ದಮನಿಸಲಾಗದ ವೀರ ಸಾವರ್ಕರ್

– ಡ್ಯಾನಿ ಪಿರೇರಾ
ಸಾವರ್ಕರ್ ಅವರು ಜನಿಸಿದ್ದು 1883ರ ಮೇ 28ರಂದು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಭಗೂರಿನಲ್ಲಿ. ತಂದೆ ದಾಮೋದರ ಸಾವರ್ಕರ್, ತಾಯಿ ರಾಧಾಬಾಯಿ. ಮೂವರು ಸಹೋದರರಲ್ಲಿ ಮಧ್ಯಮರೇ ವಿನಾಯಕ ದಾಮೋದರ ಸಾವರ್ಕರ್. ಅಣ್ಣ ಗಣೇಶ ಸಾವರ್ಕರ್ ತಮ್ಮ ವಿನಾಯಕರ ‘ಭಾರತೀಯ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ’ ಪುಸ್ತಕವನ್ನು ಮುದ್ರಿಸಿದ ಆರೋಪದಲ್ಲಿ 25 ವರ್ಷಗಳ ಅಂಡಮಾನ್ ಜೈಲಿನ ಕರಿನೀರ ಶಿಕ್ಷೆಗೊಳಗಾಗಿದ್ದರೆ, ಇನ್ನೊಬ್ಬ ತಮ್ಮ ನಾರಾಯಣ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಕೋಲ್ಕತ್ತದ ಜೈಲಿನಲ್ಲಿದ್ದವರು. ಇಡೀ ಬದುಕು ರಾಷ್ಟ್ರಯಜ್ಞಕ್ಕೆ ಹವಿಸ್ಸಾಗಿ ಉರಿಸಿದ ಕುಟುಂಬ.
ಸಾವರ್ಕರ್ ಕಾಲಿಟ್ಟ ಕಡೆ ಕ್ರಾಂತಿಯೇ ಆಗುತ್ತಿತ್ತು. ಭಾರತೀಯ ಭಾಷಾಲೋಕಕ್ಕೆ ಅವರ ಕೊಡುಗೆ ಅನನ್ಯ. ಮಹಾವಿದ್ಯಾಲಯ, ಪ್ರಾಧ್ಯಾಪಕ, ಪ್ರಾಚಾರ್ಯ, ದಿಗ್ದರ್ಶಕ, ಮಹಾಪೌರ, ವ್ಯಂಗ್ಯಚಿತ್ರ, ಛಾಯಾಚಿತ್ರ, ಸಂಸದ್, ಲೋಕಸಭಾ, ಸಚಿವಾಲಯ, ನಗರಪಾಲಿಕೆ, ಮಹಾನಗರ ಪಾಲಿಕೆ, ಹುತಾತ್ಮ, ಪ್ರಮಾಣಪತ್ರ ಮುಂತಾದ ಶಬ್ದಗಳನ್ನು ಪ್ರಚಲಿತಗೊಳಿಸಿದ ಭಾಷಾಜ್ಞಾನಿ ಅವರು. ದೇಶಭಕ್ತಿಯೇ ಅಪರಾಧ ಎನ್ನುವ ಕಾಲದಲ್ಲಿ ವಿಶ್ವವಿದ್ಯಾಲಯದಿಂದ ಹೊರದೂಡಲ್ಪಟ್ಟ ಮೊದಲ ವಿದ್ಯಾರ್ಥಿ. ವಿದೇಶಿ ಬಟ್ಟೆಗಳ ದಹಿಸಿದ ಮೊದಲ ಸ್ವದೇಶಾಭಿಮಾನಿ. ಬ್ಯಾರಿಸ್ಟರ್ ಪದವಿ ನಿರಾಕರಿಸಲ್ಪಟ್ಟ ಮೊದಲ ಬ್ಯಾರಿಸ್ಟರ್. ಪ್ರಕಟನೆಗೂ ಮೊದಲು ನಿಷೇಧಿಸಲ್ಪಟ್ಟ ಗ್ರಂಥದ ಕರ್ತೃ. ಹತ್ತು ಸಾವಿರ ಸಾಲು ಪದ್ಯ ರಚಿಸಿ, ಬಾಯಿಪಾಠ ಮಾಡಿ ಸೆರೆವಾಸದ ತರುವಾಯ ಅವುಗಳನ್ನು ಸ್ವದೇಶಕ್ಕೆ ಕೊಟ್ಟ ಮಹಾಕವಿ.
