ನಿರ್ಬಂಧ ಮೊದಲ ಹೆಜ್ಜೆ – ಇದು ಸ್ವಾವಲಂಬನೆಯ ಪಾಠವಾಗಲಿ

ಚೀನಾ ಮೂಲದ 59 ಆ್ಯಪ್‌ಗಳನ್ನು ಭಾರತ ಸರಕಾರ ನಿರ್ಬಂಧಿಸಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೂ ಚೀನಾ ಮೂಲದ ವೀಬೋ ಸಾಮಾಜಿಕ ಜಾಲತಾಣದಿಂದ ಹೊರಬಂದಿದ್ದು, ಅದರಲ್ಲಿದ್ದ ತಮ್ಮ ಖಾತೆಯನ್ನು ಅಳಿಸಿಹಾಕಿದ್ದಾರೆ. ದೇಶದ ಭದ್ರತೆ, ಸಾರ್ವಭೌಮತೆ, ಸಂಸ್ಕೃತಿಗಳಿಗೆ ಹಾನಿಕಾರಕವಾದ ಅಂಶಗಳನ್ನು ಹೊಂದಿರುವುದರಿಂದ ಈ ಆ್ಯಪ್‌ಗಳನ್ನು ನಿಷೇಧಿಸುತ್ತಿರುವುದಾಗಿ ಸರಕಾರ ತಿಳಿಸಿದೆ. ಈ 59 ಆ್ಯಪ್‌ಗಳಲ್ಲಿ ಟಿಕ್‌ಟಾಕ್‌ನಂಥ ಜನಪ್ರಿಯ ವಿಡಿಯೋ ಬ್ಲಾಗಿಂಗ್‌ ಆ್ಯಪ್‌ಗಳೂ ಇದ್ದು, ಇದನ್ನು ದೇಶದಲ್ಲಿ 20 ಲಕ್ಷಕ್ಕಿಂತಲೂ ಅಧಿಕ ಮಂದಿ ಡೌನ್‌ಲೋಡ್‌ ಮಾಡಿಕೊಂಡು ಬಳಸುತ್ತಿದ್ದರು. ಕಳೆದ ತಿಂಗಳು ಭಾರತದ ಗಡಿಪ್ರದೇಶದಲ್ಲಿ ತಂಟೆ ತೆಗೆದು ನಮ್ಮ 20 ಯೋಧರನ್ನು ಕೊಂದ ಚೀನಾಕ್ಕೆ ಬುದ್ಧಿ ಕಲಿಸಬೇಕು ಎಂಬ ಕೂಗು ದೇಶಾದ್ಯಂತ ವ್ಯಾಪಕವಾಗಿತ್ತು. ತಂತ್ರಜ್ಞಾನ ವಲಯದಲ್ಲಿ ಇಂಥದೊಂದು ಎದಿರೇಟು ನೀಡುವ ಮೂಲಕ ಭಾರತ ಚೀನಾಕ್ಕೆ ಎಚ್ಚರಿಕೆಯ ಸಂದೇಶವನ್ನೂ ನೀಡಿದೆ; ಜೊತೆಗೆ ಇದು ನಮ್ಮ ಪ್ರಜೆಗಳಲ್ಲಿ ಸ್ವಾವಲಂಬನೆ, ಆತ್ಮಾಭಿಮಾನಗಳ ಪ್ರಜ್ಞೆಯನ್ನೂ ಮೂಡಿಸುವ ಕ್ರಮವಾಗಿದೆ.
ಚೀನಾ ಹಾಗೂ ಭಾರತಗಳೆರಡೂ ಏಕಕಾಲದಲ್ಲಿ ಸ್ವತಂತ್ರಗೊಂಡ ದೇಶಗಳು. ಆಗ ಎರಡೂ ದೇಶಗಳ ಜಿಡಿಪಿ ಒಂದೇ ಇತ್ತು. ಈಗ ಅದರ ಜಿಡಿಪಿ ಭಾರತದ ನಾಲ್ಕು ಪಟ್ಟು ಆಗಿದೆ. ಅಗ್ಗದ ಮಾಲುಗಳನ್ನು ಬೃಹತ್‌ ಪ್ರಮಾಣದಲ್ಲಿ ಉತ್ಪಾದಿಸಿ ಎಲ್ಲ ದೇಶಗಳಿಗೆ ತಳ್ಳಿ ತನ್ನ ಶ್ರೀಮಂತಿಕೆಯನ್ನು ಬೆಳೆಸಿಕೊಂಡಿದೆ. ತಂತ್ರಜ್ಞಾನ ವಲಯದಲ್ಲಿ ಸಾಕಷ್ಟು ಸಾಧನೆ ಮಾಡಿದೆ. ಮಾನವ ಹಕ್ಕುಗಳಿಗೆ ಯಾವುದೇ ಬೆಲೆ ಕೊಡದ ಚೀನಾದ ಉತ್ಪಾದನೆ ಹಾಗೂ ವ್ಯಾಪಾರ ವಿಧಾನ ಅತ್ಯಂತ ಕ್ರೂರವಾಗಿದೆ. ಜೊತೆಗೆ ನಮ್ಮ ನೂರಾರು ಸೈನಿಕರ ಮಾರಣ ಹೋಮಕ್ಕೂ ಕಾರಣವಾಗಿರುವ ಚೀನಾದ ಜೊತೆ ನಾವು ವಹಿವಾಟು ಮುಂದುವರಿಸಿ ಅದರ ಶ್ರೀಮಂತಿಕೆಯನ್ನು ಹೆಚ್ಚಿಸುವುದು ನೈತಿಕವಾಗಿ ಸಮರ್ಥನೀಯವಲ್ಲ. ಜೊತೆಗೆ ಇದು ನಮ್ಮ ದೇಸಿ ಉತ್ಪಾದಕತೆಯನ್ನು ಕೂಡ ಕುಂಠಿತಗೊಳಿಸುತ್ತಿದೆ. ಪ್ರಸ್ತುತ ಚೀನಾದ ಅಗ್ಗದ ದರದ ಉತ್ಪನ್ನಗಳು ನಮಗೆ ಅರಿವೇ ಇಲ್ಲದೆ ನಮ್ಮ ನಿತ್ಯಜೀವನದ ಭಾಗವಾಗಿಬಿಟ್ಟಿವೆ. ಇದರಿಂದ ಹಂತಹಂತವಾಗಿ ಹಾಗೂ ಸಮಗ್ರವಾಗಿ ಹೊರಬರದ ಹೊರತು ನಮ್ಮ ಸ್ವಾವಲಂಬನೆಯ ಕನಸು ನನಸಾಗದು.
