ಕ್ವಾರಂಟೈನ್ ಮೇಲೆ ನಿಂತಿದೆ ನಾಡಿನ ಆರೋಗ್ಯ ಭವಿಷ್ಯ

ಪರೀಕ್ಷೆಯೇ ಸವಾಲು | ಆಸ್ಪತ್ರೆಗಳನ್ನು ಇನ್ನಷ್ಟು ಸುಸಜ್ಜಿತಗೊಳಿಸುವ ತುರ್ತು | ಕೆಲವೆಡೆ ಲಾಕ್‌ಡೌನ್‌ ಅನಿವಾರ್ಯ.

ವಿಕ ಬ್ಯೂರೊ, ಬೆಂಗಳೂರು.
ವಲಸೆ ಕಾರ್ಮಿಕರ ಆಗಮನದಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ದಿನೇದಿನೆ ಏರುತ್ತಿದೆ. ಬಂದವರೆಲ್ಲ ಕ್ವಾರಂಟೈನ್‌ನಲ್ಲಿದ್ದಾರೆ ನಿಜ. ಆದರೆ ಈ ವ್ಯವಸ್ಥೆ ಅಷ್ಟೇನು ಪ್ರಬಲವಾಗಿಲ್ಲ. ಇದನ್ನು ಸಬಲಗೊಳಿಸದೆ ಇದ್ದರೆ ಇಡೀ ರಾಜ್ಯ ಅಪಾಯಕ್ಕೆ ಸಿಲುಕಿಕೊಳ್ಳುತ್ತದೆ. ಸೋಂಕು ಸಮುದಾಯದ ಹಂತಕ್ಕೆ ಹಬ್ಬಿಕೊಳ್ಳುತ್ತದೆ. ಇಲ್ಲಿರುವ ವಿವರಗಳು ರಾಜ್ಯ ಇನ್ನಷ್ಟು ಶಕ್ತಿ ಮತ್ತು ಸಂಪನ್ಮೂಲಗಳನ್ನು ಹೆಚ್ಚಿಸುವ ತುರ್ತನ್ನು ಹೇಳುತ್ತಿವೆ. ಪರೀಕ್ಷಾ ಪ್ರಕ್ರಿಯೆ ಮತ್ತು ವರದಿ ಕೈ ಸೇರುವ ಪ್ರಮಾಣವೂ ಆಶಾದಾಯಕವಾಗಿಲ್ಲ. ವಿಜಯಪುರ, ಉಡುಪಿ, ಕಲಬುರಗಿ ಮೊದಲಾದ ಜಿಲ್ಲೆಗಳಲ್ಲಿ ಸಾವಿರಾರು ಮಂದಿಯ ರಿಪೋರ್ಟ್ ಬರಬೇಕಾಗಿದೆ. ಸಮುದಾಯದ ಹಂತಕ್ಕೆ ಹಬ್ಬದಂತೆ ವೈರಾಣುವಿಗೆ ಲಗಾಮು ಹಾಕಿರುವುದೇ ರಾಜ್ಯದ ಸಾಧನೆ. ಆತಂಕ ಮತ್ತು ಆಶಾವಾದವನ್ನು ಒಟ್ಟೊಟ್ಟಿಗೆ ಉಂಟು ಮಾಡುವ ಕೊರೊನಾ ಸ್ಥಿತಿ-ಗತಿ ಜಿಲ್ಲಾವಾರು ನೋಟ.

