ನಾಯಕರ ಲಂಪಟತನದ ಬಗ್ಗೆ ಧಾರ್ಮಿಕ ಲೋಕ ಮೌನವಾಗಿದ್ದರೆ, ಹಿಂಸೆ ಜನರ ಬದುಕಾಗುತ್ತದೆ
ಜೂಲಿಯಸ್ ಸೀಸರ್ನ ಹೆಂಡತಿ ಪೊಂಪೀಯಾ ಸುಲ್ಲಾ ‘ಬೋನಾ ಡೀ’ ಎಂಬ ಹಬ್ಬವೊಂದನ್ನು ಆಯೋಜಿಸಿದ್ದಳು. ಅದು ಮಹಿಳೆಯರಿಗೆ ಮಾತ್ರ ಮೀಸ-ಲಾಗಿದ್ದ ಹಬ್ಬ. ಆದರೆ ಸೀಸರನ ಸುಂದರ ಪತ್ನಿಯನ್ನು ಒಲಿಸಿಕೊಳ್ಳಬೇಕೆಂಬ ಆಸೆಯಿದ್ದ ಪಬ್ಲಿಯಸ್ ಕ್ಲಾಡಿಯಸ್ ಪಲ್ಚರ್ ಎಂಬ ಯುವಕ, ಮಹಿಳೆಯ ವೇಷ ಧರಿಸಿ ಹಬ್ಬದಲ್ಲಿ ಪಾಲ್ಗೊಂಡು, ಸಿಕ್ಕಿಬಿದ್ದ. ಅವನನ್ನು ಬಂಸಿ ವಿಚಾರಣೆ ನಡೆಸಲಾಯಿತಾದರೂ ಯಾವುದೇ ಸಾಕ್ಷಿ ಲಭಿಸದ ಕಾರಣ ಆತನ ವಿರುದ್ಧ ಸೀಸರ್ ಯಾವುದೇ ಕ್ರಮ ಕೈಗೊಳ್ಳಲಿಲ್ಲ, ಆತನನ್ನು ಬಿಡುಗಡೆ ಮಾಡಿದ. ಆದರೆ ಈ ಘಟನೆ ನಡೆದು ಕೆಲ ದಿನಗಳ ಬಳಿಕ ಸೀಸರ್ ತನ್ನ ಪತ್ನಿಗೆ ವಿಚ್ಛೇದನ ನೀಡಿದ. ಇದಕ್ಕೆ ಆತ ನೀಡಿದ ಕಾರಣ ಏನು ಗೊತ್ತೆ? ‘ಸೀಸರನ ಪತ್ನಿ ಎಂದಿಗೂ ಸಂಶಯಾತೀತಳಾಗಿರಬೇಕು !’
ರೋಮನ್ ಸೇನಾಪತಿಯಾಗಿದ್ದ ಸೀಸರನ ಈ ಇತಿಹಾಸದ ಕಥೆಯನ್ನು ಬಹುತೇಕರು ಕೇಳಿಯೇ ಇರುತ್ತೇವೆ. ಇತಿಹಾಸ ತಿಳಿದಿಲ್ಲದಿದ್ದರೂ, ಸೀಸರನ ಪತ್ನಿ ಸಂಶಯಾತೀತಳಾಗಿರಬೇಕು ಎಂಬ ಮಾತನ್ನಂತೂ ಕೇಳಿರುತ್ತೇವೆ. ಇಲ್ಲಿ ಸೀಸರನ ಪತ್ನಿ ಎಂಬ ಮಾತು ಸಂದರ್ಭಕ್ಕೆ ಒದಗುತ್ತಾದರೂ, ಸಾರ್ವಜನಿಕ ಜೀವನದಲ್ಲಿರುವವರು ಅವರು ಪುರುಷರಾಗಿರಲಿ, ಮಹಿಳೆಯಾಗಿರಲಿ ತಮ್ಮ ವೈಯ-ಕ್ತಿಕ ಜೀವನದ ಕುರಿತು ಅನುಮಾನಗಳಿಗೆ ಎಡೆಯಿರದಂತೆ ನಡೆದುಕೊಳ್ಳಬೇಕೆಂಬುದು ಹೇಳಲು ಹೊರಟಿರುವ ಕೇಂದ್ರ ವಿಷಯ.
