ಕೈಗಾರಿಕೆಗಳಿಲ್ಲದೆ ದೇಶದ ಮುನ್ನಡೆ ಎಂಬುದು ಕನಸಿನ ಮಾತು ಎಂದು ಈ ದೇಶದಲ್ಲಿ ಮೊದಲು ಹೇಳಿದ್ದು ರಾಹುಲ್ ಮುತ್ತಜ್ಜ ಚಾಚಾ ನೆಹರು. ಹಾಗಾದರೆ ನೆಹರು ಅವರಿಗೂ ಕೈಗಾರಿಕೋದ್ಯಮಿಗಳು ಕಪ್ಪ ಸಲ್ಲಿಸಿದ್ದರು, ಅದಕ್ಕಾಗಿ ಅವರು ಹಾಗೆ ಹೇಳುತ್ತಿದ್ದರು ಅಂತ ಹೇಳಬಹುದೇ?
***
ಭರವಸೆಯ ಬೆಟ್ಟವನ್ನೇ ನಿರ್ವಿುಸಿದ ರಾಹುಲ್ ಇಷ್ಟು ಬೇಗ ನಿರಾಸೆ ಮೂಡಿಸಿಬಿಟ್ಟರೆ ಹೇಗೆ! ಇತ್ತ ಸಂಸತ್ತಿನಲ್ಲಿ ಭೂಸ್ವಾಧೀನ ಮಸೂದೆಯಂತಹ ಮಹತ್ವದ ವಿಷಯದ ಮೇಲೆ ಚರ್ಚೆ ನಡೆಸಲು ತಯಾರಿ ನಡೆದಿದ್ದರೆ ಅತ್ತ ಕಡೆ ಕಾಂಗ್ರೆಸ್ನ ಭವಿಷ್ಯದ ಭರವಸೆಯ ನಾಯಕ ರಾಹುಲ್ ಗಾಂಧಿ ರಜಾ ತೆಗೆದುಕೊಂಡು ಅಜ್ಞಾತವಾಸಕ್ಕೆ ಹೋಗಿಬಿಡುವುದೇ? ರಾಹುಲ್ ರಜಾದ ಕುರಿತು ದೇಶದಲ್ಲಿ ಮಾಧ್ಯಮ ಚರ್ಚೆ ನಡೆದದ್ದೇ ನಡೆದದ್ದು. ಇದರ ಪರಿಣಾಮವಾಗಿ ಅಜ್ಞಾತವಾಸದಿಂದ ರಾಹುಲ್ ಆಗಮನದ ಕುರಿತೂ ಅಷ್ಟೇ ಕುತೂಹಲ ಮೂಡಿದ್ದು ಸಹಜವೇ ಆಗಿತ್ತು. ರಾಜಕೀಯ ಚಟುವಟಿಕೆಯಿಂದ ಸುದೀರ್ಘ ವಿರಾಮ ತೆಗೆದುಕೊಂಡು ಮತ್ತೆ ಅಖಾಡಕ್ಕಿಳಿಯುವ ರಾಹುಲ್ ಮುಂದಿನ ನಡೆ ಹೇಗಿರುತ್ತದೆ ಎಂಬುದರ ಕುರಿತೂ ಕುತೂಹಲ ಗರಿಗೆದರಿತ್ತು. ಆದರೆ ರಜಾದಿಂದ ಮರಳಿದ ಅವರು ನಡೆದುಕೊಂಡ ರೀತಿ ಅದೇಕೋ ಮತ್ತೆ ನಿರಾಸೆಯ ಮೂಟೆಯನ್ನೇ ತಂದಿಳಿಸಿಬಿಟ್ಟಿತು.
