ಪಿತೃವಾಕ್ಯ ಪರಿಪಾಲನೆಗೆ ವನಾಭಿಗಮನ ಮಾಡಿದ ಶ್ರೀರಾಮ ಹದಿನಾಲ್ಕು ವರ್ಷದ ಬಳಿಕ ಅಯೋಧ್ಯೆಗೆ ಮರಳಿದ. ರಾಮನಿಗೆ ಪಟ್ಟಾಭಿಷೇಕವೂ ಆಯಿತು. ಈ ಪವಿತ್ರ ಕ್ಷಣಗಳನ್ನು ಕಣ್ತುಂಬಿಸಿಕೊಳ್ಳುತ್ತ ಇಕ್ಷ್ವಾಕು ವಂಶದ ರಾಜ ಪರಿವಾರದ ಜತೆಜತೆಗೇ ಓಡಾಡಿಕೊಂಡಿದ್ದವ ಅಂಜನಾದೇವಿಯ ಗರ್ಭ ಸಂಜಾತ ಆಂಜನೇಯ. ಈ ಆಂಜನೇಯ ಶ್ರೀ ರಾಮನ ಕಿಂಕರ. ಜತೆಗೆ ಕನ್ನಡದ ನೆಲದ ಮಹಾಮಹಿಮ. ಈಗ ಆಧುನಿಕ ಭಾರತದಲ್ಲಿ ಶ್ರೀರಾಮನ ಜನ್ಮಭೂಮಿಯಲ್ಲಿಯೇ ಭುವನ ಮನೋಹರವಾದ ರಾಮಮಂದಿರ ನಿರ್ಮಾಣಗೊಳ್ಳಲಿದೆ. ಮಂದಿರಕ್ಕಾಗಿ ನಡೆದ ಹೋರಾಟದಲ್ಲಿಯೂ ಕರ್ನಾಟಕದ ಪವಿತ್ರ ಭೂಮಿಯ ಕೊಡುಗೆ ಅನನ್ಯವಾದುದು. ಯಜ್ಞಸದೃಶವಾದ ಈ ಕಾರ್ಯದಲ್ಲಿ ಹನುಮಂತನಂತೆ ಅನೇಕ ರಾಮಭಕ್ತರು ತಮ್ಮನ್ನು ಅರ್ಪಿಸಿಕೊಂಡಿದ್ದಾರೆ.
ರಾಮಮಂದಿರ ಚಳವಳಿಗೆ ಕರ್ನಾಟಕ ಸೂರ್ತಿಯ ಪ್ರಮುಖ ಕೇಂದ್ರವಾಗಿತ್ತು. ಅನೇಕ ಯತಿಗಳು, ಧಾರ್ಮಿಕ ಮುಖಂಡರು ರಾಮಮಂದಿರ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ಹಿಂದೂ ಸಂಘಟನೆಗಳ ಪ್ರತಿನಿಧಿಗಳು ಮುಂಚೂಣಿಯಲ್ಲಿ ನಿಂತರೆ ಮಠ, ದೇವಸ್ಥಾನಗಳಿಂದ ಇದಕ್ಕೆ ಬೇಕಾದ ಶಕ್ತಿ ತುಂಬಲಾಯಿತು. ಇದರಿಂದ ಪ್ರೇರಣೆ ಪಡೆದ ಲಕ್ಷಾಂತರ ಕಾರ್ಯಕರ್ತರು ಪ್ರಾಣದ ಹಂಗು ತೊರೆದು ರಾಮಸೇವೆಯಲ್ಲಿ ಭಾಗಿಯಾಗಿದ್ದರು. ಈ ದೃಷ್ಟಿಯಿಂದ ವಿಶ್ವಾಮಿತ್ರ ಋುಷಿ ಪ್ರಣೀತವಾದ ‘ಕೌಸಲ್ಯಾ ಸುಪ್ರಜಾ ರಾಮ…’ ಘೋಷ ರಾಮಮಂದಿರ ಹೋರಾಟದುದ್ದಕ್ಕೂ ರಾಜ್ಯದಲ್ಲಿ ಅನುರಣಿಸಿದೆ.