ಪರೀಕ್ಷೆಯಲ್ಲಿ ಆಮೆ ಗತಿ
ವಿಜಯಪುರ: ಜಿಲ್ಲೆಯಲ್ಲಿ ಗುರುವಾರದ ತನಕ 134 ಒಟ್ಟು ಸೋಂಕಿತರ ಪೈಕಿ 67 ಸಕ್ರಿಯರಿದ್ದಾರೆ. ಮಹಾರಾಷ್ಟ್ರದಿಂದ ಬಂದ 17,500 ವಲಸೆ ಕಾರ್ಮಿಕರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪೈಕಿ 67 ಪಾಸಿಟಿವ್, 12,933 ನೆಗೆಟಿವ್ ಬಂದಿದೆ. 4500 ಮಂದಿಯ ಪರೀಕ್ಷಾ ವರದಿ ಇನ್ನೂ ಬಂದಿಲ್ಲ. ಪರೀಕ್ಷೆಯದ್ದೇ ಇಲ್ಲಿದೊಡ್ಡ ಸವಾಲು. ವಲಸೆ ಕಾರ್ಮಿಕರನ್ನು ಕಡ್ಡಾಯವಾಗಿ ಕ್ವಾರಂಟೈನ್ ಮಾಡುತ್ತಿರುವುದರಿಂದ ಸೋಂಕು ಸಮುದಾಯ ಹಂತಕ್ಕೆ ತಲುಪುವ ಸಾಧ್ಯತೆ ಇಲ್ಲ. ಆದರೆ ಕ್ವಾರಂಟೈನ್ ಕೇಂದ್ರಗಳ ಅವ್ಯವಸ್ಥೆ ಸರಿಯಾಗದಿದ್ದರೆ ಅದು ಅಪಾಯಕಾರಿಯಾಗಿ ಪರಿಣಿಮಿಸಲಿದೆ. ಸದ್ಯಕ್ಕೆ 67 ಮಂದಿ ಕೋವಿಡ್ ಪೀಡಿತರಿದ್ದು, 300 ಹಾಸಿಗೆಯ ಆಸ್ಪತ್ರೆ ಇದೆ. ಕ್ವಾರಂಟೈನ್ ನಂತರವೂ ನಿಗಾ ವ್ಯವಸ್ಥೆ ಇಟ್ಟರೆ ವಿಜಯಪುರ ಗ್ರೀನ್ ಝೋನ್‌ನಲ್ಲಿರಬಲ್ಲದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಗೋವಾ ಮತ್ತು ಮಹಾರಾಷ್ಟ್ರದಿಂದ ಈಗಾಗಲೇ ಬಹುತೇಕ ಕಾರ್ಮಿಕರು ಬಂದಿದ್ದಾರೆ. ಪ್ರಕರಣಗಳ ಸಂಖ್ಯೆ ತೀವ್ರವಾಗುವ ಸಾಧ್ಯತೆ ಕಡಿಮೆ ಎಂಬುದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ‘ಪಾಸಿಟಿವ್’ ಲೆಕ್ಕಾಚಾರ ಮಂಡಿಸುತ್ತಾರೆ.

ಅಲ್ಲಾಡುತ್ತಿದೆ ಯಾದಗಿರಿ
ಯಾದಗಿರಿ: ಮೇ 25ರಿಂದ ಕೇವಲ ಒಂದೇ ವಾರದಲ್ಲಿಯೇ ಜಿಲ್ಲೆಯಲ್ಲಿ 172 ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ಬಂದಿರುವುದು ಭಾರಿ ಆಘಾತ ಉಂಟು ಮಾಡಿದೆ. ಮಹಾರಾಷ್ಟ್ರದಿಂದ ವಾಪಸು ಬಂದಿರುವ ವಲಸೆ ಕಾರ್ಮಿಕರಿಗೆ ಕೊರೊನಾ ವೈರಸ್ ತಗುಲಿದೆ. ಎಲ್ಲರನ್ನೂ ಮುನ್ನೆಚ್ಚರಿಕೆ ಕ್ರಮವಾಗಿ ಕ್ವಾರಂಟೈನ್ ಕೇಂದ್ರಗಳಲ್ಲಿ ಇಡಲಾಗಿದೆ. ಆದರೆ ಅಲ್ಲಿಂದಲೂ ಕೊರೊನಾ ಪ್ರಕರಣಗಳು ನಿತ್ಯ ಸಿಡಿಯುತ್ತಿವೆ. ಜಿಲ್ಲೆಯಲ್ಲಿ ಕೊರೊನಾ ವೈರಸ್ ಟೆಸ್ಟಿಂಗ್ ಲ್ಯಾಬ್ ಇನ್ನೂ ಆರಂಭವಾಗಿಲ್ಲ. ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಕೋವಿಡ್-19 ಆಸ್ಪತ್ರೆ ಸೇರಿದಂತೆ ನಾನಾ ಕಡೆಯಲ್ಲಿ 1,000 ಬೆಡ್ ವ್ಯವಸ್ಥೆ ಮಾಡಲಾಗಿದೆ ಎಂಬುದೇ ಸಮಾಧಾನಕರ.

