ಉಗ್ರರಿಗೆ ಬಗ್ಗದ ಫ್ರೆಂಚರ ಕೆಚ್ಚನ್ನು ಮೆಚ್ಚಲೇಬೇಕಲ್ಲವೇ?

ಬಾಕಿ ಎಲ್ಲ ಧರ್ಮಗಳು ಕಾಲಕಾಲಕ್ಕೆ ಸುಧಾರಣೆಗೆ ಒಗ್ಗಿಕೊಂಡಿವೆ. ಹಾಗೇ ಇಸ್ಲಾಂ ಶಾಂತಿಪ್ರಿಯ ಧರ್ಮ, ಹಿಂಸೆಯನ್ನು ಬೋಧನೆ ಮಾಡುವುದಿಲ್ಲ ಎಂದರಷ್ಟೆ ಸಾಲದು. ಆಚರಣೆಯಲ್ಲೂ ಬರಬೇಕು. ಬದಲಾವಣೆಗೆ ತೆರೆದುಕೊಳ್ಳಬೇಕು ಎಂದಿದ್ದಾರೆ ತಸ್ಲೀಮಾ ನಸ್ರಿನ್. ಹೌದಲ್ಲವೇ?

ಕಟ್ಟಿಕೊಂಡಿರುವ ಭಯಂಕರ ಭ್ರಮೆಯನ್ನು ಕಳಚಿಹಾಕಲು, ಜಗತ್ತಿನಲ್ಲಿ ಹೊಸ ರೀತಿಯ ಚರ್ಚೆಯೊಂದು ಶುರುವಾಗಲು ಚಾರ್ಲಿ ಹೆಬ್ಡೋ ಕಾರ್ಟೂನ್ ಪತ್ರಿಕೆ ಮೇಲೆ ಬರ್ಬರ ಭಯೋತ್ಪಾದಕ ದಾಳಿಯೇ ನಡೆಯಬೇಕಾಯಿತು ನೋಡಿ. ಭಾರತದ ವಿಷಯವನ್ನು ಬದಿಗಿಟ್ಟೇ ಆಲೋಚಿಸೋಣ. ಇಲ್ಲಿ ಜಾತೀಯತೆ ಇದೆ, ಧಾರ್ಮಿಕ ತಾರತಮ್ಯವಿದೆ, ಆರ್‍ಎಸ್‍ಎಸ್, ವಿಶ್ವ ಹಿಂದು ಪರಿಷತ್, ಬಜರಂಗದಳದಂತಹ ಧಾರ್ಮಿಕ, ಸಾಂಸ್ಕøತಿಕ ಸಂಘಟನೆಗಳಿರುವುದರಿಂದ ಸಾಮಾಜಿಕ ಸಾಮರಸ್ಯಕ್ಕೆ ತೊಡಕುಂಟಾಗುತ್ತಲೇ ಇದೆ ಎಂಬೆಲ್ಲ ವಾದವಿದೆ. ಇರಲಿ. ಆದರೆ ಆ ಫ್ರಾನ್ಸ್‍ಗೆ ಅದೇನು ದುರ್ಗತಿ ಬಂತು? ಜಾತಿ, ಧರ್ಮ, ಲಿಂಗ ತಾರತಮ್ಯದ ಗಂಧವೇ ಇಲ್ಲದ ಆ ದೇಶದ ಮೇಲೇಕೆ ಭಯೋತ್ಪಾದಕರು ಎರಗಿಬಿಟ್ಟರು? ಯೋಚಿಸಬೇಕಲ್ಲವೇ?

