ಗೊಂದಲ ಬಿಡಿ, ಚೆನ್ನಾಗಿ ಬರೆಯಿರಿ

– ರಾಜ್ಯಾದ್ಯಂತ ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ | ಕೊರೊನಾ ರಕ್ಷಣೆಯೊಂದಿಗೆ ಪರೀಕ್ಷೆ ನಡೆಸಲು ಸಿದ್ಧತೆ.

ವಿಕ ಸುದ್ದಿಲೋಕ ಬೆಂಗಳೂರು.
ಕೋವಿಡ್-19 ಆತಂಕದ ನಡುವೆ ಜೂ.25ರಿಂದ ಪ್ರಾರಂಭವಾಗಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡಿ ಸಜ್ಜುಗೊಳಿಸಲಾಗಿದೆ. ಪರೀಕ್ಷೆ ವ್ಯವಸ್ಥಿತವಾಗಿ ನಡೆಯುತ್ತದೆ. ವಿದ್ಯಾರ್ಥಿಗಳು ಮತ್ತು ಪೋಷಕರು ಆತಂಕಪಡುವ ಅಗತ್ಯವಿಲ್ಲ ಎಂದು ಸರಕಾರ ಅಭಯ ನೀಡಿದೆ.
ರಾಜ್ಯಾದ್ಯಂತ ಕೊರೊನಾ ಸೋಂಕು ಉಲ್ಬಣಗೊಳ್ಳುತ್ತಿದ್ದು, ಮಕ್ಕಳ ಆರೋಗ್ಯದ ದೃಷ್ಟಿಯಿಂದ ಪರೀಕ್ಷೆ ಮುಂದೂಡಬೇಕೆಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮನವಿಯನ್ನು ಸರಕಾರ ಸಾರಾಸಗಟಾಗಿ ತಳ್ಳಿ ಹಾಕಿದೆ. ವಿದ್ಯಾರ್ಥಿಗಳು ಯಾವುದೇ ಗೊಂದಲಗಳಿಗೆ ಒಳಗಾಗದೆ ಏಕಾಗ್ರತೆಯಿಂದ ಪರೀಕ್ಷೆ ಬರೆಯಬೇಕೆಂದು ಎಸ್ಎಸ್ಎಲ್‌ಸಿ  ಪರೀಕ್ಷಾ ಮಂಡಳಿ ಮನವಿ ಮಾಡಿದೆ.
‘‘ರಾಜ್ಯ ಸರಕಾರದ ತಜ್ಞರ ಸಮಿತಿ ಜತೆ ಕೋವಿಡ್-19ನ ಎಲ್ಲಾ ಆತಂಕಗಳ ಬಗ್ಗೆ ಚರ್ಚಿಸಲಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಂಬಂಧಿಸಿ ಶಿಕ್ಷಣ ಇಲಾಖೆ ತೆಗೆದುಕೊಂಡಿರುವ ಎಲ್ಲಾ ಸುರಕ್ಷತಾ ಕ್ರಮಗಳ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ಕೂಡ ಪರೀಕ್ಷೆ ನಡೆಸಲು ಹಸಿರು ನಿಶಾನೆ ತೋರಿವೆ. ಆದ್ದರಿಂದ ಆತಂಕ ಪಡುವ ಅಗತ್ಯವಿಲ್ಲ. ಯಾವುದೇ ಲೋಪಗಳು ಸಂಭವಿಸದಂತೆ ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗುವುದು,’’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್‌ ಕುಮಾರ್ ತಿಳಿಸಿದ್ದಾರೆ. ಕೊರೊನಾ ವೈರಸ್ ಸೋಂಕಿತರು ಹಾಗೂ ಸೋಂಕಿತ ಸಂಬಂಧಿಗಳನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ಈ ಬಾರಿ ಪರೀಕ್ಷೆ ನಿರಾಕರಿಸಲಾಗಿದ್ದು, ಜುಲೈ ತಿಂಗಳಲ್ಲಿ ನಡೆಯಲಿರುವ ಪೂರಕ ಪರೀಕ್ಷೆ ವೇಳೆ ಅವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ.

ವಿದ್ಯಾರ್ಥಿಗಳೇ ನಿರಾಳವಾಗಿರಿ…
1. ಯಾವುದೇ ಆತಂಕ ಬೇಡ, ಮನಸು ನಿರಾಳವಾಗಿರಲಿ. ಖುಷಿಯಾಗಿ ಪರೀಕ್ಷೆ ಬರೆಯಿರಿ.
2. ಆರೋಗ್ಯ ತಪಾಸಣೆ ಕಾರಣ ನಿಗದಿತ ಸಮಯಕ್ಕಿಂತ 1 ಗಂಟೆ 30 ನಿಮಿಷ ಮುನ್ನ ಹಾಜರಾಗಿ.
3. ಬಾಗಿಲು, ಕಿಟಕಿ, ಯಾವುದೇ ವಸ್ತುಗಳನ್ನು ಅನಗತ್ಯವಾಗಿ ಮುಟ್ಟಬೇಡಿ.
4. ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಅನಾರೋಗ್ಯದ ಲಕ್ಷಣ ಕಂಡು ಬಂದಲ್ಲಿ ಮೇಲ್ವಿಚಾರಕರಿಗೆ ತಿಳಿಸಿ.
5. ನಿಮ್ಮದೇ ಪ್ರತ್ಯೇಕ ಬ್ಯಾಗ್‌ನಲ್ಲಿ ನೀರಿನ ಬಾಟಲಿ ಹಾಗೂ ಆಹಾರದ ಡಬ್ಬಿ ತನ್ನಿ.

ಏನೇನು ಸಿದ್ಧತಾ ಕ್ರಮ?
– ಪರೀಕ್ಷಾರ್ಥಿಗಳಿಗೆ ಮಾಸ್ಕ್ ವಿತರಣೆ, ಸ್ಯಾನಿಟೈಸರ್ ಬಳಕೆ
– ಆರೋಗ್ಯ ಪರೀಕ್ಷಾ ಕೇಂದ್ರ
– ಅಂತರ ಕಾಪಾಡಲು ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಬಿಳಿ ಬಣ್ಣದ ಬಾಕ್ಸ್
– ಅಗತ್ಯವಿದ್ದೆಡೆ ಸಾರ್ವಜನಿಕ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ
– ಕಂಟೈನ್ಮೆಂಟ್ ವಲಯದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಾಹನ ವ್ಯವಸ್ಥೆ
– ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ
– ದೂರದ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ, ಸಾರಿಗೆ ವ್ಯವಸ್ಥೆ .

8,48,203- ಪರೀಕ್ಷೆ ಬರೆಯುವವರು
2,879- ಪರೀಕ್ಷಾ ಕೇಂದ್ರಗಳು

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top