ಇಲ್ಲಿ ನೆಮ್ಮದಿ, ಅಲ್ಲಿ ದುಡ್ಡು: ಮುಂದೇನು?

– ಕಾರ್ಮಿಕರ ಪುನರ್ ವಲಸೆ ಅನಿವಾರ್ಯ – ಕಾರ್ಮಿಕರ ಪುನರ್ ವಲಸೆ ಅನಿವಾರ್ಯ – ಗ್ರಾಮೀಣ ಉದ್ಯೋಗದ ಘೋಷಣೆ ಬೇರೆ, ವಾಸ್ತವವೇ ಬೇರೆ!
ರಾಜ್ಯದಲ್ಲಿ ಲಕ್ಷಾಂತರ ಕಾರ್ಮಿಕರು ತವರಿನತ್ತ ವಲಸೆ ಹೋಗಿದ್ದಾರೆ. ಇವರ ಮಹಾ ವಲಸೆಯಿಂದ ಕೈಗಾರಿಕೆ, ಉದ್ಯಮ, ಮೂಲಸೌಕರ್ಯ ಕಾಮಗಾರಿ ವಲಯಗಳಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದೆ. ಗ್ರಾಮೀಣ ಕರ್ನಾಟಕದಲ್ಲೂ ಸಾಮಾಜಿಕ ಏರುಪೇರು ಉಂಟಾಗಲಿದೆ. ಈ ಕುರಿತ ಸಮಗ್ರ ಅವಲೋಕನ.

ನಗರಗಳಲ್ಲಿ ಮಾಡುತ್ತಿದ್ದ ಕೆಲಸ ಬಿಟ್ಟು ಹಳ್ಳಿಗಳಲ್ಲಿ ಉಳಿದರೆ ಪ್ರೀತಿ-ವಿಶ್ವಾಸದಿಂದ ಮನಸ್ಸು ತುಂಬಬಹುದೇ ಹೊರತು ಹೊಟ್ಟೆ ತುಂಬುವುದಿಲ್ಲ ಸರ್. ಕಲಿತಿರುವ ಕೌಶಲಕ್ಕೆ ತಕ್ಕ ಕೆಲಸ ಹಳ್ಳಿ, ಸಣ್ಣ ನಗರಗಳಲ್ಲಿ ಸಿಗುವುದೆ? ಬೇರೆ ಕೆಲಸ ಮಾಡಲು ಹೋದರೆ ಆ ಕೆಲಸ ಹೊಸದಾಗಿ ಕಲಿಯಬೇಕು. ಅಷ್ಟು ಸಂಬಳವೂ ಸಿಗುವುದಿಲ್ಲ. ಹೆಂಡತಿ, ಮಕ್ಕಳ ಹಸಿವು ನೀಗಿಸಬೇಕೆಂದರೆ ವಲಸೆ ಹೋಗಲೇ ಬೇಕು…ದೊಡ್ಡ ನಗರಗಳ ವಲಸೆಯಿಂದ ತವರಿಗೆ ಮರಳಿರುವ ಕಾರ್ಮಿಕರು ಹೇಳುವ ಮಾತಿದು.ನಗರಗಳಿಗೆ ವಲಸೆ ಹೋಗುವ ಆಸೆ ಯಾರಿಗೂ ಇಲ್ಲ. ಆದರೆ ಹಸಿವು, ಬದುಕಿನ ಬಯಕೆಗಳು ನಿತ್ಯವೂ ಅವರನ್ನು ನಗರಗಳತ್ತ ಸೆಳೆಯುತ್ತಿವೆ. ಮಧ್ಯಮ, ಬೃಹತ್ ನಗರಗಳಿಗೆ ವಲಸೆ ಬಂದು ಉದ್ಯೋಗ ಕಂಡುಕೊಂಡಿದ್ದ ಲಕ್ಷಾಂತರ ಕಾರ್ಮಿಕರು ಲಾಕ್‌ಡೌನ್‌ ನಡುವೆಯೂ ಮರಳಿ ಕೆಲಸಕ್ಕೆ ಬರಲು ಕಾಯುತ್ತಿದ್ದಾರೆ. ಆದರೆ ಇದಕ್ಕೆ ಕೆಲವು ತಿಂಗಳು ಕಾಯೋದು ಅನಿವಾರ್ಯ.ಬೆಂಗಳೂರು, ಮಂಗಳೂರು, ಮೈಸೂರು, ಹುಬ್ಬಳ್ಳಿಯಂಥ ಬೃಹತ್ ನಗರಗಳು ಅಕ್ಷರಸ್ಥರು, ಅನಕ್ಷರಸ್ಥರ ಉದ್ಯೋಗದ ಮೊದಲ ಆದ್ಯತೆಯ ವಲಸೆ ನಗರಗಳಾಗಿವೆ. ಉಳಿದ ಜಿಲ್ಲೆಗಳ ನಗರ, ಪಟ್ಟಣಗಳಿಗೂ ಜನರು ವಲಸೆ ಹೋಗುತ್ತಾರೆ. ಕಾರ್ಮಿಕ ಇಲಾಖೆ ಮಾಹಿತಿ ಪ್ರಕಾರ ಬೆಂಗಳೂರು ನಗರದ ಕಟ್ಟಡ ಕೆಲಸಕ್ಕಾಗಿಯೇ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಯಾದಗಿರಿ, ರಾಯಚೂರು ಜಿಲ್ಲೆಗಳಿಂದ ಒಂದು ಲಕ್ಷಕ್ಕೂ ಹೆಚ್ಚು ಜನರು ವಲಸೆ ಹೋಗುತ್ತಾರೆ. ಕರ್ನಾಟಕದ ನಗರಗಳಷ್ಟೇ ಅಲ್ಲದೆ, ಗೋವಾ, ಮಹಾರಾಷ್ಟ್ರ ರಾಜ್ಯದ ನಗರಗಳಿಗೂ ರಾಜ್ಯದ ಗ್ರಾಮೀಣ, ಪಟ್ಟಣದ ಜನರು ಹೋಟೆಲ್, ಕಾರು ಚಾಲನೆ, ಕಾರ್ಖಾನೆಗಳಲ್ಲಿ ಕಾರ್ಮಿಕರಾಗಿ ವಲಸೆ ಹೋಗುತ್ತಾರೆ. ಅವರಲ್ಲಿ ಬಹುಪಾಲು ಜನರಿಗೆ ಲಾಕ್‌ಡೌನ್ ಬಳಿಕ ಮರಳಿ ಅದೇ ನಗರಗಳಿಗೆ ಹೋಗುವ ಬಯಕೆ ಇದೆ.
