ಆತ್ಮವಿಶ್ವಾಸ ಹೆಚ್ಚಿಸಿದ ರಫೇಲ್‌ – ಪರಿಣಾಮಕಾರಿ ತರಬೇತಿ, ದೇಶಿ ನಿರ್ಮಾಣ ನಡೆಯಲಿ

ಫ್ರಾನ್ಸ್‌ನಿಂದ ಐದು ರಫೇಲ್‌ ಯುದ್ಧವಿಮಾನಗಳು ಭಾರತಕ್ಕೆ ಆಗಮಿಸಿದ್ದು, ಅಂಬಾಲ ವಾಯುನೆಲೆಯಲ್ಲಿ ಇಳಿದಿವೆ. ಕಳೆದ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ರಫೇಲ್‌ ಖರೀದಿಯ ಬಗ್ಗೆ ಹೆಚ್ಚು ಚರ್ಚೆಯಾಗಿತ್ತು. ರಫೇಲ್‌ನಂಥ ಯುದ್ಧವಿಮಾನಗಳ ಖರೀದಿ ಹೊಸದಲ್ಲ, ಅಂಥ ವಿಚಾರಗಳು ಜನಸಾಮಾನ್ಯರ ನೆಲೆಯಲ್ಲಿ ಹೆಚ್ಚು ಚರ್ಚೆಯಾಗುವುದಿಲ್ಲವಾದರೂ, ರಫೇಲ್‌ ಫೈಟರ್‌ಜೆಟ್‌ಗಳ ವಿಚಾರದಲ್ಲಿ ಹಾಗಾಗಿಲ್ಲ. ದೇಶದ ಜನತೆ ಕುತೂಹಲದಿಂದ ಇವುಗಳನ್ನು ನೋಡಿದ್ದಾರೆ. ಇವುಗಳ ಬಗ್ಗೆ ಸಾಕಷ್ಟು ಉತ್ಪ್ರೇಕ್ಷೆಯೂ ಹಬ್ಬಿದೆ; ಹಾಗೇ ಉಡಾಫೆಯೂ ಕೆಲವು ವಲಯದಲ್ಲಿ ಇದೆ. ಈ ಎರಡೂ ವೈಖರಿಗಳನ್ನು ಕೈಬಿಟ್ಟು ವಸ್ತುನಿಷ್ಠವಾಗಿ ಈ ವಿಚಾರವನ್ನು ನೋಡುವುದು ಒಳ್ಳೆಯದು. ರಕ್ಷಣಾ ಸಚಿವರು ರಫೇಲ್‌ ವಿಮಾನಗಳನ್ನು ಸ್ವೀಕರಿಸುತ್ತ, ‘‘ನಮ್ಮ ಮೇಲೆ ಕೈ ಮಾಡಬಯಸುವವರಿಗೆ ಇವು ಪಾಠ ಕಲಿಸಲಿವೆ,’’ ಎಂದಿದ್ದಾರೆ. ಇವು ರಫೇಲ್‌ ನಮ್ಮಲ್ಲಿ ಮೂಡಿಸಿದ ಆತ್ಮವಿಶ್ವಾಸದಿಂದ ಹುಟ್ಟಿದ ಮಾತುಗಳು.
