ಕೊರೊನೋತ್ತರ ಆರ್ಥಿಕ ಮೇಲಾಟದಲ್ಲಿ ನಾವೇ ವಿಜಯಿ

– ಸದ್ಗುರು ಶ್ರೀ ಜಗ್ಗೀ ವಾಸುದೇವ. 
ಕೊರೊನಾ ವೈರಸ್ ಪರಿಸ್ಥಿತಿಯಿಂದ ಖಚಿತವಾಗಿ ಯಾವಾಗ ಹೊರಬರುತ್ತೇವೆಂದು ಹೇಳಲು ದುರದೃಷ್ಟವಷಾತ್ ನಮಗಿನ್ನೂ ಸಾಧ್ಯವಾಗಿಲ್ಲ. ಕೈಗಾರಿಕೆ ಮತ್ತು ವ್ಯಾಪಾರಗಳ ದೃಷ್ಟಿಯಲ್ಲಿ ನೋಡುವುದಾದರೆ, ಅದು ನಮ್ಮನ್ನು ಒಂದು ಸಂದಿಗ್ಧ ಸ್ಥಿತಿಗೆ ತಲುಪಿಸಿದೆ. ಜನರು, ಸಂಸ್ಥೆಗಳು, ಸಣ್ಣ ಮತ್ತು ದೊಡ್ಡ ವ್ಯಾಪಾರಗಳಿಗೆ ಹೊಡೆತ ಬಿದ್ದಿರುವುದರಲ್ಲಿ ಸಂಶಯವಿಲ್ಲ ಮತ್ತು ಹತ್ತಿರದ ಭವಿಷ್ಯದಲ್ಲಿ, ಅತೀವ ಸಂಕಟಗಳು ಕಾದಿವೆ. ಅನೇಕ ವ್ಯಾಪಾರೋದ್ಯಮಗಳು ಮತ್ತೊಮ್ಮೆ ಮೊದಲಿನಿಂದ ಪ್ರಾರಂಭಿಸಬೇಕು. ಅವು ಹೇಗೆ ಕಾರ್ಯಾಚರಿಸಬೇಕು ಎನ್ನುವುದನ್ನು ಮರುಪರಿಶೀಲಿಸಬೇಕಾಗಿದೆ. ಮೊದಲು ಹೇಗೆ ಕೆಲಸ ಮಾಡುತ್ತಿದ್ದವೋ ಹಾಗೆ ಮಾಡಲಾಗುವುದಿಲ್ಲ. ಭಾರತಕ್ಕೆ ಮುಖ್ಯವಾಗಿರುವ ಪ್ರವಾಸೋದ್ಯಮ, ವಿಮಾನಯಾನ ಮತ್ತು ವಸ್ತ್ರೋದ್ಯಮಗಳಂತಹ ನಿರ್ದಿಷ್ಟ ಮಾರುಕಟ್ಟೆಗಳು, ಬೇಗ ಚೇತರಿಸಿಕೊಳ್ಳುವುದಿಲ್ಲ. ಒಂದು ವೇಳೆ ತಾವು ಮಾಡುತ್ತಿರುವಂತಹ ಉದ್ಯಮಗಳು ಕುಸಿದರೆ, ಉದ್ಯಮಿಗಳು ಮತ್ತು ವಾಣಿಜ್ಯ ನಾಯಕರು ಖಿನ್ನತೆಯ ಸ್ಥಿತಿಗೆ ಹೋಗಬಾರದು. ಬದಲಾಗಿ ಅವರಿಗೆ ಸಮೃದ್ಧಿಯನ್ನು ತರುವ ಹೊಸ ಸಾಧ್ಯತೆಗಳನ್ನು ಅರಸಬೇಕು.
