ಸಾವಿನ ಪೆಟ್ಟಿಗೆಗೆ ಕೊನೇ ಮೊಳೆ ಹೊಡೆದ ಪರಿಯಿದು

ಹತ್ಯೆಯಾದವರು ಮಕ್ಕಳಿಗೆ ಅಪ್ಪ-ಅಮ್ಮ, ಹೆಂಡತಿಗೆ ಗಂಡ ಎಂಬುದಕ್ಕಿಂತ ಹೆಚ್ಚಾಗಿ ಅವರು ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯ ವಾರಸುದಾರರು ಎಂಬುದು ಮುಖ್ಯ. ಇದು ಗೊತ್ತಿದ್ದೂ ಸಾವಿನ ಸತ್ಯದ ಮೇಲೆ ತೆರೆ ಎಳೆಯುವವರಿಗೆ ಏನೆನ್ನಬೇಕು?

 360_saudi_oil_0209

ಜನಪ್ರಿಯ ಹೇಳಿಕೆಯೊಂದಿದೆ- Where there is a will, there is a way, there is an action, where there is no will there is a committee, there is an enquiry team, there is a report etc. ಕೆಲ ನಾಯಕರು, ಸರ್ಕಾರಗಳು ಮನಸ್ಸಿಲ್ಲದ ಮನಸ್ಸಿನಿಂದ ಮಾಡುವ ಕೆಲಸ, ಆಡುವ ಮಾತು, ನೀಡುವ ಹೇಳಿಕೆಗಳನ್ನು ಕಂಡಾಗ ಈ ಹೇಳಿಕೆ ಮತ್ತೆ ಮತ್ತೆ ನೆನಪಾಗಿ ಕಾಡುತ್ತದೆ. ನಮ್ಮ ಶಾಸನಸಭೆಗಳ ಪ್ರವೇಶದ್ವಾರಗಳ ಮೇಲೆ ಬೇರೆ ಏನೇನೋ ಘೋಷವಾಕ್ಯಗಳನ್ನು ಬರೆಸುವ ಬದಲು ಈ ಹೇಳಿಕೆಯನ್ನೇ ಕೆತ್ತಿಸಿದ್ದರೆ ಕಿಂಚಿತ್ ಪರಿಣಾಮವಾದರೂ ಆಗಬಹುದಿತ್ತೋ ಏನೋ. ಈ ಮಾತನ್ನು ಸುಖಾಸುಮ್ಮನೆ ಹೇಳುವುದಲ್ಲ, ಸ್ವಲ್ಪ ಆಲೋಚನೆ ಮಾಡಿ ನೋಡಿ, ಒಂದಲ್ಲ ಹತ್ತಲ್ಲ, ನೂರು, ಸಾವಿರ ಉದಾಹರಣೆಗಳನ್ನು ಕೊಡುತ್ತ ಹೋಗಬಹುದು. ಯಾವುದೇ ವಿಚಾರಕ್ಕೆ ಸಂಬಂಧಿಸಿ ತನಿಖೆಗೆ ಆದೇಶಿಸುತ್ತೇವೆ, ವರದಿ ಬಂದ ನಂತರ ಕ್ರಮ ಜರುಗಿಸುತ್ತೇವೆಂದು ಮಂತ್ರಿ, ಮುಖ್ಯಮಂತ್ರಿಗಳು ಹೇಳಿದರು ಅಂತಿಟ್ಟುಕೊಳ್ಳಿ. ಸರ್ಕಾರಕ್ಕೆ ಆ ವಿಷಯದಲ್ಲಿ ಏನೇನೂ ಆಸಕ್ತಿ ಇಲ್ಲ, ಬದ್ಧತೆ ಇಲ್ಲ, ಇರುವ ಸತ್ಯದ ಮೇಲೆ ಒಂದು ಸುಳ್ಳಿನ ಪರದೆ ಎಳೆಯುವ ಕುರಿತು ಆಗಲೇ ತೀರ್ಮಾನಿಸಿ ಆಗಿದೆ ಅಂತ ಖಚಿತವಾಗಿ ಷರಾ ಬರೆದುಬಿಡಬಹುದು.