ಸೋಂಕಿತರ ಸಂಖ್ಯೆ ಏರಿಕೆ ಭರಾಟೆ
ಕಲಬುರಗಿ: ಮೇ 25ರಂದು 177 ಸೋಂಕಿತರಿದ್ದರೆ ಜೂ.5ಕ್ಕೆ ಈ ಪ್ರಮಾಣ 375ಕ್ಕೆ ತಲುಪಿದೆ. ಮುಂಬಯಿನಿಂದ ವಲಸೆ ಬಂದ ಕಾರ್ಮಿಕರ ‘ಕಾಣಿಕೆ’ ಹೆಚ್ಚಿದೆ. ಒಟ್ಟು 5851 ಮಂದಿಯ ಪರೀಕ್ಷಾ ವರದಿ ಬರಬೇಕಾಗಿದೆ. ಈ ವರದಿ ಜಿಲ್ಲಾಡಳಿತದ ಹೊಣೆ ಹೆಚ್ಚಿಸುವುದಲ್ಲದೆ ಜನರ ಭೀತಿಯನ್ನೂ ಮುಮ್ಮಡಿಗೊಳಿಸಲಿದೆ. ಸದ್ಯಕ್ಕೆ ಸದ್ಯಕ್ಕೆ ಇಲ್ಲಿನ ಇಎಸ್ಐಸಿ ಮತ್ತು ಜಿಮ್ಸ್ ಜಿಲ್ಲಾಸ್ಪತ್ರೆಯಲ್ಲಿ ಸ್ಥಾಪಿಸಲಾಗಿರುವ ಎರಡು ಪ್ರತ್ಯೇಕ ಕೋವಿಡ್ ಆಸ್ಪತ್ರೆಗಳಲ್ಲಿ ಒಟ್ಟು 170 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ 59 ಸೋಂಕಿತರಿಗೆ ಐಸೊಲೇಷನ್ ವಾರ್ಡ್‌ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರ ಪ್ರಮಾಣ ಗಮನಿಸಿದರೆ ಇದು ಯಾತಕ್ಕೂ ಸಾಲದು. ಮುಂಬಯಿ ನಗರದಿಂದ ವಾಪಸ್ ಆಗಿರುವ ಜನರಲ್ಲಿ ಸೋಂಕು ಕಂಡುಬರುತ್ತಿದೆಯೇ ಹೊರತು; ಸ್ಥಳೀಯರ ಪೈಕಿ ಯಾರಿಗೂ ಸೋಂಕು ತಗುಲಿದ ನಿದರ್ಶನಗಳಿಲ್ಲ ಎಂದು ಜಿಲ್ಲಾಧಿಕಾರಿ ಬಿ.ಶರತ್ ಸಮಾಧಾನ ಹೇಳಿದ್ದಾರೆ.