ವಲಸೆ ಅನಿವಾರ್ಯ ಗ್ರಾಮೀಣ ಭಾಗದಲ್ಲಿ ನರೇಗಾ ಕೆಲಸ ಬಿಟ್ಟರೆ ಬೇರೆ ಕೆಲಸ ಇಲ್ಲ. ಕೃಷಿ ಮಾಡಬೇಕು ಎಂದರೂ ಇತ್ತೀಚೆಗೆ ನಷ್ಟವೇ ಹೆಚ್ಚು ಎಂಬ ಭಾವನೆ. ಜತೆಗೆ ಆದಾಯವೂ ತಡವಾಗಿ ಕೈ ಸೇರುತ್ತದೆ ಎಂಬ ಚಿಂತೆ. ಹಳ್ಳಿಗಳಲ್ಲಿ ಜನಸಾಂದ್ರತೆ ಹೆಚ್ಚಾಗಿ ಕೃಷಿ ಭೂಮಿಯ ಕೊರತೆ ಸೃಷ್ಟಿಯಾಗಿದೆ. ಮಲೆನಾಡು, ಬಯಲು ಸೀಮೆ ಎಲ್ಲ ಪ್ರದೇಶಗಳ ಸಾಮಾನ್ಯ ಸಮಸ್ಯೆ ಇವು. ಜತೆಗೆ ಸಾಕ್ಷರತೆ ಹೆಚ್ಚಾದಂತೆ ತಿಂಗಳ ವೇತನ ಕೊಡುವ ಕೆಲಸದ ಬೇಡಿಕೆಯೂ ಹೆಚ್ಚಾಗಿದೆ. ಇನ್ನೊಂದೆಡೆ ಉದ್ಯೋಗ ಸೃಷ್ಟಿ ಆಧಾರಿತ ಸರಕಾರದ ಯೋಜನೆಗಳು ಹೆಚ್ಚಾಗಿ ಖಾಸಗಿ ವಲಯವನ್ನೇ ಅವಲಂಬಿಸಿವೆ. ಆ ಕಾರಣಕ್ಕೆ ಸ್ಥಳೀಯ ಮಟ್ಟದಲ್ಲಿ ಉದ್ಯೋಗಳ ಕೊರತೆ ಇದೆ. ಕರ್ನಾಟಕದಲ್ಲಿ ಬೆಂಗಳೂರು ಒಂದೇ ಕಡೆ ಹೆಚ್ಚು ಕೈಗಾರಿಕೆಗಳು ಕೇಂದ್ರೀಕೃತವಾಗಿವೆ. ಉಳಿದೆಲ್ಲ ನಗರಗಳಲ್ಲಿ ಕಾರ್ಖಾನೆಗಳು ಇದ್ದರೂ ಬೆಂಗಳೂರು ಕೊಡುವಷ್ಟು ಕನಿಷ್ಠ ಉದ್ಯೋಗವೂ ಬೇರೆ ಕಡೆ ಸಿಗುವುದಿಲ್ಲ. ವೇತನದಲ್ಲಿಯೂ ವ್ಯತ್ಯಾಸ. ಅದೇ ರೀತಿ ಪ್ರತಿ ನಗರವೂ ಭಿನ್ನ ರೀತಿಯ ಕೌಶಲಾಧಾರಿತ ಉದ್ಯಮವನ್ನು ಹೊಂದಿದೆ. ಯಂತ್ರ ಬಳಕೆಯಿಂದಲೂ ಕಾರ್ಮಿಕರ ಅವಲಂಬನೆ ಕಡಿಮೆ ಮಾಡಿದೆ. ಹಾಗಾಗಿ ಉದ್ಯೋಗಕ್ಕಾಗಿ ವಲಸೆ ಅನಿವಾರ್ಯವಾಗಿದೆ.
ಕುಶಲಕರ್ಮಿಗಳು ಕೃಷಿಗೆ ಒಗ್ಗುವುದಿಲ್ಲ ಬೆಂಗಳೂರಿನಿಂದ ಊರು ಸೇರಿರುವ ಜನ ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ, ನರೇಗಾ ಯೋಜನೆ ಮೂಲಕ ದಿನಗೂಲಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ವಾಸ್ತವಾಂಶ ಬೇರೆಯೇ ಇದೆ. ರಾಜ್ಯದ ಬಹುತೇಕ ಎಲ್ಲಕಡೆಗಳಲ್ಲೂ ಸಾಂಪ್ರದಾಯಿಕವಾಗಿ ಕೃಷಿಯನ್ನೇ ನೆಚ್ಚಿಕೊಂಡಿರುವ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆಯೇ ಹೊರತು ಕೃಷಿ ಕಾರ್ಮಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿಲ್ಲ. ಅಸ್ಸಾಮಿಗಳು, ಬಾಂಗ್ಲಾದೇಶೀಯರು, ಕೇರಳ ಮೂಲದ ಕೃಷಿಕರು ತಮ್ಮ ರಾಜ್ಯಗಳಿಗೆ ಹಿಂತಿರುಗಿರುವುದರಿಂದ ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಕೃಷಿ ಕೂಲಿಯಾಳುಗಳ ಕೊರತೆ ಹೆಚ್ಚಳವಾಗಿದೆ. ನರೇಗಾ ಯೋಜನೆ ಅನುಷ್ಠಾನದಲ್ಲೂ ಕೊರೊನಾ ಪರಿಣಾಮವಾಗಿ ನಿರೀಕ್ಷಿತ ಪ್ರಗತಿ ಕಂಡುಬರುತ್ತಿಲ್ಲ. ಏಪ್ರಿಲ್‌ನಲಲ್ಲಿ 75.40 ಲಕ್ಷ ಮಾನದ ದಿನಗಳ ಉದ್ಯೋಗ ಸೃಷ್ಟಿಸಲು ಯೋಜನೆ ರೂಪಿಸಲಾಗಿತ್ತಾದರೂ ಕೇವಲ ಶೇ.32ರಷ್ಟು ಪ್ರಗತಿ ಸಾಧಿಸಲಾಗಿದೆ. ಕಲ್ಬುರ್ಗಿ ಜಿಲ್ಲೆಯಲ್ಲಿ 3.77 ಲಕ್ಷ ಗುರಿಯಲ್ಲಿ ಕೇವಲ 22 ಸಾವಿರ ಮಾನವ ದಿನಗಳ ಉದ್ಯೋಗ ಸೃಷ್ಟಿಯಾಗಿವೆ. ಇದಲ್ಲದೆ ಹಲವು ಗುತ್ತಿಗೆದಾರರು ನರೇಗಾ ಅಡಿಯಲ್ಲಿ ನೋಂದಾಯಿತ ಕಾರ್ಮಿಕರಿಂದ ಕಾಮಗಾರಿ ನಡೆಸಿರುವುದಾಗಿ ದಾಖಲೆಗಳಲ್ಲಿ ತೋರಿಸಿ ಜೆಸಿಬಿ ಮತ್ತಿತರ ಯಂತ್ರಗಳ ಮೂಲಕ ಕೆಲಸ ಮಾಡಿಸುವುದು ಮಾಮೂಲಿಯಾಗಿದೆ. ಇನ್ನು, ಬೇರೆ ಊರುಗಳಿಂದ ಆಗಮಿಸಿ ಸಿವಿಲ್ ಮತ್ತಿತರ ಗುತ್ತಿಗೆದಾರರ ಬಳಿ ತಂಡವಾಗಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರೂ ಸ್ವಂತ ಊರುಗಳಿಗೆ ಹಿಂದಿರುಗಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಾಮಗಾರಿಗಳನ್ನು ಆರಂಭಿಸಲು ಗುತ್ತಿಗೆದಾರರಿಗೆ ಕಾರ್ಮಿಕರು ಸಿಗುತ್ತಿಲ್ಲ.
