ಕೋವಿಡ್‌ ಕಾಲದಲ್ಲಿ ಸ್ಟೀಫನ್‌ ಕೋವೆ ಮೆಲುಕು

– ಕೊರೊನಾ ಸಮಯದಲ್ಲಿ ಅನುಸರಿಸಬಹುದಾದ ಸಪ್ತಸೂತ್ರಗಳು.

– ಎನ್‌.ರವಿಶಂಕರ್‌. 

ವಿಶ್ವಾದ್ಯಂತ ಮ್ಯಾನೇಜ್‌ಮೆಂಟ್‌ ಚಿಂತಕರ ಪಟ್ಟಿಯಲ್ಲಿ ಅಗ್ರಗಣ್ಯರೆನಿಸಿಕೊಂಡಿದ್ದ ಸ್ಟೀಫನ್‌ ಕೋವೆ, ಎಂಟು ವರ್ಷದ ಹಿಂದೆ ಇದೇ ಜುಲೈನಲ್ಲಿ ನಿಧನರಾದರು. ಆದರೆ, ಕಳೆದ 25 ವರ್ಷಗಳಿಂದ ನಾನು ಗಮನಿಸಿರುವ ಪ್ರವೃತ್ತಿಯೆಂದರೆ ಮ್ಯಾನೇಜ್ಮೆಂಟ್‌ನ ಯಾವುದೇ ಆಯಾಮಕ್ಕೆ ಸಂಬಂಧಪಟ್ಟ ಯಾವುದೇ ಸೆಮಿನಾರ್‌, ಕಾನ್ಫರೆನ್ಸ್‌, ಚರ್ಚೆ, ವಿಶ್ಲೇಷಣಾದಿಗಳಲ್ಲಿ ಸ್ಟೀಫನ್‌ ಕೋವೆ ಮಂಡಿಸಿದ ಕೆಲವು ವಿಚಾರಗಳ ವಿಷಯ ಬಂದೇ ಬರುತ್ತದೆ. ಅಷ್ಟು ಮಾತ್ರವಲ್ಲ, ಎಷ್ಟೋ ಸಂಭಾಷಣೆಗಳಿಗೆ ಅದುವೇ ಆಧಾರವಾಗಿರುತ್ತದೆ. ಅವರ ಬಹುಪಾಲು ಬರಹ ಮತ್ತು ಆಲೋಚನೆಗಳು ನಿರ್ವಹಣಾಶಾಸ್ತ್ರ ಮತ್ತು ಉದ್ಯಮಕ್ಕೆ ಸಂಬಂಧಪಟ್ಟವುಗಳಾದರೂ, ಅವರ ಕೆಲವು ಕೃತಿಗಳು ಸಾಮಾನ್ಯ ಜನರಿಗೂ ಮೆಚ್ಚುಗೆಯಾಗಿ ಜಗದ್ವಿಖ್ಯಾತಿ ಪಡೆದವು. ಅವುಗಳಲ್ಲಿ ಅತ್ಯಂತ ಜನಪ್ರಿಯವಾದುದು ‘ಸೆವೆನ್‌ ಹ್ಯಾಬಿಟ್ಸ್‌ ಆಫ್‌ ಸಕ್ಸಸ್‌ಫುಲ್‌ ಪೀಪಲ್‌’ ಎನ್ನುವ ಪುಸ್ತಕ. 38 ಭಾಷೆಗಳಲ್ಲಿ ಎರಡು ಕೋಟಿಗೂ ಹೆಚ್ಚು ಪ್ರತಿಗಳು ಮಾರಾಟವಾಗಿರುವ ಈ ಪುಸ್ತಕ, ಸ್ವಸಹಾಯ ಪುಸ್ತಕಗಳ ಕ್ಯಾಟಗರಿಯಲ್ಲಿ ಹಲವು ವಿಕ್ರಮಗಳನ್ನು ನಿರ್ಮಿಸಿದೆ.