ಖಂಡಿತವಾಗಿಯೂ ಇದೊಂದು ಭಗ್ನಸ್ಥಿತಿ. ಆದರೆ ಭಗ್ನಸ್ಥಿತಿಯಲ್ಲಿ ಗುಪ್ತ ಅವಕಾಶಗಳಿರುತ್ತವೆ. ನಾವು ಅವಕಾಶವನ್ನು ಉಪಯೋಗಿಸಿಕೊಳ್ಳುವ ಚುರುಕುತನ, ಧೈರ್ಯ ಮತ್ತು ಸಾಮರ್ಥ್ಯವನ್ನು ಹೊಂದಿದ್ದೇವೆಯೇ ಎನ್ನುವುದು ಪ್ರಶ್ನೆ. ವಿನಾಶಕಾರಿ ಸುನಾಮಿಯಂತೆ ಕಾಣುವ ಸಂದರ್ಭವು ಒಬ್ಬ ಒಳ್ಳೆಯ ಸರ್ಫರ್ಗೆ (ಅಲೆಗಳ ಮೇಲೆ ತೇಲುವ ಕ್ರೀಡಾಪಟು) ಕನಸು ನನಸಾಗುವಂತಹ ಸಮಯವಾಗುತ್ತದೆ. ಜಗತ್ತಿನ ಆರ್ಥಿಕ ಸನ್ನಿವೇಶ ಯಾರು ಪ್ರಧಾನವಾದ ಶಕ್ತಿ ಮತ್ತು ಯಾರು ಅಲ್ಲ ಎಂಬುದು ಬದಲಾಗಲಿದೆ. ನಿರ್ದಿಷ್ಟವಾಗಿ ಏಷ್ಯಾದಲ್ಲಿ, ನಾವು ಆ ಬದಲಾವಣೆಯನ್ನು ಉಪಯೋಗಿಸಿಕೊಳ್ಳಬೇಕು. ಬೃಹತ್ ಆರ್ಥಿಕತೆಗಳ ಹಿಂದಿರುವ ಅನೇಕ ಸರಕಾರಗಳು ತಮ್ಮ ವ್ಯಾಪಾರೋದ್ಯಮವನ್ನು ಚೀನಾದಿಂದ ವಿಯಟ್ನಾಂ, ಕಾಂಬೋಡಿಯಾ ಮತ್ತು ಮಲೇಷ್ಯಾದಂತಹ ಇತರ ದೇಶಗಳಿಗೆ ಸ್ಥಳಾಂತರಗೊಳಿಸಲು ನೋಡುತ್ತಿವೆ. ಆದರೆ ಈಗ ಭಾರತವೇ ಅವರ ಮೊದಲ ಆಯ್ಕೆಯಾಗಿದೆ. ಏಷ್ಯಾದಲ್ಲಿ ನಾವು ಆರ್ಥಿಕ ಅಭಿವೃದ್ಧಿಯಿಂದ ದೊಡ್ಡ ಪ್ರಮಾಣದಲ್ಲಿ ಹೊರಗುಳಿದಿರುವುದರಿಂದ, ನನ್ನ ನಿರೀಕ್ಷೆಯಂತೆ, ಈ ಅವಕಾಶವನ್ನು ಉಪಯೋಗಿಸಿಕೊಳ್ಳಲು ಇದೇ ಸರಿಯಾದ ಸಮಯ.
ನಾವು ನಮ್ಮ ಪ್ರಯತ್ನವನ್ನು ಒಟ್ಟುಗೂಡಿಸಿಕೊಳ್ಳಬೇಕು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಾಂಕ್ರಾಮಿಕವನ್ನು ಎದುರಿಸುವ ನಿಟ್ಟಿನಲ್ಲಿ ಹೇಗೆ ಚುರುಕು ಮತ್ತು ಪರಿಣಾಮಕಾರಿಯಾಗಿ ಕೆಲಸ ಮಾಡಿದವೋ ಹಾಗೆಯೇ ಕೈಗಾರಿಕೆ, ವ್ಯಾಪಾರಗಳು ಮತ್ತು ಉದ್ಯಮಿಗಳು, ಸಾಲಗಳು, ಬಡ್ಡಿ ಮತ್ತು ಇಎಂಐಗಳ ಮೂಲಕ ಆರ್ಥಿಕ ಪ್ರಕ್ರಿಯೆಯನ್ನು ಪುನಃಶ್ಚೇತನಗೊಳಿಸಬೇಕು ಮತ್ತು ಈ ಉತ್ತೇಜಕ ಕ್ರಮಗಳು ಉಪಯುಕ್ತವಾಗುವ ರೀತಿಯಲ್ಲಿ ಉದ್ಯಮಗಳು ಭಾಗವಹಿಸಬೇಕು.
