ಕೊರೊನಾದಿಂದಾಗಿ ವಿಳಂಬವಾಗಿ ನಡೆದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ತೋರಿದ್ದಾರೆ. ಎಂದಿನಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. 6 ವಿದ್ಯಾರ್ಥಿಗಳು 625ರಲ್ಲಿ625 ಅಂಕ ಪಡೆದು ಮುಂಬರುವ ವಿದ್ಯಾರ್ಥಿಗಳ ಸ್ಫೂರ್ತಿಗೆ ಕಾರಣರಾಗಿದ್ದಾರೆ. ಕೊರೊನಾದಿಂದಾಗಿ ವಿಳಂಬವಾಗಿ ನಡೆದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ತೋರಿದ್ದಾರೆ. ಎಂದಿನಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. 6 ವಿದ್ಯಾರ್ಥಿಗಳು 625ರಲ್ಲಿ625 ಅಂಕ ಪಡೆದು ಮುಂಬರುವ ವಿದ್ಯಾರ್ಥಿಗಳ ಸ್ಫೂರ್ತಿಗೆ ಕಾರಣರಾಗಿದ್ದಾರೆ.
ಅಕ್ಕನನ್ನು ಮೀರಿಸಿದ ತಂಗಿ – ಸನ್ನಿಧಿ ಹೆಗಡೆ
ಶಿರಸಿ (ಉತ್ತರ ಕನ್ನಡ): ರಾಜ್ಯದ ಅತಿ ದೊಡ್ಡ ಸರಕಾರಿ ಪ್ರೌಢ ಶಾಲೆಗಳಲ್ಲಿ ಒಂದಾಗಿರುವ ಉತ್ತರ ಕನ್ನಡ ಜಿಲ್ಲೆ ಶಿರಸಿಯ ಶ್ರೀ ಮಾರಿಕಾಂಬಾ ಪ್ರೌಢ ಶಾಲೆಯ ವಿದ್ಯಾರ್ಥಿನಿ ಸನ್ನಿಧಿ ಮಹಾಬಲೇಶ್ವರ ಹೆಗಡೆ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಿಟ್ಟಿಸಿದ್ದಾಳೆ. ಇದೇ ಪ್ರೌಢಶಾಲೆಯಲ್ಲಿ ಓದಿದ್ದ ಸನ್ನಿಧಿ ಅಕ್ಕ ಸನ್ಮಯಿ ಹೆಗಡೆ ಆರು ವರ್ಷಗಳ ಹಿಂದೆ ರಾಜ್ಯಕ್ಕೆ 6ನೇ ರಾರಯಂಕ್ ಗಳಿಸಿದ್ದರು. ಸನ್ನಿಧಿ ಆರೋಗ್ಯ ಇಲಾಖೆಯ ಅಧಿಕಾರಿ ಡಾ.ಮಹಾಬಲೇಶ್ವರ ಹೆಗಡೆ ಅವರ ಪುತ್ರಿ. ‘‘ಕೊರೊನಾ ನಿರ್ಬಂಧಗಳು ಪರೀಕ್ಷೆಗೆ ಅಡ್ಡಿಯಾಗಿದ್ದರೂ ನನ್ನ ಅಭ್ಯಾಸಕ್ಕೆ ಧಕ್ಕೆ ಆಗಿರಲಿಲ್ಲ. ಶಿಕ್ಷಕರು ನಿರಂತರ ಸಂಪರ್ಕದಲ್ಲಿದ್ದು ಮಾರ್ಗದರ್ಶನ ಮಾಡಿದ್ದಾರೆ. ವಾಟ್ಸ್ಆ್ಯಪ್ ಗ್ರೂಪ್ ಮೂಲಕವೂ ಸಾಕಷ್ಟು ಸಂದೇಹ ನಿವಾರಣೆ ಮಾಡಿದ್ದಾರೆ’’ ಎನ್ನುತ್ತಾಳೆ ಸನ್ನಿಧಿ. ‘‘ಮೊದಲಿನಿಂದಲೂ ಓದಿನಲ್ಲಿ ಮುಂಚೂಣಿಯಲ್ಲಿದ್ದಳು. ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ರಾರಯಂಕ್ ಬರಬಹುದು ಎಂಬ ನಿರೀಕ್ಷೆಯಿತ್ತು’’ ಎನ್ನುತ್ತಾರೆ ತಾಯಿ ವೀಣಾವಾಣಿ.
ನನ್ನ ತಂದೆ, ತಾಯಿ, ಶಿಕ್ಷಕರು ಉತ್ತಮ ಮಾರ್ಗದರ್ಶನ ನೀಡಿದ್ದರಿಂದಲೇ ಇದು ಸಾಧ್ಯವಾಗಿದೆ. ಮುಂದೆ ವೈದ್ಯೆಯಾಗುವ ಗುರಿ ಇದೆ. -ಸನ್ನಿಧಿ ಹೆಗಡೆ, ಶಿರಸಿ
ಮಂಡ್ಯದಲ್ಲಿ ಇತಿಹಾಸ ಸೃಷ್ಟಿ
ಎಂ.ಪಿ.ಧೀರಜ್ ರೆಡ್ಡಿ ಮಂಡ್ಯ: ಜಿಲ್ಲೆಯ ಶೈಕ್ಷಣಿಕ ಇತಿಹಾಸದಲ್ಲೇ ಇದೇ ಪ್ರಥಮ ಬಾರಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯ ವಿದ್ಯಾರ್ಥಿಯೊಬ್ಬ 625ಕ್ಕೆ 625ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಟಾಪರ್ ಆಗಿದ್ದಾನೆ. ದುದ್ದ ಹೋಬಳಿ ದೇವನಹಳ್ಳಿ ಗ್ರಾಮದ ಸತ್ಯಸಾಯಿ ಸರಸ್ವತಿ ಆಂಗ್ಲಪ್ರೌಢಶಾಲೆಯ ವಿದ್ಯಾರ್ಥಿ ಎಂ.ಪಿ.ಧೀರಜ್ ರೆಡ್ಡಿ, ‘‘ಯುಪಿಎಸ್ಸಿ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾಗುವ ಗುರಿ ಇದೆ,’’ ಎನ್ನುತ್ತಾನೆ. ಈತ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕು ಕ್ಯಾಸಂಬಳ್ಳಿ ಗ್ರಾಮದವನು. ಈತನ ತಂದೆ-ತಾಯಿ ಇಬ್ಬರು ಶಿಕ್ಷಕರು. ತಂದೆ ಎಂ. ಪ್ರಾಕರ ರೆಡ್ಡಿ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ ಶಾಂತಿಪುರ ಶಾಲೆಯ ಮುಖ್ಯಶಿಕ್ಷಕ. ತಾಯಿ ಕೆ.ಸಿ. ಮಂಜುಳಾ ಕೋಲಾರ ಜಿಲ್ಲೆ ಕ್ಯಾಸಂಬಳ್ಳಿ ರೂರಲ್ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ. ‘‘ನಿತ್ಯ ಮಾಡುತ್ತಿದ್ದ ಪ್ರಾರ್ಥನೆಯಿಂದ ಏಕಾಗ್ರತೆ ಸಾಧಿಸಲು ಕಾರಣವಾಯಿತು. ಏನೇ ಮಾಡಿದರೂ ಕಷ್ಟಪಟ್ಟು ಮಾಡಬೇಕು. ಫಲಿತಾಂಶವನ್ನು ದೇವರಿಗೆ ಬಿಡಬೇಕೆಂಬ ಮಾತಿನಂತೆ ನಾನು ಕಷ್ಟಪಟ್ಟು ಓದಿದೆ,’’ ಎಂದು ಧೀರಜ್ ತಿಳಿಸಿದರು.