ಹೆಸರೇ ಸೂಚಿಸುವಂತೆ ಈ ಪುಸ್ತಕದಲ್ಲಿ ಸ್ಟೀಫನ್‌ ಕೋವೆ ಯಶಸ್ವೀ ವ್ಯಕ್ತಿಗಳಿಗಿರಬೇಕಾದ ಏಳು ಅಭ್ಯಾಸಗಳ ಬಗ್ಗೆ ಚರ್ಚಿಸುತ್ತಾರೆ. ಇವನ್ನು ಕಚೇರಿ/ ಕಾರ್ಪೊರೇಟ್‌ ವಾತಾವರಣದಲ್ಲಿ ಹೇಗೆ ನಡೆದುಕೊಂಡರೆ ಯಶಸ್ಸು ಸಾಧ್ಯ ಎನ್ನುವುದನ್ನು ತಿಳಿಹೇಳಲು ಬರೆದದ್ದು. ಆದರೆ, ಸುಮಾರು ಮೂರು ದಶಕಗಳ ಹಿಂದೆ ಬರೆದ ಈ ಪಟ್ಟಿ ತನ್ನ ಸರಳತೆಯಿಂದಾಗಿ ಜೀವನದ ಎಲ್ಲಾ ಆಯಾಮಗಳಿಗೂ ಅನ್ವಯವಾಗುತ್ತದೆ. ಕೋವೆ ಹೇಳುವ ಏಳು ‘ಅಭ್ಯಾಸ’ಗಳನ್ನು ಅಳವಡಿಸಿಕೊಂಡರೆ, ಉದ್ಯಮ ಮಾತ್ರವಲ್ಲ, ಜೀವನದಲ್ಲೂ ಯಶಸ್ಸು ಕಾಣಬಹುದಾಗಿದೆ. ಇಂದು ಕೋವೆಯವರ ಏಳು ಅಭ್ಯಾಸಗಳ ಪ್ರಭಾವದ ವ್ಯಾಪ್ತಿ ಸಾಮಾನ್ಯ ಜನರಿಗೂ ವಿಸ್ತರಿಸಿದೆ, ಮತ್ತು ಈ ಕೋವಿಡ್‌ ಕಾಲದಲ್ಲಿ ಇನ್ನಷ್ಟು ಪ್ರಸ್ತುತವೆನಿಸುತ್ತಿದೆ! ಅದು ಹೇಗೆ ಎಂದು ತಿಳಿಯುವ ಮೊದಲು, ಆ ಏಳು ಅಭ್ಯಾಸಗಳೇನು ಎನ್ನುವುದನ್ನು ಅರಿಯೋಣ.
1. Be Proactive/ ಮುಂದಾಗಿ / ಸಕ್ರಿಯವಾಗಿ ಪಾಲ್ಗೊಳ್ಳಿ: ನಮಗೆ ಏನಾಗುತ್ತದೆ ಎನ್ನುವುದಕ್ಕೆ ನಾವೇ ಸಂಪೂರ್ಣವಾಗಿ ಜವಾಬ್ದಾರರು. ನಮಗೆ ಬೇಕಾದ ಆಯ್ಕೆಗಳನ್ನು ಮಾಡಿಕೊಳ್ಳಲು, ನಮಗೆ ಮುಂದೆ ಅನುಕೂಲವಾಗುವ ನಿರ್ಧಾರಗಳನ್ನು ಕೈಗೊಳ್ಳಲು ನಾವು ಸರ್ವಸ್ವತಂತ್ರರು. ಹಾಗೆ ಸಕ್ರಿಯವಾಗಿ ಆಯ್ದುಕೊಳ್ಳುವುದು ನಮ್ಮ ಜವಾಬ್ದಾರಿ ಕೂಡ. ದುರದೃಷ್ಟವಶಾತ್‌, ಅನೇಕರು ಪ್ರತಿಕ್ರಿಯಾತ್ಮಕವಾಗಿ ಬದುಕುತ್ತಾರೆ. ಎದುರಾದ ಪರಿಸ್ಥಿತಿಗೆ/ ವ್ಯಕ್ತಿಗೆ ಪ್ರತಿಕ್ರಿಯಿಸುವುದರಲ್ಲೇ ಜೀವನ ವ್ಯಯವಾಗಿ ಹೋಗುತ್ತದೆ. ಬದಲಿಗೆ ನಮಗಿರುವ ಆಯ್ಕೆಯ ಶಕ್ತಿಯನ್ನು ನಾವು ಗ್ರಹಿಸಿದರೆ, ಸಕ್ರಿಯವಾಗಿ ಮತ್ತು ಯಶಸ್ವಿಯಾಗಿ ಬದುಕಬಹುದು. ಏಕೆಂದರೆ, ಆಗ, ನಡೆಯುವುದೆಲ್ಲವೂ ನಮ್ಮ ಸಕ್ರಿಯ ಆಯ್ಕೆಯ ಪರಿಣಾಮವಾಗಿ ನಡೆಯುತ್ತದೆ. ಇದರಿಂದ, ಪರಿಸ್ಥಿತಿಯ ಮೇಲಿನ ನಿಯಂತ್ರಣ ದೊರೆಯುತ್ತದೆ. ನಮ್ಮ ಕ್ರಿಯೆಗೆ ನಾವೇ ಜವಾಬ್ದಾರರಾದಾಗ ನಮಗೆ ಸಹಜವಾಗಿಯೇ ಯಶಸ್ಸು ದೊರೆಯುತ್ತದೆ.
2.Begin with the end in mind / ಕೊನೆ ಏನು ಎನ್ನುವುದನ್ನು ಮನಸ್ಸಿನಲ್ಲಿಟ್ಟುಕೊಂಡು ಕೆಲಸ ಪ್ರಾರಂಭಿಸಿ: ಸವಿಸ್ತಾರವಾದ ಪರಿಕಲ್ಪನೆ ಅತಿ ಮುಖ್ಯ ಎನ್ನುವುದು ಕೋವೆ ಅವರ ವಾದ. ನಾವು ನಮ್ಮ ಜೀವನದ ಎಲ್ಲಾ ಆಗುಹೋಗುಗಳನ್ನೂ ಎರಡು ಬಾರಿ ಸೃಷ್ಟಿಸುತ್ತೇವೆ. ಮೊದಲು ನಮ್ಮ ಮನಸ್ಸಿನಲ್ಲಿ ಅದನ್ನು ವಿಸ್ತಾರವಾಗಿ ಚಿತ್ರಿಸಿಕೊಳ್ಳುವ ಮೂಲಕ. ಎರಡನೆಯದು, ನಮ್ಮ ಜೀವನದಲ್ಲಿ ಅದನ್ನು ಅನುಭವಿಸುವುದು, ಅಥವ, ನಿಜವಾದ ಸೃಷ್ಟಿ. ನಮ್ಮ ಜೀವನದ ಆಗುಹೋಗುಗಳ ಸೃಷ್ಟಿಕರ್ತರು ನಾವಾಗಬೇಕಾದರೆ, ಕಾರ್ಯಯೋಜನೆ ರೂಪಿಸಿಕೊಳ್ಳುವುದು ಮುಖ್ಯ. ಆ ದೃಷ್ಟಿಯಿಂದ, ಕೊನೆ ಏನು ಎನ್ನುವುದನ್ನು ಮನಸ್ಸಿನಲ್ಲಿ ಮೊದಲು ಚಿತ್ರಿಸಿಕೊಂಡರೆ, ಅದನ್ನು ಸಾಕಾರಗೊಳಿಸಿಕೊಳ್ಳುವುದು ಸುಲಭವಾಗುತ್ತದೆ. ನಮ್ಮ ವ್ಯಕ್ತಿಗತ ತತ್ವಸಿದ್ಧಾಂತಗಳು ಮತ್ತು ನಮ್ಮ ಒಟ್ಟಾರೆ ವ್ಯಕ್ತಿತ್ವಕ್ಕೆ ನಮ್ಮ ಗುರಿ ಅನುಗುಣವಾಗಿದೆಯೇ ಎನ್ನುವುದು, ನಮ್ಮ ಮನಸ್ಸಿನಲ್ಲಿ ಆಗುಹೋಗುಗಳನ್ನು ಚಿತ್ರೀಕರಿಸಿಕೊಳ್ಳುತ್ತಿರುವ ಸಮಯದಲ್ಲೇ ಗೊತ್ತಾಗುತ್ತದೆ. ಇದರಿಂದ, ಅನೇಕ ತೊಡಕು/ ತೊಂದರೆಗಳನ್ನು ಆ ಹಂತದಲ್ಲಿಯೇ ನಿವಾರಿಸಿಕೊಂಡುಬಿಡಬಹುದು. ಆಗ, ನಿಜವಾದ ಕೆಲಸದಲ್ಲಿನ ತೊಡಕುಗಳು ಕಡಿಮೆ ಆಗುತ್ತವೆ. ಆದ್ದರಿಂದ, ಕೊನೆ ಏನು ಎನ್ನುವುದನ್ನು ಮನಸ್ಸಿನಲ್ಲಿಟ್ಟುಕೊಂಡು ಕೆಲಸ ಆರಂಭಿಸುವುದು ಅತಿ ಮುಖ್ಯ.
