ಪ್ರಾಚೀನ ಅತ್ಯಾಧುನಿಕ ಯುಗಗಳ ದಿವ್ಯಸೋಪಾನ ಸಂಸ್ಕೃತ

– ಡಾ.ಆರತೀ ವಿ.ಬಿ.
ಶ್ರಾವಣ ಹುಣ್ಣಿಮೆಯು ಉಪಾಕರ್ಮ, ರಕ್ಷಾಬಂಧನ ಮುಂತಾದ ವೈದಿಕ ಪೌರಾಣಿಕ ಜಾನಪದೀಯ ಆಚರಣೆಗಳ ಸುಂದರ ಸಂಗಮವಷ್ಟೇ ಅಲ್ಲ, ‘ಸಂಸ್ಕೃತದಿನ’ವೆಂದೂ ಮಾನ್ಯ. ಹುಣ್ಣಿಮೆಯನ್ನುಳ್ಳ ಈ ಸಪ್ತಾಹವು ಸಂಸ್ಕೃತಸಪ್ತಾಹವೆಂದೂ ಮಾನ್ಯ. ದೇಶಾದ್ಯಂತವಷ್ಟೇ ಅಲ್ಲ, ವಿದೇಶದಲ್ಲೂ ಸಂಸ್ಕೃತ ಭಾಷಾಸಂಬಂಧಿತವಾದ ಗೋಷ್ಠಿಗಳು ಸಾಂಸ್ಕೃತಿಕ ಕಲಾಪಗಳೂ ಕವಿವಿದ್ವಾಂಸರುಗಳ ಸಮ್ಮಾನ ಪುರಸ್ಕಾರಾದಿಗಳು ಜರುಗುತ್ತವೆ. ಅಷ್ಟಾಧ್ಯಾಯಿಯಂತಹ ಅದ್ಭುತ ವ್ಯಾಕರಣ ಶಾಸ್ತ್ರಗ್ರಂಥವನ್ನು ನಿರ್ಮಿಸಿ ಭಾಷಾಜಗತ್ತಿಗೇ ಅನುಪಮ ಯೋಗದಾನವಿತ್ತ ಪಾಣಿನೀ ಮಹರ್ಷಿಗಳ ಪುಣ್ಯದಿನವೆಂದು ಮಾನ್ಯವಾದ ಶ್ರಾವಣಹುಣ್ಣಿಮೆಯನ್ನು ಸಂಸ್ಕೃತದಿನವೆಂದು ಆಚರಿಸುವುದು ಅರ್ಥಪೂರ್ಣವಾಗಿದೆ.
ಸಂಸ್ಕೃತಭಾಷೆಯ ಒಂದು ವೈಶಿಷ್ಟ್ಯವೇನು ಗೊತ್ತೆ? ಅದು ತಾನೂ ಉಳಿದು ಇತರ ಭಾಷೆಗಳನ್ನೂ ಪೋಷಿಸುತ್ತ ಬಂದಿರುವ ಉದಾರವೂ ಶಕ್ತವೂ ಆದ ಭಾಷೆ. ತನ್ನ ಅತ್ಯಂತ ಮೂಲಸ್ವರೂಪವನ್ನೂ ಪ್ರಾಚೀನ ಪ್ರಯೋಗಗಳನ್ನೂ ಕಳೆದುಕೊಳ್ಳದೇ ಬಂದಿದೆಯಲ್ಲದೆ, ದೇಶ-ಕಾಲ-ಸಂದರ್ಭಗಳಿಗೆ ಬೇಕಾಗುವಂತೆ ನವನವೀನ ಪದಗಳನ್ನೂ ತನ್ನೊಳಗೆ ತಾನೇ ಸೃಜಿಸಿಕೊಳ್ಳುತ್ತ ಬಂದಿದೆ. ಇತರ ಭಾಷೆಗಳಿಗೆ ಪದಗಳನ್ನು ಒದಗಿಸಿದೆ. ಈ ಅಪೂರ್ವ ತಾಕತ್ತು ಈ ಮಟ್ಟದಲ್ಲಿ ಬೇರಾವ ಭಾಷೆಯಲ್ಲೂ ನಾವು ಕಾಣಲಾಗದು.
