ಸೇನೆಗೆ ವಾಯುಬಲ ತುಂಬಿದ ರಫೇಲ್ -‌ ಚೀನಾದ ವಿಮಾನಗಳಿಗಿಂತಲೂ ಒಂದು ಕೈ ಮೇಲು

– ಸುಧೀಂದ್ರ ಹಾಲ್ದೊಡ್ಡೇರಿ.

ಯುದ್ಧ ವಿಮಾನಗಳೆಂದರೆ ಕ್ಷಿಪ್ರ ವೇಗದಲ್ಲಿ ಆಗಸಕ್ಕೇರಿ, ಶತ್ರು ದೇಶದ ರೇಡಾರ್‌ಗಳ ಕಣ್ತಪ್ಪಿಸಿ, ತಾನು ಹೊತ್ತೊಯ್ದ ಕ್ಷಿಪಣಿ-ಬಾಂಬುಗಳನ್ನು ನಿರ್ದಿಷ್ಟ ಗುರಿಗೆ ತಲುಪಿಸಿ ಸುರಕ್ಷಿತವಾಗಿ ಹಿಂದಿರುಗುವ ಲೋಹ ಪಕ್ಷಿಗಳು. ಸೆಣಸಾಟಕ್ಕೆಂದು ಶತ್ರು ವಿಮಾನ ಆಗಸದಲ್ಲಿಯೇ ಸವಾಲೊಡ್ಡಿದರೆ, ಭೀಕರ ಸರ್ಪಕಾಳಗಕ್ಕೂ ಸಿದ್ಧವಾಗಿರುತ್ತವೆ. ಸುಂಯ್ಯೆಂದು ಮೇಲೇರುವ, ಅಷ್ಟೇ ವೇಗದಿಂದ ಕೆಳಗಿಳಿಯುವ, ತಲೆಕೆಳಕಾಗಿ ಮುನ್ನುಗ್ಗುವ, ಎಲ್ಲೆಂದರಲ್ಲಿ, ಎತ್ತೆಂದರತ್ತ ತಿರುತಿರುಗಿ ಸುಳಿದಾಡಿ ಸೆಳೆಯುವ ಸಾಮರ್ಥ್ಯ‌ ಈ ಯುದ್ಧ ವಿಮಾನಗಳದು. ಅಕ್ಷರಶಃ ಜಾದೂಗಾರನ ಮಾಯಾದಂಡಕ್ಕೆ ಮಣಿಯುವ ಪುಟ್ಟ ಪಕ್ಷಿಯಂತೆ ಇವು ಕಾರ್ಯನಿರ್ವಹಿಸಬೇಕು. ಇಂಥದೊಂದು ಅತ್ಯಾಧುನಿಕ ತಂತ್ರಜ್ಞಾನದ ಯುದ್ಧ ವಿಮಾನ ಫ್ರಾನ್ಸ್‌ ದೇಶದ ‘ಡಸೌ’ ಕಂಪನಿ ನಿರ್ಮಿತ ‘ರಫೇಲ್‌’. ಇದರ ಮೊದಲ ಕಂತು ಹರಿಯಾಣದ ಅಂಬಾಲ ವಾಯುನೆಲೆಗೆ ಮೊನ್ನೆಯಷ್ಟೇ ಬಂದು ಇಳಿದಿದೆ. ಈ ವಿಮಾನಗಳ ಆಗಮನಕ್ಕೆ ಹಿಂದೆಂದೂ ಕಾಣದ ಸಡಗರ, ಸಂಭ್ರಮ ಜತೆಗೆ ಟೀಕೆ-ವ್ಯಂಗ್ಯಗಳು ಹರಡುತ್ತಿವೆ. ಜತೆಗೆ ಹಲವಾರು ಪ್ರಶ್ನೆಗಳು ಹಾಗೂ ಅನುಮಾನಗಳು ಎದ್ದಿವೆ. ಅವುಗಳಿಗೆ ಇಲ್ಲಿದೆ ಉತ್ತರ.

