ಸಂಪೂರ್ಣ ಜಗತ್ತೇ ರಾಮಮಯ

ಜಗತ್ತಿನ ಎಲ್ಲ ದೇಶಗಳಲ್ಲೂ ರಾಮನಾಮವಿದೆ, ರಾಮನ ಮರ್ಯಾದೆ ಪಾಲನೆ ಇಂದಿನ ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿ ನುಡಿದಿದ್ದಾರೆ. ಮಂದಿರ ನಿರ್ಮಾಣ ರಾಷ್ಟ್ರವನ್ನು ಜೋಡಿಸುವ ಪ್ರಕ್ರಿಯೆಯಾಗಬೇಕು ಎಂದೂ ಆಶಿಸಿದ್ದಾರೆ. ಅವರ ಭಾಷಣದ ಪೂರ್ಣ ಸಾರ ಇಲ್ಲಿದೆ.

|| ಜೈ ಶ್ರೀರಾಮ್ ||
ಇಂದು ಈ ಜಯಘೋಷ ಕೇವಲ ಶ್ರೀರಾಮನ ನೆಲದಲ್ಲಿ ಮಾತ್ರವಲ್ಲ, ಇದರ ಕಂಪನ ಇಡೀ ವಿಶ್ವದಲ್ಲಿ ಅನುರಣಿಸುತ್ತಿದೆ. ಇಡೀ ದೇಶವಾಸಿಗಳಲ್ಲಿ, ವಿಶ್ವಾದ್ಯಂತ ತುಂಬಿದ ಭಾರತದ ಭಕ್ತರಲ್ಲಿ, ರಾಮಭಕ್ತರಲ್ಲಿ ಈ ಪವಿತ್ರ ಕ್ಷಣದ ಕೋಟಿ ಕೋಟಿ ಪದಗಳು ಮೊಳಗುತ್ತಿವೆ.
ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನನ್ನನ್ನು ಈ ಪವಿತ್ರ ಕಾರ್ಯದ ಸಾಕ್ಷಿಯಾಗಲು ಆಮಂತ್ರಿಸಿರುವುದು ನನ್ನ ಸೌಭಾಗ್ಯ. ಇದಕ್ಕಾಗಿ ಹೃದಯಪೂರ್ವಕ ಆಭಾರಿಯಾಗಿದ್ದೇನೆ. ನಾನಿಲ್ಲಿಗೆ ಬರುವುದು ಸಹಜವೇ ಆಗಿತ್ತು. ರಾಮಕಾರ್ಯಕ್ಕೆ ಬರುವುದಲ್ಲದೆ ಬೇರೆಲ್ಲಿಗೆ ಹೋಗಲು ಸಾಧ್ಯ?
ಭಾರತವು ಇಂದು ಸರಯೂ ನದಿಯ ತೀರದಲ್ಲಿ, ಭಗವಾನ್ ಭಾಸ್ಕರನ ಸಾನ್ನಿಧ್ಯದಲ್ಲಿ ಚರಿತ್ರೆಯ ಸುವರ್ಣ ಅಧ್ಯಾಯವೊಂದನ್ನು ಆರಂಭಿಸುತ್ತಿದೆ. ಕನ್ಯಾಕುಮಾರಿಯಿಂದ ಕ್ಷೀರಭವಾನಿಯವರೆಗೆ, ಕೋಟೇಶ್ವರದಿಂದ ಕಾಮಾಕ್ಯದವರೆಗೆ, ಜಗನ್ನಾಥದಿಂದ ಕೇದಾರನಾಥದವರೆಗೆ, ಸೋಮನಾಥದಿಂದ ಕಾಶಿ ವಿಶ್ವನಾಥದವರೆಗೆ, ಸಮ್ಮೇದಶಿಖರದಿಂದ ಶ್ರವಣಬೆಳಗೊಳವರೆಗೆ, ಬೋಧಗಯಾದಿಂದ ಸಾರನಾಥದವರೆಗೆ, ಅಮೃತಸರದಿಂದ ಪಟನಾವರೆಗೆ, ಅಂಡಮಾನ್‌ನಿಂದ ಅಜ್ಮೀರ್‌ವರೆಗೆ, ಲಕ್ಷದ್ವೀಪದಿಂದ ಲೇಹ್‌ವರೆಗೆ, ಇಂದು ಪೂರ್ತಿ ಭಾರತ ರಾಮಮಯವಾಗಿದೆ. ಪೂರ್ತಿ ದೇಶ ರೋಮಾಂಚಿತವಾಗಿದೆ. ಪ್ರತಿ ಮನಸ್ಸೂ ದೀಪಮಯವಾಗಿದೆ.
