ಪ್ರಧಾನಿ ಮೋದಿಯ ರಾಜತಾಂತ್ರಿಕತೆಗೆ ಮಣಿದ ಚೀನಾ

ಮೋದಿಯವರ ಅಷ್ಟೊಂದು ವಿದೇಶ ಪ್ರವಾಸಗಳ ಪರಿಣಾಮ ಈಗ ತಿಳಿಯತೊಡಗಿದೆ
– ರಮೇಶ್‌ ಕುಮಾರ್‌ ನಾಯಕ್‌.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸದಾ ವಿದೇಶ ಪ್ರವಾಸದ ಶೋಕಿ. ಬೆನ್ನುಬೆನ್ನಿಗೆ ಫಾರಿನ್‌ ಟೂರ್‌ ಮಾಡುವ ಮೂಲಕ ಖಜಾನೆಯ ದುಡ್ಡಿನ ದುಂದು ವೆಚ್ಚ ಮಾಡುತ್ತಿದ್ದಾರೆ. ದೇಶದ ಕೋಟ್ಯಂತರ ಜನ ಒಂದು ಹೊತ್ತಿನ ಊಟಕ್ಕೆ ಪರದಾಡುತ್ತಿರುವಾಗ ಈ ಪ್ರಧಾನಿ ದಿನ ಬೆಳಗಾದರೆ ವಿಶೇಷ ವಿಮಾನ ಏರಿ ದೇಶ ಸುತ್ತುವುದೇಕೆ? ಆಗಾಗ ಅಮೆರಿಕ, ರಷ್ಯಾ, ಜಪಾನ್‌, ಜರ್ಮನಿ, ಫ್ರಾನ್ಸ್‌, ಭೂತಾನ್‌ ಎಂದೆಲ್ಲ ರಾಜತಾಂತ್ರಿಕ ಭೇಟಿ ಯಾಕೆ ಬೇಕು? ಫಾರಿನ್‌ ಟೂರಿಗೆಂದು ಈ ಪ್ರೈಮ್‌ ಮಿನಿಸ್ಟರ್‌ ಆರು ವರ್ಷ ಅವಧಿಯಲ್ಲಿ ಸಾವಿರ ಕೋಟಿ ರೂ. ಖರ್ಚು ಮಾಡಿದ್ದಾರೆ. ಇವೆಲ್ಲ ಬೇಕಿತ್ತಾ? ಹತ್ತು ವರ್ಷ ಪ್ರಧಾನಿಯಾಗಿದ್ದ ಮನಮೋಹನ್‌ ಸಿಂಗ್‌ ಮಾಡಿದಷ್ಟು ಪ್ರವಾಸವನ್ನು ಮೋದಿ ಐದೇ ವರ್ಷದಲ್ಲಿ ಮುಗಿಸಿಬಿಟ್ಟಿದ್ದಾರೆ…
ಮೋದಿ ಅವರ ವಿದೇಶ ಪ್ರವಾಸದ ಬಗ್ಗೆ ಇಂಥ ಟೀಕೆ ಟಿಪ್ಪಣಿಗಳು ಆಗಾಗ ಕೇಳಿ ಬರುತ್ತಲೇ ಇರುತ್ತವೆ. ಕಾಂಗ್ರೆಸ್‌ನ ಭವಿಷ್ಯದ ಪ್ರಧಾನಿ ಅಭ್ಯರ್ಥಿ ರಾಹುಲ್‌ ಗಾಂಧಿ ಅವರಂತೂ, ಎಲ್ಲಾದರೊಂದು ಕಡೆ ಅಡುಗೆ ಅನಿಲ ಸ್ಫೋಟಗೊಂದರೂ, ನೋಡಿ ನಮ್ಮ ಪ್ರಧಾನಿ ಸಂತಾಪ ವ್ಯಕ್ತಪಡಿಸುವುದನ್ನು ಬಿಟ್ಟು ಫಾರಿನ್‌ ಟೂರ್‌ ಮಾಡುತ್ತಿದ್ದಾರೆ ಎಂಬರ್ಥದಲ್ಲಿ ಟ್ವೀಟ್‌ ಮಾಡುತ್ತಾರೆ!
