೂಲಕ ನಾಗರಿಕ ಹಕ್ಕುಗಳನ್ನು, ಸ್ವಾತಂತ್ರ್ಯವನ್ನು ನಿರ್ಬಂಧಿಸಿದರು. ಸ್ವಾತಂತ್ರ್ಯೋತ್ತರ ಭಾರತೀಯರು ಸ್ವಾತಂತ್ರ್ಯಹರಣವನ್ನು ಸಹಿಸಲಿಲ್ಲ. ಲೋಕನಾಯಕ ಜಯಪ್ರಕಾಶ ನಾರಾಯಣರ ನೇತೃತ್ವದಲ್ಲಿ ದೇಶದ ಜನತೆ ಒಟ್ಟಾದರು. ಭಾರತೀಯ ಲೋಕದಳ, ಕಾಂಗ್ರೆಸ್(ಒ), ಸೋಶಿಯಲಿಸ್ಟ್ ಪಾರ್ಟಿ ಹಾಗೂ ಜನಸಂಘ ಒಟ್ಟಾಗಿ ರಚನೆಯಾದ ಜನತಾ ಪಕ್ಷದ ಸರಕಾರ ಅಸ್ತಿತ್ವಕ್ಕೆ ಬಂದಿತು. ಮೊರಾರ್ಜಿ ದೇಸಾಯಿ ಪ್ರಧಾನಿಯಾದ ಸರಕಾರದಲ್ಲಿ ಜನಸಂಘದಿಂದ ಅಟಲ್ ಬಿಹಾರಿ ವಾಜಪೇಯಿ ಹಾಗೂ ಎಲ್. ಕೆ. ಆಡ್ವಾಣಿ ಸಚಿವರಾದರು. ಇಂದಿರಾಗಾಂಧಿ ಮೇಲಿನ ಸಿಟ್ಟಿನಿಂದ ಜನತಾಪಕ್ಷವನ್ನು ಅಧಿಕಾರಕ್ಕೇರಿಸಿದ್ದ ಜನರು, ಇಂದಿರಾ ಗಾಂಧಿಯವರೇ ನಂತರ ಬಣ್ಣಿಸಿದಂತೆ “ಖಿಚಡಿ”ಸರಕಾರದ ಆಂತರಿಕ ಗೊಂದಲಗಳಿಂದ ಬಸವಳಿದರು. 1980ರ ಚುನಾವಣೆಯಲ್ಲಿ ಇಂದಿರಾ ಪುನರಾಗಮನ ಜನರ ಮನಸ್ಸಿನಲ್ಲಿ ಹಾಗೂ ರಾಜಕೀಯ ವಲಯದಲ್ಲಿ ಬಹಳಷ್ಟು ಮುಂಚೆಯೇ ಖಾತ್ರಿಯಾಗಿತ್ತು. ಇತ್ತ ಜನತಾ ಪಕ್ಷದಲ್ಲಿ ವಿಲೀನವಾದರೂ ಜನಸಂಘದಿಂದ ಬಂದವರನ್ನು ಮಲತಾಯಿ ಮಕ್ಕಳಂತೆ ಕಾಣಲಾಗುತ್ತಿದೆ ಎಂಬ ಅಸಮಾಧಾನ ಕಾಣತೊಡಗಿತು. ದೇಶಾದ್ಯಂತ ಜನಸಂಘದ ಕಾರ್ಯಕರ್ತರನ್ನು ಭೇಟಿ ಮಾಡಿದ ಆಡ್ವಾಣಿ, ವಾಜಪೇಯಿ ಅವರಿಗೆ ಈ ವಿಷಯ ಮನವರಿಕೆಯಾಯಿತು. ದಿನೇದಿನೆ ಮುನಿಸು ವಿಪರೀತವಾಗಿ, ಅಂತಿಮವಾಗಿ ಜನಸಂಘ ಮೂಲದ ಎಲ್ಲರನ್ನೂ ಪಕ್ಷದಿಂದ ಉಚ್ಛಾಟಿಸಲಾಯಿತು. ಭಾರತದ ರಾಜಕೀಯ ಇತಿಹಾಸದಲ್ಲಿ ಹೊಸ ಇತಿಹಾಸಕ್ಕೆ ಇದು ನಾಂದಿ ಹಾಡಿತು. 