‘ರಫೇಲ್‌’ ನಿಜಕ್ಕೂ ಉತ್ತಮ ಆಯ್ಕೆಯೆ?
ಹೌದು. ಯುದ್ಧಗಳಲ್ಲಿ ಭಾಗಿಯಾಗಿ ಸಾಬೀತಾಗಿರುವ ಅತ್ಯಾಧುನಿಕ ತಂತ್ರಜ್ಞಾನದ ವಿಮಾನವಿದು. ದೂರದಿಂದಲೇ ಗುರಿಗಳನ್ನು ಗುರುತಿಸಬಲ್ಲ ರೇಡಾರ್‌, ಶತ್ರು ರೇಡಾರ್‌ಗಳನ್ನು ಗಲಿಬಿಲಿಗೊಳಿಸಿ ತಪ್ಪಿಸಿಕೊಳ್ಳಬಲ್ಲ ಎಲೆಕ್ಟ್ರಾನಿಕ್‌ ವ್ಯವಸ್ಥೆ, ಕಣ್ನೋಟಕ್ಕೆ ಸಿಗದ ವಿಮಾನ, ದೂರದ ನೆಲದ ಗುರಿ ಇವುಗಳನ್ನು ನಿಖರವಾಗಿ ಹೊಡೆದುರಳಿಸಬಲ್ಲ ಕ್ಷಿಪಣಿ, ಲೇಸರ್‌ ಮಾರ್ಗದರ್ಶಿತ ವಿಧ್ವಂಸಕಾರಿ ಬಾಂಬ್‌ ಹೀಗೆ ತನ್ನ ತೂಕಕ್ಕಿಂತಲೂ ಒಂದೂವರೆ ಪಟ್ಟಿನಷ್ಟು ತೂಕದ ಅಸ್ತ್ರಗಳನ್ನು ಕೊಂಡೊಯ್ಯಬಲ್ಲ ಸಾಮರ್ಥ್ಯ‌ ಇದಕ್ಕಿದೆ. ಮುಂದಿನ ಮೂವತ್ತು ವರ್ಷಗಳ ತನಕ ಬಳಸಬಹುದಾದಷ್ಟು ಆಧುನಿಕತೆಯನ್ನು ಮೈಗೂಡಿಸಿಕೊಂಡಿದೆ.

‘ರಫೇಲ್‌’ ಆಗಮನಕ್ಕೆ ಇಷ್ಟೊಂದು ಮಹತ್ವವೇಕೆ?
ವಿದೇಶಗಳಿಂದ ಇಂಥ ಯುದ್ಧ ವಿಮಾನಗಳನ್ನು ಖರೀದಿಸುವ ವಿಷಯ ಭಾರತಕ್ಕೆ ಹೊಸತೇನಲ್ಲ. ಕಳೆದ ಎಪ್ಪತ್ಮೂರು ವರ್ಷಗಳಲ್ಲಿ ಸೇನಾಪಡೆಗಳಿಗೆಂದು ಬ್ರಿಟನ್‌, ರಷ್ಯಾ, ಫ್ರಾನ್ಸ್‌ಗಳಿಂದ ವಿವಿಧ ಶ್ರೇಣಿಗಳ ಯುದ್ಧ ವಿಮಾನಗಳು ಹಾಗೂ ಸ್ವಿಝರ್ಲೆಂಡ್‌, ಪೋಲೆಂಡ್‌, ಜರ್ಮನಿ, ಬ್ರೆಝಿಲ್‌, ಉಕ್ರೇನ್‌, ಅಮೆರಿಕಗಳಿಂದ ತರಬೇತಿ ವಿಮಾನಗಳು, ವಿಮಾನ ಎಂಜಿನ್‌ಗಳು, ಹೆಲಿಕಾಪ್ಟರ್‌ಗಳು, ಸಾಗಣೆ ವಿಮಾನಗಳು, ಪರಿವೀಕ್ಷ ಣಾ ವಿಮಾನಗಳನ್ನು ಖರೀದಿಸಲಾಗಿದೆ. ಕೆಲವನ್ನು ತಂತ್ರಜ್ಞಾನ-ಸಹಯೋಗದೊಂದಿಗೆ ಭಾರತದಲ್ಲಿಯೇ ತಯಾರಿಸಲಾಗುತ್ತಿದೆ. ಚೀನಾದ ಗಡಿಯಲ್ಲಿನ ಪ್ರಕ್ಷ ುಬ್ಧತೆಯಿಂದಾಗಿ ‘ರಫೇಲ್‌’ನೊಂದಿಗೆ ಎರಡೂ ದೇಶಗಳ ನಡುವಿನ ಮಿಲಿಟರಿ ಬಲಾಬಲಗಳ ಹೋಲಿಕೆ ನಡೆಯುತ್ತಿವೆ.

ಈ ಐದು ವಿಮಾನಗಳಿಂದಲೇ ನಾವು ಯುದ್ಧ ಗೆಲ್ಲಬಹುದೆ?
ಐದು ವಿಮಾನಗಳಲ್ಲಿ ಮೂರು ಮಾತ್ರ ಕಾದಾಡಬಲ್ಲಂಥವು, ಉಳಿದೆರಡು ತರಬೇತಿ ವಿಮಾನಗಳು. ಒಂದು ಸ್ಕ್ವಾಡ್ರನ್‌ನಲ್ಲಿ ಕನಿಷ್ಟ ಹದಿನೆಂಟು ವಿಮಾನಗಳಿರುತ್ತವೆ. ಎರಡು ಸ್ಕ್ವಾಡ್ರನ್‌ಗಳಷ್ಟು ವಿಮಾನಗಳಿದ್ದರೆ ಮಾತ್ರ ಒಂದು ಯುದ್ಧಕ್ಕೆ ಅವನ್ನು ನಿಯೋಜಿಸಬಹುದು. ಸದ್ಯಕ್ಕೆ ಲಭ್ಯವಿರುವ ವಿಮಾನಗಳನ್ನು ತರಬೇತಿಗಳಿಗೆ ಬಳಸಬಹುದು. ಆದ್ದರಿಂದ ಚೀನಾದೊಂದಿಗೆ ನಾಳೆಯೇ ಯುದ್ಧ ನಡೆದರೆ ಈ ಐದು ‘ರಫೇಲ್‌’ಗಳಿಂದಲೇ ನಾವು ಗೆಲ್ಲುತ್ತೇವೆಂಬುದು ಸುಳ್ಳು.