ಇಂಥ ಟೀಕಾವಳಿಗಳೇನೇ ಇರಲಿ, ಪ್ರಸಕ್ತ ಚೀನಾ ನಡೆಸಿದ ಗಡಿ ಉದ್ಧಟತನದ ಸನ್ನಿವೇಶವು ಮೋದಿಯವರ ಅಂತಾರಾಷ್ಟ್ರೀಯ ರಾಜತಾಂತ್ರಿಕ ಸಂಬಂಧ ಮತ್ತು ತೀವ್ರಗಾಮಿ ವಿದೇಶಾಂಗ ನೀತಿಯ ಸತ್ವ ಪರೀಕ್ಷೆಯ ಕಾಲವಾಗಿದೆ. ಮೋದಿಯವರ ವಿದೇಶ ಪ್ರವಾಸಗಳ ಫಲಾಫಲಗಳ ಸ್ಯಾಂಪಲ್‌ ರಿಸಲ್ಟ್‌ ಅನ್ನು ನಾವಿಲ್ಲಿ ಗ್ರಹಿಸಬಹುದಾಗಿದೆ.
ಗಲ್ವಾನ್‌ ಮತ್ತು ಲಡಾಕ್‌ನ ಪ್ಯಾಂಗಾಂಗ್‌ ಸರೋವರ ತೀರದಿಂದ ಚೀನಾ ಮುಖಭಂಗಕ್ಕೊಳಗಾಗಿ ಹಿಂದೆ ಸರಿಯುವಲ್ಲಿ ಭಾರತೀಯ ಯೋಧರ ಪರಾಕ್ರಮ ಎಷ್ಟು ಪ್ರಮುಖವೋ, ಭಾರತದ ಇತ್ತೀಚಿನ ವರ್ಷಗಳ ರಾಜತಾಂತ್ರಿಕ ನಡೆ ಮತ್ತು ಮುನ್ನಡೆಯೂ ಅಷ್ಟೇ ನಿರ್ಣಾಯಕ.
ಚೀನಾ ಯಾವತ್ತಿದ್ದರೂ ಗುಳ್ಳೆ ನರಿಯೆ. ಅದರ ಚಿಂತನೆ ಮತ್ತು ನಡೆ ವುಹಾನ್‌ನ ಅನಿಮಲ್‌ ಮಾರ್ಕೆಟ್‌ ನ ಕ್ರೌರ್ಯದಂತೆ. ಹಾಗಾಗಿ ಮೋದಿ ನೇತೃತ್ವದ ಕೇಂದ್ರ ಸರಕಾರ ಆರು ವರ್ಷಗಳಿಂದ ಗಡಿಯಲ್ಲಿ ಚೀನಾ ವಿರುದ್ಧ ರಕ್ಷ ಣಾ ವ್ಯೂಹ ರಚಿಸಲಾರಂಭಿಸಿತ್ತು. ಆಯಕಟ್ಟಿನ ಸ್ಥಳಗಳಲ್ಲಿ ರಸ್ತೆ, ಸೇತುವೆ ನಿರ್ಮಾಣ ಇತ್ಯಾದಿ. ಇದೀಗ ಉಭಯ ದೇಶಗಳ ನಡುವೆ ವಿವಾದಿತ ಗಡಿಯಲ್ಲಿ ಮೂರು ಕಿ.ಮೀನಷ್ಟು ಬಫರ್‌ ಝೋನ್‌ ನಿರ್ಮಾಣವಾದರೆ ಭಾರತಕ್ಕೇ ಅನುಕೂಲ. ಏಕೆಂದರೆ, ಬಫರ್‌ ಝೋನ್‌ನ ಈಚೆ ವ್ಯೂಹಾತ್ಮಕ ಕಾಮಗಾರಿಗಳನ್ನು ಭಾರತ ನಿರಾಯಾಸವಾಗಿ ಮಾಡಿ ಮುಗಿಸಬಹುದು. ಭಾರತದ ಭವಿಷ್ಯದ ರಕ್ಷ ಣಾ ದೃಷ್ಟಿಯಿಂದ ಇದು ನಿರ್ಣಾಯಕ.