ಭವಿಷ್ಯದಲ್ಲಿ ಯುದ್ಧಗಳು ಭೂಮಿಯ ಮೇಲೆ ನಡೆಯುವುದಿಲ್ಲ. ಆಕಾಶದಲ್ಲೂ ಬಾಹ್ಯಾಕಾಶದಲ್ಲೂ ನಡೆಯುತ್ತವೆ. ಆದ್ದರಿಂದಲೇ ಬಲಿಷ್ಠ ವಾಯುಸೇನೆ ಭಾರತಕ್ಕೆ ಅಗತ್ಯವಾಗಿದೆ. ನಮ್ಮ ವಾಯುಸೇನೆಗೆ ಭೀಮಬಲ ತುಂಬಿದ ರಫೇಲ್‌ ಅತ್ಯಾಧುನಿಕ ಯುದ್ಧವಿಮಾನ. ಇಂಥ ವಿಮಾನ ಅಮೆರಿಕ, ಫ್ರಾನ್ಸ್‌, ಇಸ್ರೇಲ್‌ ಮುಂತಾದ ಕೆಲವೇ ದೇಶಗಳ ಬಳಿ ಇವೆ. ಚೀನಾ ಇಂಥ ಒಂದು ವಿಮಾನವನ್ನು ಸ್ವತಃ ನಿರ್ಮಿಸುತ್ತಿದ್ದು, ಅದರ ಪರೀಕ್ಷೆ ಇನ್ನಷ್ಟೇ ಆಗಬೇಕಿದೆ. ಅತಿ ನಿಖರವಾದ ರೇಡಾರ್‌, ಶತ್ರು ರೇಡಾರ್‌ಗಳನ್ನು ಗಲಿಬಿಲಿಗೊಳಿಸಿ ತಪ್ಪಿಸಿಕೊಳ್ಳಬಲ್ಲ ಎಲೆಕ್ಟ್ರಾನಿಕ್‌ ವ್ಯವಸ್ಥೆ, ಕ್ಷಿಪಣಿ ಲಾಂಚಿಂಗ್‌ ವ್ಯವಸ್ಥೆ, ಲೇಸರ್‌ ನಿರ್ದೇಶಿತ ಬಾಂಬ್‌ ಹೀಗೆ ಹಲವು ಆಯುಧಗಳನ್ನು ಇದು ಹೊಂದಿದೆ. ಭಾರತದಂಥ ದೊಡ್ಡ ರಾಷ್ಟ್ರಕ್ಕೆ, ಸುತ್ತಮುತ್ತ ಹಲವು ಶತ್ರುದೇಶಗಳನ್ನು ಹೊಂದಿರುವ ದೇಶಕ್ಕೆ ಇಂಥ ಮಾರಕ ಯುದ್ಧವಿಮಾನ ಅತೀ ಅಗತ್ಯ. ಬಾಲಾಕೋಟ್‌ನಲ್ಲಿ ಉಗ್ರರ ಕ್ಯಾಂಪ್‌ಗಳ ಮೇಲೆ ನಿರ್ದಿಷ್ಟ ದಾಳಿ ನಡೆಸಿದ ಭಾರತ ವಾಯುಸೇನೆಯ ಪರಾಕ್ರಮ ಏನು ಸಣ್ಣದಲ್ಲ; ರಫೇಲ್‌ನಂಥ ಜೆಟ್‌ಗಳಿಂದ ಇಂಥ ದಾಳಿಗಳಿಗೆ ಇನ್ನಷ್ಟು ನಿಖರತೆ, ಪರಿಣಾಮಕಾರಿತನ ಬರುತ್ತದೆ. ಆದ್ದರಿಂದಲೇ ಭಾರತಕ್ಕೆ ರಫೇಲ್‌ ಆಗಮನಕ್ಕೆ ಪಾಕಿಸ್ತಾನ ಆತಂಕದಲ್ಲಿ ಪ್ರತಿಕ್ರಿಯಿಸಿದೆ. ಹೀಗಾಗಿ ರಫೇಲ್‌ನಂಥ ಆತ್ಮವಿಶ್ವಾಸವರ್ಧಕ ಯುದ್ಧವಿಮಾನಗಳಿಗೆ ನೀಡುವ ಬೆಲೆ ಹೆಚ್ಚಲ್ಲ.
