ಕೊರೊನಾ ಕಾಲದ ರಾಜಧರ್ಮ

– ತರುಣ್ ವಿಜಯ್.
ಈ ಅಂಕಣವನ್ನು ಬರೆಯುತ್ತಿರುವಾಗ ನನ್ನ ಕಂಗಳಲ್ಲಿ ನೀರು ತುಂಬಿಕೊಳ್ಳುತ್ತಿದೆ. ಬರೆಯುವುದಕ್ಕೆ ಕಾಣುತ್ತಿಲ್ಲ ಹಾಗೂ ಕೈ ಚಲಿಸುತ್ತಿಲ್ಲ. ಒಬ್ಬಳು ವಲಸೆ ಕಾರ್ಮಿಕಳ ಚಿತ್ರ ನನ್ನ ಕಣ್ಣಿನಲ್ಲಿದೆ. ಈಕೆ ತುಂಬು ಗರ್ಭಿಣಿ, ಲಾಕ್‌ಡೌನ್‌ ಪರಿಣಾಮ ಉಂಟಾದ ಕೋಲಾಹಲದಲ್ಲಿ ತನ್ನ ಹಳ್ಳಿಗೆ ಮರಳುತ್ತಿದ್ದಳು. ದಾರಿಯಲ್ಲೇ ಹೆರಿಗೆಯಾಯಿತು. ನವಜಾತ ಶಿಶುವಿನ ರಕ್ತವು ಆಕೆಯ ಕಣ್ಣೀರಿನಲ್ಲಿ ಮರೆಯಾಗಿದ್ದಿರಬೇಕು. ಆಕೆ ಕಣ್ಣೀರಿಡುತ್ತಲೇ ತನ್ನ ನೂರ ಅರುವತ್ತು ಕಿಲೋಮೀಟರ್‌ ಪ್ರಯಾಣವನ್ನು ನಡೆದು ಪೂರೈಸಿದಳು.

ನಾನು ನೋಡಿದ ಇನ್ನೊಂದು ಚಿತ್ರ ಎಂದರೆ ಎತ್ತಿನ ಬಂಡಿ ಎಳೆಯುತ್ತಿರುವ ಕಾರ್ಮಿಕ ಕುಟುಂಬದ್ದು. ಅವರು ಕುಟುಂಬ ಸಮೇತ ಎತ್ತಿನ ಗಾಡಿಯಲ್ಲಿ ಹೊರಟಿದ್ದರು. ಹಳ್ಳಿಯಿಂದ ನೂರಾರು ಕಿಲೋಮೀಟರ್‌ ದೂರದಲ್ಲಿ ಎರಡು ಎತ್ತುಗಳಲ್ಲಿ ಒಂದು ಸತ್ತುಹೋಯಿತು. ತನ್ನ ಹೆಂಡತಿ ಮತ್ತು ಮಕ್ಕಳು ಜೊತೆಗೆ ಸಾಮಗ್ರಿಗಳಿದ್ದ ಬಂಡಿಯನ್ನು ಕಾರ್ಮಿಕನೂ ಅವನ ಹೆಂಡತಿಯೂ ಒಂದು ಎತ್ತಿನ ಜೊತೆಗೆ ಸೇರಿ ಎಳೆದರು.
ಇದು ಇಂದಿನ ಭಾರತ. ಸ್ವಾತಂತ್ರ್ಯ ದೊರೆತು ಎಪ್ಪತ್ತು ವರ್ಷಗಳಾದ ಮೇಲೆ, ಕೊರೊನಾ ವೈರಾಣುವಿನ ಕಾಲದಲ್ಲಿ ಭಾರತದ ಹೀನಾತಿಹೀನ ಬಡತನದ ಭಯಾನಕ ಎದೆ ಬಿರಿಯುವ ಚಿತ್ರಗಳು ಪ್ರದರ್ಶಿತಗೊಳ್ಳುತ್ತಿವೆ.

