ಅಭಿವೃದ್ಧಿಯ ದಿಕ್ಸೂಚಕ ಡಾ. ಅಂಬೇಡ್ಕರ್

ಅಭಿವೃದ್ಧಿಯ ದಿಕ್ಸೂಚಕ ಡಾ. ಅಂಬೇಡ್ಕರ್- ದೇಶದ ವೈವಿಧ್ಯಮಯ ಕ್ಷೇತ್ರಗಳಿಗೆ ಬಾಬಾಸಾಹೇಬರ ಅಮೂಲ್ಯ ಕಾಣಿಕೆ – ಶ್ರೀಧರ ಪ್ರಭು
ಸಾಮಾನ್ಯರಲ್ಲಿ ಮಾತ್ರವಲ್ಲ ಸಂಶೋಧನಾ ವಲಯಗಳಲ್ಲಿಯೂ ಬಾಬಾ ಸಾಹೇಬರ ವ್ಯಕ್ತಿತ್ವ ಮತ್ತು ಚಿಂತನೆಯ ಪರಿಚಿತ ಆಯಾಮಗಳೇ ಹೆಚ್ಚು ಪ್ರಚಲಿತದಲ್ಲಿವೆ. ವರ್ತಮಾನದ ಸಂದರ್ಭದಲ್ಲಿ ನಮ್ಮ ಅಧ್ಯಯನದ ಹರಿವನ್ನು ವಿಸ್ತರಿಸಿಕೊಳ್ಳುವ ಗಂಭೀರ ಅಗತ್ಯತೆಯಿದೆ. ದೇಶದ ವೈವಿಧ್ಯಮಯ ಕ್ಷೇತ್ರಗಳಿಗೆ ಅಂಬೇಡ್ಕರ್ ನೀಡಿದ ಕಾಣಿಕೆಗಳ ಬಗ್ಗೆ ಆಮೂಲಾಗ್ರ ಅಧ್ಯಯನ ನಡೆಯಬೇಕಿದೆ.

1942-46ರವರೆಗೆ ವೈಸರಾಯ್ ಕಾರ್ಯಕಾರಿ ಪರಿಷತ್ತಿನ (ಇಂದಿನ ಕೇಂದ್ರ ಮಂತ್ರಿಮಂಡಲಕ್ಕೆ ಸಮನಾದ್ದು) ಸದಸ್ಯರಾಗಿದ್ದ ಅಂಬೇಡ್ಕರ್ ಕಾರ್ಮಿಕ ಮತ್ತು ಲೋಕೋಪಯೋಗಿ ಕ್ಷೇತ್ರಗಳ ಜವಾಬ್ದಾರಿ ಹೊಂದಿದ್ದರು. ಪರಕೀಯ ದಾಸ್ಯದ ವಿಷಮ ಸಂದರ್ಭದಲ್ಲೂ, ಬ್ರಿಟಿಷರನ್ನು ತಮ್ಮ ತರ್ಕಬದ್ಧ ವಿಚಾರಗಳಿಂದ ಮಣಿಸಿ ಸುಮಾರು 80 ವರ್ಷಗಳ ಹಿಂದೆಯೇ ದೇಶದೆದುರು ಕೇಂದ್ರೀಕೃತ ವಿದ್ಯುತ್ ಜಾಲದ (ಸೆಂಟ್ರಲ್ ಗ್ರಿಡ್) ಪರಿಕಲ್ಪನೆಯನ್ನು ಕೊಟ್ಟವರು ಬಾಬಾ ಸಾಹೇಬರು. 1942ರ ಸುಮಾರಿಗೆ Central Technical Power Board ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ, ಅಂದು ದೇಶದ ಪ್ರತಿಯೊಂದೂ ಸರಬರಾಜು ಜಾಲವನ್ನು ಒಂದು ಕೇಂದ್ರಿಕೃತ ವ್ಯವಸ್ಥೆಯಾಗಿ ಬೆಸೆದರು. ಈ ಸಂಸ್ಥೆಯ ಕಾರ್ಪೊರೇಟ್ ಸ್ವರೂಪವಾಗಿ 1989ರಲ್ಲಿ ಪವರ್ ಗ್ರಿಡ್ ಕಾರ್ಪೊರೇಷನ್ ಆಫ್‌ ಇಂಡಿಯಾ ಜನ್ಮ ತಳೆಯಿತು.