ಗಡಿಯಲ್ಲಿ ಹಟ ಬಿಡದೆ ಭಾರತೀಯ ಸೈನಿಕರ ಜತೆ ಕಾದಾಟಕ್ಕಿಳಿದಿದ್ದ ಚೀನಾ, ಅಷ್ಟು ಬೇಗ ಮಣಿದು ಮೆತ್ತಗಾಗಿದ್ದು ಹೇಗೆ? ಭಾರತದ ರಾಜತಾಂತ್ರಿಕ ವ್ಯೂಹದ ನಡುವೆ ಚೀನಾ ಏಕಾಂಗಿಯಾದದ್ದೇ ಇದರ ಮೂಲ.
ಭಾರತ-ಚೀನಾ ಗಡಿಯಲ್ಲಿ ಸಮರದ ಛಾಯೆ ದಟ್ಟವಾದದ್ದೇ ತಡ. ಅತ್ತ ಅಮೆರಿಕ ಆಕ್ರಮಣಕಾರಿ ಹೆಜ್ಜೆ ಇರಿಸಿತು. ದಕ್ಷಿಣ ಚೀನಾ ಸಮುದ್ರದಲ್ಲಿ ರೋನಾಲ್ಡ್‌ ರೇಗನ್‌ ಮತ್ತು ನಿಮಿಟ್ಸ್‌ ಹೆಸರಿನ ಅಣ್ವಸ್ತ್ರ ಸಹಿತ ಸಮರ ನೌಕೆಗಳನ್ನು ತೇಲಿ ಬಿಟ್ಟಿತು. ಅತ್ಯಾಧುನಿಕ ಫೈಟರ್‌ ಜೆಟ್‌ ಮತ್ತು ಕ್ಷಿಪಣಿಗಳನ್ನು ನೌಕೆ ಹೊಂದಿತ್ತು. ಆ ಜಲ ಪ್ರದೇಶ ತನ್ನದೆಂದು ಚೀನಾ ಆಗಾಗ ಕಾಲು ಕೆದರುತ್ತಿರುತ್ತದೆ. ಅದು ಅಂತಾರಾಷ್ಟ್ರೀಯ ವಹಿವಾಟಿನ ಹಡಗುಗಳು ಓಡಾಡುವ ಸ್ಥಳ. ಭಾರತಕ್ಕೂ ನಿಲುಕಬಲ್ಲ ಜಲ ಪ್ರದೇಶ. ಅಲ್ಲಿ ತನ್ನ ಸಮರ ನೌಕೆಯನ್ನು ಸಂಚರಿಸಿ ಭಾರತದ ಪರವಾಗಿ ಅಮೆರಿಕ ಚೀನಾಗೆ ನೇರ ಎಚ್ಚರಿಕೆ ನೀಡಿತು. ಅಷ್ಟೇ ಅಲ್ಲ, ಒಂದು ವೇಳೆ ಚೀನಾ ಭಾರತದ ಮೇಲೆ ದಾಳಿ ಮಾಡಿದರೆ ನಮ್ಮ ಸೇನಾ ಪಡೆ ಭಾರತದ ಪರ ಹೋರಾಡುತ್ತದೆ ಎಂದು ಶ್ವೇತಭವನದಿಂದಲೇ ಅಧಿಕೃತ ಹೇಳಿಕೆ ಹೊರಡಿಸಲಾಯಿತು. ಇದರ ಬೆನ್ನಿಗೇ ಬಹುನಿರೀಕ್ಷಿತ ಅಪಾಚೆ ಗಾರ್ಡಿಯನ್‌ ಅಟ್ಯಾಕ್‌ ಹೆಲಿಕಾಪ್ಟರ್‌ಗಳನ್ನು ಭಾರತಕ್ಕೆ ಹಸ್ತಾಂತರಿಸಲು ತರಾತುರಿ ತೋರಿತು. ಗುಡ್ಡಗಾಡು ಮತ್ತು ಮಂಜಿನ ಪ್ರದೇಶದಲ್ಲಿ ಸಲೀಸಾಗಿ ಹಾರಾಡಬಲ್ಲ ಬಲಿಷ್ಠ ಹೆಲಿಕಾಪ್ಟರ್‌ ಇದು.