ದೇವರ ಮೇಲಿನ ನಂಬಿಕೆ, ಭಕ್ತಿ, ವಿಶ್ವಾಸವು ನನ್ನ ಸಾಧನೆಗೆ ಕಾರಣ.-ಎಂ.ಪಿ.ಧೀರಜ್ ರೆಡ್ಡಿ ಮಂಡ್ಯ
ಮುಂಜಾವಿನಲ್ಲಿ ಓದಿ- ನಿಖಿಲೇಶ್ ಎನ್ ಮಾರಾಳಿ, ಬೆಂಗಳೂರು: ‘‘ಗಣಿತ, ವಿಜ್ಞಾನವನ್ನು ಓದಿ ಓದಿ ಬರೆಯುತ್ತಿದ್ದೆ. ಉಳಿದ ವಿಷಯಗಳನ್ನು ಮುಂಜಾನೆ ಬೇಗ ಎದ್ದು ಓದುತ್ತಿದ್ದೆ. ಈ ವಿಧಾನ ಅನುಸರಿಸಿದರೆ ಓದಿದ್ದು ಮನಸ್ಸಲ್ಲಿ ಉಳಿಯುತ್ತೆ’’ ಎನ್ನುತ್ತಾರೆ 625 ಅಂಕ ಗಳಿಸಿದ ಬೆಂಗಳೂರಿನ ಸದಾಶಿವನಗರದ ಪೂರ್ಣಪ್ರಜ್ಞ ಹೈಸ್ಕೂಲ್ ವಿದ್ಯಾರ್ಥಿ ನಿಖಿಲೇಶ್ ಎನ್. ಮಾರಾಳಿ.‘‘ನನ್ನ ತಂದೆ, ತಾಯಿ ಇಬ್ಬರೂ ಬ್ಯುಸಿನೆಸ್ ಮಾಡುತ್ತಾರೆ. ಅಕ್ಕ ವೈದ್ಯೆಯಾಗಿದ್ದು, ಇವರೆಲ್ಲರ ಸಹಕಾರ ನನ್ನ ಓದಿಗೆ ನೆರವಾಯಿತು. ನಮ್ಮ ಶಾಲಾ ಪ್ರಾಂಶುಪಾಲರು ಟ್ಯೂಷನ್ ಮಾಡ್ತಿದ್ರು. ಅಲ್ಲಿಗೂ ಹೋಗುತ್ತಿದ್ದೆ’’ ಎನ್ನುವ ನಿಖಿಲೇಶ್, ‘‘ಸದಾ ಓದುವುದರಲ್ಲೇ ಮಗ್ನರಾಗಬಾರದು. ಪಠ್ಯೇತರ ಚಟುವಟಿಕೆಗಳಲ್ಲೂ ಇರಬೇಕು. ನಾನು ಆಗಾಗ ಮ್ಯೂಸಿಕಲ್ ಕೀಬೋರ್ಡ್ ನುಡಿಸುತ್ತಿದ್ದೆ. ಫುಟ್ಬಾಲ್, ಬ್ಯಾಡ್ಮಿಂಟನ್ ಆಡ್ತಿದ್ದೆ. ಇದೆಲ್ಲವೂ ಒತ್ತಡ ರಹಿತವಾಗಿ ಓದಲು ಅನುಕೂಲವಾಗುತ್ತಿತ್ತು’’ ಎಂದರು.
ಈಗ ಎಸ್ಎಸ್ಎಲ್ಸಿ ಓದುತ್ತಿರುವವರು ಆರಂಭದಿಂದಲೇ ಕೂಲ್ ಆಗಿರುವುದನ್ನು ಅಳವಡಿಸಿಕೊಳ್ಳಿ. ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಿ. ಮುಂಜಾವಿನಲ್ಲಿ ಓದಿ. -ನಿಖಿಲೇಶ್ ಮಾರಾಳಿ, ಬೆಂಗಳೂರು
ಪ್ರೆಸೆಂಟೇಷನ್ ಚೆನ್ನಾಗಿರಬೇಕು- ಕೆ.ಎಸ್.ಚಿರಾಯು ಬೆಂಗಳೂರು: ‘‘ನಾವು ಹೇಗೆ ಓದ್ತೀವಿ ಅನ್ನೋದಕ್ಕಿಂತ ಉತ್ತರ ಪತ್ರಿಕೆಯನ್ನು ಹೇಗೆ ಪ್ರೆಸೆಂಟ್ ಮಾಡ್ತೀವಿ ಅನ್ನುವುದು ಕೂಡ ಅಂಕ ಗಳಿಕೆಗೆ ಮುಖ್ಯವಾಗುತ್ತೆ. ಬರವಣಿಗೆ ಮತ್ತು ಅದನ್ನು ಆರ್ಗನೈಸ್ ಮಾಡುವ ರೀತಿ ಮೌಲ್ಯಮಾಪಕರನ್ನು ಸೆಳೆಯುವಂತಿರಬೇಕು. ಅದುವೇ ನಾನು ಕಂಡುಕೊಂಡ ವಿಧಾನ’’ ಎನ್ನುತ್ತಾರೆ 625 ಅಂಕಗಳನ್ನು ಪಡೆದ ಬೆಂಗಳೂರಿನ ತುಮಕೂರು ರಸ್ತೆ 8 ನೇ ಮೈಲಿ ಬಳಿಯಿರುವ ಸ್ಕೋನ್ಸ್ಟ್ಯಾಟ್ ಸೇಂಟ್ ಮೇರಿಸ್ ಹೈಸ್ಕೂಲ್ನ ವಿದ್ಯಾರ್ಥಿ ಕೆ.ಎಸ್. ಚಿರಾಯು.‘‘ನನ್ನ ತಂದೆ ಶಂಕರನಾರಾಯಣ ಅವರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಾಯಿ ಕವಿತಾ ಗೃಹಿಣಿ. ಪೋಷಕರ ಪ್ರೋತ್ಸಾಹ ಮತ್ತು ನಮ್ಮ ಶಾಲಾ ಶಿಕ್ಷಕರ ಸಹಕಾರ ತುಂಬಾ ಚೆನ್ನಾಗಿತ್ತು. ಮಾದರಿ ಪ್ರಶ್ನೆ ಪತ್ರಿಕೆಗಳಿಗೆ ಉತ್ತರ ಬರೆಯುತ್ತಾ ಅಭ್ಯಾಸ ಮಾಡಿದೆ’’ ಎನ್ನುವ ಚಿರಾಯು ಎಂಬಿಬಿಎಸ್ ಓದಿ, ಭವಿಷ್ಯದಲ್ಲಿ ವೈದ್ಯರಾಗುವ ಕನಸು ಕಟ್ಟಿದ್ದಾರೆ.
ನಾನು ಸ್ಕೂಲ್ ಲೀಡರ್ ಆಗಿದ್ದರಿಂದ ಸಮಯದ ಅಭಾವ ಇತ್ತು. ಇದು ನನಗೆ ಸವಾಲಾಗಿತ್ತು. ಆದರೂ ಪ್ರತಿ ದಿನ 5 ಗಂಟೆ ಕಾಲ ಓದ್ತಿದ್ದೆ. -ಕೆ.ಎಸ್.ಚಿರಾಯು ಬೆಂಗಳೂರು
ಕಠಿಣ ಪರಿಶ್ರಮಕ್ಕೆ ಜಯ- ಅನುಷ್ ಎ. ಎಲ್.ಸುಬ್ರಹ್ಮಣ್ಯ(ದ.ಕ.): ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿ ಅನುಷ್ 625 ಅಂಕ ಪಡೆದು ರಾಜ್ಯಕ್ಕೆ ಟಾಪರ್ ಆಗಿದ್ದಾನೆ. ದ.ಕ. ಸಂಸದರ ಆದರ್ಶ ಗ್ರಾಮ ಬಳ್ಪದ ಎಣ್ಣೆಮಜಲು ನಿವಾಸಿ ಮೆಸ್ಕಾಂ ಉದ್ಯೋಗಿ ಲೋಕೇಶ್ ಮತ್ತು ಉಷಾ ದಂಪತಿ ಪುತ್ರ ಅನುಷ್. ‘‘ಟಾಪರ್ ಆಗಿದ್ದು ತಿಳಿದು ಸಂತೋಷ, ಆಶ್ಚರ್ಯವಾಯಿತು. 620ಕ್ಕಿಂತ ಅಧಿಕ ಅಂಕ ದೊರಕಬಹುದು ಎಂದು ಅಂದುಕೊಂಡಿದ್ದೆ. 625 ಬಂದಿರುವುದು ತುಂಬಾ ಖುಷಿಯಾಗಿದೆ’’ ಎನ್ನುತ್ತಾರೆ ಅನುಷ್. ಲಾಕ್ಡೌನ್ನಿಂದಾಗಿ ಪರೀಕ್ಷೆ ಮುಂದೂಡಿದ್ದರಿಂದ ಓದುವುದು ಕಡಿಮೆಯಾಗಿತ್ತು. ಆದರೆ, ನಿತ್ಯ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದೆ. ಪರೀಕ್ಷಾ ದಿನಾಂಕ ಘೋಷಣೆಯಾದ ನಂತರ ಹೆಚ್ಚು ಒತ್ತು ಕೊಟ್ಟು ಓದತೊಡಗಿದೆ. ಪರೀಕ್ಷೆ ಬರೆಯುವ ಸಮಯದಲ್ಲಿ ಕೊರೊನಾ ಮಹಾಮಾರಿಯ ಭಯವಿತ್ತು. ಮನೆಯಲ್ಲಿತಂದೆ ತಾಯಿ ಉತ್ತಮ ಸಹಕಾರ ನೀಡುತ್ತಿದ್ದರು. ಮನೆಯಲ್ಲಿಯೋಗ, ಪ್ರಾಣಾಯಾಮ ಮಾಡುತ್ತಿದ್ದೆ ಎನ್ನುತ್ತಾರೆ ಅನುಷ್.
ಮುಂದೆ ವಿಜ್ಞಾನ ವಿಭಾಗದಲ್ಲಿಅಧ್ಯಯನ ಮಾಡುತ್ತೇನೆ. ಮುಂದೆ ಐಎಫ್ಎಸ್ ಮಾಡಿ ಅರಣ್ಯಾಧಿಕಾರಿ ಆಗುವೆ. – ಅನುಷ್ ಎ.ಎಲ್. ಸುಬ್ರಹ್ಮಣ್ಯ, ದ.ಕ.
ಡಾಕ್ಟರ್ ಸೇವೆಯ ಕನಸು- ತನ್ಮಯಿ ಐ.ಪಿ.ಚಿಕ್ಕಮಗಳೂರು: ವೈದ್ಯ ಳಾಗುವ ಕನಸು ಕಾಣುತ್ತಿರುವ ನಗರದ ಸಂತ ಜೋಸೆಫರ ಬಾಲಕಿಯರ ಪ್ರೌಢಶಾಲೆ ವಿದ್ಯಾರ್ಥಿನಿ, ತಾಲೂಕಿನ ಇಂದಾವರದ ತನ್ಮಯಿ ಐ.ಪಿ. ಅವರು 625 ಅಂಕ ಪಡೆದಿದ್ದಾಳೆ. ಜಿಲ್ಲೆಯ ಇತಿಹಾಸದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಪೂರ್ಣ ಅಂಕ ಗಳಿಸಿದ್ದು ಇದೇ ಪ್ರಥಮ. ತನ್ಮಯಿ, ಉಪ ತಹಸೀಲ್ದಾರ್ ಐ.ಎಸ್. ಪ್ರಸನ್ನ ಹಾಗೂ ಮಲ್ಲಂದೂರು ಸರಕಾರಿ ಶಾಲೆಯ ಶಿಕ್ಷಕಿ ಡಿ.ಎಲ್.ಸಂಧ್ಯಾ ಅವರ ಪುತ್ರಿ. ‘‘ಅಂದಿನ ಪಾಠ ವನ್ನು ಅಂದೇ ಓದಿಕೊಳ್ಳುತ್ತಿದ್ದೆ. ಶಿಕ್ಷಕರೊಂದಿಗೆ ಚರ್ಚಿಸಿ ಸಂಶಯಗಳನ್ನು ನಿವಾರಿಸಿಕೊಳ್ಳುತ್ತಿದ್ದೆ. ಬಾಕಿ ಇದ್ದ ವಿಷಯಗಳನ್ನು ಮನನ ಮಾಡಿಕೊಳ್ಳಲು ಲಾಕ್ಡೌನ್ ಅವಧಿಯನ್ನು ಸದ್ಬಳಕೆ ಮಾಡಿಕೊಂಡೆ. ಇಷ್ಟಪಟ್ಟು, ಕಷ್ಟಪಟ್ಟು ಓದಿದರೆ ಯಶಸ್ಸು ನಮ್ಮ ದಾಗುತ್ತದೆ,’’ ಎಂದಳು. ಶಾಲೆಯಲ್ಲಿ ಶಿಕ್ಷಕರ, ಮನೆಯಲ್ಲಿ ಎಲ್ಲರ ಸಹಕಾರವಿತ್ತು. ಅಮ್ಮ ಹೆಚ್ಚು ಆಸ್ಥೆ ವಹಿಸಿದರು. ಸ್ನೇಹಿತರೊಂದಿಗೂ ಪಠ್ಯದ ಬಗ್ಗೆ ಚರ್ಚಿ ಸುತ್ತಿದ್ದೆ. ಇದರಿಂದ ಉತ್ತಮ ಅಂಕ ಗಳಿಸಬಹುದು ಎಂದು ಕಿರಿಯ ವಿದ್ಯಾರ್ಥಿಗಳಿಗೆ ಸಲಹೆ ನೀಡಿದಳು.
ಮೆಡಿಕಲ್ ಓದಿ ಡಾಕ್ಟರ್ ಆಗುವ ಕನಸಿದೆ. ಕೊರೊನಾ ಇರುವುದರಿಂದ ಬೇರೆ ಊರಿಗೆ ಹೋಗದೆ ಇಲ್ಲೇ ಇದ್ದು ಓದಲು ನಿರ್ಧರಿಸಿದ್ದೇನೆ. – ತನ್ಮಯಿ ಐ. ಪಿ. ಚಿಕ್ಕಮಗಳೂರು
ವೈದ್ಯಕೀಯ ಶಿಕ್ಷಣ ಪಡೆಯುವ ಗುರಿ- ನಿಧಿ ರಾವ್ ಮಂಗಳೂರುಮಂಗಳೂರು ಡೊಂಗರಕೇರಿ ಕೆನರಾ ಹೈಸ್ಕೂಲ್ ವಿದ್ಯಾರ್ಥಿನಿ ನಿಧಿ ರಾವ್ 624 ಅಂಕ ಗಳಿಸಿದ್ದಾರೆ. ಬ್ಯಾಂಕ್ ಸಿಬ್ಬಂದಿ ಜಯಚಂದ್ರ ಬಿ.ವಿ.(ಎಸ್ಬಿಐ) ಮತ್ತು ಸ್ವಪ್ನಾ ಜೆ.(ಕೆನರಾ ಬ್ಯಾಂಕ್) ಅವರ ಪುತ್ರಿ. ‘‘ಮುಂದೆ ಶಾರದಾ ವಿದ್ಯಾಲಯದಲ್ಲಿ ವಿಜ್ಞಾನ ವಿಭಾಗದಲ್ಲಿ ಪಿಸಿಎಂಬಿ ಪಡೆದು, ವೈದ್ಯಕೀಯ ಶಿಕ್ಷಣ ಪಡೆಯಬೇಕೆಂದಿದ್ದೇನೆ. ಈಗಾಗಲೇ ಆನ್ಲೈನ್ನಲ್ಲಿ ಬ್ರಿಜ್ ಕೋರ್ಸ್ ಆರಂಭವಾಗಿದೆ. ವೈದ್ಯೆ ಆಗಬೇಕೆನ್ನುವ ಗುರಿ ಇದೆ,’’ ಎನ್ನುತ್ತಾರೆ ನಿಧಿ ರಾವ್ ‘ವಿಜಯ ಕರ್ನಾಟಕ’ ಜತೆ ಮಾತನಾಡುತ್ತಾ ತಿಳಿಸಿದರು.
ರೈತ ದಂಪತಿಯ ಪುತ್ರ- ಮಹೇಶ್ ಜಿ.ಎಂ ಕುಣಿಗಲ್ ತಾ. ಕುಣಿಗಲ್ ತಾಲೂಕಿನ ಗುನ್ನಾಗರೆ ಗ್ರಾಮದ ರೈತ ದಂಪತಿಯ ಪುತ್ರ ಮಹೇಶ್ ಜಿ.ಎಂ. 624 ಅಂಕ ಪಡೆದಿದ್ದಾನೆ. ಕೊತ್ತಗೆರೆ ಹೋಬಳಿ ಗುನ್ನಾಗರೆ ಗ್ರಾಮದ ರೈತ ದಂಪತಿ ಮಾಯಣ್ಣ ಮತ್ತು ಶಶಿಕಲಾ ಅವರ ಎರಡನೇ ಪುತ್ರ ಇವರು. ಜ್ಞಾನಭಾರತಿ ಪ್ರೌಢಶಾಲೆಯ ವಿದ್ಯಾರ್ಥಿ. ಫಲಿತಾಂಶದಿಂದ ಮಹೇಶ್ ಸಂತೋಷಗೊಂಡಿದ್ದಾನೆ.
