ಜೀವ ರಕ್ಷಕರಾದ ಶಿಕ್ಷಕರು

ಕೊರೊನಾ ಹೋರಾಟದಲ್ಲಿ ಹತ್ತಾರು ಹೊಣೆ | ರಾಜ್ಯದೆಲ್ಲೆಡೆ ಜಾಗೃತಿಯ ಜಾಗರಣೆ ಅಪಾಯವನ್ನೂ ಲೆಕ್ಕಿಸದೆ ದುಡಿಯುತ್ತಿರುವರನ್ನು ಸರಕಾರ ವಾರಿಯರ್ಸ್ ಆಗಿ ಪರಿಗಣಿಸಬೇಕಿದೆ.
ವಿಕ ಸುದ್ದಿಲೋಕ ಬೆಂಗಳೂರು: ‘ಶಿಕ್ಷಕರಿಗೆ ವರ್ಷವಿಡೀ ರಜೆ, ಕೆಲಸವೂ ಕಡಿಮೆ, ಸಂಬಳಕ್ಕೆ ಮಾತ್ರ ತೊಂದರೆ ಇಲ್ಲ’ ಎಂದು ಕೊಂಕು ನುಡಿಯುವವರೇ ಹೆಚ್ಚು. ಆದರೆ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕ, ಶಿಕ್ಷಕಿಯರು ಸಂಕಷ್ಟ ಕಾಲದಲ್ಲಿ ಕೊರೊನಾ ವಾರಿಯರ್‌ಗಳಾಗಿ ಕೆಲಸ ಮಾಡುವ ಮೂಲಕ ಜೀವರಕ್ಷಣೆಯಲ್ಲಿ ದೊಡ್ಡ ಪಾತ್ರ ವಹಿಸಿದ್ದಾರೆ. ವೈದ್ಯರು, ನರ್ಸ್‌ಗಳು, ಪೊಲೀಸರು, ಆಶಾ ಕಾರ್ಯಕರ್ತೆಯರಂತೆಯೇ ಇವರೂ ಬೀದಿಗಿಳಿದು ಸೇವೆ ಮಾಡಿದ್ದರೂ ಅವರನ್ನು ‘ಕೋವಿಡ್ ಯೋಧ’ರೆಂದು ಇನ್ನೂ ಪರಿಗಣಿಸಿಲ್ಲ. ಯಾವುದೇ ತರಬೇತಿ, ರಕ್ಷಣಾ ಸಲಕರಣೆಗಳು, ವಿಮಾ ಸೌಲಭ್ಯ ಇಲ್ಲದಿದ್ದರೂ ಸೇವಾ ಮನೋಭಾವ ಮೆರೆದು ಮನ್ನಣೆ ಗಳಿಸಿದ್ದಾರೆ.ಲಾಕ್‌ಡೌನ್‌ನ ವೇಳೆ ರಾಜ್ಯ ಮತ್ತು ಅಂತಾರಾಜ್ಯ ಚೆಕ್ ಪೋಸ್ಟ್‌ಗಳಲ್ಲಿ ವಾಹನ ತಪಾಸಣೆಗೆ ಸಹಕಾರ ನೀಡುವುದು, ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದವರ ಮನೆಗೆ ತೆರಳಿ ಸಂಪೂರ್ಣ ಮಾಹಿತಿ ಸಂಗ್ರಹಿಸಿ ವೆಬ್‌ಸೈಟ್‌ಗೆ ಅಪ್ ಲೋಡ್ ಮಾಡುವುದು, ಪಂಚಾಯಿತಿ ಮಟ್ಟದ ಕಾರ್ಯಪಡೆಗಳಲ್ಲಿ ಸಕ್ರಿಯರಾಗಿ ಸೋಂಕು ಹರಡದಂತೆ ಜಾಗೃತಿ ವಹಿಸುವಂಥ ಹತ್ತಾರು ಕೆಲಸಗಳನ್ನು ಶಿಕ್ಷಕರು ನಿಭಾಯಿಸಿದ್ದಾರೆ. ಈ ಕೆಲಸಗಳನ್ನು ಅವರು ಮನೆಯಲ್ಲೋ, ಕಚೇರಿಯಲ್ಲೋ ಕುಳಿತು ಮಾಡಿದ್ದಲ್ಲ. ಸೋಂಕಿನ ಯಾವ ಅಪಾಯವನ್ನೂ ಲೆಕ್ಕಿಸದೆಯೇ ಅವರು ಬೀದಿ ಬೀದಿ, ಮನೆ ಮನೆ ಸುತ್ತಿ ಮಾಡಿದ್ದಾರೆ. ವಾಹನಗಳಿಲ್ಲದ ಕಾಲದಲ್ಲಿ ಅದೆಷ್ಟೋ ಕಿ.ಮೀ.ಗಟ್ಟಲೆ ಕಾಲ್ನಡಿಗೆಯಲ್ಲೇ ಸಾಗಿದವರಿದ್ದಾರೆ, ತಮ್ಮ ಮನೆಯವರ ಸಹಾಯ ಪಡೆದು ಮನೆ ಮನೆಗೆ ತೆರಳಿದ್ದಾರೆ. ಇದರ ಜತೆಗೆ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಇತರ ಎಲ್ಲ ಕಾರ್ಯಗಳಲ್ಲೂ ತೊಡಗಿದ್ದಾರೆ. ಇಷ್ಟರ ನಡುವೆಯೂ ಶಿಕ್ಷಕರಿಗೆ ಯಾವುದೇ ಕೆಲಸವಿಲ್ಲ, ಮನೆಯಲ್ಲಿ ಕುಳಿತು ಸಂಬಳ ಪಡೆಯುತ್ತಿದ್ದಾರೆ ಎಂಬ ಕೊಂಕು ಮಾತೂ ಹೇಳಿದವರಿದ್ದಾರೆ. ಆದರೂ ತಮ್ಮ ಸೇವಾಪರತೆಯನ್ನು ಯಾವ ಕಾರಣಕ್ಕೂ ಬಿಡದೆ ಮುಂದುವರಿಸಿರುವ ಶಿಕ್ಷಕರು ಸೂಕ್ತ ತರಬೇತಿ, ರಕ್ಷಣಾ ಸಲಕರಣೆ ಮತ್ತು ಕೋವಿಡ್ ವಾರಿಯರ್ಸ್‌ಗೆ ನೀಡುವ ಜೀವವಿಮಾ ಸೌಲಭ್ಯ ಕೊಡಿ ಎಂಬ ಬೇಡಿಕೆ ಮುಂದಿಟ್ಟಿದ್ದಾರೆ.
ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಶಿಕ್ಷಕರಿಗೆ ಯಾವುದೇ ತರಬೇತಿಯಿಲ್ಲ. ಯಾವುದೇ ಸುರಕ್ಷತಾ ಸಾಧನಗಳನ್ನು ನೀಡದೆ ಕಂಟೈನ್ಮೆಂಟ್ ಪ್ರದೇಶಗಳಿಗೆ ಕಳುಹಿಸುವುದು ಸೂಕ್ತವಲ್ಲ. ಇದರ ಬದಲು ಕೋವಿಡ್‌ಗೆ ಸಂಬಂಧಿಸಿದಂತೆ ಜಾಗೃತಿ ಕಾರ್ಯಕ್ರಮ, ದಾಖಲೆಗಳ ನಿರ್ವಹಣೆ, ಮಾಹಿತಿ ಪ್ರಸಾರ ಸೇರಿದಂತೆ ಇತರೆ ಕಾರ್ಯಗಳಿಗೆ ಮಾತ್ರ ನಿಯೋಜಿಸಲಿ.-ಚಂದ್ರಶೇಖರ ನುಗ್ಲಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ

ಕೋವಿಡ್-19 ಒಂದು ರಾಷ್ಟ್ರೀಯ ವಿಪತ್ತಾಗಿದ್ದು, ಸರಕಾರಿ ನೌಕರರು ಸೋಂಕು ತಡೆಗೆ ಸಂಪೂರ್ಣವಾಗಿ ಕೈಜೋಡಿಸುತ್ತೇವೆ. ಆದರೆ, ಕೋವಿಡ್ ವಾರಿಯರ್‌ಗಳಂತೆ ಶಿಕ್ಷಕರಿಗೂ ಪಿಪಿಇ ಕಿಟ್ ಸೇರಿದಂತೆ ಇತರೆ ಸುರಕ್ಷತಾ ಸಾಧನಗಳು ಹಾಗೂ ವಿಮಾ ಸೌಲಭ್ಯ ಒದಗಿಸಬೇಕು. ಶಿಕ್ಷಕರನ್ನು ಅವರ ಹತ್ತಿರದ ವಾರ್ಡ್ಗೆ ಕೋವಿಡ್ ಕಾರ್ಯಗಳಿಗೆ ನಿಯೋಜಿಸಬೇಕು.-ವಿ.ಎಂ. ನಾರಾಯಣಸ್ವಾಮಿ ಅಧ್ಯಕ್ಷ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ

ಹಿಂದೆ ನಿಭಾಯಿಸಿದ ಜವಾಬ್ದಾರಿ- ಚೆಕ್‌ಪೋಸ್ಟ್‌ಗಳಲ್ಲಿ ವಾಹನಗಳ ತಪಾಸಣೆಗೆ ಪೊಲೀಸರು, ಸಾರಿಗೆ ಅಧಿಕಾರಿಗೆ ನೆರವು. – ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ ಕುಟುಂಬಗಳಿಗೆ ಪಡಿತರ ವಿತರಣೆ ಕಾರ್ಯ – ಬೆಂಗಳೂರಿನಲ್ಲಿ ಮತದಾರರ ಪಟ್ಟಿಯನ್ವಯ ಆರೋಗ್ಯ ಸಮೀಕ್ಷೆಗೆ ನಿಯೋಜನೆ. – ಸರಕಾರಿ ಆಸ್ಪತ್ರೆಗಳಿಗೆ ದಾಖಲಾಗುವ ಸೋಂಕಿತರ ವಿವರಗಳ ದಾಖಲಾತಿ, ದಾಖಲೆ ನಿರ್ವಹಣೆ.

ಎಷ್ಟಿದ್ದಾರೆ ಶಿಕ್ಷಕರು?

46,691 -ಸರಕಾರಿ, ಅನುದಾನಿತ ಶಾಲೆಗಳು

2,00,000- ಒಟ್ಟು ಶಿಕ್ಷಕರು

ಶಿಕ್ಷಕರ ಈಗಿನ ಜವಾಬ್ದಾರಿ- ಬಿಬಿಎಂಪಿ ವ್ಯಾಪ್ತಿಯಲ್ಲಿ ಕಣ್ಗಾವಲು ತಂಡಕ್ಕೆ ನಿಯೋಜನೆ.- ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್‌ಗೆ ಒಳಪಡಿಸಿ, ನಿಗಾ ಇಡುವುದು.- ಭಾವಚಿತ್ರ ಸಹಿತ ಪೂರ್ಣ ಮಾಹಿತಿಯನ್ನು ಬಿಬಿಎಂಪಿ ವೆಬ್‌ಸೈಟ್‌ ಮತ್ತು ಮೊಬೈಲ್ ಆ್ಯಪ್‌ಗೆ ಅಪ್ಲೋಡ್-  ‘ಗ್ರಾಪಂ ಕಾರ್ಯಪಡೆ’ ಸದಸ್ಯರಾಗಿ ನೇಮಕ- ಸೋಂಕು ಹರಡದಂತೆ ಜಾಗೃತಿ ಮೂಡಿಸಲು ಕಾರ್ಯಾಚರಣೆ.

ಶೈಕ್ಷಣಿಕ ಜವಾಬ್ದಾರಿಗಳು- ಶಾಲೆಗಳ ಪ್ರಾರಂಭಕ್ಕೆ ಸಂಬಂಧಿಸಿ ಪೋಷಕರು, ಎಸ್ಡಿಎಂಸಿ ಸದಸ್ಯರ ಸಭೆ- ದಾಖಲಾತಿ ಆಂದೋಲನ- ಆನ್‌ಲೈನ್‌ ತರಗತಿ ನಡೆಸುವ ಸಂಬಂಧ ಪೋಷಕರಲ್ಲಿರುವ ಸೌಲಭ್ಯಗಳ ಸರ್ವೆ- ಮುಂದಿನ ಶೈಕ್ಷಣಿಕ ವರ್ಷದ ಚಟುವಟಿಕೆಗಳಿಗೆ – ಕ್ರಿಯಾ ಯೋಜನೆ, ವೇಳಾಪಟ್ಟಿ ತಯಾರಿಕೆ

ಎದುರಿಸುತ್ತಿರುವ ಸಮಸ್ಯೆಗಳೇನು?- ಯಾವುದೇ ತರಬೇತಿ, ಸುರಕ್ಷತಾ ಪರಿಕರ ನೀಡಿಲ್ಲ.- ಕೆಲವು ಕಡೆ ಗ್ಲೌಸ್, ಸ್ಯಾನಿಟೈಸರ್, ಮಾಸ್ಕ್‌ಗಳನ್ನೂ ಕೊಟ್ಟಿಲ್ಲ- ಹಲವೆಡೆ ಸಾರಿಗೆ ವ್ಯವಸ್ಥೆ ಇಲ್ಲದೆ ಪಡಿಪಾಟಲು- ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಮನೆಗೆ ತೆರಳಬೇಕಿರುವುದರಿಂದ ಸೋಂಕು ತಗಲುವ ಭೀತಿ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top