ಧರ್ಮ ಸಂಸತ್
‘‘1984ರಲ್ಲಿ ದಿಲ್ಲಿಯ ವಿಜ್ಞಾನ ಭವನದಲ್ಲಿ ನಡೆದ ಮೊದಲ ಧರ್ಮ ಸಂಸತ್‌ನಲ್ಲಿ ರಾಮಜನ್ಮ ಭೂಮಿಯ ವಿಚಾರ ಪ್ರಥಮ ಬಾರಿಗೆ ಪ್ರಸ್ತಾಪವಾಯಿತು. ಅದಾದ ಬಳಿಕ 1985ರ ಅಕ್ಟೋಬರ್‌ನಲ್ಲಿ ಉಡುಪಿಯಲ್ಲಿ ಸಂಪನ್ನಗೊಂಡ ಎರಡನೇ ಧರ್ಮ ಸಂಸತ್ ನಿರ್ಣಾಯಕವೆನಿಸಿತು. ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಕರ್ಣಧಾರತ್ವದಲ್ಲಿ ನಡೆದ ಈ ಸಮಾವೇಶದಲ್ಲಿ ಕೇಸರಿಯ ರಂಗು ರಾರಾಜಿಸಿತ್ತು. ‘ಮುಂದಿನ ಶಿವರಾತ್ರಿಯೊಳಗೆ ಮಂದಿರದ ಬಾಗಿಲು ತೆರೆಯಬೇಕು. ಇಲ್ಲದಿದ್ದರೆ ಉಗ್ರ ಹೋರಾಟ’ ಎಂಬ ಚರಿತ್ರಾರ್ಹ ನಿರ್ಣಯ ಕೈಗೊಳ್ಳಲಾಯಿತು. ಇದರ ಫಲಶ್ರುತಿಯಾಗಿ ರಾಜೀವ್ ಗಾಂಧಿ ನೇತೃತ್ವದ ಅಂದಿನ ಕೇಂದ್ರ ಸರಕಾರ ಮಂದಿರದ ಬಾಗಿಲು ತೆರೆದು ಹಿಂದೂಗಳ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿತು. ಈ ಮೂಲಕ ಮಂದಿರದ ಬೀಗ ತೆರೆಯುವುದರಲ್ಲಿ ಕರ್ನಾಟಕದ ಪುಣ್ಯ ಭೂಮಿಯಲ್ಲಿ ನಡೆದ ಹೋರಾಟ ಮಹತ್ವದ್ದೆನಿಸಿತು,’’ ಎಂದು ವಿಶ್ವ ಹಿಂದೂ ಪರಿಷತ್ ಪ್ರಮುಖ ಕೇಶವ ಹೆಗಡೆ ನೆನಪಿಸಿಕೊಳ್ಳುತ್ತಾರೆ.
ಅಷ್ಟ ರಥಗಳು
1988ರಲ್ಲಿ ಪ್ರಯಾಗದಲ್ಲಿ ನಡೆದ ಕುಂಭಮೇಳದಲ್ಲಿ ಕೈಗೊಂಡ ನಿರ್ಣಯದ ಅನುಸಾರ ಮಂದಿರ ನಿರ್ಮಾಣಕ್ಕೆ ದೇಶಾದ್ಯಂತ ಇಟ್ಟಿಗೆ ಸಂಗ್ರಹ ಪ್ರಾರಂಭಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯದಲ್ಲಿ 10,500 ಇಟ್ಟಿಗೆ ಸಂಗ್ರಹಿಸಲಾಯಿತು. ‘ಜೈ ಶ್ರೀರಾಮ್’ ಎಂದು ಬರೆಯಲಾಗಿದ್ದ ಈ ಇಟ್ಟಿಗೆಗಳನ್ನು ಪೂಜಿಸಲು ಹಳ್ಳಿಹಳ್ಳಿಗೆ ಕೊಂಡೊಯ್ಯಲಾಯಿತು. ಶೃಂಗೇರಿ ಶಾರದಾ ಪೀಠ, ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ, ಆದಿಚುಂಚನಗಿರಿಯ ಕಾಲಭೈರವ, ಶಿರಸಿಯ ಮಾರಿಕಾಂಬಾ, ಶ್ರವಣಬೆಳಗೋಳದ ಬಾಹುಬಲಿ ಸೇರಿದಂತೆ 8 ರಥಗಳನ್ನು ಸಿದ್ಧಪಡಿಸಲಾಯಿತು. ಶ್ರೀರಾಮನ ಇಟ್ಟಿಗೆ ಹೊತ್ತೊಯ್ದ ಈ ರಥಗಳು ರಾಜ್ಯದ ಮೂಲೆ ಮೂಲೆಗೂ ಸಂಚರಿಸಿದವು. ಜನರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು. ಮಾತೆಯರು ಪೂರ್ಣಕುಂಭದೊಡನೆ ಸ್ವಾಗತಿಸಿದರೆ ರಾಮರಥ ಹೋದೆಡೆಯಲ್ಲೆಲ್ಲ ಭಕ್ತಿಯ ಪರವಶತೆ ಕಾಣುತ್ತಿತ್ತು.