ಉತ್ತಮ ತಂತ್ರಜ್ಞಾನ ಗೆಲುವು ತಂದುಕೊಡಬಲ್ಲದೆ?
ಬಾಲಾಕೋಟ್‌ ದಾಳಿಯ ಸಂದರ್ಭದಲ್ಲಿ ವಿಂಗ್‌ ಕಮ್ಯಾಂಡರ್‌ ಅಭಿನಂದನ್‌ ಅವರು ಮೂರನೆಯ ತಲೆಮಾರಿನ ‘ಮಿಗ್‌-21’ ವಿಮಾನದ ಸಾರಥಿಯಾಗಿದ್ದರು. ಅವರು ಹೊಡೆದುರುಳಿಸಿದ್ದು ಪಾಕಿಸ್ತಾನದ ನಾಲ್ಕನೆಯ ತಲೆಮಾರಿನ ‘ಎಫ್‌-16’ ವಿಮಾನವನ್ನು. ಪೈಲಟ್‌ಗಳ ಅನುಭವ ಹಾಗೂ ಚಾಕಚಕ್ಯತೆಗಳಷ್ಟೇ ಗೆಲುವನ್ನು ತಂದುಕೊಡಬಲ್ಲದು. ತಂತ್ರಜ್ಞಾನ ಹೆಚ್ಚುವರಿ ಬಲವನ್ನು ಮಾತ್ರ ನೀಡಬಲ್ಲದು.

‘ರಫೇಲ್‌’ ಪಾಕಿಸ್ತಾನ, ಚೀನಾ ವಿಮಾನಗಳಿಗೂ ಮಿಗಿಲೆ?
ತಂತ್ರಜ್ಞಾನದ ದೃಷ್ಟಿಯಿಂದ ಪಾಕಿಸ್ತಾನದ ‘ಎಫ್‌-16’ಗೂ ಮಿಗಿಲು ಹಾಗೂ ಚೀನಾದ ‘ಜೆ-20’ಗೆ ತುಸು ಕಡಿಮೆಯದು. ಆದರೆ ‘ಜೆ-20’ ಇನ್ನೂ ಪರೀಕ್ಷಾರ್ಥ ಹಾರಾಟಗಳನ್ನಷ್ಟೇ ನಡೆಸಿವೆ, ‘ರಫೇಲ್‌’ನಂತೆ ಯಾವುದೇ ಯುದ್ಧದಲ್ಲಿ ಭಾಗಿಯಾಗಿಲ್ಲ, ಪರಿಶೀಲನೆಗೆ ಒಳಗೊಂಡಿಲ್ಲ. ಜಗತ್ತಿನ ಅತ್ಯಾಧುನಿಕ ಕ್ಷಿಪಣಿ, ಬಾಂಬ್‌, ರೇಡಾರ್‌, ಪರಿವೀಕ್ಷ ಣಾ ಕ್ಯಾಮೆರಾಗಳನ್ನು ಹೊತ್ತು ಪರೀಕ್ಷಿಸಿರುವ ಕೀರ್ತಿ ‘ರಫೇಲ್‌’ನದು.

ಎರಡು ಆಸನಗಳಿರುವ ‘ರಫೇಲ್‌’ನ ಮಹತ್ವವೇನು?
ಒಟ್ಟು 36 ವಿಮಾನಗಳ ಆರ್ಡರ್‌ನಲ್ಲಿ 6 ವಿಮಾನಗಳಿಗೆ ಎರಡು ಆಸನಗಳಿರುತ್ತವೆ. ಇವು ತರಬೇತಿ ನೀಡುವಂಥ ವಿಮಾನಗಳು, ಕಾದಾಟಕ್ಕೆ ನಿಯೋಜನೆಯಾಗುವಂಥದ್ದಲ್ಲ. ಈಗ ಆಗಮಿಸಿರುವ 5 ವಿಮಾನಗಳಲ್ಲಿ 2 ವಿಮಾನಗಳು ಮಾತ್ರ ಎರಡು ಆಸನಗಳನ್ನು ಹೊಂದಿವೆ.

