– ರಾಜ್ಯದ 35 ಲಕ್ಷ ಜನರ ಉದ್ಯೋಗ ಮರುಸ್ಥಾಪನೆಗೆ ಯತ್ನ
– ವಿಕ ಸಾರಥ್ಯದ ಕರುನಾಡ ಕಟ್ಟೋಣ ಅಭಿಯಾನಕ್ಕೆ ಸಚಿವ ಸಿ.ಟಿ. ರವಿ ಚಾಲನೆ.
ವಿಕ ಸುದ್ದಿಲೋಕ ಬೆಂಗಳೂರು:
ಕೊರೊನಾ ಕಾರಣದಿಂದಾಗಿ ಎರಡೂವರೆ ತಿಂಗಳಿನಿಂದ ಸ್ತಬ್ಧವಾಗಿರುವ ಪ್ರವಾಸೋದ್ಯಮ ಮತ್ತು ಹೋಟೆಲ್ ಕ್ಷೇತ್ರದ ಪುನಶ್ಚೇತನದ ಮಾಸ್ಟರ್ ಪ್ಲ್ಯಾನ್ ಅನ್ನು ರಾಜ್ಯ ಪ್ರವಾಸೋದ್ಯಮ ಖಾತೆ ಸಚಿವ ಸಿ.ಟಿ. ರವಿ ತೆರೆದಿಟ್ಟಿದ್ದಾರೆ.
ಕೊರೊನಾದಿಂದ ಸಂಕಷ್ಟಕ್ಕೊಳಗಾಗಿರುವ ರಾಜ್ಯದ ಆರ್ಥಿಕತೆ, ವ್ಯವಹಾರ ಮತ್ತು ಜನಜೀವನದ ಪುನರುತ್ಥಾನಕ್ಕೆ ಕೈಗೊಳ್ಳಬೇಕಾಗಿರುವ ಕ್ರಮಗಳನ್ನು ಸಮಾಲೋಚನೆ ಮೂಲಕ ರೂಪಿಸುವ ‘ವಿಜಯ ಕರ್ನಾಟಕ’ದ ‘ಕರುನಾಡ ಕಟ್ಟೋಣ’ ಅಭಿಯಾನಕ್ಕೆ ಬುಧವಾರ ಅವರು ಚಾಲನೆ ನೀಡಿದರು.
ಕೃಷಿಯಿಂದ ಕೈಗಾರಿಕೆವರೆಗೆ ಎಲ್ಲ ಕ್ಷೇತ್ರಗಳನ್ನು ಮತ್ತೆ ಕಟ್ಟುವ ಸಮಾಲೋಚನೆಗಳಿಗೆ ಚಾಲನೆ ನೀಡುವ ಅಭಿಯಾನ ಇದಾಗಿದೆ. ಅಭಿಯಾನದ ಮೊದಲ ಭಾಗವಾಗಿ, ಪ್ರವಾಸೋದ್ಯಮ ಕ್ಷೇತ್ರದ ಪುನರುಜ್ಜೀವನದ ಬಗ್ಗೆ ಈ ಕ್ಷೇತ್ರ ವ್ಯಾಪ್ತಿಗೆ ಬರುವ ನಾನಾ ವಲಯಗಳ ಪ್ರಮುಖರ ಜತೆ ವಿಜಯ ಕರ್ನಾಟಕ ಬೆಂಗಳೂರು ಕಚೇರಿಯಲ್ಲಿ ಸಂವಾದ ನಡೆಸಲಾಯಿತು.
ಪ್ರವಾಸೋದ್ಯಮ ಇಲಾಖೆ ಹಿರಿಯ ಅಧಿಕಾರಿಗಳು, ಹೋಟೆಲ್, ಟೂರಿಸ್ಟ್ ಟ್ಯಾಕ್ಸಿ ಮತ್ತು ಖಾಸಗಿ ಬಸ್ ಸಂಘಟನೆಗಳ ಮುಖ್ಯಸ್ಥರು ಸಮಾಲೋಚನೆಯಲ್ಲಿ ಭಾಗಿಯಾದರು. ರಾಜ್ಯದ 10 ಕೇಂದ್ರಗಳಿಂದ 12 ಮಂದಿ ಪ್ರವಾಸೋದ್ಯಮ ತಜ್ಞರು ವಿಡಿಯೊ ಕಾನ್ಫೆರೆನ್ಸ್‌ನಲ್ಲಿ ಭಾಗವಹಿಸಿದರು.