1980ರ ಏಪ್ರಿಲ್ 6ರಂದು ದೆಹಲಿಯ ಫಿರೋಜ್ ಷಾ ಕೋಟ್ಲ ಮೈದಾನದಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ, ಭಾರತೀಯ ಜನತಾ ಪಕ್ಷ(ಬಿಜೆಪಿ) ಸ್ಥಾಪಿಸುವ ಘೋಷಣೆ ಮಾಡಲಾಯಿತು. ಅಟಲ್ ಬಿಹಾರಿ ವಾಜಪೇಯಿ ಮೊದಲ ಅಧ್ಯಕ್ಷರಾದರು. ಈ ಸಂದರ್ಭದಲ್ಲಿ ಮೊದಲ ಭಾಷಣ ಮಾಡಿದ ಅಟಲ್, “ನಾವು ಜನಸಂಘದ ಮತ್ತೊಂದು ರೂಪವನ್ನು ಇಲ್ಲಿ ಸೃಷ್ಟಿಸುತ್ತಿಲ್ಲ. ನಾವು ಮತ್ತೆ ಹಿಂದಕ್ಕೆ ತೆರಳಲು ಇಚ್ಛಿಸುವುದಿಲ್ಲ.ನಾವು ಭವಿಷ್ಯದತ್ತ ನೋಡುತ್ತಿದ್ದೇವೆ. ಇದು ಹಿನ್ನೋಟವಲ್ಲ. ಆದ್ಧರಿಂದ ಹೊಸ ಪಕ್ಷವನ್ನು ಕಟ್ಟುತ್ತಿದ್ದೇವೆ. ನಮ್ಮ ನಿಜವಾದ ಸಿದ್ಧಾಂತ ಹಾಗೂ ಚಿಂತನೆಯೊಂದಿಗೆ ಮುಂದುವರಿಯುತ್ತೇವೆ” ಎಂದು ಘೋಷಿಸಿದರು. ಜನಸಂಘ, ಜನತಾ ಪಕ್ಷವಷ್ಟೆ ಅಲ್ಲದೆ ಕಾಂಗ್ರೆಸ್ ಮಾಡಿಕೊಂಡು ಬಂದಿದ್ದ ಕುಟುಂಬ ಕೇಂದ್ರಿತ, ವ್ಯಕ್ತಿ ಕೇಂದ್ರಿತ ರಾಜಕಾರಣಕ್ಕೆ ವಿದಾಯ ಹೇಳುವ ಸ್ಪಷ್ಟ ಮುನ್ಸೂಚನೆಯನ್ನು ನೀಡಿದರು.
ಜನಸಂಘದ ಸ್ಥಾಪಕರಲ್ಲೊಬ್ಬರಾದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರು ಸಂಘಟನೆಯಲ್ಲಿ “ನಾನು ಮತ್ತು ನಾವು” ಎಂಬ ಲೇಖನವನ್ನೇ ಬರೆದಿದ್ದಾರೆ (ಪಂ. ದೀನದಯಾಳ್ ಉಪಾಧ್ಯಾಯ ಸಮಗ್ರ ಬರೆಹಗಳು: ಸಂಪುಟ8). ಕೆಲವರು, ತಾವು ದೊಡ್ಡವರಾದರೆ ದೇಶ ಎತ್ತರಕ್ಕೆ ಬೆಳೆಯುತ್ತದೆ ಎಂದು ಭಾವಿಸುತ್ತಾರೆ. ಅವರ ಮಹತ್ವಾಕಾಂಕ್ಷೆಯು ಮೇಲ್ನೋಟಕ್ಕೆ, ರಾಷ್ಟ್ರದ ಪರವಾಗಿಯೇ ಇರುವಂತೆ ಕಾಣುತ್ತದೆ. ಆದರೆ ಅದು ನಿಜವಾಗಿಯೂ ವೈಯಕ್ತಿಕವಾಗಿರುತ್ತದೆ. ರಾಷ್ಟ್ರದ ಸರ್ವಾಂಗೀಣ ಪ್ರಗತಿಯು ಒಬ್ಬ ವ್ಯಕ್ತಿಯಿಂದ ಸಾಧ್ಯವಾಗದು. ಸ್ವತಃ ಒಬ್ಬ ವ್ಯಕ್ತಿಯೂ ತನ್ನಷ್ಟಕ್ಕೆ ತಾನೇ ಏನೂ ಮಾಡಲಾರ. ಸ್ವಲ್ಪ ಗಂಭೀರವಾಗಿ ಯೋಚಿಸಿದಾಗ, “ನಾನು” ಎಂಬುದರ ವ್ಯಾವಹಾರಿಕ ಅರ್ಥ “ನಾವು” ಎಂಬುದೇ ಆಗಿದೆ. ಇದರರ್ಥ, ನಾನು ಎಂಬುದಕ್ಕೆ ಯಾವುದೇ ಶಕ್ತಿಯಿಲ್ಲ ಎಂಬ ಅರ್ಥವಲ್ಲ. ಸಾಮೂಹಿಕತೆಯಲ್ಲಿ ಮಾತ್ರ ಅಮರತ್ವವನ್ನು ಹೊಂದಬಹುದು ಎಂಬುದು ಅದರ ಸಾರ. ಪ್ರತಿಯೊಬ್ಬ ವ್ಯಕ್ತಿಯ “ನಾನು” ಹಾಗೂ “ನನ್ನದು” ವಿಚಾರವನ್ನು ತ್ಯಜಿಸಿ ನಾವು ಎಂದು ಯೋಚಿಸಬೇಕು. ಇಲ್ಲದಿದ್ದಲ್ಲಿ, ತಾನು ರಾಷ್ಟ್ರಕ್ಕಾಗಿ ಪ್ರಾಣವನ್ನು ಅರ್ಪಿಸಲು ಸಿದ್ಧ ಎಂದು ಹೇಳುತ್ತಲೇ ವ್ಯಕ್ತಿಯು ಎಲ್ಲ ಕಾರ್ಯಗಳನ್ನೂ ತನ್ನ ವೈಯಕ್ತಿಕ ಹಿನ್ನೆಲೆಯಲ್ಲಿ ಮಾಡುತ್ತಿರುತ್ತಾನೆ. ಇದರಿಂದ ವ್ಯಕ್ತಿಗೂ, ಸಮಾಜಕ್ಕೂ ಒಳಿತಲ್ಲ ಎಂದು ವಿವರಿಸಿದ್ದಾರೆ.
ಇದಕ್ಕೂ ಹಿಂದೆ, ಅಂದರೆ ಬಿಜೆಪಿಯ ಸೈದ್ಧಾಂತಿಕ ಆಧಾರವಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪಕ ಡಾ. ಕೇಶವ ಬಲಿರಾಂ ಹೆಡಗೆವಾರ್ ಅವರ ಜೀವನದ ನಿದರ್ಶನವೊಂದು, ಸಂಘಟನೆಯಲ್ಲಿ ವ್ಯಕ್ತಿಯ ಕುರಿತು ಸ್ಪಷ್ಟನೆ ನೀಡುತ್ತದೆ. ಗುರುಪೂರ್ಣಿಮೆಯ ದಿನ ಸ್ವಯಂಸೇವಕರೆಲ್ಲರೂ ಹೆಡಗೆವಾರರಿಗೆ ದಕ್ಷಿಣೆಯನ್ನು ತಂದುಕೊಡಲು ಮುಂದಾದರು. ಆಗ ಮಾತನಾಡಿದ ಹೆಡಗೆವಾರ್, ಆರೆಸ್ಸೆಸ್ಸಿನಲ್ಲಿ ವ್ಯಕ್ತಿ ಎಂದಿಗೂ ಗುರುವಾಗುವುದಿಲ್ಲ. ವ್ಯಕ್ತಿಯಲ್ಲಿ ದೋಷಗಳು ಸಾಮಾನ್ಯ. ಹಾಗೂ ವ್ಯಕ್ತಿ ನಶ್ವರ. ವ್ಯಕ್ತಿ ನಿಧನನಾದಾಗ ಅಥವಾ ಅವನ ದೋಷಗಳು ಪ್ರಕಟಗೊಂಡಾಗ ಸಂಘಟನೆ ಮೇಲೆ ಹಾಗೂ ಸಂಘಟನೆಯ ಮೇಲೆ ನಂಬಿಕೆಯಿಟ್ಟವರಲ್ಲಿ ಆಘಾತವಾಗುತ್ತದೆ. ಹೀಗಾಗಿ ವ್ಯಕ್ತಿಪೂಜೆ ಬೇಡ, ಇಂದಿನಿಂದ ಭಗವಾಧ್ವಜವೇ ನಮ್ಮ ಗುರು ಎಂದು ಘೋಷಿಸಿದರು. ಆರೆಸ್ಸೆಸ್ಸಿನ ಎರಡನೇ ಸರಸಂಘಚಾಲಕ ಮಾಧವರಾವ್ ಸದಾಶಿವರಾವ್ ಗೋಳ್ವಲ್ಕರ್, ಸಂಘಟನೆ ಹಾಗೂ ನಾಯಕತ್ವದ ಕುರಿತು ಆಗಾಗ ಹೇಳುತ್ತಿದ್ದ ಮಾತು: “ಇದು(ಸರಸಂಘಚಾಲಕ ಸ್ಥಾನ) ವಿಕ್ರಮಾದಿತ್ಯನ ಸಿಂಹಾಸನ ಇದ್ದಂತೆ. ಇಲ್ಲಿ ಕುಳಿತ ಜನಸಾಮಾನ್ಯನೂ ನ್ಯಾಯ ಹೇಳಬಹುದು.”