‘ರಫೇಲ್‌’ ಹೊರತಾಗಿ ಭಾರತದ ವಾಯುಬಲ ಎಷ್ಟು?
‘ಗ್ಲೋಬಲ್‌ ಫೈರ್‌ಪವರ್‌’ ಸಂಸ್ಥೆಯ 2020ರ ಅಂಕಿ-ಅಂಶದ ಪ್ರಕಾರ ಭಾರತದ ಬಳಿ 2,159 ವಿಮಾನಗಳಿವೆ, ಚೀನಾದ ಬಳಿ 3,210 ವಿಮಾನಗಳಿವೆ. ಅವುಗಳಲ್ಲಿ ವಾಯು ಸೆಣಸಾಟಕ್ಕೆ ಬಳಸುವಂಥ ವಿಮಾನಗಳು ಭಾರತದಲ್ಲಿ 538 ಮತ್ತು ಚೀನಾದಲ್ಲಿ 1,232 ಇವೆ. ವೈಮಾನಿಕ ಬಲಗಳ ಶ್ರೇಯಾಂಕದಲ್ಲಿ ಅಮೆರಿಕ, ರಷ್ಯಾ, ಚೀನಾಗಳ ನಂತರದ ಸ್ಥಾನ ಭಾರತದ್ದು. ಚೀನಾದ ‘ಜೆ-10’, ‘ಜೆ-11’ ಹಾಗೂ ‘ಸುಖೋಯ್‌-27’ ಉತ್ತಮ ಕಾದಾಟ ವಿಮಾನಗಳು. ಆದರೆ ‘ಮಿರಾಜ್‌-2000’ ಮತ್ತು ‘ಸುಖೋಯ್‌-30’ ವಿಮಾನಗಳು ಚೀನಾದ ಕಾದಾಟ ವಿಮಾನಗಳಿಗಿಂತಲೂ ಹೆಚ್ಚು ಸಾಮರ್ಥ್ಯ‌ದವು. ಜತೆಗೆ ಇವುಗಳಿಗೆ ಸರ್ವಋುತುಗಳಲ್ಲೂ ಹಾರಾಟ ನಡೆಸಬಲ್ಲ ಛಾತಿಯಿವೆ. ಈ ಸಾಮರ್ಥ್ಯ‌ ಚೀನಾದ ‘ಜೆ-10’ಗೆ ಮಾತ್ರ ಇದೆ.

ವೈಮಾನಿಕ ಯುದ್ಧಕ್ಕೆ ಭಾರತದಲ್ಲಿ ಮೂಲಸೌಕರ್ಯಗಳಿವೆಯೆ?
ಲಡಾಕ್‌ ಪ್ರದೇಶದಲ್ಲಿ ವಾಯುಪಡೆಗೆ ಉತ್ತಮ ಮೂಲಸೌಕರ್ಯ ಕಲ್ಪಿಸುವುದರಲ್ಲಿ ಭಾರತಕ್ಕೆ ಹಿರಿಮೆಯಿದೆ. ಪರ್ವತಶ್ರೇಣಿಯ ವಿಮಾನ/ಹೆಲಿಕಾಪ್ಟರ್‌ ಹಾರಾಟಗಳ ಅನುಭವದಲ್ಲೂ ಚೀನಾಕ್ಕೆ ಹೋಲಿಸಿದರೆ ನಮ್ಮದೇ ಹೆಚ್ಚಿನ ಗರಿಮೆ. ಇದಕ್ಕೆ ಮುಖ್ಯ ಕಾರಣ, ನಮ್ಮ ಸಿಯಾಚಿನ್‌ ನೀರ್ಗಲ್ಲಿನ ಮೇಲಿನ ಹಾರಾಟ ಮತ್ತು ಸಾಗಣೆಯ ಸಾಧನೆಗಳು. ಹಾರಾಟ ಸೌಕರ್ಯಗಳ ಸ್ಥಿತಿಗತಿಯನ್ನು ಪರಿಗಣಿಸುವುದಾದರೆ ಚೀನಾದ ನಿಲ್ದಾಣಗಳಿರುವುದು ಟಿಬೆಟ್‌ ಹಾಗೂ ಶಿನ್ಯಾಂಗ್‌ಗಳಲ್ಲಿ. ಅವು ಪ್ರತಿಕೂಲ ಹವಾಮಾನದ ಕಡಿದಾದ ಪ್ರದೇಶಗಳು. ಈ ಕಾರಣದಿಂದಾಗಿ ಚೀನಾದ ‘ಜೆ-10’, ‘ಜೆ-11’ ಹಾಗೂ ‘ಸುಖೋಯ್‌-27’ ಕಾದಾಟ ವಿಮಾನಗಳ ಹಾರಾಟ ಹಾಗೂ ಹೊರೆಸಾಗಣೆ ಸಾಮರ್ಥ್ಯ‌ಗಳು ಅರ್ಧಕ್ಕಿಂತಲೂ ಕಡಿಮೆ.