ಫ್ರಾನ್ಸ್ ದೇಶದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚೆಂದರೆ ಮೂರರಿಂದ ನಾಲ್ಕು ಪರ್ಸೆಂಟ್ ಇರಬಹುದು. ಈ ಇರಬಹುದು… ಎಂಬ ರಾಗ ಎಳೆಯುವುದಕ್ಕೂ ಕಾರಣವಿದೆ. ಫ್ರಾನ್ಸ್ ಪಕ್ಕಾ ಸೆಕ್ಯುಲರ್ ದೇಶ. ಅಮೆರಿಕ, ಇಂಗ್ಲೆಂಡ್‍ನಂತಹ ಮುಂದುವರೆದ ದೇಶಗಳಲ್ಲೂ ಸಹ ಜನಾಂಗೀಯ ಆಧಾರದಲ್ಲಿ ಜನಸಂಖ್ಯೆಯನ್ನು ಲೆಕ್ಕಹಾಕಲಾಗುತ್ತದೆ. ಬಹುತೇಕ ಪಶ್ಚಿಮ ದೇಶಗಳಲ್ಲಿ ಕ್ರೈಸ್ತ ಧರ್ಮಕ್ಕೆ, ಕ್ರೈಸ್ತರ ಆಚರಣೆ, ಸಂಪ್ರದಾಯಗಳಿಗೆ ಗುಲಗುಂಜಿಯಷ್ಟಾದರೂ ಹೆಚ್ಚಿನ ಪ್ರಾಧಾನ್ಯತೆ ಇರುತ್ತದೆ. ಆದರೆ ಫ್ರಾನ್ಸ್‍ನಲ್ಲಿ ಹಾಗಲ್ಲ, ವ್ಯಕ್ತಿಯ ಜಾತಿ, ಧರ್ಮ, ಭಾಷೆ, ಹಿನ್ನೆಲೆ ಯಾವುದೇ ಇರಲಿ ಒಟ್ಟಾರೆಯಾಗಿ ಫ್ರೆಂಚ್ ಪ್ರಜೆಯೆಂದೇ ಗುರುತಿಸುತ್ತಾರೆ. ಕ್ರೈಸ್ತ, ಮುಸ್ಲಿಂ, ಮತ್ತೊಂದು ಅಂತೆಲ್ಲ ಗುರುತಿಸುವುದಿಲ್ಲ. ಹೀಗಾಗಿ ನಿಜವಾದ ಸೆಕ್ಯುಲರಿಸಂಗೆ ಫ್ರಾನ್ಸ್ ದೇಶವೇ ಉತ್ತಮ ಉದಾಹರಣೆ. ಆದರೂ ಇಂತಹ ಅಮಾನುಷ ಭಯೋತ್ಪಾದಕ ದಾಳಿ ನಡೆದದ್ದು ವಿಚಿತ್ರವಲ್ಲವೇ…

ಚೀನಾ ಮತ್ತು ರಷ್ಯಾ ಕೂಡ ನಮಗೆ ಅದೇ ತೆರನಾಗಿ ಕಾಣಿಸುತ್ತವೆ. ಚೀನಾ ಪಕ್ಕಾ ಕಮ್ಯುನಿಸ್ಟ್ ದೇಶ. ಅಲ್ಲಿ ದೇವರು, ಧರ್ಮ, ಧಾರ್ಮಿಕ ಆಚರಣೆ, ಜಾತೀಯತೆ ಇದ್ಯಾವುದಕ್ಕೂ ಆಸ್ಪದವಿಲ್ಲ. ಸಾಂಪ್ರದಾಯಿಕ ಆಚರಣೆಗಳೆಲ್ಲ ಸರ್ಕಾರದ ದೃಷ್ಟಿಯಲ್ಲಿ ಮಹಾಪರಾಧ. ಹಾಗೆ ನೋಡಿದರೆ ಮತ, ಧರ್ಮದ ಹೆಸರಲ್ಲಿ ಅಪಸ್ವರ, ಅತೃಪ್ತಿ, ಅಶಾಂತಿ ಇರಲೇಬಾರದು. ಇಷ್ಟೆಲ್ಲ ಇದ್ದೂ ಚೀನಾದಲ್ಲಿ ಧಾರ್ಮಿಕ ಅಸಹನೆಯನ್ನು ಹತ್ತಿಕ್ಕಲು ಸಾಧ್ಯವಾಗಿದೆಯೇ?

frenchಕಾರಣ ಇಷ್ಟೆ, 1990ರಿಂದೀಚೆಗೆ ಚೀನಾದಲ್ಲಿ ಮೂಲಭೂತವಾದದ ಉಪಟಳ ದಿನೇದಿನೆ ಹೆಚ್ಚಾಗುತ್ತಿದೆ. ಆರ್ಥಿಕ, ಸಾಮಾಜಿಕ, ಧಾರ್ಮಿಕ ಸಮಾನತೆಗೆ ಮತ್ತೊಂದು ಹೆಸರು ಎಂದು ಕೊಚ್ಚಿಕೊಳ್ಳುವ ಆ ದೇಶಕ್ಕೆ ಈಗ ಗ್ಸಿಯಾಂಗ್ ಪ್ರಾಂತದಲ್ಲಿ ಉಲ್ಬಣಿಸುತ್ತಿರುವ ಉಗುರ್ ಮುಸ್ಲಿಂ ಪ್ರತ್ಯೇಕತಾವಾದ ದೊಡ್ಡ ತಲೆನೋವಾಗಿದೆ. ಆರ್ಥಿಕ, ನೈಸರ್ಗಿಕ ಸಂಪತ್ತಿನ ಕಾರಣಕ್ಕಾಗಿ ಗ್ಸಿಯಾಂಗ್ ಪ್ರದೇಶ ಚೀನಾಕ್ಕೆ ಬಹಳ ಪ್ರಮುಖವಾದದ್ದು. ಜನಸಂಖ್ಯೆ ದೃಷ್ಟಿಯಿಂದಲೂ ಆ ಪ್ರಾಂತಕ್ಕೆ ಮಹತ್ವದ ಸ್ಥಾನವಿದೆ. ಗ್ಸಿಯಾಂಗ್‍ನಲ್ಲಿ ಟರ್ಕ್ ಮುಸ್ಲಿಮರು ಶೇ.60ಕ್ಕಿಂತಲೂ ಹೆಚ್ಚಿದ್ದಾರೆ. ಅಲ್ಲಿನ ಮುಸ್ಲಿಮರಿಗೆ ಪ್ರತ್ಯೇಕ ಮನ್ನಣೆ ಬೇಕು ಎಂದು ಕಳೆದ ಇಪ್ಪತ್ತು ವರ್ಷಗಳಿಗಿಂತಲೂ ಉಗ್ರವಾಗಿ ಹೋರಾಟ ನಡೆಯುತ್ತಿದೆ. ಪ್ರತ್ಯೇಕ ಉಗುರಿಸ್ತಾನ್ ಅಥವಾ ಪೂರ್ವ ಟರ್ಕಿಸ್ತಾನ್ ನಿರ್ಮಾಣ ಮಾಡಬೇಕೆಂದು ಮೂಲಭೂತವಾದಿಗಳು ಹಿಂಸಾತ್ಮಕ ಬಂಡಾಯ ನಡೆಸುತ್ತಿದ್ದಾರೆ. ಗ್ಸಿಯಾಂಗ್ ಪ್ರದೇಶದಲ್ಲೇ ಮುಸ್ಲಿಂ ಉಗ್ರರಿಗೆ ತರಬೇತಿ ನೀಡುವ ಹತ್ತಾರು ತರಬೇತಿ ನೆಲೆಗಳಿವೆ. ಆ ಪ್ರಾಂತದಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕ ಶಿಬಿರಗಳಿಂದಲೇ ಟಿಬೆಟ್, ಮಂಗೋಲಿಯಾ ಮತ್ತು ತೈವಾನ್‍ವರೆಗೆ ಉಗ್ರಗಾಮಿ ಚಟುವಟಿಕೆಯನ್ನು ವಿಸ್ತರಿಸಲಾಗುತ್ತಿದೆ. ಹೀಗೆ ಭಯೋತ್ಪಾದಕ ನೆಲೆ ವಿಸ್ತರಿಸಿಕೊಳ್ಳುತ್ತಿರುವುದರಿಂದ ಅಂಥ ಬಲಾಢ್ಯ ಚೀನಾವೇ ಚಿಂತೆಗೀಡಾಗಿದೆ. ಪ್ರತ್ಯೇಕತಾವಾದವನ್ನು ನಿಗ್ರಹಿಸುವ ಸಲುವಾಗಿ ಕಮ್ಯುನಿಸ್ಟ್ ಚೀನಾ ಸರ್ಕಾರ ಮುಸ್ಲಿಂ ಓಲೈಕೆ ನೀತಿಯನ್ನೂ ಅನುಸರಿಸಿ ನೋಡಿತು. ಓಲೈಕೆ ರಾಜಕಾರಣದ ಭಾಗವಾಗಿ 1999ರಲ್ಲಿ ಚೀನಾ ಸರ್ಕಾರ `ರಾಷ್ಟ್ರೀಯ ಅಲ್ಪಸಂಖ್ಯಾತ ನೀತಿ’ ಘೋಷಣೆ ಮಾಡಿತು. `ಚೀನಾ ಇಸ್ಲಾಮಿಕ್ ನ್ಯಾಷನಲ್ ಕೌನ್ಸಿಲ್’ನ್ನೂ ಸ್ಥಾಪಿಸಿತು; ಈ ಮಂಡಳಿ ಮೂಲಕ ಮುಸ್ಲಿಂ ಧಾರ್ಮಿಕ ಆಚರಣೆಗಳಿಗೆ ಸರ್ಕಾರಿ ಮಾನ್ಯತೆ ನೀಡುವ ಭರವಸೆಯನ್ನೂ ನೀಡಿತು. ಜೊತೆಗೆ ಮುಸ್ಲಿಂ ಭಾವನೆ, ನಂಬಿಕೆಗಳಿಗೆ ಪ್ರತ್ಯೇಕ ಗೌರವ, ಆದರವನ್ನು ತೋರುವ ಭರವಸೆಯನ್ನೂ ಸರ್ಕಾರ ನೀಡಿತು. ಆದರೂ ಗ್ಸಿಯಾಂಗ್ ಪ್ರತ್ಯೇಕತಾವಾದಿ ಹಿಂಸಾಚಾರ ನಿಯಂತ್ರಣಕ್ಕೆ ಬರಲಿಲ್ಲ. ಪ್ರತ್ಯೇಕ ಉಗುರಿಸ್ತಾನದ ಬೇಡಿಕೆಯಲ್ಲಿ ಒಂದಿಷ್ಟೂ ಬದಲಾವಣೆ ಕಾಣಲಿಲ್ಲ. ಪಾಕಿಸ್ತಾನ, ಅಫ್ಘಾನಿಸ್ತಾನ, ತಜಕಿಸ್ತಾನ, ಕಿರ್ಗಿಸ್ತಾನ, ಕಜಕಿಸ್ತಾನ ಗಡಿಗಳಿಂದ ತನ್ನ ನೆಲದಲ್ಲಿ ಮುಸ್ಲಿಂ ಮೂಲಭೂತವಾದ ವ್ಯಾಪಕವಾಗಿ ಬೇರುಬಿಡುತ್ತಿದೆ ಎಂದು ಚೀನಾ ಸರ್ಕಾರ ಹೇಳುತ್ತಿದೆ. ಸದ್ಯಕ್ಕೆ ಹೀಗೆ ಬೊಬ್ಬೆ ಹೊಡೆಯುವುದೊಂದನ್ನು ಬಿಟ್ಟರೆ ಅದಕ್ಕೆ ಬೇರೆ ದಾರಿ ಇಲ್ಲ ಎನ್ನಬಹುದು.

