ರಾಜಸ್ಥಾನದಲ್ಲಿ ಸರಕಾರ ಸಂದಿಗ್ಧ ಸ್ಥಿತಿಯಲ್ಲಿದೆ. ಆಳುವ ಕಾಂಗ್ರೆಸ್ ಪಕ್ಷದ ಒಂದು ಬಣ ಮುಖ್ಯಮಂತ್ರಿ ಹಾಗೂ ಹೈಕಮಾಂಡ್ನ ವಿರುದ್ಧ ಸಿಡಿದೆದ್ದು, ಯುವ ನಾಯಕ ಸಚಿನ್ ಪೈಲಟ್ ನೇತೃತ್ವದಲ್ಲಿ ಐಷಾರಾಮಿ ರೆಸಾರ್ಟ್ಗಳಲ್ಲಿ ಬೀಡು ಬಿಟ್ಟಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಇನ್ನೊಂದು ಬಣ, ಹೆಚ್ಚಿನ ಶಾಸಕ ಬಲವನ್ನು ಹೊಂದಿದ್ದರೂ ಒಂದು ಬಗೆಯ ಆತಂಕದಲ್ಲೇ ಅಸ್ತಿತ್ವವನ್ನು ಕಾಪಾಡಿಕೊಂಡಿದೆ. ಪಕ್ಷ ನೀಡಿದ ವಿಪ್ ಉಲ್ಲಂಘಿಸಿದ ಪ್ರಕರಣವನ್ನು ಹೈಕೋರ್ಟ್ ಶುಕ್ರವಾರ ವಿಚಾರಣೆಗೆ ಎತ್ತಿಕೊಳ್ಳಲಿದೆ. ಪ್ರತಿಪಕ್ಷ ಬಿಜೆಪಿ ‘ಕಾದು ನೋಡುವ’ ತಂತ್ರವನ್ನು ಅನುಸರಿಸುತ್ತಿದ್ದೇನೆ ಎಂದು ಹೇಳಿಕೊಂಡಿದೆ. ಆದರೆ ಮಧ್ಯಪ್ರದೇಶದಲ್ಲಿ ಕಮಲ್ನಾಥ್ ಸರಕಾರವನ್ನು ಬೀಳಿಸಿದಂತೆ ಇಲ್ಲೂ ಬೀಳಿಸಲು ಹಾಗೂ ತನ್ನದೇ ಸರಕಾರವನ್ನು ರಚಿಸಲು ಸಚಿನ್ ಪೈಲಟ್ ಬೆಂಬಲವನ್ನು ಸುಲಭವಾಗಿ ಪಡೆಯುವ ಹಾದಿಯಲ್ಲಿದೆ. ಆದರೆ ಸಚಿನ್ ಪೈಲಟ್, ಪಕ್ಷ ಬಿಡುವ ಇರಾದೆಯಿಲ್ಲ; ನಾಯಕತ್ವ ಬದಲಾವಣೆಗಾಗಿ ತನ್ನ ಆಗ್ರಹ ಎಂದಿದ್ದಾರೆ. ಒಟ್ಟಾರೆಯಾಗಿ ಸರಕಾರ ಡೋಲಾಯಮಾನ ಪರಿಸ್ಥಿತಿಯಲ್ಲಿದೆ ಎಂಬುದರಲ್ಲಿ ಸಂಶಯವಿಲ್ಲ.