ನಮ್ಮ ರಾಮಾಯಣದಲ್ಲೂ ಸೀತೆಯ ಅಗ್ನಿ ಪರೀಕ್ಷೆಯ ಪ್ರಕರಣವನ್ನು ನೋಡುತ್ತೇವೆ. ಊರಿನ ಒಬ್ಬ ಸಾಮಾನ್ಯ ವ್ಯಕ್ತಿ ರಾಜನಾದ ತನ್ನನ್ನು ಸಂಶಯಿಸಿದ್ದಕ್ಕೆ, ಶ್ರೀರಾಮ ಅತ್ಯಂತ ಅನಿರೀಕ್ಷಿತ ನಿರ್ಧಾರ ಕೈಗೊಳ್ಳುತ್ತಾನೆ. ತುಂಬು ಗರ್ಭಿಣಿ ಸೀತೆಯನ್ನು ಕಾಡಿಗೆ ಕಳುಹಿಸುತ್ತಾನೆ. ಸೀತೆ ಕಾಡಿನಲ್ಲಿ ಕಷ್ಟ ಪಟ್ಟರೆ ಇಲ್ಲಿ ತಾನು ಭಾವನಾತ್ಮಕವಾಗಿ ನೋವನುಭವಿಸುತ್ತಾನೆ, ನರಳುತ್ತಾನೆ. ಭಾರತದ ಪ್ರಮುಖ ಕಾದಂಬರಿಕಾರರಾದ ಡಾ. ಎಸ್. ಎಲ್. ಭೈರಪ್ಪನವರು ತಮ್ಮ ‘ಉತ್ತರಕಾಂಡ’ ಕಾದಂಬರಿ-ಯಲ್ಲಿ ಈ ಸಂದರ್ಭವನ್ನು ಈಗಿನ ಕಾಲಘಟ್ಟದಲ್ಲಿ ವಿಶ್ಲೇಷಿಸಿದ್ದಾರೆ. ಮನಃಶಾಸ್ತ್ರದ ಆಧಾರದಲ್ಲಿ, ವೈಯಕ್ತಿಕ ನೆಲೆಯಲ್ಲಿ ಕಾದಂಬರಿ ಚರ್ಚೆ ನಡೆಸುತ್ತದೆ.
ಆದರೆ ಈ ಘಟನೆಯನ್ನು ಸಾಮಾಜಿಕವಾಗಿ ನೋಡಿದರೆ? ಕಾಡಿನಲ್ಲಿ ಇರುವವರೆಗೂ ಸೀತಾರಾಮನಾಗಿದ್ದವನು, ಅಯೋಧ್ಯೆಯ ಸಿಂಹಾಸನ ಏರುವುದು ಸನ್ನಿಹಿತವಾಗುತ್ತಿರುವಂತೆಯೇ ರಾಜಾರಾಮನಾಗುತ್ತಾನೆ. ಅಧಿಕಾರದ ಸುತ್ತಲಿನ ವಿಚಾರಗಳು ಅವನನ್ನು ಪ್ರಭಾವಿಸುತ್ತವೆ. ಇನ್ನು ತನ್ನ ವೈಯಕ್ತಿಕ ಜೀವನ ಹಾಗೂ ಸಾಮಾಜಿಕ ಜೀವನದಲ್ಲಿ ಭಿನ್ನತೆ ಇರುವಂತಿಲ್ಲ. ವೈಯಕ್ತಿಕ ಜೀವನದ ಶುದ್ಧತೆಯೇ ಸಾಮಾಜಿಕ ಜೀವನದಲ್ಲಿ ಹಾಗೂ ಅಕಾರದ ಸ್ಥಾನದಲ್ಲಿ ನ್ಯಾಯ ಒದಗಿಸಲು ಸಾಧ್ಯ. ಹೀಗಾಗಿ ನಾಡಿನ ಕಟ್ಟಕಡೆಯ ವ್ಯಕ್ತಿಯೂ ತನ್ನ ಕುರಿತು ಆದರದ ಭಾವನೆ ಹೊಂದಿರಬೇಕು. ಆಗ ಮಾತ್ರ ಉತ್ತಮ ಆಡಳಿತ ನೀಡಬಹುದು ಎಂದು ಶ್ರೀರಾಮ ಹೆಜ್ಜೆ ಇಡುತ್ತಾನೆ.
ಶ್ರೀರಾಮನ ಪ್ರಸಂಗ ನಡೆದದ್ದು ರಾಜಾಡಳಿತದ ಕಾಲದಲ್ಲಿ. ಅಲ್ಲಿ ಪ್ರಜೆಗಳು ಆಡಳಿತದ ಫಲಾನುಭವಿಗಳು ಮಾತ್ರ.
ಆದರೆ ಈಗ ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ. ಇಲ್ಲಿ ಪ್ರಜೆಗಳೇ ಪ್ರಭುಗಳು. ಐದು ವರ್ಷಕ್ಕೊಮ್ಮೆ ಸಿಕ್ಕುವ ಜಾದೂ ಕಡ್ಡಿಯಿಂದ ಯಾರನ್ನಾದರೂ ರಾಜನಾಗಿಸುವ, ಯಾರನ್ನಾದರೂ ಮೂಲೆಗೆ ತಳ್ಳುವ ಶಕ್ತಿಯನ್ನು ಹೊಂದುತ್ತೇವೆ. ಇಂತಹ ಸಂದರ್ಭದಲ್ಲಿ ರಾಜಕಾರಣಿಗಳ ನೈತಿಕ ಮಟ್ಟ, ವೈಯಕ್ತಿಕ ಚಾರಿತ್ರ್ಯ ತೀರಾ ತಳಮಟ್ಟದಲ್ಲಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ಭಾರತೀಯ ಸಮಾಜದಲ್ಲಿ ಸಾಮಾಜಿಕವಾಗಿ ಒಪ್ಪಿಗೆಯಿಲ್ಲದ ಪರಸ್ತ್ರೀ ಸಂಗ ಎಂಬ ದುರಾಚಾರದಲ್ಲಿ ನಮ್ಮ ರಾಜಕಾರಣಿಗಳು ಮುಳು-ಗೆದ್ದಿದ್ದಾರೆ ಎಂದು ಅತ್ಯಂತ ಸಾಮಾನ್ಯ ಜನರೂ ಮಾತನಾಡುತ್ತಾರೆ. ಭ್ರಷ್ಟಾಚಾರವಂತೂ ರಾಜಕಾರಣಿಗಳ ಬದುಕಿನ ಕ್ರಮವೇ ಆಗಿಹೋಗಿದೆ.
