ಮಂದಿರವೆಂಬುದು ಸ್ಥಾವರವಲ್ಲ, ಮೌಲ್ಯಗಳ ಪ್ರತೀಕ

ಪ್ರತಿಪಕ್ಷದಲ್ಲೂ ಕೇಳಿಬಂತು ರಾಮನೇ ರಾಷ್ಟ್ರೀಯ ಏಕತೆಯ ಸಂಕೇತ ಎಂಬ ಒಕ್ಕೊರಲ ದನಿ
– ಹರಿಪ್ರಕಾಶ್‌ ಕೋಣೆಮನೆ.

‘‘ಶ್ರೀ ರಾಮನ ಗುಣಸಂಪನ್ನತೆಯು ಇಡೀ ಭರತ ಖಂಡಕ್ಕೆ ಏಕತೆಯ ಸಂದೇಶವನ್ನು ಸಾರಿತ್ತು. ಭಾರತವಷ್ಟೇ ಏಕೆ, ಇಡೀ ವಿಶ್ವದ ನಾಗರಿಕತೆಯಲ್ಲಿ ರಾಮನ ಹೆಜ್ಜೆಗುರುತುಗಳನ್ನು ಅಳಿಸಲಾಗದು. ಶ್ರೀರಾಮ ಎಲ್ಲರಿಗೂ ಸೇರಿದವನು. ಆತ ಮರ್ಯಾದಾ ಪುರುಷೋತ್ತಮನೇ ಹೌದು…,’’
-ಕಾಂಗ್ರೆಸ್‌ನ ವರಿಷ್ಠ ಮುಖಂಡರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ರಾಮಭಜನೆ ಮಾಡುತ್ತಿರುವ ಪರಿ ಇದು.
ನಿಸ್ಸಂದೇಹವಾಗಿ ಇದೊಂದು ಒಳ್ಳೆಯ ಬೆಳವಣಿಗೆ. ಅಜಮಾಸು ಮೂವತ್ತು ವರ್ಷಗಳ ನಂತರ ಕಾಂಗ್ರೆಸ್‌ನ ಬಹುತೇಕ ನಾಯಕರು ಅಯೋಧ್ಯೆಯ ಶ್ರೀ ರಾಮನನ್ನು ಒಪ್ಪಿಕೊಂಡಿದ್ದಾರೆ, ಅಪ್ಪಿಕೊಂಡಿದ್ದಾರೆ. ತಾಳ್ಮೆ, ತ್ಯಾಗ, ಸರಳತೆ, ಧೈರ್ಯದ ಸಂಕೇತವಾದ ರಾಮ, ತನ್ನ ಆದರ್ಶಗಳಿಗಾಗಿ ಇಡೀ ಭರತ ವರ್ಷದ ಆಸ್ತಿ ಎಂಬ ಸಮರ್ಥನೆಯನ್ನೂ ಕಾಂಗ್ರೆಸ್‌ ಮುಖಂಡರೇ ನೀಡುತ್ತಿದ್ದಾರೆ. ರಾಮಾಯಣ ಮತ್ತು ಶ್ರೀ ರಾಮನ ಅಸ್ತಿತ್ವದ ಬಗ್ಗೆ ಯಾವುದೇ ಐತಿಹಾಸಿಕ ಪುರಾವೆ ಇಲ್ಲ ಎಂದು 2007ರಲ್ಲಿ ಸುಪ್ರೀಂಕೋರ್ಟಿಗೆ ಅಫಿಡವಿಟ್‌ ಸಲ್ಲಿಸಿದ್ದ ಈ ದೇಶದ ಪ್ರಮುಖ ರಾಜಕೀಯ ಪಕ್ಷದ ಮುಖಂಡರು, ಪ್ರಭು ರಾಮನೇ ರಾಷ್ಟ್ರೀಯ ಏಕತೆಯ ಸಂಕೇತ ಎನ್ನುವುದು ಸಾಮಾನ್ಯ ಸಂಗತಿಯಲ್ಲ.
ನನ್ನ ದೃಷ್ಟಿಯಲ್ಲಿ ಇದು ರಾಮಮಂದಿರಕ್ಕೆ ಗುದ್ದಲಿ ಪೂಜೆ ಮಾಡಿದಷ್ಟೇ ಮಹತ್ವದ ಬೆಳವಣಿಗೆ. ಕಾಂಗ್ರೆಸ್‌ ಮಾತ್ರವಲ್ಲ, ಬೆರಳೆಣಿಕೆ ಪಕ್ಷಗಳನ್ನು ಹೊರತು ಪಡಿಸಿ, ಭಾರತದ ಬಹುತೇಕ ರಾಜಕೀಯ ಪಕ್ಷಗಳು ಕೂಡ ರಾಮನ ಆದರ್ಶದ ಕುರಿತ ನಂಬಿಕೆಗೆ ನಮೋ ಎಂದಿವೆ. ಇದನ್ನು ಜ್ಞಾನೋದಯ ಎಂದಾದರೂ ಹೇಳೋಣ, ಭಾರತೀಯರ ನಂಬಿಕೆಯನ್ನು ತಡವಾಗಿಯಾದರೂ ಗೌರವಿಸುವ ನಡೆ ಎಂದಾದರೂ ಭಾವಿಸೋಣ ಅಥವಾ ವಾಸ್ತವಕ್ಕೆ ಕಣ್ಣು ಕಿವಿಯಾಗುವ ಮೂಲಕ ಮನದಾಳದಲ್ಲಾದ ಬದಲಾವಣೆ ಎಂದಾದರೂ ಗ್ರಹಿಸಿಕೊಳ್ಳೋಣ. ಇನ್ನು ಬಾಕಿ ಉಳಿಯುವುದು ಎಂಐಎಂನ ಅಸಾದುದ್ದೀನ್‌ ಓವೈಸಿ,ಆತನ ಸಹೋದರ ಮತ್ತು ಅವರ ವಿಚಾರಧಾರೆಯವರು ಮಾತ್ರ. ಅವರಿಗೂ ಶ್ರೀರಾಮನ ಪಾರಾಯಣ ಸರಿದಾರಿಗೆ ತರಲಿ ಎಂದು ಭಾವಿಸಿ, ಮುನ್ನಡೆಯೋಣ. ಎದುರಾಳಿ ಗುಣವನ್ನು ಗೌರವಿಸಿದ ಗುಣಗ್ರಾಹಿತನ ಎಂಬುದು ರಾಮನೇ ಕಲಿಸಿದ ಪಾಠ.

ಕಾಂಗ್ರೆಸ್‌ಗೆ ಗೊಂದಲವೇಕಿತ್ತು?
ರಾಮನ ಅಸ್ತಿತ್ವ ಪ್ರಶ್ನಿಸಿದ ತನ್ನ ಹಿಂದಿನ ನಡೆಯನ್ನು ಎಲ್ಲರೂ ಮರೆಯಲಿ ಎಂಬಷ್ಟರ ಮಟ್ಟಿಗೆ ರಾಮನ ಆದರ್ಶದ ಕುರಿತು ಮಾತನಾಡುತ್ತಿರುವ ಕಾಂಗ್ರೆಸ್‌, ನಿನ್ನೆ ಮೊನ್ನೆಯವರೆಗೆ ರಾಮನ ವಿಷಯದಲ್ಲಿ ಗೊಂದಲ ನಿಲುವು ಹೊಂದಿತ್ತೇಕೆ ಎಂಬುದರ ಕುರಿತು ಅಚ್ಚರಿಪಡಬೇಕಾಗಿಲ್ಲ. ಆ ಪಕ್ಷ ರಾಮಮಂದಿರ ನಿರ್ಮಾಣವನ್ನು ವಿರೋಧಿಸಿಕೊಂಡು ಬಂದಿದ್ದು ಏಕೆ ಎಂಬುದನ್ನು ವರ್ತಮಾನದಲ್ಲಿ ನಿಂತು ಯೋಚಿಸಿದರೆ ಉತ್ತರ ಸಿಗಲಾರದು.
ಕಾಂಗ್ರೆಸ್‌ನ ಗೊಂದಲಕಾರಿ ನಿಲುವನ್ನು ಅರ್ಥಮಾಡಿಕೊಳ್ಳಬೇಕಾದರೆ ಇತಿಹಾಸದ ಪುಟಗಳಿಗೆ ಹೊರಳಬೇಕು. ಒಂದು ಸಮುದಾಯವನ್ನು ಓಲೈಸಲು ಇನ್ನೊಂದು ಸಮುದಾಯವನ್ನು, ಅದರ ನಂಬಿಕೆಗಳನ್ನು ನಿರಾಕರಿಸುವುದು, ಅಲ್ಪಸಂಖ್ಯಾತ ಸಮುದಾಯದ ಮೂಲಭೂತವಾದಿಗಳಿಗೆ ಮಣೆಹಾಕುವ ತುಷ್ಟೀಕರಣ ಎಂಬುದು ಸೇರಿದಂತೆ, ಆ ಪಕ್ಷ ಅನುಸರಿಸಿಕೊಂಡು ಬಂದಿರುವ ನೀತಿಗಳಲ್ಲಿಯೇ ಎಲ್ಲವೂ ಅಡಗಿದೆ.
ಆ ನಿಟ್ಟಿನಲ್ಲಿ ಇತಿಹಾಸದ ಎರಡು ಪ್ರಮುಖ ಘಟನೆಗಳಾದ, ಭಾರತದಲ್ಲಿ ಮುಸ್ಲಿಂ ಲೀಗಿನ ಉದಯ ಹಾಗೂ ಖಿಲಾಫತ್‌ ಚಳವಳಿಯ ಹುಟ್ಟಿನ ಕುರಿತು ಅವಲೋಕಿಸೋಣ. 1906ರಲ್ಲಿ ಮುಸ್ಲಿಂಲೀಗ್‌ ಆರಂಭಗೊಂಡ ಇತಿಹಾಸ ಗೊತ್ತೇ ಇದೆ. ಅದರ ಮೂಲ ಉದ್ದೇಶ ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ಅದು ವೆರಿ ಸಿಂಪಲ್‌. ಲಾಲ್‌-ಬಾಲ್‌-ಪಾಲ್‌ ಎಂದೇ ಖ್ಯಾತರಾಗಿದ್ದ ಲಾಲಾ ಲಜಪತರಾಯ್‌, ಬಾಲಗಂಗಾಧರ ತಿಲಕ್‌, ಬಿಪಿನ್‌ಚಂದ್ರ ಪಾಲ್‌ ಅವರಂಥ ಕಾಂಗ್ರೆಸ್‌ ನಾಯಕರು ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸುತ್ತಿದ್ದ ಕಾಲವದು. ಈ ಎಲ್ಲ ಕಾಂಗ್ರೆಸ್‌ ನಾಯಕರು ಪ್ರಖರ ಸಾಂಸ್ಕೃತಿಕ ರಾಷ್ಟ್ರವಾದದ ಪ್ರತಿಪಾದಕರೇ ಆಗಿದ್ದರು.
ತಿಲಕರಂತೂ ಗಣೇಶೋತ್ಸವವನ್ನು ಸಾರ್ವಜನಿಕ ಉತ್ಸವವನ್ನಾಗಿಸಿ, ಅದನ್ನೂ ಸ್ವಾತಂತ್ರ್ಯ ಹೋರಾಟದ ಅಸ್ತ್ರವನ್ನಾಗಿಸಿಕೊಂಡವರು. ಈ ಎಲ್ಲ ಕಾರಣಗಳಿಂದಲೋ ಏನೋ, ಇಡೀ ಕಾಂಗ್ರೆಸ್‌ ಪಕ್ಷವೇ ಹಿಂದುಗಳ ಪಕ್ಷದಂತೆ ಮುಸ್ಲಿಂ ಮುಖಂಡರಿಗೆ ಭಾಸವಾಗುತ್ತಿತ್ತು. ಸಾಂಸ್ಕೃತಿಕ ರಾಷ್ಟ್ರವಾದವನ್ನು ಈ ಮುಖಂಡರು ಗ್ರಹಿಸಿದ ರೀತಿಯೇ ಸರಿ ಇರಲಿಲ್ಲ.
ಇದೇ ಭಾರತದಲ್ಲಿ ಮುಸ್ಲಿಂಲೀಗ್‌ನ ಉದಯಕ್ಕೆ ಮೂಲ ಕಾರಣವಾಯಿತು. ಕೆಲವು ಇತಿಹಾಸಕಾರರು ವಿಶ್ಲೇಷಿಸುವ ಪ್ರಕಾರ, ಅಧಿಕಾರ ದಾಹಕ್ಕಾಗಿ ಮುಸ್ಲಿಂಲೀಗ್‌ ಜನ್ಮತಾಳಿತು. ಹಾಗಾಗಿಯೇ ಏನೋ, ಮುಸ್ಲಿಮರೆಲ್ಲ ಒಂದಾಗಿ ಬ್ರಿಟಿಷರ ವಿರುದ್ಧ ಧ್ವನಿ ಮೊಳಗಿಸಬೇಕೆಂದು ಕರೆ ನೀಡಿದ್ದ ಲೀಗ್‌, ಅದೇ ದನಿಯಲ್ಲಿ ಪ್ರತ್ಯೇಕ ರಾಷ್ಟ್ರದ ಬೇಡಿಕೆಯನ್ನೂ ಮುಂದಿಟ್ಟಿದ್ದರು. ಅಂತಿಮವಾಗಿ ಭಾರತ ವಿಭಜನೆಗೊಂಡು ಪಾಕಿಸ್ತಾನ ಎಂಬ ಹೊಸದೊಂದು ದೇಶದ ಹುಟ್ಟಿನಲ್ಲಿ ಪರ್ಯವಸಾನವಾಯಿತು. ಧರ್ಮದ ಆಧಾರದ ಮೇಲೆ ಪ್ರತ್ಯೇಕ ರಾಷ್ಟ್ರ ಸಲ್ಲದು ಎನ್ನುತ್ತಿದ್ದ ಕಾಂಗ್ರೆಸ್‌ ಕಡೆಗೆ ಮುಸ್ಲಿಂಲೀಗ್‌ ಎದುರು ಅಸಹಾಯಕವಾಯಿತು.
ಅಂತಹ ಮತ್ತೆರಡು ಘಟನೆಗಳು, ಖಿಲಾಫತ್‌ ಮತ್ತು ಅಸಹಕಾರ ಚಳವಳಿ. 1919ನೇ ನವೆಂಬರ್‌ 23ರಂದು ಖಿಲಾಫತ್‌ ಚಳವಳಿ ಸಂಬಂಧ ದಿಲ್ಲಿಯಲ್ಲಿ ಮೊದಲ ಸಭೆ ನಡೆಯಿತು. ಭಾರತದ ಇತಿಹಾಸದಲ್ಲಿ ಅದೊಂದು ಕರಾಳ ಅಧ್ಯಾಯದ ಆರಂಭ. ಗಾಂಧೀಜಿ ಕೈಗೊಂಡಿದ್ದ ಅಂಹಿಸಾತ್ಮಕ ಸ್ವಾತಂತ್ರ್ಯ ಚಳವಳಿ ಧಿಕ್ಕರಿಸಿದ್ದು ಮಾತ್ರವಲ್ಲ, ಭಾರತದ ಐಕ್ಯತೆಗೇ ಭಂಗ ತರುವ ವಿಷ ಬೀಜವೊಂದು ಮೊಳಕೆಯೊಡೆಯಲು ಆ ಸಭೆ ಕಾರಣವಾಯಿತು. ಪ್ರಥಮ ಮಹಾಯುದ್ಧದ ನಂತರ 1919ರಲ್ಲಿ ಟರ್ಕಿ ಸುಲ್ತಾನನ್ನು ಬ್ರಿಟನ್‌ ಪದಭ್ರಷ್ಟನನ್ನಾಗಿ ಮಾಡಿದ್ದು ಭಾರತೀಯ ಮುಸಲ್ಮಾನರು ದಂಗೆ ಏಳುವುದಕ್ಕೆ ಕಾರಣ. ಈ ನೆಲದಿಂದ ಸಾವಿರಾರು ಮೈಲಿ ದೂರದಲ್ಲಿರುವ ಟರ್ಕಿಯ ವಿದ್ಯಮಾನದ ವಿರುದ್ಧ ಭಾರತೀಯ ಮುಸ್ಲಿಮರು ಸಿಡಿದೆದ್ದರು, ಅದೂ ಭಾರತೀಯ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ! ಎಲ್ಲಿಯ ಟರ್ಕಿ? ಎಲ್ಲಿಯ ಭಾರತ !
ವಾಸ್ತವದಲ್ಲಿ ದುರುಳ ಆಡಳಿತಗಾರನಾಗಿದ್ದ ಸುಲ್ತಾನ ಸ್ವತಃ ಟರ್ಕಿಯವರಿಗೂ ಬೇಡವಾಗಿದ್ದ. ಆದರೆ ಭಾರತೀಯ ಮುಸಲ್ಮಾನರ ಪಾಲಿಗೆ ಆತ ಧರ್ಮಗುರು ಖಲೀಫನಾಗಿ ಕಂಡಿದ್ದ. ಮುಂದೆ, 1921ರಲ್ಲಿ ಕೇರಳದಲ್ಲಿ ನಡೆದ ಮಾಪಿಳ್ಳೆ ಹತ್ಯಾಕಾಂಡ ಅಥವಾ ಮೋಪ್ಲಾ ಹತ್ಯಾಕಾಂಡಕ್ಕೆ ಖಿಲಾಫತ್‌ ಚಳವಳಿಯೇ ಕಾರಣ ಎನ್ನುತ್ತಾರೆ ಇತಿಹಾಸಕಾರರು.
ಇಂಥದ್ದೊಂದು ಚಳವಳಿಗೆ, ಆಗ ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸುತ್ತಿದ್ದ ಮಹಾತ್ಮ ಗಾಂಧೀಜಿ ಸಾಥ್‌ ನೀಡಿದ್ದರು. ಆ ದಿನಗಳಲ್ಲಿಯೇ ಗಾಂಧೀಜಿ ಅವರು ಸ್ವಾತಂತ್ರ್ಯಕ್ಕಾಗಿ ಅಹಿಂಸಾತ್ಮಕ ಹೋರಾಟವನ್ನು ಶುರು ಮಾಡಿದ್ದರು. ಹೀಗೆ ಗಾಂಧೀಜಿಯವರು ಅಸಹಕಾರ ಚಳವಳಿ ಜತೆ ಖಿಲಾಫತ್‌ ಹೋರಾಟಕ್ಕೆ ಕೈ ಜೋಡಿಸಿದ ಬಳಿಕವೂ ಕೇರಳಲ್ಲಿ ಹಿಂಸಾಚಾರ ನಿಲ್ಲುವುದಿಲ್ಲ. ಗಾಂಧೀಜಿ ಅಹಿಂಸಾತ್ಮಕ ಹೋರಾಟದ ಬಗ್ಗೆ ಮಾತನಾಡುತ್ತಿದ್ದ ಕಾರಣಕ್ಕೆ ಗಾಂಧೀಜಿಯವರ ನೇತೃತ್ವವನ್ನು ಖಿಲಾಪತಿಗಳು ಒಪ್ಪಿಕೊಳ್ಳುವುದಿಲ್ಲ. ಮುಂದೆ ದೇಶ ವಿಭಜನೆಯಂತಹ ಅನಪೇಕ್ಷಿತ ಬೆಳವಣಿಗೆ ನಡೆದದ್ದು ಗೊತ್ತೇ ಇದೆ. ಇತಿಹಾಸಕಾರ ಡಾ. ಕೆ. ಎಲ್‌.ಮೂರ್ತಿ ಅವರ ‘ದಿ ಪಾರ್ಟಿಶನ್‌ ಆಫ್‌ ಇಂಡಿಯಾ’ ಪುಸ್ತಕದಲ್ಲಿ ಉಲ್ಲೇಖಿಸಿರುವ ಪ್ರಕಾರ 1919ರ ಅಸಹಕಾರ ಚಳವಳಿಯ ಹುಟ್ಟಿಗೆ ಖಿಲಾಫತ್‌ ಚಳವಳಿಯ ಒತ್ತಡವೇ ಕಾರಣವಾಗಿತ್ತಂತೆ. ಅಂದರೆ, ರಾಷ್ಟ್ರೀಯ ಕಾಂಗ್ರೆಸ್‌ನ ಆದ್ಯತೆ ಏನಾಗಿತ್ತು ? ನೀವೇ ಯೋಚಿಸಿ.
ಇಷ್ಟಾದರೂ ನವಭಾರತವನ್ನು ಯಾವ ತಳಹದಿಯ ಮೇಲೆ ಕಟ್ಟಬೇಕೆಂದು ಆಗಿನ ನಾಯಕರಿಗೆ ತೋಚದೇ ಹೋದದ್ದು ದುರ್ದೈವ. ಲೇಖನದ ಆರಂಭದಲ್ಲಿ ಉಲ್ಲೇಖಿಸಿದ ಕಾಂಗ್ರೆಸ್‌ ಗೊಂದಲಕ್ಕೂ ಇದೇ ಮೂಲ ಎಂಬುದರಲ್ಲಿ ಯಾವ ಅನುಮಾನವೂ ಬೇಡ.

ಬಾಬರ್‌, ಔರಂಗಜೇಬ ಮತ್ತು ಬ್ರಿಟಿಷರು
ರಾಮಮಂದಿರ ನಿರ್ಮಾಣಕ್ಕಾಗಿ ನಡೆದ ಹೋರಾಟವನ್ನು ಈಗಲೂ ಕೆಲವರು ನಿರ್ದಿಷ್ಟ ಧರ್ಮದ ವಿರುದ್ಧ ಎಂದು ವ್ಯಾಖ್ಯಾನಿಸುತ್ತಾರೆ ಮತ್ತು ಇದನ್ನು ಭಾರತೀಯ ಮುಸ್ಲಿಮರು ಒಪ್ಪುತ್ತಲೇ ಬಂದಿದ್ದಾರೆ. ಯಾವುದೇ ಹೋರಾಟವನ್ನು ಈ ನೆಲೆಯಲ್ಲಿ ನೋಡುವುದು ಸಂಕುಚಿತವಾದ. ಭಾರತೀಯರು ಬ್ರಿಟಿಷರನ್ನು ವಿರೋಧಿಸಲು, ಅವರ ವಿರುದ್ಧ ತಕರಾರು, ಆಕ್ಷೇಪ ಹೊಂದಲು, ಅವರ ವಿರುದ್ಧ ಹೋರಾಟ ನಡೆಸಲು, ಬ್ರಿಟಿಷರ ಜಾತಿ ಕಾರಣವಾಗಿರಲಿಲ್ಲ . ಬ್ರಿಟಿಷರು ಆರ್ಥಿಕವಾಗಿ ಭಾರತವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ, ಸಾಂಸ್ಕೃತಿಕವಾಗಿ ದೇಶವನ್ನು ದುರ್ಬಲ ಮಾಡುತ್ತಿದ್ದಾರೆ, ಭಾರತವನ್ನು ದಾಸ್ಯದ ಸಂಕೋಲೆಗೆ ದೂಡುತ್ತಿದ್ದಾರೆ ಎಂಬ ಕಾರಣಕ್ಕಾಗಿ ಭಾರತೀಯರು ಬ್ರಿಟಿಷರ ವಿರುದ್ಧ ಹೋರಾಡಿದರು. ನಿಮಗೆ ಗೊತ್ತಿರಲಿ, ಬಾಬರ್‌, ಔರಂಗಜೇಬ್‌ ಮತ್ತು ಅವರ ವಂಶಸ್ಥರು ನಡೆಸಿದ ಶೋಷಣೆ ಮತ್ತು ದಾಸ್ಯ ಬ್ರಿಟಿಷರು ನಡೆಸಿದ ದಬ್ಬಾಳಿಕೆಗಿಂತಲೂ ಎಷ್ಟೋ ಸಾವಿರ ಪಟ್ಟು ಕರಾಳವಾದುದು. ಅನೇಕರಿಗೆ, ಅದರಲ್ಲೂ ವಿಶೇಷವಾಗಿ ಮುಸ್ಲಿಂ ಸಮುದಾಯದ ಬಹಳಷ್ಟು ಜನರಿಗೆ ಈ ಸ್ಪಷ್ಟತೆಯೇ ಇಲ್ಲ. ಈ ಸರಳ ಸಂಗತಿಯನ್ನು ಸ್ಪಷ್ಟ ಮಾಡಬೇಕಾದವರು ಕೂಡ ಅವರಿಗೆ ಸರಿಯಾಗಿ ತಿಳಿವಳಿಕೆ ಮೂಡಿಸಲೇ ಇಲ್ಲ. ಇಂದಿನ ಅನೇಕ ಗೊಂದಲಗಳಿಗೆ ಈ ಸಂಗತಿಯೂ ಕಾರಣ.
ಮುಖ್ಯವಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು, ಅದಕ್ಕಾಗಿ ನಡೆದ ಹೋರಾಟವನ್ನು ಭಾರತದ ಸಾಂಸ್ಕೃತಿಕ ಪುನರುತ್ಥಾನದ ದ್ಯೋತಕವಾಗಿ ನೋಡಬೇಕೇ ಹೊರತು, ಜಾತಿ ಮತಗಳ ಹಿನ್ನೆಲೆಯಲ್ಲಿ ಅಲ್ಲ. ಈ ದೃಷ್ಟಿಯಿಂದ ನೋಡಿದಾಗ ಮಾತ್ರ ಮಂದಿರಕ್ಕೆ ಭೂಮಿ ಪೂಜೆ ನೆರವೇರಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಮಂದಿರ ಚಳವಳಿಯನ್ನು ಭಾರತದ ಸ್ವಾತಂತ್ರ್ಯ ಚಳವಳಿಯೊಂದಿಗೆ ಸಮೀಕರಿಸಿದ್ದು ಏಕೆ ಎಂಬುದು ಅರ್ಥವಾಗುತ್ತದೆ. ಜಾತಿ, ಮತ, ಪಂಥ, ದೇಶಗಳ ಗಡಿ ಮೀರಿದ ರಾಮನ ವಿಶ್ವರೂಪ, ರಾಮನ ವಿರಾಟ್‌ರೂಪ, ಇಡೀ ಜಗತ್ತಿನೊಂದಿಗೆ ಬೆಸೆದುಕೊಂಡಿರುವ ರಾಮತತ್ವ ಮತ್ತು ಅದರ ಮಹತ್ವ ಸರಿಯಾಗಿ ಅರ್ಥವಾಗುತ್ತದೆ.

ಮಂದಿರ ಚಳವಳಿ, ಆಡ್ವಾಣಿ ದೃಷ್ಟಿಕೋನ
ಅಯೋಧ್ಯೆ ಮಂದಿರ ಚಳವಳಿ ಐದು ಶತಮಾನಗಳಷ್ಟು ಹಳೆಯದು ಎಂಬುದೇನೋ ಸರಿ. ಆದರೆ, ಆ ಚಳವಳಿಗೆ ವೇಗೋತ್ಕರ್ಷ ಸಿಕ್ಕಿದ್ದು, ಹೋರಾಟಕ್ಕೊಂದು ತಾತ್ವಿಕ ಹಾಗೂ ವೈಚಾರಿಕ ತಳಹದಿ ಸಿಕ್ಕಿದ್ದು ಮಾತ್ರ 1990ರ ದಶಕದಲ್ಲಿ. ಬಿಜೆಪಿ ಮುಖಂಡ ಲಾಲಕೃಷ್ಣ ಆಡ್ವಾಣಿ ಅವರ ನೇತೃತ್ವದಲ್ಲಿ ನಡೆದ ಹೋರಾಟ ಕಡೆಗೂ ತಾರ್ಕಿಕ ಸುಖಾಂತ್ಯ ಕಂಡಿದೆ.
ಹೀಗಾಗಿ ಮಂದಿರಕ್ಕೆ ಭೂಮಿ ಪೂಜೆ ನಡೆಯುವ ಸಂದರ್ಭದಲ್ಲಿ ಆಡ್ವಾಣಿ ಪ್ರತ್ಯಕ್ಷ ಅನುಪಸ್ಥಿತಿ ಬಹಳಷ್ಟು ಜನರನ್ನು ಕಾಡಿದ್ದು ಸಹಜ. ಆಡ್ವಾಣಿ ರಾಮ ಮಂದಿರವನ್ನು ಕೇವಲ ಭಕ್ತಿಯ ದೃಷ್ಟಿಯಿಂದ ನೋಡಲಿಲ್ಲ. ಇದು ರಾಷ್ಟ್ರಮಂದಿರದ ಬುನಾದಿ ಎಂದು ವ್ಯಾಖ್ಯಾನ ಮಾಡಿದರು. ಮುಖ್ಯವಾಗಿ ಹುಸಿ ಜಾತ್ಯತೀತತೆಯ ಅಪಸವ್ಯಗಳು, ಮುಸ್ಲಿಂ ತುಷ್ಟೀಕರಣದ ಅಪಾಯ, ಸಾಂಸ್ಕೃತಿಕ ರಾಷ್ಟ್ರವಾದದ ಮಹತ್ವವನ್ನು ರಾಮಮಂದಿರ ಚಳವಳಿಯ ಉದ್ದಕ್ಕೂ ಪ್ರತಿಪಾದನೆ ಮಾಡಿದರು. ಪಕ್ಷಗಳ ನಾಯಕರು ಇದನ್ನು ಅರ್ಥ ಮಾಡಿಕೊಳ್ಳದೇ ಹೋದರೂ, ಕೋಟ್ಯಂತರ ಭಾರತೀಯರು ಆಡ್ವಾಣಿಯವರ ಭಾವನೆಯನ್ನು ಅರ್ಥ ಮಾಡಿಕೊಂಡರು. ರಾಜಕೀಯವಾಗಿ ಭಾಜಪ ಎರಡರಿಂದ ಎಂಬತ್ತು, ಎಂಬತ್ತರಿಂದ ನೂರ ಅರವತ್ತು ಸ್ಥಾನಗಳನ್ನು ಲೋಕಸಭೆಯಲ್ಲಿ ಗಳಿಸಲು ಆಡ್ವಾಣಿ ಅವರ ಮಂದಿರ ಹೋರಾಟವೂ ಕಾರಣ. ಇಂದು ರಾಮಮಂದಿರವನ್ನು ಕಾಂಗ್ರೆಸ್‌ ಆದಿಯಾಗಿ ಅನೇಕ ಪಕ್ಷಗಳು ಒಪ್ಪಿಕೊಳ್ಳುವುದಕ್ಕೂ ಆಡ್ವಾಣಿ ಅವರೇ ಕಾರಣ. ಇದು ಅರ್ಥವಾಗಬೇಕೆಂದರೆ, ಬಿಜೆಪಿಯೇತರ ಎಲ್ಲ ಮುಖಂಡರು ಇಂದು ನೀಡುತ್ತಿರುವ ಹೇಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿ, ಆ ಎಲ್ಲವೂ ಆಡ್ವಾಣಿ ಅವರು ಹೋರಾಟ ಸಂದರ್ಭದಲ್ಲಿ ನೀಡಿದ ಹೇಳಿಕೆಗಳಂತಿವೆ !
ಹಾಗಾಗಿಯೇ ಏನೋ, ಮಂದಿರ ಚಳವಳಿಗೆ ತಮ್ಮನ್ನು ತಾವು ಸಮರ್ಪಣೆ ಮಾಡಿಕೊಂಡಿದ್ದ ಆಡ್ವಾಣಿ ಅವರು ಶಿಲಾನ್ಯಾಸ ಸಂದರ್ಭದಲ್ಲಿ ಖುದ್ದು ಹಾಜರಿರಬೇಕಿತ್ತು ಎಂದು ಬಹಳಷ್ಟು ಜನರಿಗೆ ಅನಿಸಿತು. ಆ ಕ್ಷಣಕ್ಕೆ ನನಗೆ ಸೋಮನಾಥ ದೇವಾಲಯ ಪುನರ್‌ನಿರ್ಮಾಣದ ಘಟನೆಯ ನಿದರ್ಶನ ನೆನಪಾಗಿ ಕಾಡಿತು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಮರುನಿರ್ಮಾಣಗೊಂಡ ಗುಜರಾತಿನ ಸೋಮನಾಥ ದೇವಾಲಯದ ಹಿಂದೆ ಕೆಲಸ ಮಾಡಿದ್ದು ಸರ್ದಾರ್‌ ವಲ್ಲಭಬಾಯಿ ಪಟೇಲ್‌ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ, ಮಂದಿರ ಪುನರ್‌ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದು ಅಂದಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್‌. ಬಳಿಕ ಮಾತನಾಡಿದ್ದ ಅವರು ಸರ್ದಾರ್‌ ಪಟೇಲರನ್ನು ಮನಸಾರೆ ನೆನಪಿಸಿಕೊಂಡಿದ್ದರು.

*ಮಂದಿರವೆಂಬುದು ಮೌಲ್ಯದ ಸಂಕೇತ
ಅಯೋಧ್ಯೆಯಲ್ಲಿ ಭವ್ಯ ಮಂದಿರಕ್ಕೆ ಭೂಮಿ ಪೂಜೆಯಾಗಿದೆ. ಮೂರ್ನಾಲ್ಕು ವರ್ಷದಲ್ಲಿ ಭವ್ಯ ಮಂದಿರವೂ ತಲೆ ಎತ್ತಲಿದೆ. ಆದರೆ ಅದು, ನೂರರ ನಂತರದ ನೂರೊಂದನೆಯ ಮಂದಿರವಾಗಬಾರದು. ಮಂದಿರವೆಂಬುದು ಸ್ಥಾವರ ನಿಜ. ಸಂಕೇತವಾಗಿ ಅದು ಬೇಕು. ಆದರೆ, ಅದಷ್ಟೇ ಇದ್ದರೆ ಸಾಲದು. ಅದು ರಾಮನ ಆದರ್ಶಗಳನ್ನು ಬಿತ್ತುವ ಮಂದಿರವಾಗಬೇಕು. ರಾಮನನ್ನು ಈ ಭರತಖಂಡ ಒಪ್ಪಿರುವುದೇ ಆತನ ಆದರ್ಶಗಳ ಕಾರಣಗಳಿಗಾಗಿ. ರಾಮನ ರಾಮಾಯಣ ಒಟ್ಟಾರೆ ಆದರ್ಶದ ಕಥೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪ್ರತಿ ನೂರು ಕಿ. ಮೀ. ಅಂತರದಲ್ಲಿ ರಾಮನ ನೆನಪನ್ನು ದಾಖಲಿಸುವ, ಅದೇ ನೆನಪನ್ನು ಧರಿಸಿಕೊಂಡಿರುವ ಊರು-ಕೇರಿಗಳು, ಹಳ್ಳ-ಕೊಳ್ಳ-ನದಿ-ಸಮುದ್ರಗಳು, ಮಂದಿರ-ದೇವಾಲಯಗಳಿವೆ. ಇದಕ್ಕೂ ರಾಮನ ಮೌಲ್ಯಗಳೇ ಕಾರಣ. ಅಂತಹ ಆದರ್ಶಗಳು ಯಾವುವು ?
* ರಾಜ್ಯಾಧಿಕಾರಕ್ಕೆ ಅಂಟಿ ಕೂರಲಿಲ್ಲ
ರಾಜ್ಯವನ್ನು ಆಳುವುದೇ ನಮ್ಮ ಧರ್ಮವೆಂಬ ಕ್ಷತ್ರಿಯ ನಂಬಿಕೆಯಲ್ಲಿ ರಾಮ ಹುಟ್ಟಿದರೂ, ತಂದೆಯ ಮಾತಿಗೆ ಬೆಲೆಕೊಟ್ಟು ಅಧಿಕಾರವನ್ನೇ ತ್ಯಜಿಸಿ ವನವಾಸಕ್ಕೆ ಹೊರಟ. ಇದು ರಾಮನ ತ್ಯಾಗ ಔದಾರ್ಯದ ಸಂಕೇತ. ಪ್ರಜಾಪ್ರಭುತ್ವದ ಹೆಸರಲ್ಲಿ ರಾಜಪ್ರಭುತ್ವವನ್ನೂ ಮೀರಿಸುವ, ಅಣಕಿಸುವ ವಿದ್ಯಮಾನಗಳಿಗೆ ಸಾಕ್ಷಿಯಾಗುತ್ತಿರುವ ಇಂದಿನ ಸಂದರ್ಭದಲ್ಲಿ ಇದು ಗಮನಿಸಲೇಬೇಕಾದ ಅಂಶ. ರಾಮ ನೈತಿಕ ಮೌಲ್ಯಗಳ ವ್ರತಧಾರಿಯಾಗಿದ್ದನೇ ಹೊರತು ಅರಸೊತ್ತಿಗೆಯ ಆಡುಂಬೋಲಗಳಿಗಲ್ಲ. ರಾಮಮಂದಿರಕ್ಕೆ ಜೈಕಾರ ಹಾಕುವ ಇಂದಿನ ಮಂತ್ರಿ, ಮಾಗಧರೂ ಸೇರಿ ಎಲ್ಲರೂ ಅರಿಯಬೇಕಾದ ಸಂಗತಿ ಇದು.
* ರಾಮ ನೈತಿಕ ಪ್ರಜ್ಞೆಯ ಪ್ರತೀಕ
ಸಾರ್ವಜನಿಕ ಜೀವನದಲ್ಲಿರುವವರ ನೈತಿಕ ಪ್ರಜ್ಞೆ ಹೇಗಿರಬೇಕು ಎಂಬುದನ್ನು ಹೇಳುವಾಗ ನಾವು ರೋಮನ್‌ ದೊರೆ ಜೂಲಿಯಸ್‌ ಸೀಸರ್‌ನ ಉದಾಹರಣೆಯನ್ನು ಸುಲಭವಾಗಿ ಕೊಟ್ಟುಬಿಡುತ್ತೇವೆ. ಸೀಸರನ ಹೆಂಡತಿ ಸಂಶಯಾತೀತಳಾಗಿರಬೇಕು ಎಂಬುದನ್ನು ಉದಾಹರಿಸುತ್ತೇವೆ. ಹಾಗೆ ನೋಡಿದರೆ, ಈ ನೀತಿಯನ್ನು ಅನುಷ್ಠಾನಗೊಳಿಸಿದ ಮೊದಲ ದೊರೆ ರಾಮನೆ. ತನ್ನ ರಾಜ್ಯದ ಶ್ರೀಸಾಮಾನ್ಯ ಅಗಸ ಬಂಧುವೊಬ್ಬನ ಅನುಮಾನದ ಮಾತಿಗೆ ಬೆಲೆ ನೀಡಿ, ಸೀತೆಯನ್ನು ಅಗ್ನಿಪರೀಕ್ಷೆಗೆ ಒಡ್ಡಿದ.
* ರಾಮ ದೇಶಭಕ್ತಿಯ ದ್ಯೋತಕ
ತಾಯಿ ಹೇಗೆ ದೇವರ ಸಮಾನವೋ, ಹಾಗೆಯೇ ತಾಯ್ನಾಡೂ ಎನ್ನುವುದು ಕೂಡ ರಾಮ ಕಲಿಸಿದ ಮೌಲ್ಯವೇ. ರಾವಣನ ವಧೆಯ ನಂತರ ಲಂಕೆಯ ವೈಭವಕ್ಕೆ ಮನಸೋತ ಲಕ್ಷ್ಮಣ ಅಯೋಧ್ಯೆ ಮರೆತು ಅಲ್ಲಿಯೇ ಉಳಿಯುವ ಇಚ್ಛೆ ವ್ಯಕ್ತಪಡಿಸಿದಾಗ ಜನನೀ, ಜನ್ಮಭೂಮಿ ಸ್ವರ್ಗಕ್ಕೂ ಮಿಗಿಲಾದುದು ಎನ್ನುತ್ತಾನೆ ರಾಮ. ದೇಶ, ಧರ್ಮ, ಸಂಸ್ಕೃತಿಯ ವಿಷಯದಲ್ಲಿ ನಿಲುವು ಎಂಥದ್ದಿರಬೇಕು ಎಂಬುದಕ್ಕೆ ರಾಮನೇ ಪ್ರತ್ಯಕ್ಷ ಪ್ರಮಾಣ.
*ರಾಮ ರಾಜನಲ್ಲ, ಪ್ರಜಾಪ್ರಭುತ್ವವಾದಿ
ಆಧುನಿಕ ಭಾಷೆಯಲ್ಲಿ ಹೇಳಬೇಕೆಂದರೆ, ರಾಮ ನಿಜಕ್ಕೂ ಪ್ರಜಾಪ್ರಭುತ್ವವಾದಿಯಾಗಿದ್ದ. ಪ್ರಜೆಗಳ ಪಾಲಿಗೆ ಪ್ರಭುವಾಗಿರಲಿಲ್ಲ. ಬದಲಿಗೆ, ಅವರ ಪ್ರತಿನಿಧಿಯಾಗಿದ್ದ. ಜನಗಳ ಸಂತೋಷಕ್ಕಾಗಿ ರಾಜ್ಯವನ್ನು ಆಳಬೇಕೆ ಹೊರತು, ತನ್ನ ಸಂತೋಷಕ್ಕಾಗಿ ಅಲ್ಲ ಎಂಬುದನ್ನು ರಾಮ ತನ್ನ ಬದುಕಿನ ಉದ್ದಕ್ಕೂ ತೋರಿಸುತ್ತಲೇ ಬಂದ.
ಪ್ರಜೆಗಳ ಮಾತನ್ನು ಕೇಳುವವ ಪ್ರಜಾಪ್ರಭುತ್ವ ವಾದಿ ನಿಜ. ಆದರೆ, ಪ್ರಜೆಗಳ ಮಾತನ್ನು ಯಾವಾಗ ಕೇಳಬೇಕು, ಯಾವಾಗ ಕೇಳಬಾರದು ಎಂಬುದರ ಅರಿವು ಇರುವವ, ಅದಕ್ಕೂ ಮೀರಿದವ. ಅಯೋಧ್ಯೆಯ ಜನರೆಲ್ಲರೂ ಒಂದಾಗಿ, ದಶರಥನ ಮಾತಿನಂತೆ ವನವಾಸಕ್ಕೆ ತೆರಳದಿರು ಎಂದು ಕೈ ಜೋಡಿಸಿ, ಪ್ರಾರ್ಥಿಸಿದರೂ ರಾಮ ವನವಾಸಕ್ಕೆ ಹೊರಟ. ಪ್ರಜೆಗಳ ಮಾತಿನ ಬದಲು ತನ್ನ ಅಂತರಾತ್ಮಕ್ಕೆ ಓಗೊಟ್ಟ. ಕಡೆಯಲ್ಲಿ, ಸೀತೆಯ ಬಗ್ಗೆ ಅನುಮಾನ ಪಟ್ಟಿದ್ದು ಒಬ್ಬನೇ ಪ್ರಜೆ. ರಾಮನ ಒಳಮನಸ್ಸಿಗೆ ಸೀತೆ ಏನೆಂಬುದು ತಿಳಿದಿತ್ತು. ಆದರೆ, ರಾಮ ಬೆಲೆ ಕೊಟ್ಟಿದ್ದು ಒಬ್ಬನೇ ಒಬ್ಬ ಶ್ರೀಸಾಮಾನ್ಯನ ಮಾತಿಗೆ !
ನಾವು ನಿರ್ಮಿಸಲು ಹೊರಟಿರುವ ರಾಮಮಂದಿರ ಈ ಎಲ್ಲ ಗುಣಗಳ ಸಾಕಾರವಾದರೆ, ಪ್ರಜೆಗಳಿಗೆ ಮತ್ತು ಪ್ರಭುಗಳಿಗೆ ಅದಕಿಂತ ಹೆಚ್ಚಿನದು ಇನ್ನೇನು ಬೇಕು? ರಾಮ ಮಂದಿರವನ್ನು ಅರ್ಥೈಸಬೇಕಿರುವುದು ಹೀಗೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top