ಛಂದಸ್‌ ಹಾಗೂ ಲೌಕಿಕ ಸಂಸ್ಕೃತ ಎನ್ನುವ ಎರಡು ಪ್ರಭೇದಗಳಲ್ಲಿ ಅತ್ಯಂತ ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿರುವ ಸಂಸ್ಕೃತವು, ಈ ಎರಡು ರೂಪಗಳನ್ನೂ ಬಹುಮಟ್ಟಿಗೆ ಉಳಿಸಿಕೊಂಡು ಬಂದಿದೆ. ಮಧ್ಯಯುಗದಿಂದೀಚೆಗೆ ಮತಾಂಧ ಆಕ್ರಮಣಕಾರರು ಮಾಡಿದ ನಿರಂತರ ಹತ್ಯಾಕಾಂಡ ಹಾಗೂ ವಿಶ್ವವಿದ್ಯಾಲಯಗಳ ನಾಶದಲ್ಲಿ ಹಲವು ವಿದ್ಯಾಪದ್ಧತಿಗಳೂ ಶಾಸ್ತ್ರಗಳೂ ಕಳೆದುಹೋಗದೆ ಇದ್ದಿದ್ದರೆ, ಸಂಸ್ಕೃತಭಾಷೆಯು ತನ್ನ ಇನ್ನದೆಷ್ಟೊ ಅನಂತ ಸ್ವಾರಸ್ಯಗಳನ್ನೂ ವಿದ್ಯಾವಿಭವಗಳನ್ನೂ ನಮ್ಮವರೆಗೂ ತಂದು ತಲುಪಿಸುತಿತ್ತು.
ಸಂಸ್ಕೃತದಲ್ಲಿ ‘ಛಂದಸ್‌’ ಎನ್ನುವ ಪ್ರಭೇದವು ‘ವೇದ’ದಲ್ಲಿ ಬಳಸಲಾದ ಸಂಸ್ಕೃತ. ಇದು ತನ್ನದೇ ಅನನ್ಯತೆಯನ್ನೂ, ಋುಷಿತ್ವವನ್ನೂ ದೈವಿಕತೆಯನ್ನೂ, ಗತ್ತುಗಾಂಭೀರ್ಯಗಳನ್ನೂ ಹಾಗೂ ಶ್ರವಣಸುಭಗತೆಯನ್ನೂ ಹೊಂದಿದೆ. ಜಗತ್ತಿನ ಬಹುತೇಕ ಭಾಷೆಗಳು, ಶತಮಾನಗಳು ಕಳೆದಂತೆ ಹಲವಾರು ಗಮನೀಯ ಬಾಹ್ಯಾಂತರಿಕ ಬದಲಾವಣೆಗಳನ್ನು ಹೊಂದುತ್ತವೆ. ಆದರೆ ಈ ವೈದಿಕ ಸಾಹಿತ್ಯವು ಹಾಗಲ್ಲ. ಸಹಸ್ರಮಾನಗಳಿಂದಲೂ ಅಸ್ಖಲಿತವಾಗಿ ಬಂದಿದೆ! ಅನಾದಿಯಿಂದಲೂ ಅದದೇ ಅಕ್ಷರ-ಸ್ವರ-ಉಚ್ಚಾರ-ಛಂದಸ್ಸುಗಳಲ್ಲಿ ಈ ವೈದಿಕ ಸಂಸ್ಕೃತವು ಉಳಿದುಬಂದಿರುವುದು ಒಂದು ಸೋಜಿಗವೇ ಸರಿ! ಇದನ್ನು ಅಪೌರುಷೇಯ (ಮನುಷ್ಯಕೃತವಲ್ಲ) ಎನ್ನುವ ಪರಂಪರೆಯ ಆಸ್ತಿಕ್ಯವೂ ಇದಕ್ಕೆ ಒಂದು ಪ್ರಮುಖ ಕಾರಣ. ಪುಸ್ತಕ, ತಂತ್ರಜ್ಞಾನಗಳ ಸೌಲಭ್ಯಗಳಿಲ್ಲದ ‘ಇತಿಹಾಸಪೂರ್ವ’ ಎಂದೆನಿಸುವ ಅತಿದೂರದ ಭೂತಕಾಲದಲ್ಲಿ ಉದಿಸಿದ ಈ ವೇದಭಾಷೆಯನ್ನು ತದ್ವತ್ತಾಗಿ ಉಳಿಸಿ ಬೆಳೆಸಿ ತಂದವರ ಶ್ರದ್ಧೆ, ನಿಷ್ಠೆ ತಾಳ್ಮೆ ಹಾಗೂ ವಿದ್ಯಾಪ್ರೀತಿಗೆ ನಮೋ ನಮಃ ಎನ್ನಬೇಕು!
