ಆತ್ಮನಿರ್ಭರತೆಯ ದಾರಿ ದೀರ್ಘವಿದೆ!

– ವಿನುತಾ ಗೌಡ.

ಇತ್ತೀಚೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ಮುಕುಂದರು ಆತ್ಮನಿರ್ಭರತೆಯ ಬಗೆಗಿನ ವೆಬಿನಾರ್‌ ಒಂದರಲ್ಲಿ ಮಾತನಾಡುತ್ತಾ ಅಪರೂಪದ ಸಂಗತಿಯೊಂದನ್ನು ಪ್ರಸ್ಥಾಪಿಸಿದ್ದರು. ಕೃಷಿ, ಕೈಗಾರಿಕೆ, ಉದ್ದಿಮೆ ಮತ್ತು ರಕ್ಷ ಣಾ ಬಲಗಳಲ್ಲಿ ಆತ್ಮನಿರ್ಭರತೆಯ ಅನುಷ್ಠಾನ ಹೇಗೆ, ಎತ್ತ ಮುಂತಾದ ಚರ್ಚೆಗಳ ನಡುವೆಯೂ ಆತ್ಮನಿರ್ಭರಕ್ಕೆ ಒಂದು ವಿಭಿನ್ನ ದೃಷ್ಟಿಕೋನವಿದೆ ಎಂಬುದನ್ನು ಅವರು ತಿಳಿಸಿದ್ದರು. ಸ್ವಾವಲಂಬನೆ ಮತ್ತು ಆತ್ಮನಿರ್ಭರ ಪದಗಳಿಗಿರುವ ತೀರಾ ಹತ್ತಿರದ ಸಂಬಂಧಗಳನ್ನು ವಿವರಿಸುತ್ತಾ, ‘‘ಆತ್ಮನಿರ್ಭರ- ಸ್ವಾವಲಂಬನೆ ಎನ್ನುವುದು ಕೇವಲ ಆರ್ಥಿಕ ದೃಷ್ಟಿಕೋನಕ್ಕೆ ಸಂಬಂಧಿಸಿದ ಸಂಗತಿಯಲ್ಲ. ಅದಕ್ಕೂ ಮೀರಿದ್ದು, ಸಾಂಸ್ಕೃತಿಕವಾದುದು’ ಎಂದರು.
ಅದರ ಅಂತರಾಳವನ್ನು ತಿಳಿಯಲು ನಾವು ಭಾರತೀಯತೆಯ ಮೂಲ ಮತ್ತು ಆರೆಸ್ಸೆಸ್‌ ಪ್ರತಿಪಾದಿಸುವ ಸಾಂಸ್ಕೃತಿಕ ರಾಷ್ಟ್ರವಾದದ ಆಳಕ್ಕೆ ತೆರಳಬೇಕು. ಭಾರತದ ಮೂಲ ಮತ್ತು ಅಂತಃಸತ್ವವೇ ಸಾಂಸ್ಕೃತಿಕತೆ. ರಾಷ್ಟ್ರೀಯತೆಯೂ ಅದರ ವ್ಯಾಪ್ತಿಯಲ್ಲೇ ಬರುವ ಮೌಲ್ಯ ಎಂಬುದನ್ನು ಆರೆಸ್ಸೆಸ್‌ಗಿಂತ ಮುಂಚಿನ ದಾರ್ಶನಿಕರು, ತಿಲಕರು, ಸಾವರ್ಕರರೂ ಪ್ರತಿಪಾದಿಸಿದ್ದಾರೆ. ಗಾಂಧೀಜಿಯವರ ‘ಹಿಂದ್‌ ಸ್ವರಾಜ್‌’ನಲ್ಲಿ ಪ್ರತಿಪಾದಿಸಿದ ಸ್ವದೇಶಿ ಆರ್ಥಿಕತೆ ಮತ್ತು ಸ್ವಾವಲಂಬನೆಯ ಮಾರ್ಗಗಳಲ್ಲಿ ಉಲ್ಲೇಖವಾಗಿರುವುದೂ ಇಂಥದ್ದೇ ಸಾಂಸ್ಕೃತಿಕ ಬೇರುಗಳು. ನೂರಾರು ಭಾಷೆಗಳು ಮತ್ತು ಸಂಸ್ಕೃತಿಗಳಿಂದ ತುಂಬಿದ್ದರೂ ಯಾವುದನ್ನು ಒಂದು ಸಂಗತಿ ಬೆಸೆದಿದೆಯೋ ಆ ಬಂಧದೆಡೆಗೆ ಸಾಗುವುದೇ ಆತ್ಮನಿರ್ಭರದೆಡೆಗೆ ಸಾಗುವ ಮಾರ್ಗ ಎಂಬುದು ಈ ಚಿಂತಕರ ಅಭಿಪ್ರಾಯ. ಮುಂದೆ ಅದನ್ನು ಮತ್ತಷ್ಟು ಪ್ರಬಲವಾಗಿ ಮಂಡಿಸಿದ್ದವರು ಧರ್ಮಪಾಲ್‌ ಮತ್ತು ದತ್ತೋಪಂಥ ಠೇಂಗಡಿಯವರು.
ರಕ್ಷ ಣಾ ಪಡೆಗಳಲ್ಲಿ ಸ್ವಾವಲಂಬನೆಯೆಂದರೇನು? ಅತ್ಯಾಧುನಿಕ ಶಸ್ತ್ರಗಳು, ಹಡಗುಗಳು, ಸ್ವದೇಶಿ ವಿಮಾನಗಳ ತಯಾರಿ, ಸೈನಿಕರ ಸಂಖ್ಯೆಯಲ್ಲಿ ಹೆಚ್ಚಳ. ಆದರೆ ಅದಕ್ಕಿಂತಲೂ ಕೊಂಚ ಮುಂದೆ ಸಾಗಬೇಕಾದ ಸಂಗತಿ ಕೂಡಾ ಇದೆ. ಸ್ವಾವಲಂಬಿಯಾಗಿ, ಆರ್ಥಿಕವಾಗಿ ಬಲಾಢ್ಯವಾಗಿರುವ ಸೈನ್ಯ ಮುಂದೇನು ಮಾಡಬೇಕು? ಸೈನಿಕ ಸಮಸ್ಯೆಗಳನ್ನು ರಾಜತಾಂತ್ರಿಕವಾಗಿ ನಿಭಾಯಿಸುವ ಈ ಸಂದರ್ಭದಲ್ಲಿ ಸೈನ್ಯ ಸ್ವಾವಲಂಬಿಯಾಗದಿದ್ದರೆ ತಾನೇ ಏನು? ಹೆಚ್ಚೆಂದರೆ ಶಸ್ತ್ರಾಸ್ತ್ರಗಳ ರಫ್ತು ಮಾಡಬಹುದು. ಇತಿಹಾಸದಲ್ಲಿ ಎಂದೂ ಮತ್ತೊಂದು ದೇಶದತ್ತ ಆಕ್ರಮಣ ಮಾಡದ ಭಾರತೀಯ ಸೇನೆ ಏನು ಮಾಡಬೇಕು? ಮಾನವೇತಿಹಾಸದಲ್ಲಿ ಜಗತ್ತು ಶಕ್ತಿಗೆ ತಲೆಬಾಗುತ್ತದೆ ಎಂಬುದೇನೋ ಸರಿ. ಆದರೆ ಶಕ್ತಿಯ ಪ್ರದರ್ಶನ ವ್ಯತಿರಿಕ್ತವಾಗುವ ಸಂದರ್ಭವೂ ಇದೆಯಷ್ಟೇ. ಆದರೆ ಸಾಂಸ್ಕೃತಿಕ ರಾಷ್ಟ್ರವಾದದ ಪರಿಸ್ಥಿತಿಯಲ್ಲಿ ಇದು ವ್ಯತಿರಿಕ್ತ ಆಥವಾ ಅತಿರೇಕಕ್ಕೆ ಹೋಗದು. ಬದಲಿಗೆ ಶ್ರೇಷ್ಠವಾದ ಚಿಂತನೆಯೊಂದಕ್ಕೆ ಕಾರಣವಾಗಬಹುದು. ಜಗತ್ತಿನ ಎಲ್ಲೆಲ್ಲಿ ಅನ್ಯಾಯ, ಅಕ್ರಮ ನಡೆಯುತ್ತವೆಯೋ, ಎಲ್ಲೆಲ್ಲಿ ಧರ್ಮಕ್ಕೆ ಘಾಸಿಯಾಗುವುದೋ ಅಂಥಲ್ಲಿ ಭಾರತದ ಶಕ್ತಿ ವಿಶ್ವಶಾಂತಿಯನ್ನು ನಿರ್ಮಾಣ ಮಾಡಬಹುದು. ಅದು ಯುಗದ ಆವಶ್ಯಕತೆಯೂ ಹೌದು.