ಸಮಾಜ ವಿಜ್ಞಾನದಲ್ಲಿ ಅಂಕ ಕೊರತೆ- ಟಿ.ಎಸ್.ಅಭಿರಾಮ್ ಸಾಗರ. ಸಾಗರ ಅಗ್ರಹಾರದ ವಾಸಿ ನ್ಯಾಯವಾದಿ ಟಿ.ಎಸ್.ರಮಣ ಮತ್ತು ಉಷಾ ದಂಪತಿ ಪುತ್ರ ಟಿ.ಎಸ್.ಅಭಿರಾಮ್ 624 ಅಂಕಗಳಿಸಿದ್ದಾನೆ. ಬಿ.ಎಚ್.ರಸ್ತೆಯ ಎಂಡಿಎಫ್ ಸಂಸ್ಥೆಯ ಪ್ರಗತಿ ಸಂಯುಕ್ತ ಶಾಲೆಯ ವಿದ್ಯಾರ್ಥಿ ಟಿ.ಎಸ್.ಅಭಿರಾಮ್ ಸಮಾಜ ವಿಜ್ಞಾನದಲ್ಲಿ ಮಾತ್ರ ಒಂದು ಅಂಕ ಕಳೆದುಕೊಂಡಿದ್ದು, ಉಳಿದ ಎಲ್ಲಾ ವಿಷಯಗಳಲ್ಲಿ ಸಂಪೂರ್ಣ ಅಂಕ ಪಡೆದುಕೊಂಡಿದ್ದಾರೆ.
ಎಂಜಿನಿಯರ್ ಕನಸು- ಅನಿರುದ್ಧ ಗುತ್ತಿಕರ್ ಸಿದ್ದಾಪುರ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಎಂಜಿಸಿ ಕಾಲೇಜ್ ಉಪನ್ಯಾಸಕ ಸುರೇಶ ಗುತ್ತಿಕರ ಹಾಗೂ ಕಾನಗೋಡು ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ಕಾಂಚನಾ ಕಾಮತ್ ದಂಪತಿ ಪುತ್ರ 624 ಅಂಕ ಗಳಿಸಿದ್ದಾನೆ. ಮುಂದೆ ಐಐಟಿ ಮಾಡಿ ಕಂಪ್ಯೂಟರ್ ಎಂಜಿನಿಯರ್ ಆಗಬೇಕೆಂಬ ಆಸೆ ಹೊಂದಿದ್ದಾನೆ. ಸಮಾಜಶಾಸ್ತ್ರಕ್ಕೆ 99 ಅಂಕ ಪಡೆದಿದ್ದು, ಉಳಿದ ಎಲ್ಲವಿಷಯಗಳಿಗೂ ನೂರಕ್ಕೆ ನೂರು ಅಂಕ ಪಡೆದಿದ್ದಾನೆ.
ಗಣಿತ ಇಷ್ಟಪಡುವ ಹುಡುಗಿ- ಎಂ.ಡಿ. ವೀಣಾ ಬೆಂಗಳೂರು. ಬೆಂಗಳೂರಿನ ಪೂರ್ಣ ಪ್ರಜ್ಞಾ ಎಜುಕೇಷನ್ ಸೆಂಟರ್ನ ವಿದ್ಯಾರ್ಥಿ ಎಂ.ಡಿ.ವೀಣಾ 624 ಅಂಕ ಗಳಿಸಿ ಗಮನ ಸೆಳೆದಿದ್ದಾಳೆ. ಇವರ ತಂದೆ ಗುತ್ತಿಗೆದಾರ ತಾಯಿ ಹೈಸ್ಕೂಲ್ ಶಿಕ್ಷಕಿ. ‘‘ನನಗೆ ಗಣಿತ ಇಷ್ಟದ ಸಬ್ಜೆಕ್ಟ್. ಪಿಯುನಲ್ಲಿ ಪಿಸಿಎಂಬಿ ತೆಗೆದುಕೊಂಡು ಎಂಬಿಬಿಎಸ್ ಓದಬೇಕೆಂದುಕೊಂಡಿದ್ದೇನೆ. ಜತೆಗೆ ಐಎಎಸ್ ಆಗುವ ಆಸೆಯೂ ಇದೆ’’ ಎನ್ನುತ್ತಾಳೆ ವೀಣಾ.
ಪುಳಕಿತ ಸುರಭಿ – ಸುರಭಿ ಎಸ್.ಶೆಟ್ಟಿ ಬೈಂದೂರು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬೈಂದೂರಿನ ನಾಗೂರು ಸಂದೀಪನ್ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸುರಭಿ ಎಸ್. ಶೆಟ್ಟಿ 624 ಅಂಕ ಪಡೆದು ರಾಜ್ಯಕ್ಕೆ ಟಾಪರ್ ಆಗಿದ್ದಾಳೆ. ಉಪ್ಪುಂದದ ಉದ್ಯಮಿ ಎಚ್. ಸುರೇಶ ಶೆಟ್ಟಿ ಹಾಗೂ ಸೀಮಾ ಎಸ್. ಶೆಟ್ಟಿ ದಂಪತಿ ಪುತ್ರಿ ಇವರು. ಟಾಪರ್ ಆಗಿದ್ದರೆ ಸುರಭಿ ಅತೀವ ಸಂತೋಷ ವ್ಯಕ್ತಪಡಿಸಿದ್ದಾಳೆ.
ಸಂಶೋಧನಾ ಕ್ಷೇತ್ರ ಇಷ್ಟ- ಸುಮುಖ್ ಶೆಟ್ಟಿ ವಿಟ್ಲ, ದ.ಕನ್ನಡ ಜಿಲ್ಲೆಅಳಿಕೆ ಶ್ರೀಸತ್ಯಸಾಯಿ ಲೋಕಸೇವಾ ಪ್ರೌಢಶಾಲೆಯ ಸುಮುಖ್ ಸುಬ್ರಹ್ಮಣ್ಯ ಶೆಟ್ಟಿ 624 ಅಂಕ ಗಳಿಸಿದ್ದಾನೆ. ಪೋಷಕರು ಮೂಲತಃ ಹೊನ್ನಾವರದವರು. ತಂದೆ ಸುಬ್ರಹ್ಮಣ್ಯ ಶೆಟ್ಟಿ ತೀರ್ಥಹಳ್ಳಿಯಲ್ಲಿ ಹೋಟೆಲ್ ನಡೆಸುತ್ತಿದ್ದಾರೆ. ತಾಯಿ ಬೆಜ್ಜೋಳ್ಳಿ ಮಲ್ನಾಡ್ ಹೈಸ್ಕೂಲ್ನಲ್ಲಿ ಶಿಕ್ಷಕಿಯಾಗಿದ್ದಾರೆ. ಸುಮುಖ್ಗೆ ಸಂಶೋಧನಾ ಕ್ಷೇತ್ರದಲ್ಲಿ ಮುಂದುವರಿಯುವ ಆಸೆ ಇದೆ.