ನಮ್ಮ ಸ್ವಾತಂತ್ರ್ಯ ಆಂದೋಲನದ ಸಂದರ್ಭದಲ್ಲಿ ನಮ್ಮವರು ತಮ್ಮದೆಲ್ಲವನ್ನೂ ಸಮರ್ಪಣೆ ಮಾಡಿದ್ದರು. ಗುಲಾಮಿತನದ ಕಾಲಘಟ್ಟದಲ್ಲಿ ಆಜಾದಿಗಾಗಿ ಹೋರಾಟ ನಡೆಯದ ಕ್ಷಣವೇ ಇರಲಿಲ್ಲ. ಸ್ವಾತಂತ್ರ್ಯಕ್ಕಾಗಿ ಬಲಿದಾನ ನೀಡದ ನೆಲವೂ ಇರಲಿಲ್ಲ. ಆಗಸ್ಟ್ 15ರಂದು ನಾವು ಆಚರಿಸುವ ಕ್ಷಣ, ಇಂಥ ಲಕ್ಷಾಂತರ ಆತ್ಮಾಹುತಿ ತ್ಯಾಗಗಳ, ಭಾವನೆಗಳ ಪ್ರತೀಕವಾಗಿದೆ. ಅದೇ ತರಹ, ರಾಮಮಂದಿರಕ್ಕಾಗಿ ಎಷ್ಟೋ ಶತಮಾನಗಳಿಂದ, ಎಷ್ಟೋ ವೀರರು ಅಖಂಡವಾಗಿ, ನಿರಂತರವಾಗಿ ಹೋರಾಡಿದ್ದಾರೆ. ಈ ದಿನ, ಈ ಕ್ಷಣ ಆ ಸಂಕಲ್ಪ ಹೋರಾಟಗಳ ಪ್ರತೀಕವಾಗಿದೆ. ರಾಮಮಂದಿರಕ್ಕಾಗಿ ನಡೆದ ಹೋರಾಟದಲ್ಲಿ ಅರ್ಪಣೆಯೂ ಇತ್ತು, ತರ್ಪಣವೂ ಇತ್ತು. ಸಂಘರ್ಷವೂ ಇತ್ತು, ಸಂಕಲ್ಪವೂ ಇತ್ತು. ಅಂಥವರ ತ್ಯಾಗ ಬಲಿದಾನ ಸಂಘರ್ಷಗಳಿಂದ ಈ ಸ್ವಪ್ನ ಸಾಕಾರವಾಗುತ್ತಿದೆ. ಯಾರ ತಪಸ್ಸು ಈ ನೆಲದಲ್ಲಿ ಸಾಕಾರವಾಗಿ ಮೂಡಿಬಂದಿದೆಯೋ ಅಂಥವರಿಗೆ ನಾನು 130 ಕೋಟಿ ಪ್ರಜೆಗಳ ಪರವಾಗಿ ಶಿರಬಾಗಿ ನಮಸ್ಕರಿಸುತ್ತೇನೆ.