ಅಪೌಷ್ಟಿಕ, ಶಿಕ್ಷಣ ವಂಚಿತ ಪೀಳಿಗೆಯ ಆತಂಕ ಈಗಾಗಲೇ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದಾಗಿ ಸರಕಾರ ಹಾಗೂ ಸಾಮಾಜಿಕ ಸಂಸ್ಥೆಗಳು ಮಾಡಿರುವ ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಕೆಳ ಮಧ್ಯಮ ವರ್ಗಕ್ಕೆ ಸೇರಿದ ಮಕ್ಕಳೇ ಅಪೌಷ್ಟಿಕತೆಯಿಂದ ಕೂಡಿರುವಾಗ ವಲಸೆ ಕಾರ್ಮಿಕರ ಮಕ್ಕಳ ಆರೋಗ್ಯ ಹೇಗಿರಬಹುದು? ಕೂಡಿಟ್ಟ ಹಣವೂ ಇಲ್ಲದೆ, ಮಾಡಲು ಕೆಲಸವೂ ಇಲ್ಲದ ಪರಿಸ್ಥಿತಿಯಲ್ಲಿಈ ಮಕ್ಕಳ ಹೆತ್ತವರೂ ಪೌಷ್ಟಿಕ ಆಹಾರ ನೀಡಲು ಅಸಹಾಯಕರಾಗಿದ್ದಾರೆ. ಇನ್ನೊಂದೆಡೆ ಈ ಮಕ್ಕಳು ಶಾಲೆಯ ಮೆಟ್ಟಿಲು ಹತ್ತುವ ಸಾಧ್ಯತೆಯೂ ಕಷ್ಟಕರ. ಈ ಹಿಂದೆ ಒಂದೆಡೆಯಿಂದ ಮತ್ತೊಂದೆಡೆ ವಲಸೆ ಬಂದಿರುವ ಇವರನ್ನು ಗುರುತಿಸಿ ಶಾಲೆಗೆ ಸೇರಿಸುವ ಪ್ರಯತ್ನಗಳಾಗಿದ್ದರೂ ಇದೀಗ ಸ್ಥಳ ಬದಲಾವಣೆಯಾಗಿರುವುದರಿಂದ ಮತ್ತೊಮ್ಮೆ ಗುರುತಿಸಿ ಎಲ್ಲರನ್ನೂ ಶಾಲೆಗೆ ಸೇರ್ಪಡೆಗೊಳಿಸುವುದು ಅಸಾಧ್ಯವಾಗಿದ್ದು, ಅಪೌಷ್ಟಿಕ ಹಾಗೂ ಶಿಕ್ಷಣ ವಂಚಿತ ಪೀಳಿಗೆಯೊಂದು ಸೃಷ್ಟಿಯಾಗುವ ಆತಂಕವಿದೆ ಎನ್ನುತ್ತಾರೆ ನ್ಯಾಷನಲ್ ಲಾ ಕಾಲೇಜಿನ ಪ್ರೊಫೆಸರ್ ಹಾಗೂ ಕಾರ್ಮಿಕರ ಸಮಸ್ಯೆಗಳ ಕುರಿತ ಹೋರಾಟಗಾರ ಬಾಬು ಮ್ಯಾಥ್ಯೂ.
ಸುಸ್ಥಿರ ಹಳ್ಳಿಗಳನ್ನು ಸೃಷ್ಟಿಸಿನಗರ ಪ್ರದೇಶಗಳಿಂದ ಹಳ್ಳಿಗೆ ಬಂದಿರುವ ಸಾವಿರಾರು ಜನರಿಗೆ ನಿಜವಾಗಿಯೂ ಗ್ರಾಮೀಣ ಪ್ರದೇಶದಲ್ಲಿಉದ್ಯೋಗಗಳಿವೆ. ತಕ್ಷಣಕ್ಕೆ ಅವು ಸೃಷ್ಟಿಯಾಗದೇ ಇರಬಹುದು. ದೂರಗಾಮಿ ನೆಲೆಯಲ್ಲಿ ಹಳ್ಳಿಯಲ್ಲಿಯೇ ದುಡಿಯುವ ಕೈಗಳಿಗೆ ಉದ್ಯೋಗಗಳನ್ನು ಹುಟ್ಟುಹಾಕಬೇಕಿದೆ. ಇದಕ್ಕೆ ಹೊಸ ಆಲೋಚನೆಗಳು ಬೇಕಷ್ಟೆ. ಈಗ ತರಕಾರಿ ಮಾರಾಟ ಮಾಡಲು ಅಂಬಾನಿಯೇ ಏಕೆ ಬೇಕು? ಈಗಂತೂ ಕಾರ್ಪೋರೇಟ್ ಕೃಷಿಯೂ ಸದ್ದು ಮಾಡುತ್ತಿದೆ. ಇದೆಲ್ಲವೂ ನಿಲ್ಲಬೇಕು. ಚೀನಾದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿನಿರ್ಮಾಣ ಮಾಡಿದ್ದ ಕೈಗಾರಿಕೆಗಳನ್ನು ಸ್ಥಳೀಯ ಜನರೇ ಮುಚ್ಚುತ್ತಿದ್ದಾರೆ. ನಮ್ಮಲ್ಲೂ ಬಟ್ಟೆ ಕಾರ್ಖಾನೆಗಳೇಕೆ? ಅದರ ಬದಲು ನೇಕಾರರಿಗೆ ಪ್ರೋತ್ಸಾಹ ನೀಡಬೇಕಲ್ಲವೇ? ಕುಂಬಾರಿಕೆ, ಬಡಗಿ, ಜೇನು ಸಾಕಣೆ, ಪಶು ಸಂಗೋಪನೆಯಂಥ ನೂರಾರು ಗ್ರಾಮೀಣ ಕಸುಬುಗಳಿಗೆ ಮತ್ತೆ ಜೀವ ತುಂಬಬೇಕಿದೆ. ಗ್ರಾಮೀಣ ಪ್ರದೇಶದಲ್ಲಿ ಉತ್ಪಾದನೆಯಾಗುವ ಕೃಷಿ ಉತ್ಪನ್ನಗಳು, ಕರಕುಶಲ ಕಲೆಗಳಿಗೆ ಪಟ್ಟಣ ಪ್ರದೇಶದಲ್ಲಿ ಮಾರುಕಟ್ಟೆ ಸೃಷ್ಟಿಸಿ, ಒಳ್ಳೆಯ ಬೆಲೆ ಸಿಗುವಂತೆ ಮಾಡಬೇಕಿದೆ. ನಮಗೆ ಈ ಹೊತ್ತು ಸ್ಮಾರ್ಟ್ ಸಿಟಿಗಳು ಬೇಕಿಲ್ಲ. ಸುಸ್ಥಿರ ಹಳ್ಳಿಗಳು ಬೇಕಿದೆ.-ಜಿ.ಎಸ್.ಜಯದೇವ್ ದೀನಬಂಧು ಸೇವಾ ಟ್ರಸ್ಟ್, ಚಾಮರಾಜನಗರ