ರಾಜಸ್ಥಾನ ರಾಜ್ಯ ಕಳೆದ ಹದಿನೈದು ದಿನಗಳಿಂದ ಈ ಪ್ರಕರಣವನ್ನು ನೋಡುತ್ತಿದೆ. ಕಳೆದ ಹತ್ತು ದಿನಗಳಲ್ಲಿ ಇಲ್ಲಿನ ಕೊರೊನಾ ಸೋಂಕು ಪ್ರಕರಣಗಳು ದ್ವಿಗುಣಗೊಂಡಿವೆ. ಕೊರೊನಾ ಸಂಬಂಧಿತ ಲಾಕ್ಡೌನ್ ಇತ್ಯಾದಿಗಳಿಂದಾಗಿ ಆರ್ಥಿಕ ಪರಿಸ್ಥಿತಿ ನೆಲಕಚ್ಚಿದೆ. ಈ ಬಾರಿ ಸಾಕಷ್ಟು ಮಳೆ ಬೀಳದೆ ಇರುವುದರಿಂದ ಕೃಷಿ ವಲಯ ಬಿಕ್ಕಟ್ಟಿನಲ್ಲಿ ಬೀಳುವ ಸಾಧ್ಯತೆಯಿದ್ದು, ಹೆಚ್ಚಿನ ಗಮನವನ್ನು ಬೇಡುತ್ತಿದೆ. ಇಂಥ ಹೊತ್ತಿನಲ್ಲಿ ಪ್ರಮುಖ ಸ್ಥಾನದಲ್ಲಿರುವ ರಾಜಕಾರಣಿಗಳು ಅಧಿಕಾರದ ಆಟದಲ್ಲಿ ನಿರತರಾಗಿದ್ದಾರೆ. ಏನಕೇನ ಪ್ರಕಾರೇಣ, ಅಧಿಕಾರ ಪಡೆಯಬೇಕು ಎಂಬುದೊಂದೇ ಇವರ ಜೀವನದ ಪರಮೋದ್ದೇಶ ಆಗಿದೆಯೇ ಎಂಬ ಪ್ರಶ್ನೆಯನ್ನೂ ಈ ಬೆಳವಣಿಗೆಗಳು ಹುಟ್ಟು ಹಾಕಿವೆ.
ಯುವನಾಯಕನೆಂದು ಕರೆಸಿಕೊಂಡಿರುವ ಸಚಿನ್ ಪೈಲಟ್ ಸಿಕ್ಕಿರುವ ಅವಕಾಶಗಳು ಕಡಿಮೆಯೇನಲ್ಲ. ಅವರು ಮನಮೋಹನ್ ಸಿಂಗ್ ಅವರ ಪ್ರಧಾನಿ ಅವಧಿಯಲ್ಲಿ ಕೇಂದ್ರ ಸಚಿವರೂ ಆಗಿದ್ದವರು. ಪಕ್ಷದಲ್ಲಿ ಸಾಕಷ್ಟು ಅಧಿಕಾರವನ್ನೂ ಪಡೆದು ಜನಪ್ರಿಯತೆಯನ್ನೂ ಪಡೆದಿದ್ದಾರೆ. ಅಶೋಕ್ ಗೆಹ್ಲೋಟ್ ಅವರೂ ರಾಜ್ಯ ರಾಜಕಾರಣದಲ್ಲಿ ಪ್ರಭಾವಿಯೇ. ಇಂದು ರಾಜ್ಯ ಹೇಗೆ ಸಂಕಷ್ಟದಲ್ಲಿದೆಯೋ ಹಾಗೇ ಕಾಂಗ್ರೆಸ್ ಪಕ್ಷವೂ ಸಂಕಷ್ಟದಲ್ಲಿದೆ. ರಾಜ್ಯ ಮತ್ತು ಪಕ್ಷಗಳ ಭವಿಷ್ಯದ ಒಳಿತಿಗಾಗಿಯಾದರೂ ಇಬ್ಬರೂ ಒಂದು ಮಟ್ಟಿಗಿನ ಹೊಂದಾಣಿಕೆ ಮಾಡಿಕೊಂಡು ಸರಕಾರವನ್ನು ಸುಗಮವಾಗಿ ನಡೆಸಿಕೊಂಡು ಹೋಗಬೇಕಾದುದು ಇಂದಿನ ತುರ್ತು ಸ್ಥಿತಿಯಲ್ಲಿ ಅಗತ್ಯವಾಗಿದೆ. ಇದು ಅಧಿಕಾರಕ್ಕಾಗಿ ಕಚ್ಚಾಡಬೇಕಾದ ಸನ್ನಿವೇಶವಲ್ಲ. ಬದಲಾಗಿ, ಅಧಿಕಾರಿಗಳನ್ನೂ ಇತರ ಜನಪ್ರತಿನಿಧಿಗಳನ್ನೂ ಒಟ್ಟಾಗಿ ಕರೆದುಕೊಂಡು, ಆರೋಗ್ಯ ವಿಷಮ ಸ್ಥಿತಿಯಿಂದ ರಾಜ್ಯವನ್ನೂ ಕಾಪಾಡಲು ಟೊಂಕ ಕಟ್ಟಬೇಕಾದ ಸನ್ನಿವೇಶ.