50 ಲಕ್ಷ ರೂ. ಸಂಗ್ರಹ
ಇಟ್ಟಿಗೆ ಪೂಜಿಸುವ ಸಮಯದಲ್ಲಿ ಮಂದಿರ ನಿರ್ಮಾಣಕ್ಕಾಗಿ ಕಾಣಿಕೆಯನ್ನೂ ಕೇಳಲಾಯಿತು. ‘ಸವ್ವಾ ರುಪಯ್ಯಾ ದೇ ದೇ ಭಯ್ಯಾ’ ಘೋಷಣೆ ಜನಪ್ರಿಯವಾಗಿತ್ತು. ಪ್ರತಿಯೊಬ್ಬರೂ 1.25 ರೂ. ನೀಡುವಂತೆ ಪ್ರಾರ್ಥಿಸಿಕೊಳ್ಳಲಾಯಿತು. ಜತೆಗೆ ಮನೆಯೊಂದರಿಂದ 5 ರೂ. ಸಂಗ್ರಹಿಸಲಾಯಿತು. ಇದರಿಂದಾಗಿ ಆ ಕಾಲದಲ್ಲೇ ರಾಜ್ಯದಲ್ಲಿ 50 ಲಕ್ಷ ರೂ. ಕಾಣಿಕೆ ಸಂಗ್ರಹವಾಗಿತ್ತು ಎಂದು ವಿಶ್ವ ಹಿಂದು ಪರಿಷತ್‌ನ ಪ್ರಮುಖ ಕೇಶವ್ ಹೆಗಡೆ ಹೇಳುತ್ತಾರೆ.
ಇದಾದ ಬಳಿಕ 1990ರ ವಿಜಯ ದಶಮಿಯಂದು ರಾಮಜ್ಯೋತಿ ಯಾತ್ರೆ ಬಂತು. ಪ್ರತಿ ಜಿಲ್ಲೆಯಲ್ಲಿ ರಾಮಜ್ಯೋತಿಯ ರಥಯಾತ್ರೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಅಂದಿನ ಕಾಂಗ್ರೆಸ್ ಸರಕಾರ ಈ ಯಾತ್ರೆಗೆ ತಡೆಹಾಕಿತು. ಇತರ ರಾಜ್ಯಗಳಲ್ಲಿ ಶಾಂತಿಯುತವಾಗಿ ರಾಮಜ್ಯೋತಿ ಯಾತ್ರೆ ನಡೆದರೂ ಕರ್ನಾಟಕದಲ್ಲಿ ಮಾತ್ರ ಇದು ಒಂದು ಕೋಮಿಗೆ ಸಂಬಂಧಿಸಿದ್ದು ಎಂದು ಇಲ್ಲಿನ ಸರಕಾರ ಹಣೆಪಟ್ಟಿ ಕಟ್ಟಿತು.
ವಿವಾದಿತ ಕಟ್ಟಡಗುಮ್ಮಟ ಕೆಡವಿದ ಘಟನೆ ನಡೆದಾಗ ನಾನು, ಯಡಿಯೂರಪ್ಪ, ಶಂಕರಮೂರ್ತಿ ಜತೆಗೇ ಇದ್ದೆವು. ನಂತರ ರಾಮನ ಪೂಜಾ ಸ್ಥಳದಲ್ಲಿ ನಾವೇ ನಿಂತು ಮೆಟ್ಟಿಲು ಕಟ್ಟಿದೆವು.