ಆಧುನಿಕ ಯುಗದಲ್ಲಿ ಭಾರತೀಯ ಸೇನೆ ವಿಶ್ವ ಶಾಂತಿಪಾಲನಾ ಪಡೆಗೆ ಅತೀ ದೊಡ್ಡ ಕೊಡುಗೆಯನ್ನೇ ನೀಡಿದೆ. ಇಂದು ಜಗತ್ತಿನ ಯಾವ ರಾಷ್ಟ್ರವೂ ದೊಡ್ಡಣ್ಣನ ಸ್ಥಾನ ತುಂಬಬಲ್ಲ ಸ್ಥಿತಿಯಲ್ಲಿ ಇಲ್ಲ. ಆರ್ಥಿಕ ಬಲಾಢ್ಯ ರಾಷ್ಟ್ರಗಳಿಗೂ ಅವು ಸಾಧ್ಯವಿಲ್ಲ. ಶಕ್ತ ನಾಯಕತ್ವವೊಂದೇ ಅದನ್ನು ಈಡೇರಿಸಬಲ್ಲದು. ಸದ್ಯದ ಪರಿಸ್ಥಿತಿಯಲ್ಲಿ ಅಂಥಾ ನಾಯಕತ್ವ ಜಗತ್ತಿನ ಮುಂದಿರುವುದು, ಕಾಣಿಸುತ್ತಿರುವುದು ನರೇಂದ್ರ ಮೋದಿಯವರ ನಾಯಕತ್ವದಲ್ಲಿ. ಮೋದಿಯವರ ನಾಯಕತ್ವವನ್ನು ವಿಶ್ವವೇ ಒಪ್ಪಿಕೊಂಡಿದೆ, ಬಹುತೇಕ ರಾಷ್ಟ್ರಗಳು ಭಾರತದ ಸ್ನೇಹಕ್ಕೆ ಹಾತೊರೆಯುತ್ತಿವೆ. ಸೈನಿಕ ಶಕ್ತಿಯ ಸ್ವಾವಲಂಬನೆ ಅದನ್ನು ಈಡೇರಿಸಬಹುದು. ಇದೇ ಚಿಂತನೆ ಇತರ ಕ್ಷೇತ್ರಗಳಿಗೂ ಅನ್ವಯಿಸುತ್ತದೆ.
ಭಾರತದ ಗ್ರಾಮಗಳು ಆರ್ಥಿಕವಾಗಿ ಸಬಲೀಕರಣವಾದರೆ ಅರ್ಥ ವ್ಯವಸ್ಥೆ ಅಭಿವೃದ್ಧಿ ಹೊಂದುತ್ತದೆ ಎಂಬ ಚಿಂತನೆಯನ್ನು ಹಲವು ತಜ್ಞರು ಮಂಡಿಸಿದ್ದಾರೆ. ಆರೆಸ್ಸೆಸ್‌ನ ಗ್ರಾಮ ವಿಕಾಸ ಅನೇಕ ವರ್ಷಗಳಿಂದ ದೇಶಾದ್ಯಂತ ಅದನ್ನು ಸಾಕಾರಗೊಳಿಸುತ್ತಿದೆ. ಅಣ್ಣಾ ಹಜಾರೆಯಂಥವರು ಸಂಪೂರ್ಣ ಒಂದು ಜಿಲ್ಲೆಯನ್ನೇ ಮಾದರಿಯನ್ನಾಗಿ ಮಾಡಿದ್ದಾರೆ. ನಾನಾಜಿ ದೇಶಮುಖರ ಗೋಂಡಾ ಜಿಲ್ಲೆ ಇದಕ್ಕೆ ಉದಾಹರಣೆ. ಒಂದು ಗ್ರಾಮ ಆರ್ಥಿಕ ಸಬಲವಾಗುವುದೆಂದರೆ ಸಂಸ್ಕಾರವಂತರಾಗುವುದು ಎಂಬ ಅರ್ಥವೂ ದೇಶೀ ಚಿಂತನೆಯಲ್ಲಿದೆ. ಜಾತೀಯತೆ ಮುಕ್ತವಾದ, ಸಹಕಾರ ತತ್ವದಡಿಯಲ್ಲಿ ನಡೆಯುವ ಕುಟುಂಬಗಳ ಹೆಚ್ಚಳವೂ ಗ್ರಾಮ ವಿಕಾಸದಲ್ಲಿ ಇದೆ. ಗ್ರಾಮಗಳು ಹೀಗೆ ಬೆಳೆಯುವುದು ಸರಕಾರ ನೀಡುವ ಅನುದಾನಗಳಿಂದಲ್ಲ. ಪ್ರಬಲ ಇಚ್ಛಾಶಕ್ತಿಯಿಂದ. ಆ ಇಚ್ಛಾಶಕ್ತಿಯೇ ಆತ್ಮನಿರ್ಭರತೆ.