ರಾಮಜನ್ಮಭೂಮಿಯ ಪವಿತ್ರ ಆಂದೋಲನದಲ್ಲಿ ಯಾವ್ಯಾವ ಶಕ್ತಿಗಳು, ವ್ಯಕ್ತಿತ್ವಗಳು ದುಡಿದವೋ ಅವೆಲ್ಲವೂ ಈ ಕ್ಷಣವನ್ನು ಇಂದು ನೋಡುತ್ತಿದೆ. ಎಲ್ಲರಿಗೂ ಆಶೀರ್ವಾದ ನೀಡುತ್ತಿವೆ. ರಾಮ ನಮ್ಮ ಮನದಲ್ಲಿ ನಿಂತಿದ್ದಾನೆ. ನಮ್ಮ ಪ್ರೇರಣೆಯಾಗಿ ನೆಲೆಸಿದ್ದಾನೆ. ಯಾವ ಕೆಲಸ ಮಾಡುವುದಿದ್ದರೂ ಭಗವಾನ್ ರಾಮನ ಕಡೆಗೆ ನೋಡುತ್ತೇವೆ. ರಾಮನ ಅದ್ಭುತ ಶಕ್ತಿಯನ್ನು ನೋಡಿ. ಗೋಪುರಗಳೇ ಕುಸಿದುಹೋದವು. ಏನೇನು ನಡೆಯಲಿಲ್ಲ ಇಲ್ಲಿ? ಎಲ್ಲವೂ ಆಯಿತು. ಅಸ್ತಿತ್ವ ಸಾಧಿಸುವುದೇ ಕಷ್ಟವಾಯಿತು. ಆದರೂ ರಾಮ ನಮ್ಮ ಮನದಲ್ಲಿ ಭದ್ರವಾಗಿದ್ದಾನೆ. ನಮ್ಮ ಸಂಸ್ಮೃತಿಯ ಆಧಾರವಾಗಿದ್ದಾನೆ. ಭಾರತದ ಮರ್ಯಾದಾ ಪುರುಷೋತ್ತಮನಾಗಿದ್ದಾನೆ. ಇದೇ ನೆಲೆಯಲ್ಲಿ ಈ ಪವಿತ್ರ ಜನ್ಮಭೂಮಿಯಲ್ಲಿ ಶ್ರೀರಾಮನ ಭವ್ಯ ದಿವ್ಯ ಮಂದಿರದ ಭೂಮಿಪೂಜೆಯಾಗುತ್ತಿದೆ.
ಇಲ್ಲಿ ಬರುವುದಕ್ಕೆ ಮೊದಲು ಹನುಮಾನ್ ಘಡಿಯ ದರ್ಶನ ಮಾಡಿದೆ. ರಾಮನ ಎಲ್ಲ ಕೆಲಸವನ್ನೂ ಹನುಮಂತನೇ ಮಾಡುತ್ತಾನೆ. ರಾಮನ ಆದರ್ಶವನ್ನು ಕಲಿಯುಗದಲ್ಲಿ ರಕ್ಷಿಸುವುದು ಕೂಡ ಹನುಮಂತನ ಜವಾಬ್ದಾರಿ. ಹನುಮಂತನ ಆಶೀರ್ವಾದದಿಂದ ರಾಮಮಂದಿರ ಭೂಮಿಪೂಜೆ ಆರಂಭವಾಗಿದೆ. ಶ್ರೀರಾಮಮಂದಿರ ನಮ್ಮ ಸಂಸ್ಕೃತಿಯ ಆಧುನಿಕತೆಯ, ಶಾಶ್ವತ ಶ್ರದ್ಧೆಯ, ರಾಷ್ಟ್ರೀಯ ಭಾವನೆಯ ಪ್ರತೀಕವಾಗಲಿದೆ. ಕೋಟಿ ಜನರ ಸಾಮೂಹಿಕ ಸಂಕಲ್ಪ ಶಕ್ತಿಯ ಪ್ರತೀಕವಾಗಲಿದೆ. ಮಂದಿರ ರಚನೆಯ ಬಳಿಕ ಅಯೋಧ್ಯೆಯ ಭವ್ಯತೆ ಹೆಚ್ಚುವುದಷ್ಟೇ ಅಲ್ಲ, ಇಲ್ಲಿನ ಆರ್ಥಿಕತೆಯೂ ಬದಲಾಗಲಿದೆ. ಇಡೀ ಜಗತ್ತಿನ ಜನ ಇಲ್ಲಿಗೆ ಬರಲಿದ್ದಾರೆ. ಇಡೀ ಜಗತ್ತಿನ ಜನ ಶ್ರೀರಾಮ ಹಾಗೂ ಮಾತೆ ಜಾನಕಿಯ ದರ್ಶನಕ್ಕೆ ಆಗಮಿಸಲಿದ್ದಾರೆ.