ದೇಹ-ಮನಸ್ಸನ್ನು ಹದಗೊಳಿಸಿಕೊಂಡು ಹಿಂತಿರುಗಿದ ರಾಹುಲ್ ಸೋತುಹೋಗಿರುವ ಕಾಂಗ್ರೆಸ್ ಪಕ್ಷಕ್ಕೆ ಹೊಸ ಚೈತನ್ಯ ತುಂಬುತ್ತಾರೆ, ಸಂಘಟನಾತ್ಮಕವಾಗಿ ಪಕ್ಷವನ್ನು ಬಲಪಡಿಸಲು ಮುಂದಾಗುತ್ತಾರೆ, ಹೊಸ ಹುರುಪಿನೊಂದಿಗೆ ಪಕ್ಷಕ್ಕೆ ನವೀನ ದಿಕ್ಕು ತೋರಿಸುತ್ತಾರೆ ಎಂಬ ವಿಶ್ಲೇಷಣೆ ಸಹಜವಾಗಿಯೇ ನಡೆಯುತ್ತಿತ್ತು. ಆದರೆ ಅದೇ ರಾಹುಲ್ ಗಾಂಧಿ ಯಥಾಪ್ರಕಾರ ಆಳುವ ಸರ್ಕಾರದ ವಿರುದ್ಧ ಮತ್ತದೇ ಸಾಂಪ್ರದಾಯಿಕ ಟೀಕೆಗೆ ಸೀಮಿತವಾಗಿ ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸಿಬಿಟ್ಟರು.
ಕೇಂದ್ರ ಸರ್ಕಾರದ ಭೂಸ್ವಾಧೀನ ಮಸೂದೆಯ ವಿರುದ್ಧ ದೆಹಲಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಮಹತ್ವಾಕಾಂಕ್ಷೆಯ ಕಿಸಾನ್ ರ್ಯಾಲಿಯಲ್ಲಿ ರಾಹುಲ್ ಮಾಡಿದ ಇಪ್ಪತ್ತು ನಿಮಿಷದ ಭಾಷಣ ಮತ್ತು ಅದೇ ಭೂಸ್ವಾಧೀನ ಮಸೂದೆ ವಿಷಯವಾಗಿ ಮಾರನೇ ದಿನ ಸಂಸತ್ತಿನಲ್ಲಿ ಮಾಡಿದ ಭಾಷಣ ಅವರ ನಾಯಕತ್ವದ ಸಾಮರ್ಥ್ಯ ಮತ್ತು ಆಲೋಚನೆಯ ಮೊನಚಿನ ಬಗ್ಗೆಯೇ ಮರುವಿಮರ್ಶೆಗೆ ದಾರಿ ಮಾಡಿಕೊಟ್ಟಿತು.
ಹೌದೋ ಅಲ್ಲವೋ ನೋಡಿ. ರಾಮಲೀಲಾ ಮೈದಾನದಲ್ಲಿ ರಾಹುಲ್ ಮಾಡಿದ ಭಾಷಣ ಮತ್ತು ಕಳೆದ ಹನ್ನೊಂದು ವರ್ಷಗಳ ಸಂಸದೀಯ ಇತಿಹಾಸದಲ್ಲಿ ಕಾಂಗ್ರೆಸ್ ಯುವನಾಯಕ ಮಾಡಿದ ಮೂರನೇ ಭಾಷಣದಲ್ಲಿ ಆಲೋಚನೆಗೆ ಒರೆಹಚ್ಚುವಂತಹ ಯಾವ ಅಂಶಗಳಿದ್ದವು? ರಾಮಲೀಲಾ ಮೈದಾನದ ಭಾಷಣದ ವೇಳೆ ‘ಪ್ರಧಾನಿ ಮೋದಿ ಚುನಾವಣೆ ಕಾಲಕ್ಕೆ ಕಾಪೋರೇಟ್ ಕಂಪನಿಗಳಿಂದ ಪಡೆದ ಋಣಭಾರ ಇಳಿಸಲು ಭೂಸ್ವಾಧೀನ ಮಸೂದೆ ತರಲು ಹೊರಟಿದ್ದಾರೆ’ ಎಂದು ಮಾಮೂಲಿ ರಾಜಕಾರಣಿಯಂತೆ ಮಾತನಾಡಿಬಿಟ್ಟರು. ಅಷ್ಟು ಸಾಲದ್ದಕ್ಕೆ ‘ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ದೇಶದ ಜನತೆಯ ಪಾಲಿಗೆ ಅಚ್ಛೇ ದಿನ್ ಬರುತ್ತದೆ ಎಂದಿದ್ದರು. ಹಾಗಾದರೆ ಅಚ್ಛೇ ದಿನ್ ಬಂತಾ?’ ಎಂದು ಕೇಳಿ ಆಡಳಿತದ ವಿಷಯದಲ್ಲಿ ತಮಗಿರುವ ಎಳಸುತನವನ್ನು ಪ್ರದರ್ಶನ ಮಾಡಿಕೊಂಡರು. ರಾಹುಲ್ ಸಂಸತ್ತಿನಲ್ಲಿ ಮಾಡಿದ ಭಾಷಣ ಇದಕ್ಕಿಂತ ಹಾಸ್ಯಾಸ್ಪದವಾಗಿ ಕಂಡಿತು. ಬಲು ಅಪರೂಪಕ್ಕೆ ಸಂಸತ್ತಿನಲ್ಲಿ ಮಾತನಾಡಿದ ಅವರು, ‘ಇದು ಸೂಟುಬೂಟಿನ ಸರ್ಕಾರ’ ಎಂದುಬಿಟ್ಟರು. ಅದೊಂದು ವಿಷಯವನ್ನು ಬಿಟ್ಟರೆ ರಾಹುಲ್ ಭಾಷಣದಲ್ಲಿ ಗಮನ ಸೆಳೆಯಬಲ್ಲ ಬೇರೆ ಒಂದೇ ಒಂದು ಸಂಗತಿ ಇರಲಿಲ್ಲ. ‘ಜುಬ್ಬಾ ಪೈಜಾಮಾ ಹಾಕಿಕೊಂಡ ಕಾಂಗ್ರೆಸ್ ನಾಯಕರು 65 ವರ್ಷಗಳ ಕಾಲ ಏನು ಮಾಡಿದರು?’ ಅಂತ ಯಾರಾದರೂ ತಿರುಗಿ ಕೇಳಿದ್ದರೆ ರಾಹುಲ್ ಏನು ಉತ್ತರ ಕೊಡುತ್ತಿದ್ದರೋ ಕಾಣೆ. ಅಲ್ಲಿಗೆ ಒಂದು ಸಂಗತಿ ನಿಚ್ಚಳ ಆಯಿತು. ಅದೇನಪ್ಪಾ ಅಂದರೆ ಅದೆಷ್ಟೇ ದಿನ ಅಜ್ಞಾತವಾಸಕ್ಕೆ ತೆರಳಿದರೂ ಕಾಂಗ್ರೆಸ್ ನಾಯಕರ ಆಲೋಚನಾಕ್ರಮ ಬದಲಾಗುವುದಿಲ್ಲ ಎಂಬುದು.
ಇಲ್ಲಿಯವರೆಗೆ ದೇಶದಲ್ಲಿ ರೈತರ ಸ್ಥಿತಿಗತಿ ಹೇಗಿತ್ತು ಅಂತ ಕಾಂಗ್ರೆಸ್ ನಾಯಕರಲ್ಲಿ ಯಾರಾದರೂ ಒಬ್ಬರು ಆಲೋಚನೆ ಮಾಡಿದ್ದಾರಾ? ಎಂಭತ್ತರ ದಶಕದಲ್ಲಿ ನಡೆದ ಹಸಿರುಕ್ರಾಂತಿ ಎಂಬ, ಬೆಂಕಿಬಿದ್ದಾಗ ಬಾವಿ ತೋಡುವ ಸರ್ಕಾರದ ನೀತಿಯ ಪರಿಣಾಮ ಅತಿಯಾದ ನೀರಾವರಿ, ಅಳತೆ ಅಂದಾಜಿಲ್ಲದೆ ಮಾಡಿದ ರಾಸಾಯನಿಕ ಗೊಬ್ಬರ, ಔಷಧ ಬಳಕೆಯಿಂದಾಗಿ ಸವುಳಾದ ಪಂಜಾಬ್ ಮತ್ತು ಹರಿಯಾಣದ ಬಹುಪಾಲು ಫಲವತ್ತು ಭೂಮಿಗಳು, ರಾಹುಲ್ ಗಾಂಧಿ ಮಾದರಿಯಲ್ಲೇ ಕನಿಷ್ಠ ಐವತ್ತು ವರ್ಷ ಕೃಷಿ ಚಟುವಟಿಕೆಯಿಂದ ರಜಾ ಕೇಳಬಹುದೇನೋ! ಮತ್ತೊಂದೆಡೆ ರಾಜಸ್ಥಾನ, ಮಧ್ಯಪ್ರದೇಶ, ಉತ್ತರಪ್ರದೇಶ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಬಹುಪಾಲು ಭೂಮಿಯಲ್ಲಿ ಅಂತರ್ಜಲ ಮಟ್ಟ ಪಾತಾಳ ತಲುಪಿದ್ದರಿಂದ ಮತ್ತು ಬೆಳೆದ ಬೆಳೆಗೆ ಬೆಲೆ ಖಾತ್ರಿ ಸಿಗದ್ದರಿಂದ ದೊಡ್ಡ ಪ್ರಮಾಣದಲ್ಲಿ ರೈತಾಪಿ ಮಂದಿ ಇನ್ನುಮುಂದೆ ಕೃಷಿ ಚಟುವಟಿಕೆ ಮಾಡಿ ಜೀವನೋಪಾಯ ಕಂಡುಕೊಳ್ಳಲು ಸಾಧ್ಯವಿಲ್ಲ ಎಂಬ ತೀರ್ವನಕ್ಕೆ ಬಂದಿದ್ದಾರೆ. ಸ್ವಾತಂತ್ರ್ಯಬಂದು ಅರವತ್ತು ವರ್ಷ ಕಳೆದರೂ ಭೂ ಮ್ಯಾಪಿಂಗ್ ಮಾಡಲು ಸರ್ಕಾರಗಳಿಗೆ ಸಾಧ್ಯವಾಗಿಲ್ಲ. ಮಣ್ಣಿನ ಗುಣಲಕ್ಷಣ ಆಧರಿಸಿ ಬೆಳೆನೀತಿ ರೂಪಿಸಲು ಸಾಧ್ಯವಾಗಿಲ್ಲ. ಸಾಲಸೋಲ ಮಾಡಿ ಬೆಳೆ ಬೆಳೆಯಲು ಮುಂದಾಗುವ ರೈತನಿಗೆ ಯಾವುದೋ ಕಾರಣಕ್ಕೆ ಬೆಳೆ ಕೈಕೊಟ್ಟ ಪಕ್ಷದಲ್ಲಿ ವೈಜ್ಞಾನಿಕ ಬೆಳೆವಿಮೆ ಕೊಡಿಸುವ ಯೋಗ್ಯತೆ ನಮ್ಮ ಸರ್ಕಾರಗಳಿಗೆ ಇದುವರೆಗೂ ಬಂದಿಲ್ಲ. ಪರಿಣಾಮ ಬೆಳೆ ಕೈಕೊಟ್ಟರೆ ಕುಣಿಕೆಗೆ ಕತ್ತು ಕೊಡುವುದೊಂದೇ ರೈತರ ಪಾಲಿಗೆ ಉಳಿದಿರುವ ದಾರಿ. ಮಹಾರಾಷ್ಟ್ರದ ವಿದರ್ಭ, ಉತ್ತರಪ್ರದೇಶ, ಮಧ್ಯಪ್ರದೇಶದ ಬಹುಪಾಲು ಕಡೆ ನಡೆಯುತ್ತಿರುವುದು ಇದೇ ತಾನೆ? ದೂರದರ್ಶಿತ್ವ ಇಲ್ಲದ, ರೈತ ಹಿತದ ಮೊಸಳೆ ಕಣ್ಣೀರು ಸುರಿಸುವ ಸರ್ಕಾರಗಳ ತಪ್ಪು ಕಲ್ಯಾಣ ಕಾರ್ಯಕ್ರಮಗಳ ಪರಿಣಾಮವಾಗಿ ಕೃಷಿಗೆ ಭಯಂಕರವಾಗಿ ಕಾರ್ವಿುಕರ ಬರ ಬೇರೆ ಕಾಡತೊಡಗಿದೆ.