ಉದಾಹರಣೆಗೆ ೨೦೧೪ರ ಲೋಕಸಭೆ ಚುನಾವಣೆಯಲ್ಲಿ ಮುಖ್ಯ ವಿಷಯ ಇದ್ದದ್ದು ಆರ್ಥಿಕ ಭ್ರಷ್ಟಾಚಾರ. ೨ಜಿ, ಕಲ್ಲಿದ್ದಲು, ತರಂಗಾಂತರ ಸೇರಿ ಅನೇಕ ಕ್ಷೇತ್ರಗಳಲ್ಲಿ ಅಂದಿನ ಯುಪಿಎ ಸರಕಾರ ಭ್ರಷ್ಟಾಚಾರ ಎಸಗಿದೆ, ಅದನ್ನು ಕಿತ್ತೆಸೆಯಿರಿ ಎಂಬುದು ಪ್ರತಿಪಕ್ಷ ಬಿಜೆಪಿ ನೇತೃತ್ವದ ಎನ್ಡಿಎಯ ಘೋಷವಾಕ್ಯವಾಯಿತು. ಅಂತಿಮವಾಗಿ ಜನರು ಯುಪಿಎ ಸರಕಾರವನ್ನು ಸೋಲಿಸಿದರು, ಎನ್ಡಿಎ ವಿಜಯ ಸಾಸಿತು. ಭ್ರಷ್ಟಾಚಾರಗಳಿಂದ ಬೇಸತ್ತಿದ್ದ ಜನ, ಯುಪಿಎ ಸರಕಾರವನ್ನು ಸೋಲಿಸಿದರು ಎಂದು ವಿಶ್ಲೇಷಣೆ ಮಾಡಲಾಯಿತು. ಇದು ಸತ್ಯವೇ? ನಿಜಕ್ಕೂ ಭಾರತದ ಸಾಮಾನ್ಯ ಜನರು ಆರ್ಥಿಕ ಭ್ರಷ್ಟಾಚಾರವನ್ನು ಅಷ್ಟು ಗಂಭೀರವಾಗಿ ಪರಿಗಣಿಸಿದ್ದಾರೆಯೇ? ಉತ್ತರ ಬಲು ಕಷ್ಟ. ಭಾಗಶಃ ಸತ್ಯ ಇದ್ದೀತು!
ಪ್ರತಿ ಚುನಾವಣೆಯಲ್ಲಿ ಅಧಿಕೃತವಾಗಿ ಮಾಡುವ ವೆಚ್ಚದ ೫-೧೦ ಪಟ್ಟು ಹಣವನ್ನು ಆಕಾಂಕ್ಷಿಗಳು ವ್ಯಯಿಸುತ್ತಾರೆ. ಹಾಗಾದರೆ ಈ ಹಣ ಎಲ್ಲಿಗೆ ಹೋಗುತ್ತದೆ? ತಮಗೆ ಮತ ನೀಡುವಂತೆ ಲಂಚದ ರೂಪದಲ್ಲಿ ಜನರನ್ನೇ ತಲುಪುತ್ತವೆಯಲ್ಲವೇ? ಅಂದರೆ, ಆ ಹಣ ಪಡೆದ ಜನರೂ ಭ್ರಷ್ಟಾಚಾರದಲ್ಲಿ ಭಾಗಿಯಾದಂತಾಯಿತು. ಸರಕಾರದ ಅನೇಕ ಇಲಾಖೆಗಳಲ್ಲಿ ಆಯಕಟ್ಟಿನ ಸ್ಥಾನಕ್ಕೆ ವರ್ಗಾವಣೆ ಆಗಲು ಕೋಟ್ಯಂತರ ರೂ. ಲಂಚ ನೀಡಲಾಗುತ್ತದೆ. ಹಾಗಾದರೆ ಆತ ಇಷ್ಟು ಹಣವನ್ನು ಸುಮ್ಮನೆ ವ್ಯಯಿಸುತ್ತಾನೆಯೇ? ಮತ್ತೆ ವಿವಿಧ ಮೂಲಗಳಿಂದ ‘ವಸೂಲಿ’ ಮಾಡಿಕೊಂಡೇ ತೀರುತ್ತಾನೆ ಅಲ್ಲವೇ?