ನುಸುಳುಕೋರರಿಂದ ಬೆಳಗಾವಿ ಬೇಗೆ
ಬೆಳಗಾವಿ: ಕಳೆದೊಂದು ವಾರದಲ್ಲಿ(ಮೇ 25ರಿಂದ) 40 ಪಾಸಿಟಿವ್ ಪ್ರಕರಣ ದಾಖಲಾಗಿದೆ. ಇದರಲ್ಲಿ 8 ಜನ ಬಾಗಲಕೋಟೆ ಮೂಲದವರು. ಶೇ.75 ರಷ್ಟು ಮಂದಿ ಮಹಾರಾಷ್ಟ್ರ ಪ್ರವಾಸ ಹಿನ್ನೆಲೆ ಹೊಂದಿದ್ದಾರೆ. ಸದ್ಯ 2374 ಜನರ ಗಂಟಲು ಮಾದರಿ ವರದಿ ಬರಬೇಕಿದ್ದು, ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಪಕ್ಕದ ಮಹಾರಾಷ್ಟ್ರದಿಂದ ರಸ್ತೆ ಮಾರ್ಗ ಮೂಲಕ ಬಂದವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ದಾಖಲಾಗಿದೆ. ಆದರೆ, ಕಳ್ಳ ದಾರಿಯಿಂದ ಸಾಕಷ್ಟು ಜನರು ಜಿಲ್ಲೆ ಪ್ರವೇಶ ಮಾಡಿದ್ದಾರೆ. ಕೆಲವರಿಗೆ ಕ್ವಾರಂಟೈನ್ ಮುಗಿಸಿ ಮನೆಗೆ ಹೋದ ನಂತರ ಕೊರೊನಾ ಕಾಣಿಸಿದೆ. ಹಾಗಾಗಿ ಸಮುದಾಯದಲ್ಲಿ ಸೇರಿಕೊಂಡಿರುವ ಬಗ್ಗೆ ಅಲ್ಲಗಳೆಯಲು ಸಾಧ್ಯವಿಲ್ಲ. ಕೊರೊನಾ ಸೋಂಕಿತರ ತಪಾಸಣೆ ವರದಿಗಳು ತಡವಾಗಿ ಬರುತ್ತಿವೆ. ಈಚೆಗೆ ವರದಿ ಬರುವ ಮೊದಲೇ ಸುಮಾರು 600 ಜನರನ್ನು ಕ್ವಾರಂಟೈನ್ ಕೇಂದ್ರದಿಂದ ಜಿಲ್ಲಾಡಳಿತ ಮನೆಗೆ ಕಳುಹಿಸಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ದೂರಿದ್ದರು. ಅದರಂತೆ ವರದಿ ಬರುವ ಮೊದಲೇ ಮನೆಗೆ ಕಳುಹಿಸಿದ ನಾಲ್ವರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಇದರಿಂದ ಸತೀಶ್ ಜಾರಕಿಹೊಳಿ ಅವರ ಯಮಕನಮರಡಿ ಕ್ಷೇತ್ರದಲ್ಲಿ ಆತಂಕ ಆವರಿಸಿದೆ.

ಲಾಕ್ ಓಪನ್ ಬೇಡ ತಜ್ಞರ ಎಚ್ಚರಿಕೆ
ಬೆಳಗಾವಿ: ಮಹಾರಾಷ್ಟ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಸಮುದಾಯದಲ್ಲಿ ಕೊರೊನಾ ವಿಸ್ತರಣೆ ಆಗಿದೆ. ಕೈಗಾರಿಕೆ, ಉದ್ಯೋಗಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಅಲ್ಲಿಗೆ ಹೋಗುತ್ತಾರೆ. ಆರ್ಥಿಕ ಸುಧಾರಣೆ ಕಾರಣ ಹೇಳಿ ಸಡಿಲಿಕೆ ಮಾಡಿದರೆ, ಅದಕ್ಕಿಂತ ಹತ್ತಾರು ಪಟ್ಟು ಖರ್ಚು ಮಾಡಬೇಕಾದ ಪರಿಸ್ಥಿತಿ ಎದುರಾಗಬಹುದು. ಹಾಗಾಗಿ ಕಡ್ಡಾಯವಾಗಿ ನಿಯಮವನ್ನು ಇನ್ನಷ್ಟು ಕಠಿಣಗೊಳಿಸಬೇಕು.

ವರದಿ ಬರುವ ಮುಂಚೆ ಡಿಸ್ಚಾರ್ಜ್ !
ಉಡುಪಿ: ಇಲ್ಲಿಈಗ ಸಕ್ರಿಯ ಪ್ರಕರಣಗಳ ಸಂಖ್ಯೆ 481. ಒಂದು ವಾರದಲ್ಲಿ 700 ಗಡಿ ದಾಟುವ ಸಾಧ್ಯತೆ ಗೋಚರಿಸಿದೆ. ವರದಿ ವಿಳಂಬವಾಗುತ್ತಿರುವ ಆರೋಪ ಜಿಲ್ಲೆಯಲ್ಲೂ ಇದೆ. ಪರೀಕ್ಷೆಗೆ ಮಾದರಿ ಸಂಗ್ರಹಿಸಿದ ಬಹುತೇಕ ಮಂದಿಯನ್ನು ಮನೆಗೆ ಬಿಡಲಾಗಿದೆ. ಪಾಸಿಟಿವ್ ಬಂದ ಬಳಿಕ ಸಂಪರ್ಕಿಸುವ ವ್ಯವಸ್ಥೆ ಇದೆ. ಇದು ಅಪಾಯಕ್ಕೆ ಆಹ್ವಾನ ಕೊಟ್ಟಂತಾಗಿದೆ.

ಪರಾರಿ ಪ್ರಸಂಗ
ರಾಯಚೂರು: ಕೊರೊನಾ ಸೋಂಕು ಹರಡದಂತೆ ತಡೆಯಲು ಜಿಲ್ಲಾಡಳಿತ ಸ್ಥಾಪಿಸಿದ ಕ್ವಾರಂಟೈನ್ ಕೇಂದ್ರಗಳಿಂದ ಮೂವರು ತಪ್ಪಿಸಿಕೊಂಡು ಮತ್ತೆ ಪೊಲೀಸರ ವಶಕ್ಕೆ ಸಿಕ್ಕುಬಿದ್ದಿದ್ದಾರೆ. ಇದರ ಬೆನ್ನಲ್ಲೇ ಕ್ವಾರಂಟೈನ್ ನಲ್ಲಿರುವವರು ತಮ್ಮದಲ್ಲದ ಮೊಬೈಲ್ ನಂಬರ್‌ ನೀಡಿದ್ದಾರೆ. ರಾಯಚೂರಿನ ಮಸ್ಕಿಯಲ್ಲಿ ‘ಸರಕಾರಿ ನಿಗಾ’ದಲ್ಲಿದ್ದ ಮೂವರು ಜೂ. 3 ರಂದು ಪರಾರಿಯಾಗಿದ್ದರು. ಇದೀಗ ಪೊಲೀಸರು ಅವರನ್ನು ಕರೆ ತಂದಿದ್ದಾರೆ. ಒಂದು ವೇಳೆ ಇವರಿಗೆ ಸೋಂಕು ಇರುವುದು ದೃಢಪಟ್ಟರೆ ಎರಡು ದಿನಗಳ ಕಾಲ ಇವರ ನಿಗೂಢ ‘ಸಂಚಾರ ಚರಿತ್ರೆ’ಯನ್ನು ಜಿಲ್ಲಾಡಳಿತ ಶೋಧಿಸಬೇಕಾಗುತ್ತದೆ. ಸರಕಾರಿ ಪೋಷಿತ ನಿಗಾ ಕೇಂದ್ರಗಳಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ.
ಮೊಬೈಲ್ ಕಣ್ಕಟ್ಟು: ರಾಯಚೂರಿನಲ್ಲಿ 206 ಮಂದಿ 206 ಜನ ತಮ್ಮದಲ್ಲದ ಮೊಬೈಲ್ ನಂಬರ್ ನೀಡಿದ್ದಾರೆ ಎನ್ನಲಾಗಿದೆ. ಇದು ನಿಜಕ್ಕೂ ಆತಂಕಕಾರಿ.

ಭೀತಿ ನಿವಾರಿಸಿರುವ ವ್ಯವಸ್ಥೆ
ಚಿಕ್ಕಬಳ್ಳಾಪುರ: ಕಳೆದೊಂದು ವಾರದಲ್ಲಿ(ಮೇ 25ರಿಂದ) ಜಿಲ್ಲೆಯಲ್ಲಿ 63 ಸೊಂಕು ಪ್ರಕರಣಗಳು ಹೆಚ್ಚಾಗಿವೆ. ಈಗಿನ ವೇಗ ನೋಡಿದರೆ ಮುಂದಿನ ಒಂದು ವಾರದಲ್ಲಿ ಸೊಂಕಿತರ ಸಂಖ್ಯೆ 150 ದಾಟಬಹುದು. ಜಿಲ್ಲಾಸ್ಪತ್ರೆಗಳಲ್ಲಿ ವ್ಯಾಪಕ ಸಿದ್ಧತೆ ಮಾಡಿಕೊಳ್ಳಲಾಗಿದೆ. ಭಯ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಡಳಿತ ಆತ್ಮವಿಶ್ವಾಸದಿಂದ ಹೇಳುತ್ತದೆ.