ಈ ಬಿಕ್ಕಟ್ಟಿನ ನಡುವೆಯೇ ರಷ್ಯಾ ಭಾರತಕ್ಕೆ 33 ಮಿಗ್‌ ಮತ್ತು 29 ಸಮರ ವಿಮಾನಗಳನ್ನು ಹಸ್ತಾಂತರಿಸಲು ಒಪ್ಪಿತು. ಜತೆಗೆ 59 ಯುದ್ಧ ವಿಮಾನಗಳನ್ನು ಮೇಲ್ದರ್ಜೆಗೇರಿಸಲೂ ಒಪ್ಪಂದ ಮಾಡಿಕೊಂಡಿತು. ಇನ್ನೊಂದೆಡೆ ಭಾರತದ ಜತೆ ಜಪಾನ್‌ ಹಿಂದೂ ಮಹಾಸಾಗರದಲ್ಲಿ ಸಮರಾಭ್ಯಾಸ ನಡೆಸಿತು. ಸೆನ್‌ ಕಕುಸ್‌ ದ್ವೀಪದ ಮೇಲೆ ಹತೋಟಿ ಸಾಧಿಸಲು ಚೀನಾ ಮತ್ತು ಜಪಾನ್‌ ನಡುವೆ ದಶಕಗಳಿಂದ ಶೀತಲ ಸಮರ ನಡೆಯುತ್ತಿದೆ. ಸಹಜವಾಗಿಯೇ ಜಪಾನ್‌ ಭಾರತಕ್ಕೆ ಬೆಂಬಲ ಘೋಷಿಸಿತು.
ಭಾರತದಾದ್ಯಂತ ವ್ಯಾಪಿಸಿದ ಬಾಯ್ಕಾಟ್‌ ಚೀನಾ ಅಭಿಯಾನಕ್ಕೆ ವಿಶ್ವಾದ್ಯಂತ ಸ್ಪಂದನೆ ವ್ಯಕ್ತವಾಗತೊಡಗಿದ್ದು ಚೀನಾವನ್ನು ಕಂಗೆಡುವಂತೆ ಮಾಡಿತು. ಭಾರತದ ಮಾದರಿಯಲ್ಲಿ ಅಮೆರಿಕದಲ್ಲೂ ಚೀನಾ ವಸ್ತು ನಿಷೇಧಿಸಲು ಇದು ಸಕಾಲ ಎಂದು ಡೊನಾಲ್ಡ್‌ ಟ್ರಂಪ್‌ ಗುಡುಗಿದರು. ಭಾರತವು ಚೀನಾದ 59 ಆ್ಯಪ್‌ಗಳನ್ನು ನಿರ್ದಯವಾಗಿ ನಿಷೇಧಿಸಿದ್ದು ಮತ್ತು ರೈಲ್ವೆ, ರಸ್ತೆ ಕಾಮಗಾರಿ ಗುತ್ತಿಗೆಯಿಂದ ಚೀನಾ ಕಂಪನಿಗಳನ್ನು ಹೊರದಬ್ಬಿದ್ದು ಆ ದೇಶದ ಮೇಲೆ ಇನ್ನಿಲ್ಲದ ದಬಾವಣೆ ಬೀಳುವಂತಾಯಿತು. ಭಾರತವೊಂದರಲ್ಲೇ ಪ್ರತಿ ವರ್ಷ ಚೀನಾದ 5.5 ಲಕ್ಷ ಕೋಟಿ ರೂ. ಮೌಲ್ಯದ ಉತ್ಪನ್ನಗಳು ಮಾರಾಟವಾಗುತ್ತವೆ. ಹಾಗಾಗಿ ಚೀನಾ ಕಂಗೆಡಲೇಬೇಕಾಯಿತು. ಭಾರತದ ಕಠೋರ ಕ್ರಮದಿಂದಾಗಿ ಚೀನಾದ ಅಲಿಬಾಬಾ, ಬ್ರೈಟ್‌ ಡಾನ್ಸ್‌, ಟೆನ್ಸೆಂಟ್‌ನಂಥ ದೈತ್ಯ ಕಂಪನಿಗಳೇ ತತ್ತರಿಸಿದವು. ಗಮನಿಸಿ: ಚೀನಾದ ಪಾಲಿಗೆ ಭಾರತ ಸುಮಾರು 60 ಕೋಟಿ ಸ್ಮಾರ್ಟ್‌ ಫೋನ್‌ ಬಳಕೆದಾರರ ಬೃಹತ್‌ ಮಾರುಕಟ್ಟೆ!