ಬಿಹಾರ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಮೇವು ಹಗರಣದಲ್ಲಿ ಜೈಲುಪಾಲಾದ ನಂತರ ಪತ್ನಿಯನ್ನು ಮುಖ್ಯಮಂತ್ರಿ ಮಾಡಿದರು. ನಂತರ ಮತ್ತೆ ರಾಜಕೀಯ ಅಖಾಡಕ್ಕೆ ಧುಮುಕಿ ಜಯ ಸಾಧಿಸಿದರು, ಕೇಂದ್ರದಲ್ಲಿ ಮಂತ್ರಿಯೂ ಆದರು. ಅಂದರೆ ಆರ್ಥಿಕ ಭ್ರಷ್ಟಾಚಾರವನ್ನು ಪ್ರಜೆಗಳು ತಿರಸ್ಕರಿಸುತ್ತಾರೆ ಎಂದು ಹೇಳುವುದು ಬಲು ಕಷ್ಟ. ರಾಜಕಾರಣಿಯೊಬ್ಬನನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಬಂಸುವಂತೆ ನ್ಯಾಯಾಲಯ ಆದೇಶಿಸಿದ್ದನ್ನು ಪ್ರತಿಭಟಿಸಿ ರಸ್ತೆಗಿಳಿಯುವ ಸಾವಿರಾರು ಜನರನ್ನು ಅನೇಕ ರಾಜ್ಯಗಳಲ್ಲಿ ಕಂಡಿದ್ದೇವೆ. ಇವೆಲ್ಲ ಅಂಶಗಳನ್ನು ಪರಿಗಣಿಸಿದರೆ ಹೊರಬರುವ ಅತ್ಯಂತ ಬೇಸರದ ಸಂಗತಿಯೆಂದರೆ, ಜನರು ಆರ್ಥಿಕ ಭ್ರಷ್ಟಾಚಾರದ ಮೇಲಿದ್ದ ಅಸ್ವೀಕಾರಾರ್ಹತೆಯನ್ನು ಬಹುತೇಕರು ತ್ಯಜಿಸುತ್ತಿದ್ದಾರೆ.
“ರಾಜಕಾರಣದಲ್ಲಿ ಭ್ರಷ್ಟಾಚಾರ ಮಾಡದಿದ್ದರೆ ಮತ್ತೆ ಜಯಿಸಲು ಸಾಧ್ಯವಿಲ್ಲ. ಹಣ ಮಾಡಿದರೆ ಮಾಡಲಿ, ಅದರ ಜೊತೆಗೇ ಅಭಿವೃದ್ಧಿ ಕೆಲಸ ಮಾಡಲಿ,” ಎಂಬ ‘ಉದಾರ ಭಾವ’ ಮೂಡುತ್ತಿರುವುದು ಒಂದು ಅಪಾಯಕಾರಿ ಬೆಳವಣಿಗೆ. ಶಿಕ್ಷೆಗೊಳಗಾದವ ತಮ್ಮ ಪ್ರದೇಶದವ, ತಮ್ಮ ಜಾತಿಯವ, ತಮ್ಮ ಪಕ್ಷದವ ಎಂಬ ಅನೇಕ ಕಾರಣಗಳನ್ನು ಕೊಟ್ಟು ಸಮಾಧಾನ ಮಾಡಿಕೊಳ್ಳಲಾಗುತ್ತಿದೆ. ಭ್ರಷ್ಟಚಾರಿ ತಮ್ಮವ ಎಂಬುದು ಅವಮಾನಕಾರಿ ಸಂಗತಿಯಾಗಿ ಉಳಿದಿಲ್ಲ.
ಇನ್ನು, ವೈಯಕ್ತಿಕ ಚಾರಿತ್ರ್ಯದಲ್ಲಿ ಎರಡನೆಯ ಮುಖ್ಯ ಅಂಶವೆಂದರೆ ನೈತಿಕತೆ.
ನೈತಿಕತೆ ಎಂಬುದರಲ್ಲಿ, ಸತ್ಯ ನುಡಿಯವುದರಿಂದ ಮೊದಲುಗೊಂಡು ವೈಯುಕ್ತಿಕ ಜೀವನದಲ್ಲಿ ಪ್ರಾಮಾಣಿ-ಕವಾಗಿ, ಪರಿಶುದ್ಧ ಜೀವನ ನಡೆಸಬೇಕು ಎಂಬ ನೀತಿಯಿದೆ. ಜತೆಗೆ ಧಾರ್ಮಿಕ ಆಧ್ಯಾತ್ಮಿಕದಂತಹ ವಿಷಯಗಳಲ್ಲಿ ಸಾತ್ವಿಕವಾಗಿರಬೇಕು ಎಂಬ ಅನೇಕ ಮೌಲ್ಯಗಳಿವೆ.
ಅವೆಲ್ಲವುಗಳಿಗಿಂತಲೂ ಭಾರತೀಯ ಸಮಾಜ ಹೆಚ್ಚು ಗಂಭೀರವಾಗಿ ಪರಿಗಣಿಸುವುದು ನೈತಿಕ ಭ್ರಷ್ಟಾಚಾರವನ್ನು. ಪರಸ್ತ್ರೀ ಸಂಗ ಮಾಡಿದವರನ್ನು ಸಾಮಾಜಿಕ ತಿರಸ್ಕಾರ ಮಾಡುವ ಭಯ. ಮೇಲೆ ತಿಳಿಸಿದಂತೆ ಗ್ರೀಕ್ ಸಮಾಜ ಹಾಗೂ ಭಾರತೀಯ ಸಮಾಜದಲ್ಲಿ ಮಾತ್ರವಲ್ಲ, ಅಮೆರಿಕದ ಸಮಾಜವೂ ನೈತಿಕತೆಯನ್ನು ಗಂಭೀರವಾಗಿ ಪರಿಗಣಿಸುತ್ತದೆ.