ಬಿಜೆಪಿಯಲ್ಲಿ ನರೇಂದ್ರ ಮೋದಿಯವರು ಮುಂಚೂಣಿಗೆ ಬಂದು, ದಿನದಿಂದ ದಿನಕ್ಕೆ ಪ್ರಭಾವವಾಗುತ್ತಿರುವಾಗ, ಅವರನ್ನು “ಪಕ್ಷಕ್ಕಿಂತ ದೊಡ್ಡವರು” ಎಂದು ಹೇಳುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಅದು ಸಾಮಾಜಿಕ ಮಾಧ್ಯಮಗಳಲ್ಲಿರಬಹುದು ಹಾಗೂ ಪಕ್ಷದಲ್ಲಿರಬಹುದು. ಈ ವಿಚಾರದಲ್ಲಿ ಸ್ವತಃ ಮೋದಿಯವರೇ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅತ್ಯಂತ ಭಾವನಾತ್ಮಕವಾಗಿ ಸ್ಪಷ್ಟನೆ ನೀಡಿದ್ದಾರೆ. 2007ರ ಗುಜರಾತ್ ಚುನಾವಣೆಗಳ ಸಂದರ್ಭದಲ್ಲಿ, ಪಕ್ಷಕ್ಕಿಂತ ದೊಡ್ಡವರಾಗಿ ಮೋದಿ ಬೆಳೆದಿದ್ದಾರೆ ಎಂಬ ಮಾತುಗಳಿದ್ದವು. ಚುನಾವಣೆ ಗೆಲುವಿನ ನಂತರ ಶಾಸಕರನ್ನು ಉದ್ದೇಶಿಸಿ ಮಾತನಾಡಿದ್ದ ಮೋದಿ, ಪಕ್ಷಕ್ಕಿಂತ ಮೋದಿ ದೊಡ್ಡವ ಎಂದು ಹೇಳುವವರಿಗೆ ಬಿಜೆಪಿ ಹಾಗೂ ಜನಸಂಘದ ಇತಿಹಾಸದ ಅರಿವಿಲ್ಲ. ತಾಯಿಗಿಂತ ಮಗ ಎಂದಿಗೂ ದೊಡ್ಡವನಾಗಲು ಸಾಧ್ಯವಿಲ್ಲ. ಪಕ್ಷಕ್ಕಿಂತ ಮೋದಿ ದೊಡ್ಡವ ಎಂದು ಹೇಳುವುದು ವಿಕೃತ ಮಾನಸಿಕತೆ. ನಿಮ್ಮ ದೃಷ್ಟಿಕೋನ ನನ್ನಲ್ಲಿಗೇ ಮುಕ್ತಾಯವಾಗುವುದರಿಂದ ಈ ಸಮಸ್ಯೆ ಎದುರಾಗಿದೆ. ನಿಮ್ಮ ದೃಷ್ಟಿಕೋನವನ್ನು ವಿಸ್ತರಿಸಿಕೊಂಡರೆ, ತಮ್ಮ ಹೆಗಲ ಮೇಲಿಟ್ಟು ಮುನ್ನಡೆಸಿದ ಅಸಂಖ್ಯಾತ ಬಿಜೆಪಿ ಕಾರ್ಯಕರ್ತರು ನಿಮ್ಮ ಕಣ್ಣಿಗೆ ಕಾಣುತ್ತಾರೆ” ಎಂದು ಭಾವನಾತ್ಮಕವಾಗಿ ಮಾತನಾಡಿದ್ದರು.