ದೇಶದ ಮೂಲಸೌಕರ್ಯ ಅಭಿವೃದ್ಧಿಯ ತಮ್ಮ ಆಮೂಲಾಗ್ರ ಅಧ್ಯಯನದ ಲಶ್ರುತಿಯಾಗಿ Central Waterways Irrigation and Navigation Commission ಎಂಬ ವಿನೂತನ ಸಂಸ್ಥೆಯ ಉಗಮಕ್ಕೆ ಕಾರಣವಾದರು. ವಿದ್ಯುತ್ ಯೋಜನೆಗಳೊಟ್ಟಿಗೆ ಜಲ ನಿರ್ವಹಣೆ, ಒಳನಾಡು ಜಲಮಾರ್ಗ ಮತ್ತು ಬೃಹತ್ ನೀರಾವರಿ ಯೋಜನೆಗಳನ್ನು ರೂಪಿಸುವ ಮಹತ್ತರ ಕಾರ್ಯವನ್ನು ಮಾಡಿದರು. ಭಾರತದಲ್ಲಿ ಪ್ರಪ್ರಥಮ ನದಿ ಕಣಿವೆ (River Valley) ಯೋಜನೆಯಾದ ದಾಮೋದರ್ ವ್ಯಾಲಿ ಯೋಜನೆಯನ್ನು ಕೇವಲ ಪ್ರವಾಹ ನಿಯಂತ್ರಣವೊಂದಕ್ಕೇ ರೂಪಿಸಲಾಗಿದ್ದನ್ನು ಬಲವಾಗಿ ವಿರೋಧಿಸಿದ ಅಂಬೇಡ್ಕರ್, ವಿದ್ಯುತ್ ಉತ್ಪಾದನೆ ಮತ್ತು ಜಲಮಾರ್ಗಗಳನ್ನು ರೂಪಿಸಿದರು. ಇಂದು ದಾಮೋದರ್ ವ್ಯಾಲಿ ಕಾರ್ಪೊರೇಷನ್ ಸುಮಾರು 8000 ಮೆ.ವ್ಯಾ.ನಷ್ಟು ವಿದ್ಯುತ್ ಉತ್ಪಾದನೆ ಮಾಡುತ್ತಿದ್ದು, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್ ರಾಜ್ಯಗಳ ಬಹುತೇಕ ವಿದ್ಯುತ್ ಬೇಡಿಕೆಯನ್ನು ಪೂರೈಸುತ್ತಿದೆ. ಈ ಯೋಜನೆಯಿಂದ ಅತ್ಯಂತ ಕಡಿಮೆ ದರದಲ್ಲಿ ಹೆಚ್ಚಿನ ವಿದ್ಯುತ್ ಪಡೆದುಕೊಂಡ ಕೋಲ್ಕೊತಾ ನಗರ ಒಂದು ಕಾಲದ ದೇಶದ ವಾಣಿಜ್ಯ ಮತ್ತು ಕೈಗಾರಿಕಾ ರಾಜಧಾನಿಯಾಗಿತ್ತು. ದೇಶದ ಸ್ವತಂತ್ರ ಪಡೆದ ದಶಕದಲ್ಲಿ ಬಂಗಾಳ ದೇಶದ ಒಟ್ಟು ಕೈಗಾರಿಕಾ ಉತ್ಪನ್ನದ ಶೇ.30 ಭಾಗವನ್ನು ಪೂರೈಸುತ್ತಿತ್ತು.
ಒಡಿಶಾದ ಮಹಾನದಿಯ ಪ್ರವಾಹವನ್ನು ತಡೆಯಲು 1935ರಲ್ಲೇ ಸರ್ ಎಂ. ವಿಶ್ವೇಶ್ವರಯ್ಯನವರು ಒಡಿಶಾದ ಸಂಬಲಪುರ ಜಿಲ್ಲೆಯಲ್ಲಿ ಹಿರಾಕುಡ್ ಅಣೆಕಟ್ಟು ಯೋಜನೆಯ ಅಗತ್ಯತೆಯ ಬಗ್ಗೆ ಹೇಳಿದ್ದರು. ಅದರೂ ಸರಕಾರಗಳ ನಿರಾಸಕ್ತಿಯಿಂದಾಗಿ ಇದು ಸಾಧ್ಯವಾಗಿರಲಿಲ್ಲ. 1945ರಲ್ಲಿ ಬಾಬಾ ಸಾಹೇಬರು ಬ್ರಿಟಿಷ್ ಸರಕಾರದ ಮೇಲೆ ಒತ್ತಡ ಹೇರಿ ಈ ಯೋಜನೆಯ ಅನುಷ್ಠಾನಕ್ಕೆ ಕಾರಣವಾದರು. ಇದೇ ಅವಧಿಯಲ್ಲಿ ಮಧ್ಯಪ್ರದೇಶದ ಸೋನೇ ಕಣಿವೆ ವಿವಿಧೋದ್ದೇಶ ಯೋಜನೆಯನ್ನು ರೂಪಿಸಲಾಯಿತು.

