ಶರಾವತಿಗೆ ಮತ್ತೆ ಕಂಟಕ

– ಭೂಗರ್ಭದಲ್ಲಿ ವಿದ್ಯುತ್ ಉತ್ಪಾದನೆ ಯೋಜನೆ | ಕಣಿವೆಯ ಒಡಲು ಕೊರೆದು ಸಮೀಕ್ಷೆ.

ವಿವೇಕ ಮಹಾಲೆ, ಶಿವಮೊಗ್ಗ.

ಹಲವಾರು ಯೋಜನೆಗಳ ಭಾರ ಹೇರಿಕೊಂಡು ನಲುಗುತ್ತಿರುವ ಶರಾವತಿ ಕಣಿವೆಗೆ ಮತ್ತೊಂದು ಕಂಟಕ ಎದುರಾಗಿದೆ. ಕಳೆದ ವರ್ಷವಷ್ಟೇ ಬೆಂಗಳೂರಿಗೆ ನೀರು ಹರಿಸುವ ಯೋಜನೆ ವಿರುದ್ಧ ಧ್ವನಿ ಎತ್ತಿದ್ದ ಇಲ್ಲಿನ ಜನ ಮತ್ತೊಮ್ಮೆ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ. ಬೆಂಗಳೂರಿಗೆ ನೀರು ಹರಿಸುವ ಯೋಜನೆ ಕೈಬಿಟ್ಟಿದ್ದ ರಾಜ್ಯ ಸರಕಾರ ಈಗ ಮತ್ತೊಂದು ಯೋಜನೆ ಮೂಲಕ ಆತಂಕ ಮೂಡಿಸಿದೆ.
ಪಶ್ಚಿಮಘಟ್ಟದ ಹೃದಯ ಭಾಗವಾಗಿರುವ ಶರಾವತಿ ಕಣಿವೆಯಲ್ಲಿ ಭೂಗರ್ಭ ಜಲವಿದ್ಯುತ್ ಸ್ಥಾವರ ಸ್ಥಾಪಿಸಲು ರಾಜ್ಯ ಸರಕಾರ ಮುಂದಾಗಿದೆ. ಈ ಯೋಜನೆಗಾಗಿ ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿ) ಈಗಾಗಲೆ ಸರ್ವೆ ಆರಂಭಿಸಿದೆ. ಶರಾವತಿ ಅಭಯಾರಣ್ಯದಲ್ಲಿ ರಸ್ತೆ ಮಾಡಿ, ಭಾರಿ ವಾಹನಗಳನ್ನು ಒಯ್ದು, ಭೂರಂಧ್ರ ಮಾಡಿ ಸರ್ವೆ ಮಾಡುವುದನ್ನು ನಿಲ್ಲಿಸಬೇಕು ಎಂಬುದು ಸ್ಥಳೀಯರ ಆಗ್ರಹ.
ಈ ಯೋಜನೆಯ ಅನುಷ್ಠಾನದಿಂದ ಪರಿಸರವಷ್ಟೇ ಅಲ್ಲ, ಜನಜೀವನದ ಮೇಲೂ ಗಂಭೀರ ಪರಿಣಾಮ ಬೀರಲಿದೆ ಎಂದು ಹಲವು ವಿಜ್ಞಾನಿಗಳು, ಪರಿಸರ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಪರಿಸರವಾದಿಗಳು ಯೋಜನೆ ವಿರೋಧಿಸಿ ಸರಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಇವೆಲ್ಲವುಗಳನ್ನು ನಿರ್ಲಕ್ಷಿಸಿ, ಯೋಜನೆಯ ಸಮೀಕ್ಷೆಗಾಗಿ ರಾಜ್ಯ ಸರಕಾರ ಹಸಿರು ನಿಶಾನೆ ತೋರಿಸಿದೆ. ಕೆಪಿಸಿಯ ಸರ್ವೆ ಕಾರ್ಯದಿಂದ ಎಚ್ಚೆತ್ತ ಶರಾವತಿ ಕಣಿವೆ ಪ್ರದೇಶದ ಜನರು, ಜನಪ್ರತಿನಿಧಿಗಳು, ಸ್ವಯಂ ಸೇವಾ ಸಂಸ್ಥೆಗಳು ಪ್ರತಿಭಟನೆಗೆ ಸಜ್ಜಾಗಿದ್ದಾರೆ.

ಏನಿದು ಯೋಜನೆ?
ಜೋಗ ಜಲಪಾತದಿಂದ ಬಿದ್ದ ನೀರು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುವ ಮೊದಲು ಹಿಡಿದಿಟ್ಟುಕೊಂಡು ವಿದ್ಯುತ್ ಉತ್ಪಾದಿಸುವ ಯೋಜನೆಯಿದು. ಅತಿ ಸೂಕ್ಷ್ಮ ಪರಿಸರ ಹೊಂದಿರುವ ಅಭಯಾರಣ್ಯದಲ್ಲಿ ‘ಶರಾವತಿ ಪಂಪ್ಡ್ ಸ್ಟೋರೇಜ್ ಪ್ಲಾಂಟ್’ ಎಂಬ ಉದ್ದೇಶಿತ ಯೋಜನೆಯ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಗೇರುಸೊಪ್ಪ ಬಳಿ ಕಾಫರ್ ಡ್ಯಾಮ್ ನಿರ್ಮಿಸಿ, ತಲಕಳಲೆ ಜಲಾಗಾರಕ್ಕೆ ಶರಾವತಿ ನದಿ ನೀರನ್ನು ಪಂಪ್ ಮಾಡಿ, ಕಣಿವೆಯ ಮಧ್ಯದಲ್ಲಿ ಭೂಗರ್ಭದಡಿ ವಿದ್ಯುತ್ ಉತ್ಪಾದಿಸಿ, ಶಿವಮೊಗ್ಗ ಜಿಲ್ಲೆಯ ಜೋಗ-ಕಾರ್ಗಲ್ ಬಳಿ ಶರಾವತಿ ನದಿಗೆ ಮತ್ತೆ ನೀರು ಬಿಡಲಾಗುತ್ತದೆ. ಸುರಂಗದ ಮೂಲಕ ನೀರನ್ನು ಮರು ಎತ್ತುವ ಮತ್ತು ಭೂಗರ್ಭದೊಳಗೇ ವಿದ್ಯುತ್ ಉತ್ಪಾದನಾ ಕೇಂದ್ರ ಸ್ಥಾಪಿಸಿ, ಸರಿಸುಮಾರು 2000 ಮೆ.ವ್ಯಾ. ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ.