ದೇಶದ ನಂಬಿಕೆಯಲ್ಲಿ ರಾಮನಿದ್ದಾನೆ
ಭಾರತದ ಆದರ್ಶದಲ್ಲಿ, ದಿವ್ಯತೆಯಲ್ಲಿ, ದರ್ಶನದಲ್ಲಿ ರಾಮನಿದ್ದಾನೆ. ಸಾವಿರ ವರ್ಷಗಳ ಹಿಂದೆ ವಾಲ್ಮೀಕಿಯಿಂದ ವಿರಚಿತನಾದ, ಮಧ್ಯಯುಗದಲ್ಲಿ ತುಳಸಿದಾಸ ಕಬೀರರ ಮೂಲಕ ಬಲ ನೀಡಿದ ರಾಮ, ಅದೇ ರಾಮ ಸ್ವಾತಂತ್ರ್ಯ ಹೋರಾಟದ ಸಮಯದಲ್ಲೂ ಬಾಪೂಜಿಯ ಭಜನೆಗಳಲ್ಲೂ ಅಹಿಂಸೆ ಸತ್ಯಾಗ್ರಹದ ಶಕ್ತಿಯ ಮೂಲವಾಗಿ ಮೂಡಿಬಂದ. ತುಳಸಿದಾಸರ ರಾಮ ಸಗುಣ ರಾಮ. ನಾನಕ, ಕಬೀರರ ರಾಮ ನಿರ್ಗುಣ ರಾಮ. ಭಗವಾನ್ ಬುದ್ಧನೂ ರಾಮನಿಂದ ಜೋಡಿಸಲ್ಪಟ್ಟಿದ್ದಾನೆ. ಅಯೋಧ್ಯಾ ನಗರ ಜೈನ ಧರ್ಮದ ನಂಬಿಕೆಯ ಕೇಂದ್ರವೂ ಆಗಿದೆ. ಈ ಸರ್ವವ್ಯಾಪಕತೆ ಭಾರತದ ವಿವಿಧತೆಯಲ್ಲಿ ಏಕತೆಯ ಪ್ರತೀಕ. ತಮಿಳಿನಲ್ಲಿ ಕಂಬರಾಮಾಯಣ, ತೆಲುಗಿನಲ್ಲಿ ರಂಗನಾಥ ರಾಮಾಯಣ, ಕನ್ನಡದಲ್ಲಿ ಕುಮುದೇಂದು ರಾಮಾಯಣ, ಕಾಶ್ಮೀರದಲ್ಲಿ ರಾಮಾವತಾರ ಚರಿತ, ಮಲಯಾಳದಲ್ಲಿ ರಾಮಚರಿತಂ, ಬಂಗಾಳದಲ್ಲಿ ಕೃತ್ತಿವಾಸ ರಾಮಾಯಣವಿದೆ. ಗುರು ಗೋವಿಂದ ಸಿಂಗರು ಗೋವಿಂದ ರಾಮಾಯಣ ಬರೆದರು. ಬೇರೆ ಬೇರೆ ರಾಮಾಯಣಗಳಲ್ಲಿ ಬೇರೆ ಬೇರೆ ರೂಪಗಳಲ್ಲಿ ಆತ ಸಿಗುತ್ತಾನೆ. ಆದರೆ ರಾಮ ಎಲ್ಲ ಕಡೆಯೂ ಇದ್ದಾನೆ, ಎಲ್ಲರಿಗಾಗಿ ಇದ್ದಾನೆ. ಹೀಗಾಗಿ ರಾಮ ಅನೇಕತೆಯಲ್ಲಿ ಏಕತೆಯ ಸೂತ್ರ.

ಸಮೃದ್ಧ ಸಂಸ್ಕೃತಿಯ ಪ್ರತೀಕ
ಮಂದಿರ ಭಾರತೀಯರ ಸಮೃದ್ಧ ಸಂಸ್ಕೃತಿಯ ಪ್ರತೀಕವಾಗಲಿದೆ. ಭಗವಾನ್ ರಾಮನ ಸಂದೇಶ ನಮ್ಮ ಸಾವಿರ ವರ್ಷಗಳ ಸಂದೇಶವಾಗಿ ಪೂರ್ತಿ ವಿಶ್ವವನ್ನು ನಿರಂತರವಾಗಿ ಪಸರಿಸಿ ನಮ್ಮ ಜ್ಞಾನ, ನಮ್ಮ ಜೀವನದೃಷ್ಟಿಯನ್ನು ವಿಶ್ವ ಪರಿಚಿತಗೊಳಿಸಿತು. ಹಾಗೇ ನಮ್ಮ ಭಾವಿ ಪ್ರಜೆಗಳಿಗೆ ವಿಶೇಷ ಹೊಣೆಗಾರಿಕೆಯಿದೆ. ನಮ್ಮ ದೇಶದಲ್ಲಿ ರಾಮನ ಪಾದಗಳು ಎಲ್ಲೆಲ್ಲಿ ಚಲಿಸಿವೆ. ಅಲ್ಲೆಲ್ಲ ರಾಮಕ್ಷೇತ್ರಗಳು ನಿರ್ಮಾಣಗೊಂಡಿವೆ. ಅಯೋಧ್ಯೆ ಭಗವಾನ್ ರಾಮನ ಸ್ವಂತ ನಗರ. ತನ್ನ ನಗರದ ಬಗೆಗೆ ಅವನೇ ಹೇಳಿದ್ದಾನೆ- ಜನ್ಮಭೂಮಿ ಅಲೌಕಿಕ ಶೋಭೆಯ ನಗರ. ಇಂದು ಪ್ರಭುರಾಮನ ದಿವ್ಯತೆಯನ್ನು ಹೆಚ್ಚಿಸಲು ಐತಿಹಾಸಿಕ ಕಾರ್ಯ ನಡೆಯುತ್ತಿದೆ.
