ಖಾಸಗಿ ಆಸ್ಪತ್ರೆ ನಾಟ್ ರೆಡಿ

– ಹಲವು ಆಸ್ಪತ್ರೆಗಳಿಂದ ಆಕ್ಷೇಪ ಸಲ್ಲಿಕೆ | 518ರಿಂದ 418ಕ್ಕಿಳಿದ ಪಟ್ಟಿ – ಸರಕಾರಿ ಆಸ್ಪತ್ರೆಯಲ್ಲಿ ಜಾಗವಿಲ್ಲದಿದ್ದರೆ ಮಾತ್ರ ಖಾಸಗಿಗೆ ಶಿಫಾರಸು.

ವಿಕ ಸುದ್ದಿಲೋಕ ಬೆಂಗಳೂರು.

ಕೊರೊನಾ ಚಿಕಿತ್ಸೆ ಇನ್ನು ಮುಂದೆ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿದೆ ಎಂದು ರಾಜ್ಯ ಸರಕಾರ ಘೋಷಿಸಿ ಆಸ್ಪತ್ರೆಗಳ ಪಟ್ಟಿಯನ್ನು ಪ್ರಕಟಿಸಿದ್ದರೂ ನಿಗದಿತ ಆಸ್ಪತ್ರೆಗಳಿನ್ನೂ ಸೇವೆ ನೀಡಲು ಸಜ್ಜಾಗಿಲ್ಲ. ಕೆಲವು ಆಸ್ಪತ್ರೆಗಳಂತೂ ತಮ್ಮಲ್ಲಿ ಕೊರೊನಾ ಚಿಕಿತ್ಸೆ ಸಾಧ್ಯವಿಲ್ಲ ಎಂದು ಕೈಚೆಲ್ಲಿವೆ. ಹೀಗಾಗಿ, ಮೊದಲ ಪಟ್ಟಿಯಲ್ಲಿದ್ದ 518 ಆಸ್ಪತ್ರೆಗಳು ಒಂದೇ ದಿನದಲ್ಲಿ 418ಕ್ಕೆ ಇಳಿದಿವೆ. ಸರಕಾರ ಸೂಚನೆ ನೀಡಿದ ಬಳಿಕವಷ್ಟೇ ಹೆಚ್ಚಿನ ಖಾಸಗಿ ಆಸ್ಪತ್ರೆಗಳು ಎಚ್ಚೆತ್ತಿದ್ದು, ಅವುಗಳು ಸಂಪೂರ್ಣ ಸಜ್ಜಾಗಲು ಕೆಲವು ದಿನ ಬೇಕಾದೀತು. ಸರಕಾರ ಸುವರ್ಣ ಆರೋಗ್ಯ ಸುರಕ್ಷ  ಟ್ರಸ್ಟ್‌ನಡಿ ಬರುವ 518 ಖಾಸಗಿ ಆಸ್ಪತ್ರೆಗಳ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ ಕೂಡಲೇ ಆಕ್ಷೇಪ ಎದುರಾಗಿತ್ತು. ಕೆಲವು ನಿರ್ದಿಷ್ಟ ಚಿಕಿತ್ಸೆಗೆ ಮೀಸಲಾದ ಆಸ್ಪತ್ರೆಗಳು, ಹೆರಿಗೆ ಆಸ್ಪತ್ರೆಗಳು; ಐದು, ಹತ್ತು ಬೆಡ್ ಇರುವ ಸಣ್ಣ ಆಸ್ಪತ್ರೆಗಳಲ್ಲೂ ಕೋವಿಡ್ ಚಿಕಿತ್ಸೆ ನೀಡಬೇಕು ಎಂದು ಸೂಚಿಸಲಾಗಿತ್ತು. ಈ ಆಕ್ಷೇಪಗಳಿಗೆ ಮಣಿದ ಸರಕಾರ ಒಂದೇ ದಿನದಲ್ಲಿ ಹೊಸ ಪಟ್ಟಿ ಬಿಡುಗಡೆ ಮಾಡಿದ್ದು, ಆಸ್ಪತ್ರೆಗಳ ಸಂಖ್ಯೆ 418ಕ್ಕೆ ಇಳಿಸಿದೆ. ಒಂದೇ ಚಿಕಿತ್ಸೆ ನೀಡುವ ಆಸ್ಪತ್ರೆಗಳನ್ನು ಕೈ ಬಿಡಲಾಗಿದೆ.
ನಿರಾಕರಿಸಲು ಕಾರಣ- ಹೃದಯ, ನೇತ್ರ, ಮಕ್ಕಳ ಆಸ್ಪತ್ರೆ, ಮೂತ್ರಪಿಂಡ ಚಿಕಿತ್ಸಾಲಯಗಳನ್ನೂ ಪಟ್ಟಿಗೆ ಸೇರಿಸಲಾಗಿತ್ತು- ಕೊರೊನಾ ಚಿಕಿತ್ಸೆ ನೀಡಬೇಕೆಂದರೆ ಪ್ರತ್ಯೇಕವಾಗಿ ವಾರ್ಡ್ ರೂಪಿಸಿ ಹಾಸಿಗೆ ಮೀಸಲಿಡಲು ಕಷ್ಟ- ಕೊರೊನಾದಂತಹ ರೋಗಕ್ಕೆ ಚಿಕಿತ್ಸೆ ನೀಡುವ ತಜ್ಞ ವೈದ್ಯರಿಲ್ಲ- ಸಣ್ಣ ಕಟ್ಟಡಗಳಲ್ಲಿರುವ ಆಸ್ಪತ್ರೆಗಳಲ್ಲಿ ಸಾಮಾಜಿಕ ಅಂತರ ಕಷ್ಟ.- ಬೇರೆ ಸಮಸ್ಯೆ ಇರುವ ರೋಗಿಗಳು ಬಾರದೆ ಇದ್ದರೆ ಎಂಬ ಆತಂಕ.

