– ಮಹದೇವ್ ಪ್ರಕಾಶ್.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ರಾಜಕೀಯದಲ್ಲಿ ಪರಮಾಧಿಕಾರ ದೊರೆಯುವುದು ಅಷ್ಟು ಸುಲಭದ ಮಾತಲ್ಲ. ಶತಮಾನಗಳ ಶೋಷಣೆಗೆ ಗುರಿಯಾಗಿರುವ ಇಂತಹ ಸಮುದಾಯಗಳಿಗೆ ಡಾ. ಬಿ.ಆರ್.ಅಂಬೇಡ್ಕರ್ ಅವರು ಸಂವೈಧಾನಿಕ ರಕ್ಷಣೆ ನೀಡಿದ್ದರೂ, ಪರಮಾಧಿಕಾರ ಈ ಸಮುದಾಯಗಳಿಗೆ ಗಗನ ಕುಸುಮವೇ ಆಗಿದೆ. ಪ್ರಧಾನಿ ಹುದ್ದೆಯಂತೂ ಕನಸಿನಲ್ಲಿ ನೆನೆಸಲು ಸಾಧ್ಯವಿಲ್ಲ. 1979ರಲ್ಲಿ ಬಾಬು ಜಗಜೀವನ್ ರಾಂ ಯಶಸ್ವಿಯಾಗಿ ಉಪಪ್ರಧಾನಿ ಹುದ್ದೆಗೇರಿದ ಪರಿಶಿಷ್ಟ ಸಮುದಾಯದ ಅಗ್ರಗಣ್ಯ ನಾಯಕ. ಇನ್ನೇನು ಜಗಜೀವನ್ ರಾಂ ಪ್ರಧಾನಿ ಆಗಿಯೇಬಿಟ್ಟರು ಅನ್ನುವಂಥ ವಾತಾವರಣ ಸೃಷ್ಟಿಯಾಗಿತ್ತು. ಆದರೆ ಆ ಸಂದರ್ಭದಲ್ಲಿ ಜನತಾ ಪಕ್ಷದಲ್ಲಿ ಉತ್ತುಂಗಕ್ಕೇರಿದ್ದ ಸ್ವಾರ್ಥ ಹಾಗೂ ಸಮಯಸಾಧಕ ರಾಜಕಾರಣದ ಪರಿಣಾಮ ಜಗಜೀವನ ರಾಂ ಪ್ರಧಾನಿ ಆಗುವ ಅವಕಾಶದಿಂದ ವಂಚಿತರಾಗಬೇಕಾಯಿತು. ಅಲ್ಲೊಂದು ಇಲ್ಲೊಂದು ರಾಜ್ಯಗಳನ್ನು ಹೊರತುಪಡಿಸಿದರೆ ಮುಖ್ಯಮಂತ್ರಿ ಹುದ್ದೆ ಪರಿಶಿಷ್ಟರಿಗೆ ದೊರೆಯುವುದು ಸಾಗರ ಕುಡಿದಷ್ಟು ಕಷ್ಟ. ಉತ್ತರ ಪ್ರದೇಶದಲ್ಲಿ ಮಾಯಾವತಿ ನಾಲ್ಕು ಅವಧಿಗೆ ಮುಖ್ಯಮಂತ್ರಿ ಗಾದಿಗೇರಿ, 2007ರಿಂದ 2012ರವರೆಗೆ ಪೂರ್ಣಾವಧಿ ಮುಖ್ಯಮಂತ್ರಿಯಾಗಿದ್ದರು. ಈ ಮೂಲಕ ಅಖಂಡ ಭಾರತದಲ್ಲಿ ಪೂರ್ಣಾವಧಿ ಆಡಳಿತ ನಡೆಸಿದ ಏಕೈಕ ಪರಿಶಿಷ್ಟ ಸಮುದಾಯದ ಮುಖ್ಯಮಂತ್ರಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು. ಇನ್ನು ಭಾರತ ಕಂಡ 14 ರಾಷ್ಟ್ರಪತಿಗಳಲ್ಲಿ ಪರಿಶಿಷ್ಟರಿಗೆ ರಾಷ್ಟ್ರಪತಿ ಆಗುವ ಯೋಗ ಒಲಿದಿದ್ದು ಕೇವಲ ಇಬ್ಬರಿಗೆ ಮಾತ್ರ. 10ನೇ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಮತ್ತು ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪರಿಶಿಷ್ಟ ಸಮುದಾಯಕ್ಕೆ ಸೇರಿದವರು.
ಹಾಗಾದರೆ ಪರಿಶಿಷ್ಟ ಜಾತಿ ಸಮುದಾಯಗಳಿಗೆ ಸೇರಿದ ಎಷ್ಟು ನಾಯಕರು ಭಾರತದ ವಿವಿಧ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳಾಗಿದ್ದರು? ಎಷ್ಟು ವರ್ಷಗಳ ಕಾಲ ಅವರು ಮುಖ್ಯಮಂತ್ರಿಗಳಾಗಿದ್ದರು? ಸ್ವಾತಂತ್ರ್ಯಾ ನಂತರದ ಅವಧಿಯಲ್ಲಿ ಮಾಯಾವತಿಯವರೂ ಸೇರಿದಂತೆ ಏಳು ಪರಿಶಿಷ್ಟ ಜಾತಿ ಅಗ್ರಗಣ್ಯರು ಭಾರತದ ವಿವಿಧ ರಾಜ್ಯಗಳಲ್ಲಿ ಮುಖ್ಯಮಂತ್ರಿ ಗಾದಿಗೇರಿದ್ದಾರೆ. ಭಾರತಕ್ಕೆ ಮೊಟ್ಟಮೊದಲ ಮುಖ್ಯಮಂತ್ರಿಯನ್ನು ನೀಡಿದ್ದು ಅವಿಭಜಿತ ಆಂಧ್ರಪ್ರದೇಶ. 1960 ಜನವರಿ 11ರಿಂದ 1962ರ ಮಾರ್ಚ್ 12ರವರೆಗೆ ಎರಡು ವರ್ಷಗಳ ಕಾಲ ಆಂಧ್ರಪ್ರದೇಶದ ಮುಖ್ಯಮಂತ್ರಿ ಆಗಿದ್ದ ದಾಮೋದರಂ ಸಂಜೀವಯ್ಯ, ಆಂಧ್ರಪ್ರದೇಶದ ಎರಡನೇ ಮುಖ್ಯಮಂತ್ರಿ ಆಗಿದ್ದರು. ಇವರು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಥಮ ಪರಿಶಿಷ್ಟ ಜಾತಿಯ ರಾಷ್ಟ್ರೀಯ ಅಧ್ಯಕ್ಷರೂ ಆಗಿದ್ದರು ಎನ್ನುವುದು ವಿಶೇಷ. ಬೋಲಾ ಪಾಸ್ವಾನ್ ಶಾಸ್ತ್ರಿ ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಪರಿಶಿಷ್ಟ ಸಮುದಾಯದ ಇನ್ನೊಬ್ಬ ಅಗ್ರಗಣ್ಯ ನಾಯಕ. ಬಿಹಾರದಲ್ಲಿ ಘಟಿಸಿದ್ದ ಗಂಭೀರ ರಾಜಕೀಯ ಸ್ಥಿತ್ಯಂತರಗಳ ಪರಿಣಾಮವಾಗಿ, ಇವರು 1968ರ ಮಾರ್ಚ್ 22 ರಿಂದ 1972 ಜನವರಿ 9ರವರೆಗೆ ಮೂರು ಬಾರಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಯಾಗಿ ಆಡಳಿತ ಸೂತ್ರ ಹಿಡಿಯುವಲ್ಲಿಯಶಸ್ವಿ ಆಗಿದ್ದರು. ಬಿಹಾರದ ಎಂಟನೇ ಮುಖ್ಯಮಂತ್ರಿ ಹಾಗೂ ಪರಿಶಿಷ್ಟ ಸಮುದಾಯದ ಮೊದಲ ಮುಖ್ಯಮಂತ್ರಿ ಆಗಿದ್ದರು. 