ಕರುನಾಡ ಕಟ್ಟೋಣ… ಜೊತೆಯಾಗಿ ಮುನ್ನಡೆಯೋಣ ಬನ್ನಿ – ಕೊರೊನೋತ್ತರ ಕರ್ನಾಟಕದ ಪುನಃಶ್ಚೇತನಕ್ಕೆ ವಿಕ ಅಭಿಯಾನ -ಸ್ವಾವಲಂಬೀ ಕರ್ನಾಟಕ ನಿರ್ಮಾಣಕ್ಕೆ ಒಂದು ಹೆಜ್ಜೆ

ಕೊರೊನಾ ಇಡೀ ಜಗತ್ತನ್ನೇ ಕಾಡಿದ ಸಂಕಷ್ಟ. ಇದರ ಹೊಡೆತಕ್ಕೆ ವಿಶ್ವದ ಬಲಾಢ್ಯ ದೇಶಗಳೇ ನಲುಗಿವೆ. ಆರ್ಥಿಕ ಪ್ರಬಲ ರಾಷ್ಟ್ರಗಳೇ ಭವಿಷ್ಯದ ಆತಂಕಕ್ಕೆ ಸಿಲುಕಿವೆ. ಅದೇ ವೇಳೆ ಭಾರತ ಕೊರೊನಾ ಸವಾಲನ್ನು ಎದುರಿಸಿದ ರೀತಿಗೆ ಜಗತ್ತಿನ ಮೆಚ್ಚುಗೆ ಸಿಕ್ಕಿದೆ. ಭಾರತದೊಳಗಿನ ರಾಜ್ಯಗಳಿಗೆ ಸಂಬಂಧಿಸಿ ಹೇಳುವುದಾದರೆ ಕರ್ನಾಟಕವು ಕೊರೊನಾ ವಿರುದ್ಧ ಯಶಸ್ವಿಯಾಗಿ ಸೆಣಸಿದ ರಾಜ್ಯಗಳ ಪೈಕಿ ಎರಡನೇ ಸ್ಥಾನದಲ್ಲಿದೆ.
ಕೊರೊನಾವನ್ನು ನಾವು ಸಂಘಟಿತವಾಗಿ, ಸಮರ್ಥವಾಗಿ ಎದುರಿಸಿದ್ದನ್ನು ಎಲ್ಲರೂ ಮನಗಾಣಬೇಕಿರುವ ಸತ್ಯ. ಈ ವಿಚಾರದಲ್ಲಿ ದೇಶ ಮತ್ತು ರಾಜ್ಯದ ಯಶಸ್ವಿ ನಾಯಕತ್ವಕ್ಕೆ, ಕೇಂದ್ರ-ರಾಜ್ಯಗಳ ನಾಯಕತ್ವ ಬೆಂಬಲಿಸಿ ಕೊರೊನಾ ವ್ಯೂಹ ಭೇದಿಸಲು ಸಹಕರಿಸಿದ ಕೋಟಿ ಕೋಟಿ ದೇಶವಾಸಿಗಳಿಗೆ ಶಹಬ್ಬಾಸ್‌ ಎನ್ನಲೇಬೇಕಿದೆ. ಇದು ಕೊರೊನಾ ಕಾಲದ ಸ್ಥಿತಿಗತಿ.
ಕೊರೊನಾ ನಂತರ ಜನಜೀವವನ್ನು ನಾವು ಹೇಗೆ ಮರಳಿ ಹಳಿಗೆ ತರುತ್ತೇವೆ ಎಂಬುದು ಅದಕ್ಕಿಂತಲೂ ಮುಖ್ಯ ಪ್ರಶ್ನೆ. ಮೂರೂವರೆ ತಿಂಗಳ ಕಾಲ ಸ್ತಬ್ಧಗೊಂಡ ಸಾಮಾಜಿಕ, ಆರ್ಥಿಕ ವ್ಯವಸ್ಥೆಯನ್ನು ಹೇಗೆ ಮತ್ತು ಎಷ್ಟು ತ್ವರಿತವಾಗಿ ನಾವು ಮರು ರೂಪಿಸುತ್ತೇವೆಂಬುದನ್ನು ಈಗ ಗಂಭೀರ ಸವಾಲಾಗಿ ನಾವು ಸ್ವೀಕರಿಸಬೇಕಿದೆ. ಕೊರೊನೋತ್ತರ ಬದುಕನ್ನು ಮರು ರೂಪಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಸ್ವಾವಲಂಬನೆ(ಆತ್ಮ ನಿರ್ಭರತೆ) ಮಾರ್ಗದ ಪ್ರಸ್ತಾವನೆ ಮುಂದಿಟ್ಟಿದ್ದಾರೆ. ಸಮಾಲೋಚನೆ, ಸಹಕಾರ, ಸಬಲೀಕರಣ ಈ ಮೂರು ಸ್ವಾವಲಂಬನೆಯ ಮೂಲಾಧಾರಗಳು. ಕೃಷಿಯಿಂದ ಹಿಡಿದು ಕೈಗಾರಿಕೆಯವರೆಗೆ ಎಲ್ಲ ಕ್ಷೇತ್ರಗಳನ್ನು ಚರ್ಚೆ ಮತ್ತು ಸಮರ್ಥ ನೇತೃತ್ವದ ಮೂಲಕವೇ ಮರುರಚನೆ ಮಾಡಬೇಕಿದೆ. ಆಯಾ ಕ್ಷೇತ್ರದ ಪರಿಣಿತರು ಹಾಗೂ ಸಮಾಜದ ನಾನಾ ಸ್ತರದ ಜನರನ್ನೊಳಗೊಂಡು ಚಿಂತನೆ, ಸಮಾಲೋಚನೆಗಳಿಗೆ ಚಾಲನೆ ಕೊಡಬೇಕಿದೆ.