ಊರಿನಲ್ಲಿ ದುಡಿದು ಬದುಕಲು ಯಾವುದೇ ಸಾಧ್ಯತೆ ಇಲ್ಲದೆ ಇರುವುದರಿಂದ ಈ ಕಾರ್ಮಿಕರು ಬೆಂಗಳೂರಿಗೆ ಬರುತ್ತಾರೆ. ಕಡಿಮೆ ವೇತನಕ್ಕೆ ದುಡಿಯುವ ಪೈಪೋಟಿ ಕಾರ್ಮಿಕರ ನಡುವೆಯೇ ಇದೆ. ಹಾಗಾಗಿ ಮುಂದಾದರೂ ಸರಕಾರಗಳು ಕಾರ್ಮಿಕರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ತಳಮಟ್ಟದ ಜನತೆಯ ಸಮಸ್ಯೆಗಳ ಗಂಭೀರತೆಯನ್ನು ಅರ್ಥ ಮಾಡಿಕೊಂಡು ಪರಿಹರಿಸಲು ಪ್ರಯತ್ನ ಮಾಡಬೇಕು.  – ಪ್ರೊ. ಬಾಬು ಮ್ಯಾಥ್ಯೂ ಪ್ರಾಧ್ಯಾಪಕರು, ನ್ಯಾಷನಲ್ ಲಾ ಕಾಲೇಜ್
ಅಸಂಘಟಿತ ಕಾರ್ಮಿಕರ ಡೇಟಾ ಇಲ್ಲ ರಾಜ್ಯದಲ್ಲಿ ಅಸಂಘಟಿತ ವಲಯದ ಕಾರ್ಮಿಕರು ಎಷ್ಟಿದ್ದಾರೆಂಬ ಬಗ್ಗೆ ಇದುವರೆಗೆ ಸೂಕ್ತ ದಾಖಲೆ ಇಲ್ಲ. ಹೀಗಾಗಿ ಕೇಂದ್ರ ಸರಕಾರ ಭರವಸೆ ನೀಡಿದ 2000 ರೂ.ಯನ್ನು ನೇರವಾಗಿ ಕಾರ್ಮಿಕರ ಖಾತೆಗೆ ಹಾಕುವುದು ಈಗ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. ರೈತರು, ಮನೆಗೆಲಸದವರು, ಚಾಲಕರು, ಕಟ್ಟಡ ನಿರ್ಮಾಣದಲ್ಲಿ ದುಡಿಯುವವರು ಎಷ್ಟಿದ್ದಾರೆ ಎಂಬ ಬಗ್ಗೆ ನಿಖರ ದಾಖಲೆಯೇ ಇಲ್ಲ.
ಕಾರ್ಮಿಕ ಕಲ್ಯಾಣ ನಿಧಿ 50ಕ್ಕಿಂತ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಪ್ರತಿಯೊಂದು ಸಂಸ್ಥೆಯೂ ಪ್ರತಿ ವರ್ಷ ಕಾರ್ಮಿಕ ಕಲ್ಯಾಣ ನಿಧಿಗೆ ವಂತಿಕೆ ನೀಡಲೇಬೇಕು. ಕಾರ್ಮಿಕರಿಂದ 20 ರೂ. ಹಾಗೂ ಮಾಲೀಕ ರಿಂದ 40 ರೂ. ಸೇರಿ ವಾರ್ಷಿಕ 60 ರೂ.ಯನ್ನು ಕಲ್ಯಾಣ ನಿಧಿಗೆ ಜ.15ರೊಳಗಾಗಿ ಪಾವತಿ ಮಾಡಬೇಕು. ಇಲ್ಲವಾದರೆ ಶೇ.18ರಷ್ಟು ದಂಡ ವಿಧಿಸುವುದಕ್ಕೆ ಕಾನೂನು ಪ್ರಕಾರ ಅವಕಾಶ ಕಲ್ಪಿಸಲಾಗಿದೆ.
ಸಂಘಟಿತ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳೇನು? ಕಾರ್ಮಿಕರ ಮಕ್ಕಳಿಗೆ ಶೈಕ್ಷ ಣಿಕ ಪ್ರೋತ್ಸಾಹಧನ (ಮಾಸಿಕ 15,000 ರೂ.ಯೊಳಗೆ ಸಂಬಳ ಪಡೆಯುವ ಕಾರ್ಮಿಕರು ) 8ರಿಂದ 10ನೇ ತರಗತಿ- 3000 ರೂ. ಪಿಯುಸಿ, ಡಿಪ್ಲೋಮಾ- 4000 ರೂ. ಪದವಿ- 4000 ರೂ. ಸ್ನಾತಕೋತ್ತರ- 5000 ರೂ. ಎಂಜಿನಿಯರಿಂಗ್, ವೈದ್ಯ- 10,000 ರೂ.

ಗ್ರಾಮ ರಾಜ್ಯ ಮಾಡಲು ಸಕಾಲ- ಗ್ರಾಮೀಣ ಆರ್ಥಿಕ ಸಶಕ್ತೀಕರಣಕ್ಕಾಗಿ ಕೃಷಿಗೆ ಬೇಕು ಬೆಂಬಲ
ಕೊರೊನಾ ಭೀತಿಯಿಂದಾಗಿ ಭಾರಿ ಸಂಖ್ಯೆಯ ನಗರವಾಸಿಗಳು ತಮ್ಮ ‘ಮೂಲ ನೆಲೆ’ಯಾದ ಹಳ್ಳಿಗಳಿಗೆ ಹಿಂದಿರುಗಿದ್ದಾರೆ. ಇವರಲ್ಲಿ ಕೃಷಿ ಕುಟುಂಬದ ಹಿನ್ನೆಲೆಯವರು, ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾಗಾಗಿ ಈ ಹಂತದಲ್ಲಿ ಸರಕಾರ ಜಾಣ್ಮೆ ತೋರಿದರೆ ಹೊಸ ಕೃಷಿ ಕ್ರಾಂತಿಗೆ ನಾಂದಿ ಹಾಡಬಹುದು. ವಲಸೆಯ ಸಮಸ್ಯೆಯಿಂದ ಜರ್ಝರಿತವಾಗಿರುವ ನಗರಗಳನ್ನೂ ಕಾಪಾಡಬಹುದು. ಬಸ್ ವ್ಯವಸ್ಥೆ ಮಾಡಿದ್ದರಿಂದ ಕಾರ್ಮಿಕರು ಊರಿನ ಹಾದಿ ಹಿಡಿದಿದ್ದಾರೆ. ಲಾಕ್‌ಡೌನ್‌ ಘೋಷಣೆ ಸಂದರ್ಭದಲ್ಲೂ ದೊಡ್ಡ ಸಂಖ್ಯೆಯಲ್ಲೇ ಜನರು ಸ್ವಂತ ಊರಿಗೆ ಪ್ರಯಾಣ ಬೆಳೆಸಿದ್ದರು. ಹೀಗೆ ನಗರ ಬಿಟ್ಟು ಹಳ್ಳಿಗೆ ಹೋದವರಲ್ಲಿ ತಕ್ಕ ಮಟ್ಟಿಗೆ ಸಂಬಳ ಎಣಿಸುವವರು, ದಿನದ ಊಟಕ್ಕಾಗಿ ಕೂಲಿ ಮಾಡುವವರೂ ಇದ್ದಾರೆ. ಈ ಎಲ್ಲರಿಗೂ ಈಗ ಹಳ್ಳಿಯ ನೆನಪಾಗಿದೆ. ನಗರದಿಂದ ಹಳ್ಳಿಗೆ ವಾಪಸ್ ಹೋದವರಲ್ಲಿ ಅರ್ಧದಷ್ಟು ಮಂದಿಗಾದರೂ ಹಳ್ಳಿಯಲ್ಲಿ ಜಮೀನು ಇದೆ. ಅದ್ಧೂರಿ ಜೀವನಕ್ಕೆ ಸಾಕಾಗುವಷ್ಟು ಅಲ್ಲದಿದ್ದರೂ ಅಲ್ಪಸ್ವಲ್ಪ ಹೊಲವಿದೆ. ಕೃಷಿ ಸಂಬಂಧಿತ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದಕ್ಕೂ ಸಾಕಷ್ಟು ಕೆಲಸಗಳಿವೆ. ಕೃಷಿಯಿಂದ ಲಾಭವಿಲ್ಲವೆಂದು ಇವರೆಲ್ಲ ನಗರವನ್ನು ನೆಚ್ಚಿಕೊಂಡಿದ್ದರು. ಇಂತಹ ಸಂದರ್ಭದಲ್ಲಿ ಕೃಷಿ ಮಾಡೋಣವೆಂದರೂ ಅದು ಲಾಭದಾಯಕವಲ್ಲ ಎಂಬ ಅಳುಕು ಇದೆ.ಈ ಹಿನ್ನೆಲೆಯಲ್ಲಿ ಕೃಷಿಯನ್ನು ಲಾಭದಾಯವಾಗಿಸುವುದು ಸರಕಾರದ ಆದ್ಯತೆಯಾಗಬೇಕು. ಹೂವು, ಹಣ್ಣು, ತರಕಾರಿ ಬೆಳೆಗಾರರು, ನೇಕಾರರು, ಕಾರ್ಮಿಕರಿಗೆ ಸರಕಾರ ಪ್ಯಾಕೇಜ್ ಘೋಷಿಸಿದೆ. ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ, ಗೊಬ್ಬರ ಪೂರೈಸುವ ಭರವಸೆ ನೀಡಲಾಗಿದೆ. ಇವೆಲ್ಲ ತತ್ಕಾಲಕ್ಕೆ ಕೈಗೊಳ್ಳುವ ಕ್ರಮಗಳಾಗಿವೆ. ಹಾಗಾಗಿ ಕೃಷಿ ಪುನಶ್ಚೇತನಕ್ಕೆ ಅಲ್ಪಾವಧಿ, ದೀರ್ಘಾವಧಿ ಯೋಜನೆ ರೂಪಿಸಿ ಜಾರಿಗೊಳಿಸಬೇಕು. ಗ್ರಾಮೀಣ ಬದುಕನ್ನು ಆರ್ಥಿಕವಾಗಿ ಸಶಕ್ತೀಕರಣಗೊಳಿಸಲು ಪರಿಣಾಮಕಾರಿ ಕ್ರಮ ಕೈಗೊಳ್ಳುವುದು ಈಗಿನ ತುರ್ತು ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.
ಮೈನಸ್ 0.03% ಬೆಳವಣಿಗೆ ದರರಾಜ್ಯದ ಕೃಷಿ ಬೆಳವಣಿಗೆ ಮೈನಸ್ 0.03% ಇರುವುದಾಗಿ 15ನೇ ಹಣಕಾಸು ಆಯೋಗವೇ ಹೇಳಿದೆ. ಸತತ ಬರ ಪರಿಸ್ಥಿತಿ ಇದಕ್ಕೆ ಕಾರಣವಾಗಿದ್ದರೂ ರಾಜಸ್ಥಾನದಂತಹ ರಾಜ್ಯದಲ್ಲೂ ಕೃಷಿ ಬೆಳವಣಿಗೆ 3% ರಷ್ಟಿದೆ. ಇದು ಕರ್ನಾಟಕಕ್ಕೆ ಮಾದರಿಯಾಗಬೇಕು ಎಂದು ಕೃಷಿ ಆಯೋಗ ಕಿವಿಮಾತು ಹೇಳಿದೆ.
ಹಳ್ಳಿ ಮತ್ತು ಕೃಷಿಯ ಮಹತ್ವ ಈಗ ಎಲ್ಲರಿಗೂ ಗೊತ್ತಾಗಿದೆ. ಕೃಷಿಯನ್ನು ಲಾಭದಾಯಕವಾಗಿಸಲು ಪ್ರೋತ್ಸಾಹಿಸಲಾಗುವುದು. ಹಳ್ಳಿಗೆ ವಾಪಸ್ ಬಂದವರಲ್ಲಿ ಹೆಚ್ಚಿನವರು ಯುವಕರಿದ್ದಾರೆ. ಈ ಯುವಶಕ್ತಿಯನ್ನು ಬಳಕೆ ಮಾಡಿಕೊಳ್ಳುತ್ತೇವೆ. ಈಗಾಗಲೇ ಕೃಷಿ ವಿವಿ ಕುಲಪತಿಗಳೊಂದಿಗೆ ಒಂದು ಸುತ್ತಿನ ಮಾತುಕತೆ ನಡೆದಿದೆ. ಇನ್ನಷ್ಟು ಕ್ರಮಗಳ ಬಗ್ಗೆ ಯೋಚಿಸುತ್ತಿದ್ದೇವೆ.- ಬಿ.ಸಿ.ಪಾಟೀಲ್ ಕೃಷಿ ಸಚಿವ
ಪ್ರಯೋಜನವೇನು? ರಾಜ್ಯದಲ್ಲಿ ಕಳೆದ 10 ವರ್ಷಗಳಿಂದಲೂ ಕೃಷಿ ಬೆಳವಣಿಗೆ ಕುಂಠಿತವಾಗಿದೆ. ಇದರಿಂದ ಆಹಾರೋತ್ಪಾದನೆಯೂ ತಗ್ಗಿದೆ. ಹಾಗಾಗಿ ರಾಜ್ಯದ ಜಿಡಿಪಿಗೂ ಕೃಷಿ ಕ್ಷೇತ್ರದ ಕೊಡುಗೆ ಕಡಿಮೆಯಾಗುತ್ತಿದೆ. ಕೃಷಿಯಲ್ಲಿ ಸುಧಾರಣೆಯಾದರೆ ಈ ಎಲ್ಲ ದೃಷ್ಟಿಯಿಂದಲೂ ಅನುಕೂಲ. ಗ್ರಾಮೀಣ ಜನರು ನಗರದತ್ತ ವಲಸೆ ಬರುವುದನ್ನು ನಿಯಂತ್ರಿಸಬಹುದು.