ಸ್ಫೂರ್ತಿದಾಯಕ ಫಲಿತಾಂಶ- ಎ.ಎಸ್.ಸ್ಫೂರ್ತಿ ಬೆಂಗಳೂರು. 624 ಅಂಕ ಪಡೆದ ಎ.ಎಸ್. ಸ್ಫೂರ್ತಿ ಬೆಂಗಳೂರಿನ ಆರ್ಪಿಸಿ ಲೇಔಟ್ನ ನ್ಯೂ ಕೇಂಬ್ರಿಡ್ಜ್ ಹೈಸ್ಕೂಲ್ನ ವಿದ್ಯಾರ್ಥಿನಿ. ‘ ‘ಇಸ್ರೋದಲ್ಲಿ ವಿಜ್ಞಾನಿಯಾಗಬೇಕೆಂಬ ಗುರಿ ನನ್ನದು. ಅದೇ ನಿಟ್ಟಿನಲ್ಲಿ ಓದುತ್ತಿದ್ದೇನೆ’’ ಎನ್ನುವ ಸೂರ್ತಿ, ‘ ‘ಹಳೇ ಪ್ರಶ್ನೆ ಪತ್ರಿಕೆಗಳನ್ನು ಇಟ್ಟುಕೊಂಡು ಅಭ್ಯಾಸ ಮಾಡುತ್ತಿದ್ದೆ. ನಿತ್ಯ ಬೆಳಗ್ಗೆ 4.30ಕ್ಕೆ ಎದ್ದು ಓದುತ್ತಿದ್ದೆ. ಶ್ರಮಪಟ್ಟರೆ ಫಲ ಸಿಕ್ಕೇ ಸಿಗುತ್ತದೆ’’ ಎಂದು ಖುಷಿಯಿಂದ ನುಡಿಯುತ್ತಾಳೆ.
ಇಂಗ್ಲಿಷ್ ಕಾದಂಬರಿ ಓದುವ ಹಾಬಿ- ನಿಹಾರಿಕಾ ಸಂತೋಷ ಕುಲಕರ್ಣಿ, ಬೆಂಗಳೂರು. ಬೆಂಗಳೂರಿನ ಪೂರ್ಣ ಪ್ರಜ್ಞಾ ಎಜುಕೇಷನ್ ಸೆಂಟರ್ನ ವಿದ್ಯಾರ್ಥಿ, ಸದಾಶಿವ ನಗರದ ನಿವಾಸಿ ನಿಹಾರಿಕಾ ಸಂತೋಷ್ ಕುಲಕರ್ಣಿ 624 ಅಂಕ ಗಳಿಸಿದ್ದು, ನಿತ್ಯ 8ರಿಂದ 10 ಗಂಟೆ ಓದುತ್ತಿದ್ದಳು. ‘‘ಒತ್ತಡದಿಂದ ಮುಕ್ತವಾಗಲು ಇಂಗ್ಲಿಷ್ ಕಾದಂಬರಿಗಳನ್ನ ಓದುತ್ತಿದ್ದೆ. ಅಲ್ಲದೇ ಕೊರೊನಾದಿಂದ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಓದಲು ಹೆಚ್ಚು ಸಮಯ ಸಿಕ್ಕಿತು,’’ ಎನ್ನುತ್ತಾಳೆ ನಿಹಾರಿಕಾ.
ವಿಜ್ಞಾನಿಯಾಗುವ ಕನಸು – ಪ್ರಣವ್ ವಿಜಯ ನಾಡಿಗೇರ್, ಬೆಂಗಳೂರು. ಬೆಂಗಳೂರಿನ ವಿದ್ಯಾಧಿವರ್ಧಕ ಸರ್ದಾಧಿರ್ ಪಟೇಲ್ ಶಾಲೆಯ ಪ್ರಣವ್ ವಿಜಯ್ ನಾಡಿಗೇರ್ 624 ಗಳಿಸಿ ದ್ದಾನೆ. ತಂದೆ ವಿಜಯ್ ನಾಡಿಗೇರ್ ಎಂಜಿನಿಯರ್ ವೃತ್ತಿ ನಿರ್ವಹಿಸುತ್ತಿದ್ದಾರೆ. ತಾಯಿ ಗಂಗಾ ನಾಡಿಗೇರ್ ಗೃಹಿಣಿ. ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ಆಸಕ್ತಿ ಹೊಂದಿರುವ ಪ್ರಣವ್, ಭವಿಷ್ಯದಲ್ಲಿ ವಿಜ್ಞಾನಿಯಾಗಬೇಕೆಂಬ ಕನಸು ಕಂಡಿದ್ದಾನೆ.
ಪ್ರಾಧ್ಯಾಪಕನಾಗುವ ಬಯಕೆ- ಜಿ.ಕೆ.ಅಮೋಘ್ ಬೆಂಗಳೂರು. ತಂದೆ-ತಾಯಿ ಮತ್ತು ಶಿಕ್ಷಕರ ಪ್ರೋತ್ಸಾಹದಿಂದ ಶೇ.99.99 ಅಂಕ ಪಡೆದಿದ್ದಾನೆ ಜಿ.ಕೆ. ಅಮೋಘ್. ರಾಜಾಜಿನಗರದ ವಿದ್ಯಾವರ್ಧಕ ಸರ್ದಾರ್ ಪಟೇಲ್ ಶಾಲೆಯ ವಿದ್ಯಾರ್ಥಿ. 624 ಅಂಕಗಳನ್ನು ಪಡೆದಿದ್ದಾರೆ. ಭವಿಷ್ಯದಲ್ಲಿ ಉತ್ತಮ ಪ್ರಾಧ್ಯಾಪಕರಾಗಬೇಕೆಂಬ ಆಸೆ ಹೊತ್ತಿದ್ದಾರೆ. ಪ್ರಸ್ತುತ ಮಲ್ಲೇಶ್ವರದಲ್ಲಿ ತಂದೆ ಗೌತಮ್, ತಾಯಿ ಕರುಣಾ ಜತೆ ನೆಲೆಸಿದ್ದಾರೆ.
