ಕೊರೊನಾ ವೈರಸ್ ಚೀನಾದ್ದೇ ಸೃಷ್ಟಿ ಎಂದು ದಿಟ್ಟವಾಗಿ ಹೇಳುತ್ತಿದ್ದಾರೆ ಈ ವೈರಾಲಜಿಸ್ಟ್.
– ಕೇಶವಪ್ರಸಾದ್ ಬಿ.
ಚೀನಾದ ಕಮ್ಯುನಿಸ್ಟ್ ಪಕ್ಷದ ಉಸ್ತುವಾರಿಯಲ್ಲಿಯೇ, ಮಿಲಿಟರಿ ಪ್ರಯೋಗಾಲಯದಲ್ಲಿ ಕೋವಿಡ್-19 ವೈರಸ್ ಅನ್ನು ಸೃಷ್ಟಿಸಲಾಗಿದೆಯೇ ಹೊರತು, ವುಹಾನ್ನ ಮಾರುಕಟ್ಟೆಯಲ್ಲಿ ಅಲ್ಲ ಎಂದು ಸ್ವತಃ ಚೀನಾದ ಹಾಂಕಾಂಗ್ ಯೂನಿವರ್ಸಿಟಿಯಲ್ಲಿ ವೈರಾಲಜಿಸ್ಟ್ ಆಗಿ ಸೇವೆ ಸಲ್ಲಿಸುತ್ತಿದ್ದ ಡಾ. ಲಿ-ಮೆಂಗ್ ಯಾನ್ ಗಂಭೀರವಾಗಿ ಆರೋಪಿಸಿದ್ದಾರೆ.
ಇದರೊಂದಿಗೆ ಅಮೆರಿಕ, ಯುರೋಪ್ ಇತ್ಯಾದಿ ಪಾಶ್ಚಿಮಾತ್ಯ ರಾಷ್ಟ್ರಗಳ ಗುಮಾನಿಗೆ ಮತ್ತಷ್ಟು ಪುಷ್ಟಿ ಸಿಕ್ಕಿದಂತಾಗಿದೆ. ಚೀನಾದ ಕಮ್ಯುನಿಸ್ಟ್ ಸರಕಾರದ ಕೆಂಗಣ್ಣಿಗೆ ಗುರಿಯಾಗಿರುವ ಡಾ. ಡಾ. ಲೀ-ಮೆಂಗ್ ಯಾನ್, ಚೀನಾದಲ್ಲಿ ತಮ್ಮ ಜೀವಕ್ಕೆ ಅಪಾಯ ಇರುವುದರಿಂದ ಅಮೆರಿಕಕ್ಕೆ ಸ್ಥಳಾಂತರವಾಗಿರುವುದಾಗಿ ಹೇಳಿದ್ದಾರೆ. ಇದಕ್ಕೂ ಮುನ್ನ ಚೀನಾದಿಂದ ಹಾಂಕಾಂಗ್ಗೆ ಸ್ಥಳ ಬದಲಿಸಿದ್ದರು.
ಚೀನಾದ ವುಹಾನ್ನಲ್ಲಿ ಕೋವಿಡ್-19 ಸಮಸ್ಯೆ ಕಾಣಿಸಿಕೊಂಡಾಗ, ಅದರ ಕುರಿತು ತನಿಖೆ ನಡೆಸಿದ ವಿಜ್ಞಾನಿಗಳ ಆರಂಭಿಕ ಹಂತದ ತಂಡದಲ್ಲಿ ಸೇರ್ಪಡೆಯಾಗಿದ್ದೆ ಎಂದು ಲಿ-ಮೆಂಗ್ ಯಾನ್ ಹೇಳಿದ್ದಾರೆ. ಈ ಹಿಂದೆ ವುಹಾನ್ನ ಸೀಫುಡ್ ಅಥವಾ ಮಾಂಸದ ಮಾರುಕಟ್ಟೆಯಲ್ಲಿ ಕೋವಿಡ್ ವೈರಸ್ ಹುಟ್ಟಿರಬಹುದು ಎಂಬ ವದಂತಿ ಇತ್ತು. ಈ ಥಿಯರಿಯನ್ನು ಒಪ್ಪದ ಯಾನ್, ಕೋವಿಡ್-19 ವೈರಸ್ ನೈಸರ್ಗಿಕವಾಗಿ ಸೃಷ್ಟಿಯಾಗಿದ್ದಲ್ಲ. ಲ್ಯಾಬ್ನಲ್ಲಿ ಕೃತಕವಾಗಿ ತಯಾರಿಸಿದ್ದು ಎನ್ನುತ್ತಾರೆ.