ಲೌಕಿಕ ಸಂಸ್ಕೃತವು ಅನಾದಿಯಿಂದಲೂ ಔಪಚಾರಿಕ ಸಂಭಾಷಣೆಯಲ್ಲೂ, ಶಾಸ್ತ್ರಚರ್ಚೆ, ಶಾಸನಗಳಲ್ಲೂ, ದಾಖಲೀಕರಣದಲ್ಲೂ, ವಿವಿಧ ಶಾಸ್ತ್ರಗಳ ಕಾವ್ಯ-ಗೀತೆ-ನಾಟಕಗಳ ರಚನೆಯಲ್ಲೂ ಬಳಸಲಾಗಿದೆ. ಪ್ರಾಚೀನ ಹಾಗೂ ಮಧ್ಯಯುಗದ ಹೆಚ್ಚಿನ ಶಾಸನಗಳೂ ಶಾಸ್ತ್ರಗಳೂ ಸಂಸ್ಕೃತದವೇ. ಜಗತ್ತಿನಲ್ಲಿ ಲಭ್ಯವಿರುವ ಅತಿಹೆಚ್ಚು ಸಂಖ್ಯೆಯ ಹಾಗೂ ಮೌಲ್ಯದ ಪುರಾತನ ಶಾಸನಗಳೂ ಶಾಸ್ತ್ರಗಳೂ ಸಿಗುವುದು ಸಂಸ್ಕೃತಭಾಷೆಯಲ್ಲೇ! ರಾಮಾಯಣ, ಮಹಾಭಾರತ, ಅರ್ಥಶಾಸ್ತ್ರ, ಕಾಳೀದಾಸಾದಿ ಕವಿಗಳ ಕಾವ್ಯನಾಟಕಗಳು, ಕಲೆ ಕಾವ್ಯ ವಿಜ್ಞಾನ ಗಣಿತ ತತ್ವಜ್ಞಾನಾದಿಗಳ ಶಾಸ್ತ್ರಗ್ರಂಥಗಳೆಲ್ಲ ರಚಿಸಲಾಗಿರುವುದು ಸಂಸ್ಕೃತದಲ್ಲೇ.
ಹೀಗೆ ವೈದಿಕ ವಾಞ್ಮಯವಾಗಿಯೂ ಲೌಕಿಕಸಂಸ್ಕೃತವಾಗಿಯೂ, ಎರಡು ಪ್ರಭೇದಗಳಲ್ಲೂ ಅನಾದಿಯಿಂದಲೂ ಉಳಿದುಬಂದಿರುವ ಸಂಸ್ಕೃತವು ಸಹಸ್ರಮಾನಗಳ ಬಾಹ್ಯಾಂತರಿಕ ಹ್ರಾಸವನ್ನೂ ಜೀರ್ಣಿಸಿಕೊಂಡು ದೃಢವಾಗಿ ಪುಷ್ಟವಾಗಿ ನವನವೀನವಾಗಿ ನಿಂತಿದೆ ಎನ್ನುವುದು ಸಾಮಾನ್ಯದ ಮಾತಲ್ಲ!
ಅತಿಪ್ರಾಚೀನ ಕಾಲದಿಂದಲೂ ಸಂಸ್ಕೃತವು ಪ್ರಾಕೃತ-ಮಾಗಧೀ-ಪಾಳಿ ಮುಂತಾದ ದೇಶಭಾಷೆಗಳ ಜೊತೆಜೊತೆಗೆ ಬಾಳಿದೆ. ಈ ಪ್ರಾಕೃತಾದಿಗಳೇ ಇಂದಿನ ದೇಶಭಾಷೆಗಳಾಗಿ ರೂಪುಗೊಂಡಿವೆ. ಸಂಸ್ಕೃತವು ಮಾತ್ರ ಬಹುಮಟ್ಟಿಗೆ ತದ್ವತ್ತಾಗಿ ಇಂದಿಗೂ ಉಳಿದುಬಂದಿದೆ. ಸಂಸ್ಕೃತದಿಂದಲೇ ಕಾಲಕಾಲಕ್ಕೂ ಹುಟ್ಟಿಬೆಳೆದ ದೇಶಭಾಷೆಗಳದೆಷ್ಟೋ!