– ಕನ್ನಡ ಮಾಧ್ಯಮ ಟಾಪರ್ಸ್ –
ವಿಜ್ಞಾನಿಯಾಗುವ ಸಲಹೆ ನೀಡಿದ ಶಿಕ್ಷಕ- ಅಭಿಷೇಕ್ ಎಂ. ಹರಿಹರ, ದಾವಣಗೆರೆ ಜಿ.ಹರಿಹರದ ಎಂಕೆಟಿಎಲ್ಕೆ ಪ್ರೌಢಶಾಲೆ ವಿದ್ಯಾರ್ಥಿ ಅಭಿಷೇಕ್ ಎಂ. ಕನ್ನಡ ಮಾಧ್ಯಮ ವಿಭಾಗದಲ್ಲಿ 623 ಅಂಕ ಗಳಿಸಿ ಟಾಪರ್ ಆಗಿದ್ದಾನೆ. ಟ್ಯಾಕ್ಸಿ ಚಾಲಕ ಸಮೀಪದ ಗುತ್ತೂರು ವಾಸಿ ಮಂಜುನಾಥ, ಗೃಹಣಿ ನೇತ್ರಾವತಿ ಪುತ್ರನಾದ, ಇಲ್ಲಿನ ಎಂಕೆಇಟಿ ಎಲ್ಕೆ ಪ್ರೌಢಶಾಲೆ ವಿದ್ಯಾರ್ಥಿ ಅಭಿಷೇಕ್ನ ಸಾಧನೆ ಮನೆಮಾತಾಗಿದೆ. ‘‘ಅಭಿಷೇಕ್ಗೆ ವಿಜ್ಞಾನಿಯಾಗುವ ಎಂದು ಸಲಹೆ ನೀಡಿದ್ದೇವೆ’’ ಎನ್ನುತ್ತಾರೆ ಮುಖ್ಯ ಶಿಕ್ಷಕ ವಿನೋದ್ ಹೆಗಡೆ.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ ಸಹನಾ- ಸಹನಾ ಕಾಮಗೌಡರ ಚಿಕ್ಕೋಡಿ: ಚಿಕ್ಕೋಡಿಯ ಎಂ.ಕೆ.ಕವಟಗಿಮಠ ಪ್ರೌಢಶಾಲೆ ವಿದ್ಯಾರ್ಥಿನಿ ಸಹನಾ ಕಾಮಗೌಡರ 623 ಅಂಕ ಗಳಿಸುವ ಮೂಲಕ ಕನ್ನಡ ಮಾಧ್ಯಮದಲ್ಲಿರಾಜ್ಯಕ್ಕೆ ಟಾಪರ್ ಆಗಿದ್ದಾಳೆ. ತಂದೆ ಬ್ಯಾಂಕ್ ಒಂದರಲ್ಲಿವ್ಯವಸ್ಥಾಪಕರಾಗಿದ್ದಾರೆ. ಸಹನಾ ಕನ್ನಡ ಭಾಷೆಯಲ್ಲಿ125ಕ್ಕೆ 125, ಇಂಗ್ಲಿಷ್ ಮತ್ತು ಸಮಾಜ ವಿಜ್ಞಾನದಲ್ಲಿ100ಕ್ಕೆ ತಲಾ 99 ಮತ್ತು ಉಳಿದ ವಿಷಯಗಳಲ್ಲಿ100ಕ್ಕೆ 100 ಅಂಕ ಗಳಿಸಿದ್ದಾರೆ.
ಗಣಿತ ಉಪನ್ಯಾಸಕ ಪುತ್ರಿಯ ಅದ್ಭುತ ಸಾಧನೆ- ಶ್ರುತಿ ಪಾಟೀಲ್ ಘಟಪ್ರಭಾ, ಗೋಕಾಕ ತಾ.ಗೋಕಾಕ ತಾಲೂಕಿನ ಘಟಪ್ರಭಾದ ಕೆ.ಆರ್.ಹುಕ್ಕೇರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಶ್ರುತಿ ಪಾಟೀಲ 623 ಅಂಕ ಗಳಿಸಿ ಕನ್ನಡ ಮಾಧ್ಯಮದಲ್ಲಿ ರಾಜ್ಯಕ್ಕೆ ಟಾಪರ್ ಆಗಿದ್ದಾಳೆ. ಇವರ ತಂದೆ ಪದವಿ ಪೂರ್ವ ಕಾಲೇಜಿನಲ್ಲಿಗಣಿತ ಉಪನ್ಯಾಸಕರಾಗಿದ್ದಾರೆ. ಶ್ರುತಿ ಕನ್ನಡ ಭಾಷೆಯಲ್ಲಿ125, ವಿಜ್ಞಾನದಲ್ಲಿ98 ಮತ್ತು ಉಳಿದೆಲ್ಲ ವಿಷಯಗಳಲ್ಲಿ100ಕ್ಕೆ 100 ಅಂಕ ಗಳಿಸಿದ್ದಾರೆ.