ಕೋವಿಡ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಜತೆ ಮಾತುಕತೆ ನಡೆಸಿದ ನಂತರ ಚೀನಾ ಬಿಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ‘ಕೆಂಪು ಗೆರೆ’ ದಾಟದಂತೆ ಅಧಿಕಾರಿಗಳು ಎಚ್ಚರಿಸಿದ್ದರು. ಅಂದರೆ ಸರಕಾರದ ಸಿದ್ಧಾಂತ, ಧೋರಣೆಗಳ ವಿರುದ್ಧ ಹೋಗದಂತೆ ಹಾಗೂ ತಪ್ಪಿದರೆ ಕಣ್ಮರೆಯಾಗಬೇಕಾದೀತು ಎಂದು ಎಚ್ಚರಿಸಲಾಯಿತು. ಚೀನಾ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಎರಡಕ್ಕೂ ಕೋವಿಡ್-19 ಸಾಂಕ್ರಾಮಿಕ ರೋಗ ಎಂಬುದು ಮೊದಲೇ ಗೊತ್ತಿತ್ತು. ಎಲ್ಲವನ್ನು ಗೊತ್ತಿದ್ದೂ ಚೀನಾ ಸರಕಾರ ಮರೆಮಾಚಿತ್ತು ಎಂದು ಯಾನ್ ಆಪಾದಿಸಿದ್ದಾರೆ.
ಚೀನಾ ಸರಕಾರ ತಮ್ಮ ವೃತ್ತಿಪರತೆಗೆ ಧಕ್ಕೆಯಾಗುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸಿದೆ. ಚೀನಾ ಸರಕಾರ ಮತ್ತು ವಿಶ್ವ ಆರೋಗ್ಯ ಸಂಸ್ಥೆ ( ಡಬ್ಲ್ಯ ಎಚ್ ಒ) ಯಾನ್ ಅವರ ಆರೋಪಗಳನ್ನು ನಿರಾಕರಿಸಿವೆ. ಚೀನಾ ಸರಕಾರದ ತನಿಖೆಗೆ ಒಳಪಡುವ ಸಾಧ್ಯತೆ ಇದ್ದುದರಿಂದ ಹಾಂಕಾಂಗ್ಗೆ ಸ್ಥಳಾಂತರವಾಗಿದ್ದ ಯಾನ್, ಇದೀಗ ಅಮೆರಿಕದಲ್ಲಿ ಕಳೆದ ಏಪ್ರಿಲ್ನಿಂದ ಇರುವುದಾಗಿ ತಿಳಿಸಿದ್ದಾರೆ.
ಚೀನಾದ ಶಾನ್ಡೋಂಗ್ ಪ್ರಾಂತ್ಯದ ಕಿಂಗ್ಡಾವೊ, ಲಿ- ಮೆಂಗ್ ಯಾನ್ ಅವರ ಹುಟ್ಟೂರು. ಚೀನಾದ ಮೊದಲ ಮೆಡಿಕಲ್ ವಿಶ್ವವಿದ್ಯಾಲಯ ಎಂದು ಖ್ಯಾತಿ ಗಳಿಸಿರುವ, ಸದರ್ನ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ವೈದ್ಯಕೀಯ ವ್ಯಾಸಂಗ ನಡೆಸಿದವರು.