ಅಧಿಕಾರದ ಕೇಂದ್ರಕ್ಕೆ ತೆರಳಿದಂತೆಲ್ಲ, ತಮ್ಮನ್ನು ಇಂದ್ರ-ಚಂದ್ರ ಎಂದು ಹೊಗಳುವವರ ಸಂಖ್ಯೆ ಹೆಚ್ಚುತ್ತಲೇ ಸಾಗುತ್ತದೆ. ಸ್ವತಃ ನಾಯಕರಿಗೂ ಇದನ್ನು ನಿರಾಕರಣೆ ಮಾಡುವುದು ಬಹು ಕಷ್ಟದ ಕೆಲಸ. ಆದರೆ ಯಾವುದೇ ಸಂಘಟನೆಯ ಪ್ರತಿಯೊಬ್ಬರೂ ತಮ್ಮ ಇತಿಹಾಸವನ್ನು ಅರಿತರೆ ಇಂತಹ ಸಮಸ್ಯೆಗಳು ಉದ್ಭವಿಸುವುದಿಲ್ಲ.
ಕಾಂಗ್ರೆಸ್ ಪಕ್ಷದಲ್ಲಿ ವ್ಯಕ್ತಿ ಪೂಜನೆ ಎಂಬುದು ಹಾಸುಹೊಕ್ಕಾಗಿದೆ. ಯಾವ ನಾಯಕರು ಮುಖ್ಯಮಂತ್ರಿ, ಅಧ್ಯಕ್ಷ ಆಗುತ್ತಾರೆ ಎಂಬುದರ ಆಧಾರದಲ್ಲಿ ಅನೇಕ ಕಾರ್ಯಕರ್ತರು ಕೆಲಸ ಮಾಡುವ ರೀತಿ ಬದಲಾವಣೆ ಆಗುತ್ತದೆ. ಇದಕ್ಕೆ ಅಪವಾದ ಎಂಬ ಕಾರ್ಯಕರ್ತರೂ ಇಲ್ಲದಿಲ್ಲ, ಆದರೆ ಸಂಖ್ಯೆ ಕಡಿಮೆ. ಇದು ಕೇಂದ್ರದಲ್ಲಿ ನೆಹರೂ ಕುಟುಂಬಕ್ಕೆ ಮಾತ್ರ ಸೀಮಿತವಾಗಿದೆ ಎಂದರೆ ತಪ್ಪಾಗುತ್ತದೆ. ಪ್ರತಿ ಹಂತದಲ್ಲೂ ವ್ಯಕ್ತಿಕೇಂದ್ರಿತವಾಗಿ ಸಂಘಟನೆಯನ್ನು ಬೆಳೆಸಲಾಗಿದೆ. ಹಾಗೆ ನೋಡಿದರೆ ಕಾಂಗ್ರೆಸ್ ನಾಯರಿಗಾಗಲಿ, ಕಾರ್ಯಕರ್ತರಿಗಾಗಲಿ ತಮ್ಮದೇ ಪಕ್ಷದಲ್ಲಿ ಮಾದರಿಗಳಿಗೆ ಕೊರತೆ ಇಲ್ಲ.