3. First things first/ ಮೊದಲ ಕೆಲಸ ಮೊದಲು: ಸ್ವತಂತ್ರ ಇಚ್ಛಾಶಕ್ತಿಯ ಬಲದಿಂದ ನಾವು ನಮಗೆ ಬೇಕಾದ ಅಂತ್ಯ/ ಗುರಿಯನ್ನು ಸೃಷ್ಟಿಸಿಕೊಳ್ಳಬಹುದು. ಆದರೆ, ಹಾಗೆ ಮಾಡಬೇಕಾದರೆ, ನಮಗೆ ನಮ್ಮ ಆದ್ಯತೆಗಳ ಅರಿವು ಇರಬೇಕಾದ್ದು ಮುಖ್ಯ. ಯಾವುದನ್ನು ತಕ್ಷ ಣವೇ ಮಾಡಬೇಕು, ಯಾವುದನ್ನು ಸಾವಕಾಶವಾಗಿ ಮಾಡಬೇಕು ಎನ್ನುವುದರ ಬಗ್ಗೆ ಆಲೋಚಿಸಬೇಕು ಮತ್ತು ಸ್ಪಷ್ಟತೆ ಪಡೆಯಬೇಕು. ನಮ್ಮ ಆದ್ಯತೆಗಳ ಪಟ್ಟಿ ನಾವು ಎಲ್ಲಿ, ಹೇಗೆ ಮತ್ತು ಎಷ್ಟು ಸಮಯವನ್ನು ವಿನಿಯೋಗಿಸುತ್ತೇವೆ ಎನ್ನುವುದನ್ನು ನಿರ್ಧರಿಸುತ್ತದೆ. ಎಲ್ಲ ಸಾಧನೆಗಳಿಗೂ ಸಮಯದ ನೇರ ನಂಟಿರುವುದರಿಂದ, ನಮ್ಮ ಆದ್ಯತೆಗಳ ನಿರ್ವಹಣೆ ಯಶಸ್ಸಿನ ಮೇಲೆ ನೇರವಾದ ಪರಿಣಾಮ ಬೀರುತ್ತದೆ.
