– ರಾಮಸ್ವಾಮಿ ಹುಲಕೋಡು
ಕೊರೊನಾ ವೈರಸ್ ದಾಳಿಯಿಂದ ಇಡೀ ಜಗತ್ತಿನ ಆರ್ಥಿಕತೆ ಕುಸಿದು ಬಿದ್ದಿದೆ. ಹಿಂದೆಂದೂ ಕಂಡಿರದಂಥ ಪರಿಸ್ಥಿತಿ ನಿರ್ಮಾಣವಾಗಿದ್ದು, ಉದ್ಯೋಗ ಮಾರುಕಟ್ಟೆಯ ಮೇಲೂ ಇದು ನೇರ ಪರಿಣಾಮ ಬೀರಿದೆ. ಹೀಗಾಗಿ ಈಗಾಗಲೇ ಉದ್ಯೋಗದಲ್ಲಿರುವವರು, ಉದ್ಯೋಗದ ನಿರೀಕ್ಷೆಯಲ್ಲಿರುವ ಅಭದ್ರತೆಯಿಂದಲೇ ದಿನ ದೂಡುವಂತಾಗಿದೆ. ನಮ್ಮ ದೇಶದಲ್ಲಿ ನಿರುದ್ಯೋಗದ ಪ್ರಮಾಣ ಈಗ ಶೇ.30ಕ್ಕಿಂತೂ ಹೆಚ್ಚಿದೆ ಎಂದು ವಿವಿಧ ಸಮೀಕ್ಷೆಗಳು ಅಭಿಪ್ರಾಯಪಟ್ಟಿವೆ. ಮುಂದೆ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆಗಳಿವೆ. ಇಂಥ ಸಂದರ್ಭದಲ್ಲಿ ಈಗ ಉದ್ಯೋಗ ಮಾಡುತ್ತಿರುವವರು ಮತ್ತು ಉದ್ಯೋಗದ ನಿರೀಕ್ಷೆಯಲ್ಲಿರುವವರು ಏನು ಮಾಡಬೇಕು? ಪರಿಸ್ಥಿತಿಯನ್ನು ಎದರಿಸುವುದು ಹೇಗೆ? ಈ ಪ್ರಶ್ನೆಗಳಿಗೆಲ್ಲ ಉತ್ತರವಿದೆ. ಆದರೆ, ಯಾವುದೇ ಕಾರಣಕ್ಕೂ ಧೈರ್ಯಗುಂದಬಾರದು. ನಾವೇನು ಮಾಡಬೇಕು ನೋಡೋಣ ಬನ್ನಿ.
1. ಬಹು ಕೌಶಲಿಗರಾಗಿ
ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಉದ್ಯೋಗದಾತರು ಇನ್ನು ಮುಂದೆ ಒಂದೇ ಕೆಲಸ ಮಾಡುತ್ತಿದ್ದ ಉದ್ಯೋಗಿಗಳಿಗಿಂತ ಬೇರೆ ಬೇರೆ ಕೆಲಸಗಳನ್ನೂ ಸಮರ್ಥವಾಗಿ ನಿರ್ವಹಿಸಬಲ್ಲವರಿಗೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆಗಳಿವೆ. ನಿಮ್ಮ ಕೆಲಸ ಉಳಿಯಬೇಕಾದರೆ ಅಥವಾ ನಿಮಗೆ ಕೆಲಸ ದೊರೆಯಬೇಕಾದರೆ ನೀವು ಮಲ್ಟಿ ಟಾಸ್ಕರ್ ಆಗಬೇಕು. ಅಂದರೆ ಬೇರೆ ಬೇರೆ ಕೆಲಸಗಳನ್ನು ಮಾಡುವ ಸ್ಕಿಲ್ ಬೆಳೆಸಿಕೊಳ್ಳಬೇಕು. ಲಾಕ್‌ಡೌನ್‌ನ ಈ ಸಂದರ್ಭದಲ್ಲಿ ನಿಮಗೆ ಈಗ ತಿಳಿದಿರುವ ಕೌಶಲದ ಜತೆಗೆ, ಮತ್ತೇನು ಕಲಿಯಬಹುದು, ಯಾವೆಲ್ಲಾ ಕೆಲಸವನ್ನು ನಾನು ನಿರ್ವಹಿಸಬಲ್ಲೆ ಎಂದು ಯೋಚಿಸಿ. ಹೊಸತನ್ನು ಕಲಿಯಬೇಕಿದ್ದರೆ, ತಡಮಾಡದೇ ಇಂದಿನಿಂದಲೇ ಕಲಿಕೆ ಆರಂಭಿಸಿ. ಕೆಲವು ಕೋರ್ಸ್‌ಗಳನ್ನು ಆನ್‌ಲೈನ್‌ನಲ್ಲಿಯೂ ಮಾಡಬಹುದು. ಇನ್ನು ಕೆಲವು ಕೌಶಲಗಳ ಬಗ್ಗೆ ಮಾಹಿತಿ ಪಡೆದುಕೊಂಡು, ನೀವೇ ಮನೆಯಲ್ಲಿಯೇ ಪ್ರಾಕ್ಟೀಸ್ ಮಾಡಬಹುದು. ನಿಮ್ಮ ಕಂಪನಿಯ ಬೇರೆ ಬೇರೆ ವಿಭಾಗದಲ್ಲಿ ಕೆಲಸ ಮಾಡುವ ಸಹೋದ್ಯೋಗಿಗಳೊಂದಿಗೆ ಈ ಬಿಡುವಿನ ವೇಳೆಯಲ್ಲಿ ಮಾತನಾಡಿ. ಅವರು ಯಾವೆಲ್ಲಾ ಕೆಲಸಗಳನ್ನು ಮಾಡುತ್ತಿದ್ದಾರೆ, ಅದಕ್ಕೆ ಅಗತ್ಯವಾಗಿರುವ ಸ್ಕಿಲ್ ಏನೆಂದು ತಿಳಿದುಕೊಳ್ಳಿ. ಒಂದು ವೇಳೆ ನೀವೇ ಆ ಕೆಲಸ ಮಾಡಬೇಕಾಗಿ ಬಂದರೆ ಹೇಗೆ ಸವಾಲುಗಳನ್ನು ಎದುರಿಸುವುದು ಎಂಬುದರ ಕುರಿತು ಟಿಪ್ಸ್ ಗಳನ್ನು ಪಡೆದುಕೊಳ್ಳಿ. ನೀವು ಈಗ ಮಾಡುತ್ತಿರುವ ಕೆಲಸದಲ್ಲಿ ತಂತ್ರಜ್ಞಾನ ಹಲವು ಬದಲಾವಣೆಗಳನ್ನು ತಂದಿರಬಹುದು. ಅದಕ್ಕೆ ಹೊಂದಿಕೊಳ್ಳಲು, ಮತ್ತು ಅದಕ್ಕೆ ಬೇಕಾದ ಸ್ಕಿಲ್ ಕಲಿತು ಸಮರ್ಥವಾಗಿ ತಂತ್ರಜ್ಞಾನ ಬಳಸಿಕೊಳ್ಳಲು ನಿಮಗೆ ಬಿಡುವೇ ಸಿಕ್ಕಿಲ್ಲದಿರಬಹುದು. ಈಗ ಈ ಬಗ್ಗೆ ಗಮನ ನೀಡಿ, ನಿಮ್ಮ ಉದ್ಯೋಗದಲ್ಲಿ ನೀವೇ ಬೆಸ್ಟ್ ಆಗಿ. ಪ್ರತಿಭಾವಂತರನ್ನು ಅವಕಾಶಗಳು ಹುಡುಕಿಕೊಂಡು ಬರುತ್ತವೆ.