1979ರ ಜೂನ್ 6ರಿಂದ, 1980ರ ಫೆಬ್ರವರಿ 17ರವರೆಗೆ ಬಿಹಾರದ 18ನೇ ಮುಖ್ಯಮಂತ್ರಿ ಆಗಿದ್ದವರು ಜನತಾಪಕ್ಷದ ರಾಮ… ಸುಂದರ್ ದಾಸ್. ಇವರೂ ಪರಿಶಿಷ್ಟ ಸಮುದಾಯಕ್ಕೆ ಸೇರಿದವರು. 1980ರ ಜೂನ್ 6ರಿಂದ 1981ರ ಜುಲೈ 13ರವರೆಗೆ ರಾಜಸ್ಥಾನದ ಪ್ರಥಮ ಪರಿಶಿಷ್ಟ ಸಮುದಾಯದ ಮುಖ್ಯಮಂತ್ರಿ ಆಗಿದ್ದವರು ಕಾಂಗ್ರೆಸ್‌ನ ಜಗನ್ನಾಥ ಪಹಾಡಿಯ. ಮಹಾರಾಷ್ಟ್ರದ ಪ್ರಥಮ ಪರಿಶಿಷ್ಟ ಸಮುದಾಯದ ಮುಖ್ಯಮಂತ್ರಿಯಾಗಿ 2003ರ ಜನವರಿ 18ರಿಂದ 2004ರ ನವಂಬರ್ 4ರವರೆಗೆ ಆಡಳಿತ ಸೂತ್ರ ಹಿಡಿದಿದ್ದವರು ಸುಶೀಲ್ ಕುಮಾರ್ ಶಿಂಧೆ. ಬಿಹಾರದಲ್ಲಿ ಘಟಿಸಿದ್ದ ರಾಜಕೀಯ ಸ್ಥಿತ್ಯಂತರಗಳ ಪರಿಣಾಮ ನಿತಿಶ್ ಕುಮಾರ್ ಅವರ ಉತ್ತರಾಧಿಕಾರಿಯಾಗಿ 2014ರ ಮೇ 20ರಿಂದ 2015ರ ಫೆಬ್ರವರಿ 20ರವರೆಗೆ ಮುಖ್ಯಮಂತ್ರಿ ಗಾದಿಗೇರಿದ್ದವರು ಜಿತಿನ್ ರಾಂ ಮಾಂಜಿ. ಇವರು ಬಿಹಾರದ 23ನೇ ಮುಖ್ಯಮಂತ್ರಿ ಹಾಗೂ ಪರಿಶಿಷ್ಟ ಸಮುದಾಯದ ಮೂರನೇ ಮುಖ್ಯಮಂತ್ರಿ ಆಗಿದ್ದರು.
ನೋಡಿ ಭಾರತ ರಾಜಕಾರಣದಲ್ಲಿ ಪರಿಶಿಷ್ಟ ಸಮುದಾಯದ ಏಳು ಅಗ್ರಗಣ್ಯರು ಮುಖ್ಯಮಂತ್ರಿ ಗಾದಿಗೇರಿದ್ದಾರೆ. ಇವರಲ್ಲಿ ನಾಲ್ಕು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಮಾಯಾವತಿಯವರನ್ನು ಹೊರತುಪಡಿಸಿದರೆ ಬೇರೆ ಯಾವುದೇ ಪರಿಶಿಷ್ಟ ಸಮುದಾಯದ ಮುಖ್ಯಮಂತ್ರಿ ಪೂರ್ಣಾವಧಿ ಆಡಳಿತ ನಡೆಸುವುದು ಈವರೆಗೆ ಸಾಧ್ಯವಾಗಿಲ್ಲ. ಕರ್ನಾಟಕದ ಮಟ್ಟಿಗೆ ನೋಡುವುದಾದರೆ ಸ್ವಾತಂತ್ರ್ಯಾನಂತರದ 73 ವರ್ಷಗಳ ಅವಧಿಯಲ್ಲಿ ಯಾವುದೇ ಒಬ್ಬ ಪರಿಶಿಷ್ಟ ಸಮುದಾಯದ ನಾಯಕ ಮುಖ್ಯಮಂತ್ರಿಯಾಗುವುದು ಸಾಧ್ಯವಾಗಿಲ್ಲ. ಪರಿಶಿಷ್ಟ ಸಮುದಾಯವನ್ನು ದೊಡ್ಡ ಮತಬ್ಯಾಂಕ್ ಮಾಡಿಕೊಂಡು ಕರ್ನಾಟಕದಲ್ಲಿ ತನ್ನ ರಾಜಕೀಯ ನೆಲೆಯನ್ನು ಕಂಡುಕೊಂಡ ಕಾಂಗ್ರೆಸ್, ಪರಿಶಿಷ್ಟ ಸಮದಾಯದವರಿಗೆ ಮುಖ್ಯಮಂತ್ರಿ ಪಟ್ಟ ಕಟ್ಟ ಬೇಕು ಎನ್ನುವ ಗಂಭೀರ ಚಿಂತನೆಯನ್ನು ಎಂದೂ ಮಾಡಲಿಲ್ಲ. 1947ರಲ್ಲಿ ಮೈಸೂರು ರಾಜ್ಯದಲ್ಲಿ ರಚನೆಗೊಂಡ ಜವಾಬ್ದಾರಿ ಸರಕಾರದ ಮುಖ್ಯಮಂತ್ರಿ ಕೆ.ಚೆಂಗಲರಾಯ ರೆಡ್ಡಿಯವರ ಸರಕಾರದಲ್ಲಿ ಪರಿಶಿಷ್ಟ ಎಡಗೈ ಸಮುದಾಯದ ತುಮಕೂರಿನ ಚೆನ್ನಿಗರಾಮಯ್ಯ ಅವರು ಲೋಕಲ್ ಸೆಲ್ಫ್ ಗೌರ್ನಮೆಂಟ್ ಖಾತೆಯ ಸಚಿವರಾಗುವ ಮೂಲಕ ಕರ್ನಾಟಕದಲ್ಲಿ ಪರಿಶಿಷ್ಟ ಎಡಗೈ ಸಮುದಾಯದ ಅಧಿಕಾರ ರಾಜಕಾರಣ ಆರಂಭಗೊಳ್ಳುತ್ತದೆ. ಸಂವಿಧಾನ ರಚನೆಯ ನಂತರ ಕೆಂಗಲ್ ಹನುಮಂತಯ್ಯನವರ ನೇತೃತ್ವದಲ್ಲಿ ರಚನೆಗೊಂಡ ಸರಕಾರದಲ್ಲಿ ಕೋಲಾರದ ಟಿ.ಚೆನ್ನಯ್ಯ ಅವರು ಸಾರ್ವಜನಿಕ ಆರೋಗ್ಯ ಮತ್ತು ಲೋಕಲ್ ಸೆಲ್ಫ್ ಗೌನಮೆಂಟ್ ಸಚಿವರಾಗುವ ಮೂಲಕ ಕರ್ನಾಟಕದಲ್ಲಿ ಪರಿಶಿಷ್ಟ ಬಲಗೈ ಸಮುದಾಯದ ರಾಜಕಾರಣ ಆರಂಭಗೊಳ್ಳುತ್ತದೆ.
ಕರ್ನಾಟಕದಲ್ಲಿ ಈವರೆಗೆ ರಚನೆಗೊಂಡ ಹದಿನೈದು ಸರ್ಕಾರಗಳಲ್ಲಿ ಪರಿಶಿಷ್ಟ ಎಡಗೈ ಮತ್ತು ಬಲಗೈ ಸಮುದಾಯಗಳಿಗೆ ಸೇರಿದ ಅನೇಕ ಪ್ರಭಾವಿ ನಾಯಕರು ರಾಜಕಾರಣದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಪರಿಶಿಷ್ಟ ಬಲಗೈ ಸಮುದಾಯದಿಂದ ಟಿ.ಚೆನ್ನಯ್ಯ, ಬಿ.ಬಸವಲಿಂಗಪ್ಪ, ಬಿ.ರಾಚಯ್ಯ, ಮಲ್ಲಿಕಾರ್ಜುನ ಸ್ವಾಮಿ, ಕೆ.