ಇಂಗ್ಲೆಂಡಿನಲ್ಲಿದ್ದ ಸಾವರ್ಕರ್ ಅಲ್ಲೇ ಕ್ರಾಂತಿಕಾರಿಗಳಿಗೆ ಬೆಂಬಲ ನೀಡುತ್ತಿದ್ದರು. ಕರ್ಜನ್ ವೈಲಿ ಎಂಬ ಬ್ರಿಟಿಷ್ ಅಧಿಕಾರಿಯ ಹತ್ಯೆಯ ರೂವಾರಿ ಮದನ್‌ಲಾಲ್‌ ಧಿಂಗ್ರಾನಿಗೆ ಬೆಂಬಲ ನೀಡಿದ ಆರೋಪ, ಗಣೇಶ ಸಾವರ್ಕರರ ಶಿಕ್ಷೆಗೆ ಕಾರಣನಾಗಿದ್ದ ಬ್ರಿಟಿಷ್ ಕಲೆಕ್ಟರ್ ಜಾಕ್ಸನ್‌ನ  ಹತ್ಯೆಗೆ ಇಂಗ್ಲೆಂಡಿನಿಂದ ಪಿಸ್ತೂಲ್ ಕಳಿಸಿದ ಆಪಾದನೆಯಲ್ಲಿ ಅವರನ್ನು ಬಂಧಿಸಲಾಯಿತು. ಹಡಗಿನಲ್ಲಿ ಭಾರತಕ್ಕೆ ತರುವಾಗ ಫ್ರಾನ್ಸ್‌ನ ಮಾರ್ಸೆಲ್ಸ್ ಬಳಿ ಹಡಗಿನ ಕಿಂಡಿಯಿಂದ ಹೊರಹಾರಿ ಸಮದ್ರದಲ್ಲಿ ಈಜತೊಡಗಿದರು. ಫ್ರಾನ್ಸ್ ಪೊಲೀಸರಿಗೆ ಸಿಕ್ಕಿಬಿದ್ದರು. ಲಂಚ ಪಡೆದ ಫ್ರಾನ್ಸ್ ಪೊಲೀಸರು ಬ್ರಿಟಿಷರಿಗೆ ಒಪ್ಪಿಸಿದರು. ಬ್ರಿಟಿಷರು ಸಾವರ್ಕರರಿಗೆ 50 ವರ್ಷಗಳ ಎರಡು ಜೀವಿತಾವಧಿ ಶಿಕ್ಷೆ ವಿಧಿಸಿದರು. ಅವರ ಕೊರಳಿಗೆ 1910-60 ಎನ್ನುವ ಬಿಡುಗಡೆಯ ಕಾಲಾವಧಿಯ ಬಿಲ್ಲೆಯನ್ನು ಹಾಕಿ ಅಂಡಮಾನಿನ ಕಾಲಾಪಾನಿ ಶಿಕ್ಷೆಗೆ ನೂಕಲಾಯಿತು. ಅಲ್ಲಿ ಅನುಭವಿಸಿದ ಕಷ್ಟನಷ್ಟ ಸಂಕಟಗಳು ಒಂದೆರಡಲ್ಲ.
ಸಾವರ್ಕರ್ರನ್ನು 1921ರಲ್ಲಿ ಅಂಡಮಾನಿನ ಜೈಲಿನಿಂದ ಯರವಾಡ ಜೈಲಿಗೆ ವರ್ಗಾಯಿಸಲಾಯಿತು. 1924ರಲ್ಲಿಅವರನ್ನು ಬಿಡುಗಡೆಯಾಯಿತು. ಆ ನಂತರವೂ ಸಾವರ್ಕರ್ ಹಿಂದೂ ಸಮಾಜದ ಸುಧಾರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಹಿಂದೂ ಮಹಾಸಭಾದ ಅಧ್ಯಕ್ಷರಾದರು. ಈ ನಡುವೆ ರಾಜಕೀಯ ಕಾರಣಕ್ಕೆ ಗಾಂಧಿ ಹತ್ಯೆ ಆರೋಪದಲ್ಲಿ ಅವರನ್ನು ಬಂಧಿಸಿ ಅವರನ್ನು ಅವರ ಕುಟುಂಬವನ್ನು ಹಿಂಸಿಸಲಾಯಿತು. ಕೋರ್ಟ್ ನಿರಪರಾಧಿ ಎಂದು ಬಿಡುಗಡೆ ಮಾಡಿತು. ಅಷ್ಟಾಗಿಯೂ ನೈಜ ದೇಶಭಕ್ತರ ಹೃದಯದಲ್ಲಿ ಇಂದಿಗೂ ಅತ್ಯುನ್ನತ ಸ್ಥಾನದಲ್ಲೇ ಉಳಿದಿದ್ದಾರೆ. ಕಷ್ಟ ಕೋಟಲೆಯ ನಡುವೆಯೂ ಈ ಸ್ವಾತಂತ್ರ್ಯ ವೀರ ಹೇಳಿದ ಮಾತು- ‘‘ಭಾರತಾಂಬೆಯ ಕೋಟಿ ಕೋಟಿ ಮಕ್ಕಳಲ್ಲಿ ಮಾತೃಭಕ್ತಿಯುಳ್ಳವರ ಜೀವನವೇ ಧನ್ಯ! ಅವರ ಪೈಕಿ, ನಮ್ಮ ಕುಟುಂಬವಂತೂ ಈಶ್ವರನದೇ ಅಂಶ. ನಿರ್ವಂಶವಾಗಿಯೂ ಅಖಂಡವಾಗುವ ಅಂಶ ನಮ್ಮದು,’’ ಎಂದು. ಈ ಮಹಾನ್ ದೇಶಭಕ್ತ 1966 ಫೆಬ್ರವರಿ 26ರಂದು ಆತ್ಮಾರ್ಪಣೆಗೈದರು. ಈ ಮೂಲಕ ಅವರ ಸಾರ್ಥಕ ಬದುಕಿನ ಸಮರ್ಪಿತ ಜೀವನ ಕುಸುಮಮಾಲೆ ತಾಯಿ ಭಾರತಿಯ ಅಡಿದಾವರೆಗೆ ಸಮರ್ಪಿತವಾಯಿತು.
(ಲೇಖಕರು ಶಿಕ್ಷಕರು, ಹವ್ಯಾಸಿ ಬರಹಗಾರ)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top