2. ಭವಿಷ್ಯದ ಬಗ್ಗೆ ಗಮನವಿರಲಿ
ಆಟೋಮೇಷನ್, ಆರ್ಟಿಫಿಷಿಯಲ್ ಇಂಟಲಿಜೆನ್ಸಿಯ ಈ ಯುಗದಲ್ಲಿ ಕುಸಿದ ಆರ್ಥಿಕತೆಯು ಬಹಳಷ್ಟು ಬದಲಾವಣೆಗಳಿಗೆ ಕಾರಣವಾಗಲಿದೆ. ಇದು ಉದ್ಯೋಗ ಮಾರುಕಟ್ಟೆಗೂ ಅನ್ವಯ. ಹೀಗಾಗಿ ನೀವು ಮಾಡುತ್ತಿರುವ ಕೆಲಸಕ್ಕೆ ಮುಂದೆ ಭವಿಷ್ಯವಿದೆಯೇ ಎಂಬುದನ್ನು ಸರಿಯಾಗಿ ಗ್ರಹಿಸಿ. ನೀವು ಉದ್ಯೋಗದಲ್ಲಿರುವ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜಗತ್ತಿನಲ್ಲಿ ಯಾವ ಯಾವ ಬದಲಾವಣೆಗಳು ಆಗುತ್ತಿವೆ? ಇದು ನಿಮ್ಮ ಉದ್ಯೋಗದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು? ಈ ಬಗ್ಗೆ ತಜ್ಞರು ಏನೆನ್ನುತ್ತಿದ್ದಾರೆ? ನಾನು ಈ ಉದ್ಯೋಗದಲ್ಲಿಯೇ ಮುಂದುವರೆಯುವುದು ಸೂಕ್ತವೇ? ಹೀಗೆ ನಿಮಗೆ ಬೇಕಾದ ಮಾಹಿತಿಗಳನ್ನೇಲ್ಲಾ ಪಡೆದುಕೊಂಡು ಸೂಕ್ತ ತೀರ್ಮಾನಕ್ಕೆ ಬನ್ನಿ. ಉದ್ಯೋಗ ಬದಲಾವಣೆಗೆ ಇದು ಸೂಕ್ತ ಸಮಯವಲ್ಲವಾದರೂ, ನಾಳೆ ಇಲ್ಲವಾಗುವ ಉದ್ಯೋಗದಲ್ಲಿ ಬಹಳ ದಿನ ಮುಂದುವರೆಯುವುದೂ ವ್ಯರ್ಥ. ಹೀಗಾಗಿ ಜಗತ್ತಿನ ಆಗು-ಹೋಗುಗಳ ಕಡೆಗೆ ಗಮನವಿರಲಿ. ಯಾವುದೇ ಕಾರಣಕ್ಕೂ ಬೆಂಕಿ ಬಿದ್ದ ಮೇಲೆ ಬಾವಿ ತೋಡುವ ತಪ್ಪನ್ನು ಮಾಡಬೇಡಿ. ನೀವು ಹೊಸದಾಗಿ ಕೆಲಸಕ್ಕೆ ಸೇರಬೇಕಾಗಿದ್ದರೆ ನಿಮ್ಮ ಉದ್ಯೋಗ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವಾಗ ಈ ಎಲ್ಲ ವಿಷಯಗಳ ಕುರಿತು ಹೆಚ್ಚಿನ ಮುತುವರ್ಜಿ ವಹಿಸಿ.
3. ಎಲ್ಲದಕ್ಕೂ ಸಿದ್ಧರಾಗಿ!
ಬಿರುಗಾಳಿ ಬೀಸಿದಾಗ ಏನು ಬೇಕಾದರೂ ಆಗಬಹುದು, ಯಾರಿಗೆ ಗೊತ್ತು ನಿಮ್ಮ ಉದ್ಯೋಗ ಸ್ಥಿತಿ ಏನಾಗುತ್ತದೆ ಎಂದು. ಅಂದ ಮಾತ್ರಕ್ಕೆ ಹೆದರಿ ಗೋಣುಹಾಕಿ ಕುಳಿತುಕೊಳ್ಳಬೇಕಿಲ್ಲ. ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೆ ವಿಶ್ವಾಸವಿರಲಿ. ಯಾವುದೇ ಪರಿಸ್ಥಿತಿಯನ್ನು ಎದುರಿಸಲಾದರೂ ಮಾನಸಿಕವಾಗಿ ಸಿದ್ಧರಾಗಿರಿ. ಸಂಕಷ್ಟದ ಸಂದರ್ಭವನ್ನು ಎದುರಿಸಲು ಸೂಕ್ತ ಕಾರ್ಯತಂತ್ರವೊಂದನ್ನು ಇಂದೇ ಸಿದ್ಧಪಡಿಸಿಟ್ಟುಕೊಳ್ಳಿ. ಈ ಗೊಂದಲಕಾರಿ ಪರಿಸ್ಥಿತಿ ನಿಮ್ಮಲ್ಲಿ ಆತಂಕ ಉಂಟುಮಾಡುತ್ತಿರಬಹುದು. ಆದರೆ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಕೂಡ ಈ ಸಮಯ ಸೂಕ್ತವಲ್ಲ ಎಂಬುದನ್ನು ಮರೆಯಬೇಡಿ. ಬಿಡುವಿನ ವೇಳೆಯಲ್ಲಿ ನಿಮ್ಮ ರೆಸ್ಯೂಮ್ ಅನ್ನು ಅಪ್‌ಡೇಟ್ ಮಾಡಿಕೊಳ್ಳಿ. ನಿಮ್ಮ ಉದ್ಯೋಗ ಕ್ಷೇತ್ರದಲ್ಲಿರುವ ಹೊಸ ಹೊಸ ಅವಕಾಶಗಳ ಕಡೆಗೆ ಗಮನ ನೀಡಿ. ನಿಮ್ಮ ಅನುಭವ, ಕೌಶಲಕ್ಕೆ ಸರಿ ಹೊಂದುವ ಯಾವೆಲ್ಲಾ ಕೆಲಸ ಮಾಡಬಹುದು ಎಂಬುದನ್ನು ನೋಡಿಕೊಂಡು ಮೊದಲೇ ಮಾನಸಿಕವಾಗಿ ಸಿದ್ಧರಾಗಿರಿ. ಒಂದು ವೇಳೆ ಕೆಲಸಕ್ಕೆ ಕುತ್ತು ಬಂದರೆ ನೀವು ಇದುವರೆಗೂ ಇದ್ದ ಕಂರ್ಟ್ ಜೋನ್‌ನಿಂದ ಹೊರಬರಲು ಸ್ವಲ್ಪ ಕಷ್ಟವಾಗಬಹುದು. ಎಲ್ಲವೂ ಹೋಯಿತು ಎನಿಸಬಹುದು. ಪ್ರತಿ ಬದಲಾವಣೆಯು ನಿಮಗೆ ದೊರೆತ ಹೊಸ ಅವಕಾಶ ಎಂದೇ ಭಾವಿಸಿ, ಹೊಂದಿಕೊಳ್ಳಿ. ಈ ಸಂಕಷ್ಟದ ಸಂದರ್ಭ ಕೂಡ ಹೊಸತಿನ ಸೃಷ್ಟಿಗೆ ಅವಕಾಶ ಮಾಡಿಕೊಡುತ್ತದೆ. ನಿಮ್ಮ ಕಾಲಮೇಲೆ ನಿಂತುಕೊಂಡು, ಇನ್ನೂ ನಾಲ್ಕು ಮಂದಿಗೆ ಉದ್ಯೋಗ ನೀಡಬಹುದೇ? ಇದಕ್ಕೆ ಬೇಕಾದ ಕೌಶಲ, ಅನುಭವ, ವ್ಯವಹಾರಿಕ ಜ್ಞಾನ ನಿಮ್ಮಲ್ಲಿದೆಯೇ? ಈ ಅವಕಾಶದ ಬಗ್ಗೆಯೂ ಯೋಚಿಸಿ. ಯಾವುದೇ ಕಾರಣಕ್ಕೂ ದುಡುಕಿನ ನಿರ್ಧಾರ ಬೇಡ, ತಾಳಿದವನು ಬಾಳಿಯಾನು ಎಂಬ ಮಾತನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಿ.
4. ಸಂಪರ್ಕ ಬೆಳೆಸಿಕೊಳ್ಳಿ