– ರಾಮಚಂದ್ರಗೌಡ, ಬಿಜೆಪಿಯ, ಹಿರಿಯ ನಾಯಕ
ನಕ್ಷೆ ತಯಾರಿಸಿದ್ದ ವಿಜಯಕುಮಾರ್
1992ರ ಡಿಸೆಂಬರ್ 6ರ ಘಟನೆ ಬಳಿಕ ವಿವಾದಿತ ಸ್ಥಳದಲ್ಲಿ ರಾಮಲಲ್ಲಾನ ಮೂರ್ತಿ ಸ್ಥಾಪನೆ ಸಂಬಂಧದ ತಾತ್ಕಾಲಿಕ ಕಟ್ಟಡಕ್ಕೆ ನಮ್ಮ ರಾಜ್ಯದವರೇ ಆದ ಬಿ.ಎನ್.ವಿಜಯಕುಮಾರ್ ನೀಲನಕ್ಷೆ ತಯಾರಿಸಿ ಕೊಟ್ಟಿದ್ದರು. ಮುಂದೆ ವಿಜಯ್‌ಕುಮಾರ್ ಎರಡು ಅವಧಿಗೆ ಜಯನಗರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.
ಕರಸೇವೆಯ ಪರ್ವ
ಕೇಂದ್ರದಲ್ಲಿ ವಿ.ಪಿ.ಸಿಂಗ್ ನೇತೃತ್ವದ ಸರಕಾರ ಇರುವಾಗ ನಡೆದ ಮೊದಲ ಕರಸೇವೆಯಲ್ಲೂ ಕರ್ನಾಟಕದಿಂದ 5 ಸಾವಿರಕ್ಕೂ ಹೆಚ್ಚು ಮಂದಿ ಅಯೋಧ್ಯೆಯತ್ತ ಹೊರಟಿದ್ದರು. ಆದರೆ, ಸಾಕಷ್ಟು ನಿರ್ಬಂಧ ಇದ್ದದ್ದರಿಂದ ಅಂದಾಜು 500 ಮಂದಿ ಅಯೋಧ್ಯೆಗೆ ತಲುಪಲು ಸಾಧ್ಯವಾಯಿತು. ಅವರಲ್ಲಿ ಬಹಳ ಜನರು ಪ್ರಯಾಸಪಟ್ಟು ತಲುಪಿದರು. ಮಧ್ಯೆ ಮಧ್ಯೆ ಟ್ರೇನ್, ಬಸ್ ಸೌಕರ್ಯಕ್ಕೆ ತೊಂದರೆಯಾದಾಗ ನೂರಾರು ಕಿ.ಮೀ. ನಡೆಯಬೇಕಾದ ಸಂದರ್ಭವೂ ಬಂದಿತ್ತು. ನಂತರ 1992ರಲ್ಲಿ ನಡೆದ ಎರಡನೇ ಕರಸೇವೆಯಲ್ಲಿ ರಾಜ್ಯದಿಂದ ಅಂದಾಜು 10 ಸಾವಿರ ಜನರು ಸ್ವಯಂ ಸೇವಕರಾಗಿ ಹೋಗಿದ್ದರು. ಬಿ.ಎಸ್.ಯಡಿಯೂರಪ್ಪ, ಅನಂತಕುಮಾರ್, ರಾಮಚಂದ್ರಗೌಡ, ಡಿ.ಎಚ್.ಶಂಕರಮೂರ್ತಿ ಮತ್ತಿತರರ ಬಿಜೆಪಿ ಪ್ರಮುಖರು ಭಾಗಿಯಾಗಿದ್ದರು. ಕರಸೇವೆಯ ಉಸ್ತುವಾರಿಗಳಲ್ಲಿ ಒಬ್ಬರಾದ ಪೇಜಾವರ ಶ್ರೀಗಳಂತೂ ಸ್ಥಳದಲ್ಲೇ ಇದ್ದರು. ಬೇಲಿಮಠದ ಸ್ವಾಮೀಜಿ ಅವರೂ ಈ ಹೋರಾಟದಲ್ಲಿ ಬೆನ್ನೆಲುಬಾಗಿ ನಿಂತಿದ್ದರು. ಉಳಿದಂತೆ ಶೃಂಗೇರಿ, ಸಿದ್ಧಗಂಗಾ, ಆದಿಚುಂಚನಗಿರಿ, ಹುಬ್ಬಳ್ಳಿಯ ಮೂರು ಸಾವಿರ ಮಠ ಸೇರಿದಂತೆ ರಾಜ್ಯದ ಹಲವು ಮಠಾಧಿಪತಿಗಳು ಆಶೀರ್ವಾದ ಮಾಡಿದ್ದರು.
