ರಿಷಿ ಕಪೂರ್ ನಿಧನ, ಕಂಬನಿ ಮಿಡಿದ ಭಾರತ
ಮೂರು ದಶಕಗಳ ಕಾಲ ಬಾಲಿವುಡ್‌ನ ‘ರೊಮ್ಯಾಂಟಿಕ್ ಹೀರೋ’ ಆಗಿ ಮೆರೆದ ರಿಷಿ ಕಪೂರ್ ಗುರುವಾರ ಬೆಳಗ್ಗೆ ನಿಧನರಾದರು. ಎರಡು ವರ್ಷಗಳಿಂದ ರಕ್ತದ ಕ್ಯಾನ್ಸರ್(ಲುಕೇಮಿಯಾ)ನಿಂದ ಬಳಲುತ್ತಿದ್ದ ಅವರಿಗೆ 67 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಬುಧವಾರ ರಾತ್ರಿಯೇ ಅವರನ್ನು ಮುಂಬಯಿನ ಎಚ್.ಎನ್.ರಿಲಯನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಗ್ಗೆ ಕೊನೆಯುಸಿರೆಳೆದರು.
ಭಾರತೀಯ ಸಿನಿಮಾಕ್ಕೆ ಅನನ್ಯ ಕೊಡುಗೆ ನೀಡಿರುವ ಕಪೂರ್ ಕುಟುಂಬದ ಮೂರನೇ ತಲೆಮಾರಿನ ನಟರಾಗಿದ್ದ ರಿಷಿ ಕಪೂರ್ ಅವರಿಗೆ ಪತ್ನಿ, ನಟಿ ನೀತು ಸಿಂಗ್, ಮಗ ನಟ ರಣಬೀರ್ ಮತ್ತು ಮಗಳು ರಿಧಿಮಾ ಇದ್ದಾರೆ. ಬುಧವಾರ ಬೆಳಗ್ಗೆಯಷ್ಟೇ ಮತ್ತೊಬ್ಬ ಪ್ರತಿಭಾವಂತ ನಟ ಇರ್ಫಾನ್ ಖಾನ್ ನಿಧನದ ಸುದ್ದಿಯನ್ನು ಬಾಲಿವುಡ್ ಅರಗಿಸಿಕೊಳ್ಳುತ್ತಿರುವಾಗಲೇ ರಿಷಿ ಕಪೂರ್ ನಿಧನದ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿತು. ಲುಕೇಮಿಯಾ ಕ್ಯಾನ್ಸರ್‌ಗೆ ತುತ್ತಾಗಿದ್ದ ರಿಷಿ ಕಪೂರ್ ಅಮೆರಿಕಕ್ಕೆ ತೆರಳಿ ಚಿಕಿತ್ಸೆ ಪಡೆದುಕೊಂಡು ಮುಂಬಯಿಗೆ ವಾಪಸ್ ಆಗಿದ್ದರು.
‘ಶ್ರೀ 420’ ಚಿತ್ರದ ಹಾಡೊಂದರಲ್ಲಿ ಬಾಲ ಕಲಾವಿದನಾಗಿ ಬಣ್ಣ ಹಚ್ಚಿದ ರಿಷಿ ಕಪೂರ್, 1973ರಲ್ಲಿ ತೆರೆ ಕಂಡ ‘ಬಾಬ್ಬಿ’ ಚಿತ್ರದ ಮೂಲಕ ಪ್ರಸಿದ್ಧಿಗೆ ಬಂದರು. ಈ ಚಿತ್ರವು ಅವರಿಗೆ ‘ರೊಮ್ಯಾಂಟಿಕ್ ಹೀರೋ’ ಪಟ್ಟ ಕಟ್ಟಿತು. ಆ ಬಳಿಕ ಅನೇಕ ಪ್ರೇಮಕತೆಗಳಿರುವ ಚಿತ್ರಗಳಲ್ಲಿ ಅವರು ಅಭಿನಯಿಸಿದರು. 2000 ಬಳಿಕ ಅವರು ಪೋಷಕ ಪಾತ್ರಗಳಿಗೆ ತಿರುಗಿ, ಭಿನ್ನ ವಿಭಿನ್ನ ಪಾತ್ರಗಳ ಮೂಲಕ ತಮ್ಮೊಳಗಿನ ಅಭಿನಯ ಸಾಮರ್ಥ್ಯವನ್ನು ಜಗಜ್ಜಾಹೀರುಗೊಳಿಸಿದರು. ‘ದೋ ದೋನಿ ಚಾರ್’, ‘ಅಗ್ನಿಪಥ್’, ‘ಕಪೂರ್ ಅಂಡ್ ಸನ್ಸ್’ ಮತ್ತು ‘102 ನಾಟ್ಔಟ್’ ಚಿತ್ರಗಳು ಈ ಹಿನ್ನೆಲೆಯಲ್ಲಿ ಹೆಚ್ಚು ಗಮನ ಸೆಳೆದವು.