ಸ್ವಾತಂತ್ರ್ಯವನ್ನು ಸ್ವೇಚ್ಛಾಚಾರವಾಗಿ ಪರಿಗಣಿಸಿದ ಸಮಾಜ, ಕುಟುಂಬ ವ್ಯವಸ್ಥೆ ಛಿದ್ರವಾಗಿರುವ ಪ್ರದೇಶ ಎಂದು ಅಮೆರಿಕವನ್ನು ಅನೇಕ ಬಾರಿ ಮೂದಲಿಸುವುದುಂಟು. ಆದರೆ ೧೯೯೩ರಿಂದ ೨೦೦೧ರವರೆಗೆ ಅಮೆರಿಕದ ೪೨ನೇ ಅಧ್ಯಕ್ಷರಾಗಿದ್ದ ಬಿಲ್ ಕ್ಲಿಂಟನ್ ಹಾಗೂ ವೈಟ್ಹೌಸ್ ಇಂಟರ್ನಿ ಮೋನಿಕಾ ಲೆವಿನ್ಸ್ಕಿ ನಡುವಿನ ಪ್ರೇಮ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಅಧ್ಯಕ್ಷರಾದವರು ತಮ್ಮ ಪ್ರತಿಜ್ಞೆಗೆ ವಿರುದ್ಧವಾಗಿ ಅನೈತಿಕತೆಯಲ್ಲಿ ತೊಡಗಿದ್ದಾರೆ ಎಂದು ದೂರಲಾಯಿತು.
ಅರ್ಕಾನ್ಸಾಸ್ನ ಪ್ರತಿನಿಧಿಯಾಗಿದ್ದಾಗಲೂ ಇಂಥದ್ದೇ ಅನೈತಿಕ ಸಂಬಂಧ ಹೊಂದಿದ್ದರು ಎಂದು ಕ್ಲಿಂಟನ್ ವಿರುದ್ಧ ದೂರು ದಾಖಲಾಗಿತ್ತು. ತಮ್ಮ ಅಧಿಕಾರ ಬಳಸಿ, ಸರಿಯಾದ ವಿಚಾರಣೆ ನಡೆಸಲು ಅವಕಾಶ ನೀಡಲಿಲ್ಲ ಎಂಬ ಆರೋಪ ಕ್ಲಿಂಟನ್ ಮೇಲೆ ಬಿತ್ತು. ಇದೆಲ್ಲದರಿಂದಾಗಿ ಅಮೆರಿಕ ಸಂಸತ್ತಿನಲ್ಲಿ ೧೯೯೮ರಲ್ಲಿ ಅಧ್ಯಕ್ಷರನ್ನು ವಾಗ್ದಂಡನೆಗೆ ಗುರಿಪಡಿಸಲಾ-ಯಿತು. ಅಧ್ಯಕ್ಷ ಅವಧಿಯನ್ನೇನೊ ಕ್ಲಿಂಟನ್ ಪೂರ್ಣಗೊಳಿಸಿದರು. ಆದರೆ ನಾಯಕರ ಅನೈತಿಕತೆಯನ್ನು ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶ ನೀಡುವ ಸಲುವಾಗಿಯೇ, ಚಾರಿತ್ರ್ಯವಂತ ಎನ್ನಲಾದ ಜಾರ್ಜ್ ಡಬ್ಲ್ಯು ಬುಷ್ರನ್ನು ಮುಂದಿನ ಚುನಾವಣೆಯಲ್ಲಿ ಆಯ್ಕೆ ಮಾಡಿದರು ಎಂದು ಸ್ಟಾನ್ಫೋರ್ಡ್ ವಿವಿ ನಡೆಸಿದ ವಿಶ್ಲೇಷಣೆ ತಿಳಿಸಿತ್ತು. ಇದೀಗ ಡೊನಾಲ್ಡ್ ಟ್ರಂಪ್ರನ್ನು ಕಿತ್ತೆಸೆದು ಜೋ ಬೈಡೆನ್ರನ್ನು ಆಯ್ಕೆ ಮಾಡುವಲ್ಲಿಯೂ ಬಹುತೇಕ ಇಂಥದ್ದೇ ಅಂಶ ಕೆಲಸ ಮಾಡಿದೆ.
ಮೊಂಡ, ದ್ವೇಷ ಸಾಧಿಸುವ, ಪ್ರಾಣಿಗಳಿಂದ ಮಾನವರ-ವರೆಗೆ ಯಾರಿಗೂ ಗೌರವ ನೀಡದವನಿಗಿಂತ, ಕೌಟುಂಬಿಕ ಮೌಲ್ಯಗಳು ಹಾಗೂ ಮಾನವೀಯ ಸಂಬಂಧಗಳಿಗೆ ಬೆಲೆ ನೀಡುತ್ತಾರೆ ಎಂಬ ಕಾರಣಕ್ಕೆ ಮೃದುಭಾಷಿ ಬೈಡೆನ್ರನ್ನು ಆಯ್ಕೆ ಮಾಡಲಾಗಿದೆ ಎಂಬ ವಿಶ್ಲೇಷಣೆಗಳಿವೆ.