ಈಗ ಮೋದಿಯವರ ರಾಜತಾಂತ್ರಿಕ ಯಾತ್ರೆಯ ಹಿನ್ನೋಟಕ್ಕೆ ಹೋಗೋಣ. ಗುಜರಾತ್‌ನ ಗೋಧ್ರಾದಲ್ಲಿ 59 ಅಮಾಯಕ ಕರಸೇವಕರನ್ನು ಜೀವಂತ ಸುಟ್ಟು ಹಾಕಿದ ದುಷ್ಕೃತ್ಯದ ಬಳಿಕ ಸ್ಫೋಟಗೊಂಡ 2002ರ ಗುಜರಾತ್‌ ಗಲಭೆ ಹಿನ್ನೆಲೆಯಲ್ಲಿ ಅಂದಿನ ಮುಖ್ಯಮಂತ್ರಿ ಮೋದಿ ಅವರನ್ನು ಅಮೆರಿಕ ವೀಸಾ ನಿರಾಕರಿಸಿ ಅವಮಾನ ಮಾಡಿತ್ತು. ಅದೇ ಅಮೆರಿಕ, ಮೋದಿ ಪ್ರಧಾನಿಯಾದ ಬಳಿಕ ರತ್ನಗಂಬಳಿ ಹಾಸಿ ಸ್ವಾಗತಿಸಿದ್ದು ಸೋಜಿಗ! ತಮ್ಮನ್ನು ಅವಮಾನಿಸಿದ ಅಮೆರಿಕವನ್ನು ನಿರ್ಲಕ್ಷಿಸಿ, ದೇಶದ ಪುರಾತನ ನೀತಿಯಂತೆ ರಷ್ಯಾವನ್ನು ಆಲಂಗಿಸುತ್ತಾರೆ ಎಂದೇ ಎಲ್ಲ ವಿದೇಶಾಂಗ ಪರಿಣಿತರು ಲೆಕ್ಕಿಸಿದ್ದರು. ಆದರೆ ಮೋದಿ ವೈಯಕ್ತಿಕ ಸೇಡಿನ ಮನೋಭಾವ ಬಿಟ್ಟು, ರಷ್ಯಾ ಜತೆಗಿನ ಬಾಂಧವ್ಯವನ್ನು ಬ್ಯಾಲೆನ್ಸ್‌ ಮಾಡುತ್ತಲೇ ಅಮೆರಿಕದ ಜತೆಗಿನ ಭಾರತದ ಬಾಂಧವ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು. ಹಿಂದಿನ ಅಧ್ಯಕ್ಷ ಬರಾಕ್‌ ಒಬಾಮಾರಿಂದ ಆರಂಭವಾದ ಸ್ನೇಹಬಂಧ ಟ್ರಂಪ್‌ ಕಾಲದಲ್ಲಿ ತುರಿಯಾವಸ್ಥೆ ತಲುಪಿದೆ. ವಿಶ್ವದ ಅತಿ ಬಲಿಷ್ಠ ದೇಶದ ಅಧ್ಯಕ್ಷ ‘ಐ ಲವ್‌ ಇಂಡಿಯಾ, ಮೋದಿ ಮೇರಾ ದೋಸ್ತ್‌’ ಎಂದು ಎರಡೂ ಕೈ ಚಾಚಿ ನಿಂತಿರುವುದು ಭಾರತದ ಪಾಲಿಗೆ ರಾಜತಾಂತ್ರಿಕವಾಗಿ ಪ್ರತಿಷ್ಠೆಯ ಮತ್ತು ಸರಿಯಾದ ದಾರಿಯಲ್ಲಿ ಸಾಗುತ್ತಿರುವುದರ ಸೂಚಕ. ಆರು ವರ್ಷಗಳಲ್ಲಿ ಭಾರತ-ಅಮೆರಿಕ ನಡುವೆ ಹಲವಾರು