ಗಣ್ಯರ ಸಂತಾಪ
ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಹಿರಿಯ ನಟ ಅಮಿತಾಬ್ ಬಚ್ಚನ್, ರಜಿನಿಕಾಂತ್ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ. ‘‘ರಿಷಿ ಕಪೂರ್ ಬಹುಮುಖಿ, ಉತ್ಸಾಹದ ಚಿಲುಮೆಯಾಗಿದ್ದರು. ಅವರು ಪ್ರತಿಭೆಯ ಖನಿಯಾಗಿದ್ದರು. ರಿಷಿ ಅವರು ಭಾರತೀಯ ಸಿನಿಮಾಗಳ ಹಾಗೆಯೇ ಭಾರತದ ಅಭಿವೃದ್ಧಿಯ ಬಗ್ಗೆಯೂ ಒಲವು ಹೊಂದಿದ್ದರು,’’ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ. ‘‘ದಂತಕತೆ, ನಟ ರಿಷಿ ಕಪೂರ್ ನಿಧನದಿಂದಾಗಿ ಭಾರತೀಯ ಸಿನಿಮಾಕ್ಕೆ ಇದು ಭಯಂಕರ ವಾರವಾಗಿದೆ,’’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ‘‘ಅವರು ಹೋದರು… ರಿಷಿ ಕಪೂರ್ ಹೋದರು… ಈಗಷ್ಟೇ ನಿಧನರಾದರು. ನಾನು ಕುಸಿದು ಹೋದೆ,’’ ಎಂದು ಅಮಿತಾಬ್ ಬಚ್ಚನ್ ಟ್ವೀಟ್ ಮೂಲಕ ರಿಷಿ ನಿಧನವನ್ನು ಖಚಿತಪಡಿಸಿದರು. ಕನ್ನಡದ ನಟರಾದ ಶಿವರಾಜ್‌ಕುಮಾರ್, ಸುದೀಪ್, ಧನಂಜಯ್ ಸೇರಿ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.
ದಿಲ್ಲಿಯಿಂದ ಬರಲು ಪುತ್ರಿಗೆ ಅವಕಾಶ
ದಿಲ್ಲಿಯಲ್ಲಿ ವಾಸವಾಗಿರುವ ರಿಷಿ ಪುತ್ರಿ ರಿಧಿಮಾ ಸಾಹ್ನಿಗೆ ಲಾಕ್‌ಡೌನ್ ಮಧ್ಯೆಯೂ ಮುಂಬಯಿಗೆ ತೆರಳಲು ದಿಲ್ಲಿ ಪೊಲೀಸರು ಅವಕಾಶ ಮಾಡಿಕೊಟ್ಟಿದ್ದಾರೆ. ರಿಧಿಮಾ ಜೊತೆಗೆ ಇನ್ನೂ ನಾಲ್ವರ ಪ್ರಯಾಣಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಡೆಪ್ಯುಟಿ ಪೊಲೀಸ್ ಕಮೀಷನರ್ ಆರ್.ಪಿ.ಮೀನಾ ತಿಳಿಸಿದ್ದಾರೆ.
ಪ್ರಮುಖ ಚಿತ್ರಗಳು
ಬಾಬ್ಬಿ, ಅಗ್ನಿಪಥ್, ಲೈಲಾ ಮಜ್ನು, ಪ್ರೇಮ್ ರೋಗ್, ದೋ ದೋನಿ ಚಾರ್, ಸರಗಮ್, ಚಾಂದನಿ, ಅಮರ್ ಅಕ್ಬರ್ ಆಂಥೋನಿ, ಕರ್ಝ್, ಕಪೂರ್ ಅಂಡ್ ಸನ್ಸ್, 102 ನಾಟ್ಔಟ್, ಹೆನ್ನಾ, ಬೋಲ್ ರಾಧಾ ಬೋಲ್, ನಾಗಿನ್, ಖೇಲ್ ಖೇಲ್ ಮೇ, ಹಮ್ ಕಿಸಿಸೇ ಕಮ್ ನಹೀ, ಪತಿ ಪತ್ನಿ ಔರ್ ವೋ, ಬದಲ್ತೇ ರಿಷ್ತೆ, ಸಾಗರ್, ದಾಮಿನಿ, ಡಿ-ಡೇ ಮತ್ತಿತರ ಚಿತ್ರಗಳು.
ನಾಗರಹಾವು ರಿಮೇಕ್ ಚಿತ್ರದಲ್ಲಿ ಅಭಿನಯ
ಪುಟ್ಟಣ ಕಣಗಾಲ್ ಅವರ ಕ್ಲಾಸಿಕ್ ಚಿತ್ರ ‘ನಾಗರಹಾವು’ ಹಿಂದಿ ರಿಮೇಕ್‘ ಝಹ್ರೀಲಾ ಇನ್ಸಾನ್’ ಚಿತ್ರದಲ್ಲಿ ರಿಷಿ ನಟಿಸಿದ್ದರು. ಇದೇ ಸಿನಿಮಾ ಮೂಲಕ ನೀತು ಸಿಂಗ್ ಕೂಡ ರಿಷಿಗೆ ಜೊತೆಯಾದರು. ಕನ್ನಡದಲ್ಲಿ ಬಹುದೊಡ್ಡ ಯಶಸ್ಸು ಕಂಡಿದ್ದ ನಾಗರಹಾವು ಹಿಂದಿ ಭಾಷೆಯಲ್ಲಿ ನೆಲಕಚ್ಚಿತು. ಅಲ್ಲಿಯೂ ಪುಟ್ಟಣ್ಣನವರೇ ನಿರ್ದೇಶನ ಮಾಡಿದ್ದರು. ಚಿತ್ರದುರ್ಗದಲ್ಲೇ ಶೂಟಿಂಗ್ ಮಾಡಲಾಗಿತ್ತು.
ಬಾಲ ಕಲಾವಿದನಾಗಿ ತೆರೆಗೆ: ರಿಷಿ ಅವರ ತಂದೆ ರಾಜ್ ಕಪೂರ್ ಅವರ ‘ಮೇರಾ ನಾಮ್ ಜೋಕರ್’(1970) ಚಿತ್ರದ ಮೂಲಕ ಬಾಲಕಲಾವಿದನಾಗಿ ಬೆಳ್ಳಿ ತೆರೆಗೆ ಪರಿಚಯರಾದರು. ಇದಕ್ಕೂ ಮೊದಲು ‘ಶ್ರೀ 420’ ಚಿತ್ರದ ಹಾಡೊಂದರಲ್ಲಿ ಅವರು ಕಾಣಿಸಿಕೊಂಡಿದ್ದರು. ‘ಮೇರಾ ನಾಮ್ ಜೋಕರ್’ ಚಿತ್ರದ ಅಭಿನಯಕ್ಕಾಗಿ ರಿಷಿ ಅವರಿಗೆ ಅತ್ಯುತ್ತಮ ಬಾಲ ನಟ ರಾಷ್ಟ್ರೀಯ ಪ್ರಶಸ್ತಿ ಕೂಡ ಬಂತು. 1973ರಲ್ಲಿ ತೆರೆಗೆ ಬಂದ ಬಾಬ್ಬಿ(1973) ಚಿತ್ರವು ರಿಷಿ ಕಪೂರ್ ಹಾಗೂ ನಟಿ ಡಿಂಪಲ್ ಕಪಾಡಿಯಾ ಅವರಿಗೆ ಬಹುದೊಡ್ಡ ಯಶಸ್ಸು ತಂದುಕೊಟ್ಟಿತು. 2000ವರೆಗೆ ಸುಮಾರು 91 ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಈ ಪೈಕಿ ಹಲವು ಚಿತ್ರಗಳಲ್ಲಿ ನಾಯಕ ನಟರಾಗಿ ಯಶಸ್ಸು ಕಂಡರೆ ಇನ್ನೂ ಕೆಲವು ಚಿತ್ರಗಳು ಮಲ್ಟಿ ಸ್ಟಾರರ್ ಚಿತ್ರಗಳಾಗಿವೆ. 2000ರ ಬಳಿಕ ಅವರು ಪೋಷಕ ಪಾತ್ರಗಳಲ್ಲಿ ಅಭಿನಯಿಸ ತೊಡಗಿದರು. ಅವರ ಕೊನೆಯ ಚಿತ್ರ ‘ದಿ ಬಾಡಿ’(2019).
ಪ್ಯಾಕಪ್ ಆಗೋದನ್ನೇ ಕಾಯುತ್ತಿದ್ದೆವು
ಕನ್ನಡದ ನಟ ದಿಗಂತ್ ಅವರ ಹಿಂದಿ ಚಿತ್ರ ‘ವೆಡ್ಡಿಂಗ್ ಪುಲಾವ್’ದಲ್ಲಿ ರಿಷಿ ಕಪೂರ್ ಅವರೂ ಅಭಿನಯಿಸಿದ್ದರು. ‘‘ರಿಷಿ ಕಪೂರ್ ಅವರಂಥ ಅನುಭವಿ ಖ್ಯಾತ ನಟರ ಜೊತೆ ಕೆಲಸ ಮಾಡಿದ್ದು ನನಗೆ ಒಳ್ಳೆಯ ಅನುಭವ. ಸೆಟ್‌ನಲ್ಲಿದ್ದಾಗ ತುಂಬ ಗಂಭೀರವಾಗಿರುತ್ತಿದ್ದರು. ಒಬ್ಬರೇ ಕುಳಿತುಕೊಂಡಿರುತ್ತಿದ್ದರು. ನಾವೇ ಅವರ ಬಳಿ ಹೋಗಿ ಮಾತನಾಡೋಕೆ ಭಯ ಆಗೋದು. ಆದರೆ, ಒಂದು ಸಲ ಶೂಟಿಂಗ್ ಪ್ಯಾಕಪ್ ಆಗುತ್ತಿದ್ದಂತೆಯೇ ಚೇಂಜ್ ಆಗುತ್ತಿದ್ದರು. ಎಲ್ಲರೊಂದಿಗೆ ಖುಷಿಯಿಂದ ಬೆರೆಯುತ್ತಿದ್ದರು. ಜೋಕ್ ಮಾಡಿಕೊಂಡು ಮಜಾ ಮಾಡಿಕೊಂಡು ಇರುತ್ತಿದ್ದರು. ಅವರ ಬಳಿ ಖುಷಿ ಖುಷಿಯಿಂದ ಮಾತನಾಡಬೇಕು ಎಂದು ಶೂಟಿಂಗ್ ಪ್ಯಾಕಪ್ ಆಗೋದನ್ನೇ ಕಾಯುತ್ತಿದ್ದೆವು,’’ ಎಂದು ರಿಷಿ ಕಪೂರ್ ಅವರ ಜೊತೆಗಿನ ಅನುಭವವನ್ನು ಹಂಚಿಕೊಂಡರು ನಟ ದಿಗಂತ್.
ಪ್ರಶಸ್ತಿಗಳು
‘ಬಾಬ್ಬಿ’ ಸಿನಿಮಾದ ಅಭಿನಯಕ್ಕಾಗಿ ಅತ್ಯುತ್ತಮ ನಟ ಫಿಲಂ ಫೇರ್ ಅವಾರ್ಡ್ (1974), ಫಿಲಂ ಫೇರ್ ಲೈಫ್ ಟೈಮ್ ಅಚೀವ್‌ಮೆಂಟ್ ಅವಾರ್ಡ್ (2008), ದೋ ದೋನಿ ಚಾರ್ ಚಿತ್ರದ ನಟನೆಗಾಗಿ ಫಿಲಂ ಫೇರ್ ಕ್ರಿಟಿಕ್ಸ್ ಬೆಸ್ಟ್ ಆಕ್ಟರ್ ಅವಾರ್ಡ್ (2011), ಟೈಮ್ಸ್ ಆಫ್ ಇಂಡಿಯಾ ಫಿಲ್ಮ್ ಅವಾರ್ಡ್ (2013), ಕಪೂರ್ ಅಂಡ್ ಸನ್ಸ್ ಚಿತ್ರದ ಅಭಿನಯಕ್ಕಾಗಿ ಫಿಲಂ ಫೇರ್ ಬೆಸ್ಟ್ ಸಪೋರ್ಟಿಂಗ್ ಆಕ್ಟರ್ ಅವಾರ್ಡ್ (2017) ಸೇರಿದಂತೆ ಮತ್ತಿತರ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಟ್ವಿಟರ್ ನಲ್ಲಿ ಸಕ್ರಿಯ
ರಿಷಿ ಕಪೂರ್ ಇತ್ತೀಚಿನ ದಿನಗಳಲ್ಲಿ ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದರು. ಸಮಕಾಲೀನ ಘಟನೆಗಳಿಗೆ, ವಿವಾದಗಳಿಗೆ ಟ್ವಿಟರ್ ಮೂಲಕ ಸ್ಪಂದಿಸುತ್ತಿದ್ದರು. ಕೆಲವೊಮ್ಮೆ ಅವರು ತಮ್ಮ ಟ್ವೀಟ್‌ಗಳಿಂದ ವಿವಾದವನ್ನು ಮೈಮೇಲೆಳೆದುಕೊಂಡ ಉದಾಹರಣೆಗಳಿವೆ. ಕನ್ನಡದ ಉದಯ್ ಮತ್ತು ಅನಿಲ್ ಮಾಸ್ತಿ ಚಿತ್ರದ ಶೂಟಿಂಗ್ ವೇಳೆ ಕೆರೆಯಲ್ಲಿ ಮುಳುಗಿ ಸಾವಿಗೀಡಾಗಿದ್ದರು. ಆಗ ಟ್ವೀಟ್ ಮಾಡಿದ್ದ ರಿಷಿ ಅವರು, ವಿಎಫ್ಎಕ್ಸ್‌ನಂಥ ತಂತ್ರಜ್ಞಾನ ಇರುವಾಗ ಇಂಥ ಸ್ಟಂಟ್‌ಗಳ ಶೂಟಿಂಗ್ ಬೇಕೆ ಎಂದು ಪ್ರಶ್ನಿಸಿದ್ದರು.