ಎಚ್.ರಂಗನಾಥ್, ಮಲ್ಲಿಕಾರ್ಜುನ ಖರ್ಗೆ, ಬಿ.ಸೋಮಶೇಖರ್, ಮೋಟಮ್ಮ, ಡಾ.ಪರಮೇಶ್ವರ ಮುಂತಾದವರು ಕರ್ನಾಟಕದಲ್ಲಿ ರಚನೆಗೊಂಡ ವಿವಿಧ ಸರಕಾರಗಳಲ್ಲಿ ತಮ್ಮ ಇರುವಿಕೆಯನ್ನು ಸ್ಪಷ್ಟವಾಗಿ ಪ್ರದರ್ಶಿಸಿದ್ದಾರೆ. ಬಿ.ಶಂಕರಾನಂದ ಪರಿಶಿಷ್ಟ ಬಲಗೈ ಸಮುದಾಯದಲ್ಲಿ ರಾಷ್ಟ್ರಮಟ್ಟದಲ್ಲಿ ಬಲಶಾಲಿಯಾಗಿ ಬೆಳೆದ ರಾಜಕಾರಣಿ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಮೀಸಲು ಲೋಕಸಭಾ ಕ್ಷೇತ್ರದಿಂದ 1971ರಿಂದ 1996ರವರೆಗೆ 7 ಬಾರಿ ಲೋಕಸಭೆಗೆ ಆಯ್ಕೆಗೊಂಡಿದ್ದರು. ಅಷ್ಟು ಮಾತ್ರವಲ್ಲ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ಪಿ.ವಿ.ನರಸಿಂಹ ರಾವ್ ಸಂಪುಟದಲ್ಲಿ ಅನೇಕ ಪ್ರಭಾವಿ ಖಾತೆಗಳ ಸಚಿವರಾಗಿದ್ದರು. ಇವರನ್ನು ಹೊರತು ಪಡಿಸಿದರೆ ಪರಿಶಿಷ್ಟ ಬಲಗೈ ಸಮುದಾಯದ ಮಲ್ಲಿಕಾರ್ಜುನ ಖರ್ಗೆಯವರದೂ ದಾಖಲೆಯ ರಾಜಕಾರಣವೇ. 1972ರಿಂದ 2008ರವರೆಗೆ ನಿರಂತರ 9 ಬಾರಿ ಗುರುಮಿಠಕಲ್ ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಗೊಂಡಿದ್ದಾರೆ. 2009 ಮತ್ತು 2014ರಲ್ಲಿ ಎರಡು ಬಾರಿ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಲೋಕಸಭೆಗೆ ಆಯೆಗೊಂಡಿದ್ದಾರೆ. ಪ್ರಾಯಶಃ ಮಲ್ಲಿಕಾರ್ಜುನ ಖರ್ಗೆಯವರನ್ನು ಹೊರತುಪಡಿಸಿದರೆ ವಿಧಾನಸಭೆ ಮತ್ತು ಲೋಕಸಭೆಗೆ ನಿರಂತರವಾಗಿ ಹನ್ನೊಂದು ಬಾರಿ ಆಯ್ಕೆಗೊಂಡಿರುವ ರಾಜಕಾರಣಿ ಭಾರತ ರಾಜಕಾರಣದಲ್ಲಿ ಇನ್ನೊಬ್ಬರಿಲ್ಲ. ಇಂಥ ದಾಖಲೆ ಸೃಷ್ಟಿಸಿದ ಮಲ್ಲಿಕಾರ್ಜುನ ಖರ್ಗೆ 2019ರ ಲೋಕಸಭಾ ಲೋಕಸಭಾ ಚುನಾವಣೆಯಲ್ಲಿ ದಯನೀಯ ಪರಾಭವ ಅನುಭವಿಸಿದ್ದರು. ಇವರು