ಮಾನವ ಸಾಮರ್ಥ್ಯ: ಹೊಸ ಅವಕಾಶಗಳು ತೆರೆದುಕೊಂಡಂತೆಲ್ಲಾ, ವ್ಯಾಪಾರೋದ್ಯಮಗಳು ತಮ್ಮಲ್ಲಿರುವ ಮನುಷ್ಯ ಸಾಮರ್ಥ್ಯ ಅತ್ಯಂತ ಅವಶ್ಯಕವಾದ ಸಂಗತಿಯೆನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಲಾಕ್‌ಡೌನ್‌ ಅನ್ನು ನೆಪವಾಗಿಟ್ಟುಕೊಂಡು ಜನರನ್ನು ಕೆಲಸದಿಂದ ತೆಗೆದುಹಾಕಿದರೆ, ಮತ್ತೆ ಉದ್ಯಮವನ್ನು ಕಟ್ಟುವುದು ಗಂಭೀರವಾದ ಸವಾಲಾಗಿ ಪರಿಣಮಿಸುತ್ತದೆ. ಸಂಸ್ಥೆಗಳು ತಮ್ಮ ಮಾನವ ಬಂಡವಾಳದ ಸಂಪರ್ಕ ಮತ್ತು ಹಿಡಿತವನ್ನು ಹೊಂದಿರುವುದು, ತಮ್ಮ ಆರ್ಥಿಕ ಸಾಮರ್ಥ್ಯದ ಮಿತಿಯಲ್ಲಿ ಸಂಬಳವನ್ನು ನಿರ್ಧರಿಸಿ ಅವರನ್ನು ಪೋಷಿಸುವುದು ಅತ್ಯಂತ ಮುಖ್ಯ. ಜನರಿಗೆ ನಿಮ್ಮ ಅಗತ್ಯವಿರುವಾಗ ನೀವು ಅವರ ಕೈಬಿಟ್ಟಿರಿ ಎಂಬ ಭಾವನೆ ಬರದೇ ಇರುವ ಹಾಗೆ ನೀವು ನೋಡಿಕೊಳ್ಳಬೇಕು.
ಲಾಕ್‌ಡೌನ್‌ ಮುಗಿದ ನಂತರವೂ, ಮಾರುಕಟ್ಟೆಗಳು ಮೊದಲಿನಂತಾಗಲು ಹಲವಾರು ತಿಂಗಳುಗಳೇ ಬೇಕಾಗಬಹುದು. ಈ ಸಮಯದಲ್ಲಿ, ನಿಮ್ಮ ವ್ಯಾಪಾರಕ್ಕಾಗಿ ದುಡಿಯುವ ಜನರು ನಿಮಗೆ ಬೇಕಾಗುತ್ತಾರೆ; ಅಲ್ಲವಾದರೆ ವ್ಯಾಪಾರೋದ್ಯಮಗಳು ವಿಫಲಗೊಳ್ಳುತ್ತವೆ. ಅವರು ಹೀಗೆ ಕೆಲಸ ಮಾಡಬೇಕಾದರೆ, ನೀವು ಅವರ ಜೀವನ ಮತ್ತು ಶ್ರೇಯಸ್ಸಿಗೆ ಬದ್ಧರಾಗಿದ್ದೀರಿ ಎಂಬುದನ್ನು ನೀವು ಅವರಿಗೆ ತೋರಿಸಬೇಕು. ಆಗ ಮಾತ್ರ ನಿಮ್ಮ ವ್ಯಾಪಾರದ ಶ್ರೇಯಸ್ಸಿಗೆ ಬೇಕಾದ ಬದ್ಧತೆಯ ಪ್ರತಿಸ್ಪಂದನೆ ನಿಮಗೆ ಅವರಿಂದ ಸಿಗುತ್ತದೆ.