ಈ ಕಷ್ಟ ಕಾಲದಲ್ಲಿ ನಾನೂ ಕೂಡ ಕಷ್ಟಪಟ್ಟು ದುಡಿಯುತ್ತಿದ್ದೇನೆ ಎಂದು ಗಾಣೆತ್ತಿನ ತರ ಕೆಲಸ ಮಾಡಿ ಮನೆಗೆ ಹೋಗಿಬಿಡಬೇಡಿ. ನೀವು ಮಾಡಿದ ಕೆಲಸ ನಿಮ್ಮ ಉದ್ಯೋಗದಾತರಿಗೆ ಇಷ್ಟವಾಯಿತೇ, ಅವರ ನಿರೀಕ್ಷೆ ಏನಿತ್ತು ಎಂಬುದುನ್ನು ಆಗಾಗ ಪರೀಕ್ಷಿಸಿಕೊಳ್ಳುತ್ತಿರಿ. ಇವ ಹೇಳಿದ ಕೆಲಸವನ್ನಷ್ಟೇ ಅಚ್ಚುಕಟ್ಟಾಗಿ ಮಾಡ್ತಾನೆ ಎಂದೆನಿಸಿಕೊಳ್ಳುವವರಿಗಿಂತ, ಅವನಿಗೆ ಕೆಲಸ ಹೇಳಿದರೆ ಸಾಕು, ಮುಂದಿನದೆಲ್ಲಾ ಅವನೇ ನೋಡಿಕೊಳ್ಳುತ್ತಾನೆ, ಮತ್ತೆ ನಾವು ತಲೆಕೆಡಿಸಿಕೊಳ್ಳಬೇಕಾಗಿಯೇ ಇಲ್ಲ ಎಂದೆನಿಸಿಕೊಳ್ಳುವವರೇ ಉದ್ಯೋಗದಾತರಿಗೆ ಹೆಚ್ಚು ಇಷ್ಟವಾಗುತ್ತಾರೆ ಎಂಬುದನ್ನು ಮರೆಯಬೇಡಿ. ಉದ್ಯೋಗದಾತರ ಅಂದರೆ ನಿಮ್ಮ ಮ್ಯಾನೇಜರ್, ಟೀಮ್ ಲೀಡರ್ ಅಥವಾ ನೇರವಾಗಿ ಬಾಸ್ ತಮ್ಮಿಂದ ಏನನ್ನು ನಿರೀಕ್ಷಿಸುತ್ತಿದ್ದಾರೆ ಎಂಬುದನ್ನು ತಿಳಿದುಕೊಂಡು ಅಂತೆಯೇ ಕೆಲಸ ಮಾಡಿ. ನೀವು ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಮ್ಯಾನೇಜ್ ಮೆಂಟಿನ ಪ್ರತಿನಿಧಿಗಳೊಂದಿಗೆ, ಮ್ಯಾನೇಜರ್‌ಗಳೊಂದಿಗೆ ಸಂಪರ್ಕ ಇಟ್ಟುಕೊಂಡು ಅವರಿಂದ ಆಗಾಗ ಫೀಡ್‌ಬ್ಯಾಕ್ ಪಡೆದುಕೊಳ್ಳುವುದನ್ನು ಮರೆಯಬೇಡಿ. ಒಂದು ವೇಳೆ ನೀವು ಕೆಲಸ ಬದಲಾಯಿಸಬೇಕಾಗಿ ಕೂಡ ಬರಬಹುದು, ಆಗ ನಿಮಗಿರುವ ಸಂಪರ್ಕ ಮಾತ್ರ ನಿಮ್ಮ ಕೈ ಹಿಡಿಯಬಲ್ಲದು. ಹೀಗಾಗಿ ನಿಮ್ಮ ಉದ್ಯೋಗ ಕ್ಷೇತ್ರದಲ್ಲಿರುವವರೊಂದಿಗೆ(ಬೇರೆ ಬೇರೆ ಕಂಪನಿಯಲ್ಲಿದ್ದರೂ) ನಿರಂತರ ಸಂಪರ್ಕ ಇಟ್ಟುಕೊಳ್ಳಿ. ನೀವು ಉದ್ಯೋಗದ ಹುಡುಕಾಟದಲ್ಲಿದ್ದರೆ, ನಿಮ್ಮ ಕಾಲೇಜಿನ ಸೀನಿಯರ್‌ಗಳ ಸಂಪರ್ಕ ಬೆಳೆಸಿ. ಉಪನ್ಯಾಸಕರೊಂದಿಗೆ, ಮಾರ್ಗದರ್ಶಕರೊಂದಿಗೆ ನಿರಂತರ ಸಂಪರ್ಕದಲ್ಲಿರಿ. ಯಾರು ನಿಮಗೆ ಉದ್ಯೋಗ ಕೊಡಿಸಬಲ್ಲರು (ಬಂಧುಗಳು, ಸ್ನೇಹಿತರ ಸಂಬಂಧಿಕರು, ಕುಟುಂಬದ ಪರಿಚಿತರು ಇತ್ಯಾದಿ) ಎಂಬುದನ್ನು ಪಟ್ಟಿಮಾಡಿಕೊಂಡು ಅವರನ್ನು ಸಂಪರ್ಕಿಸಿ. ತಜ್ಞರಿಂದ ಸೂಕ್ತ ಸಲಹೆ-ಮಾರ್ಗದರ್ಶನ ಪಡೆಯಲು ಮರೆಯಬೇಡಿ.