ಇಷ್ಟೆಲ್ಲ ಮೇಲಾಟಗಳು ನಡೆದ ಅನೇಕ ವರ್ಷಗಳ ನಂತರ, ಇತ್ತೀಚೆಗೆ ೨೦೧೫ರಲ್ಲಿ ಮೋನಿಕಾ ಲೆವಿನ್ಸ್ಕಿ ಸಾರ್ವಜನಿಕವಾಗಿ ಈ ವಿಚಾರವನ್ನು ಚರ್ಚಿಸಿದರು. “ಬಹುಶಃ ಮತ್ತೆ ೨೨ನೇ ವಯಸ್ಸಿಗೆ ಮರಳುವುದು ಬೇಡ ಎಂದು ಬಯಸುವ ಹೆಣ್ಣು ತಾನೊಬ್ಬಳೇ ಇರಬೇಕು. ೨೨ನೇ ವಯಸ್ಸಿನಲ್ಲಿ ನಾನು ನನ್ನ ಬಾಸ್ ಜತೆಗೆ ಪ್ರೇಮಪಾಶಕ್ಕೆ ಸಿಲುಕಿದೆ. ಇಂದಿಗೂ ಆ ತಪ್ಪಿನ ಕುರಿತು ವಿಷಾದವಿದೆ,” ಎಂದರು. ಅಂದರೆ, ಸಮಾಜದಲ್ಲಿ ವಿಚ್ಛೇದನಗಳು ಹೆಚ್ಚುತ್ತಿದ್ದರೂ, ನೈತಿಕ ಮೌಲ್ಯಗಳು ಕುಸಿಯುತ್ತಿದ್ದರೂ ಅಲ್ಲಿನ ಸಮಾಜ ನಾಯಕರಾಗಿರುವವರಿಂದ ಶ್ರೇಷ್ಠವಾದದ್ದನ್ನೆ ಸಮಾಜ ಬಯಸುತ್ತಿದೆ.
ಭಾರತೀಯ ಸಮಾಜದಲ್ಲಿ ಸಾಮಾನ್ಯ ಜನರು, ನಾಯಕರ ಅನೈತಿಕ ಜೀವನವನ್ನು ಸಹಿಸಿಕೊಳ್ಳಲು ಆರಂಭಿಸಿದ್ದಾರೆಯೇ ಎಂಬ ಅನುಮಾನಗಳು ದಿನೇದಿನೆ ಬಲಗೊಳ್ಳುತ್ತಿವೆ. ಮದುವೆಗೆ ಮುನ್ನ ಸಂಬಂಧಗಳು, ಮದುವೆ ನಂತರ ಸಂಬಂಧಗಳನ್ನು ಹೊಂದಿರುವ ತಮ್ಮ ನಾಯಕನ ನಡತೆ ಗಮನಿಸುವಷ್ಟು ಮುಖ್ಯವೇ ಅಲ್ಲ ಎಂಬಷ್ಟು ಸಹಜವಾಗಿ ಸ್ವೀಕರಿಸಲಾಗುತ್ತಿದೆ.
ನಾಯಕರೂ ಅಷ್ಟೆ. “ಎಲ್ಲ-ರಂತೆಯೇ ನಾನೂ ಇದ್ದೇನೆ. ಉಳಿದವರೇನು ಶ್ರೀರಾಮ-ಚಂದ್ರರೇ?” ಎಂದು ಕೇಳಿ ಸಮರ್ಥನೆ ಮಾಡಿಕೊಳ್ಳುತ್ತಾರೆ. ತನಗೆ ಮೋಸ ಮಾಡಿ ‘ಹನಿ ಟ್ರ್ಯಾಪ್’ ಮಾಡಲಾಯಿತು ಎಂದು ಅನೇಕರು ಆರೋಪಿಸುತ್ತಾರೆ. ಅದು ಸತ್ಯ. ರಾಜಕಾರಣಿಗಳಷ್ಟೆ ಅಲ್ಲ, ಉದ್ಯಮಪತಿಗಳು, ಅಕಾರಿಗಳು, ರಕ್ಷಣಾ ಉನ್ನತ ಹುದ್ದೆಯಲ್ಲಿರುವವರು, ಧಾರ್ಮಿಕ ಮುಖಂಡರನ್ನು ಹನಿ ಟ್ರ್ಯಾಪ್ ಎಂಬ ಖೆಡ್ಡಾಕ್ಕೆ ಕೆಡವಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಬೃಹತ್ ಜಾಲ ದೇಶಾದ್ಯಂತ, ವಿಶ್ವಾದ್ಯಂತ ಸಕ್ರಿಯವಾಗಿದೆ. ಆದರೆ ಈ ಬಲೆಗೆ ಎಲ್ಲರನ್ನೂ ಬೀಳಿಸಲು ಸಾಧ್ಯವಿಲ್ಲವಲ್ಲ?