ರಾಮನಂತಹ ನೀತಿವಂತ ಆಡಳಿತಗಾರ ಇಡೀ ಪೃಥ್ವಿಯಲ್ಲಿ ಇನ್ನೊಬ್ಬನಿಲ್ಲ ಎಂಬ ಮಾತಿದೆ. ಶ್ರೀರಾಮನ ಆಡಳಿತದಲ್ಲಿ ದುಃಖಿ ದರಿದ್ರರು ಇರಲಿಲ್ಲವಂತೆ. ನರ-ನಾರಿಯರು ಸಮಾನರು ಆಗಿದ್ದರು. ಭೇದಭಾವ ಇರಲಿಲ್ಲ. ರೈತರು, ಪಶಪಾಲಕರು ಎಲ್ಲರೂ ಸುಖಿಗಳಾಗಿದ್ದರು. ವೃದ್ಧರು, ಮಕ್ಕಳು, ಚಿಕಿತ್ಸಕರನ್ನು ಯಾವಾಗಲೂ ರಕ್ಷಿಸಲಾಗುತ್ತಿತ್ತು. ಇದನ್ನು ಕೊರೊನಾ ನಮಗೆ ಮತ್ತೆ ಕಲಿಸಿಕೊಟ್ಟಿದೆ. ಶರಣಾಗಿ ಯಾರು ಬಂದಿದ್ದಾರೋ ಅವರನ್ನು ರಕ್ಷಿಸುವುದು ಎಲ್ಲರ ಕರ್ತವ್ಯವಾಗಿದೆ. ಶ್ರೀರಾಮನ ನುಡಿಯೆಂದರೆ- ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ. ಜನ್ಮಭೂಮಿ ಸ್ವರ್ಗಕ್ಕಿಂತ ಮಿಗಿಲು. ಇದು ರಾಮನ ನೀತಿ. ಇಲ್ಲಿ ಭಯ ಭೀತಿ ಇರಬಾರದು. ಪ್ರೀತಿ ಶಾಂತಿ ಇರಬೇಕು. ಇದು ರಾಮನ ನೀತಿ, ರೀತಿ. ಇದೂ ಶತಮಾನಗಳಿಂದ ನಮಗೆ ಮಾರ್ಗದರ್ಶನ ನೀಡುತ್ತಿದೆ. ಕೊರೊನಾದಿಂದಾಗಿ ಈಗ ಶ್ರೀರಾಮನ ಆದರ್ಶದ ಮಾರ್ಗದ ಅಗತ್ಯ ಇನ್ನಷ್ಟು ಹೆಚ್ಚಿದೆ. ವರ್ತಮಾನದ ಮರ್ಯಾದೆ ಎಂದರೆ ‘ದೋ ಗಜ್ ಕೀ ದೂರಿ, ಮಾಸ್ಕ್ ಹೈ ಜರೂರಿ’. ಮರ್ಯಾದೆಗಳ ಪಾಲನೆ ಮಾಡುತ್ತಲೇ ಎಲ್ಲ ದೇಶವಾಸಿಗಳನ್ನೂ ಪ್ರಭು ರಾಮ, ಮಾತೆ ಜಾನಕಿ ಸ್ವಸ್ಥರನ್ನಾಗಿ ಸುಖಿಗಳನ್ನಾಗಿ ಮಾಡಲಿ. ಇದೇ ಪ್ರಾರ್ಥನೆ. ಎಲ್ಲ ಪ್ರಜೆಗಳ ಪರವಾಗಿ ಭಗವಾನ್ ರಾಮನಿಗೆ ಕೋಟಿ ಕೋಟಿ ಪ್ರಣಾಮಗಳು.