ಸಂಸ್ಕೃತವು ಇತರೆಲ್ಲ ಭಾಷೆಗಳೊಡನೆ ಹೊಂದಿಕೊಳ್ಳುವ ಉದಾರ ಭಾಷೆ. ಅದು ಆಂಗ್ಲಭಾಷೆಯಂತಲ್ಲ. ಸ್ವಲ್ಪ ಕಟುವಾಗಿ ಸತ್ಯ ಹೇಳುವುದಾದರೆ, ಆಂಗ್ಲಜನರು ಜಗತ್ತಿನ ಯಾವ ಭಾಗಕ್ಕೆ ಹೋದರೂ, ಅಲ್ಲಿ ಸ್ಥಳೀಯರ ಜೀವನಶೈಲಿ, ಭಾಷೆ ಹಾಗೂ ಧರ್ಮಸಂಸ್ಕೃತಿಗಳನ್ನು ತಿರಸ್ಕರಿಸಿ, ಹಸ್ತಕ್ಷೇಪಗೈದು, ನಾಶಗೊಳಿಸಿ, ಮತಾಂತರಿಸಿ, ಅವುಗಳ ಅಸ್ತಿತ್ವವನ್ನೇ ನಾಶಗೊಳಿಸಿ, ತಮ್ಮ ಭಾಷೆ-ಮತ-ವೇಷ-ಶಾಸನಗಳನ್ನು ಹೇರುತ್ತ ಬಂದಿದ್ದರಲ್ಲ, ಅವರ ಭಾಷೆಯೂ ಹಾಗೆಯೇ ಎನ್ನಬಹುದು! ಆಂಗ್ಲವು ಯಾವ ದೇಶಗಳಲ್ಲಿ ನೆಟ್ಟುಕೊಂಡಿದೆಯೋ ಅಲ್ಲಲ್ಲಿ ಆಯಾ ದೇಶಭಾಷೆಗಳ ಅಸ್ತಿತ್ವಕ್ಕೆ ಅಪಾಯವೊದಗಿದೆ. ಬಾಲ್ಯದಿಂದಲೂ ಆಂಗ್ಲಭಾಷೆಯೊಂದನ್ನೇ ಅಭ್ಯಾಸ ಮಾಡುತ್ತ ಬೆಳೆಯುವವರು ಭಾರತೀಯರಾಗಲಿ ವಿದೇಶೀಯರಾಗಲಿ, ಅವರಿಗೆ ಬೇರಾವ ಭಾಷೆಯಲ್ಲೂ ಸಂವಹನೆ ಮಾಡುವ ಸಾಮರ್ಥ್ಯ‌ ಅಷ್ಟಾಗಿ ಬೆಳೆಯುವುದಿಲ್ಲ. ಆಂಗ್ಲದ ಸ್ವರೂಪವೇ ಅಂತಹದ್ದು. ಏಕಮುಖವಾದ monolinguistic ability ಭಾಷಾತಜ್ಞತೆಯನ್ನು ಬೆಳೆಸುತ್ತದೆ. (ಈ ಸಮಸ್ಯೆಯನ್ನು ಸ್ವತಃ ಇಂಗ್ಲೆಂಡ್‌ ದೇಶವೇ ಗುರುತಿಸಿಕೊಂಡಿದ್ದು, ತಮ್ಮ ಮಕ್ಕಳಲ್ಲಿ ಕಾಣುವ deficiency of multilingual intelligence/ಬಹುಭಾಷಾ ಕಲಿಕೆಯ ಅಸಾಮರ್ಥ್ಯ‌ವನ್ನು ಗಮನಿಸಿ ಆತಂಕ ಪಡಲಾರಂಭಿಸಿದೆ!) ಆಂಗ್ಲಭಾಷೆಗೇ ಆತುಕೊಳ್ಳುವವರು ದೇಶಭಾಷೆಗಳನ್ನು ಸ್ವಲ್ಪ ಮಾತಾಡಿಯಾರೇ ಹೊರತು, ಕಾವ್ಯಸಾಹಿತ್ಯಾದಿಗಳನ್ನು ಆಸ್ವಾದಿಸುವ ಮಟ್ಟದ ಭಾಷಾಭಿಜ್ಞತೆಯನ್ನು ಬೆಳೆಸಿಕೊಳ್ಳಲಾರರು, ಅಂತಹವರು ಇದ್ದರೂ ಬಹಳ ವಿರಳರು! ಆಂಗ್ಲಮಾಧ್ಯಮದಲ್ಲಿ ಓದುವ ನಮ್ಮ ಮಕ್ಕಳಲ್ಲಿ ಕನ್ನಡವು ಸಾಮಾನ್ಯ ಸಂಭಾಷಣೆಯ ಮಟ್ಟಕ್ಕಿಂತ ಏರಿ, ಸಾಹಿತ್ಯಾಸಕ್ತಿಯಾಗಿ ಅರಳುವುದು ತುಂಬ ವಿರಳವಾಗುತ್ತಿರುವುದಕ್ಕೆ ಆಂಗ್ಲಭಾಷೆಯ ಈ ಮೊಂಡುಸ್ವರೂಪದ ಪ್ರಭಾವವೂ ಒಂದು ಕಾರಣ. ಆದರೆ ಸಂಸ್ಕೃತವಾಗಲಿ ನಮ್ಮ ದೇಶಭಾಷೆಗಳಾಗಲಿ ಹಾಗಲ್ಲ. ಕನ್ನಡಿಗರಿಗೆ ನೆರೆಕೆರೆಯ ತಮಿಳು, ತೆಲುಗು, ತುಳು, ಮರಾಠಿ ಹಾಗೂ ಹಿಂದಿ ಸುಲಭಗ್ರಾಹ್ಯ. ಸ್ವಲ್ಪ ಯತ್ನಿಸಿದರೆ ಸಾಹಿತ್ಯಾಸ್ವಾದನೆಯೂ ಶಕ್ಯ.
ಸಂಸ್ಕೃತಭಾಷೆಯಂತೂ ಈ ವಿಷಯದಲ್ಲಿ ತುಂಬ ಉದಾರ. ದೇಶಭಾಷೆಗಳನ್ನು ಶ್ರೀಮಂತಗೊಳಿಸುತ್ತದಲ್ಲದೆ, ಅವುಗಳ ಸ್ವತಂತ್ರ ಶೈಲಿ ಹಾಗೂ ಪ್ರಯೋಗಗಳನ್ನೂ ಉಳಿಯಲು ಬಿಡುತ್ತದೆ. ಸಂಸ್ಕೃತವು ವೈದಿಕ ವಾಙ್ಮಯವನ್ನೂ ತನ್ನ ವ್ಯಾಕರಣದ ನಿಯಮಗಳಿಂದ ಬಂಧಿಸಿ ಬದಲಾಯಿಸಲು ಹೋಗಿಲ್ಲ. ಯಥಾವತ್ತಾಗಿ ಉಳಿಯಲು ಬಿಟ್ಟಿದೆ! ಸಂಸ್ಕೃತಕ್ಕೆ ಅದ್ಭುತ ಚೌಕಟ್ಟನ್ನು ಕಟ್ಟಿಕೊಟ್ಟ ಪಾಣಿನಿ ೕಮಹರ್ಷಿಯೇ ತನಗಿಂತ ಪೂರ್ವಕಾಲದಿಂದಲೂ ರೂಢಿಯಲ್ಲಿ ಬಂದ ಲೌಕಿಕ ಪದಪ್ರಯೋಗಗಳನ್ನೂ ವ್ಯಾಕರಣದಲ್ಲಿ ತಿದ್ದಲು ಹೋಗದೆ, ಅವನ್ನು ‘ಆರ್ಷಪ್ರಯೋಗ’ಗಳು, ಹಾಗೇ ಇರಲಿ ಎಂದು ಗೌರವದಿಂದ ಸುಮ್ಮನಾಗುತ್ತಾರೆ! ಇದು ಪಾಣಿನೀ ಮಹರ್ಷಿಗಳೊಬ್ಬರ ಔದಾರ್ಯವಷ್ಟೇ ಅಲ್ಲ, ಸಂಸ್ಕೃತಭಾಷಾಪರಂಪರೆಯಲ್ಲೇ ಕಾಣಬರುವ ಗುಣವಿಶೇಷ!