ಸರ್ದಾರ್ ವಲ್ಲಭಭಾಯಿ ಪಟೇಲರು, ಲಾಲ್ ಬಹದ್ದೂರ್ ಶಾಸ್ತ್ರಿ, ಪಿ.ವಿ. ನರಸಿಂಹರಾವ್ ಅವರಂತಹ ವ್ಯಕ್ತಿಗಳಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಸ್ವೀಕಾರಾರ್ಹವಾಗಿಸುವ ಪ್ರಯತ್ನವನ್ನು ಅನೇಕರು ಮಾಡಿದ್ದಾರೆ. ದೇಶ ಛಿದ್ರಛಿದ್ರವಾಗುವುದನ್ನು ತಪ್ಪಿಸಿ ಒಗ್ಗೂಡಿಸಿದವರು ಪಟೇಲರು. ಇನ್ನು ಶಾಸ್ತ್ರಿಯವರದ್ದು ದೇಶದ ಇತಿಹಾಸದಲ್ಲೆ ಅಚ್ಚಳಿಯದ ವ್ಯಕ್ತಿತ್ವ. ದೇಶ ಸಂಕಷ್ಟದಲ್ಲಿರುವಾಗ ತಮ್ಮ ಹಿತವನ್ನು ಮಾತ್ರ ನೋಡಿಕೊಂಡು ಕೂರುವುದು ತಪ್ಪು. ದೇಶದ ಆಹಾರ ಕೊರತೆಯನ್ನು ಸರಿದೂಗಿಸಲು ಎಲ್ಲರೂ ಒಂದು ಹೊತ್ತಿನ ಆಹಾರ ತ್ಯಜಿಸಬೇಕು ಎಂಬ ಕರೆಯೊಂದಕ್ಕೆ ದೇಶದ ಕೋಟ್ಯಂತರ ಜನ ಓಗೊಟ್ಟ ರೀತಿ ಅನನ್ಯ. ಶಾಸ್ತ್ರಿ ಎಂಬ ವ್ಯಕ್ತಿ ತನ್ನ ವೈಯಕ್ತಿಕ ಜೀವನದ ಶುದ್ಧತೆಯನ್ನು ಆಧಾರವಾಗಿಸಿ ನೀಡಿದ ಕರೆ ಅದು.ಭಾರತ ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾಗ ಹೊಸ ವ್ಯವಸ್ಥೆಗೆ ತೆರೆದುಕೊಳ್ಳುವ ಮೂಲಕ ಆರ್ಥಿಕತೆಗೆ ತಿರುವು ನೀಡಿದವರು ಪಿ.ವಿ. ನರಸಿಂಹರಾಯರು. ಆದರೆ ಇಂತಹ ನಾಯಕರ ವಿಚಾರಗಳು ಕಾಣದಂತೆ ತೆರೆ(ಮಾಸ್ಕ್) ಮಾಡಲಾಗಿದೆ. ಕೇಂದ್ರದಿಂದ ರಾಜ್ಯದವರೆಗೆ ಇಂತಹ ಮಾದರಿಗಳನ್ನು ಆಧಾರವಾಗಿಸಿಕೊಂಡು, ಪಕ್ಷ ಸಂಘಟನೆಯನ್ನು ವ್ಯಕ್ತಿಕೇಂದ್ರದಿಂದ ಸಿದ್ಧಾಂತ ಕೇಂದ್ರಿತವಾಗಿಸುವ ಅವಕಾಶ ಇದ್ದೇ ಇದೆ.
ಕಾಂಗ್ರೆಸ್ಸಿನ ವಂಶಾಡಳಿತ, ವ್ಯಕ್ತಿ ಕೇಂದ್ರಿತ ವಿಚಾರಗಳನ್ನು ಬಹಿರಂಗವಾಗಿಯೇ ಟೀಕಿಸುತ್ತ ಜನಮನದಲ್ಲಿ ಸ್ಥಾನ ಪಡೆದ ಬಿಜೆಪಿಯಲ್ಲಿ ಅದೇ ಮಾನಸಿಕತೆ ಬೆಳೆಯುತ್ತಿರುವುದು ಆ ಪಕ್ಷಕ್ಕಷ್ಟೆ ನಷ್ಟವಲ್ಲ. ವ್ಯಕ್ತಿ ಕೇಂದ್ರಿತವಲ್ಲದ, ರಾಷ್ಟ್ರ ಮೊದಲು ಎಂದು ಚಿಂತನೆ ನಡೆಸುವ ಸಂಘಟನೆ ನಿರ್ಮಾಣ ಸಾಧ್ಯ ಎಂದು ಕನಸು ಕಾಣುತ್ತಿರುವ ಪ್ರತಿ ಭಾರತೀಯನ ಮನಸ್ಸಿಗೆ ಇದರಿಂದ ಘಾಸಿಯಾಗುತ್ತದೆ.