4. Think win-win/ ಎಲ್ಲರೂ ಗೆಲ್ಲಬೇಕು ಎಂಬಂತಹ ಸಂದರ್ಭ ಸೃಷ್ಟಿಸಿ: ನಮ್ಮ ಜೀವನದ ಎಲ್ಲ ಸನ್ನಿವೇಶಗಳೂ ಇತರರನ್ನು ಒಳಗೊಂಡಿರುತ್ತವೆ. ಇತರರು ಗೆದ್ದಾಗಲೇ ನಾವು ಗೆಲ್ಲುವುದು ಸಾಧ್ಯ ಎಂಬಂತಹ ಮನಸ್ಥಿತಿ ಇದ್ದಾಗ ಮಾತ್ರ ಗುರಿ ಸಾಧನೆ ಸುಲಭವಾಗುತ್ತದೆ. ಸ್ಟೀಫನ್‌ ಕೋವೆ ಪ್ರಕಾರ, ನಮ್ಮ ಆಲೋಚನೆ ಮತ್ತು ಉದ್ದೇಶಗಳು ಪರಿಪಕ್ವವಾಗಿದ್ದರೆ, ಎಂತಹ ಸಂದರ್ಭದಲ್ಲೂ ವಿನ್‌-ವಿನ್‌ ಸೃಷ್ಟಿಸುವುದು ಸಾಧ್ಯ. ಇದರಿಂದ, ಇತರರನ್ನು ನಮ್ಮ ಕಾರ್ಯಸಾಧನೆಯ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ಸುಲಭವಾಗುತ್ತದೆ.ನಮ್ಮ ಕಾರ್ಯಸಾಧನೆಯ ಬಗ್ಗೆ ಇತರರ ಬದ್ಧತೆಯನ್ನೂ ಹೆಚ್ಚಿಸಿದಂತಾಗುತ್ತದೆ. ಇದಕ್ಕೆ ವಿರುದ್ಧವಾಗಿ, ಇನ್ನೊಬ್ಬರ ಸೋಲಿನಿಂದ ನಮ್ಮ ಗೆಲುವು ಸಾಧನೆಯಾಗುವುದಾದರೆ, ಅದಕ್ಕಾಗಿನ ಹೋರಾಟ ದೀರ್ಘವೂ ಪ್ರಯಾಸಕರವೂ ಆಗಬಹುದು. ಉದ್ಯೋಗದಲ್ಲಾಗಲೀ ಉದ್ಯಮದಲ್ಲಾಗಲೀ, ಸ್ನೇಹಿತರ ನಡುವೆ ಅಥವ ಸಂಬಂಧಗಳಲ್ಲಾಗಲೀ, ವಿನ್‌-ವಿನ್‌ ಆಲೋಚನೆಯಲ್ಲಿ ಎಲ್ಲರ ಏಳ್ಗೆ ಇದೆ.
5. Seek first to understand than to be understood / ಮೊದಲು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ, ಆನಂತರ ಇತರರು ನನ್ನನ್ನು ಅರ್ಥ ಮಾಡಿಕೊಳ್ಳಲಿ ಎಂದು ಅಪೇಕ್ಷಿಸಿ: ನಾವು ಉತ್ತಮ ಕೇಳುಗರಾದಾಗ ವಿಷಯಗಳ ಗ್ರಹಿಕೆ ಸುಲಭವಾಗುತ್ತದೆ. ನಮ್ಮ ದೃಷ್ಟಿಕೋನವನ್ನು ಇತರರು ಅರ್ಥ ಮಾಡಿಕೊಳ್ಳಲಿ ಎಂದು ಅಪೇಕ್ಷಿಸಿದರೆ, ಅದರಿಂದ, ನಮ್ಮ ಮೇಲೂ ಇತರರ ಮೇಲೂ ಒತ್ತಡ ನಿರ್ಮಾಣವಾಗುತ್ತದೆ. ಇದರಿಂದ ಕಾರ್ಯಸಾಧನೆಗೆ ಬೇಕಾದ ವಾತಾವರಣದ ನಿರ್ಮಾಣ ಕಷ್ಟವಾಗಬಹುದು. ಇದಕ್ಕೆ ಬದಲಾಗಿ, ನಾನು ಎಲ್ಲರ ಮಾತನ್ನು ಆಲಿಸಿ, ಎಲ್ಲರ ಅನುಕೂಲಕ್ಕೆ ತಕ್ಕನಾದ ಪರಿಹಾರವನ್ನು ಸೂಚಿಸಲು ಯತ್ನಿಸುತೇನೆ ಎನ್ನುವ ಮನಃಸ್ಥಿತಿ ಬೆಳೆಸಿಕೊಂಡರೆ, ಇತರರು ನಮ್ಮನ್ನು ನೋಡುವ ರೀತಿ ಬದಲಾಗುತ್ತದೆ. ಕಾರ್ಯಸಾಧನೆ ಸುಲಭವಾಗುತ್ತದೆ.