ಕಾರ್ಮಿಕರ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನು ಆಡಲಾಗುತ್ತದೆ. ಆದರೆ ಯಾಕೆ ಅಸಹಾಯಕ ಸ್ಥಿತಿಯಲ್ಲಿ ರಸ್ತೆಗಳ ಮೇಲೆ ನಡೆದು ಬರುತ್ತಿರುವ ಈ ಕಾರ್ಮಿಕರ ಚಿತ್ರ ಯಾವ ಅಧಿಕಾರಿಗಳ, ಮಂತ್ರಿಗಳ ಕಣ್ಣಿಗೂ ಬೀಳಲೇ ಇಲ್ಲ? ಮಾಧ್ಯಮದವರಿಗೂ ಕೂಡ, ಅವರ ಅಸಹಾಯಕ ಪರಿಸ್ಥಿತಿಯನ್ನು ಕಂಡು ಫೋಟೊ ತೆಗೆದುಕೊಂಡ ಮೇಲೆ, ಅವರ ಪ್ರಭಾವ ಬಳಸಿ ಸಹಾಯ ಮಾಡುವ, ಬಸ್‌ ನಿಗದಿಪಡಿಸಿ ಊರಿಗೆ ತಲುಪಿಸುವ ಯೋಚನೆ ಬರಲೇ ಇಲ್ಲವೆ? ಮಾಧ್ಯಮಗಳ ಮುಂದೆ ಬಂದು ಮಾತನಾಡುತ್ತಿರುವವರಲ್ಲಿ ಎಷ್ಟು ಮಂದಿ ಅವರಿಗೆ ಸಹಾಯ ಮಾಡಿದ್ದಾರೆ? ಇದು ಬಡವರ ಹಸಿವನ್ನು ಬಳಸಿಕೊಳ್ಳುತ್ತಿರುವ ಕ್ರೂರ ಜಗತ್ತು. ಪ್ರತಿಪಕ್ಷಗಳ ಮಾತಿನ ಭರಾಟೆ ಕೂಡ ಕಾರ್ಮಿಕರ ಗಾಯದ ಮೇಲೆ ಉಪ್ಪು ಸವರಿ ತಿನ್ನುತ್ತಿರುವ ಹದ್ದುಗಳ ಭೋಜನದಂತೆ ಕಾಣಿಸುತ್ತಿದೆ. ಪ್ರತಿಪಕ್ಷದ ಯಾವ ನಾಯಕ ಅವರಿಗೆ ಸಹಾಯ ಮಾಡಿದ್ದಾನೆ?ಸತ್ಯವೇನೆಂದರೆ, ಈ ಬಡವರಿಗೆ ಯಾರೂ ಇಲ್ಲ. ಎಲ್ಲರೂ ತಮ್ಮತಮ್ಮದೇ ಜಗತ್ತುಗಳಲ್ಲಿ ಮುಳುಗಿದ್ದಾರೆ.
ಆದರೆ ಒಂದು ಮಾತಂತೂ ಸತ್ಯ. ಕಾರ್ಮಿಕರ ಬವಣೆ ಹುಸಿ ಹೋಗುವುದಿಲ್ಲ. ಸಿರಿವಂತಿಕೆಯ ದ್ವೀಪಗಳು, ಮಧ್ಯಮವರ್ಗದ ಸ್ವಾರ್ಥ ಇವು ಯಾವುವೂ ನಮ್ಮ ದೇಶದಲ್ಲಿ ಇಂದಿಗೂ ಅಸಹಾಯಕತೆ, ದೌರ್ಜನ್ಯ, ಬಡತನದ ಕರಾಳ ನರ್ತನ ಇದೆ ಎಂಬುದನ್ನು ಮುಚ್ಚಿಡಲಾರವು.
ಕೊರೊನಾ ಒಂದು ಹೊಸ ಜಗತ್ತನ್ನೇ ನಿರ್ಮಿಸುತ್ತಿದೆ. ಭಾರತವೂ ಇದಕ್ಕೆ ಹೊರತಲ್ಲ. ಕಣ್ಣಿಗೆ ಕಾಣದ ವಿಚಿತ್ರ ಕ್ರಿಮಿ ಶ್ರೀಮಂತ ಬಡವರೆನ್ನದೆ ಎಲ್ಲರನ್ನು ಕಾಡಿದೆ. ಇಂಥ ಸನ್ನಿವೇಶದಲ್ಲಿ ಭಾರಿ ಸಾಮಾಜಿಕ- ಆರ್ಥಿಕ ಕಂದರಗಳಿರುವ ಭಾರತದಂಥ ದೇಶಗಳು ಈ ವೈರಾಣು ಕಾಲದಲ್ಲಿ ಹೇಗೆ ವ್ಯವಸ್ಥೆಯನ್ನು ಮುನ್ನಡೆಸಬೇಕು?