ಕಾಂಗ್ರೆಸ್ ರಾಜಕಾರಣಕ್ಕೆ ಎಷ್ಟು ಅನಿವಾರ್ಯವೆಂದರೆ ಸದ್ಯ ಕಾಂಗ್ರೆಸ್ ಖರ್ಗೆಯವರನ್ನು ರಾಜ್ಯಸಭೆಗೆ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ಮನಮೋಹನ್ ಸಿಂಗ್ ಸಂಪುಟದಲ್ಲಿ ಕಾರ್ಮಿಕ ಮತ್ತು ರೈಲ್ವೇ ಖಾತೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದ ಖರ್ಗೆ ಪ್ರಖರ ಮತ್ತು ಪ್ರಭಾವಶಾಲಿ ವಿರೋಧ ಪಕ್ಷ ದ ನಾಯಕರಾಗಿ ಲೋಕಸಭೆಯಲ್ಲಿ ತಮ್ಮದೇ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ಜೊತೆಗೆ 2008ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಪಕ್ಷ ಎಂಭತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್ಸಿನ ಎಂಭತ್ತು ಸ್ಥಾನಗಳ ಜೊತೆಗೆ ಜೆಡಿಎಸ್ 28, ಪಕ್ಷೇತರರು ಆರು ಮಂದಿ ಶಾಸಕರಿದ್ದರು. ಈ ಮೂರು ಗುಂಪುಗಳ ನಡುವೆ ಮೈತ್ರಿ ಏರ್ಪಟ್ಟಿದ್ದರೆ, ಅತ್ಯಧಿಕ ಸಂಖ್ಯಾಬಲದ ಕಾಂಗ್ರೆಸ್ ನಾಯಕನಾಗಿ ಖರ್ಗೆ ಮುಖ್ಯಮಂತ್ರಿ ಗಾದಿಗೇರಬಹುದಾಗಿತ್ತು. ಆದರೆ ಆ ಸಂದರ್ಭದಲ್ಲಿ ಕಾಂಗ್ರೆಸ್ಸಿನಲ್ಲಿಯೇ ರೂಪುಗೊಂಡ ಪಿತೂರಿಯ ಪರಿಣಾಮ ಖರ್ಗೆಯವರಿಗೆ ಮುಖ್ಯಮಂತ್ರಿ ಗಾದಿ ಗಗನಕುಸುಮ ಆಯಿತು. ಖರ್ಗೆಯವರನ್ನು ಹೊರತುಪಡಿಸಿದರೆ ಪರಿಶಿಷ್ಟ ಸಮುದಾಯದ ಬಿ.ಬಸವಲಿಂಗಪ್ಪನವರಿಗೆ 1980ರ ಮುಖ್ಯಮಂತ್ರಿ ಗಾದಿ ಮನೆ ಬಾಗಿಲಿಗೆ ಹುಡುಕಿಕೊಂಡು ಬಂದಿತ್ತು. ಹಿಂದುಳಿದ ವರ್ಗಗಳ ಛಾಂಪಿಯನ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದ ದೇವರಾಜ ಅರಸು, ಇಂದಿರಾ ಗಾಂಧಿಯವರಿಗೆ ಸೆಡ್ಡು ಹೊಡೆದು ಕಾಂಗ್ರೆಸ್ ಪಕ್ಷ ತ್ಯಜಿಸಿದ್ದರು. ಅಂಥ ಸಂದರ್ಭದಲ್ಲಿ ಇಂದಿರಾ ಗಾಂಧಿಯವರು, ಬಸವಲಿಂಗಪ್ಪನವರಿಗೆ ಮುಖ್ಯಮಂತ್ರಿ ಮಾಡುವ ಭರವಸೆ ನೀಡಿ ತಮ್ಮ ಪಕ್ಷಕ್ಕೆ ಆಹ್ವಾನಿಸಿದ್ದರು. ಆದರೆ ಬಸವಲಿಂಗಪ್ಪ, ಇಂದಿರಾ ವಿನಂತಿ ಧಿಕ್ಕರಿಸಿ ಅರಸು ಪಾಳಯದಲ್ಲಿ ಉಳಿದಿದ್ದರು. ಇದರ ಪರಿಣಾಮ ಮುಖ್ಯಮಂತ್ರಿ ಎನ್ನುವ ಅದೃಷ್ಟ ಲಕ್ಷ್ಮೀ ಬಸವಲಿಂಗಪ್ಪನವರಿಗೆ ಬದಲಾಗಿ ಗುಂಡೂರಾವ್ ಅವರಿಗೆ ಒಲಿಯಿತು. ಇನ್ನು 2013 ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದ, ಡಾ. ಪರಮೇಶ್ವರ ಮುಖ್ಯಮಂತ್ರಿ ಗಾದಿಯಿಂದ ವಂಚಿತರಾದರು. ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸಿಗರೇ ಅತ್ಯಂತ ಯೋಜಿತವಾಗಿ ಡಾ.ಪರಮೇಶ್ವರ ಅವರನ್ನು ಪರಾಭವಗೊಳಿಸಿದ್ದರು. ಇದರ ಪರಿಣಾಮ ಪರಮೇಶ್ವರಗೆ ಮುಖ್ಯಮಂತ್ರಿ ಪಟ್ಟ ತಪ್ಪಿತ್ತು. ಸಿದ್ಧರಾಮಯ್ಯ ನಿರಾಯಾಸವಾಗಿ ಮುಖ್ಯಮಂತ್ರಿ ಗಾದಿಗೇರಿದ್ದರು. ಕಟ್ಟಕಡೆಗೆ ಅತ್ತೂ ಕರೆದು ಡಾ. ಪರಮೇಶ್ವರ ಉಪ ಮುಖ್ಯಮಂತ್ರಿ ಆಗಬೇಕಾಯಿತು.
ಕೆ. ಚೆಂಗಲರಾಯರೆಡ್ಡಿ ಸರಕಾರದಲ್ಲಿ ಸಚಿವರಾಗಿದ್ದ ಚೆನ್ನಿಗರಾಮಯ್ಯನವರಿಂದ ಆರಂಭಗೊಂಡ ಪರಿಶಿಷ್ಟ ಎಡಗೈ ಸಮುದಾಯದ ರಾಜಕಾರಣ ನಂತರದ 73 ವರ್ಷಗಳಲ್ಲಿ ಎನ್.ರಾಚಯ್ಯ, ಕೆ.ಪ್ರಭಾಕರ್, ಬಿ.ಶಿವಣ್ಣ, ಡಿ.ಮಂಜುನಾಥ್, ವೈ.ರಾಮಕೃಷ್ಣ, ಆರ್.ಡಿ.ಕಿತ್ತೂರು, ಟಿ.ಎನ್.ನರಸಿಂಹ ಮೂರ್ತಿ, ಬಿ.ಶಿವಣ್ಣ, ರಮೇಶ್ ಜಿಗಜಿಣಗಿ, ಗೋವಿಂದ ಕಾರಜೋಳ ಅವರ ಮೂಲಕ ಮುಂದುವರಿಯಿತು. ಕರ್ನಾಟಕದ ವಿವಿಧ ಮುಖ್ಯಮಂತ್ರಿಗಳ ಆಡಳಿತಾವಧಿಯಲ್ಲಿ ಪರಿಶಿಷ್ಟ ಎಡಗೈ ಸಮುದಾಯದವರು ಸಚಿವರಾಗುವ ಅವಕಾಶವನ್ನು ತಮ್ಮದಾಗಿಸಿಕೊಂಡಿದ್ದರು. ಇನ್ನು ಪರಿಶಿಷ್ಟ ಎಡಗೈ ಸಮುದಾಯದಲ್ಲಿ ಕೆ.