ಹಾಗೆಯೇ ಸೇವಾ ಕ್ಷೇತ್ರದ ಬೆಳವಣಿಗೆಯಿಂದ ಜಿಡಿಪಿಗೆ ಹೆಚ್ಚಿನ ಕೊಡುಗೆ ಇದೆ. ಆದರೆ ಇದು ಆರ್ಥಿಕತೆಗೆ ಪೂರಕ ವಾತಾವರಣ ಸೃಷ್ಟಿಸುವುದಿಲ್ಲ ಹಾಗೂ ಬೇರೆ ದೇಶಗಳ ಮೇಲಿನ ಅವಲಂಬನೆ ಹೆಚ್ಚಿಸುತ್ತದೆ. ಕೃಷಿ ಮತ್ತು ಕೈಗಾರಿಕೆಗಳಿಗೆ ಪೂರಕವಾಗಿ ಸೇವಾವಲಯ ಸೃಷ್ಟಿಯಾಗಬೇಕು. ಇದೂ ಕೂಡಾ ಸಮಾಜದ ತಳಮಟ್ಟದಿಂದ ಆರಂಭವಾಗಬೇಕಾಗಿದೆ. ಇವೆಲ್ಲಕ್ಕೂ ಉತ್ತರ ಕುಟುಂಬಗಳಲ್ಲಿ, ಶಿಕ್ಷಣ ವ್ಯವಸ್ಥೆಯಲ್ಲಿ, ದೇಶ ಮೊದಲು ಎಂಬ ತತ್ವದಲ್ಲಿ ಅಡಕವಾಗಿದೆ. ಕೃಷಿ ಕ್ಷೇತ್ರದಲ್ಲಿ ಕಳೆದ 30 ವರ್ಷಗಳ ಹಿಂದೆ ಬಿತ್ತನೆ ಬೀಜ ಮತ್ತು ಗೊಬ್ಬರಗಳಲ್ಲಿ ಸುಧಾರಣೆ ತಂದು ಹಸಿರು ಕ್ರಾಂತಿ ಆರಂಭಿಸಿ ಉತ್ಪಾದನೆ ಹೆಚ್ಚಿಸಿದ ಉದಾಹರಣೆಯಿದೆ. ಆದರೆ ಅದು ಸೃಷ್ಟಿಸಿದ ಪಾಶ್ರ್ವ ಪರಿಣಾಮಗಳೇ ಅಧಿಕ. ಅಂದರೆ ಅನುದಾನ ಒಂದರಿಂದಲೇ ಎಲ್ಲವನ್ನೂ ಸಾಧಿಸಲಾಗುವುದಿಲ್ಲ ಎಂಬುದಕ್ಕೆ ಹಸಿರು ಕ್ರಾಂತಿ ಸಾಕ್ಷಿ. ಇವತ್ತಿನ ಕೃಷಿ ಬೆಳವಣಿಗೆಗೆ ಭಾರತದಲ್ಲಿ ಅನೇಕ ಸವಾಲುಗಳಿವೆ. ತುಂಡಾದ ಭೂಮಿ, ಭೌಗೋಳಿಕ ವಿಶೇಷತೆ, ಉಷ್ಣಾಂಶ ಬದಲಾವಣೆ, ಮಣ್ಣಿನ ಫಲವತ್ತತೆ, ನೀರಾವರಿ, ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರ, ತಂತ್ರಜ್ಞಾನದ ಅಳವಡಿಕೆ, ಮಾನವ ಸಂಪನ್ಮೂಲಗಳು ಕೂಡಾ ಪ್ರಮುಖ ಪಾತ್ರ ವಹಿಸುತ್ತವೆ. ಬೆಂಬಲ ಬೆಲೆ, ಮಾರುಕಟ್ಟೆ ವ್ಯವಸ್ಥೆ, ಶೇಖರಣಾ ಘಟಕಗಳು, ಆಹಾರ ಸಂಸ್ಕರಣಾ ಘಟಕಗಳ ಅವಶ್ಯಕತೆ ಹೆಚ್ಚಾಗಿ ಕಾಣಿಸುತ್ತಿವೆ. ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಕೆಗೆ ತುಂಡಾದ (ವಿಭಜಿತ) ಭೂಮಿಗಳು ತೊಡಕಾಗುತ್ತಿವೆ. ಆದರೆ ಭಾರತೀಯ ಕೃಷಿ ಸಂಸ್ಕೃತಿಯಲ್ಲಿ ಮೊದಲಿದ್ದ ಸಹಕಾರಿ ತತ್ವ ಇದಕ್ಕೆ ಉತ್ತರವಾಗಬಲ್ಲದು. ಭಾರತದ ಕೃಷಿ ಆಮೂಲಾಗ್ರ ಪರಿವರ್ತನೆಗೆ ಒಳಗಾಗಬೇಕಾಗಿದೆ.
ಕೊರೊನಾ ಪರಿಸ್ಥಿತಿಯಿಂದ ಉದ್ಯೋಗ ಕಳೆದುಕೊಂಡ ವಲಸೆ ಕಾರ್ಮಿಕ ವಲಯ ಹಳ್ಳಿಗಳತ್ತ ಮುಖ ಮಾಡಿವೆ. ಅನೇಕರು ನಗರ ಬಿಟ್ಟು ಗ್ರಾಮ ಸೇರಿದ್ದು, ಗ್ರಾಮ ಆಧಾರಿತ ಆರ್ಥಿಕತೆಗೆ ಒತ್ತನ್ನು ನೀಡಬೇಕಾದರೆ ಗ್ರಾಮದಲ್ಲಿ ಕೃಷಿ ಮೇಲಿನ ಅವಲಂಬನೆ ಕಡಿಮೆ ಮಾಡಲೇಬೇಕಾಗಿದೆ. ಕೃಷಿ ಆಧಾರಿತ ಸಣ್ಣ ಕೈಗಾರಿಕೆಗಳು ಇದಕ್ಕೆ ಪರಿಹಾರ ನೀಡಬಲ್ಲದು. ಇದಕ್ಕೆ ಪೂರಕವಾಗಿ ಎಂಎಸ್‌ಎಂಇಗಳನ್ನು ತೆರೆಯಲು ಕೇಂದ್ರ ಸರಕಾರ ಸಾಲ ಸೌಲಭ್ಯ ಒದಗಿಸಲು ಮುಂದಾಗಿರುವುದು ಉದ್ಯೋಗ ಸೃಷ್ಟಿ ಹಾಗೂ ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ಅನುಕೂಲವಾಗುವುದರ ಜೊತೆಗೆ ಸ್ವದೇಶಿ ವಸ್ತುಗಳ ಬಳಕೆ ಉತ್ತೇಜಕ್ಕೂ ಸಹಾಯವಾಗುತ್ತದೆ. ಅಂತಿಮವಾಗಿ ಇವೆಲ್ಲವೂ ಸಾಕಾರವಾಗುವುದು ಜನರಿಂದ. ಆತ್ಮನಿರ್ಭರತೆಯ ಧ್ಯಾನದಿಂದ. ಜನತೆಯ ಸ್ಪಂದನೆಯಿಂದ. ಸ್ವದೇಶಿ ವಸ್ತುಗಳ ಬಳಕೆಗೆ ಒತ್ತು ನೀಡುವುದರಿಂದ. ಅದನ್ನು ಎಷ್ಟು ಶ್ರದ್ಧೆಯಿಂದ ಕಾರ್ಯರೂಪಕ್ಕೆ ತರುತ್ತೇವೋ ಅಷ್ಟೇ ಗುಣಮಟ್ಟವನ್ನು ಕಾಪಾಡಿಕೊಳ್ಳುವುದೂ ಅಷ್ಟೇ ಮುಖ್ಯ. ಮೋದಿ ಘೋಷಣೆಯನ್ನು ಶೀಘ್ರವಾಗಿ ಜಾರಿಗೆ ತರುವ ಭರದಲ್ಲಿ ನಕಲು ಕ್ರಮಗಳನ್ನು ಕೈಗೊಂಡರೆ ಯಾವ ಘೋಷಣೆಯೂ ಸಫಲವಾಗದು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top