ಮನಸ್ಥಿತಿ ಬದಲಿಗೆ ಮೊದಲ ಆದ್ಯತೆ
ಕೊರೊನಾ ಸೃಷ್ಟಿಸಿದ ಮರಣ ಭಯದಿಂದಾಗಿ ಸದ್ಯಕ್ಕೆ ಯಾರೂ ಪ್ರವಾಸಕ್ಕೆ ಹೊರಡುವ ಯೋಚನೆಯಲ್ಲಿಲ್ಲ ಎನ್ನುವುದನ್ನು ನಾವು ಒಪ್ಪಲೇಬೇಕು. ಹೀಗಾಗಿ ಮೊದಲು ಜನರ ಮನಸ್ಥಿತಿ ಬದಲಿಸುವ ಪ್ರಯತ್ನ ಆಗಬೇಕಾಗಿದೆ. ಸದ್ಯದ ಸ್ಥಿತಿಯಲ್ಲಿ ಹೊರದೇಶಗಳಿಂದ ಪ್ರವಾಸಿಗರು ಬರಲಾರರು. ಹಾಗಾಗಿ ದೇಶದೊಳಗಿನ, ರಾಜ್ಯದೊಳಗಿನ ಪ್ರವಾಸಿಗರ ಆಕರ್ಷಣೆಗೆ ಆದ್ಯತೆ ನೀಡಬೇಕಾಗಿದೆ. ಇದರ ಮೊದಲ ಹಂತವಾಗಿ ‘ಲವ್ ಯುವರ್ ನೇಟಿವ್: ನಿಮ್ಮೂರಲ್ಲೇ ನೀವು ನೋಡದ ತಾಣಗಳಿಗೆ ಭೇಟಿ ನೀಡಿ’ ಎನ್ನುವ ಚಿಂತನೆಯನ್ನು ಬಿಂಬಿಸಲಾಗಿದೆ. ಇದರಿಂದ ಉದ್ಯಮಕ್ಕೆ ದೊಡ್ಡ ಲಾಭವಾಗದೆ ಹೋದರೂ ಮನಸ್ಥಿತಿ ಬದಲಾದೀತು ಎಂದು ಸಚಿವ ಸಿ.ಟಿ. ರವಿ ಅಭಿಪ್ರಾಯಪಟ್ಟರು.
3 ಹಂತದ ಪ್ಲ್ಯಾನಿಂಗ್
ಪ್ರವಾಸೋದ್ಯಮದ ಆಕರ್ಷಣೆಗೆ ತಕ್ಷಣಕ್ಕೆ ದೊಡ್ಡ ಕಾರ್ಯಕ್ರಮಧಿಗಳು ಬೇಕಿಲ್ಲ ಎಂದ ಸಚಿವರು, ಸಣ್ಣ ಸಣ್ಣ ಕಾರ್ಯಕ್ರಮಗಳ ಮೂಲಕವೇ ಜನರನ್ನು ತಲುಪುವ 3 ಹಂತದ ಪ್ಲ್ಯಾನಿಂಗ್ ವಿವರಿಸಿದರು:
1. ನಿಮ್ಮೂರನ್ನು ಪ್ರೀತಿಸಿ. ನಾವೇ ಕಾಣದ ನಮ್ಮೂರಿನ ವಿಶೇಷ ಜಾಗಗಳಿಗೆ ಭೇಟಿ.
2. ನೋಡು ಬಾ ನಮ್ಮೂರ. ಸ್ವಲ್ಪ ಸಮಯದ ಬಳಿಕ ನಮ್ಮ ಜಿಲ್ಲೆಗೆ ಬನ್ನಿ ಎಂದು ಹೊರ ಜಿಲ್ಲೆಯವರನ್ನು ಆಹ್ವಾನಿಸುವ ಪ್ರಚಾರ.
3. ಸುರಕ್ಷತೆಯ ಪ್ರಚಾರ. ರಾಜ್ಯದ ಪ್ರವಾಸಿ ತಾಣಗಳು ಆರೋಗ್ಯದ ದೃಷ್ಟಿಯಲ್ಲಿ ಸುರಕ್ಷಿತವಾಗಿವೆ ಎಂಬುದು ಹೊರ ರಾಜ್ಯದವರಿಗೆ ಮನವರಿಕೆ.