ಕೋವಿಡ್ 19 ಸಾಂಕ್ರಾಮಿಕ ರೋಗ ಹರಡುತ್ತಿದ್ದ ಸಂದರ್ಭ ಅವರು ಹಾಂಕಾಂಗ್ ಯೂನಿವರ್ಸಿಟಿಯ ಅಧೀನದಲ್ಲಿರುವ ಹಾಂಕಾಂಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಸಂಸ್ಥೆಯಲ್ಲಿ ವೈರಾಲಜಿ ಮತ್ತು ಇಮ್ಯುನಾಲಜಿ ಬಗ್ಗೆ ಸಂಶೋಧನೆ ನಡೆಸುತ್ತಿದ್ದರು. ‘‘ 2019ರ ಡಿಸೆಂಬರ್ ನಲ್ಲಿ, ವುಹಾನ್ ನಲ್ಲಿ ಮನುಷ್ಯರಿಂದ ಮನುಷ್ಯರಿಗೆ ಸಾರ್ಸ್ ಮಾದರಿಯ ವೈರಸ್ ಹರಡುತ್ತಿರುವುದರ ಬಗ್ಗೆ ಅಧ್ಯಯನ ನಡೆಸಲು ಹಾಂಕಾಂಗ್ ಯೂನಿವರ್ಸಿಟಿಯಲ್ಲಿದ್ದ ನನ್ನ ಸೂಪರ್ವೈಸರ್ ಡಾ. ಲಿಯೊ ಪೂನ್ ಅವರು ಸೂಚಿಸಿದರು. ಅದರಂತೆ ವ್ಯಾಪಕ ಸಂಶೋಧನೆ ನಡೆಸಿದ್ದೆ. ಹಾಗೂ 2020ರ ಜನವರಿ ಸೇರಿದಂತೆ ಹಲವು ಸಲ ವರದಿ ಸಲ್ಲಿಸಿದ್ದೆ. ನಂತರ ಸುಮ್ಮನಿರುವಂತೆ ಹಾಗೂ ಸರಕಾರದ ವಿರುದ್ಧ ಮೌನವಾಗಿರುವಂತೆ ಸೂಚಿಸಲಾಯಿತು. ರಂಭಿಕ ಹಂತದಲ್ಲಿ ಚೀನಾದ ಎಲ್ಲ ವೈರಾಲಜಿಸ್ಟ್ಗಳೂ ವುಹಾನ್ನಲ್ಲಿ ದಿಢೀರ್ ಹಬ್ಬಿರುವ ವೈರಸ್ ಬಗ್ಗೆ ಚರ್ಚಿಸುತ್ತಿದ್ದರು. ಆದರೆ ನಂತರ ಎಲ್ಲರೂ ಮೌನಕ್ಕೆ ಶರಣಾದರು. ಚೀನಾ ಸರಕಾರ ವಿದೇಶದ ಯಾವೊಬ್ಬ ವೈರಾಲಜಿಸ್ಟ್ ಅನ್ನೂ ತನ್ನಲ್ಲಿ ಸಂಶೋಧನೆಗೆ ಬಿಡಲಿಲ್ಲ ಎಂದು ವಾನ್ ವಿವರಿಸಿದ್ದಾರೆ.
‘‘ ಕೋವಿಡ್-19 ವೈರಸ್ ಮನುಷ್ಯರಿಂದ ಮನುಷ್ಯರಿಗೆ ಸಾಂಕ್ರಾಮಿಕವಾಗಿ ಹಬ್ಬುತ್ತಿದೆ ಎಂಬ ಸಂಗತಿ ಚೀನಾ ಸರಕಾರಕ್ಕೆ ಆರಂಭದ ದಿನಗಳಲ್ಲಿಯೇ ಗೊತ್ತಾಗಿತ್ತು. 2019ರ ಡಿಸೆಂಬರ್ ನಲ್ಲಿ 40ಕ್ಕೂ ಹೆಚ್ಚು ಮಂದಿಗೆ ಕೋವಿಡ್ 19 ಸೋಂಕು ತಗಲಿರುವುದು ಖಚಿತವಾಗಿತ್ತು. ಹಾಗೂ ಅದು ಮನುಷ್ಯರಿಂದ ಮನುಷ್ಯರಿಗೆ ಹರಡುತ್ತಿದೆ ಎಂಬುದೂ ದೃಢಪಟ್ಟಿತ್ತು. ಆಗಲೇ ಇದನ್ನು ಬಹಿರಂಗಪಡಿಸಿದ್ದರೆ ಸಂಭವನೀಯ ಅನಾಹುತದ ತೀವ್ರತೆಯನ್ನು ತಪ್ಪಿಸಬಹುದಿತ್ತು. ಅನೇಕ ಮಂದಿಯ ಜೀವ ಉಳಿಸಬಹುದಿತ್ತು. ಆದರೆ ಚೀನಾ ತನಗೇನೂ ಗೊತ್ತಿಲ್ಲದಂತೆ ಸುಳ್ಳು ಹೇಳುತ್ತಿದೆ. ಎಲ್ಲ ಗೊತ್ತಿದ್ದರೂ ಡಬ್ಲ್ಯುಎಚ್ಒದ ನಿರ್ದೇಶಕರು ಸುಮ್ಮನಿದ್ದರು,’’ ಎಂದು ಆರೋಪಿಸಿದ್ದಾರೆ ಯಾನ್. ವಿಶ್ವ ಆರೋಗ್ಯ ಸಂಸ್ಥೆಯು 2020ರ ಮಾರ್ಚ್ 11ಕ್ಕೆ ಕೋವಿಡ್-19 ಸಾಂಕ್ರಾಮಿಕ ರೋಗ ಎಂದು ಘೋಷಿಸಿತ್ತು. ಆ ವೇಳೆಗೆ ಡೆಡ್ಲಿ ವೈರಸ್ 110 ರಾಷ್ಟ್ರಗಳಿಗೆ ಹಬ್ಬಿತ್ತು. 1.18 ಲಕ್ಷ ಪ್ರಕರಣಗಳು ಪತ್ತೆಯಾಗಿತ್ತು. ಡಬ್ಲ್ಯುಎಚ್ಒ ಇದನ್ನು ಸಾಂಕ್ರಾಮಿಕ ರೋಗವೆಂದು ಘೋಷಿಸಲು ಇಷ್ಟೆಲ್ಲ ವಿಳಂಬಿಸಿದ್ದೇಕೆ ಎಂಬುದು ಈಗಲೂ ಚರ್ಚೆಯ ವಸ್ತುಗಳಲ್ಲೊಂದು.