ಕಳೆದ ಎರಡು ದಶಕಗಳಿಂದ ನಾವು ನಮ್ಮ ತಂತ್ರಜ್ಞಾನ ವಲಯದ ಬೆಳವಣಿಗೆಯನ್ನು ಸೇವೆ ಒದಗಿಸುವುದಕ್ಕಷ್ಟೇ ಸೀಮಿತಗೊಳಿಸಿಕೊಂಡಿದ್ದೇವೆ. ನಮ್ಮದೇ ಆದ ಸಿದ್ಧವಸ್ತುಗಳ ಉತ್ಪಾದನೆ, ತಂತ್ರಜ್ಞಾನ ಬಿಡಿಭಾಗಗಳ ಉತ್ಪಾದನೆ, ಇಂಟರ್‌ನೆಟ್‌- ಮನರಂಜನೆ- ಸಾಮಾಜಿಕ ಜಾಲತಾಣ ವೇದಿಕೆಗಳ ಅಭಿವೃದ್ಧಿಪಡಿಸುವಿಕೆ ಸಾಧ್ಯವಾದಾಗ ಸ್ವಾವಲಂಬನೆ ಸಾಧ್ಯ. ವೈದ್ಯಕೀಯ ವಲಯದಲ್ಲಿ ನಮ್ಮ ಪ್ರತಿಭೆಗಳು ಜಾಗತಿಕವಾಗಿ ಬಲು ಎತ್ತರವನ್ನು ಸಾಧಿಸಿದಂತೆ ಇತರ ಕ್ಷೇತ್ರಗಳಲ್ಲೂ ಆಗಬೇಕು. ದೇಶದ ಶೇ.60ರಷ್ಟು ಮಂದಿ ಯುವಜನರನ್ನು ಹೊಂದಿರುವ ಭಾರತಕ್ಕೆ ಇದು ಕಷ್ಟವಲ್ಲ.
ಒಂದು ರೀತಿಯಲ್ಲಿ ಚೀನಾ ಈ ವಿಷಯದಲ್ಲಿ ನಮಗೆ ಮಾದರಿಯೇ ಆಗಿದೆ. ಜಾಗತಿಕ ದೈತ್ಯ ಕಂಪನಿಗಳಾದ ಗೂಗಲ್‌, ಮೈಕ್ರೋಸಾಫ್ಟ್‌, ಫೇಸ್‌ಬುಕ್‌ ಮುಂತಾದವು ತನ್ನ ನೆಲದಲ್ಲಿ ನೆಲೆಯೂರಲು ಚೀನಾ ಇದುವರೆಗೂ ಬಿಟ್ಟಿಲ್ಲ. ಬದಲಾಗಿ ತನ್ನದೇ ಆದ ವೀಬೋ, ಯುಸಿ ಬ್ರೌಸರ್‌, ವೀಚಾಟ್‌, ಬೈದು ಮುಂತಾದವುಗಳನ್ನು ಅಭಿವೃದ್ಧಿಪಡಿಸಿ ಬಳಸುತ್ತಿದೆ. ಹಾರ್ಡ್‌ವೇರ್‌ ಹಾಗೂ ಸಾಫ್ಟ್‌ವೇರ್‌ ಎರಡರಲ್ಲೂ ಸ್ವಾವಲಂಬನೆ ಸಾಧಿಸಿದೆ. ನಾವು ಕೂಡ ಈ ವಲಯದಲ್ಲಿ ಇತರ ದೇಶಗಳಿಗೆ ಸೇವಾದಾತರಾಗಿರುವುದರ ಜೊತೆಗೇ, ಕಂಟೆಂಟ್‌ ಸೃಷ್ಟಿಸಿ ಒದಗಿಸುವ ದೇಸಿ ತಂತ್ರಜ್ಞಾನಗಳನ್ನೂ ಅಭಿವೃದ್ಧಿಪಡಿಸಿ ದೊಡ್ಡ ಮಟ್ಟದಲ್ಲಿ ಬಳಸಲು ಆರಂಭಿಸಬೇಕು. ಇದು ಚೀನಾದ ವಿರುದ್ಧ ಮಾತ್ರ ನಾವು ತೆಗೆದುಕೊಳ್ಳುವ ಉಪಕ್ರಮ ಆಗಿರದೆ, ಯಾವುದೇ ಮುಂದುವರಿದ ದೇಶವನ್ನೂ ಅವಲಂಬಿಸದ ಆತ್ಮಾಭಿಮಾನ ಮೆರೆಯುವ ಕ್ರಮವಾಗಿದ್ದಾಗ ಸ್ವಾವಲಂಬನೆ ಅರ್ಥಪೂರ್ಣ ಆಗುತ್ತದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top