ಮೇಘಾಲಯದ ಹುಡುಗ ಕನ್ನಡದ ಕಲಿವಿಕ ಸುದ್ದಿಲೋಕ ಹೊನ್ನಾವರ: ಕನ್ನಡಿಗರೇ ಕನ್ನಡವೆಂದರೆ ಮೂಗು ಮುರಿಯುವ ಇಂದಿನ ದಿನಗಳಲ್ಲಿ ಹೊನ್ನಾವರ ತಾಲೂಕಿನ ಕರ್ಕಿಯ ಶ್ರೀ ದಯಾನಂದ ವಿದ್ಯಾಭಾರತೀ ಗುರುಕುಲದಲ್ಲಿ ಕಲಿಯುತ್ತಿರುವ ಮೇಘಾಲಯದ ದಾಪಿಯಾಂಗ್ ಖೊಂಗ್ತಿಂಗ್ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ನೂರಕ್ಕೆ 99 ಅಂಕ ಗಳಿಸಿ ಮಾದರಿಯಾಗಿದ್ದಾನೆ. ಅವನ ಒಟ್ಟು ಅಂಕ ಸಾಧನೆ 97.12%. ಮೇಘಾಲಯದ ಜೆವ್ರ ಎನ್ನುವ ಊರಿನ ಇವನನ್ನು ಸ್ವಾಮಿ ಚಿದ್ರೂಪಾನಂದ ಸ್ವಾಮೀಜಿಗಳವರು ಹೊನ್ನಾವರ ತಾಲೂಕಿನ ಕರ್ಕಿಯ ಶ್ರೀದಯಾನಂದ ವಿದ್ಯಾಭಾರತೀ ಗುರುಕುಲದಲ್ಲಿ ಇಟ್ಟು ಉಚಿತ ಶಿಕ್ಷಣ ಕೊಡಿಸುತ್ತಿದ್ದಾರೆ. ಈತನ ಭಾಷೆ ಮೇಘಾಲಯ. ಜಾನಪದ ಭಾಷೆ ಖಾಸಿ. ಐದನೇ ತರಗತಿಗೆ ಇಲ್ಲಿಯ ಗುರುಕುಲಕ್ಕೆ ಸೇರಿಸಿದ್ದರು.
ಬಲ ನೀಡಿದ ವಿಜಯ ಕರ್ನಾಟಕ ವಿದ್ಯಾರ್ಥಿ ಸಂಚಿಕೆ
ಟೀ ಪುಡಿ ಮಾರುವವರ ಪುತ್ರಿ ಸಾಧನೆ ಕಲಬುರಗಿ: ಚಹಾ ಪುಡಿ ಮಾರಾಟ ಮಾಡುವ ಭೀಮಯ್ಯಾ ಮುರಡ್ ಅವರ ಮನೆಯಲ್ಲಿ ಸೋಮವಾರ ಸಂಭ್ರಮದ ಘಮ. ಅವರ ಪುತ್ರಿ ಜ್ಯೋತಿ ಎಸ್ಸೆಸ್ಸೆಲ್ಸಿಯಲ್ಲಿ 614 (ಧಿಶೇ.98.25) ಅಂಕ ಪಡೆದಿದ್ದೇ ಇದಕ್ಕೆ ಕಾರಣ. ಬಡತನದ ಹಿನ್ನೆಲೆಯ ಈ ಕುಟುಂಬ ಜ್ಯೋತಿಯನ್ನು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಬೆಳಮಗಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸೇರಿಸಿ ಶಿಕ್ಷಣ ನೀಡುತ್ತಿದೆ. ‘‘ಮುಂದೆ ಸೈನ್ಸ್ ಮಾಡಿ ಎಂಬಿಬಿಎಸ್ ಮಾಡಬೇಕೆಂಬ ಕನಸಿದೆ. ನನ್ನ ಓದಿಗೆ ವಿದ್ಯಾರ್ಥಿ ಸಂಚಿಕೆ ಮಿನಿ ವಿಜಯ ಶಾಲೆಗೆ ಬರುತಿತ್ತು. ಇದರಿಂದಲೂ ಹೆಚ್ಚು ಅಂಕ ಪಡೆಯಲು ಅನುಕೂಲವಾಗಿದೆ,’’ ಎನ್ನುತ್ತಾಳೆ ಜ್ಯೋತಿ.
ಕಾಲ್ಬೆರಳಲ್ಲಿ ಬರೆದ ಕೌಶಿಕ್ಗೆ 424 ಬಂಟ್ವಾಳ(ದ.ಕ.): ಶಿಕ್ಷ ಣ ಸಚಿವರಿಂದಲೇ ಅಭಿನಂದನೆ ಮತ್ತು ವಿಶೇಷ ಮೆಚ್ಚುಗೆ ಗಳಿಸಿದ್ದ ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಎಸ್ವಿಎಸ್ ಪ್ರೌಢಶಾಲೆಯಲ್ಲಿ ಪರೀಕ್ಷೆಗೆ ಹಾಜರಾಗಿ ಯಾರ ಸಹಾಯವೂ ಪಡೆಯದೆ ಕಾಲಿನ ಬೆರಳುಗಳಿಂದಲೇ ಉತ್ತರ ಬರೆದ ಬಂಟ್ವಾಳದ ಹತ್ತನೇ ತರಗತಿ ವಿದ್ಯಾರ್ಥಿ ಕೌಶಿಕ್ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 424 ಅಂಕ(ಶೇ.68) ಗಳಿಸಿದ್ದಾನೆ.ಈ ಕುರಿತು ಪ್ರತಿಕ್ರಿಯಿಸಿರುವ ಕೌಶಿಕ್, ‘‘ಪಿಯುಸಿಯಲ್ಲಿ ವಾಣಿಜ್ಯ ವಿಭಾಗದಲ್ಲಿವಿದ್ಯಾಭ್ಯಾಸ ನಡೆಸುವ ಇಚ್ಛೆ ಇದ್ದು, ಶಾಸಕ ರಾಜೇಶ್ ನಾಯ್ಕ್ ಅವರು ನೆರವು ನೀಡಲಿದ್ದಾರೆ’’ ಎಂದು ತಿಳಿಸಿದ್ದಾನೆ. ರಾಜೇಶ್ ಆಚಾರ್ಯ ಮತ್ತು ಜಲಜಾಕ್ಷಿ ದಂಪತಿಯ ಪುತ್ರನಾದ ಕೌಶಿಕ್ ಅಣ್ಣ ಕಾರ್ತಿಕ್, ತಮ್ಮ ಮೋಕ್ಷಿತ್ ಜತೆ ಬಂಟ್ವಾಳ ಕಂಚಿಕಾರಪೇಟೆಯ ಪುಟ್ಟ ಮನೆಯಲ್ಲಿ ವಾಸವಿದ್ದಾರೆ. ತಂದೆಗೆ ಮರಗೆಲಸ. ಬಡತನವಿದ್ದರೂ ಹುಟ್ಟುವಾಗಲೇ ತನ್ನೆರಡೂ ಕೈಗಳಲ್ಲಿ ವೈಕಲ್ಯಗಳಿದ್ದರೂ ಕೌಶಿಕ್ ಯಾರ ಸಹಾಯವೂ ಇಲ್ಲದೆ ಕಾಲ್ಬೆರಳಲ್ಲೇ ಬರೆಯಲು ಕಲಿತಿದ್ದಾನೆ.