ಐತಿಹಾಸಿಕ ವಾಣಿಜ್ಯ ಮತ್ತು ರಕ್ಷ ಣಾ ಒಪ್ಪಂದಗಳು ಏರ್ಪಟ್ಟಿವೆ. ನ್ಯೂಯಾರ್ಕ್‌ನಲ್ಲಿ ನಡೆದ ಅನಿವಾಸಿ ಭಾರತೀಯರ ಸಮಾವೇಶದಲ್ಲಿ ಟ್ರಂಪ್‌ ಉಪಸ್ಥಿತರಿದ್ದು ಮೋದಿ ಜತೆ ಸಂಭ್ರಮಿಸಿದ್ದು ಮತ್ತು ಗುಜರಾತ್‌ನಲ್ಲಿ ಕಳೆದ ಫೆಬ್ರುವರಿಯಲ್ಲಿ ಏರ್ಪಡಿಸಿದ್ದ ಅದ್ಧೂರಿ ಸಮಾವೇಶದಲ್ಲಿ ಟ್ರಂಪ್‌ ಭಾಗವಹಿಸಿ ಸಡಗರಪಟ್ಟಿದ್ದು ಮೋದಿ ಇಮೇಜ್‌ ಜತೆಗೆ ದೇಶದ ವರ್ಚಸ್ಸು ಹೇಗೆ ಪ್ರಖರವಾಗುತ್ತಿದೆ ಎನ್ನುವುದರ ಸಂಕೇತವೂ ಆಗಿತ್ತು. ಪಾಕ್‌ ಪ್ರೇರಿತ ಭಯೋತ್ಪಾದನೆಯ ಸವಾಲು ಮತ್ತು ಚೀನಾದ ಎಂದಿನ ಉಪಟಳ ಶಮನದ ದೃಷ್ಟಿಯಿಂದ ರಷ್ಯಾಗಿಂತ ನಾಲ್ಕು ಪಾವು ಹೆಚ್ಚು ಅಮೆರಿಕದ ಕಡೆ ವಾಲುವುದು ಭಾರತದ ಪಾಲಿಗೆ ಸಕಾಲಿಕವಾಗಿತ್ತು. ಹಲವು ಪ್ರತಿರೋಧದ ದನಿಯ ಮಧ್ಯೆ ಮೋದಿ ಈ ಕೆಲಸ ಮಾಡಿ ಮುಗಿಸಿದ್ದಾರೆ.
ಫ್ರಾನ್ಸ್‌ ಮತ್ತು ಜರ್ಮನಿಗೆ 2015ರಲ್ಲೇ ಭೇಟಿ ನೀಡಿದ್ದ ಮೋದಿ ಬಲಿಷ್ಠ ಯುರೋಪಿಯನ್‌ ದೇಶಗಳ ಜತೆಗಿನ ಬಾಂಧವ್ಯವನ್ನೂ ಗಟ್ಟಿಗೊಳಿಸಿದ್ದಾರೆ. ಯುಪಿಎ ಸರಕಾರದ ಅವಧಿಯಲ್ಲಿ ಆಕ್ರಮಣಕಾರಿ ರಕ್ಷ ಣಾ ನೀತಿಯ ಕೊರತೆಯಿಂದಾಗಿ ನನೆಗುದಿಗೆ ಬಿದ್ದಿದ್ದ 36 ರಫೇಲ್‌ ಫೈಟರ್‌ ಜೆಟ್‌ ಖರೀದಿಗೆ ಮೋದಿ ಚಾಲನೆ ನೀಡಿದರು. ಪಾಕಿಸ್ತಾನ ಮತ್ತು ಚೀನಾವನ್ನು ಎದುರಿಸುವಲ್ಲಿ ರಫೆಲ್‌ ಯುದ್ಧ ವಿಮಾನಗಳ ಸೇರ್ಪಡೆ ಭಾರತೀಯ ಸೇನೆಗೆ ಭಾರಿ ಬಲ ತುಂಬಲಿದೆ ಎಂದು ರಕ್ಷ ಣಾ ಪರಿಣಿತರೇ ಹೇಳುತ್ತಿದ್ದಾರೆ.