ಸಂಸ್ಕೃತವು ತಾನೂ ಶುದ್ಧವಾಗಿ ಉಳಿದು, ಇತರ ಭಾಷೆಗಳನ್ನೂ ಪೋಷಿಸಿರುವ ಅಸಾಧಾರಣ ಭಾಷೆ. ವ್ಯಾಕರಣವನ್ನೇ ತೆಗೆದುಕೊಳ್ಳಿ. ಅದು ಸಂಸ್ಕೃತಕ್ಕಷೇ ಉಪಯುಕ್ತವಲ್ಲ, ದೇಶಭಾಷೆಗಳಿಗೂ ಉಪಯುಕ್ತ. ವಿಶ್ವದ ಯಾವುದೇ ಭಾಷೆಯೂ ಇದರ ಸಿದ್ಧಾಂತಗಳನ್ನು ಎರವಲು ಪಡೆದು ತಮ್ಮ ಭಾಷೆಗೆ ಅನ್ವಯ ಮಾಡಿಕೊಳ್ಳಬಹುದಾಗಿದೆ. ನಾವು ಕನ್ನಡ, ಹಿಂದಿ ಮುಂತಾದ ದೇಶಭಾಷೆಗಳಲ್ಲಿ ಇಂದು ಬಳಸುವ ನಾಮಪದ, ಕ್ರಿಯಾಪದ, ವಿಭಕ್ತಿ, ಲಿಂಗ, ವಚನ, ಕಾಲ, ಸಂಧಿ, ಸಮಾಸಾದಿ ಪರಿಕಲ್ಪನೆಗಳು ಸಂಸ್ಕೃತ ವ್ಯಾಕರಣದಿಂದಲೇ ಪಡೆಯಲಾಗಿವೆ. ಆದರೆ ದೇಶಭಾಷೆಗಳ ಪ್ರಾಂತೀಯ ಸೊಗಡಿನ ರೂಢಿ ಪದಬಳಕೆಗಳನ್ನು ಸಂಸ್ಕೃತಪದಗಳು ಅಳಿಸಿಲ್ಲ. ಸಂಸ್ಕೃತದ ವ್ಯಾಕರಣನೀತಿಗಳು ದೇಶಭಾಷೆಗಳಲ್ಲಿ ಅಗತ್ಯವಿದ್ದಷ್ಟೇ ಬಳಕೆಯಾಗಿವೆ. ಹೀಗೆ ಸಂಸ್ಕೃತವು ದೇಶಭಾಷೆಗಳೊಡನೆ ಸುಭಗ-ಸಮರಸ ಸಂಬಂಧವನ್ನು ಅನಾದಿಯಿಂದಲೂ ಹೊಂದಿದೆ.
ಕನ್ನಡದ ಉದಾಹರಣೆಯನ್ನೇ ತೆಗೆದುಕೊಂಡರೆ, ಇಲ್ಲಿ ಬಳಕೆಯಲ್ಲಿರುವ ಸಂಸ್ಕೃತಮೂಲ ಹಾಗೂ ದ್ರಾವಿಡಮೂಲದ ಪದಗಳೂ ಹಾಗೂ ಸ್ವತಂತ್ರಪ್ರಯೋಗಗಳು ಒಟ್ಟೊಟ್ಟಿಗೇ ಉಳಿದುಬಂದದ್ದನ್ನು ಗಮನಿಸಬಹುದು- ತಾಯಿ-ಮಾತೆ, ತಂದೆ-ಪಿತಾ, ಮಗ-ಪುತ್ರ, ನಾಡು-ದೇಶ, ನುಡಿ-ಭಾಷೆ, ಆಣತಿ-ಆಜ್ಞೆ, ರಾಜಾ-ಅರಸ, ಪತಿ-ಒಡೆಯ, ಸಮುದ್ರ-ಕಡಲು, ಮುಗಿಲು-ಗಗನ, ಕಾಡು-ಅರಣ್ಯ, ನೆಲೆ-ಭೂಮಿ ಇತ್ಯಾದಿ. ಇನ್ನು ಸಂಸ್ಕೃತ ಪದಗಳು ತತ್ಸಮ-ತದ್ಭವ ನೀತಿಯಿಂದ ಬಳಕೆಯಲ್ಲಿರುವುದನ್ನೂ ಕಾಣಬಹುದು- ಪಕ್ಷಿ-ಹಕ್ಕಿ, ಆಕಾಶ-ಆಗಸ, ನಿದ್ರೆ-ನಿದ್ದೆ, ಬ್ರಹ್ಮ-ಬೊಮ್ಮೆ, ಅಂಬಾ-ಅಮ್ಮ, ಧಾತ್ರಿ-ದಾದಿ, ರಾಜ್ಞಿ-ರಾಣಿ… ಇತ್ಯಾದಿ! ಉದಾಹರಣೆಗಳು ಅಸಂಖ್ಯ! ಇವಲ್ಲದೆ ಸಂಸ್ಕೃತ ಹಾಗೂ ದೇಶೀಪದಗಳ ಸಮಾಸೀಕರಣವನ್ನು ‘ಅರಿಸಮಾಸ’ ಎಂದು ಭಾಷಾತಜ್ಞರು ಖಂಡಿಸುತ್ತ ಬಂದಿದ್ದರೂ, ಈ ಬಳಕೆಗಳು ಆಡುಭಾಷೆಯಲ್ಲು ವಿಪುಲವಾಗಿ ಸೇರಿಹೋಗಿವೆ.