ಶ್ರಮಿಕರ ಕಲ್ಯಾಣ ಬಲು ದೂರ- ಸಮೀಕ್ಷೆ ಪ್ರಕಾರ ಕಲ್ಯಾಣ ಕರ್ನಾಟಕದಲ್ಲೇ ಹೆಚ್ಚು ಕೃಷಿ ಕಾರ್ಮಿಕರು
ಕಲ್ಯಾಣ ಕರ್ನಾಟಕ (ಹೈದರಾಬಾದ್ ಕರ್ನಾಟಕ) ಎಂದ ತಕ್ಷಣವೇ ಕಣ್ಣೆದುರಿಗೆ ಬರುವುದು ಬಡತನ, ನಿರುದ್ಯೋಗ, ಅನಕ್ಷರತೆ. ಹೊಟ್ಟೆ ತುಂಬಿಸಿಕೊಳ್ಳಲು ನೆರೆ ರಾಜ್ಯಗಳಿಗೆ ಗುಳೆ ಹೋಗುವ ಕೂಲಿ ಕಾರ್ಮಿಕರಲ್ಲಿ ಕಲ್ಯಾಣ ಕರ್ನಾಟಕ ಭಾಗದವರೇ ಹೆಚ್ಚಿರುವುದರಿಂದ ಕೊರೊನಾ ಎಫೆಕ್ಟ್ ಸಹ ಈ ಭಾಗದ ಕಾರ್ಮಿಕರಿಗೆ ಹೆಚ್ಚಾಗಿರುವುದು ಅಲ್ಲಗಳೆಯುವಂತಿಲ್ಲ. ರಾಜ್ಯ ಸರಕಾರ ಪ್ರಕಟಿಸಿರುವ 2020ನೇ ಸಾಲಿನ ಆರ್ಥಿಕ ಸಮೀಕ್ಷೆ ಸಹ ರಾಜ್ಯದ ಉಳಿದ ಭಾಗಗಳಿಗೆ ಹೋಲಿಸಿದರೆ ಕಲ್ಯಾಣ ಕರ್ನಾಟಕ ಭಾಗದಲ್ಲೇ ಹೆಚ್ಚು ಕೃಷಿ ಕೂಲಿಕಾರರು ಇದ್ದಾರೆ ಎಂದು ದೃಢಪಡಿಸಿದೆ. ಹೈದರಾಬಾದ್ ಕರ್ನಾಟಕವನ್ನು ರಾಜ್ಯ ಸರಕಾರ ಕಲ್ಯಾಣ ಕರ್ನಾಟಕವೆಂದು ಮರು ನಾಮಕರಣ ಮಾಡಿದೆ. ಹೆಸರು ಬದಲಾಗಿದೆ ಹೊರತು ಜನರ ನೈಜ ಬದುಕು ಇನ್ನೂ ಕಲ್ಯಾಣ ಆಗಿಲ್ಲ. ರಾಜ್ಯದ ಇತರ ಭಾಗಗಳಿಗೆ ಹೋಲಿಸಿದರೆ ಈ ಭಾಗದವರ ತಲಾ ವರಮಾನವೂ ಅತ್ಯಂತ ಕಮ್ಮಿ ಇದೆ.
ಇಲ್ಲೇ ಯಾಕೆ ಹೆಚ್ಚು? ಸತತ ಬರಗಾಲ, ದುಡಿಯುವ ಕೈಗಳಿದ್ದರೂ ದೊಡ್ಡ ದೊಡ್ಡ ಕೈಗಾರಿಕೆಗಳು ಇಲ್ಲದೇ ಇರುವುದರಿಂದ ಉದ್ಯೋಗ ಅರಿಸಿ ಮುಂಬಯಿ, ಪುಣೆ, ಬೆಂಗಳೂರು, ಹೈದರಾಬಾದ್‌ಗೆ ಹೋಗುತ್ತಾರೆ. ಕೊರೊನಾ ಹೊಡೆತದಿಂದ ಕಲಬುರಗಿ ಜಿಲ್ಲೆಯೊಂದರಲ್ಲಿಯೇ ಇದುವರೆಗೆ 61 ಸಾವಿರ ವಲಸೆ ಕಾರ್ಮಿಕರು ಮರಳಿ ಬಂದಿದ್ದಾರೆ. ರಾಜ್ಯದ ಸರಾಸರಿ ಕೃಷಿ ಕೂಲಿಕಾರರ ಪ್ರಮಾಣ ಶೇ 25.67 ಇದೆ. ರಾಜ್ಯದ ಸರಾಸರಿಗೆ ಹೋಲಿಸಿದರೆ, ಕಲ್ಯಾಣ ಕರ್ನಾಟಕ ಭಾಗದ ಆರು ಜಿಲ್ಲೆಗಳಾದ ಕಲಬುರಗಿ, ಬೀದರ್, ಯಾದಗಿರಿ, ಬಳ್ಳಾರಿ, ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಶೇ 39 ಇದೆ. ರಾಜ್ಯದ ಸರಾಸರಿಗಿಂತ ಹೆಚ್ಚು ಎನ್ನುವುದು ಅಂಕಿ ಸಂಖ್ಯೆಗಳೇ ದೃಢಪಡಿಸುತ್ತವೆ. ರಾಜ್ಯಕ್ಕೆ ಹೋಲಿಸಿದರೆ ಇಲ್ಲಿ ಅನಕ್ಷರತೆ ಹೆಚ್ಚು. ಹೇಳಿಕೊಳ್ಳುವಂತಹ ಗುಡಿ ಕೈಗಾರಿಕೆಗಳೂ ಇಲ್ಲ. ಒಣ ಬೇಸಾಯವೇ ಪ್ರಧಾನವಾಗಿದ್ದು, ತಲಾವಾರು ಭೂ ಒಡೆತನ ಸರಾಸರಿ ನೋಡಿದರೆ ಒಬ್ಬರಿಗೆ ಒಂದು ಎಕರೆ ಜಮೀನು ಬರುತ್ತದೆ. ಇದನ್ನು ನಂಬಿ ಕೃಷಿ ಮಾಡುವುದಕ್ಕಿಂತ ಇದನ್ನು ಬೇರೆಯವರಿಗೆ ಕೃಷಿ ಮಾಡಲು ಗುತ್ತಿಗೆ ನೀಡಿ ಉದ್ಯೋಗ ಅರಸಿ ಗುಳೆ ಹೋಗುವುದು ಸಾಮಾನ್ಯವಾಗಿದೆ.

10 ವರ್ಷಗಳಲ್ಲಿ 8 ವರ್ಷ ಬರ:  ಹಣಕಾಸು ವರದಿ ಅನ್ವಯ ಕರ್ನಾಟಕದಲ್ಲಿಯೇ ಎರಡು ಕರ್ನಾಟಕಗಳಿವೆ! ಒಂದು ಶ್ರೀಮಂತ, ಇನ್ನೊಂದು ಬಡ ಕರ್ನಾಟಕ. ಕಲ್ಯಾಣ ಕರ್ನಾಟಕದ 10 ವರ್ಷಗಳಲ್ಲಿ 8 ವರ್ಷಗಳು ಬರ ವರ್ಷಗಳೇ ಆಗಿರುತ್ತವೆ ಎಂದು ವರದಿಯಲ್ಲಿ ಉಲ್ಲೇಖಿಸಿರುವುದು ಈ ಭಾಗದ ಜನರ ದುಸ್ಥಿತಿಗೆ ಕನ್ನಡಿ ಹಿಡಿದಿದೆ.