6. Synergise/ ಮೈತ್ರಿ ಸಾಧಿಸಿ: ಸ್ಟೀಫನ್‌ ಕೋವೆ ಅವರ ಪ್ರಕಾರ ಸಿನಜೈರ್‍ಸ್‌ ಮಾಡುವುದೆಂದರೆ ಹೊಸ ಸಾಧ್ಯತೆಗಳಿಗೆ ಮತ್ತು ಹೊಸ ಅವಕಾಶಗಳಿಗೆ ನಮ್ಮ ಮನಸ್ಸನ್ನು ತೆರೆದಿಡುವುದು. ಇಲ್ಲಿ ಸಂವಹನದ ಪಾತ್ರ ಅತಿಮುಖ್ಯವಾದದ್ದು. ನಮ್ಮ ಗುರಿ ಸಾಧನೆಗಾಗಿ ನಾವು ಜೊತೆಗಾರರನ್ನು ಆಯ್ದುಕೊಳ್ಳುವಾಗ ನಿರ್ಮಿಸಬೇಕಾದ ನಂಬಿಕೆ ಮತ್ತು ಸಹಕಾರದ ಮೂಲತತ್ವಗಳನ್ನು ಕೋವೆ ಇಲ್ಲಿ ವಿವರಿಸುತ್ತಾರೆ. ಇಂತಹ ಮಾನಸಿಕ ಮೈತ್ರಿಯಲ್ಲಿರುವವರನ್ನು ಒಂದು ತಂಡ ಎಂಬಂತೆ ನಾವು ನೋಡಿದರೆ, ತಂಡದಲ್ಲಿನ ಎಲ್ಲರಿಗೂ ಯಶಸ್ಸಿನಲ್ಲಿ ಪಾಲು ದೊರೆಯುವ ಆಸೆ ಅವಕಾಶ ಸೃಷ್ಟಿಯಾಗಬೇಕು. ಆದ್ದರಿಂದ, ಮೈತ್ರಿಯಲ್ಲಿ ಎಲ್ಲಕ್ಕಿಂತಲೂ ಮುಖ್ಯವಾದ್ದು ಸಂವಹನ ಎಂದು ಪುನರುಚ್ಛರಿಸುತ್ತಾನೆ.
7. Sharpen the saw/ ನಿಮ್ಮ ಗರಗಸವನ್ನು ಹರಿತಗೊಳಿಸಿ: ನಮ್ಮ ಗರಗಸವೆಂದರೆ ನಾವೇ! ಮೇಲಿನ ಆರು ಅಭ್ಯಾಸಗಳಲ್ಲಿ ನಿರತರಾಗಿರುವಾಗ, ನಮ್ಮ ಉತ್ಸಾಹ ಕುಂದಬಹುದು. ಅದು ಕುಂದದಂತೆ ನೋಡಿಕೊಳ್ಳಲು ನಮ್ಮ ದೇಹ ಮತ್ತು ಮನಸ್ಸನ್ನು ಉತ್ಸಾಹದ ಸ್ಥಿತಿಯಲ್ಲಿ ಇಡಬೇಕಾದ್ದು ಅತ್ಯಗತ್ಯ. ನಿಯಮಿತ ಪೌಷ್ಟಿಕ ಆಹಾರಸೇವನೆ ಮತ್ತು ನಿತ್ಯ ವ್ಯಾಯಾಮದಿಂದ ನಾವು ಮನಸ್ಸನ್ನು ಹರಿತವಾಗಿಡುವುದು ಸಾಧ್ಯ ಎನ್ನುತ್ತಾರೆ ಸ್ಟೀಫನ್‌ ಕೋವೆ. ಇದರ ಜೊತೆಗೆ ನಿಯಮಿತವಾದ ಓದು, ಬರಹಗಳಿದ್ದರೆ ಮನಸ್ಸು ಜಾಗೃತವಾಗಿಯೂ, ಉತ್ಸಾಹದಾಯಕವಾಗಿಯೂ ಇರುತ್ತದೆ.