ಮತ್ತೆ ಲಾಕ್‌ಡೌನ್‌ ಅಗತ್ಯ
ಬೀದರ್: ಜಿಲ್ಲೆಯಲ್ಲಿ ಸದ್ಯಕ್ಕೆ 175 ಪ್ರಕರಣಗಳಿದ್ದು, ಈ ಪೈಕಿ 129 ಸಕ್ರಿಯ ಸೋಂಕಿತರಿದ್ದಾರೆ. ಕಳೆದ ಒಂದು ವಾರದಲ್ಲಿ ಜಿಲ್ಲೆಯಲ್ಲಿ 86 ಕೊರೊನಾ ಪ್ರರಕಣಗಳು ಹೆಚ್ಚಾಗಿವೆ. ಮಹಾರಾಷ್ಟ್ರದಿಂದ ಸಾಕಷ್ಟು ಜನರು ಬಂದಿರುವುದರಿಂದ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುವ ಸಂಭವವಿದೆ. ಪ್ರಕರಣಗಳ ಸಂಖ್ಯೆ ತೀವ್ರವಾಗಿ ಹೆಚ್ಚಿದಾಗ ಮತ್ತೆ ಸಂಪೂರ್ಣ ಲಾಕ್‌ಡೌನ್‌ ಮಾಡಬೇಕು ಎಂಬುದು ತಜ್ಞರ ಅಭಿಪ್ರಾಯವಾಗಿದೆ

ಉಲ್ಬಣಿಸಿದರೆ ಬಿಕ್ಕಟ್ಟು
ಮೈಸೂರು: ಸಕ್ರಿಯ ಪ್ರಕರಣಗಳು-6 ಆಗಿದ್ದು, ಕಳೆದ ಒಂದು ವಾರದಲ್ಲಿ 2 ಪ್ರಕರಣಗಳು ಹೆಚ್ಚಾಗಿವೆ. ಜಿಲ್ಲಾಸ್ಪತ್ರೆ ಹಾಗೂ ಬಿಎಂಎಚ್ ಆಸ್ಪತ್ರೆಗಳನ್ನು ಕೋವಿಡ್ ಆಸ್ಪತ್ರೆಗಳಾಗಿ ಮಾರ್ಪಡಿಸಲಾಗಿದೆ. ಸುಮಾರು ಎರಡು ಸಾವಿರ ವೈದ್ಯರು, ನರ್ಸ್‌ಗಳಿಗೆ ಆನ್ಲೈನ್ ತರಬೇತಿ ನೀಡಲಾಗಿದೆ. 28 ವೆಂಟಿಲೇಟರ್ ಸೌಲಭ್ಯ ಇದೆ. ನಗರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾದಲ್ಲಿ ಚಿಕಿತ್ಸೆ ನೀಡಲು ಮುನ್ನೆಚ್ಚರಿಕೆಯಾಗಿ ಐದಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳನ್ನು ಕಾಯ್ದಿರಿಸಲಾಗಿದೆ. ಒಟ್ಟು 4000 ಮಂದಿಗೆ ಚಿಕಿತ್ಸೆ ನೀಡಲು ಬೆಡ್‌ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ತಜ್ಞರು ಮುಂದಿನ ದಿನಗಳಲ್ಲಿ ಮೈಸೂರಿನಲ್ಲಿ 10,000 ಗಡಿ ದಾಟಬಹುದು ಎಂದು ಅಂದಾಜಿಸಿದ್ದಾರೆ.

ಸೋಂಕಿನ ಜತೆ ಸೆಣಸಾಟ
ಮಂಡ್ಯ: ಜಿಲ್ಲೆಯಲ್ಲಿ ಈವರೆಗೆ 317 ಕೊರೊನಾ ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿವೆ. ಇದರಲ್ಲಿ 133 ಮಂದಿ ಗುಣಮುಖರಾಗಿದ್ದು, 184 ಜನರಲ್ಲಿ ವೈರಸ್ ಸಕ್ರಿಯವಾಗಿದೆ. ಮೇ 25ರಿಂದ ಈವರೆಗೆ 33 ಪ್ರಕರಣಗಳು ಹೆಚ್ಚಾಗಿವೆ. ಮುಂದಿನ ಒಂದು ವಾರದಲ್ಲೂ ಇಷ್ಟೇ ಸಂಖ್ಯೆಯಲ್ಲಿ ಪಾಸಿಟಿವ್ ವರದಿಗಳು ಬರುವ ಸಾಧ್ಯತೆಯಿದೆ. ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ(ಮಿಮ್ಸ್‌) ಬೋಧಕ ಆಸ್ಪತ್ರೆಯು ಸದ್ಯಕ್ಕೆ ಕೋವಿಡ್ ಆಸ್ಪತ್ರೆಯಾಗಿದೆ.