5. ರಿಸ್ಕ್ ತೆಗೆದುಕೊಳ್ಳಲು ಹಿಂಜರಿಯದಿರಿ
ಸವಾಲಿನ ಈ ಸಂದರ್ಭದಲ್ಲಿ ಯಾವುದೇ ರೀತಿಯ ರಿಸ್ಕ್ ತೆಗೆದುಕೊಂಡು ಕೆಲಸ ಮಾಡಬಲ್ಲವರನ್ನೇ ಉದ್ಯೋಗದಾತರು ಹೆಚ್ಚು ಇಷ್ಟಪಡುತ್ತಾರೆ ಎಂಬುದನ್ನು ಮರೆಯಬೇಡಿ. ಉದ್ಯೋಗಕ್ಕಾಗಿ ಯಾವುದೇ ಊರಿಗೆ ಹೋಗಲು, ಎಂಥ ಅಪಾಯದ ಪರಿಸ್ಥಿತಿಯಲ್ಲಿಯೂ ಕೆಲಸ ಮಾಡಲು ಸಿದ್ಧರಾಗಿರಿ. ನನ್ನೂರು ಬಿಟ್ಟು ಬೇರೆಲ್ಲೂ ಹೋಗಲ್ಲ, ಈ ಕೆಲಸ ನನ್ನಿಂದ ಆಗಲ್ಲ ಎಂದು ಹೇಳುವವರು ಉದ್ಯೋಗ ಕಳೆದು ಕೊಳ್ಳುವ ಸಾಧ್ಯತೆ ಅಧಿಕವಾಗಿರುತ್ತದೆ. ಆರ್ಥಿಕ ಸಂಕಷ್ಟದ ಈ ಸಮಯದಲ್ಲಿ ನಾನು ಇಂತಿಷ್ಟೇ ಹೊತ್ತು ಕೆಲಸ ಮಾಡೋದು, ಇವತ್ತಿಷ್ಟೇ ಕೆಲಸ ಸಾಧ್ಯ ಎಂಬ ಉತ್ತರಗಳನ್ನು ನೀಡಲು ಹೋಗಬೇಡಿ. ಇಂದು ಹೆಚ್ಚು ಶ್ರಮ ಪಟ್ಟರೆ, ರಿಸ್ಕ್ ತೆಗೆದುಕೊಂಡರೆ ಮುಂದೆ ನಿಮಗೇ ಒಳ್ಳೆಯದಾಗಬಹುದು. ಏನಿಲ್ಲವೆಂದರೂ ಸಾಕಷ್ಟು ಕೆಲಸ ಮಾಡಿದ ಅನುಭವವಂತೂ ನಿಮ್ಮ ಬತ್ತಳಿಕೆ ಸೇರಿರುತ್ತದೆ ಅಲ್ಲವೇ? ರಾತ್ರಿ ಕಳೆದ ಮೇಲೆ ಹಗಲು ಬರಲೇಬೇಕಲ್ಲವೇ ಎಂದುಕೊಂಡು ಕೆಲಸ ಮಾಡಿ. ಅಂದ ಮಾತ್ರಕ್ಕೆ ವೃತ್ತಿ ಜೀವನ ಮತ್ತು ಕೌಟುಂಬಿಕ ಜೀವನದ ನಡುವೆ ಬ್ಯಾಲೆನ್ಸ್ ಮಾಡಲು ಮರೆಯಲೇಬೇಡಿ. ನೀವು ಉದ್ಯೋಗ ಹುಡುಕಾಟದಲ್ಲಿದ್ದರೆ, ನನಗೆ ನನ್ನೂರಿನಲ್ಲಿಯೇ ಕೆಲಸ ಬೇಕು, ಬೇರೆ ರಾಜ್ಯ, ದೇಶಗಳಿಗೆ ಹೋಗುವುದಿಲ್ಲ, ಬೆಂಗಳೂರಿನಲ್ಲಿ ಕೆಲಸ ಸಿಕ್ಕರೆ ಮಾತ್ರ ಮಾಡ್ತೀನಿ ಎಂದೆಲ್ಲಾ ಷರತ್ತು ಹಾಕಿಕೊಂಡು ಕೆಲಸ ಕೇಳಲು ಹೋಗಬೇಡಿ. ನಿಮಗೆ ಇಷ್ಟ ಇರುವ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಕಡಿಮೆ ಇದೆ ಎಂದಾದರೆ, ಅದಕ್ಕೆ ಹೊಂದಿಕೆಯಾಗುವ ಬೇರೆ ಕ್ಷೇತ್ರಗಳಲ್ಲಿ ಅವಕಾಶಗಳಿದ್ದರೆ ನೋಡಿ. ಇಂಥದ್ದೇ ಕೆಲಸ ಬೇಕು ಎಂದು ಪಟ್ಟು ಹಿಡಿದು ಕುಳಿತುಕೊಳ್ಳುವ ಸಮಯ ಇದಲ್ಲ.