ಎಚ್. ಮುನಿಯಪ್ಪ 1991ರಿಂದ ದಾಖಲೆಯ 7 ಬಾರಿ ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಿಂದ ದಾಖಲೆಯ ಲೋಕಸಭಾ ಸದಸ್ಯರಾಗಿ ಆಯ್ಕೆಗೊಂಡಿದ್ದರು. ಜೊತೆಗೆ ಮನಮೋಹನ್ ಸಿಂಗ್ ಸಂಪುಟದಲ್ಲಿ ಸಚಿವರೂ ಆಗಿದ್ದರು. ಆದರೆ, 2019ರ ಲೋಕಸಭಾ ಚುನಾವಣೆಯಲ್ಲಿ ಅವಮಾನಕರ ಪರಾಭವ ಅನುಭವಿಸಿದ್ದರು. ತಮ್ಮ ಸಂಭಾವಿತ ಹಾಗೂ ಸಜ್ಜನ ನಡೆ-ನುಡಿಯಿಂದ ತಮ್ಮದೇ ವಿಶಿಷ್ಟ ವ್ಯಕ್ತಿತ್ವ ರೂಪಿಸಿಕೊಂಡಿರುವ ಗೋವಿಂದ ಕಾರಜೋಳ ಅವರು ಸದ್ಯ ಕರ್ನಾಟಕದ ಉಪ ಮುಖ್ಯಮಂತ್ರಿ ಆಗಿರುವ ಪರಿಶಿಷ್ಟ ಎಡಗೈ ಸಮುದಾಯದ ನಾಯಕ. ಬಾಗಲಕೋಟೆ ಜಿಲ್ಲೆಯ ಮುಧೋಳ ವಿಧಾನಸಭಾ ಕ್ಷೇತ್ರದಿಂದ 3 ಬಾರಿ ವಿಧಾನಸಭಾ ಸದಸ್ಯರಾಗಿ ಆಯ್ಕೆಗೊಂಡಿರುವ ಬಿಜೆಪಿಯ ಪ್ರಮುಖ ನಾಯಕರಾಗಿದ್ದಾರೆ.
ಪರಿಶಿಷ್ಟ ಜಾತಿ ಬಲಗೈ ಮತ್ತು ಎಡಗೈ ರಾಜಕೀಯ ಮೇಲಾಟದಲ್ಲಿ ನಿರಂತರ ಸಂಘರ್ಷ ನಡೆದಿದೆ. ಸಾಮಾಜಿಕವಾಗಿ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಬಲಗೈ ಸಮುದಾಯ ಮೇಲುಗೈ ಸಾಧಿಸಿದ್ದರೆ, ಎಡಗೈ ಸಮುದಾಯ ಅವಕಾಶ ವಂಚಿತವಾಗಿದೆ ಎನ್ನುವ ಮಾತುಗಳಿವೆ. ಆದರೆ, ಕರ್ನಾಟಕ ರಾಜಕಾರಣದಲ್ಲಿ ಪರಿಶಿಷ್ಟ ಬಲಗೈ ಮತ್ತು ಎಡಗೈ ಸಮುದಾಯಗಳೆರಡಕ್ಕೂ ಉಪ ಮುಖ್ಯಮಂತ್ರಿ ಹುದ್ದೆ ದೊರೆತಿದೆ. ಈ ಎರಡೂ ಸಮುದಾಯಗಳಲ್ಲಿ ಮುಖ್ಯಮಂತ್ರಿ ಅನ್ನುವ ಪರಮಾಧಿಕಾರ ಯಾರಿಗೆ ಯಾವ ಪಕ್ಷ ದ ಮೂಲಕ ದೊರೆಯಲಿದೆ ಅನ್ನುವುದಕ್ಕೆ ಕಾಲವೇ ಉತ್ತರಿಸಬೇಕು.
(ಲೇಖಕರು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರು)