– ಭಾರತ ಶಾಂತಿ ಪ್ರಿಯ, ಆದರೆ ಕೆದಕಿದರೆ ಸಹಿಸಲ್ಲ
– ಚೀನಾಗೆ ಪ್ರಧಾನಿ ಮೋದಿ ಖಡಕ್ ವಾರ್ನಿಂಗ್
– ತನ್ನ ಯೋಧರ ಸಾವಿನ ಸಂಖ್ಯೆ ಮುಚ್ಚಿಡುತ್ತಿರುವ ಡ್ರ್ಯಾಗನ್
ಹೊಸದಿಲ್ಲಿ: ಲಡಾಖ್ ಗಡಿಯಲ್ಲಿ ಹುತಾತ್ಮರಾದ ಭಾರತೀಯ ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ. ಭಾರತ ಶಾಂತಿ ಪ್ರಿಯ ದೇಶ ನಿಜ. ಆದರೆ ಪ್ರಚೋದಿಸಿದರೆ ಮುಟ್ಟಿ ನೋಡಿಕೊಳ್ಳುವಂತೆ ದಿಟ್ಟ ಉತ್ತರ ನೀಡುವ ಸಾಮರ್ಥ್ಯ ನಮಗಿದೆ. ಅದು ಎಂಥದ್ದೇ ಸಂದರ್ಭವಾದರೂ ಸರಿ. ಈ ವಿಚಾರದಲ್ಲಿ ಯಾರಿಗೂ ಅನುಮಾನ ಬೇಡ…
ಇದು ಯುದ್ಧೋನ್ಮಾದಿ ಚೀನಾಗೆ ಪ್ರಧಾನಿ ನರೇಂದ್ರ ನೀಡಿರುವ ಖಡಕ್ ಎಚ್ಚರಿಕೆಯ ಸಂದೇಶ.
ಭಾರತದ ಆಯಕಟ್ಟಿನ ಪ್ರದೇಶಗಳಿಗೆ ಲಗ್ಗೆ ಇಟ್ಟು, ಪದೇಪದೆ ಕಾಲು ಕೆರೆದುಕೊಂಡು ಲಡಾಯಿಗೆ ಇಳಿಯುತ್ತಿರುವ ಚೀನಾಗೆ ತಕ್ಕ ತಿರುಗೇಟು ನೀಡಬೇಕೆಂದು ದೇಶಾದ್ಯಂತ ಜನಾಕ್ರೋಶ ತೀವ್ರಗೊಂಡಿದೆ. ಇದರ ಬೆನ್ನಲ್ಲೇ ‘ಡ್ರ್ಯಾಗನ್’ ದೇಶದ ವಿರುದ್ಧ ಮೋದಿ ಕಟು ನುಡಿಗಳಲ್ಲಿ ಚಾಟಿ ಬೀಸಿದ್ದಾರೆ. ಪ್ರತೀಕಾರದ ಸುಳಿವು ನೀಡಿದ್ದಾರೆ.