ಎಷ್ಟೇ ಆಧುನಿಕ ತಂತ್ರಜ್ಞಾನ ಹೊಂದಿದ್ದರೂ ಅದನ್ನು ಬಳಸಬಲ್ಲ ತಜ್ಞತೆ ಇದ್ದಾಗ ಮಾತ್ರ ಅದು ಉಪಯೋಗಕಾರಿ. ಸದ್ಯ ಬಂದಿರುವ ಐದು ವಿಮಾನಗಳಲ್ಲಿ ಎರಡು ತರಬೇತಿ ವಿಮಾನಗಳು. ಇಂಥ ಇನ್ನಷ್ಟು ವಿಮಾನಗಳು ಇದ್ದಾಗ ಹಾಗೂ ಇದನ್ನು ಬಳಸುವ ಪರಿಣತ ಪೈಲಟ್‌ಗಳು ಇದ್ದಾಗ ಇವು ಪರಿಣಾಮಕಾರಿ. ಬಾಲಾಕೋಟ್‌ ದಾಳಿಯ ಸಂದರ್ಭದಲ್ಲಿ ವಿಂಗ್‌ ಕಮ್ಯಾಂಡರ್‌ ಅಭಿನಂದನ್‌ ಅವರು ಮೂರನೆಯ ತಲೆಮಾರಿನ ‘ಮಿಗ್‌-21’ ವಿಮಾನದ ಸಾರಥಿಯಾಗಿದ್ದರೂ, ಪಾಕಿಸ್ತಾನದ ನಾಲ್ಕನೆಯ ತಲೆಮಾರಿನ ‘ಎಫ್‌-16’ ವಿಮಾನವನ್ನು ಹೊಡೆದುರುಳಿಸಿದ್ದನ್ನು ಇಲ್ಲಿ ನೆನೆಯಬಹುದು. ಭಾರತ ವಾಯುಯುದ್ಧದಲ್ಲಿ ಸಾಕಷ್ಟು ಪಳಗಿದೆ. ಹಾಗೆಯೇ ಇಂಥದೊಂದು ವಿಮಾನವನ್ನು ಚೀನಾ ಸ್ವತಃ ನಿರ್ಮಿಸುತ್ತಿದೆ ಎಂಬುದೂ ನಮಗೆ ಪಾಠವಾಗಬೇಕು. ನಾವು ಕೂಡ ಸ್ಥಳೀಯವಾಗಿ ಇಂಥ ವಿಮಾನಗಳನ್ನು ನಿರ್ಮಿಸಿಕೊಳ್ಳಬಲ್ಲೆವು. ತೇಜಸ್‌ನಂಥ ವಿಮಾನಗಳು ಇದಕ್ಕೆ ಉದಾಹರಣೆ. ಆದರೆ ತೇಜಸ್‌ ನಿರ್ಮಾಣಕ್ಕೆ ಕೂಡ ರಾಜಕೀಯದ ಹಿನ್ನೆಲೆಯಲ್ಲಿ ಅಡಚಣೆ ಉಂಟಾಗಿತ್ತು. ರಕ್ಷಣೆಯ ವಿಚಾರದಲ್ಲಿ ರಾಜಕೀಯ ನಡೆಯಬಾರದು. ನಮ್ಮಲ್ಲಿ ಸಾಕಷ್ಟು ರಕ್ಷಣಾ ಬಜೆಟ್‌ ಇದೆ; ಡಿಆರ್‌ಡಿಒ, ಎಚ್‌ಎಎಲ್‌, ಇಸ್ರೋನಂಥ ದೇಶದ ಆತ್ಮವಿಶ್ವಾಸ ಹೆಚ್ಚಿಸಿದ ಸಂಸ್ಥೆಗಳಿವೆ. ಪರಿಣತ ತಜ್ಞರೂ ಹಾಗೂ ಶ್ರದ್ಧಾವಂತ ಸೇನಾನಿಗಳೂ ಇದ್ದಾರೆ. ಇವೆಲ್ಲವೂ ಜೊತೆಗೆ ಆತ್ಮನಿರ್ಭರ ಕ್ರಮಗಳೂ ಸೇರಿದಾಗ ರಫೇಲ್‌ನಂಥ ವಿಮಾನಗಳು ನಮ್ಮಲ್ಲೇ ನಿರ್ಮಾಣವಾಗಿ ಎದುರಾಳಿಗಳ ಎದೆ ನಡುಗುವಂತಾದೀತು. ತೇಜಸ್‌ಗೆ ಬಳಸಿದ ಸಂಪನ್ಮೂಲಗಳಿಂದಲೇ ಇನ್ನಷ್ಟು ಮುಂದುವರಿದ ಫೈಟರ್‌ಜೆಟ್‌ಗಳನ್ನು ವಿನ್ಯಾಸಗೊಳಿಸಿ ನಿರ್ಮಿಸುವ ಯೋಜನೆಯಿದ್ದು, ಅದೂ ಶೀಘ್ರದಲ್ಲೇ ಈಡೇರಲಿ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top