ಇವಿಷ್ಟು ಒಂದು ಕಡೆಯಾದರೆ ಇನ್ನೊಂದು ವಿಚಾರ ಹೇಳುತ್ತೇನೆ ಕೇಳಿ. ಅದನ್ನು ನೋಡಿದರೆ ಈ ಪಕ್ಷಗಳ ನಾಯಕರ ರೈತ ಕಾಳಜಿ ಎಂಥದ್ದು ಎಂಬುದು ಸ್ಪಷ್ಟವಾಗಿ ಮನದಟ್ಟಾಗುತ್ತದೆ. ಯಾವುದೇ ರಾಜ್ಯಕ್ಕೆ ಬೇಕಾದರೂ ಹೋಗಿ ಸಮೀಕ್ಷೆ ಮಾಡಿ ನೋಡಿ. ಹೆದ್ದಾರಿ ನಿರ್ವಣ, ರೈಲ್ವೆ ಮಾರ್ಗ ನಿರ್ವಣ, ವಿವಿಧ ವಿದ್ಯುತ್ ಯೋಜನೆಗಳು ಇತ್ಯಾದಿಗಳಿಗೆ ವಶಪಡಿಸಿಕೊಂಡ ಬಡವರ ಭೂಮಿಗೆ ಇಲ್ಲಿಯವರೆಗೂ ಯೋಗ್ಯ ಪರಿಹಾರ ವಿತರಣೆ ಮಾಡಲು ಬಹಳಷ್ಟು ಸರ್ಕಾರಗಳಿಗೆ ಸಾಧ್ಯವಾಗಿಲ್ಲ. ಇದಕ್ಕೇನಂತೀರಿ?
ಸಂತ್ರಸ್ತರ ಕುಟುಂಬಗಳಿಗೆ ನೀಡಿದ್ದ ಉದ್ಯೋಗ ಭರವಸೆಯನ್ನು ನ್ಯಾಯವಾಗಿ ಈಡೇರಿಸಲು ಸಾಧ್ಯವಾಗಿಲ್ಲ. ಇದೆಲ್ಲದರ ಒಟ್ಟು ಪರಿಣಾಮ ಏನು ಗೊತ್ತೇ? 1997ರಿಂದೀಚೆಗೆ ಭಾರತದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಸಂಖ್ಯೆಯ ರೈತರು ಹತಾಶೆಯಿಂದ, ಬೇರೆ ವಿಧಿಯಿಲ್ಲದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದು ಯಾರೋ ಹೇಳಿದ್ದಲ್ಲ. ವಿಶ್ವಸಂಸ್ಥೆಯ ವಿಶೇಷಜ್ಞರು ನಡೆಸಿದ ಸಮೀಕ್ಷೆ ಹೇಳಿದ್ದು. ಅದಕ್ಕಿಂತ ಆಘಾತಕಾರಿ ಸಂಗತಿಯೊಂದಿದೆ. ಬೆಳೆನಷ್ಟ, ಸಾಲಬಾಧೆ ಇತ್ಯಾದಿ ಕಾರಣಗಳಿಂದಾಗಿ ದೇಶದಲ್ಲಿ ಪ್ರತಿ 32 ನಿಮಿಷಕ್ಕೆ ಒಬ್ಬ ರೈತ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. ಈ ಕಳವಳಕಾರಿ ಮಾಹಿತಿಯನ್ನು ಇತ್ತೀಚಿನ ವರ್ಷದಲ್ಲಿ ಯುನೆಸ್ಕೋ ಬಿಡುಗಡೆ ಮಾಡಿದ ಸಮೀಕ್ಷಾ ವರದಿಯಲ್ಲಿ ಸ್ಪಷ್ಟವಾಗಿ ದಾಖಲಿಸಲಾಗಿದೆ. ಹಾಗಾದರೆ ರೈತರ ಈ ಬವಣೆಗೆ ಯಾವ ಸರ್ಕಾರ ಕಾರಣ ಅಂತ ಹೇಳೋಣ? ಇವೆಲ್ಲ ರಾಹುಲ್ ಗಾಂಧಿಗೆ ಯಾಕೆ ಕಾಣಿಸುವುದಿಲ್ಲ? ಎಲ್ಲದಕ್ಕಿಂತ ಮುಖ್ಯವಾಗಿ ಗಾಂಧಿ ಕುಟುಂಬದ ತವರು ಅಮೇಥಿ, ರಾಯ್ಬರೇಲಿ ಸಂಸದೀಯ ಕ್ಷೇತ್ರಗಳಲ್ಲಿ ರೈತರ ಬದುಕು ಹಸನಾಗಿ, ಅಲ್ಲಿನ ರೈತರು ನೆಮ್ಮದಿಯಿಂದ ಇದ್ದಾರೇನು? ವಾಸ್ತವ ಏನು ಎಂದರೆ ರಾಹುಲ್ ಮತ್ತು ಸೋನಿಯಾ ಪ್ರತಿನಿಧಿಸುವ ಈ ಎರಡು ಕ್ಷೇತ್ರಗಳಲ್ಲೇ ರೈತರ ಸ್ಥಿತಿಗತಿ ಬೇರೆ ಕಡೆಗಳಿಗಿಂತ ಹೆಚ್ಚು ದುರ್ಭರವಾಗಿದೆ. ಕೃಷಿಕರ ತಲಾ ಆದಾಯ ಬೇರೆ ಕಡೆಗಳಿಗಿಂತಲೂ ಅತ್ಯಂತ ಕಡಿಮೆ ಇದೆ. ರಾಹುಲ್ ಆ ಬಗ್ಗೆ ಮೊದಲು ಆಲೋಚನೆ ಮಾಡಬೇಕಲ್ಲವೇ?
ಅಷ್ಟಕ್ಕೂ ಈಗ ಚರ್ಚೆ ನಡೆಯುತ್ತಿರುವ ಹೊಸ ಭೂಸ್ವಾಧೀನ ಮಸೂದೆಯಲ್ಲಿರುವ ರೈತವಿರೋಧಿ ಅಂಶ ಏನು ಅಂತ ಕೇಳಿನೋಡಿ. ಮಸೂದೆಯಲ್ಲೇನಿದೆ ಎಂಬುದನ್ನು ಒಬ್ಬನೇ ಒಬ್ಬ ಹೋರಾಟಗಾರ ಗಮನಕೊಟ್ಟು ಓದಿಲ್ಲ. ಅಧ್ಯಯನ ಮಾಡಿಲ್ಲ. ಆ ಮಸೂದೆಯಲ್ಲಿ ಇರುವ ಪ್ರಮುಖಾಂಶ ಇಷ್ಟೆ- ಕೈಗಾರಿಕೆಗಳಿಲ್ಲದೆ ದೇಶದ ಮುನ್ನಡೆ ಎಂಬುದು ಕನಸಿನ ಮಾತು. ಇದು ಮೋದಿ ಹೇಳಿದ್ದಲ್ಲ, ರಾಹುಲ್ ಮುತ್ತಜ್ಜ ಚಾಚಾ ನೆಹರು ಹೇಳಿದ ಮಾತು. ಪ್ರಜ್ಞಾವಂತರಿಗೆ ಈ ವಿಚಾರ ಸರಿಯಾಗಿ ಅರ್ಥವಾದೀತು. ಕೈಗಾರಿಕೆಗಳು ಬೆಳೆಯಲು ಭೂಮಿ ಮತ್ತು ಮೂಲಸೌಕರ್ಯ ಒದಗಿಸಬೇಕಾದ್ದು ಯಾವುದೇ ಸರ್ಕಾರದ ಕರ್ತವ್ಯ ತಾನೆ? ಹಾಗಾದರೆ ಅದಕ್ಕೊಂದು ನ್ಯಾಯಸಮ್ಮತ ನೀತಿ ರೂಪಿಸುವುದು ಬೇಡವೆ? ಅದೇ ಕೆಲಸವನ್ನು ಕೇಂದ್ರ ಸರ್ಕಾರ ಈಗ ಮಾಡಲು ಹೊರಟದ್ದು. ಸರ್ಕಾರದ ನೀತಿಯಲ್ಲೇನಾದರೂ ಲೋಪವಿದ್ದರೆ ಸರ್ಕಾರ ಮತ್ತು ಪ್ರತಿಪಕ್ಷಗಳೆರಡೂ ಕುಳಿತು ಪರಿಶೀಲಿಸಬೇಕು, ಸಂಸತ್ತಿನಲ್ಲಿ ಆರೋಗ್ಯಪೂರ್ಣ ಚರ್ಚೆ ಮಾಡಿ ಅಂತಿಮ ತೀರ್ವನಕ್ಕೆ ಬರಬೇಕು. ರೈತರಿಗೆ ಮತ್ತು ಕೈಗಾರಿಕೋದ್ಯಮಿಗಳಿಗೆ ಇಬ್ಬರಿಗೂ ಅನುಕೂಲ ಆಗಬಲ್ಲ ಮಾಗೋಪಾಯಗಳನ್ನು ಕಂಡುಕೊಳ್ಳಬೇಕು. ಹಾಗೂ ಒಂದು ವೇಳೆ ಸರ್ಕಾರ ಜನಪರ ಅಭಿಪ್ರಾಯವನ್ನು ಕಿವಿಗೆ ಹಾಕಿಕೊಳ್ಳಲಿಲ್ಲ ಎಂದರೆ ಹೋರಾಟದ ಹಾದಿ ಮತ್ತು ಹಕ್ಕು ಎರಡೂ ರಾಜಕೀಯ ಪಕ್ಷಗಳ ಪಾಲಿಗೆ ಇದ್ದೇ ಇದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆಳುವ ಪಕ್ಷ ಮತ್ತು ಪ್ರತಿಪಕ್ಷಗಳು ಅನುಸರಿಸಬೇಕಾದ ಧರ್ಮ ಇದೇ ಅಲ್ಲವೇ? ಆದರೆ ಚರ್ಚೆಯೂ ಬೇಡ, ವಿವರಣೆಯನ್ನೂ ಕೇಳಿಸಿಕೊಳ್ಳುವುದಿಲ್ಲ. ಕೇವಲ ಟೀಕೆಗಾಗಿ ಟೀಕೆ, ರಾಜಕೀಯ ಲಾಭಕ್ಕಾಗಿ ಪರಿಸ್ಥಿತಿಯನ್ನು ಬಳಸಿಕೊಳ್ಳುತ್ತೇವೆ ಎಂದರೆ ಹೇಗೆ? ಈಗ ಆಗುತ್ತಿರುವುದು ಅದೇ ಅಲ್ಲವೇ?
ಇನ್ನು ಬುಧವಾರ ದೆಹಲಿಯಲ್ಲಿ ಆಮ್ಆದ್ಮಿ ಪಕ್ಷ ಹಮ್ಮಿಕೊಂಡ ಪ್ರತಿಭಟನಾ ರ್ಯಾಲಿಯ ವೇಳೆ ಗಜೇಂದ್ರ ಸಿಂಗ್ ಎಂಬಾತ ಮರವೇರಿ ನೇಣುಹಾಕಿಕೊಳ್ಳಲು ಹೋದಾಗ ನಡೆದ ದುರ್ಘಟನೆ ರಾಜಕೀಯ ಪಕ್ಷಗಳ ಹೋರಾಟದ ಸ್ವರೂಪವನ್ನು ಬೇರೆಯದ್ದೇ ಮಗ್ಗುಲಿಗೆ ಹೊರಳಿಸಿದೆ. ಗಜೇಂದ್ರ ಸಿಂಗ್ ಸಾಲಸೋಲ ಮಾಡಿಕೊಂಡಿರಲಿಲ್ಲ. ಆದರೂ ಆತ ನೇಣಿಗೆ ಕೊರಳೊಡ್ಡಲು ಮುಂದಾದದ್ದು ಏಕೆ? ಆತ ಬರೆದಿಟ್ಟದ್ದು ಎನ್ನಲಾದ ಮರಣಪತ್ರ ಅಸಲಿಯೇ? ಸಾಲದ್ದಕ್ಕೆ ಆತ ಎಎಪಿಯಿಂದ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ಮಾಡಿಕೊಂಡಿದ್ದ ಎಂಬ ಮಾತಿದೆ. ಹಾಗಾದರೆ ರೈತ ಹೋರಾಟದ ದಿಕ್ಕು ಎತ್ತ ಹೊರಳುತ್ತಿದೆ? ಕಾಲವೇ ನಿರ್ಣಯಿಸಬೇಕಷ್ಟೆ.