ಕಡೆಯದಾಗಿ ಇತಿಹಾಸದ ಎರಡು ಘಟನೆ ನೆನೆಯೋಣ:
-ಮಹಾತ್ಮ ಗಾಂಧೀಜಿ ಅವರ ಜನಪ್ರಿಯತೆಯ ಉತ್ತುಂಗ ಕಾಲದಲ್ಲಿ, ಅವರನ್ನು ಆರಾಧಿಸುತ್ತಿದ್ದ ಒಂದಿಷ್ಟು ಮಂದಿ, ಗುಜರಾತಿನ ಗ್ರಾಮವೊಂದರಲ್ಲಿ ಮಹಾತ್ಮ ಮಂದಿರ ನಿರ್ಮಿಸಲು ಮುಂದಾದರು. ಇದು ಗಾಂಧಿಗೆ ಗೊತ್ತಾದ ತಕ್ಷಣ, ಮಹಾತ್ಮ ಮಂದಿರವನ್ನು ವಿರೋಧಿಸಿ ಪತ್ರಿಕೆಯೊಂದಕ್ಕೆ ಲೇಖನ ಬರೆದರು. “ಮೊದಲು ಇದನ್ನು ನಿಲ್ಲಿಸಿ. ನಿಮ್ಮ ಕೆಲಸವು ಸರ್ವಶಕ್ತ ದೇವರಿಗೆ ಮಾಡುವ ಅವಮಾನ ಮತ್ತು ನನ್ನಂಥ ಹುಲುಮಾನವನಿಗೆ ಮಾಡುವ ಮುಜುಗರ. ನಾನಂತೂ ಆ ಸ್ಥಳಕ್ಕೆ ಯಾವತ್ತೂ ಭೇಟಿ ನೀಡುವುದಿಲ್ಲ,’’ ಎಂದು ತನ್ನ ಆರಾಧಕರಿಗೆ ತಾಕೀತು ಮಾಡಿದರು. ಗಾಂಧಿ ಯಾವತ್ತೂ ಆ ಗ್ರಾಮಕ್ಕೆ ಭೇಟಿ ನೀಡಲೇ ಇಲ್ಲ !
—1937ರಲ್ಲಿ ಕಲ್ಕತ್ತಾದಿಂದ ಮುದ್ರಣವಾಗುತ್ತಿದ್ದ ದಿ ಮಾಡ್ರನ್ ರಿವ್ಯೂ ಎಂಬ ಪತ್ರಿಕೆಯಲ್ಲಿ, ಅಂದಿನ ಕಾಂಗ್ರೆಸ್ ಅಧ್ಯಕ್ಷ ಜವಹಾರಲಾಲ್ ನೆಹರು ಅವರನ್ನು ತೀವ್ರವಾಗಿ ಟೀಕಿಸಿ, ಚಾಣಕ್ಯ ಎಂಬುವವರು ದೊಡ್ಡ ಲೇಖನ ಬರೆದರು. ಆ ವೇಳೆಗೆ ನೆಹರು ಕಾಂಗ್ರೆಸ್ಸಿನ ಜನಪ್ರಿಯ ನಾಯಕ. ಹಾಗಾಗಿ ಅವರೇ ಮತ್ತೊಂದು ಅವಧಿಗೆ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರಿಯಲಿ ಎಂಬುದು ಕೆಲವರ ಬಯಕೆ. ಈ ಅಪೇಕ್ಷೆಯನ್ನು ತನ್ನ ಲೇಖನದಲ್ಲಿ ತರಾಟೆಗೆ ತೆಗೆದುಕೊಂಡಿದ್ದ ಚಾಣಕ್ಯ, ನೆಹರು ಅವರನ್ನು ಪುನರಾಯ್ಕೆ ಮಾಡಿದರೆ, ಅದರಿಂದ ಕಾಂಗ್ರೆಸ್ ಗೆ ಅನಾಹುತ ನಿಶ್ಚಿತ ಎಂದು ಕಟು ಶಬ್ದಗಳಲ್ಲಿ ಪ್ರತಿಪಾದಿಸಿದ್ದರು. ಎಲ್ಲರಿಗೂ ಅಚ್ಚರಿ. ನೆಹರು ಅವರನ್ನು ವಿರೋಧಿಸಿ ಲೇಖನ ಬರೆದ ಈ ಚಾಣಕ್ಯ ಯಾರು ಎಂದು ! ಆಮೇಲೆ ಗೊತ್ತಾಯಿತು ಚಾಣಕ್ಯ ಬೇರಾರು ಅಲ್ಲ, ಅದು ಸ್ವಯಂ ನೆಹರೂ ಅವರೇ ಆಗಿದ್ದರು.
 
Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top