ಇದೆಲ್ಲದರ ನಡುವೆ ಇಕ್ಕಟ್ಟಿಗೆ ಸಿಲುಕಿರುವುದು ಪ್ರಜಾತಂತ್ರ ವ್ಯವಸ್ಥೆ. ಜನಪ್ರತಿನಿಧಿ ತನ್ನ ಸೇವೆ ಮಾಡಲಿ ಎಂದು ಮತದಾರ ಬಯಸುತ್ತಾನೆ. ಸೇವೆ ಮಾಡಬೇಕು ಎಂಬ ಉದ್ದೇಶದಿಂದ ಅಭ್ಯರ್ಥಿ ಚುನಾವಣೆಗೆ ನಿಂತು ಆರಿಸಿ ಬರುತ್ತಾನೆ. ಸರಕಾರದ ಭಾಗವಾಗಿದ್ದರೆ, ಸಚಿವನಾಗಿದ್ದರೆ ಮಾತ್ರ ಜನಸೇವೆ ಸಾಧ್ಯ ಎಂದೇನಿಲ್ಲ. ಪ್ರತಿಯೊಬ್ಬ ಜನಪ್ರತಿನಿಧಿಯೂ ತನ್ನದೇ ರೀತಿಯಲ್ಲಿ ಸಮಾಜಕ್ಕೆ ಸೇವೆ ನೀಡಲು ಸಾಧ್ಯ. ಆದರೆ ಅಂಥ ನಂಬಿಕೆಯೀಗ ಯಾವ ಶಾಸಕನಲ್ಲೂ ಇರುವಂತಿಲ್ಲ. ಅಧಿಕಾರಕ್ಕಾಗಿ ನಡೆಯುವ ಈ ಕುಟಿಲ ಕಾರಸ್ಥಾನಗಳಲ್ಲಿ ಆಡಳಿತ ಕುಸಿದುಬೀಳುತ್ತದೆ. ವಾಮಮಾರ್ಗದಲ್ಲಿ ನಡೆದವರು ಮುಂದೆ ಮತದಾರರ ಮುಖ ನೋಡಲು ಅನರ್ಹರಾದರೂ, ಯಾವುದೇ ನಾಚಿಕೆ ಲಜ್ಜೆಗಳಿಲ್ಲದೆ ಜನರೆದುರು ಕಾಣಿಸಿಕೊಳ್ಳುತ್ತಾರೆ. ಇದನ್ನೆಲ್ಲ ಮತದಾರ ಸೂಕ್ಷ್ಮವಾಗಿ ಗಮನಿಸುತ್ತಿದ್ದಾನೆ ಎಂಬುದನ್ನು ಮರೆತೇಬಿಡುತ್ತಾರೆ. ಆತ ನಂತರ ತಕ್ಕ ಪಾಠ ಕಲಿಸುತ್ತಾನೆ ಎಂಬುದನ್ನು ಕರ್ನಾಟಕದ ಹಿಂದಿನ ರಾಜಕೀಯ ಘಟನಾವಳಿಯಲ್ಲೂ ಗಮನಿಸಬಹುದಾಗಿದೆ.