ಆಡ್ವಾಣಿ ರಥಯಾತ್ರೆ
‘ಬಿಜೆಪಿಯ ಭೀಷ್ಮ ಪಿತಾಮಹ’ ಲಾಲ್‌ಕೃಷ್ಣ ಆಡ್ವಾಣಿಯವರ ರಥಯಾತ್ರೆಯ ಹೆಜ್ಜೆ ಗುರುತು ಬೀದರ್‌ನ ಹುಮ್ನಾಬಾದ್‌ನಲ್ಲಿದೆ. ಆಡ್ವಾಣಿಯವರು ಮಹಾರಾಷ್ಟ್ರದ ಭೀಡ್ ಮಾರ್ಗವಾಗಿ ಹುಮ್ನಾಬಾದ್‌ಗೆ ಬಂದರು. ಬೆಳಗ್ಗೆ 10.30ರ ಹೊತ್ತಿಗೆ ಆಯೋಜಿಸಲಾಗಿದ್ದ ಸಭೆಯಲ್ಲಿ 40 ಸಾವಿರಕ್ಕೂ ಹೆಚ್ಚು ಜನರಿದ್ದರು. ಎಲ್ಲೆಲ್ಲೂಜೈ ಶ್ರೀರಾಮ್ ಘೋಷ ಮುಗಿಲು ಮುಟ್ಟುತ್ತಿತ್ತು. ಆಡ್ವಾಣಿಯವರು ರಾಮಭಕ್ತರನ್ನು ಉದ್ದೇಶಿಸಿ 45 ನಿಮಿಷ ಭಾಷಣ ಮಾಡಿದರು. ರಾಜ್ಯದ ದೃಷ್ಟಿಯಿಂದ ಅದೊಂದು ಅವಿಸ್ಮರಣೀಯ ಕ್ಷಣವೆಂದು ಆಡ್ವಾಣಿಯವರ ರಥಯಾತ್ರೆಯಲ್ಲಿ ಭಾಗಿಯಾಗಿದ್ದ ಹಾಗೂ ಹುಮ್ನಾಬಾದ್ ಸಮ್ಮೇಳನದ ಪ್ರತ್ಯಕ್ಷದರ್ಶಿ ಎಸ್.ಎ.ಹೇಮಂತ್ ತಿಳಿಸುತ್ತಾರೆ. 1983ರಲ್ಲಿ ದೇಶಾದ್ಯಂತ ಏಕಾತ್ಮತಾ ರಥಯಾತ್ರೆ ನಡೆಯಿತು. ಉಜಿರೆಯಲ್ಲಿ ನಡೆದ ಸಭೆಯಲ್ಲಿ ಸುಮಾರು 1 ಲಕ್ಷ ಜನರು ಭಾಗಿಯಾಗಿದ್ದರು. ಇದೂ ಕೂಡ ರಾಮಜನ್ಮಭೂಮಿ ಕುರಿತಾದ ಹಾಗೂ ಹಿಂದೂ ಪರವಾದ ಜಾಗೃತಿ ಮೂಡಿಸಿದೆ. ರಾಜ್ಯದಲ್ಲಿ ಎಲ್ಲ ಜಿಲ್ಲೆಗಳಲ್ಲೂ ರಾಮಮಂದಿರ ಚಳವಳಿ ನಡೆದಿದೆ. ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಂಗಳೂರು, ಮೈಸೂರು, ವಿಜಯಪುರ, ಕಲಬುರ್ಗಿ, ಬೀದರ್, ತುಮಕೂರು, ಮುಂತಾದ ಜಿಲ್ಲೆಗಳಲ್ಲಿ ಪ್ರಖರವಾಗಿ ನಡೆಯಿತು ಎನ್ನುವುದು ವಿಶ್ವ ಹಿಂದೂ ಪರಿಷತ್‌ನ ರಾಜಸ್ಥಾನ, ಗುಜರಾತ್ ಕ್ಷೇತ್ರ ಸಂಘಟನಾ ಕಾರ್ಯದರ್ಶಿ ಗೋಪಾಲ್ ನಾಗರಕಟ್ಟೆ ಅವರ ಅಭಿಮತ.