ಕನ್ನಡದ ಅತಿಹೆಚ್ಚು ಓದುಗರನ್ನು ಹೊಂದಿರುವ ‘ವಿಜಯ ಕರ್ನಾಟಕ’ ಪತ್ರಿಕೆಯು ‘ಕರುನಾಡ ಕಟ್ಟೋಣ ಬನ್ನಿ’ (ರೀ ಬಿಲ್ಡಿಂಗ್‌ ಕರ್ನಾಟಕ) ಎಂಬ ಘೋಷವಾಕ್ಯದಡಿಯಲ್ಲಿ ಜನರಿಂದ ಜನರಿಗಾಗಿ ಕರ್ನಾಟಕ ಪುನರುತ್ಥಾನದ ಅಭಿಯಾನ ಶುರುಮಾಡುತ್ತಿದೆ. ಇದು ಮುಂಚೂಣಿ ಪತ್ರಿಕೆಯಾಗಿ ನಮ್ಮ ಹೊಣೆಗಾರಿಕೆ ಮತ್ತು ಕರ್ತವ್ಯ ಎಂದು ಭಾವಿಸಿದ್ದೇವೆ. ಕೃಷಿ, ಕೈಗಾರಿಕೆ, ಉದ್ಯೋಗ, ಆರ್ಥಿಕತೆ, ಆರೋಗ್ಯ, ಶಿಕ್ಷ ಣ, ಸಂಸ್ಕೃತಿ, ಪ್ರವಾಸೋದ್ಯಮ ಹೀಗೆ ಜನಜೀವನದ ಎಲ್ಲ ಸ್ತರಗಳನ್ನು ಒಳಗೊಂಡು ಚರ್ಚೆ ಮತ್ತು ಆ ಮೂಲಕ ಕಾರ್ಯಸಾಧ್ಯ ನೀಲನಕ್ಷೆಯ ಪ್ರಸ್ತಾವನೆ ತಯಾರಿಸಿ ಸರಕಾರಕ್ಕೆ ಸಾಥ್‌ ನೀಡುವ ಪ್ರಕ್ರಿಯೆ ಇದಾಗಿರಲಿದೆ.
ಈ ಅಭಿಯಾನದಲ್ಲಿ ನಾಗರಿಕರು, ಸಮುದಾಯಗಳ ಪ್ರಮುಖರು, ಸಾಮಾಜಿಕ-ರಾಜಕೀಯ ಕಾರ್ಯಕರ್ತರು, ನಾಯಕರು, ಸರಕಾರದ ನಾನಾ ಸ್ತರಗಳಲ್ಲಿ ಹೊಣೆ ಹೊತ್ತವರು ಸಕ್ರಿಯವಾಗಿ ಭಾಗವಹಿಸಬೇಕೆಂಬುದು ನಮ್ಮ ವಿನಮ್ರ ಪ್ರಾರ್ಥನೆ.
ಸವಾಲು, ಸಂಕಷ್ಟಗಳು ಬರುವುದು ನಮ್ಮ ಶಕ್ತಿ ಸಾಮರ್ಥ್ಯ‌ ಹಾಗೂ ಗಟ್ಟಿತನ ಪರೀಕ್ಷಿಸಲು ಎಂಬುದು ಪಾಸಿಟಿವ್‌ ಆಲೋಚನೆಯ ರೀತಿ. ಈ ಸತ್ವ ಪರೀಕ್ಷೆಯಲ್ಲಿ ನಾವು ಪಾಸಾಗೋಣ.
ಕರುನಾಡ ಕಟ್ಟೋಣ ಬನ್ನಿ
ಜೊತೆಯಾಗಿ ಸಾಗೋಣ ಬನ್ನಿ

ಜೂ.2ರಂದು ಲೋಗೊ ಬಿಡುಗಡೆ
ಕೊರೊನೋತ್ತರ ಕರ್ನಾಟಕ – ಕರುನಾಡ ಕಟ್ಟೋಣ ಬನ್ನಿ ಈ ಅಭಿಯಾನದ ಲೋಗೊ ಬಿಡುಗಡೆ ಜೂನ್‌ 2ರಂದು ನಡೆಯಲಿದೆ. ಈ ಸಂದರ್ಭದಲ್ಲಿ ಪ್ರವಾಸೋದ್ಯಮಕ್ಕೆ ಮರು ಉತ್ತೇಜನ ಹೇಗೆ ಎಂಬ ಕುರಿತು ಚಿಂತನ-ಮಂಥನವನ್ನೂ ಆಯೋಜಿಸಲಾಗಿದೆ. ರಾಜ್ಯ ಸರಕಾರದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವರಾದ ಸಿ ಟಿ ರವಿ ಅವರು ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ನಾನಾ ವಲಯಗಳ ಪ್ರಮುಖರು ಭಾಗವಹಿಸಲಿದ್ದಾರೆ. ಆರೋಗ್ಯ, ಶಿಕ್ಷಣ, ಕೈಗಾರಿಕೆ, ಕೃಷಿ, ಉದ್ಯೋಗ ಇತ್ಯಾದಿ ಸಂಗತಿಗಳ ಕುರಿತ ಚಿಂತನ ಸರಣಿ ಮುಂದುವರಿಯಲಿದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top