ಇಂಥ ವೇಳೆಯಲ್ಲೇ ರಾಜಧರ್ಮ ಮುಖ್ಯವಾಗುತ್ತದೆ. ಈ ಬಡವರು ಬದುಕಿ ಉಳಿಯಲು ಮತ್ತು ಸಮಾಜ ವ್ಯವಸ್ಥೆಯ ಮೇಲೆ ವಿಶ್ವಾಸ ಉಳಿಸಿಕೊಳ್ಳಲು ಅವರಿಗೆ ಎಲ್ಲ ಬಗೆಯ ಸಹಾಯ ಮಾಡುವುದು ಅಗತ್ಯ. ಅದೃಷ್ಟವಶಾತ್‌ ಭಾರತೀಯರಿಗೆ ಇಂಥ ಸಮಯದಲ್ಲಿ ನರೇಂದ್ರ ಮೋದಿ ಅವರ ನಾಯಕತ್ವ ಲಭ್ಯವಾಗಿದೆ. ಮಕರನ ಬಾಯಿಗೆ ಬಿದ್ದ ಗಜೇಂದ್ರನಿಗೆ ಒದಗಿದ ದಿವ್ಯ ನೆರವಿನಂತೆ. ಮೇ 13ರಂದು ಪ್ರಧಾನಿಯವರು ನೀಡಿದ ಪ್ಯಾಕೇಜ್‌ ಈ ಬಗ್ಗೆ ಪ್ರಮುಖ ವಿವರಗಳಿಂದ ಕೂಡಿದೆ.
ಭಾರತದ ಜಿಡಿಪಿಯ ಶೇ.10 ಭಾಗದಷ್ಟು ಹಣವನ್ನು ಅಂದರೆ 20 ಲಕ್ಷ ಕೋಟಿ ರೂಪಾಯಿಗಳನ್ನು ಆರ್ಥಿಕತೆಯಲ್ಲಿ ತೊಡಗಿಸಲಾಗುತ್ತಿದೆ. ಮೂಲಸೌಲಭ್ಯ ಅಭಿವೃದ್ಧಿ, ಬೇಡಿಕೆ ಮತ್ತು ಪೂರೈಕೆ, ಕಾರ್ಮಿಕರು, ಮಧ್ಯಮವರ್ಗ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು, ಇವೆಲ್ಲವುಗಳ ಮೇಲೆ ತೊಡಗಿಸಲಾಗುತ್ತಿದೆ. ಇದು ಇಂದಿನ ದಿನಗಳಲ್ಲಿ ಒಂದು ಆರ್ಥಿಕತೆಗೆ ನೀಡಲಾಗುತ್ತಿರುವ ಅತ್ಯಂತ ದೊಡ್ಡ ಸಹಾಯವೆಂದೇ ಹೇಳಬೇಕು.

ಪ್ರಧಾನ ಮಂತ್ರಿಗಳ ಗರೀಬ್‌ ಕಲ್ಯಾಣ ಪ್ಯಾಕೇಜ್‌ನಲ್ಲಿ 1.70 ಲಕ್ಷ ಕೋಟಿ ರೂ. ನೀಡಲಾಗಿದ್ದು, ಇದರಲ್ಲಿ ಪ್ರತಿಯೊಬ್ಬ ಆರೋಗ್ಯ ಕಾರ್ಯಕರ್ತರಿಗೆ 50 ಲಕ್ಷ ವಿಮೆ- ರಕ್ಷಾ ಕವಚ ಸಿಗುತ್ತದೆ. 80 ಕೋಟಿ ಬಡ ಭಾರತೀಯರಿಗೆ ಮುಂದಿನ ಮೂರು ತಿಂಗಳವರೆಗೆ ಪ್ರತಿ ತಿಂಗಳು 5 ಕೆಜಿ ಗೋಧಿ ಅಥವಾ ಅಕ್ಕಿ ಉಚಿತ ನೀಡಲಾಗುವುದು. ಜನಧನ್‌ಗೆ ಖಾತೆಗೆ ಮೂರು ತಿಂಗಳವರೆಗೆ ರೂ. 500 ತುಂಬಲಾಗುತ್ತದೆ. 20 ಕೋಟಿ ಮಹಿಳೆಯರಿಗೆ ಉಚಿತ ಗ್ಯಾಸ್‌ ಸಿಲಿಂಡರ್‌ ನೀಡಲಾಗುವುದು. 3 ಕೋಟಿ ಅಂಗವಿಕಲರು ಮತ್ತು ಬಡ ವಿಧವೆಯರಿಗೆ ತಲಾ ಒಂದು ಸಾವಿರ ಪರಿಹಾರ ಅನುದಾನ ನೀಡಲಾಗುವುದು.