ಕಲ್ಯಾಣ ಕರ್ನಾಟಕದಲ್ಲಿ ಹೇಳಿಕೊಳ್ಳುವ ಬೃಹತ್ ಕೈಗಾರಿಕೆಗಳು ಇಲ್ಲ. ಕೃಷಿ ಲಾಭದಾಯದ ಆಗಿಲ್ಲ. ಉದ್ಯೋಗಕ್ಕಾಗಿ ವಲಸೆ ಹೋಗುವುದು ಹೆಚ್ಚಾಗಿದೆ. ದೊಡ್ಡ ನೀರಾವರಿ ಯೋಜನೆ ಇಲ್ಲ. ಸತತ ಬರ ಇರುವುದರಿಂದ ಜೀವನ ನಿರ್ವಹಣೆಯೂ ಕಷ್ಟವಾಗುವುದರಿಂದ ಕುಟುಂಬ ಸಮೇತ ವಲಸೆ ಹೋಗುತ್ತಾರೆ.- ಸಂಗೀತಾ ಕಟ್ಟಿಮನಿ ಅರ್ಥಶಾಸ್ತ್ರಜ್ಞೆ, ಕಲಬುರಗಿ
ವಿಭಾಗವಾರು ಕೃಷಿ ಕಾರ್ಮಿಕರ ವಿವರ(ಶೇಕಡಾವಾರು) ಕಲಬುರಗಿ ಶೇ 39.80ಬೆಳಗಾವಿ ಶೇ 33.10ಮೈಸೂರು ಶೇ 19.30ಬೆಂಗಳೂರು ಶೇ 18

ಕಲಾಂ ಪ್ರಣಾಳಿಕೆಗೆ ಮರುರೂಪ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರು ತಮ್ಮ ವಿಷನ್ -2020ಯಲ್ಲಿ ಗ್ರಾಮೀಣಾಭಿವೃದ್ಧಿಗಾಗಿ ‘ಪುರ’ ಯೋಜನೆಯನ್ನು ಪ್ರಸ್ತಾಪಿಸಿದ್ದರು. ಪುರ ಎಂದರೆ-ಪ್ರವೈಡ್ ಅರ್ಬನ್ ಅಮೆನಿಟೀಸ್ ಇನ್ ರೂರಲ್ ಏರಿಯಾಸ್ ಎಂದರ್ಥ. ಸುಮಾರು 30ರಿಂದ 50 ಹಳ್ಳಿಗಳನ್ನು ಒಂದು ಪುರ ಗುಂಪು ಎಂದು ಪರಿಗಣಿಸಿ, ಆ ಎಲ್ಲ ಕಡೆಗೂ ನಗರ ಸೌಲಭ್ಯ ವ್ಯವಸ್ಥೆಯನ್ನು ಕಲ್ಪಿಸುವುದು. ಕೃಷಿ, ಕೃಷಿ ಉತ್ಪನ್ನಗಳ ಸಂಸ್ಕರಣೆ ಉದ್ಯಮ, ಇಂಧನ ಉತ್ಪಾದನೆ, ಕೌಶಲ್ಯಾಭಿವೃದ್ಧಿ, ಆರೋಗ್ಯ ಸುರಕ್ಷೆ, ನೈರ್ಮಲ್ಯದಂತಹ ಯೋಜನೆಗಳನ್ನು ಬಲಗೊಳಿಸಿ ಎಂಬುದು ಕಲಾಂ ಅವರ ಕನಸಾಗಿತ್ತು. ಪುರ ಯೋಜನೆಯನ್ನು ಈಗಿನ ಅಗತ್ಯಕ್ಕೆ ತಕ್ಕಂತೆ ಮರುವಿನ್ಯಾಸಗೊಳಿಸಬೇಕಿದೆ. ಗ್ರಾಮೀಣ ಮಂದಿ, ಸುತ್ತಮುತ್ತಲಿನ 50 ಕಿ.ಮೀ. ವ್ಯಾಪ್ತಿ ಪ್ರದೇಶದಲ್ಲಿಉದ್ಯೋಗ ಸಿಕ್ಕರೆ, ಯಾರೂ ಕೂಡ ಆ ಪರಿಸರವನ್ನು ತೊರೆಯುವುದಿಲ್ಲ. 
ಕೈಗಾರಿಕೆಗಳ ವಿಕೇಂದ್ರೀಕರಣವಾಗಲಿ ಪ್ರಸ್ತುತ ಎಲ್ಲ ಬೃಹತ್ ಕೈಗಾರಿಕೆಗಳು ಬೆಂಗಳೂರು ಹಾಗೂ ಸುತ್ತಮುತ್ತ ನೆಲೆ ನಿಂತಿವೆ. ಹೊಸದಾಗಿ ಹೂಡಿಕೆ ಮಾಡಬಯಸುವ ಕಂಪನಿಗಳೂ ರಾಜಧಾನಿಯ ಸುತ್ತಮುತ್ತ ಇರಲು ಅಪೇಕ್ಷಿಸುತ್ತವೆ. ಆದರೆ ಭವಿಷ್ಯದಲ್ಲಿ ಹೀಗೆ ಕೈಗಾರಿಕೆಗಳನ್ನು ಒಂದೆಡೆ ಸೇರಿಸುವುದರಿಂದ ಅಪಾಯವೇ ಹೆಚ್ಚು. ಕೈಗಾರಿಕೆಗಳು ಹಾಗೂ ಬೃಹತ್ ಮಲ್ಟಿ ನ್ಯಾಶನಲ್ ಕಂಪನಿಗಳನ್ನು ರಾಜ್ಯದ ಎರಡನೇ ಹಾಗೂ ಮೂರನೇ ಹಂತದ ನಗರಗಳಲ್ಲಿ ನೆಲೆಗೊಳಿಸುವ ಕೆಲಸ ಆಗಬೇಕು. ಇದರಿಂದ ಆ ನಗರಗಳಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ. ವಲಸೆ ತಪ್ಪುತ್ತದೆ. 
ಭವನಗಳು ಉಗ್ರಾಣಗಳಾಗಲಿ ನಮ್ಮ ಎಲ್ಲ ಗ್ರಾಮೀಣ ಪ್ರದೇಶದಲ್ಲೂ ರೈತ ಸಂಪರ್ಕ ಕೇಂದ್ರಗಳಿವೆ. ಸದ್ಯ ಅವು ಬಿತ್ತನೆ ಬೀಜ, ರಸಗೊಬ್ಬರ ಮಾರಾಟ ಕೇಂದ್ರಗಳಾಗಿ ಕುಳಿತಿವೆ. ಈ ಎಲ್ಲ ಕೇಂದ್ರಗಳಲ್ಲಿ ರೈತರು ಬೆಳೆದ ಧವಸ ಧಾನ್ಯಗಳನ್ನು ಸರಕಾರವೇ ಏಕೆ ಖರೀದಿ ಮಾಡಬಾರದು ?  ಆಗ ತಾಲೂಕು ಮಟ್ಟದ ಎಪಿಎಂಸಿಗಳಿಗೆ ಧವಸ ಧಾನ್ಯಗಳ ಸಾಗಣೆ, ಎಪಿಎಂಸಿ ದಲ್ಲಾಳಿಗಳ ಕಿರುಕುಳದ ಸಮಸ್ಯೆಯೇ ತಪ್ಪುತ್ತದೆ. ರೈತರು ಬೆಳೆದ ದವಸ ಧಾನ್ಯಗಳನ್ನು ಸಂಗ್ರಹಿಸಲು ಪ್ರತಿ ಗ್ರಾಮ ಇಲ್ಲವೇ ಹೋಬಳಿ ಕೇಂದ್ರಗಳಲ್ಲೂ ಉಗ್ರಾಣ, ಶೈತ್ಯಾಗಾರ ಕೇಂದ್ರಗಳನ್ನು ಸರಕಾರ ಆರಂಭಿಸಬಹುದು. ಹಳ್ಳಿಗಳಲ್ಲಿ ಇರುವ ಜಾತಿ ಸಮುದಾಯ ಭವನಗಳನ್ನು ಉಗ್ರಾಣ ಭವನ ಮಾಡಿಕೊಳ್ಳಲು ಇದು ಸಕಾಲ. ಕೃಷಿ ಉತ್ಪನ್ನಗಳಿಗೆ ಸರಿಯಾದ ಉಗ್ರಾಣ ಇಲ್ಲದೇ ಶೇ.30ರಷ್ಟು ಹಣ್ಣು ತರಕಾರಿ ಹಾಳಾಗಿ ಹೋಗುತ್ತಿವೆ.