ಚೀನಾದ ಮಿಲಿಟರಿ ಸಾಮರ್ಥ್ಯ‌ ಭಾರತಕ್ಕಿಂತ ಮೇಲಿದೆಯೆ?
ಮಿಲಿಟರಿ ಬಲಗಳ ಕುರಿತಂತೆ ಚರ್ಚೆ ನಡೆಸುವಾಗ ಮೊದಲ ವಿಷಯ ಪ್ರಸ್ತಾಪವಾಗುವುದು, ವರ್ಷಕ್ಕೆ 261 ಶತಕೋಟಿ ಡಾಲರ್‌ನ ಚೀನಾದ ಮಿಲಿಟರಿ ಬಜೆಟ್‌, ಭಾರತ ಇದೇ ಬಾಬಿಗೆ ಮೀಸಲಿಡುವ ಮೊತ್ತ ಅದರ ಮೂರನೆಯ ಒಂದು ಭಾಗದಷ್ಟು. ಹಾಗೆಂದ ಮಾತ್ರಕ್ಕೆ ಭಾರತದ ಮಿಲಿಟರಿ ಬಲ ಚೀನಕ್ಕಿಂತಲೂ ಮೂರನೆಯ ಒಂದು ಭಾಗ ಎಂದು ಭಾವಿಸಬೇಕಿಲ್ಲ. ಚೀನಾದ ವಿಸ್ತಾರ, ಅದರ ಗಡಿ ಹಂಚಿಕೆ, ಅದರ ನೆರೆದೇಶಗಳೊಂದಿಗಿನ ತಂಟೆ-ತಕರಾರು ಮತ್ತು ಅದರ ಸೈನಿಕರ ಸಂಖ್ಯೆಗೆ ಈ ಮೊತ್ತ ಅನುಗುಣವಾಗಿಯೇ ಇರಬೇಕು. ಚೀನಾಕ್ಕೆ ಹೋಲಿಸಿದರೆ ನಮ್ಮ ದೇಶದ ಹೆಚ್ಚಿನ ಗಡಿಭಾಗಕ್ಕೆ ಸಮುದ್ರದಂಚಿದೆ. ಭಾರತವು ತನ್ನ ಏಳು ನೆರೆ ರಾಷ್ಟ್ರಗಳೊಡನೆ 15,000 ಕಿಲೋಮೀಟರ್‌ ಗಡಿಯನ್ನು ಹಂಚಿಕೊಂಡಿದ್ದರೆ, ಚೀನಾ ದೇಶವು 22,117 ಕಿಲೋಮೀಟರ್‌ ಗಡಿಯನ್ನು 14 ರಾಷ್ಟ್ರಗಳೊಂದಿಗೆ ಹಂಚಿಕೊಂಡಿದೆ. ಅಂದರೆ ಚೀನಾ, ಭಾರತಕ್ಕಿಂತಲೂ ಒಂದೂವರೆ ಪಟ್ಟು ಹೆಚ್ಚು ಉದ್ದದ ಗಡಿ ಹಾಗೂ ಎರಡರಷ್ಟು ಹೆಚ್ಚು ರಾಷ್ಟ್ರಗಳನ್ನು ನಿಭಾಯಿಸಬೇಕು.

ಚೀನಾದ ಪೈಲಟ್‌ಗಳು ಭಾರತದವರಿಗಿಂತಲೂ ಚತುರರೆ?
ಚೀನಾ ಮತ್ತು ಭಾರತದ ನಡುವಿನ ಗಡಿಯ ಬಹುಭಾಗವಿರುವುದು ಅತಿ ಹೆಚ್ಚು ಎತ್ತರದ ಪರ್ವತ ಸಾಲುಗಳ ನಡುವೆ. ಇಂಥ ಪ್ರದೇಶದಲ್ಲಿನ ಕಾದಾಟದಲ್ಲಿ ಪರಿಣತಿಯಿರುವುದು ಭಾರತೀಯ ಸೈನ್ಯಕ್ಕೆ. ಭೂಸೇನೆಯ ಪರ್ವತ ತುಕಡಿ, ವಾಯುವಿಭಾಗ (ಆರ್ಮಿ ಏವಿಯೇಷನ್‌) ಮತ್ತು ವಾಯುಸೇನೆಯ ಸಿಯಾಚಿನ್‌ ಪಯೋನಿಯರ್ಸ್‌ ಇವೆಲ್ಲವಕ್ಕೂ ಪಾಕಿಸ್ತಾನದೊಂದಿಗೆ ಎತ್ತರದ ನೀರ್ಗಲ್ಲಿನಲ್ಲಿ ನಿರಂತರ ಸೆಣಸಾಟದ ಅನುಭವವಿದೆ.