2019ರ ಫೆ.14ರಂದು 40 ಯೋಧರ ಸಾವಿಗೆ ಕಾರಣವಾಗಿದ್ದ ಪುಲ್ವಾಮಾ ದಾಳಿ ಬಳಿಕವೂ ಪ್ರಧಾನಿ ಪಾಕಿಸ್ತಾನಕ್ಕೆ ಇಂಥದ್ದೇ ಕಟು ಸಂದೇಶ ನೀಡಿದ್ದರು. ದಾಳಿ ನಡೆದು ಹನ್ನೆರಡೇ ದಿನದಲ್ಲಿ ಬಾಲಾಕೋಟ್ನ ಉಗ್ರ ಶಿಬಿರಗಳ ಮೇಲೆ ಭಾರತ ವಾಯು ದಾಳಿ ನಡೆಸಿತ್ತು. ಇದಕ್ಕೂ ಮುನ್ನ 2016ರಲ್ಲೂ ಜಮ್ಮು- ಕಾಶ್ಮೀರದ ಉರಿ ಸೇನಾ ನೆಲೆಯ ಮೇಲೆ ಉಗ್ರರ ದಾಳಿಯಲ್ಲಿ ಮೃತರಾದ 18 ಯೋಧರ ಸಾವಿಗೆ ಭಾರತ ಸರ್ಜಿಕಲ್ ಸ್ಟ್ರೈಕ್ ಮೂಲಕ ಪ್ರತೀಕಾರ ತೀರಿಸಿಕೊಂಡಿತ್ತು. ಆಗಲೂ ದಾಳಿ ಬಳಿಕ ಭಾರತದಿಂದ ಇಂಥದ್ದೇ ಎಚ್ಚರಿಕೆ ರವಾನೆಯಾಗಿದ್ದನ್ನು ಸ್ಮರಿಸಬಹುದು.
ಚೀನಾದ ಗಡಿ ಉಪಟಳ ಹೆಚ್ಚುತ್ತಿದೆ. ಜತೆಗೆ ನೆರೆಯ ನೇಪಾಳವನ್ನೂ ಚೀನಾ ಭಾರತದ ಮೇಲೆ ಛೂ ಬಿಟ್ಟು ಗಡಿ ತಂಟೆ ಎಬ್ಬಿಸಿದೆ. ಜತೆಗೆ ಬಾಯಿ ಮಾತಿನಲ್ಲಿಶಾಂತಿಯ ಮಂತ್ರ ಪಠಿಸುತ್ತಲೇ ಚೀನಾ ಮಗ್ಗುಲಮುಳ್ಳಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ‘ಡ್ರ್ಯಾಗನ್ ದರ್ಪ’ಕ್ಕೆ ಕಡಿವಾಣ ಹಾಕುವುದು ಭಾರತಕ್ಕೆ ಅನಿವಾರ್ಯವಾಗಿದೆ.
ಹುತಾತ್ಮರಿಗೆ ನಮನ
ಭಾರತ-ಚೀನಾ ಯೋಧರ ಸಂಘರ್ಷದ ಬಗ್ಗೆ ಬುಧವಾರ ಮುಖ್ಯಮಂತ್ರಿಗಳ ಜತೆಗಿನ ಸಂವಾದದ ವೇಳೆ ಮೊದಲ ಬಾರಿ ಪ್ರತಿಕ್ರಿಯಿಸಿದ ಪ್ರಧಾನಿ, ಮೌನಾಚರಣೆ ಮೂಲಕ ಭಾರತದ 20 ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಕೋರಿದರು. ಲಡಾಖ್ನಲ್ಲಿ ವೀರಮರಣವನ್ನಪ್ಪಿದ ಸೈನಿಕರ ಶೌರ್ಯ ಅಪ್ರತಿಮವಾದದ್ದು ಎಂದು ಬಣ್ಣಿಸಿದರು.
ಪೂರ್ವ ನಿಯೋಜಿತ ಸಂಘರ್ಷ
ಗಲ್ವಾನ್ನಲ್ಲಿ ಸೈನಿಕರ ಸಂಘರ್ಷವು ಚೀನಾ ಯೋಧರ ಪೂರ್ವ ನಿಯೋಜಿತ ಕೃತ್ಯ ಎಂದು ಭಾರತ ಹೇಳಿದೆ. ಪರಿಸ್ಥಿತಿ ತಿಳಿಗೊಳಿಸಲು ಬುಧವಾರ ಭಾರತ-ಚೀನಾ ವಿದೇಶಾಂಗ ಸಚಿವರ ನಡುವೆ ದೂರವಾಣಿ ಮಾತುಕತೆ ನಡೆದಿದ್ದು, ಈ ವೇಳೆ ಸಚಿವ ಎಸ್ ಜೈಶಂಕರ್ ಚೀನಾ ನಡೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಸಂಘರ್ಷದ ಹಾದಿ ಬೇಡವೆಂದು ಚೀನಾ ವಿದೇಶಾಂಗ ಸಚಿವ ವಾಂಗ್ ಇ ಮನವಿ ಮಾಡಿದ್ದಾರೆ.