ನಮಗಿರುವ ಬಹಳ ದೊಡ್ಡ ಸಂಪತ್ತೆಂದರೆ ಮಾನವ ಸಾಮರ್ಥ್ಯ. ನಮ್ಮ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರು ಇಪ್ಪತ್ತೈದು ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರುವುದರಿಂದ, ನಾವು ಜಗತ್ತಿನಲ್ಲೇ ಅತ್ಯಂತ ಯುವ ದೇಶವಾಗಿದ್ದೇವೆ. ಜನಸಂಖ್ಯೆಯ ಲಾಭಾಂಶದ ಈ ಅನುಕೂಲವು ಕೇವಲ ಇನ್ನು ಹದಿನೈದು ವರ್ಷಗಳ ಕಾಲ ಮಾತ್ರ ಇರುತ್ತದೆ. ವೈರಸ್ಸಿನ ಹಾವಳಿಯಿಂದಾದ ವಿಧ್ವಂಸಕತೆಯ ಈ ಸನ್ನಿವೇಶದಲ್ಲಿ, ಈ ಅಗಾಧ ಮಾನವ ಸಾಮರ್ಥ್ಯವನ್ನು ಅನಾವರಣಗೊಳಿಸಬೇಕಾದ ಸಮಯ ಬಂದಿದೆ. ಇದಕ್ಕೆ, ನಮಗೆ ಅಂತಃಸೂರ್ತಿಯುಳ್ಳ, ಏಕಾಗ್ರ, ಸಮತೋಲಿತ ಮತ್ತು ಒಂದು ನಿರ್ದಿಷ್ಟ ಉದ್ದೇಶದ ಕಡೆಗೆ ಶಿಸ್ತನ್ನು ಹೊಂದಿರುವ ಮನುಷ್ಯರು ಬೇಕಾಗಿದ್ದಾರೆ. ಈ ಪ್ರತಿಭೆಯನ್ನು ಬಳಸಿಕೊಳ್ಳುವ ಮತ್ತು ಪೋಷಿಸುವಲ್ಲಿ ವ್ಯಾಪಾರೋದ್ಯಮಗಳು ಮುಖ್ಯ ಪಾತ್ರ ವಹಿಸಬೇಕು, ಏಕೆಂದರೆ, ಉದ್ಯಮಗಳಿಗೆ ಅನೇಕ ರೀತಿಯ ಕೌಶಲ್ಯಗಳು ಬೇಕಾಗುತ್ತವೆ. ಖಾಸಗಿ ಉದ್ಯಮದ ಹೊಸ ಕುಟುಂಬಗಳು ಬಹಳ ಸಣ್ಣ ವಯಸ್ಸಿನಿಂದಲೇ ವ್ಯಕ್ತಿಗಳನ್ನು ತರಬೇತುಗೊಳಿಸಲು ಬಂಡವಾಳ ಹೂಡಬೇಕಾಗಿದೆ.