ಇದಲ್ಲದೆ, ಯಾವುದೇ ವಿನೂತನ ಪದವನ್ನು, ವಿಶೇಷವಾಗಿ ಪಾರಿಭಾಷಿಕ ಪದವನ್ನು, ದೇಶಭಾಷೆಗಳಲ್ಲಿ ಬಳಕೆಗೆ ತರಬೇಕಾದರೆ, ಸಂಸ್ಕೃತಕ್ಕೇ ಮೊರೆಹೋಗಬೇಕಾಗಿದೆ! ಆಧುನಿಕ ಯುಗದಲ್ಲಿ ಇಂತಹ ಅನೇಕಾನೇಕ ಪದಗಳನ್ನು ಕಾಣಬಹುದು- ದೂರವಾಣಿ, ವಿಮಾನ, ಆಕಾಶವಾಣಿ, ದೂರದರ್ಶನ, ಗಣಕಯಂತ್ರ, ಅಸ್ತ್ರ, ಶಸ್ತ್ರ, ಆಯುಧ, ಸಾಂದ್ರಮುದ್ರಿಕಾ, ಧ್ವನಿವರ್ಧಕ.. ಮುಂತಾದ ಯಂತ್ರೋಪಕರಣಗಳ ನಾಮಕರಣಕ್ಕೆ ಸಂಸ್ಕೃತವೇ ಆಧಾರ. ವಿದ್ಯಾಪ್ರಕಾರಗಳ ನಾಮಧೇಯಗಳಾದ ವಿಜ್ಞಾನ, ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ, ಭೂಗೋಲಶಾಸ್ತ್ರ, ಖಗೋಲಶಾಸ್ತ್ರ, ನಿರ್ವಹಣಶಾಸ್ತ್ರ, ವೈದ್ಯಕೀಯ, ತಂತ್ರಜ್ಞಾನ ಮುಂತಾದವು, ಶಿಕ್ಷ ಕ, ವಿದ್ಯಾರ್ಥೀ, ಉಪಾಧ್ಯಾಯ, ಪ್ರಾಂಶುಪಾಲ, ಪೋಷಕ, ಪಾಲಕ, ಆರಕ್ಷ ಕ, ರಾಷ್ಟ್ರಪತೀ, ಪ್ರಧಾನಮಂತ್ರೀ, ಮುಖ್ಯಮಂತ್ರೀ, ಶಾಸಕ, ಸಭಾಧ್ಯಕ್ಷ , ಸಚಿವ, ಅಮಾತ್ಯ, ಆಯುಕ್ತ ಮುಂತಾದ ವಾಚಕಗಳು, ಶಾಲೆ, ಗ್ರಂಥಾಲಯ, ವಿತ್ತಕೋಶ, ಯುದ್ಧ, ಸಂಧಿ, ಶತ್ರು, ಮಿತ್ರ, ಆಪತ್ತು ಮುಂತಾದ ಸ್ಥಳಸೂಚಕಗಳೂ, ಜ್ಞಾನ, ವಿದ್ಯೆ, ಚಾತುರ್ಯ, ಗುಣ, ಶೀಲ, ಸತ್ಯ, ನ್ಯಾಯ, ಅನ್ಯಾಯ… ಸಂವಿಧಾನ, ಸುಗ್ರೀವಾಜ್ಞೆ, ಶಾಸನ, ನಿಗಮ, ನಿಯಮ, ಶಿಕ್ಷೆ, ಮುಂತಾದಪದಗಳೂ, ವಿಜಯ, ಕರ್ನಾಟ, ಪತ್ರಿಕೆ, ವಾರ್ತೆ, ವಿಶೇಷ, ಪತ್ರಕರ್ತ, ಸಂಕಲನ, ಲೇಖನ, ಸಂಪಾದನ, ಗ್ರಾಹಕ, ವಾಚಕ ಮುಂತಾದ ಪದಗಳೂ, ಭಾರತೀಯರಲ್ಲಿ ವ್ಯಕ್ತಿಗಳ, ನಗರಗಳ, ಬೆಟ್ಟಗಳ, ನದಿಗಳ, ಅರಣ್ಯಗಳ, ಮನೆತನಗಳ, ರಾಜ್ಯಗಳ, ಪ್ರದೇಶಗಳ ಹೆಸರುಗಳೂ ಬಹುತೇಕ ಸಂಸ್ಕೃತಮೂಲದವೇ ಆಗಿವೆ!
ತಮಾಷೆಯೇನೆಂದರೆ ಸಂಸ್ಕೃತವನ್ನು ನಿಷ್ಕಾರಣವಾಗಿ ದ್ವೇಷಿಸುವ ದುರ್ಮತಿಗಳೂ, ಸಂಸ್ಕೃತವನ್ನು ಮೃತಭಾಷೆ, ಪ್ರಯೋಜನಾತೀತ, ಅಟ್ಟದ ಭಾಷೆ ಎನ್ನುವ ಸಂಸ್ಕೃತಮೂಲದ ಪದಗಳನ್ನೇ ಬಳಸಿ ಬೈಯುವಂತಾಗಿದೆ! ಅಷ್ಟೇ ಅಲ್ಲ, ಅವರ ಹೆಸರುಗಳೂ ಉಪನಾಮಗಳೂ ಬಹುತೇಕ ಸಂಸ್ಕೃತಪದಗಳೇ ಆಗಿವೆ!
ಸ್ವಲ್ಪ ಯತ್ನಿಸಿದರೇ ಸಾಕು, ಸರಳ ಸಂಸ್ಕೃತ ಸಂಭಾಷಣೆಯನ್ನೂ ಕಲಿತು ವ್ಯವಹರಿಸಬಹುದು ಎನ್ನುವುದನ್ನಂತೂ ಸಂಸ್ಕೃತ ಭಾರತಿ ಸಂಸ್ಥೆಯು ವಿಶ್ವಾದ್ಯಂತ ಪ್ರಯೋಗಿಸಿ ತೋರಿಸಿದೆ! ಇಂದು ಲಕ್ಷ ಗಳ ಸಂಖ್ಯೆಯಲ್ಲಿ ಜನರು ಸಂಸ್ಕೃತದಲ್ಲಿ ವ್ಯವಹರಿಸಬಲ್ಲವರಾಗಿದ್ದಾರೆ. ಹೀಗೆ ಪ್ರಾಚೀನವನ್ನು ಅತ್ಯಾಧುನಿಕ ಯುಗಕ್ಕೆ ಬೆಸೆಯುವ ದಿವ್ಯಸೋಪಾನವಾಗಿರುವ ಈ ಗೀರ್ವಾಣ-ಸರಸ್ವತಿಯು ಭಕ್ತಿಗೂ ಯುಕ್ತಿಗೂ ಮುಕ್ತಿಗೂ ಸಾಧನವಾಗಿ, ಭಾರತೀಯರ ಭಾವನೆಗಳನ್ನೂ ವಿಚಾರಗಳನ್ನೂ ಜೀವನದ ಹಲವು ವಿವರಗಳನ್ನೂ ಸಮೃದ್ಧಗೊಳಿಸುತ್ತ ಬಂದಿರುವ ‘ಚಿರನವೀನೆ’.

(ಲೇಖಕರು ಆಧ್ಯಾತ್ಮ ಚಿಂತಕರು)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top