ರಷ್ಯಾದ ಪರಿಸ್ಥಿತಿಯೂ ಚೀನಾಕ್ಕಿಂತ ಭಿನ್ನವಾಗಿಲ್ಲ. ಮುಸ್ಲಿಂ ಜನಸಂಖ್ಯೆ ಅಧಿಕವಾಗಿರುವ ಚಚೆನ್ಯಾ, ಡಾಗಿಸ್ತಾನ, ಇಂಗುಶೆಟಿಯಾ, ನಾರ್ತ್ ಒಸೆಟ್ಟಾ ಮತ್ತು ಟಟ್ರಸ್ತಾನವನ್ನು ರಷ್ಯಾದಿಂದ ಪ್ರತ್ಯೇಕಗೊಳಿಸಲು ಮೂಲಭೂತವಾದಿಗಳು ಹತ್ತಾರು ವರ್ಷಗಳಿಂದ ರಕ್ತಪಾತ ನಡೆಸುತ್ತಿದ್ದಾರೆ. ಕೇವಲ ಉದಾಹರಣೆಗೋಸ್ಕರ ಈ ಎರಡು ರಾಷ್ಟ್ರಗಳ ವಿದ್ಯಮಾನಗಳನ್ನು ಇಲ್ಲಿ ಉಲ್ಲೇಖ ಮಾಡಿದ್ದು, ಪ್ರಪಂಚದ ಯಾವುದೇ ದೇಶ ಇಂದು ಮೂಲಭೂತವಾದಿ ಹಿಂಸಾಚಾರದಿಂದ ಮುಕ್ತವಾಗಿದೆ ಎನ್ನಲು ಸಾಧ್ಯವಿಲ್ಲವೇನೋ?

ಹಾಗೆ ಅಪವಾದವಾಗಿ ಯಾವುದಾದರೂ ದೇಶ ಇದ್ದರೆ ಅದು ಜಪಾನ್ ಮಾತ್ರ. ಜಪಾನ್ ಮೂಲಭೂತವಾದವನ್ನು ಸಮರ್ಥವಾಗಿ ಎದುರಿಸಿ ಇಂದಿಗೂ ಜನಾಂಗೀಯ ಹಿಂಸಾಚಾರ ಮತ್ತು ಪ್ರತ್ಯೇಕತಾವಾದದ ಪಿಡುಗಿನಿಂದ ಬಚಾವಾಗಿದೆ. ಅದಕ್ಕಾಗಿ ಅದು ಅನುಸರಿಸಿದ ನೀತಿಯನ್ನು ಎಷ್ಟು ಮಂದಿ ಒಪ್ಪುತ್ತಾರೋ ಗೊತ್ತಿಲ್ಲ. ಜಪಾನ್ ಬೌದ್ಧಮತವನ್ನು `ರಾಷ್ಟ್ರೀಯ ಮತ’ವೆಂದು ಸ್ವೀಕರಿಸಿದೆ. ಅದಕ್ಕೆ ಹೊರತಾಗಿ ಆ ದೇಶದಲ್ಲಿ ಬೇರಾವುದೇ ಮತಧರ್ಮಕ್ಕೆ ಅಧಿಕೃತ ಮಾನ್ಯತೆಯಿಲ್ಲ. ಜಪಾನಿ ಭಾಷೆಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಆ ದೇಶ ಘೋಷಿಸಿಕೊಂಡಿದೆ. ಘೋಷಣೆಯಲ್ಲಿ ಮಾತ್ರವಲ್ಲ, ಧರ್ಮ ಮತ್ತು ಭಾಷೆಯ ಆಚರಣೆಯಲ್ಲೂ ಅಷ್ಟೇ ಕಟ್ಟುನಿಟ್ಟನ್ನು ಪಾಲಿಸಿಕೊಂಡು ಬಂದಿದೆ. ಧರ್ಮ, ಜಾತಿ ಯಾವುದೇ ಇರಲಿ, ಜಪಾನಿಗಳು ಜಪಾನಿ ಭಾಷೆಯಲ್ಲಿ ಮಾತ್ರ ಮಾತನಾಡಬೇಕು, ವ್ಯವಹರಿಸಬೇಕು. ಅಂತಾರಾಷ್ಟ್ರೀಯ ಸಂಬಂಧ, ವ್ಯವಹಾರಗಳಿಗೆ ಸಂಬಂಧಿಸಿ ಜಪಾನಿ ಅಥವಾ ಇಂಗ್ಲಿಷಿನಲ್ಲಿ ವ್ಯವಹರಿಸಬಹುದು. ಉರ್ದು ಅಥವಾ ಬೇರಾವುದೇ ಭಾಷೆಯಲ್ಲಿ ವ್ಯವಹರಿಸಲು ಅಲ್ಲಿ ಅವಕಾಶವಿಲ್ಲ. ಹೀಗಾಗಿ ಅಲ್ಲಿ ಯಾರೂ ಅರೇಬಿಕ್ ಶಾಲೆ ಅಥವಾ ಮದರಸಾಗಳನ್ನು ತೆರೆಯಲು ಸಾಧ್ಯವಿಲ್ಲ. ಜಪಾನ್ ವಿವಿಗಳಲ್ಲಿ ಹೊರ ದೇಶಗಳ ಮುಸ್ಲಿಂ ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ಅವಕಾಶವಿಲ್ಲ. ಭಾಷೆ ಮತ್ತು ಧರ್ಮದ ವಿಷಯದಲ್ಲಿ ಸಾಮಾನ್ಯ ಪ್ರಜೆಗಳಿಂದ ಹಿಡಿದು ಬಹುರಾಷ್ಟ್ರೀಯ ಕಾರ್ಪೊರೇಟ್ ಕಂಪನಿಗಳ ಸಿಇಒಗಳವರೆಗೆ ಒಂದೇ ಕಾನೂನು. ಜಪಾನ್‍ನಲ್ಲಿ ಮತಾಂತರದ ಪರ-ವಿರೋಧದ ಚರ್ಚೆಗೆ ಆಸ್ಪದವೇ ಇಲ್ಲ. ವಿದೇಶದ ಪಾದ್ರಿಯೋ, ಮೌಲ್ವಿಯೋ ಮತಾಂತರಕ್ಕೆ ಕೈ ಹಾಕಿದರೆ ಮತಾಂತರ ಮಾಡಿದವರು, ಮತಾಂತರಗೊಂಡವರು ಇಬ್ಬರನ್ನೂ ದಂಡಿಸಲು ಅಲ್ಲಿ ಕಠಿಣ ಕಾನೂನಿದೆ. ಉದ್ಯೋಗ ನಿಮಿತ್ತವಾಗಿ ಬೇರಾವುದೇ ದೇಶದ, ಅನ್ಯ ಮತಧರ್ಮದ ಜನರು ಜಪಾನ್‍ಗೆ ಬಂದರೆ ನಿಗದಿಪಡಿಸಿದ ಸಮಯ ಮೀರಿದ ನಂತರ ಅವರು ಒಂದು ಕ್ಷಣವೂ ಉಳಿದುಕೊಳ್ಳಲು ಸಾಧ್ಯವಿಲ್ಲ. ಅನ್ಯದೇಶದವರು ಜಪಾನ್‍ನಲ್ಲಿ ಮನೆಯನ್ನು ಬಾಡಿಗೆ ಪಡೆಯುವುದಾದರೂ, ವೀಸಾ ಪ್ರಮಾಣಪತ್ರವನ್ನು ಮನೆ ಮಾಲೀಕನಿಗೆ ತೋರಿಸುವುದು ಕಡ್ಡಾಯ. ಅದಕ್ಕಿಂತ ಕುತೂಹಲದ ಸಂಗತಿ ಎಂದರೆ ಜಪಾನ್ ಪ್ರಧಾನಿ, ಮಂತ್ರಿಗಳು ಅಥವಾ ಉನ್ನತ ಸರ್ಕಾರಿ ಅಧಿಕಾರಿಗಳಿಗೆ ಪಾಕಿಸ್ತಾನ, ಇರಾನ್, ಸಿರಿಯಾ, ಇಜಿಪ್ತ್ ದೇಶಗಳ ಬಾಂಧವ್ಯ, ವ್ಯವಹಾರಗಳಲ್ಲಿ ಹೆಚ್ಚಿನ ಆಸಕ್ತಿಯಿಲ್ಲ. ಈ ದೇಶಗಳ ನಾಯಕರೂ ಜಪಾನ್ ಜೊತೆಗಿನ ಸಂಬಂಧ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಅಂತಹ ನಿರೀಕ್ಷೆಯನ್ನೇನೂ ಇಟ್ಟುಕೊಂಡಿಲ್ಲ. ಇಲ್ಲಿ ಇನ್ನೂ ಒಂದು ಸಂಗತಿಯನ್ನು ಗಮನಿಸಬೇಕು. ಅಲ್ಲಿ ಇಂತಹ ಕಟ್ಟುನಿಟ್ಟಿನ ನಿಯಮ ಆಚರಣೆಯಲ್ಲಿ ತಂದದ್ದು, ಅಮೆರಿಕದ ಮೇಲೆ 2001ರ ಸೆಪ್ಟೆಂಬರ್ 9ರಂದು ಭಯೋತ್ಪಾದಕ ದಾಳಿಯ ನಡೆದ ನಂತರದಲ್ಲೋ, ಜಗತ್ತಿನಾದ್ಯಂತ ಐಸಿಸ್‍ನಂತಹ ಭಯೋತ್ಪಾದಕ ಪಿಡುಗು ಉಲ್ಬಣಿಸಿದ ನಂತರವೋ ಅಲ್ಲ. ಜಪಾನ್ ಈ ನಿಯಮವನ್ನು ಅದೆಷ್ಟೋ ವರ್ಷಗಳ ಮುಂಚಿನಿಂದಲೇ ಅನುಸರಿಸಿಕೊಂಡು ಬಂದಿದೆ. ಇದೆಲ್ಲದರ ಒಟ್ಟು ಪರಿಣಾಮವಾಗಿ ಆ ದೇಶ ಜನಾಂಗೀಯ ಹಿಂಸಾಚಾರ, ಮೂಲಭೂತವಾದದ ಪಿಡುಗಿನಿಂದ ಮುಕ್ತವಾಗಿ ನೆಮ್ಮದಿಯಿಂದಿದೆ.

ಭಾರತದ ಸಂದರ್ಭದಲ್ಲಿ ಹೇಳುವುದಾದರೆ, ನಾವು ಜಪಾನ್‍ನಷ್ಟು ಕಮ್ಯುನಲ್ ಅಲ್ಲ. ನಮ್ಮೆಲ್ಲ ಕಷ್ಟ, ನಷ್ಟಗಳನ್ನು ನುಂಗಿಕೊಂಡು ಸೆಕ್ಯುಲರ್ ಸಿದ್ಧಾಂತದ ಪ್ರತಿಷ್ಠೆ ಒಂದಿಷ್ಟೂ ಮುಕ್ಕಾಗದಂತೆ ನಡೆದುಕೊಂಡು ಬಂದಿದ್ದೇವೆ. ಇಷ್ಟಾದರೂ ಆರಂಭದಲ್ಲೇ ದೇಶ ವಿಭಜನೆ ಆಯಿತು. ಯಾರಿಂದಲೂ ಅದನ್ನು ತಡೆಯಲು ಸಾಧ್ಯವಾಗಲಿಲ್ಲ. ಕಾಶ್ಮೀರದ ಮೂಲಕ ಆರಂಭವಾಗಿ ಈಗ ಇಡೀ ದೇಶದ ಇಂಚಿಂಚಿಗೂ ಭೀತಿವಾದ ಆವರಿಸಿಕೊಂಡಿದೆ. 1993ರಲ್ಲಿ ಮುಂಬೈನಲ್ಲಿ ಸರಣಿ ಬಾಂಬ್ ಸ್ಫೋಟ ನಡೆದು ಇಡೀ ದೇಶವೇ ನಡುಗಿಹೋಯಿತು. ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆ ದಾಳಿಯ ಸೂತ್ರಧಾರ ಅನ್ನುವುದೂ ಜಗಜ್ಜಾಹೀರು. ದಾವೂದನ ಹಿಂದಿರುವುದು ಪಾಕಿಸ್ತಾನದ ಐಎಸ್‍ಐ ಎಂಬುದರಲ್ಲೂ ಮುಚ್ಚುಮರೆಯಿಲ್ಲ. ಆದರೂ ಮುಂಬೈ ದಾಳಿಗೆ 1992ರ ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿ ವಿವಾದಿತ ಕಟ್ಟಡ ನೆಲಸಮಗೊಂಡಿದ್ದೇ ಕಾರಣ ಅನ್ನುವ ತರ್ಕವನ್ನು ಮುಂದಿಟ್ಟುಕೊಂಡು ನಮ್ಮಲ್ಲನೇಕ ಚಿಂತಕರು ಸೆಕ್ಯುಲರ್ ಸಿದ್ಧಾಂತವನ್ನು ಜೋಪಾನ ಮಾಡಿಕೊಂಡೇ ಬರುತ್ತಿದ್ದಾರೆ.