ಒಂದು ಜೀವಮಾನದ ಅವಕಾಶ: ವೈರಸ್ಸಿನ ವಿಷಯದಲ್ಲಿ, ರಾಷ್ಟ್ರ ಮತ್ತು ರಾಜ್ಯ ಮಟ್ಟಗಳ ನಾಯಕತ್ವವು, ಏಕ ಪ್ರಕಾರವಾಗಿ, ಬಹಳ ಸದೃಢವಾದ ರೀತಿಯಲ್ಲಿ ಸ್ಪಂದಿಸಿತು. ಅದೊಂದು ಅದ್ಭುತವಾದ ಪ್ರಯತ್ನ. ನಾವು ಈ ಸಂದರ್ಭದಿಂದ ಕಲಿಯಬೇಕು.  ನಮಗಿಂತ ಉತ್ತಮವಾದ ವೈದ್ಯಕೀಯ ಸೌಕರ್ಯಗಳಿದ್ದ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ನಾವೆಲ್ಲರೂ ಒಂದುಗೂಡಿ ಈ ಸಂಕಷ್ಟದ ಸನ್ನಿವೇಶವನ್ನು ಎಷ್ಟು ಪರಿಣಾಮಕಾರಿಯಾಗಿ ನಿಭಾಯಿಸಿದೆವು ಎನ್ನುವುದನ್ನು ಮನಗಾಣಬೇಕು. ನಮಗೆ ಮರಣದ ಕಂಟಕವಿದ್ದಾಗ ಮಾತ್ರ ನಾವು ಒಂದುಗೂಡಿ ದೃಢನಿಶ್ಚಯದಿಂದ ಕೆಲಸ ಮಾಡುತ್ತೇವೆ ಎನ್ನುವುದು ನಮ್ಮ ರಾಷ್ಟ್ರದ ಇತಿಹಾಸವೇ ಆಗಿದೆ. ಇಲ್ಲವಾದರೆ, ನಾವು ಒಂದೇ ಸಮಯದಲ್ಲಿ ಹತ್ತು ದೇಶಗಳಲ್ಲಿರುವಂತೆ ಕೆಲಸ ಮಾಡುತ್ತಿರುತ್ತೇವೆ. ನಾವು ಈಗ ಈ ಸಮಸ್ಯೆಯನ್ನು ಮೀರಬೇಕು. ನಾವು ಮುಂದೆ ಬರುವ ವರ್ಷಗಳಲ್ಲಿ ಈ ದೃಢನಿಶ್ಚಯದ ಪ್ರಜ್ಞೆಯನ್ನು ಹೀಗೇ ಮುಂದುವರಿಸಿಕೊಂಡು ಹೋದರೆ, ನಾವು ಯಾವುದಕ್ಕೂ ಹೆದರಬೇಕಾಗಿಲ್ಲ ಎಂದು ನನಗನಿಸುತ್ತದೆ. ನಾವು ಅಪಾರವಾದ ಸದೃಢತೆಯಿಂದ ಪುನರ್ನಿಮಾಣಗೊಳ್ಳುತ್ತೇವೆ. ಇದು ಉದ್ಯಮಿಗಳ ನಾಡು, ಸಹಸ್ರಾರು ವರ್ಷಗಳ ಸಂಸ್ಕೃತಿಯ ನೆಲ; ನಾವು ಕೇವಲ ಹನ್ನೆರಡು ತಿಂಗಳಲ್ಲಿ ನಾಶವಾಗುವುದಿಲ್ಲ.
ವೈರಸ್ಸಿನಿಂದ ಆದ ಸಾವುಗಳನ್ನು ನಾವು ನಿಯಂತ್ರಣದಲ್ಲಿಡಲು ನಮಗೆ ಸಾಧ್ಯವಾದರೆ, ಇದು ನಮ್ಮ ತಲೆಮಾರಿಗೆ ಒಂದು ಜೀವಮಾನದ ಅವಕಾಶವಾಗುತ್ತದೆ. ಒಂದು ದೇಶವಾಗಿ, ನಮ್ಮ ವ್ಯಾಪಾರೋದ್ಯಮಗಳು ವೃದ್ಧಿಸಬೇಕು ಮತ್ತು ಸರಿಯಾದ ಸ್ಥಾನಮಾನವನ್ನು ಸಾಧಿಸಬೇಕು. ನಾವು ವೈಯಕ್ತಿಕ ಮಹತ್ವಾಕಾಂಕ್ಷೆ ಮೀರಿ ಒಂದು ದೊಡ್ಡ ದೃಷ್ಟಿಕೋನದ ಕಡೆಗೆ ಸಾಗಿದರೆ, ನಾವು ಊಹಿಸಿಕೊಳ್ಳಲಾಗದಂತಹ ಸಂಗತಿಗಳನ್ನು ನಾವು ಸಾಧಿಸುತ್ತೇವೆ.
(ಲೇಖಕರು ಆಧ್ಯಾತ್ಮ ಗುರು)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top