– ಕಾರ್ಮಿಕ ಕಲ್ಯಾಣ –
ದೇಶದ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸಲು ಮೊಟ್ಟ ಮೊದಲ ಕ್ರಾಂತಿಕಾರಿ ಹೆಜ್ಜೆಯಾದ ಉದ್ಯೋಗ ವಿನಿಮಯ ಕೇಂದ್ರ, ಕಾರ್ಮಿಕರ ಕೆಲಸದ ಸಮಯವನ್ನು ಎಂಟು ಗಂಟೆಗಳಿಗೆ ನಿಯಮಿತಗೊಳಿಸುವ ಕಾನೂನನ್ನೂ ರೂಪಿಸಿದರು. ಕೇಂದ್ರ ಮಟ್ಟದಲ್ಲಿ 1946ರಲ್ಲಿ ಗಣಿ ಕಾರ್ಮಿಕರಿಗಾಗಿ ಹೆರಿಗೆ ಸೌಲಭ್ಯದ ಕಾನೂನನ್ನು ರೂಪಿಸಿದರು. ಬಾಬಾ ಸಾಹೇಬರು 1936ರಲ್ಲಿ ಇಂಡಿಪೆಂಡೆಂಟ್ ಲೇಬರ್ ಪಾರ್ಟಿ ಎಂಬ ರಾಜಕೀಯ ಪಕ್ಷವನ್ನೂ ಸ್ಥಾಪಿಸಿದ್ದರು. ಕಾರ್ಮಿಕರನ್ನು ಸ್ವಾರ್ಥ ಸಾಧನೆಗೆ ಬಳಸಿಕೊಳ್ಳದೇ ಅವರ ನೈಜ ಸಮಸ್ಯೆಗಳಿಗೆ ದನಿಯಾಗುವ ಪ್ರಯತ್ನ ಇದಾಗಿತ್ತು.

– ಹಣಕಾಸು ಅರ್ಥಶಾಸಜ್ಞ –
ಬಾಬಾ ಸಾಹೇಬರು ಪ್ರಪಂಚ ಕಂಡ ಅತ್ಯಂತ ಪ್ರಭಾವಶಾಲಿ ಮತ್ತು ಪ್ರತಿಭಾವಂತ ವಿತ್ತೀಯ ಅರ್ಥಶಾಸಜ್ಞ. 1921ರಲ್ಲಿ ತಮ್ಮ ಅರ್ಥಶಾಸದ ಸ್ನಾತಕೋತ್ತರ ಪದವಿಯ ಸಂದರ್ಭದಲ್ಲಿ ದಿ ಪ್ರಾಬ್ಲಮ್ ಆಫ್ ರುಪೀ – ಇಟ್ಸ್ ಒರಿಜಿನ್ ಆ್ಯಂಡ್ ಸೊಲ್ಯೂಷನ್ ಎಂಬ ಅತ್ಯದ್ಭುತ ಪ್ರೌಢ ಪ್ರಬಂಧದಲ್ಲಿ ರೂಪಾಯಿಯ ಇತಿಹಾಸ ಮತ್ತು ರೂಪಾಯಿಯ ಮೌಲ್ಯವನ್ನು ಅಳೆಯಲು ಯಾವ ಪ್ರಮಾಣದಲ್ಲಿ ಬಳಸಬೇಕೆಂಬುದನ್ನು ಅತ್ಯಂತ ಸವಿಸ್ತಾರವಾಗಿ ವಿವರಿಸಿದ್ದಾರೆ.
ತಮ್ಮ ಡಾಕ್ಟರೇಟ್ ಪದವಿಗಾಗಿ ಬಾಬಾಸಾಹೇಬರು ಸಮರ್ಪಿಸಿದ ಪ್ರಬಂಧ The Evolution of Provincial Finance in British India.. ಭಾರತದ ಪ್ರತಿಯೊಂದು ಪ್ರಾಂತ್ಯದ ಹಣಕಾಸಿನ ಇತಿಹಾಸವನ್ನು ದಾಖಲಿಸುವ ಈ ಪ್ರಬಂಧ ಪ್ರಪಂಚದ ಶ್ರೇಷ್ಠ ಪ್ರೌಢ ಪ್ರಬಂಧಗಳಲ್ಲೊಂದು. ಈ ಕೃತಿಯಿಂದ ಪ್ರಭಾವಿತರಾದ ಬ್ರಿಟಿಷ್ ಆಡಳಿತಜ್ಞರು ಭಾರತದಲ್ಲಿ ಹಣಕಾಸು ಆಯೋಗವನ್ನು ಸ್ಥಾಪಿಸಿದರು.