ದಿನಂಪ್ರತಿ ಕೇಳುವ, ಕಾಣುವ ಹಗರಣ ಮತ್ತೊಂದು ಮಗದೊಂದು ಬಿಟ್ಟುಬಿಡೋಣ, ಕನಿಷ್ಠಪಕ್ಷ ಈ ದೇಶ ಆಳಿದ ಪ್ರಧಾನಮಂತ್ರಿಯ ಬರ್ಬರ ಹತ್ಯೆಯ ತನಿಖೆಯ ವಿಷಯದಲ್ಲಾದರೂ ಪ್ರಾಮಾಣಿಕವಾಗಿ, ಪಾರದರ್ಶಕವಾಗಿ, ದಕ್ಷತೆಯಿಂದ ನಡೆದುಕೊಳ್ಳಬಾರದೇ? ಹತ್ಯೆಯಾದವರು ಮಕ್ಕಳಿಗೆ ಅಪ್ಪ-ಅಮ್ಮ, ಹೆಂಡತಿಗೆ ಗಂಡ ಎಂಬುದಕ್ಕಿಂತ ಹೆಚ್ಚಾಗಿ ಅವರು ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯ ವಾರಸುದಾರರು ಎಂಬುದು ಮುಖ್ಯ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ ತನಿಖೆಯೂ ಕೊನೆಗೆ ಹಳ್ಳ ಹಿಡಿದ ಕತೆಯನ್ನು ಕೇಳಿದರೆ ನಿಮಗೆ ಈ ಮಾತು ಒಪ್ಪಿಗೆಯಾಗುತ್ತದೆ. ಅದಕ್ಕಿಂತ ಹೆಚ್ಚಾಗಿ ರಾಜೀವ್ ಆಪ್ತೇಷ್ಟರ ಕೂಟವೇ ಇಂಥ ನೀಚಕೃತ್ಯ ಮಾಡಿದ್ದು ಎಂಬುದನ್ನು ಕೇಳಿದರೆ ಸಿಡಿಮಿಡಿಯಾಗುತ್ತೀರೋ, ಹತಾಶೆಗೊಳಗಾಗುತ್ತೀರೋ ಗೊತ್ತಿಲ್ಲ.

ಹೇಳುತ್ತ ಹೋದರೆ ಬೇಕಾದಷ್ಟಿದೆ, ಬೆಟ್ಟದಷ್ಟು ಮಾಹಿತಿ ಇದೆ. ಆದರೆ ಇಲ್ಲಿ ಕೆಲ ಸ್ಯಾಂಪಲ್‍ಗಳನ್ನು ಮಾತ್ರ ಎತ್ತಿ ನಿಮ್ಮ ಮುಂದಿಡುತ್ತಿದ್ದೇನೆ. ನೋಡಿ, ರಾಜೀವ್ ಹತ್ಯೆಯಾದದ್ದು 1991ರ ಮೇ 21ರಂದು. ಘಟನೆ ನಡೆದದ್ದು ನಡುರಾತ್ರಿಯಲ್ಲಿ. ಬಹುಪಾಲು ಇಡೀ ಜಗತ್ತಿಗೆ ಆ ಸುದ್ದಿ ತಿಳಿದದ್ದು ಮರುದಿನ ನಸುಕಿನಲ್ಲಿ. ಡಿಐಜಿ ದರ್ಜೆಯ ದಕ್ಷ ಪೊಲೀಸ್ ಅಧಿಕಾರಿ ಕಾರ್ತಿಕೇಯನ್ ನೇತೃತ್ವದ ವಿಶೇಷ ತನಿಖಾ ತಂಡ (ಎಸ್‍ಐಟಿ) ಒಂದು ಕ್ಷಣವೂ ವಿಳಂಬ ಮಾಡದೆ ಬಿಗಿ ತನಿಖೆ ಶುರುಮಾಡಿತು. ರಾಜೀವ್ ಹತ್ಯೆಯ ಕಾಲಕ್ಕೆ ಸಿಬಿಐ ನಿರ್ದೇಶಕರಾಗಿದ್ದ ವಿಜಯಕರಣ್ ಇಡೀ ತನಿಖೆಯ ಉಸ್ತುವಾರಿಯನ್ನು ಹೆಗಲಿಗೇರಿಸಿಕೊಂಡಿದ್ದರು. ದೇಶದಲ್ಲಿರುವ ಅತಿ ದಕ್ಷ ಅಧಿಕಾರಿಗಳನ್ನು ಗುಡ್ಡೆಹಾಕಿದ ವಿಜಯಕರಣ್ ಅವರನ್ನು ಕಾರ್ತಿಕೇಯನ್ ಕೈಗೆ ಒಪ್ಪಿಸಿದ್ದರು. ತನಿಖಾ ತಂಡದವರು ಎಷ್ಟು ಚುರುಕಾಗಿ ತನಿಖೆ ಕೈಗೆತ್ತಿಕೊಂಡಿದ್ದರು ಅಂದರೆ ಎಲ್‍ಟಿಟಿಇಯವರು ಎಷ್ಟೇ ನಯ-ನಾಜೂಕಿನಿಂದ, ಯಾವುದೇ ಸಾಕ್ಷೃ ಸಿಗದಂತೆ ಕಾರ್ಯಾಚರಣೆ ಪೂರ್ಣಗೊಳಿಸಿದ್ದರು ಸಹ, ಕೆಲವೇ ದಿನಗಳಲ್ಲಿ ಅಂದರೆ, ಜೂನ್ 12ರ ಹೊತ್ತಿಗೆ ಧನು, ನಳಿನಿ ಮತ್ತು ಶಿವರಸನ್ ಈ ಮೂವರೇ ಇಡೀ ಹತ್ಯೆ ಸಂಚಿನ ಕಿಂಗ್‍ಪಿನ್‍ಗಳು ಎಂಬುದನ್ನು ಪತ್ತೆ ಹಚ್ಚಿದ್ದರು; ಅವರೆಲ್ಲರ ಫೋಟೋ ಬಿಡುಗಡೆ ಮಾಡಿದ್ದರು. ಕೇವಲ ಒಂದೂವರೆ ತಿಂಗಳ ಒಳಗೆ ಶ್ರೀಲಂಕಾ, ಸಿಂಗಪುರವೂ ಸೇರಿ ಹದಿನಾಲ್ಕು ದೇಶಗಳನ್ನು ಜಾಲಾಡಿ ಅಗಾಧ ಮತ್ತು ಅಷ್ಟೇ ನಿಖರ ಮಾಹಿತಿ ಕಲೆಹಾಕಿದ್ದರು. ಎಲ್ಲವೂ ಸರಿದಾರಿಯಲ್ಲಿ ಸಾಗುತ್ತಿತ್ತು. ವಿಶೇಷ ತನಿಖಾ ತಂಡ ಎಷ್ಟೇ ಕರಾರುವಾಕ್ಕಾಗಿ ಕೆಲಸ ಮಾಡುತ್ತಿದ್ದರೂ, ಅದರ ಜತೆಯಲ್ಲಿ ಮತ್ತೊಂದು ತನಿಖಾ ಆಯೋಗವನ್ನು ನೇಮಕ ಮಾಡಲಾಯಿತು.

ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿದ್ದ ಜಗದೀಶ್ ಶರಣ್ ವರ್ಮಾ ಅದರ ಮುಖ್ಯಸ್ಥರು. ವಿಶೇಷ ಅಂದರೆ ರಾಜೀವ್ ಹತ್ಯೆಗೆ ಕಾರಣವಾದ ಭದ್ರತಾ ವೈಫಲ್ಯದ ಕುರಿತು ಮಾತ್ರ ತನಿಖೆಗೆ ಆದೇಶಿಸಲಾಗುತ್ತದೆ. ಹತ್ಯೆಯ ಹಿಂದಿನ ಷಡ್ಯಂತ್ರದ ಕುರಿತು