‘‘ಚೀನಾ ಸರಕಾರದ ಅಧಿಕಾರಿಗಳು ನನ್ನ ತವರೂರು ಕಿಂಗ್ಡಾವೊದಲ್ಲಿ ಕುಟುಂಬದ ಸದಸ್ಯರನ್ನು ಬೆದರಿಸಿದ್ದಾರೆ. ನನ್ನ ತೇಜೋವಧೆಗೆ ಸಾಧ್ಯವಾದ್ದನ್ನೆಲ್ಲ ಮಾಡುತ್ತಿದ್ದಾರೆ,’’ ಎಂದು ಯಾನ್ ತಿಳಿಸಿದ್ದಾರೆ.
ಕೋವಿಡ್ ನೇರವಾಗಿ ಮನುಷ್ಯರ ಮೇಲೆ ದಾಳಿ ಮಾಡುವ ಬ್ಯಾಟ್ ವೈರಸ್ ಆಗಿರಲಿಲ್ಲ. ಚೀನಾದ ಸೇನೆಯ ಉಸ್ತುವಾರಿಯಲ್ಲಿ ಸತತ ಸಂಶೋಧನೆ ನಡೆಸಿ, ಅಭಿವೃದ್ಧಿಪಡಿಸಿದ ವೈರಸ್ ಆಗಿದೆ. ಜಗತ್ತಿನ ದಿಕ್ಕುತಪ್ಪಿಸಲು, ವುಹಾನಿನ ಮಾಂಸದ ಮಾರುಕಟ್ಟೆಯಲ್ಲಿ ಸೃಷ್ಟಿಯಾಗಿದೆ ಎಂಬ ವದಂತಿಗಳನ್ನು ಹರಿಬಿಡಲಾಗಿದೆ. ಈ ಸತ್ಯವನ್ನು ಜಗತ್ತಿಗೆ ಸಾರುವ ಸಲುವಾಗಿಯೇ ಅಮೆರಿಕಕ್ಕೆ ಬಂದಿರುವುದಾಗಿ ಯಾನ್ ಹೇಳಿದ್ದಾರೆ.
ಯಾವಾಗ ಚೀನಾ ಸರಕಾರದ ವಿರುದ್ಧ ಮಾತನಾಡಿದರೋ, ಅಂದಿನಿಂದಲೇ ಅಪಾಯವನ್ನು ಗ್ರಹಿಸಿದ್ದ ಡಾ. ಯಾನ್ , ಸದ್ಯ ಅಮೆರಿಕದ ಆಶ್ರಯದ ನಿರೀಕ್ಷೆಯಲ್ಲಿದ್ದಾರೆ. ಬಹುಶಃ ಇನ್ನೆಂದಿಗೂ ನನಗೆ ಮನೆಗೆ ಹಿಂತಿರುಗಲು ಸಾಧ್ಯವಾಗಲಿಕ್ಕಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಅಮೆರಿಕದಲ್ಲಿರುವ ಚೀನಾ ರಾಯಭಾರಿ ಕಚೇರಿಯು, ಯಾನ್ ಯಾರೆಂಬುದೇ ಗೊತ್ತಿಲ್ಲ ಎಂದಿದೆ.