ಟೆಂಟ್ ವಿಚಾರವೇ ಮೂಲ
ಭಾರತ-ಚೀನಾ ಯೋಧರ ಸಂಘರ್ಷಕ್ಕೆ ಕಾರಣ ಬಯಲಾಗಿದೆ. ಭಾರತದ ಗಡಿಭಾಗದಲ್ಲಿ ಚೀನಾ ಯೋಧರು ನಿರ್ಮಿಸಿದ್ದ ಟೆಂಟ್ ಅನ್ನು ತೆಗೆಯುವ ಸಂಬಂಧ ಉಂಟಾದ ಮಾತಿನ ಚಕಮಕಿ ತೀವ್ರ ಸಂಘರ್ಷದ ಮಟ್ಟಕ್ಕೆ ಬೆಳೆಯಿತು. ಉಭಯ ದೇಶಗಳ ನಡುವೆ ಮಿಲಿಟರಿ ಅಧಿಕಾರಿಗಳ ಮಟ್ಟದ ಮಾತುಕತೆ ವೇಳೆ ಚೀನಾ ಇದನ್ನು ತೆರವುಗೊಳಿಸಬೇಕೆಂದು ಒಪ್ಪಂದವಾಗಿತ್ತು. ಆದರೆ, ಚೀನಾ ಮಾತು ತಪ್ಪಿದೆ.
ಚೀನಾದ ಸಾವು 35?
ಘರ್ಷಣೆಯಲ್ಲಿ ಬಲಿಯಾದ ಚೀನಾದ ಅಧಿಕೃತ ಸಂಖ್ಯೆ ಬಗ್ಗೆ ಅಲ್ಲಿನ ಸರಕಾರ ಇದುವರೆಗೂ ಬಾಯಿ ಬಿಟ್ಟಿಲ್ಲ. ಆದರೆ, ಚೀನಾದ 35 ಯೋಧರು ಬಲಿಯಾಗಿದ್ದಾರೆ ಎಂದು ಅಮೆರಿಕದ ಗುಪ್ತಚರ ಮೂಲಗಳು ತಿಳಿಸಿವೆ. 43 ಮಂದಿ ಮೃತಪಟ್ಟಿದ್ದಾರೆ ಎಂದೂ ಹೇಳಲಾಗುತ್ತಿದೆ.
ಜೂನ್ 19ಕ್ಕೆ ಸರ್ವಪಕ್ಷ ಸಭೆ
ಗಲ್ವಾನ್ ಕಣಿವೆ ಪ್ರಕರಣ ಹಾಗೂ ಚೀನಾದೊಂದಿಗೆ ಹದಗೆಟ್ಟ ಸಂಬಂಧದ ಹಿನ್ನೆಲೆಯಲ್ಲಿ ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಿ, ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ಪಡೆಯಲು ಪ್ರಧಾನಿ ಮೋದಿ ಮುಂದಾಗಿದ್ದಾರೆ. ಇದಕ್ಕಾಗಿ ಜೂ.19ರಂದು ಸರ್ವಪಕ್ಷಗಳ ಸಭೆ ಕರೆಯಲಾಗಿದೆ. ಅಂದು ಸಂಜೆ 5 ಗಂಟೆಗೆ ದಿಲ್ಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ನಾನಾ ಪಕ್ಷಗಳ ಅಧ್ಯಕ್ಷರು ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜೂನ್ 21ರಂದು ಪ್ರಧಾನಿ ಮೋದಿಯವರು ಯೋಗ ದಿನದ ಅಂಗವಾಗಿ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.