ಅಮೆರಿಕದ ಜತೆ ಮೈತ್ರಿ ಬಲಗೊಂಡ ಮಾತ್ರಕ್ಕೆ ರಷ್ಯಾ ಜತೆಗಿನ ಬಾಂಧವ್ಯ ಕಳೆಗುಂದಿಲ್ಲ. ಚೀನಾ ಬಿಕ್ಕಟ್ಟಿನ ನಡುವೆಯೇ ಅತ್ಯಾಧುನಿಕ ಸಮರ ವಿಮಾನಗಳ ಖರೀದಿ ಒಪ್ಪಂದಕ್ಕೆ ಭಾರತ-ರಷ್ಯಾ ಒಪ್ಪಂದ ಮಾಡಿಕೊಂಡಿರುವುದೇ ಇದಕ್ಕೆ ಸಾಕ್ಷಿ. ಇಸ್ರೇಲ್‌ಗೆ ಭೇಟಿ ನೀಡಿರುವ ಭಾರತದ ಮೊದಲ ಪ್ರಧಾನಿಯಾಗಿರುವ ಮೋದಿ, ಆ ರಾಷ್ಟ್ರದ ಜತೆ ಸುಧಾರಿತ ಸೂಕ್ಷ ್ಮ ರಕ್ಷ ಣಾ ಪರಿಕರ ಖರೀದಿಯ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಮೋದಿ ಬಲಪಂಥೀಯ ಪಕ್ಷ ದ ಪ್ರತಿನಿಧಿ. ಹಾಗಾಗಿ ‘ಮುಸ್ಲಿಂ ಜಗತ್ತು’ ಭಾರತದ ವಿರುದ್ಧ ತಿರುಗಿ ಬೀಳಲಿದೆ ಎಂದು ನಮ್ಮ ದೇಶದ ಅನೇಕ ವಿಘ್ನಸಂತೋಷಿಗಳು ಕಾತರದಿಂದ ಕಾದಿದ್ದರು. ಅವರ ನಿರೀಕ್ಷೆಯೂ ಉಲ್ಟಾ ಆಗಿದೆ. ಭಾರತಕ್ಕೆ ಸಂಬಂಧಪಟ್ಟಂತೆ ಮುಸ್ಲಿಂ ಜಗತ್ತಿನ ಎದುರು ಪಾಕಿಸ್ತಾನವೂ ಈಗ ಏಕಾಂಗಿಯಾಗಿದೆ. ಪುಲ್ವಾಮಾ ದಾಳಿಗೆ ಪ್ರತಿಕಾರವಾಗಿ ಪಾಕಿಸ್ತಾನದ ವಿರುದ್ಧ ಭಾರತ ಮುಗಿಬಿದ್ದಾಗ ಯಾವ ಮುಸ್ಲಿಂ ದೇಶಗಳೂ ಪಾಪಿಸ್ತಾನದ ಪರ ಸೊಲ್ಲೆತ್ತಲಿಲ್ಲ. ಮುಸ್ಲಿಂ ದೇಶಗಳು ಭಾರತದ ಗುಲಾಮರಂತೆ ವರ್ತಿಸುತ್ತಿವೆ ಎಂದು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಮೈಪರಚಿಕೊಂಡಿದ್ದೂ ಆಯಿತು! ಪಾಕ್‌ ಪರ ವಟಗುಟ್ಟಲು ಹೋದ ಮಲೇಷ್ಯಾ, ಭಾರತ ಆ ದೇಶದ ಪಾಮ್‌ ಎಣ್ಣೆಯನ್ನು ಬ್ಯಾನ್‌ ಮಾಡಿದ್ದರಿಂದ ದವಡೆ ಮುರಿದುಕೊಂಡು ಕೂತಿದೆ!
ಹಾಗಂತ ಸಣ್ಣ ದೇಶಗಳನ್ನೂ ಮೋದಿ ಕಡೆಗಣಿಸಿಲ್ಲ. ಹಾಗೆ ನೋಡಿದರೆ ಪ್ರಧಾನಿ ಮೊದಲು ಭೇಟಿ ನೀಡಿದ್ದೇ ಭಾರತದ ಪಾಲಿಗೆ ವ್ಯೂಹಾತ್ಮಕವಾಗಿರುವ ಭೂತಾನ್‌ಗೆ. ಮಾಲ್ಡೀವ್ಸ್‌, ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾದಂಥ ದೇಶಗಳ ಜತೆಗೂ ಪಾರಂಪರಿಕ ರಾಜತಾಂತ್ರಿಕ ಸಂಬಂಧ ಮುಂದುವರಿಸಿದ್ದಾರೆ. ಇವುಗಳಲ್ಲಿ ಕೆಲವು ಪುಟ್ಟ ರಾಷ್ಟ್ರಗಳು ಚೀನಾದ ಆಮಿಷಕ್ಕೆ ಬಲಿಯಾಗಿ ಹಾದಿ ತಪ್ಪಿವೆ. ಚೀನಾದ ದುಷ್ಟ ಬದ್ಧಿ ಅರಿವಾದಾಗ ಅವು ಭಾರತದತ್ತ ಸ್ನೇಹಹಸ್ತ ಚಾಚಲೇಬೇಕಾಗುತ್ತದೆ. ಏಕೆಂದರೆ, ಒಂದೆಡೆ ನೇಪಾಳ ಪ್ರಧಾನಿಯ ತಲೆ ಸವರುತ್ತ ಇನ್ನೊಂದೆಡೆ ಅದರ ಭೂ ಪ್ರದೇಶವನ್ನು ಚೀನಾ ಆಕ್ರಮಿಸತೊಡಗಿದೆ. ಇದರ ಫಲವಾಗಿ ನೇಪಾಳ ಪ್ರಧಾನಿಯ ಪಟ್ಟ ಅಲ್ಲಾಡತೊಡಗಿದೆ. ಅತ್ತ, ಚೀನಾ ತೋಡಿದ ಖೆಡ್ಡಾಗೆ ಬಿದ್ದು ತನ್ನ ಹಂಬಂಟೊಟ ಬಂದರನ್ನು ಜೀತಕ್ಕೆ ಬಿಟ್ಟಿರುವ ಶ್ರೀಲಂಕಾದ ಉಸಿರು ಕಟ್ಟಲಾರಂಭಿಸಿದೆ.