ಕಳೆದೆರಡು ದಶಕಗಳಲ್ಲಿ ಮ್ಯಾನೇಜ್ಮೆಂಟ್‌/ ನಿರ್ವಹಣಾಶಾಸ್ತ್ರಕ್ಕೆ ಸ್ವಲ್ಪ ಹತ್ತಿರ ಬಂದವರಿಗೂ ಸ್ಟೀಫನ್‌ ಕೋವೆ ಮತ್ತವರ ಏಳು ಅಭ್ಯಾಸಗಳು ಚಿರಪರಿಚಿತ. ಮಾತ್ರವಲ್ಲ, 25 ವರ್ಷಗಳಲ್ಲಿ ಬಂದಿರುವ ಸಾವಿರಾರು ಸೆಲ್ಫ್‌-ಹೆಲ್ಪ್‌ ಪುಸ್ತಕಗಳಿಗೆ ಸ್ಟೀಫನ್‌ ಕೋವೆಯೇ ಮೂಲ ಪ್ರೇರಣೆ.
ಯಶಸ್ವಿಯಾಗಲು ಇವರು ಬರೆದ ಏಳಕ್ಕೆ ಏಳು ಅಭ್ಯಾಸಗಳನ್ನು ಅಳವಡಿಸಿಕೊಳ್ಳದಿದ್ದರೂ, ಕೆಲವನ್ನಾದರೂ ನಿಷ್ಠೆಯಿಂದ ಆಚರಿಸಿಕೊಂಡರೆ ಸಾಕು. ಇದನ್ನರಿತ ಮಂದಿ, ಕೋವೆಯ ಒಂದೊಂದೇ ಗುಣವನ್ನು ವಿಸ್ತರಿಸಿ ದೊಡ್ಡ ಮ್ಯಾನೇಜ್‌ಮೆಂಟ್‌ ಗ್ರಂಥಗಳನ್ನೇ ಬರೆದಿದ್ದಾರೆ. ಏಳು ಅಭ್ಯಾಸಗಳನ್ನು ಬರೆದ ಕೆಲವು ವರ್ಷಗಳ ನಂತರ Eighth Habit ಎಂಬ ಪುಸ್ತಕವನ್ನು ಬರೆದರು. ಅಲ್ಲಿ ಅವರು ಎಂಟನೆಯ ಅಭ್ಯಾಸ ಎಂದು ಕರೆದದ್ದು – Find your voice and inspire others to find theirs- ನಿಮ್ಮ ಧ್ವನಿಯನ್ನು ಕಂಡುಕೊಳ್ಳಿ ಮತ್ತು ಇತರರಿಗೆ ತಮ್ಮ ದನಿಯನ್ನು ಕಂಡುಕೊಳ್ಳಲು ಪ್ರೇರೇಪಿಸಿ. ನಮ್ಮ ಸುತ್ತಲಿನ ಪರಿಸರಕ್ಕೆ ನಮ್ಮ ಅವಶ್ಯಕತೆ ಎಷ್ಟಿದೆ ಎನ್ನುವುದನ್ನು ಅರ್ಥ ಮಾಡಿಕೊಂಡು, ನಾವೇನು ಕಾಂಟ್ರಿಬ್ಯೂಟ್‌ ಮಾಡಬಲ್ಲೆವು ಎನ್ನುವುದನ್ನು ಸ್ಪಷ್ಟವಾಗಿ ಎಲ್ಲರಿಗೂ ತಿಳಿಸುವುದು, ಸ್ಥೂಲವಾಗಿ ಈಎಂಟನೆಯ ಅಬ್ಯಾಸದ ಸಾರಾಂಶ. ಅಂತೆಯೇ, ಅದು ಸ್ವಪ್ರತಿಷ್ಠೆ ಮಾತ್ರ ಆಗದೆ, ಇತರರ ಧ್ವನಿಯನ್ನು ಗುರುತಿಸಲು ಸಹಾಯಕವಾಗಬೇಕು ಎನ್ನುವುದನ್ನೂ ಒತ್ತಿಹೇಳಲಾಗಿದೆ.
ಸ್ಟೀಫನ್‌ ಕೋವೆಗೆ ಆಯ್ಕೆಯ ಶಕ್ತಿಯಲ್ಲಿ ಅಪಾರವಾದ ನಂಬಿಕೆ ಇತ್ತು. ನಾವು ಎಲ್ಲವನ್ನೂ ನಮ್ಮ ಹಿಂದಿನ ಕಾರ್ಯಗಳ ಪರಿಣಾಮ ಎಂದುಕೊಂಡು ಸುಮ್ಮನೆ ಅನುಭವಿಸಬೇಕಾಗಿಲ್ಲ. ನಮ್ಮ ಬಳಿ ಆಯ್ಕೆ ಎಂಬ ಪ್ರಬಲ ಅಸ್ತ್ರ ಇರುವಾಗ, ನಾವು ಭವಿಷ್ಯವನ್ನು ಬದಲಿಸುವ ಶಕ್ತಿಯನ್ನು ಹೊಂದಿದ್ದೇವೆ ಎಂದು ಅವರು ಅನೇಕ ಸಂದರ್ಭಗಳಲ್ಲಿ ಪುನರುಚ್ಛರಿಸಿದ್ದಾರೆ. ಏಳು ಅಬ್ಯಾಸಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ, ನಮ್ಮ ಭವಿಷ್ಯದ ಮೇಲೆ ನಿಯಂತ್ರಣ ಸಾಧಿಸುವುದು ಸಾಧ್ಯ ಎನ್ನುವುದು ಕೋವೆ ಅವರಲ್ಲಿ ನಂಬಿಕೆ ಇಟ್ಟ ಅನೇಕ ಜಗದ್ವಿಖ್ಯಾತ ಮ್ಯಾನೇಜ್ಮೆಂಟ್‌ ಗುರುಗಳ ಅಭಿಪ್ರಾಯ.
ನಾವು ಹೇಗೆ ಬದುಕಬೇಕು ಎನ್ನುವುದನ್ನು ಹೇಳಿಕೊಟ್ಟ ಎಷ್ಟೋ ಮಂದಿ ಚಿಂತಕರು, ವೇದಾಂತಿಗಳು, ಕವಿಗಳು, ಗುರುಗಳು ಇದ್ದಾರೆ. ಆದರೆ, ಸ್ಟೀಫನ್‌ ಕೋವೆ ವಿಭಿನ್ನ ಹಿನ್ನೆಲೆಯೊಂದರಿಂದ ಬಂದು, ಯಾರಾದರೂ ತಮ್ಮ ಜೀವನದಲ್ಲಿ ಸುಲಭವಾಗಿ ಅಳವಡಿಸಿಕೊಳ್ಳಬಹುದಾದ ಪಾಠಗಳನ್ನು ಹೇಳಿದ್ದಾರೆ. ಎಲ್ಲಿಯೂ ಕ್ಲಿಷ್ಟವಾದ ಆಚರಣೆಗೆ ಒತ್ತಿಲ್ಲ, ನೀತಿಬೋಧೆ ಇಲ್ಲ. ಆದರೂ, ಮುಗ್ಧ ಮಾಂತ್ರಿಕತೆ ಇದೆ. ಏಳು ಸೂತ್ರಗಳ ಸುಲಭಸಾಧ್ಯ ಮಾರ್ಗಗಳಿಂದ ಸುಂದರ ಭವಿಷ್ಯದ ಭರವಸೆ ಇದೆ. ಈ ಕೊರೊನಾ ಸಂಕಷ್ಟದ ಸಮಯದಲ್ಲಿ ನಾಯಕರಿಂದ ಅನುಯಾಯಿಗಳವರೆಗೆ, ಉದ್ಯಮಿಗಳಿಂದ ಉದ್ಯೋಗಿಗಳವರೆಗೆ, ವೈದ್ಯರಿಂದ ರೋಗಿಗಳವರೆಗೆ, ಅಧಿಕಾರಿಗಳಿಂದ ಅಧೀನರವರೆಗೆ ಎಲ್ಲರೂ ಅನುಸರಿಸಬಹುದಾದ ಸರಳ ಮತ್ತು ಸ್ಪಷ್ಟ ಸೂತ್ರಗಳಿವೆ.
(ಲೇಖಕರು ಸಂವಹನ ಸಲಹೆಗಾರರು)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top