ಭಾರತದ ‘ತೇಜಸ್‌’ನ ಸ್ಥಾನವೇನು?
ಯುದ್ಧ ವಿಮಾನಗಳ ಇತಿಹಾಸವನ್ನು ಸ್ಥೂಲವಾಗಿ ಐದು ‘ತಲೆಮಾರು’ಗಳಾಗಿ ವಿಂಗಡಿಸಲಾಗುತ್ತದೆ. ಭಾರತ ಅಭಿವೃದ್ಧಿ ಪಡಿಸಿದ ‘ಮಾರುತ್‌’ (ಹೆಚ್‌.ಎಫ್‌-24) ವಿಮಾನ, ಈ ವಿಂಗಡನೆಯಲ್ಲಿ ಎರಡನೆಯ ತಲೆಮಾರಿಗೆ ಸೇರಿತ್ತು. ‘ಮಿಗ್‌-21’ ಮೂರನೆ ತಲೆಮಾರಿನದು. ನಮ್ಮ ‘ತೇಜಸ್‌’ ಸೇರಿದಂತೆ ‘ಎಫ್‌-16’, ‘ಸುಖೋಯ್‌-30’, ‘ಮಿರಾಜ್‌-2000’ ವಿಮಾನಗಳು ನಾಲ್ಕನೆಯ ತಲೆಮಾರಿನವು. ‘ರಫೇಲ್‌’, ಸ್ವೀಡನ್ನಿನ ‘ಜಾಸ್‌-39’ಗಳನ್ನು ನಾಲ್ಕು/ಐದನೆಯ ತಲೆಮಾರಿನ ವಿಮಾನವೆಂದು ಪರಿಗಣಿಸಬಹುದು. ಅಮೆರಿಕದ ‘ಎಫ್‌-22’, ‘ಎಫ್‌-35’ಗಳು ಐದನೆಯ ತಲೆಮಾರಿನ ವಿಮಾನಗಳು. ರಷ್ಯಾದ ಸಹಯೋಗದೊಂದಿಗೆ ಐದನೆಯ ತಲೆಮಾರಿನ ವಿಮಾನ ನಿರ್ಮಾಣದ ಯೋಜನೆಯೊಂದನ್ನು ಭಾರತ ಹಮ್ಮಿಕೊಂಡಿತ್ತು. ಸದ್ಯಕ್ಕೆ ಸ್ಥಗಿತಗೊಂಡಿದೆ. ‘ಮಾರುತ್‌’ ನಂತರದ ಎರಡು ತಲೆಮಾರಿನ ವಿಮಾನ ವಿನ್ಯಾಸ/ಅಭಿವೃದ್ಧಿ/ನಿರ್ಮಾಣದ ನೇರ ‘ಅನುಭವ’ವನ್ನು ಭಾರತದ ತಂತ್ರಜ್ಞರು ಹಲವಾರು ‘ರಾಜಕೀಯ’ ಕಾರಣಗಳಿಂದಾಗಿ ಕಳೆದುಕೊಂಡರು. ಇಂಥದೊಂದು ‘ಕಳೆದುಕೊಳ್ಳುವಿಕೆ’ಯಿಂದಾಗಿ ‘ತೇಜಸ್‌’ ಯೋಜನೆಗೆ ಹಿನ್ನಡೆಯಾಯಿತು.