ಪಿಎಂ ಕಿಸಾನ್‌ ಯೋಜನೆ ಅಡಿಯಲ್ಲಿ 8.7 ಕೋಟಿ ರೈತರಿಗೆ 2 ಸಾವಿರ ರೂಪಾಯಿ ಪರಿಹಾರ ಮತ್ತು ಮೂರು ಕೋಟಿ ರೈತರಿಗೆ ನಾಲ್ಕು ಲಕ್ಷ ಕೋಟಿ ರೂಪಾಯಿಗಳು ದೊರೆತಿವೆ, ಸುಲಭ ಸಾಲದ ರೂಪದಲ್ಲಿ. ತುರ್ತು ಆರೋಗ್ಯ ಪ್ರತಿಕ್ರಿಯೆ ಪ್ಯಾಕೇಜ್‌ ಅಂದರೆ ತುರ್ತು ಆರೋಗ್ಯ ಮತ್ತು ವೈದ್ಯಕೀಯ ಅವಶ್ಯಕತೆಗಳಿಗಾಗಿ 15 ಸಾವಿರ ಕೋಟಿ ರೂಪಾಯಿಗಳನ್ನು ನೀಡಲಾಯಿತು. ‘ಆಭಾ’ (ಸ್ವಾವಲಂಬಿ-ಭಾರತ) ಬಿಕ್ಕಟ್ಟಿನಿಂದ ಬಳಲುತ್ತಿರುವ ದೇಶದ ಪುನರುಜ್ಜೀವನದ ಮಂತ್ರವಾಗಿದೆ. 20 ಲಕ್ಷ ಕೋಟಿ ಭಾರತ- ಪುನೋದಯದ ಪುನರುಜ್ಜೀವನವು ವಿಶೇಷ ಮತ್ತು ವಿಶ್ವದಲ್ಲೇ ಮೊದಲನೆಯದು. ಆರ್ಥಿಕ ಪುನರುಜ್ಜೀವನಕ್ಕಾಗಿ ಭಾರತವು ತೋರಿಸಿರುವ ಸಿದ್ಧತೆ ಅತ್ಯಂತ ಪರಿಣಾಮಕಾರಿ.

ನರೇಂದ್ರ ಮೋದಿಯವರು ನೀಡಿರುವ ಇಪ್ಪತ್ತು ಲಕ್ಷ ಕೋಟಿಗೂ ಹೆಚ್ಚು ಹಣ ದೇಶದ ಜನತೆಯ ಮೇಲೆ ಮೋದಿಯವರು ಇಟ್ಟಿರುವ ಸಂಪೂರ್ಣ ವಿಶ್ವಾಸದ ಪ್ರತೀಕ. ಇದೊಂದು ಬಿಕ್ಕಟ್ಟಿನ ಕಾಲವಾಗಿದ್ದರೂ ಚರಿತ್ರಾರ್ಹ ಹಾಗೂ ದಾಖಲಾರ್ಹವಾಗಿದೆ. ವೀರ ಸಾವರ್ಕರ್‌ ಅವರು ಇಂತಹ ಪ್ರತಿಯೊಂದು ಸವಾಲಿನ ಅವಧಿ ಆ ರಾಷ್ಟ್ರ ಮತ್ತು ಸಮಾಜಕ್ಕೆ ಒಂದು ಸುವರ್ಣ ಅವಧಿ ಎಂದು ಕರೆದರು. ಏಕೆಂದರೆ ಅಂತಹ ಬಿಕ್ಕಟ್ಟಿನಲ್ಲೇ ಸಮಾಜದ ಜನತೆಯ ರಕ್ತದ ಬಣ್ಣ ಕೆಂಪೋ ಅಥವಾ ಬಿಳಿಯದೇ ಎಂದು ಪ್ರತ್ಯೇಕಿಸದೆ ಎಲ್ಲರೂ ಒಂದಾಗುವುದು.
ವಾಸ್ತವವಾಗಿ, ಕೊರೊನಾದ ಕಾಲದ ರಾಜಧರ್ಮವು ಆಡಳಿತ ಅಥವಾ ಪ್ರಭುತ್ವದ ಸೇವಾಧರ್ಮದಲ್ಲಿ ವ್ಯಕ್ತವಾಗಿದೆ. ಕಾಲಧರ್ಮಕ್ಕೆ ಸಂಬಂಧಿಸಿದ ಈ ರಾಜಧರ್ಮವು ನವ ಭಾರತದ ಸೃಷ್ಟಿಯನ್ನು ಮಾಡಲಿದೆ.
(ಲೇಖಕರು ರಾಜ್ಯಸಭೆಯ ಮಾಜಿ ಸದಸ್ಯರು)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top