ತನಿಖೆ ಮಾಡುವ ಬಗ್ಗೆ ಅಪ್ಪಿತಪ್ಪಿಯೂ ಪ್ರಸ್ತಾಪ ಇರಲಿಲ್ಲ. ಅದಕ್ಕೆ ಸಂಬಂಧಿಸಿ ಸಂಸತ್ತಿನಲ್ಲಿ ವಿಪಕ್ಷಗಳು ಗದ್ದಲ ಮಾಡಿದವು. ನಿಜಕ್ಕೂ ಆಕ್ಷೇಪವೆತ್ತಬೇಕಿದ್ದ ಕಾಂಗ್ರೆಸ್ ಪಕ್ಷ ಚಕಾರ ಎತ್ತುವುದಿಲ್ಲ. ಪ್ರತಿಪಕ್ಷಗಳ ಒತ್ತಡ ಹೆಚ್ಚತೊಡಗಿದಾಗ ರಾಜೀವ್ ಹತ್ಯೆಯ ಹಿಂದಿನ ಷಡ್ಯಂತ್ರದ ತನಿಖೆಗೆ ಸರ್ಕಾರ ಮನಸ್ಸಿಲ್ಲದ ಮನಸ್ಸಿಂದ ಅಣಿಯಾಗುತ್ತದೆ. ಅದನ್ನು ಅರಿತ ಸಿಬಿಐ ನಿರ್ದೇಶಕ ವಿಜಯಕರಣ್ ಆಗಿನ ಪ್ರಧಾನಿ ನರಸಿಂಹ ರಾವ್‍ರನ್ನು ಭೇಟಿ ಮಾಡಿ ತನಿಖೆಯ ಪ್ರಗತಿಯನ್ನು ಎಳೆಎಳೆಯಾಗಿ ವಿವರಿಸುತ್ತಾರೆ. ಇಡೀ ಪ್ರಕರಣವನ್ನು ಸಂಪೂರ್ಣವಾಗಿ ಜಾಲಾಡಲು ವಿಶೇಷ ತನಿಖಾ ತಂಡ ಸಮರ್ಥವಾಗಿದೆ, ಈಗ ಬೇರೊಂದು ಆಯೋಗ ನೇಮಕ ಮಾಡಿದರೆ ತಂಡದ ಕೆಲಸಕ್ಕೆ ಹಿನ್ನಡೆಯಾಗುತ್ತದೆ, ತನಿಖಾಧಿಕಾರಿಗಳಿಗೆ ಇರುಸುಮುರುಸುಂಟಾಗುತ್ತದೆ. ಅಮೆರಿಕದ ಅಧ್ಯಕ್ಷ ಜಾನ್ ಎಫ್.ಕೆನಡಿ ಹತ್ಯೆ ವಿಚಾರಣೆಗೆ ನೇಮಕಗೊಂಡ ವಾರನ್ ಆಯೋಗವೇ ಏನೂ ಮಾಡಲಾಗದೆ ಕೈಚೆಲ್ಲಿದೆ. ಹೀಗಿರುವಾಗ ಇಲ್ಲಿ ಮತ್ತೊಂದು ಆಯೋಗ ಏನು ಮಾಡೀತು ಎಂದು ವಿಜಯಕರಣ್ ಪರಿಪರಿಯಾಗಿ ಮನವೊಲಿಸಲು ಯತ್ನಿಸುತ್ತಾರೆ. ಎಲ್ಲವನ್ನೂ ಶಾಂತವಾಗಿ ಕೇಳಿಸಿಕೊಂಡ ರಾವ್, “ನೀವು ಹೇಳುವುದೆಲ್ಲ ಸರಿ, ಆದರೆ ಅಧಿಕಾರಕ್ಕೆ ಬಂದರೆ ಘಟನೆಯ ಕೂಲಂಕಷ ತನಿಖೆಗೆ ಆಯೋಗ ನೇಮಿಸುವುದಾಗಿ ದೇಶದ ಜನತೆಗೆ ಕಾಂಗ್ರೆಸ್ ಪಕ್ಷ ವಚನ ಕೊಟ್ಟಿದೆ. ಹೀಗಾಗಿ ತನಿಖಾ ಆಯೋಗ ನೇಮಿಸುವುದು ಶತಃಸಿದ್ಧ” ಎಂದು ಕಡ್ಡಿ ಮುರಿದಂತೆ ಹೇಳುತ್ತಾರೆ. ವಿಜಯಕರಣ್ ಮರು ಮಾತಾಡುವುದಿಲ್ಲ. 1991ರ ಆಗಸ್ಟ್‍ನಲ್ಲಿ ದೆಹಲಿ ಹೈಕೋರ್ಟ್‍ನ ನಿವೃತ್ತ ನ್ಯಾಯಾಧೀಶ ಮಿಲಾಪಚಂದ ಜೈನ್ ಆಯೋಗ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗುತ್ತದೆ. ಆದರೇನಂತೆ, ಆದೇಶ ಹೊರಡಿಸಿದ್ದೊಂದೇ ಬಂತು, ಜೈನ್ ಆಯೋಗಕ್ಕೆ ಅಗತ್ಯ ಕಚೇರಿ ಮತ್ತು ಸಿಬ್ಬಂದಿ ಒದಗಿಸಲು ಸರ್ಕಾರಕ್ಕೆ ಮರೆತೇ ಹೋಗುತ್ತದೆ. ಅದರ ಪರಿಣಾಮ ಮುಂದೆ ಹತ್ತು ತಿಂಗಳು ಆಯೋಗ ಕೆಲಸ ಆರಂಭಿಸಲಿಕ್ಕೇ ಸಾಧ್ಯವಾಗುವುದಿಲ್ಲ. ಹತ್ಯೆ ಷಡ್ಯಂತ್ರ ತನಿಖೆಗೆ ನೇಮಕವಾದ ಆಯೋಗದ ಕೈ ಕಟ್ಟಿಹಾಕುವುದಕ್ಕೆ ಆರಂಭದಲ್ಲೇ ಷಡ್ಯಂತ್ರ ಶುರುವಾಗಿತ್ತು! ಹಾಗೂ ಹಟ ಬಿಡದ ಜೈನ್ ತನಿಖೆ ಶುರುಮಾಡುತ್ತಾರೆ. ಅವರು ಮೊದಲು ವಿಚಾರಣೆ ನಡೆಸಿದ್ದು ಮಾಜಿ ಕ್ಯಾಬಿನೆಟ್ ಸೆಕ್ರೆಟರಿ ಜಾಫರ್ ಸೈಫುಲ್ಲಾರನ್ನು. ವಿಚಾರಣೆ ವೇಳೆ ಸೈಫುಲ್ಲಾ ನೀಡಿದ ಮಾಹಿತಿಯಂತೆ ನೌಕಾಪಡೆ ಗುಪ್ತಚರ ವಿಭಾಗಕ್ಕೆ ರವಾನಿಸಿದ್ದ ವೈರ್‍ಲೆಸ್ ಸಂದೇಶದ ಕಡತವನ್ನು ಕೊಡುವಂತೆ ಜೈನ್ ಆಯೋಗ ಕೇಳಿದರೆ ಅಂತಹ ಯಾವುದೇ ಮಾಹಿತಿಯ ಕಡತ ಸರ್ಕಾರದ ಬಳಿ ಇಲ್ಲ ಎಂಬ ಉತ್ತರ ಬಂತು. ಅದೇ ರೀತಿ ಜಸ್ಟಿಸ್ ವರ್ಮಾ ಆಯೋಗ ನೇಮಕಕ್ಕೆ ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ್ದ ಮೂಲ ಆದೇಶದ ಕಡತವನ್ನು ಕೊಡುವಂತೆ ಜೈನ್ ಆಯೋಗ ಕೇಳಿದರೆ ಅದು ನಿಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಅಟಾರ್ನಿ ಜನರಲ್ ನೇರಾನೇರ ಸಬೂಬು ಹೇಳಿದರು.

ಅಷ್ಟು ಸಾಲದ್ದಕ್ಕೆ, ದೆಹಲಿ ಮೂಲದ ವಕೀಲ ಮುಷ್ತಾಕ್ ಅಹಮದ್ ಎಂಬುವವರು ಇದ್ದಕ್ಕಿದ್ದಂತೆ ದೆಹಲಿ ಹೈಕೋರ್ಟ್ ಮೆಟ್ಟಿಲು ಹತ್ತಿ, ಜೈನ್ ಆಯೋಗ ನೇಮಕಕ್ಕೆ ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ ಆದೇಶವನ್ನೇ ರದ್ದು ಮಾಡುವಂತೆ ಅರ್ಜಿ ಹಾಕುತ್ತಾರೆ. ಆದರೆ ಈ ಮನವಿಯನ್ನು ಮುಖ್ಯ ನ್ಯಾಯಾಧೀಶ ಎ.ಎಂ ಅಹಮದಿ ಹಾಗೂ ನ್ಯಾ. ಎಸ್.ಪಿ. ಬರೂಚಾ ಪೀಠ ಸಾರಾಸಗಟಾಗಿ ತಳ್ಳಿಹಾಕಿ, 1987ರ ಭಾರತ-ಶ್ರೀಲಂಕಾ ಮಿಲಿಟರಿ ಒಪ್ಪಂದದಿಂದ ಹಿಡಿದು ಸಮಗ್ರ ತನಿಖೆ ನಡೆಸುವಂತೆ ಜೈನ್ ಆಯೋಗಕ್ಕೆ ಸೂಚಿಸುತ್ತದೆ. ವಿಚಿತ್ರ ಅಂದರೆ ಮುಷ್ತಾಕ್ ಅಹಮದ್ ಮನವಿ ತಳ್ಳಿಹಾಕಿದ್ದನ್ನು ಪ್ರಶ್ನಿಸಿ ಕಾಂಗ್ರೆಸ್ ಸರ್ಕಾರವೇ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುತ್ತದೆ.

ಇದೆಲ್ಲ ಒಂದು ಕಡೆಯಾದರೆ, ತೀರಾ ಅವಮಾನಕರ ರೀತಿಯಲ್ಲಿ ಜೈನ್ ಆಯೋಗದ ತನಿಖೆಯನ್ನು ಮೊಟಕು ಮಾಡಿದ್ದು ಇನ್ನೂ ವಿಚಿತ್ರ. 1998ರ ಫೆಬ್ರವರಿ 27, ಆಯೋಗಕ್ಕೆ ಈ ಮೊದಲು ನೀಡಿದ್ದ ಅವಧಿ ಮುಗಿಯುತ್ತ ಬಂದಿದ್ದರಿಂದ ಅವಧಿ ವಿಸ್ತರಣೆ ಮಾಡಲು ಆಯೋಗದ ಕಾರ್ಯದರ್ಶಿ ಡಿ.ಆರ್. ಲೂಥ್ರಾ ಕ್ಯಾಬಿನೆಟ್ ಸೆಕ್ರೆಟರಿ ಬಿ.ಪಿ.ಸಿಂಗ್‍ಗೆ ಪತ್ರ ಬರೆದರು. `ಆಯೋಗದ ಅವಧಿ ವಿಸ್ತರಣೆ ಆದೇಶ ಸಿದ್ಧವಾಗಿದೆ, ಸಹಿಯಾಗುವುದೊಂದೇ ಬಾಕಿ’ ಎಂಬ ಉತ್ತರವೇನೋ ಬಂತು. ಆದರೆ ನಡುರಾತ್ರಿ ಗೃಹ ಸಚಿವಾಲಯದಿಂದ ಬಂದ ಸಂದೇಶವೇ ಬೇರೆ. ಆಯೋಗ ಇನ್ನು ಏಳು ದಿನಗಳ ಒಳಗಾಗಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕೆಂಬ ಒಕ್ಕಣೆಯ ತುರ್ತು ಸಂದೇಶವನ್ನು ಗೃಹ ಕಾರ್ಯದರ್ಶಿ ನಿಖಿಲ್ ಕುಮಾರ್, ಜೈನ್ ಆಯೋಗಕ್ಕೆ ರವಾನಿಸಿದ್ದರು. ಸರ್ಕಾರದ ಸೂಚನೆಯಂತೆ ಆಯೋಗದ ತಂಡ ಗಡಿಬಿಡಿಯಲ್ಲಿ ವರದಿ ಸಿದ್ಧಪಡಿಸಲು ಮುಂದಾಗುತ್ತದೆ. ಆ ವೇಳೆ ಐ.