ಈ ಬೆಳವಣಿಗೆ ಅವಲೋಕಿಸಿದರೆ ಮೋದಿಯವರ ವಿದೇಶ ಪ್ರವಾಸ ಮತ್ತು ಅವರ ರಾಜತಾಂತ್ರಿಕ ಚಾಣಾಕ್ಷ ನಡೆಯ ಮಹತ್ವ ಅರಿವಾಗುತ್ತದೆ. ಅಂದ ಹಾಗೆ ಮೋದಿಯವರ ವಿದೇಶ ಪ್ರವಾಸಕ್ಕೆ ಸಂಬಂಧಿಸಿ ಒಂದಿಷ್ಟು ಕುತೂಹಲಕಾರಿ ಸಂಗತಿಗಳಿವೆ. ದೂರ ಪ್ರವಾಸದ ಮಧ್ಯೆ ಇಂಧನ ತುಂಬಲು ಕೆಲವು ಗಂಟೆ ವಿಮಾನ ನಿಲ್ಲಿಸುವ ಸಂದರ್ಭದಲ್ಲಿ ಅವರು ಪ್ರತ್ಯೇಕ ಐಷಾರಾಮಿ ಹೋಟೆಲ್‌ಗೆ ಹೋಗದೆ ಏರ್‌ಪೋರ್ಟ್‌ ನಲ್ಲೇ ವಿಶ್ರಾಂತಿ ಪಡೆಯುತ್ತಾರೆ. ಅಲ್ಲೇ ಸ್ನಾನ ಮಾಡುತ್ತಾರೆ! ಪ್ರವಾಸದ ವೇಳೆ ವಿಮಾನದಲ್ಲೇ ನಿದ್ರಿಸಿ ಬೆಳಗ್ಗೆ ನೇರವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ವಾಪಸ್‌ ಬರುವಾಗಲೂ ಅಷ್ಟೆ. ಜೆಟ್‌ ಲಾಗ್‌ ಕಳೆಯಲು, ವಿಶ್ರಾಂತಿಗೆ ಹೆಚ್ಚುವರಿ ದಿನ ನಿಗದಿ ಮಾಡುವುದಿಲ್ಲ. ಹಾಗಾಗಿ ಆರು ದಿನಗಳಲ್ಲಿ ಮುಗಿಯಬಹುದಾದ ಪ್ರವಾಸ ಮೂರೇ ದಿನಕ್ಕೆ ಮುಗಿಯುತ್ತಿದೆ! ತಮ್ಮೊಂದಿಗೆ ಅತ್ಯಂತ ಕಡಿಮೆ ಸಿಬ್ಬಂದಿಯನ್ನು ಕರೆದೊಯ್ಯುತ್ತಾರೆ. ಹಾಗಾಗಿ ಈ ಹಿಂದಿನ ಪ್ರಧಾನಿಗಳಿಗೆ ಹೋಲಿಸಿದರೆ ಇವರ ಪ್ರಯಾಣ ವೆಚ್ಚ ಮಿತವ್ಯಯಕರ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top