ಯಾರ ಮನಸ್ಸು ದೃಢವಿಲ್ಲವೋ, ಯಾರಿಗೆ ನೈತಿಕ ದೃಢತೆ ಇಲ್ಲವೊ ಅಂಥವರನ್ನಷ್ಟೆ ಈ ಜಾಲ ಗುರಿಯಾಗಿಸಲು ಸಾಧ್ಯ ಎಂಬ ಅಂಶವನ್ನೂ ನಾವು ಆಲೋಚಿಸಬೇಕು. ರಾಜಕೀಯ ಪಕ್ಷಗಳೂ, ಆತ ಗೆಲ್ಲುತ್ತಾನೆಯೋ ಇಲ್ಲವೋ ಎಂಬಷ್ಟಕ್ಕೆ ಅಭ್ಯರ್ಥಿಯ ಹುಡುಕಾಟವನ್ನು ಕೊನೆಗೊಳಿಸುತ್ತವೆ. ಅನೈತಿಕತೆಯ ಆರೋಪಗಳನ್ನು ಆತ ಎದುರಿಸಿ ಗೆದ್ದು ಬರುವಷ್ಟು ‘ಸಾಮರ್ಥ್ಯ’ ಇದೆ ಎಂಬುದು ಸಾಬೀತಾದರೆ ಟಿಕೆಟ್ ಖಾತ್ರಿ ಎಂಬಂತಾಗಿದೆ.
ಸಾಮಾಜಿಕ ಮೌಲ್ಯಗಳು ಕುಸಿಯುತ್ತಿರುವ ಈ ಸಂದರ್ಭದಲ್ಲಿ ಸಮಾಜದ ಮಟ್ಟವನ್ನು ಮೇಲೆತ್ತುವಲ್ಲಿ ಉಳಿದಿರುವ ಏಕೈಕ ಆಶಾಕಿರಣ ಬಹುಶಃ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ವಲಯ ಮಾತ್ರ.
ಆದರೆ ವಿಚಿತ್ರ ನೋಡಿ, ರಾಜಕೀಯ ಮುಖಂಡರು ಅಥವಾ ಆಳುವ ಮಂತ್ರಿ ಮಹೋದಯರು ತಮ್ಮ ಬಳಿ ಬಂದಾಗ ಎಷ್ಟು ಧಾರ್ಮಿಕ ಮುಖಂಡರು ನೈತಿಕ ವಿಚಾರಗಳ ಕುರಿತಾಗಿ ಚರ್ಚಿಸುತ್ತಾರೆ? ಅವರ ಜೀವನ ಹೇಗಾದರೂ ಇರಲಿ, ತಮ್ಮ ಸಂಸ್ಥೆಗೊಂದಿಷ್ಟು ಕೆಲಸ ಮಾಡಿಕೊಟ್ಟರೆ ಸಾಕು ಎಂಬ ಮನಸ್ಥಿತಿಯಲ್ಲಿ ಅನೇಕರಿರುವುದು ದುರಂತ. ತಮ್ಮ ಜಾತಿಯ ರಾಜಕಾರಣಿ ಎಂಬ ಕಾರಣಕ್ಕೆ ಅನೇಕ ಧಾರ್ಮಿಕ ಮುಖಂಡರು ಇಂತಹ ವಿಚಾರದಲ್ಲಿ ಜಾಣಕುರುಡು ಪ್ರದರ್ಶಿಸುವುದುಂಟು.
ವೈಯಕ್ತಿಕ ಜೀವನವನ್ನು ಶುದ್ಧವಾಗಿಟ್ಟುಕೊಳ್ಳಬೇಕು, ಆಗ ಮಾತ್ರ ತಮ್ಮನ್ನು ಭೇಟಿ ಮಾಡು ಎಂದು ಧಾರ್ಮಿಕ ಮುಖಂಡರು ಹೇಳಲು ಏಕೆ ಸಾಧ್ಯವಿಲ್ಲ? ತಮ್ಮ ಭಕ್ತರು ನೈತಿಕತೆಯ ಮಾರ್ಗದಲ್ಲಿ ನಡೆಯುವುದನ್ನು ಏಕೆ ಪ್ರಾಮುಖ್ಯತೆಯಿಂದ ಗಮನಿಸಬಾರದು? ಸಮಾಜ ಅಧಃಪತನದತ್ತ ಸಾಗುತ್ತಿರುವಾಗ ಅದನ್ನು ಮೇಲೆತ್ತುವ ಸಾಮರ್ಥ್ಯ ಇರುವುದು ಸಾಂಸ್ಕೃತಿಕ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಮಾತ್ರ.