ಚೀನಾದ ಕಮ್ಯುನಿಸ್ಟ್ ಪಾರ್ಟಿಯ ಮುಖವಾಣಿಯಾದ ಗ್ಲೋಬಲ್ ಟೈಮ್ಸ್, ಲಿ-ಮೆಂಗ್ ಯಾನ್ ಬಗ್ಗೆ ನಕಾರಾತ್ಮಕವಾದ ವರದಿಯೊಂದನ್ನು ಪ್ರಕಟಿಸಿದೆ. ಅವರು ಹಾಂಕಾಂಗ್ ಯೂನಿವರ್ಸಿಟಿಯ ಮಾಜಿ ಉದ್ಯೋಗಿಯಾಗಿದ್ದರೂ, ಯೂನಿವರ್ಸಿಟಿಯ ಹೇಳಿಕೆಯ ಪ್ರಕಾರ ಕೋವಿಡ್ 19 ಕುರಿತ ಸಂಶೋಧನೆಯ ತಂಡದಲ್ಲಿ ಅವರಿರಲಿಲ್ಲ ಎಂದಿದೆ.
ಹಾಂಕಾಂಗ್ ಯೂನಿವರ್ಸಿಟಿ ನೀಡಿರುವ ಹೇಳಿಕೆಯಲ್ಲಿ, ಲಿ-ಮೆಂಗ್ ಯಾನ್ ಅವರು 2019 ಡಿಸೆಂಬರ್ ಮತ್ತು 2020ರ ಜನವರಿ ನಡುವೆ ಕೋವಿಡ್ ವೈರಸ್ ಹರಡುವಿಕೆಗೆ ಸಂಬಂಧಿಸಿ ಸಂಶೋಧನೆ ನಡೆಸಿರಲಿಲ್ಲ ಎಂದು ಹೇಳಿದೆ. ಆದರೆ ಅಮೆರಿಕ, ಜಪಾನ್ ಸೇರಿದಂತೆ ಹಲವು ದೇಶಗಳು ಡಾ. ಯಾನ್ ಅವರನ್ನು ಬೆಂಬಲಿಸಿವೆ. ಚೀನಾ ತನ್ನ ಮಹತ್ತ್ವಾಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಜೈವಿಕ ಅಸ್ತ್ರವನ್ನು ಬಳಸುತ್ತಿದೆಯೇ ಎಂಬ ಚರ್ಚೆ ವ್ಯಾಪಕವಾಗುತ್ತಿದೆ.
ಲಿ-ಮೆಂಗ್ ಯಾನ್ ಅವರು ಕ್ಲಿನಿಕಲ್ ಮೆಡಿಸಿನ್ ಮತ್ತು ವೈರಾಲಜಿಯಲ್ಲಿ ತಜ್ಞರಾಗಿದ್ದಾರೆ. ಅವರ ಪತಿ ಕೂಡ ವೈರಾಲಜಿಸ್ಟ್. ಕೋವಿಡ್-19 ರಹಸ್ಯದ ಬಗ್ಗೆ ಅವರು ಹೊಂದಿರುವ ಮಾಹಿತಿಗಳು, ಚೀನಾದ ಮೇಲೆ ಮತ್ತಷ್ಟು ಅನುಮಾನಗಳನ್ನು ಹೆಚ್ಚಿಸಿವೆ. ಕೋವಿಡ್ ವಿಷಯದಲ್ಲಿ ಚೀನಾದ ಕಮ್ಯುನಿಸ್ಟ್ ಪಕ್ಷ ಮತ್ತು ಸರಕಾರ ನಡೆದುಕೊಂಡಿರುವ ರೀತಿಯ ವಿರುದ್ಧ ಒಂದಾಗಿರುವ ರಾಷ್ಟ್ರಗಳಿಗೆ, ಹೊಸ ಅಸ್ತ್ರ ಸಿಕ್ಕಂತಾಗಿದೆ.
ಕೊರೊನಾ ಬಗ್ಗೆ ಚೀನಾ ಸರಕಾರದ ವಿರುದ್ಧ ದನಿ ಎತ್ತಿದವರಲ್ಲಿ ಯಾನ್ ಅವರೇ ಮೊದಲಿಗರೇನಲ್ಲ. ಕನಿಷ್ಠ ಐವರು ಕಣ್ಮರೆಯಾಗಿದ್ದಾರೆ ಅಥವಾ ಬಂಧಿತರಾಗಿದ್ದಾರೆ. ವುಹಾನಿನ ವೈದ್ಯ ಲಿ ವೆನ್ಲಿಯಾಂಗ್ ಕೋವಿಡ್ ಬಗ್ಗೆ ಎಚ್ಚರಿಸಿದ ನಂತರ ಅನುಮಾನಾಸ್ಪದವಾಗಿ ಅಸುನೀಗಿದ್ದರು.