ಕೆ.ಗುಜ್ರಾಲ್ ಸರ್ಕಾರದ ಪ್ರಭಾವಿ ಮಂತ್ರಿಯೊಬ್ಬರು ದೂರವಾಣಿ ಕರೆ ಮಾಡಿ `ಪೂರ್ಣಪ್ರಮಾಣದ ವರದಿ ಬೇಡ, ಕರಡು ವರದಿ(ಡ್ರಾಫ್ಟ್ ರಿಪೋರ್ಟ್) ಕೊಟ್ಟರೆ ಸಾಕು’ ಎಂದು ಫರ್ಮಾನು ಹೊರಡಿಸುತ್ತಾರೆ. ಹಾಗೆ ಆದೇಶ ಮಾಡಿದ ಗುಜ್ರಾಲ್ ಸರ್ಕಾರಕ್ಕೆ ಬೆಂಬಲ ನೀಡಿ ಬೆನ್ನೆಲುಬಾಗಿದ್ದದ್ದು ಕಾಂಗ್ರೆಸ್ ಪಕ್ಷವೇ. ಸರ್ಕಾರದ ಆದೇಶದಂತೆ ತರಾತುರಿಯಲ್ಲಿ ಕರಡು ವರದಿಯನ್ನು ಆಯೋಗ ಸರ್ಕಾರಕ್ಕೆ ಸಲ್ಲಿಸಿತು. ಕರಡು ವರದಿಯನ್ನು ಸಂಸತ್ತಿನ ಮುಂದಿಡುವ ಜರೂರತ್ತಿಲ್ಲ ಎಂಬ ಲೆಕ್ಕಾಚಾರವೇ ಅದನ್ನು ಕೇಳಿ ಪಡೆದದ್ದರ ಹಿಂದಿನ ಮರ್ಮ. ತನಿಖೆಗೆ ಒಂದು ದಿಕ್ಕುಗಾಣಿಸಲು ಕೊನೇ ಕ್ಷಣದವರೆಗೆ ಪರದಾಡಿದ ಜಸ್ಟಿಸ್ ಜೈನ್, ಸರ್ಕಾರದ ಅನಿರೀಕ್ಷಿತ ನಡವಳಿಕೆಯಿಂದ ಬೇಸರಗೊಂಡು ಆಯೋಗದ ಕರಡು ವರದಿಯನ್ನು ಆಯೋಗದ ಸೆಕ್ರೆಟರಿ ಲೂಥ್ರಾ ಕೈಯಲ್ಲಿ ಕೊಟ್ಟು ಕಳಿಸಿ ಜೋಧಪುರದ ತಮ್ಮ ನಿವಾಸಕ್ಕೆ ಹೊರಟು ಮೌನಕ್ಕೆ ಶರಣಾಗುತ್ತಾರೆ. ನ್ಯಾ. ಜೈನ್ ಜೋಧಪುರಕ್ಕೆ ಬಂದು ಇನ್ನೂ ಒಂದು ವಾರವಾಗಿತ್ತಷ್ಟೆ, ಖುದ್ದು ಸೋನಿಯಾ ಜೋಧಪುರದ ಜೈನ್ ನಿವಾಸಕ್ಕೆ ಅಚ್ಚರಿಯ ಭೇಟಿ ನೀಡಿ ಒಂದು ಥ್ಯಾಂಕ್ಸ್ ಹೇಳಿ ಬರುತ್ತಾರೆ. ಇಷ್ಟು ಸಾಕು ಅಂತ ತೋರುತ್ತದೆ. ಹಾಗಿದ್ದರೆ ವೆಲ್ಲೂರು ಜೈಲಿಗೆ ಪ್ರಿಯಾಂಕಾ ಯಾಕೆ ಭೇಟಿ ನೀಡುತ್ತಾರೆ, ರಾಜೀವ್ ಹಂತಕಿ ನಳಿನಿ ಬಿಡುಗಡೆಗೆ ಅವರೇಕೆ ವಕಾಲತ್ತು ವಹಿಸುತ್ತಾರೆ, ಪ್ರಿಯಾಂಕಾ ಭೇಟಿಯ ಕೆಲವೇ ದಿನಗಳ ನಂತರ ನಳಿನಿ ಕ್ಷಮಾದಾನದ ಅರ್ಜಿಯನ್ನೇಕೆ ಸಲ್ಲಿಸುತ್ತಾರೆ ಎಂಬುದನ್ನೆಲ್ಲ ನಿಮ್ಮ ಆಲೋಚನೆ, ಅಂದಾಜಿಗೇ ಬಿಡುತ್ತೇನೆ. ಈಗ ಶುರುವಾಗಿದೆ ರಾಜೀವ್ ಹಂತಕರ ಬಿಡುಗಡೆಯ ಪ್ರಹಸನ…

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top