ಮುಸ್ಲಿಂ ದೇಶದಲ್ಲೂ ರಾಮ…
ಜಗತ್ತಿನ ಎಷ್ಟೋ ದೇಶಗಳು ರಾಮನಾಮದೊಂದಿಗೆ ಬೆಸೆದುಕೊಂಡಿವೆ. ವಿಶ್ವದ ಅಧಿಕ ಮುಸ್ಲಿಂ ಜನಸಂಖ್ಯೆಯಿರುವ ಇಂಡೋನೇಷ್ಯಾದಲ್ಲೂ ನಮ್ಮ ದೇಶದಂತೆ ಕಾಕಾವಿನ್ ರಾಮಾಯಣ, ಸ್ವರ್ಣದೀಪ ರಾಮಾಯಣ, ಯೋಗೇಶ್ವರ ರಾಮಾಯಣ, ಅಲಿಖಿತ ರಾಮಾಯಣಗಳೂ ಇವೆ. ಅಲ್ಲೂ ಅವನು ಪೂಜನೀಯ. ಕಂಬೋಡಿಯಾದಲ್ಲಿ ರಮಖೇರ್ ರಾಮಾಯಣ, ಲಾವಾದಲ್ಲಿ ಫ್ರಾಲಾಪ್ ರಾಮಾಯಣ, ಮಲೇಶಿಯಾದಲ್ಲಿ ಹಿಕಾಯತ್ ಸೇರಿ ರಾಮ್, ಥಾಯ್ಲೆಂಡ್‌ನಲ್ಲಿ ರಾಮಾಕೇನ್, ಇರಾನ್ ಚೀನಾದಲ್ಲೂ ರಾಮನ ಪ್ರಸಂಗ ಸಿಗುತ್ತದೆ. ಶ್ರೀಲಂಕಾದಲ್ಲಿ ರಾಮಾಯಣ ಕಥೆ ಜಾನಕೀಹರಣವೆಂದು ಹೇಳಲ್ಪಡುತ್ತದೆ. ನೇಪಾಳದವರು ರಾಮನ ಆತ್ಮೀಯ ಸಂಬಂಧವನ್ನು ಜಾನಕಿಯ ಜೊತೆ ಜೋಡಿಸಿಕೊಂಡಿದ್ದಾರೆ. ಇನ್ನೆಷ್ಟು ದೇಶಗಳು ರಾಮನ ನಂಬಿಕೆಯೊಂದಿಗೆ ಬೆಸೆದುಕೊಂಡಿವೆಯೋ ತಿಳಿಯದು. ಎಲ್ಲ ಕಡೆಯೂ ರಾಮನಾಮ ಒಂದಲ್ಲ ಒಂದು ರೂಪದಲ್ಲಿ ಪ್ರಚಲಿತದಲ್ಲಿದೆ. ಇವರೆಲ್ಲರಿಗೂ ರಾಮಮಂದಿರ ನಿರ್ಮಾಣದಿಂದ ತುಂಬಾ ಆನಂದವೆನಿಸಲಿದೆ. ರಾಮ ಎಲ್ಲರಲ್ಲಿ ಇದ್ದಾನೆ.


ಇಂದು ದೇಶವಿಡೀ ಭಾವುಕವಾಗಿದೆ. ಶತಮಾನಗಳ ನಿರೀಕ್ಷೆ ಮುಗಿಯುತ್ತಿದೆ. ಕೋಟಿ ಜನರಿಗೆ ತಾವು ಬದುಕಿದ್ದಾಗಲೇ ಇಂಥ ಕ್ಷಣವನ್ನು ಕಾಣುವುದರ ಕುರಿತು ಭರವಸೆಯೇ ಇರಲಿಲ್ಲ. ಎಷ್ಟೋ ವರ್ಷಗಳಿಂದ ಟೆಂಟ್‌ನಲ್ಲಿದ್ದ ನಮ್ಮ ರಾಮಲಲ್ಲಾನಿಗೆ ಭವ್ಯ ಮಂದಿರ ನಿರ್ಮಾಣವಾಗಲಿದೆ ಎಂಬ ವಿಶ್ವಾಸವಿರಲಿಲ್ಲ. ಕೆಡಹುವುದು ಮತ್ತು ಕಟ್ಟುವುದು ಮತ್ತೆ ಕೆಡಹುವುದು- ಇಂಥ ವೈಪರೀತ್ಯಗಳಿಂದ ಇಂದು ಜನ್ಮಭೂಮಿ ಮುಕ್ತವಾಗುತ್ತಿದೆ.

ಗಾಂಧೀಜಿ ನಮಗೆ ಪ್ರತಿ ನಡೆ ನುಡಿಯಲ್ಲಿಯೂ ರಾಮರಾಜ್ಯದ ಮಂತ್ರ ನೀಡಿದ್ದರು. ಆತನ ಜೀವನ ಚರಿತ್ರೆ ಗಾಂಧೀಜಿಯ ರಾಮರಾಜ್ಯದ ಮಾರ್ಗವಾಗಿತ್ತು. ರಾಮ ಸಮಯ, ಸ್ಥಾನ, ಪರಿಸ್ಥಿತಿಗಳನ್ನು ನೋಡಿಕೊಂಡು ಮಾತಾಡುತ್ತಾನೆ, ಕ್ರಿಯೆಗಿಳಿಸುತ್ತಾನೆ, ಯೋಚಿಸುತ್ತಾನೆ. ಸಮಯದೊಂದಿಗೆ ನಾವು ಬೆಳೆಯಬೇಕು, ಚಲಿಸಬೇಕು, ಪರಿವರ್ತನೆಯಾಗಬೇಕು. ರಾಮ ಆಧುನಿಕತೆಯ ಪರವೂ ಹೌದು. ಆತನ ಪ್ರೇರಣೆಯೊಂದಿಗೆ, ಆದರ್ಶದೊಂದಿಗೆ ಭಾರತ ಮುಂದೆ ನಡೆಯಲಿದೆ.

ಶ್ರೀರಾಮ ನಮಗೆ ಕರ್ತವ್ಯಪಾಲನೆ ಕಲಿಸಿಕೊಟ್ಟಿದ್ದಾನೆ. ವಿರೋಧ ಉಂಟಾದರೆ ಬೋಧನೆ ಮತ್ತು ಶೋಧನೆಯ ಮಾರ್ಗ ಹೇಳಿಕೊಟ್ಟಿದ್ದಾನೆ. ಪ್ರೀತಿ ಹಾಗೂ ಭ್ರಾತೃತ್ವವನ್ನು ರಾಮಶಿಲೆಯೊಂದಿಗೆ ಜೋಡಿಸಬೇಕು. ಯಾವಾಗ ಮಾನವತೆ ರಾಮನನ್ನು ಗೌರವಿಸಿದೆಯೋ ಆಗ ವಿಕಾಸವಾಗಿದೆ. ಯಾವಾಗ ನಿಂದಿಸಿದೆಯೋ ಆಗ ವಿನಾಶದ ಹಾದಿ ಹಿಡಿದಿದೆ. ಎಲ್ಲರ ವಿಶ್ವಾಸ ಹಾಗೂ ಜೊತೆಗಾರಿಕೆಯೊಂದಿಗೆ ವಿಕಾಸ ನಡೆಯಬೇಕಿದೆ. ನಮ್ಮ ಪರಿಶ್ರಮ ಸಂಕಲ್ಪಶಕ್ತಿಯಿಂದ ಆತ್ಮವಿಶ್ವಾಸಿ, ಆತ್ಮನಿರ್ಭರ ಭಾರತದ ನಿರ್ಮಾಣ ಮಾಡುವುದಿದೆ.

ತಮಿಳು ರಾಮಾಯಣದಲ್ಲಿ ರಾಮ ಹೇಳುತ್ತಾನೆ- ತಡ ಮಾಡಬಾರದು, ಮುಂದೆ ನಡೆಯಬೇಕು. ಭಾರತದ ಎಲ್ಲರಿಗೂ ಭಗವಾನ್ ರಾಮನ ಇದೇ ಸಂದೇಶ. ನಾವೆಲ್ಲರೂ ಮುಂದೆ ನಡೆದರೆ ದೇಶ ಮುನ್ನಡೆಯುವುದು. ಈ ಮಂದಿರ ಯುಗಗಳವರೆಗೆ ಮಾನವತೆಗೆ ಪ್ರೇರಣೆ ನೀಡಲಿದೆ. ದಿಗ್ದರ್ಶನ ನೀಡಲಿದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top