ಸರ್ವೆಗೆ ಸಿಕ್ಕಿದೆ ಒಪ್ಪಿಗೆ
2017ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ಈ ಯೋಜನೆಯ ಪ್ರಸ್ತಾವನೆಯನ್ನು ಕೆಪಿಸಿ ಸಲ್ಲಿಸಿತ್ತು. ಎರಡು ವರ್ಷಗಳ ಕಾಲ ಕಡತದಲ್ಲಿಯೇ ಇದ್ದ ಪ್ರಸ್ತಾವನೆಗೆ ಬಿಜೆಪಿ ಸರಕಾರ ಬಂದ ನಂತರ, 2019ರ ಸೆ.26ರಂದು ನಡೆದ 12ನೇ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಸರ್ವೆಗೆ ಒಪ್ಪಿಗೆ ನೀಡಲಾಯಿತು. ಕಳೆದ ಏ.20ರಂದು ಕೇಂದ್ರದ ಪರಿಸರ ಮತ್ತು ಅರಣ್ಯ ಸಚಿವಾಲಯದ ವನ್ಯಜೀವಿ ವಿಭಾಗ ಹಸಿರು ನಿಶಾನೆ ತೋರಿಸಿದೆ.

ಭೂಮಿ ಕೊರೆದು ಸರ್ವೆ ನಡೆಸುವುದರಿಂದ ಗುಡ್ಡ ಕುಸಿತದಂತಹ ಅಪಾಯ ಸಂಭವಿಸಲಿವೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಸರಕಾರ ಈ ಸರ್ವೆ ತಕ್ಷಣ ತಡೆ ಹಿಡಿದು ಪರಿಸರ, ಜನಜೀವನ ರಕ್ಷ ಣೆಗೆ ಮುಂದಾಗಬೇಕು.
– ಡಾ. ಕೇಶವ ಕೂರ್ಸೆ ಪರಿಸರ ತಜ್ಞ, ಶಿರಸಿ

ಸಮೀಕ್ಷೆಯೇ ಅಪಾಯಕಾರಿ
ಭೂಗರ್ಭ ಜಲವಿದ್ಯುತ್ ಸ್ಥಾವರ ಯೋಜನೆ ಅನುಷ್ಠಾನಕ್ಕಾಗಿ ನಡೆಯುತ್ತಿರುವ ಸಮೀಕ್ಷೆ ಕೂಡ ಅಪಾಯಕಾರಿ ಮತ್ತು ಅವೈಜ್ಞಾನಿಕ ಎಂಬುದು ತಜ್ಞರ ಅಭಿಪ್ರಾಯ. ದಟ್ಟ ಕಾಡಿರುವ ಇಳಿಜಾರಿನ ಈ ಪ್ರದೇಶದಲ್ಲಿ ಮಳೆ ಬೀಳುವ ಸಂದರ್ಭದಲ್ಲಿ ಕಾಮಗಾರಿ ನಡೆಸುವುದರಿಂದ ಭೂ ಕುಸಿತ ಉಂಟಾಗಲಿದೆ, ಕಾಡು ನಾಶವಾಗಲಿದೆ. ಪರಿಣಾಮವಾಗಿ ವನ್ಯಜೀವಿಗಳ ಮಾರಣಹೋಮವಾಗಲಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ವಿರೋಧ ಏಕೆ?
ಈ ಯೋಜನೆಯಿಂದ ಅಪಾರ ಜೀವ ವೈವಿಧ್ಯ ನಾಶವಾಗಲಿದೆ. ಭೂಗತ ವಿದ್ಯುತ್ ಸ್ಥಾವರ, ಪೈಪ್ಲೈನ್, ರಸ್ತೆ, ಪವರ್ ಹೌಸ್, ವಿದ್ಯುತ್ ಸಾಗಣೆ, ಸಿಬ್ಬಂದಿ ವಸತಿ ಎಲ್ಲವೂ ಅರಣ್ಯದಲ್ಲಿಯೇ ಆಗಬೇಕಿರುವುದರಿಂದ 1000 ಎಕರೆಗೂ ಮೀರಿ ಅರಣ್ಯ ನಾಶವಾಗಲಿದೆ. ಭೂ ಕುಸಿತದಂತಹ ಅನಾಹುತಗಳು ಹೆಚ್ಚಲಿದ್ದು, ಅಂತರ್ಜಲ ಕುಸಿತವೂ ಆಗಲಿದೆ ಎಂಬುದು ಪರಿಸರವಾದಿಗಳ ಆತಂಕ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top