ಇರಲಿ, ಚಾರ್ಲಿ ಹೆಬ್ಡೋ ಪತ್ರಿಕೆಯ ಸಂಪಾದಕ ಶಾರ್ಬೋರ್ನೆ ಮತ್ತು ಪತ್ರಿಕೆಯ ಹನ್ನೆರಡು ಮಂದಿ ಸಿಬ್ಬಂದಿಗೆ ಹೋಲಿಸಿದರೆ ಎಂ.ಎಫ್. ಹುಸೇನ್ ನಿಜಕ್ಕೂ ಪುಣ್ಯವಂತರೇ ಸರಿ. ಏಕೆಂದರೆ ಹುಸೇನ್ ತಮ್ಮ ಕುಂಚದ ಕೈಚಳಕದ ಮೂಲಕ ಇಸ್ಲಾಂನ ನಂಬಿಕೆಗಳನ್ನು ಕೆಣಕುವ ಸಾಹಸಕ್ಕೆ ಕೈಹಾಕಲಿಲ್ಲ. ಕೋಟ್ಯಂತರ ಹಿಂದುಗಳ ಆರಾಧ್ಯದೈವ ಶ್ರೀರಾಮ, ಸೀತೆ, ಹನುಮಂತ, ಲಕ್ಷ್ಮೀ, ಸರಸ್ವತಿ, ಗಣಪತಿ, ಶಿವ-ಪಾರ್ವತಿಯರನ್ನು ಹೀನವಾಗಿ, ಲೈಂಗಿಕವಾಗಿ ಚಿತ್ರಿಸಿದರೂ ಹುಸೇನ್ ಮೇಲೆ ಕೆಂಗಣ್ಣು ಬೀರುವ ಮೂರ್ಖತನವನ್ನು ಇಲ್ಲಿನ ಜನರು ಪ್ರದರ್ಶಿಸಲಿಲ್ಲ. ಅದೇ ಚಾರ್ಲಿ ಹೆಬ್ಡೋ ಸಂಪಾದಕ ಫ್ರಾನ್ಸ್‍ನ ಯಾವುದೇ ನಾಯಕ, ಪಕ್ಷ, ನಂಬಿಕೆ ಯಾವುದನ್ನೂ ವಿಡಂಬನೆ ಮಾಡದೆ ಬಿಟ್ಟವನಲ್ಲ. ಎಲ್ಲರನ್ನೂ, ಎಲ್ಲವನ್ನೂ ವ್ಯಂಗ್ಯಚಿತ್ರದಲ್ಲಿ ಸೆರೆಹಿಡಿಯುತ್ತ, ಟೀಕಿಸುತ್ತ, ವಿಡಂಬನೆ ಮಾಡುತ್ತಲೇ ಖ್ಯಾತನಾದವ. ಕೊನೆಯಲ್ಲಿ ಅದೇನು ಗ್ರಹಚಾರ ಕಾಡಿತ್ತೋ, ಪ್ರವಾದಿಯ ವ್ಯಂಗ್ಯಚಿತ್ರ ಪ್ರಕಟಿಸಿ ತನ್ನ ಪ್ರಾಣಕ್ಕೇ ಸಂಚಕಾರ ತಂದುಕೊಂಡ. ಈ ಅಭಿವ್ಯಕ್ತಿ ಸ್ವಾತಂತ್ರೃಕ್ಕಿಂತಲೂ ನಮ್ಮ ಸೆಕ್ಯುಲರ್ ವಾದವೇ ವಾಸಿಯಲ್ಲವೇ!

ಆದರೆ ಈ ಬರ್ಬರತೆಯ ನಂತರವೂ ಫ್ರಾನ್ಸ್ ಒಂದಿಷ್ಟೂ ಅಳುಕಲಿಲ್ಲ, ಅಂಜಲಿಲ್ಲ. ಚಾರ್ಲಿ ಹೆಬ್ಡೋ ಮೇಲಿನ ದಾಳಿ ಖಂಡಿಸಿ ಸರ್ಕಾರ ಮಾತ್ರವಲ್ಲ, ಇಡೀ ದೇಶದ ಲಕ್ಷೋಪಲಕ್ಷ ಜನರು ಬೀದಿಗಿಳಿದರು. ಮತಾಂಧರ ಬರ್ಬರತೆ ವಿರುದ್ಧ ಪ್ಯಾರಿಸ್‍ನಲ್ಲಿ ಹತ್ತು ಲಕ್ಷ ಜನರು ಜಮಾಯಿಸಿದರು. ಮತಾಂಧರ ಅಡಗುದಾಣಗಳ ಮೇಲೆ ದಾಳಿ ಮಾಡಿದರು. ಇಂತಹ ಘಟನೆ ಮರುಕಳಿಸದಂತೆ ಗಂಭೀರ ಎಚ್ಚರಿಕೆ ನೀಡಿದರು. ಅದಕ್ಕಿಂತ ವಿಶೇಷ ಅಂದರೆ ಚಾರ್ಲಿ ಹೆಬ್ಡೋದ ಸಿಬ್ಬಂದಿ ಈ ಘಟನೆಯಿಂದ ಒಂದಿಷ್ಟೂ ಧೃತಿಗೆಡದೆ ಯಥಾಪ್ರಕಾರ ಪತ್ರಿಕೆಯ ಸಂಚಿಕೆಯನ್ನು ಮಾರುಕಟ್ಟೆಗೆ ತಂದರು. ಅರವತ್ತು ಸಾವಿರ ಸಕ್ರ್ಯುಲೇಷನ್ ಇದ್ದ ಪತ್ರಿಕೆಯ ಆ ಸಂಚಿಕೆ 30 ಲಕ್ಷಕ್ಕೂ ಮಿಕ್ಕು ಮಾರಾಟವಾಯಿತು. ಅದೇ ಸಂಚಿಕೆಯನ್ನು ಮರುಮುದ್ರಣ ಮಾಡಿದರು. ಮತ್ತೆ ದುಪ್ಪಟ್ಟು ಜನರು ಪತ್ರಿಕೆಯನ್ನು ಕೊಂಡು ಓದಿದರು. ಈ ಕೆಚ್ಚು, ಶೌರ್ಯ ನಮ್ಮಲ್ಲೂ ಬರಬಹುದೇ? ಬಂದರೆ ಸೆಕ್ಯುಲರ್ ಪ್ರತಿಷ್ಠೆ ಏನಾದೀತು…

ಚಾರ್ಲಿ ಹೆಬ್ಡೋ ಘಟನೆ ನಂತರ ಬ್ರಿಟನ್ ಪ್ರಧಾನಿ ಡೇವಿಡ್ ಕೆಮರೂನ್ ವ್ಯಕ್ತಪಡಿಸಿದ ಅಭಿಪ್ರಾಯವನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತವೆನಿಸುತ್ತದೆ. “ಯಾರಿಗೆ ಒಪ್ಪಿಗೆ ಇದೆಯೋ ಇಲ್ಲವೋ ಎಂಬುದು ಇಲ್ಲಿ ಅಪ್ರಸ್ತುತ- ಜಗತ್ತಿನಾದ್ಯಂತ ಹಿಂಸೆಯಲ್ಲಿ ತೊಡಗಿರುವ ಭಯೋತ್ಪಾದಕರೆಲ್ಲರೂ ತಾವು ಮುಸ್ಲಿಮರೆಂದು ಹೇಳಿಕೊಳ್ಳುತ್ತಿರುವುದು ಇಸ್ಲಾಮಿಗೆ ಹೊರೆಯಾಗಿ ಪರಿಣಮಿಸಿರುವುದನ್ನಂತೂ ಅಲ್ಲಗಳೆಯಲು ಸಾಧ್ಯವೇ ಇಲ್ಲ” ಎಂದಿದ್ದಾರೆ ಕೆಮರೂನ್.

ಅದೇ ಅಭಿಪ್ರಾಯ ಖ್ಯಾತ ಲೇಖಕಿ ತಸ್ಲೀಮಾ ನಸ್ರಿನ್ ಅವರದ್ದೂ ಕೂಡ. “ಎಲ್ಲ ಧರ್ಮ ಮತ್ತು ಮತಗಳಲ್ಲೂ ಕೆಲವೊಂದು ಲೋಪಗಳಿವೆ. ಆದರೆ ಬಾಕಿ ಎಲ್ಲ ಧರ್ಮಗಳು ಕಾಲಕಾಲಕ್ಕೆ ಸುಧಾರಣೆಗೆ ಒಗ್ಗಿಕೊಂಡಿವೆ. ಹಾಗೇ ಇಸ್ಲಾಂ ಶಾಂತಿಪ್ರಿಯ ಧರ್ಮ, ಹಿಂಸೆಯನ್ನು ಬೋಧನೆ ಮಾಡುವುದಿಲ್ಲ ಎಂದರಷ್ಟೆ ಸಾಲದು. ಆಚರಣೆಯಲ್ಲೂ ಬರಬೇಕು. ಬದಲಾವಣೆಗೆ ತೆರೆದುಕೊಳ್ಳಬೇಕು. ತಪ್ಪುಹಾದಿ ತುಳಿದವರನ್ನು ಸರಿದಾರಿಗೆ ತರಬೇಕು. ಅದಾಗದ ಹೊರತು ಭಯೋತ್ಪಾದಕ ಹಿಂಸೆಗೆ ಕೊನೆಯಿಲ್ಲ. ಮೊದಲು ಭಯೋತ್ಪಾದನೆಗೆ ಬಡತನ, ಅನಕ್ಷರತೆ ಕಾರಣ ಎಂಬ ಅಭಿಪ್ರಾಯವಿತ್ತು. ಈಗ ನೋಡಿದರೆ ವಿದ್ಯಾವಂತರು, ಪದವೀಧರರು, ತಂತ್ರಜ್ಞರೆಲ್ಲ ಭಯೋತ್ಪಾದಕರಾಗುತ್ತಿದ್ದಾರೆ. ಇದು ಆಧುನಿಕ ಜಗತ್ತಿಗೆ ಗಂಭೀರ ಸವಾಲು” ಎಂದಿದ್ದಾರೆ ತಸ್ಲೀಮಾ. ಹೌದಲ್ಲವೇ?

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top