ಸಾಲ ತೀರಿಸಲು ಹೀರೋ ಆದರು!
‘ಮೇರಾ ನಾಮ್ ಜೋಕರ್’ ಸಿನಿಮಾ ಮಾಡಿ ಸೋತಿದ್ದ ರಾಜ್ ಕಪೂರ್ ಅವರು, ‘ಬಾಬ್ಬಿ’ ಮೂಲಕ ಗೆಲುವು ಕಂಡರು. ರಿಷಿ ಕಪೂರ್ ಅವರನ್ನು ನಟನಾಗಿ ಬೆಳ್ಳಿ ತೆರೆಗೆ ಪರಿಚಯಿಸಲು ರಾಜ್‌ಕಪೂರ್ ಬಾಬ್ಬಿ ಸಿನಿಮಾ ಮಾಡಿದರು ಎಂದು ಎಲ್ಲರೂ ತಿಳಿದಿದ್ದರು. ಆದರೆ, ವಾಸ್ತವದಲ್ಲಿ ಮೇರಾ ನಾಮ್ ಜೋಕರ್‌ಗೆ ಮಾಡಿದ್ದ ಸಾಲವನ್ನು ತೀರಿಸಲು ಬಾಬ್ಬಿ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಈ ಚಿತ್ರಕ್ಕೆ ರಾಜೇಶ್ ಖನ್ನಾ ಅವರು ಅಭಿನಯಿಸಬೇಕಿತ್ತು. ಆದರೆ, ದುಡ್ಡಿಲ್ಲದೇ ರಾಜ್‌ಕಪೂರ್ ರಿಷಿ ಅವರನ್ನೇ ಹೀರೋ ಆಗಿ ಆಯ್ಕೆ ಮಾಡಿಕೊಂಡರಂತೆ. ಈ ವಿಷಯವನ್ನು ರಿಷಿ ಅವರೇ ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಬಾಬ್ಬಿ ಚಿತ್ರದ ಬಿಡುಗಡೆ ಬಳಿಕ ನಡೆದಿದ್ದೆಲ್ಲ ಇತಿಹಾಸ. ಈ ಚಿತ್ರದ ಅಭಿನಯಕ್ಕೆ ರಿಷಿ ಅವರಿಗೆ ಫಿಲಂ ಫೇರ್ ಅವಾರ್ಡ್ ಕೂಡ ಬಂತು.
ರಿಷಿ ನಿಧನ ಸುದ್ದಿ ಕೇಳಿ ಎದೆ ಒಡೆದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ರಿಷಿ ನನ್ನ ಒಲವಿನ ಗೆಳೆಯನಾಗಿದ್ದ.
– ರಜಿನಿಕಾಂತ್ ನಟ
ರಿಷಿ ನಿಧನ ಸುದ್ದಿ ಕೇಳಿ ತುಂಬ ದುಃಖವಾಗಿದೆ. ಏನು ಹೇಳಬೇಕೆಂದು ತೋಚುತ್ತಿಲ್ಲ. ಸಿನಿಮಾರಂಗಕ್ಕೆ ತುಂಬಲಾರದ ನಷ್ಟವಾಗಿದೆ.
– ಲತಾ ಮಂಗೇಶ್ಕರ್ ಹಿರಿಯ ಗಾಯಕಿ