ಕ್ವಾರಂಟೈನ್ ದಿನಗಳ ಸಮಸ್ಯೆ
ಹಾಸನ: ಜಿಲ್ಲೆಯಲ್ಲಿ ಸದ್ಯ ಸಕ್ರಿಯ ಸೋಂಕಿತರ ಸಂಖ್ಯೆ 172. ಮೇ 25ಕ್ಕೆ 98 ಇದ್ದದ್ದು, ಈಗ 172ಕ್ಕೆ ಏರಿಕೆಯಾಗಿದೆ. ಸದ್ಯಕ್ಕೆ 1524 ಜನ ಕ್ವಾರಂಟೈನ್‌ನಲ್ಲಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಮುಂದಿನ ಒಂದು ವಾರದಲ್ಲಿ 300 ಗಡಿ ತಲುಪಬಹುದು ಎಂಬ ನಿರೀಕ್ಷೆ ಇದೆ. ಜಿಲ್ಲೆಯಲ್ಲಿ ವೈದ್ಯ ಕಾಲೇಜಿಗೆ ಹೊಂದಿಕೊಂಡು ಇರುವ ಕೋವಿಡ್ ಆಸ್ಪತ್ರೆಯಲ್ಲಿ 400 ಬೆಡ್ ಇದೆ. 19 ವೆಂಟಿಲೇಟರ್ ಇದೆ. ಹೊಸದಾಗಿ ಹತ್ತು ಮಂಜೂರಾಗಿದ್ದು, ಶೀಘ್ರವೇ ಬರಲಿದೆ ಎಂದು ಹಿಮ್ಸ್ ನಿರ್ದೇಶಕ ಡಾ.ರವಿಕುಮಾರ್ ತಿಳಿಸಿದ್ದಾರೆ. ಕ್ವಾರಂಟೈನ್‌ನಲ್ಲಿ ಇರುವವರನ್ನು 7 ದಿನಕ್ಕೆ ಮನೆಗೆ ಕಳುಹಿಸಬೇಕು ಎಂಬ ಸರಕಾರಿ ಆದೇಶದಂತೆ ಮನೆಗೆ ಕಳುಹಿಸಿದ ಒಂದೇ ದಿನದಲ್ಲಿ ಪಾಸಿಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಆ ಕೂಡಲೇ ಕುಟುಂಬ ಸದಸ್ಯರನ್ನು ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಿದ ಪ್ರಕರಣ ಚನ್ನರಾಯಪಟ್ಟಣದಲ್ಲಿ ವರದಿಯಾಗಿದೆ.

ವೈದ್ಯರ ಬರ
ಚಿತ್ರದುರ್ಗ: ಕೋಟೆ ಊರಿನಲ್ಲಿ ಕೊರೊನಾ ಸೋಂಕಿತ 40 ಪ್ರಕರಣ ಇವೆ. ಇದರಲ್ಲಿ 20 ಪ್ರಕರಣಗಳು ಉತ್ತರ ಪ್ರದೇಶದ ವಲಸೆ ಕಾರ್ಮಿಕರದು. ಜಿಲ್ಲಾ ಆಸ್ಪತ್ರೆಯ ಪಕ್ಕದ ನೂತನ ಕಟ್ಟಡವೊಂದರಲ್ಲಿ 50 ಬೆಡ್‌ನ ಕೋವಿಡ್ ಆಸ್ಪತ್ರೆ ಸಜ್ಜುಗೊಳಿಸಲಾಗಿದೆ. ಕೊರೊನಾ ಸೇವೆಗೆ ವೈದ್ಯರ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದರೂ, ಒಂದೇ ಒಂದು ಅರ್ಜಿ ಸಲ್ಲಿಕೆಯಾಗಿಲ್ಲ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top