ಭಾರತ ‘ರಫೇಲ್‌’ನಂಥ ವಿಮಾನ ನಿರ್ಮಿಸಬಹುದೆ?
ಖಂಡಿತವಾಗಿಯೂ ಸಾಧ್ಯ. ಜಾರ್ಜ್‌ ಫರ್ನಾಂಡಿಸ್‌ ರಕ್ಷಣಾ ಸಚಿವರಾಗಿದ್ದ ಸಮಯದಲ್ಲಿ ‘ರಫೇಲ್‌’ ಶ್ರೇಣಿಯ ಭಾರತೀಯ ‘ಮೀಡಿಯಂ ಮಲ್ಟಿ-ರೋಲ್‌ ಕಾಂಬ್ಯಾಟ್‌ ಏರ್‌ಕ್ರಾಫ್ಟ್‌ – ಎಂ.ಎಂ.ಆರ್‌.ಸಿ.ಎ.’ ನಿರ್ಮಾಣಕ್ಕೆ ಸಣ್ಣ ಅಡಿಪಾಯವನ್ನು ಹಾಕಲಾಗಿತ್ತು. ನಂತರದ ದಿನಗಳಲ್ಲಿ ಖರೀದಿಯತ್ತಲೇ ಒಲವು ಹೆಚ್ಚಾದ್ದರಿಂದ, ಸ್ವದೇಶಿ ಯೋಜನೆಯ ಕಾರ್ಯಾರಂಭಕ್ಕೆ ಯಾವುದೇ ಬೆಂಬಲ ಸಿಗಲಿಲ್ಲ. ಇದೀಗ ‘ರಫೇಲ್‌’ನಂತೆಯೇ ‘ತೇಜಸ್‌’ನದೂ ಎರಡು ಸ್ಕ್ವಾಡ್ರನ್‌ಗಳು (ಒಟ್ಟು 36 ವಿಮಾನಗಳು) ವಾಯುಪಡೆ ಸೇರುತ್ತಿರುವುದರಿಂದ, ಭಾರತೀಯ ಎಂ.ಎಂ.ಆರ್‌.ಸಿ.ಎ.ಗೆ ಧನಸಹಾಯ ಸಿಗಬಹುದು. ‘ತೇಜಸ್‌’ನ ವಿನ್ಯಾಸ, ಅಭಿವೃದ್ಧಿ, ಮಾದರಿ ತಯಾರಿಕೆ, ಪರೀಕ್ಷೆಗಳನ್ನು ನಡೆಸಿದ ಸಂಪನ್ಮೂಲಗಳನ್ನು ‘ಅಡ್ವಾನ್ಸ್‌ಡ್‌ ಮೀಡಿಯಂ ಕಾಂಬ್ಯಾಟ್‌ ಏರ್‌ಕ್ರಾಫ್ಟ್‌ – ಎ.ಎಂ.ಸಿ.ಎ.’ ಯೋಜನೆಯತ್ತ ತಿರುಗಿಸುವ ಆಲೋಚನೆಯಿದೆ. ಈ ಹಿಂದೆ ರಷ್ಯಾದ ಸಹಯೋಗದೊಂದಿಗೆ ಐದನೇ ತಲೆಮಾರಿನ ಕಾದಾಟ ವಿಮಾನವನ್ನು ಹೆಚ್‌ಎಎಲ್‌ನಲ್ಲಿ ನಿರ್ಮಿಸುವ ಯೋಜನೆಯೊಂದು ಆರಂಭವಾಗಿ ನಿಂತುಹೋಗಿತ್ತು. ಸದ್ಯಕ್ಕೆ ಎ.ಎಂ.ಸಿ.ಎ.ಯಲ್ಲಿ ಐದನೇ ತಲೆಮಾರಿನ ತಂತ್ರಜ್ಞಾನಗಳನ್ನು ಅಳವಡಿಸುವ ನಿರೀಕ್ಷೆಯಿದೆ.

‘ರಫೇಲ್‌’ಗೆ ನೀಡಿರುವ ಬೆಲೆ ಹೆಚ್ಚೆ? ಕಡಿಮೆಯೆ?
ರೇಷ್ಮೆ ಸೀರೆ ಅಂಗಡಿಯಲ್ಲಿ ಯಾವ ಸೀರೆಗೆ ಯಾವ ಬೆಲೆ ನಿಗದಿಯಾದೀತೆಂಬುದಕ್ಕೆ ಹೇಗೆ ನಿರ್ದಿಷ್ಟ ಮಾನದಂಡವಿಲ್ಲವೋ, ಅದೇ ರೀತಿ ಯುದ್ಧ ವಿಮಾನಗಳ ಬಲೆಯನ್ನು ಇಂತಿಷ್ಟೇ ಎಂದು ನಿಗದಿ ಮಾಡಲಾಗದು. ಅದು ದೇಶ-ದೇಶಗಳ ನಡುವಿನ ಬಾಂಧವ್ಯದ ಮೇಲೆ, ಆ ಸಮಯದಲ್ಲಿನ ಸಧಿರ್ಧೆಯ ಮೇಲೆ, ಖರೀದಿ ಮಾಡುವ ದೇಶದ ಇಕ್ಕಟ್ಟಿನ ಪರಿಸ್ಥಿತಿಯ ಮೇಲೆ, ಅವಲಂಬಿತವಾಗಿರುತ್ತವೆ.