ರಾಜನ ಪಟ್ಟಾಭಿಷೇಕದ ಸಮಯದಲ್ಲಿ ಹಾಗೂ ಅಶ್ವಮೇಧ ಯಾಗದ ಸಮಯದಲ್ಲಿ, “ತನ್ನ ಬಾಹುಬಲವನ್ನು ಎದುರಿಸಿ ನಿಲ್ಲಬಲ್ಲಂತಹ ರಾಜ ಇಡೀ ಜಗತ್ತಿನಲ್ಲಿ ಇನ್ನೊಬ್ಬ ಇಲ್ಲ, ‘ಅದಂಡ್ಯೋಸ್ಮಿ ಅದಂಡ್ಯೋಸ್ಮಿ’ (ನನ್ನನ್ನು ಯಾರೂ ಶಿಕ್ಷಿಸಲಾರರು) ಎಂದು ಉಚ್ಚರಿಸುತ್ತಾನೆ. ಆದರೆ ಪ್ರತಿಸಲ ಅವನು ಹಾಗೆ ಹೇಳಿದಾಗಲೂ ಅವನ ಪಕ್ಕದಲ್ಲಿರುವ ಧರ್ಮಗುರು ಅಥವಾ ಯಾಗದ ಮುಖ್ಯ ಪುರೋಹಿತ ತನ್ನ ಧರ್ಮದಂಡದಿಂದ ಅವನ ತಲೆಗೆ ತಟ್ಟಿ, ‘ಧರ್ಮದಂಡ್ಯೋಸಿ, ಧರ್ಮದಂಡ್ಯೋಸಿ’ (ನಿನ್ನನ್ನು ಶಿಕ್ಷಿಸಲು ಧರ್ಮ ಇದೆ) ಎಂದು ಘೋಷಿಸುತ್ತಾನೆ. ಒಂದು ಮಹಾನ್ ಸಿದ್ಧಾಂತದ ಎಂಥ ಸುಂದರ ಸಂಕೇತ! (ಉಲ್ಲೇಖ: ವಿಕೃತಿಯಿಂದ ಸಂಸ್ಕೃತಿಯೆಡೆಗೆ. ಹೊ.ವೆ. ಶೇಷಾದ್ರಿಯವರ ಕೃತಿ) ರಾಜದಂಡಕ್ಕಿಂತಲೂ ಧರ್ಮ ದಂಡ ದೊಡ್ಡದು.
ರಾಜದಂಡ ನೈತಿಕತೆಯಿಂದ, ಧರ್ಮಾಚರಣೆಯಿಂದ ಹಿಂದೆ ಸರಿದರೆ ಸರಿಪಡಿಸುವ ಕರ್ತವ್ಯ ಧರ್ಮ ದಂಡದ್ದು. ಹಿಂದು ಧರ್ಮವಷ್ಟೆ ಅಲ್ಲದೆ ಎಲ್ಲ ನಂಬಿಕೆ, ಸಂಪ್ರದಾಯಗಳಿಗೂ ಇದು ಅನ್ವಯ. ಇಂದಿನ ಸನ್ನಿವೇಶದಲ್ಲಿ ಧಾರ್ಮಿಕ ಮುಖಂಡರು ತಮ್ಮ ಧರ್ಮದಂಡವನ್ನು ಕೈಗೆತ್ತಿಕೊಳ್ಳುವ ಸಂದರ್ಭ ಆಗಮಿಸಿದೆ ಎಂದು ನಾವು ಆಶಿಸೋಣವೇ?
*ಕಡೆ ಮಾತು*: ರಾಮರಾಜ್ಯದ ಕುರಿತು ಇನ್ನೊಂದು ವ್ಯಾಖ್ಯಾನವಿದೆ; ‘ರಾಮರಾಜ್ಯ’ ಆಗಿದ್ದು ರಾಮನಿಂದಲ್ಲ, ಆತನ ಪಾದುಕೆ ಸೇವೆ ಮಾಡುತ್ತಾ ಮೂಲೆಗುಂಪಾದ ಭರತನಿಂದಲೂ ಅಲ್ಲ, ಬದಲಿಗೆ, ಆ ಇಬ್ಬರ ಅನುಪಸ್ಥಿತಿಯಲ್ಲಿ ಸುದೀರ್ಘ ೧೪ ವರ್ಷ ಅಯೋಧ್ಯೆಯಲ್ಲಿ ರಾಜ್ಯಾಡಳಿತವನ್ನು ಬದುಕಿಸಿದ ಅಲ್ಲಿನ ಪ್ರಜೆಗಳಿಂದ! ಬಲಿಷ್ಠ ನಾಯಕನ ಅನುಪಸ್ಥಿತಿ ಹಾಗೂ ದುರ್ಬಲ ನಾಯಕನ ಉಪಸ್ಥಿತಿಯಲ್ಲೂ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಬದುಕಬೇಕು. ರಾಮರಾಜ್ಯ ಸಾಕಾರಗೊಂಡ ಬಗೆ ಇದು!
ಅಂಥಾ ಪ್ರಜೆಗಳನ್ನು ತಯಾರಿಸುವ ಕೆಲಸವನ್ನು ಆಯಾ ಸಮಾಜದ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಲೋಕವೇ ಮಾಡಬೇಕು.
ಸಾರ್ವಜನಿಕ ಬದುಕಿನ ಭ್ರಷ್ಟಾಚಾರ, ದುರಾಚಾರ, ಅನೀತಿ, ಲಂಪಟತನದ ಬಗ್ಗೆ ಧಾರ್ಮಿಕ ಲೋಕ ಮೌನವಾಗಿದ್ದರೆ, ಹಿಂಸಾ ಆಲೋಚನೆ ಜನಸಾಮಾನ್ಯರ ಬದುಕಿನ ಕ್ರಮವೇ ಆಗುತ್ತದೆ.