ಹಳ್ಳಿಗೂ ಬರಲಿ ಹಾಪ್‌ಕಾಮ್ಸ್ : ಹಳ್ಳಿಗಳನ್ನು ಹಾಪ್‌ಕಾಮ್ಸ್‌ಗಳ ಮೂಲಕವೂ ಸಶಕ್ತಗೊಳಿಸಬಹುದು. ತೋಟಗಾರಿಕೆ ಇಲಾಖೆ ನಡೆಸುತ್ತಿರುವ ಹಾಪ್ ಕಾಮ್ಸ್ ಸೌಲಭ್ಯ ಇದುವರೆಗೆ ಸಿಗುತ್ತಿರುವುದು ನಗರ ಪ್ರದೇಶಗಳಿಗೆ ಮಾತ್ರ. ಸಣ್ಣ ಪುಟ್ಟ ಹಾಪ್‌ಕಾಮ್ಸ್‌ಗಳನ್ನು ಕನಿಷ್ಠ ಪಕ್ಷ  ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆರಂಭಿಸಿದರೆ, ಅದರಿಂದಲೂ ಸ್ಥಳೀಯರಿಗೆ ಅನುಕೂಲವಾಗುತ್ತದೆ. ಸಾರಿಗೆ, ಸಂಗ್ರಹ ಹಾಗೂ ಶೈತ್ಯಗಾರ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಬಹುದು.
ಮಹಿಳಾ ಸಂಘಗಳಿಗೆ ಕೆಲಸ ಹಳ್ಳಿಗಳಲ್ಲಿರುವ ಮಹಿಳಾ ಸ್ವ ಸಹಾಯ ಸಂಘಗಳಿಗೆ ಕೈ ತುಂಬ ಕೆಲಸ ನೀಡಲು ಕೂಡ ಇದು ಸಕಾಲ. ಇದರಿಂದ ಹೆಣ್ಣು ಮಕ್ಕಳಿಗೆ ಕೆಲಸ ಸಿಗುತ್ತದೆ. ಅವರು ಮಾಡುವ ಹಪ್ಪಳ ಸಂಡಿಗೆ, ಚಕ್ಕಲಿ ಕೋಡುಬಳೆಗೂ ಮಹತ್ವ ಸಿಗುವಂತೆ ಮಾಡಬೇಕು. ಮನೆಯಲ್ಲಿ ಮಾಡುವ ಇವರ ಕೆಲಸಕ್ಕೂ ವೇತನ ನೀಡಬೇಕು ಎಂಬ ವಾದವೂ ಇದೆ.
ಅಪರಾಧಕೃತ್ಯಗಳೂ ಹೆಚ್ಚುತ್ತವೆ… ಲಾಕ್ಡೌನ್ ಸೃಷ್ಟಿಸುತ್ತಿರುವ ನಿರುದ್ಯೋಗ ಮತ್ತು ಸಂಕಷ್ಟಗಳು ಅಪರಾಧ ಕೃತ್ಯಗಳಾಗಿ ಕಾಡುವ ಅಪಾಯ ಇದೆ. ಬೆಂಗಳೂರಿಗೆ ಕೂಲಿ ಹುಡುಕಿ ಬಂದಿರುವವರಲ್ಲಿ ಬಿಹಾರ, ಒಡಿಶಾ, ಜಾರ್ಖಂಡ್, ಉತ್ತರ ಪ್ರದೇಶ, ಅಸ್ಸಾಂ, ಮಣಿಪುರದವರ ಸಂಖ್ಯೆಯೇ ಹೆಚ್ಚಿದೆ. ಈಗ ಸಾವಿರಾರು ಸಂಖ್ಯೆಯಲ್ಲಿ ಇವರೆಲ್ಲ ನಿರುದ್ಯೋಗಿಗಳಾಗಿದ್ದಾರೆ. ಕೆಲವರು ಅಪರಾಧ ಕೃತ್ಯಗಳಿಗೆ ಕೈಹಾಕುವ ಸಾಧ್ಯತೆ ಇದೆ. ಇಂಥ ವಲಸಿಗರಲ್ಲಿ ಕೆಲವರು ‘ಒಪ್ಪೊತ್ತು ಊಟವೂ ಸಿಗದ ನಮ್ಮ ಹಳ್ಳಿಗಳಿಗಿಂತ ಬೆಂಗಳೂರಿನ ಜೈಲೇ ಉತ್ತಮ’ ಎಂದಿದ್ದನ್ನು ನೆನಪಿಸಿಕೊಂಡಿದ್ದಾರೆ ಅಪರಾಧ ವಿಭಾಗದ ಸಿಬ್ಬಂದಿ. ಹೊಸ ಗ್ಯಾಂಗ್‌ಗಳು ತಲೆ ಎತ್ತುತ್ತವೆ.
ಕೆಲಸಕ್ಕೆಂದು ಬಂದು ಕೆಲಸ ಸಿಗದಿದ್ದಾಗ ಬಿಹಾರ ಮತ್ತು ಉ. ಪ್ರದೇಶದ ಕೆಲವು ಯುವಕರು ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದನ್ನು ನೋಡುತ್ತಿದ್ದೇವೆ. ಈಗ ಬಹಳಷ್ಟು ಮಂದಿ ವಾಪಸಾಗುವುದಿಲ್ಲ. ಅಪರಾಧಿಗಳಾಗುವ ಸಾಧ್ಯತೆಯಿದೆ. -ಬಿ.ಕೆ.ಶಿವರಾಂ, ಮಾಜಿ ಪೊಲೀಸ್ ಅಧಿಕಾರಿ.

ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳು ಅಪರಾಧ ಹೆಚ್ಚಾಗಲು ಕಾರಣ ಆಗುತ್ತದೆ ನಿಜ. ಆದರೆ ಬೆಂಗಳೂರು ಪೊಲೀಸರು ಅದನ್ನೆಲ್ಲಾ ನಿಯಂತ್ರಿಸಲು, ಶಕ್ತರಿದ್ದಾರೆ. ದೇಶದಲ್ಲೇ ನಮ್ಮ ಕಾರ್ಯಕ್ಷಮತೆ ಸಮರ್ಥವಾಗಿದೆ.-ಭಾಸ್ಕರ್ ರಾವ್, ನಗರ ಪೊಲೀಸ್ ಕಮಿಷನರ್.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top