ಯುದ್ಧ ವಿಮಾನ ಖರೀದಿಯ ಹಿನ್ನೆಲೆಯಲ್ಲಿ ಜಾಗತಿಕ ರಾಜಕೀಯಗಳಿರುತ್ತವೆಯೆ?
ಯುದ್ಧ ವಿಮಾನಗಳ ಖರೀದಿ ಬೆಲೆ ಹೆಚ್ಚಿನ ಮೌಲ್ಯದ್ದಾದ ಕಾರಣ, ಮಾರಾಟ ಮಾಡುವ ದೇಶದ ಮುಖ್ಯಸ್ಥರೇ ಒಮ್ಮೊಮ್ಮೆ ಮಧ್ಯಸ್ಥಿಕೆ ಮಾಡುವ ಸಾಧ್ಯತೆಗಳಿರುತ್ತವೆ. ಹಿಂದೊಮ್ಮೆ ‘ಅಡ್ವಾನ್ಸ್‌ಡ್‌ ಜೆಟ್‌ ಟ್ರೈನರ್‌ – ಎ.ಜೆ.ಟಿ.) ವಿಮಾನಗಳ ಖರೀದಿಯ ಸಮಯದಲ್ಲಿ, ಬ್ರಿಟನ್ನಿನ ಕಂಪನಿಗೆ ಆರ್ಡರ್‌ ಸಿಗುವುದಿಲ್ಲವೆಂಬ ಸುಳಿವು ಸಿಕ್ಕೊಡನೆ, ‘ಜಾಗ್ವಾರ್‌’ ಸೇರಿದಂತೆ ಈ ಹಿಂದಿನ ವಿಮಾನ ಖರೀದಿಗಳಿಗೆ ಯಾವುದೇ ತಾಂತ್ರಿಕ ಬೆಂಬಲ ಸಿಗುವುದಿಲ್ಲವೆಂದು ಬ್ರಿಟನ್‌ ಬೆದರಿಕೆ ಹಾಕಿತ್ತು. ‘ಮಧ್ಯಂತರ ತರಬೇತಿ ವಿಮಾನ’ಕ್ಕೆ ಫ್ರಾನ್ಸಿನ ಎಂಜಿನ್‌ ಖರೀದಿಸುವುದು ಸೂಕ್ತವೆಂದು ತಾಂತ್ರಿಕ ಸಮಿತಿ ಅಭಿಪ್ರಾಯ ಕೊಟ್ಟಿದ್ದರೂ, ಆ ಸಮಯದಲ್ಲಿ ರಷ್ಯಾದೊಂದಿಗೆ ಹೆಚ್ಚಿನ ರಾಜತಾಂತ್ರಿಕ ಸಂಬಂಧವಿದ್ದ ಕಾರಣ, ಆರ್ಡರ್‌ ರಷ್ಯಾಗೆ ಹೋಯಿತು. ಏರ್‌ ಇಂಡಿಯಾಗೆ ಫ್ರಾನ್ಸ್‌ನ ‘ಏರ್‌ಬಸ್‌’ ಬದಲು ‘ಬೋಯಿಂಗ್‌’ನಿಂದ ವಿಮಾನ ಖರೀದಿಸಲು ಇಚ್ಚಿಸಿದಾಗ, ಫ್ರಾನ್ಸ್‌ನ ಪ್ರಧಾನ ಮಂತ್ರಿಗಳೇ ಭಾರತಕ್ಕೆ ಬಂದು ಒತ್ತಡ ಹೇರಿದ್ದರು.

ಕರ್ನಾಟಕದಲ್ಲಿ ಶಿಕ್ಷಣ ಪಡೆದ ಪೈಲಟ್‌ ಒಬ್ಬರು ಈ ತಂಡದಲ್ಲಿದ್ದರು ಎಂಬುದು ಹಿರಿಮೆಯೆ?
ಸೈನಿಕರಿಗೆ ವರ್ಗಾವಣೆ ಸಾಮಾನ್ಯ. ಬೆಂಗಳೂರು, ಬೀದರ್‌, ಬೆಳಗಾವಿಗಳಲ್ಲಿ ಪೋಸ್ಟಿಂಗ್‌ ಆದ ಸೈನಿಕರ ಮಕ್ಕಳು ಕರ್ನಾಟಕದ ಕೇಂದ್ರೀಯ ವಿದ್ಯಾಲಯಗಳಲ್ಲಿ ಕಲಿತಿರುತ್ತಾರೆ. ಬಾಲಾಕೋಟ್‌ನ ದಾಳಿಯ ಸಂದರ್ಭದ ವೀರರಾದ ವಿಂಗ್‌ ಕಮ್ಯಾಂಡರ್‌ ಅಭಿನಂದನ್‌ ಅವರ ತಂದೆ ಏರ್‌ ಕಮಡೋರ್‌ ವರ್ಧಮಾನ್‌ (ನಂತರ ಏರ್‌ ಮಾರ್ಷಲ್‌ ಹುದ್ದೆಯಿಂದ ನಿವೃತ್ತರಾದರು) ಬೆಂಗಳೂರಿನ ವಾಯುಪಡೆಯ ಪರೀಕ್ಷಾರ್ಥ ಹಾರಾಟ ಪ್ರಯೋಗಶಾಲೆ ‘ಏರ್‌ಕ್ರಾಫ್ಟ್‌ ಸಿಸ್ಟಮ್‌ ಟೆಸ್ಟಿಂಗ್‌ ಎಸ್ಟಾಬ್ಲಿಷ್‌ಮೆಂಟ್‌’ನ ಕಮ್ಯಾಂಡೆಂಟ್‌ ಆಗಿದ್ದರು. ಅಭಿನಂದನ್‌ ಬೆಂಗಳೂರಿನ ಎನ್‌.ಎ.ಎಲ್‌. ಕೇಂದ್ರೀಯ ವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದರು. ಈ ಲೆಕ್ಕಾಚಾರದಲ್ಲಿ ಅವರನ್ನೂ ಕರ್ನಾಟಕದವರೆಂದು ಭಾವಿಸಬಹುದು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top