ಬ್ರಿಟಿಷರ ಆಡಳಿತವಿದ್ದ ಪ್ರತಿಯೊಂದೂ ವಸಾಹತುಶಾಹಿ ದೇಶಗಳಲ್ಲಿನ ಆರ್ಥಿಕ ಮತ್ತು ಆಡಳಿತಾತ್ಮಕ ವಿಚಾರಗಳನ್ನು ಅಧ್ಯಯನ ಮಾಡಿ ಆಡಳಿತಾತ್ಮಕ ಪರಿವರ್ತನೆಗಳನ್ನು ಸೂಚಿಸಲು 1926ರಲ್ಲಿ ರಚನೆಯಾದ ಹಿಲ್ಟನ್-ಯಂಗ್ ಆಯೋಗದ ಮುಂದೆ ಬಾಬಾಸಾಹೇಬರ ಸಾಕ್ಷ್ಯವನ್ನು ಸವಿಸ್ತಾರವಾಗಿ ದಾಖಲಿಸಲಾಯಿತು. ತಮ್ಮ ಆವರೆಗಿನ ಅರ್ಥಶಾಸದ ಮೂರೂ ಮೇರು ಕೃತಿಗಳ(1. Administration and Finance of the East India Company 2. The Evolution of Provincial Finance in British India 3. The Problem of the Rupee: Its Origin and Its Solution)ಸಂಪೂರ್ಣ ಸಾರವನ್ನು ಈ ಆಯೋಗದೆದುರು ಸಾರಿ ಹೇಳಿದ ಲಶೃತಿಯಾಗಿಯೇ 1934ರಲ್ಲಿ ಬ್ರಿಟಿಷರು ಭಾರತದಲ್ಲಿ ರಿಸರ್ವ್ ಬ್ಯಾಂಕನ್ನು ಸ್ಥಾಪಿಸಿದರು.

– ಭ್ರಾತೃತ್ವ ಬೆಸೆದ ನಾಯಕ-
1946ರಲ್ಲಿ ಹೂ ಆರ್ ಶೂದ್ರಾಸ್? ಎಂಬ ಮೇರುಕೃತಿಯನ್ನು ರಚಿಸಿ ಆರ್ಯ ಆಕ್ರಮಣವೆಂಬ ಪೊಳ್ಳುವಾದವನ್ನು ವೈಜ್ಞಾನಿಕ ಮತ್ತು ಐತಿಹಾಸಿಕ ದಾಖಲೆಗಳ ಮೂಲಕ ನುಚ್ಚುನೂರು ಮಾಡಿದ ಅಂಬೇಡ್ಕರ್, ಭಾರತದ ಪ್ರತಿಯೊಬ್ಬರೂ ಮೂಲತಃ ಭಾರತದವರೇ ಎಂಬುದನ್ನು ನಿರೂಪಿಸಿದರು. ಇಂದು ಜೀವಶಾಸೀಯ ಮತ್ತು ಅನುವಂಶೀಯ ಪ್ರಮಾಣಗಳಿಂದ ಪ್ರತಿಯೊಬ್ಬರ ಡಿಎನ್‌ಎ ರಚನೆಯೂ ಸಹ ಒಂದೇ ಎಂಬುದು ಬೀತಾಗಿದೆ.ಬಾಬಾಸಾಹೇಬರ ಅನೇಕ ಕೃತಿಗಳಿಗೆ ಭವಿಷ್ಯದ ಮಾನವಶಾಸೀಯ ಅಧ್ಯಯನಕ್ಕೆ ಹೊಸ ಹೊಳಹುಗಳನ್ನು ನೀಡುವ ಸಮರ್ಥವಿದೆ. ಬಾಬಾಸಾಹೇಬರ ಕುರಿತ ಸಮಗ್ರ ಅಧ್ಯಯನ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಬಹುದಲ್ಲದೇ ಈ ಸಂಕಷ್ಟದ ಸಂದರ್ಭದಲ್ಲಿ ಭ್ರಾತೃತ್ವವನ್ನು ಬೆಸೆಯುವಲ್ಲಿ ಸಹಕಾರಿಯಾಗಬಲ್ಲದು.
(ಲೇಖಕರು ವಕೀಲರು)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top