ಖಾಸಗಿಯಲ್ಲಿ ಎಷ್ಟಿವೆ?

ಒಟ್ಟು ಆಸ್ಪತ್ರೆಗಳು 418

ಹಾಸಿಗೆ ಸಾಮರ್ಥ್ಯ (50% ಮೀಸಲು) 63,900

ಹೈಫ್ಲೋ ಆಮ್ಲಜನಕ ಇರುವ ಹಾಸಿಗೆ 6,418

ಸಾಮಾನ್ಯ ಫ್ಲೋ ಆಕ್ಸಿಜನ್ ಹಾಸಿಗೆ 10,465

ಐಸಿಯು ಇರುವ ಹಾಸಿಗೆ 4,467

ವೆಂಟಿಲೇಟರ್‌ಗಳು 1,264

ಎಲ್ಲಿ ಚಿಕಿತ್ಸೆ ಸಿಗಲಿದೆ?

– ದೊಡ್ಡ ಕಟ್ಟಡದ ಆಸ್ಪತ್ರೆಗಳು

– ಹಲವು ಶಾಖೆ ಹೊಂದಿದ ಕಾರ್ಪೊರೇಟ್ ಹಾಸ್ಪಿಟಲ್‌ಗಳು

– ನರ್ಸಿಂಗ್ ಹೋಂಗಳು

ಮಾಹಿತಿಗೆ: 18004258330, 18004252646

ಪ್ರವೇಶಕ್ಕೆ ಮುನ್ನ …ಗಮನಿಸಿ

– ಸೋಂಕಿತರು ನೇರ ಖಾಸಗಿ ಆಸ್ಪತ್ರೆಗೆ ಹೋದರೆ ಪೂರ್ಣ ಮೊತ್ತವನ್ನು ತಾವೇ ಭರಿಸಬೇಕು

– ಆಯುಷ್ಮಾನ್ ಕಾರ್ಡ್ ಇದ್ದರೂ ಸರಕಾರದ ಶಿಫಾರಸು ಪತ್ರ ಇದ್ದರೆ ಮಾತ್ರ 50% ಬಿಲ್

– ಸರಕಾರದ ಶಿಫಾರಸು ಇದ್ದರೆ ಎಪಿಎಲ್ ಕಾರ್ಡ್ದಾರರಿಗೆ 30% ದರ ವಿನಾಯಿತಿ ಇದೆ.

– ವಲಸೆ ಕಾರ್ಮಿಕರು, ಬೇರೆ ರಾಜ್ಯದಿಂದ ಮರಳಿದ ರೋಗಿಗಳಿಗೆ ಕಾರ್ಡ್ ಇಲ್ಲದಿದ್ದರೂ ರಿಯಾಯ್ತಿ ಚಿಕಿತ್ಸೆ 

– ಬೆಡ್ ಚಾರ್ಜ್ ಜತೆಗೆ ಅಧಿಕ ಮೌಲ್ಯದ ಔಷಧ, ಸಲಕರಣೆಗೆ ಹೆಚ್ಚುವರಿ ಹಣ ಕೊಡಬೇಕಾದೀತು.

ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗಿದೆ. ಆಸ್ಪತ್ರೆಯಲ್ಲಿಸೌಲಭ್ಯವಿದ್ದರೆ ಚಿಕಿತ್ಸೆ ನೀಡಬಹುದು. ಒಂದು ಚಿಕಿತ್ಸೆಗೆ ಮೀಸಲಾದ ಆಸ್ಪತ್ರೆಯಲ್ಲಿಕೊರೊನಾ ಚಿಕಿತ್ಸೆ ನೀಡಲೇಬೇಕು ಎಂದೇನೂ ಹೇಳಿಲ್ಲ.- ಡಾ.ಓಂ ಪ್ರಕಾಶ್ ಪಾಟೀಲ್ ನಿರ್ದೇಶಕ, ಆರೋಗ್ಯ ಇಲಾಖೆ

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top