ಮುಕ್ತ ಸಂವಾದಕ್ಕೆ ತೆರೆದುಕೊಂಡ ಸಂಪನ್ನರ ಮಾದರಿ – ಪ್ರಣಬ್‌ ಆರೆಸ್ಸೆಸ್‌ ಸಭೆಗೆ ಹೋದದ್ದು ತಪ್ಪು ಎನ್ನುವವರಿಗೆ ಸಂವಾದದ ಅರ್ಥವೇ ಗೊತ್ತಿಲ್ಲ

– ಹರಿಪ್ರಕಾಶ್‌ ಕೋಣೆಮನೆ.

ಬೆಂಗಳೂರಿನಲ್ಲಿ ನಡೆದ ಪ್ರಣಬ್‌ ಮುಖರ್ಜಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿದ್ದ ರಾಜ್ಯದ ಕೆಲವು ಹಿರಿಯ ಕಾಂಗ್ರೆಸ್‌ ಮುಖಂಡರು, ‘‘ಎಲ್ಲವೂ ಸರಿ. ಆದರೆ, ಪ್ರಣಬ್‌ ದಾ ಅವರು ಆರ್‌ಎಸ್‌ಎಸ್‌ ಸಭೆಗೆ ಹೋಗಿದ್ದೇಕೆ?,’’ ಎಂಬ ಮಾತನ್ನು ಆಡುವ ಮೂಲಕ, ಪ್ರಣಬ್‌ ಅವರ ನಿಲುವನ್ನೇ ಅನುಮಾನದಲ್ಲಿ ನೋಡಿದ್ದಾರೆ. ಜೀವನವಿಡಿ ಕಾಂಗ್ರೆಸ್‌ ಹಾಗೂ ಸಮಾಜವಾದಿ ಸಿದ್ಧಾಂತದ ಕಟ್ಟಾ ಅನುಯಾಯಿಯಾಗಿ ಬಾಳಿ ಬದುಕಿ ಹೋದ ಪ್ರಣಬ್‌ ಮುಖರ್ಜಿ ರಾಜಕೀಯ ವಲಯದಲ್ಲಿ ಅಜಾತಶತ್ರು ಎಂದೇ ಪರಿಗಣಿತರಾಗಿದ್ದರು. ಸೈದ್ಧಾಂತಿಕ ಭಿನ್ನತೆಯೊಂದಿಗೆ ಬೆರೆಯುವ ಮೂಲಕವೂ ರಾಜಕೀಯ ಮುತ್ಸದ್ದಿತನವನ್ನೂ ಮೆರೆದವರು. ರಾಜಕೀಯ ಅಸ್ಪೃಶ್ಯತೆ ಸಲ್ಲದು ಎಂಬ ಅವರ ಮುತ್ಸದ್ಧಿ ನಿಲುವನ್ನು ಅನುಮಾನಿಸುವ ಮೂಲಕ ನಮ್ಮ ಕಾಂಗ್ರೆಸ್‌ ನಾಯಕರು ಎಂದಿನಂತೆ ‘ಕೇವಲ ರಾಜಕಾರಣಿ’ಗಳಾಗಿಯೇ ಉಳಿದರಲ್ಲ ಎಂದು ಬೇಸರವಾಯಿತು. ಹಾಗೆ ನೋಡಿದರೆ, ಪ್ರಣಬ್‌ ಆರ್‌ಎಸ್‌ಎಸ್‌ ಶಿಬಿರಕ್ಕೆ ಹೋಗಿದ್ದನ್ನು ಈ ಕಾಂಗ್ರೆಸ್‌ ಮುಖಂಡರು ಆಕ್ಷೇಪಿಸಿದ್ದು ತೀರಾ ಅಸಂಗತವೇ ಸರಿ. ಸಂವಹನ, ಸಂವಾದ, ಸಮನ್ವಯ, ಸಹನೆ, ಸಹಿಷ್ಣುತೆ- ಈ ಗುಣಗಳೇ ಪ್ರಣಬ್‌ ಮುಖರ್ಜಿ ವ್ಯಕ್ತಿತ್ವದ ವಿಶೇಷತೆಗಳಾಗಿದ್ದವು. ಮೂವತ್ತು, ನಲ್ವತ್ತು ವರ್ಷ ಅವರೊಂದಿಗೆ ಒಡನಾಡಿದ್ದೇವೆ ಎಂದು ಹೇಳಿಕೊಳ್ಳುವ ಮಲ್ಲಿಕಾರ್ಜುನ ಖರ್ಗೆ, ಸಮಾಜವಾದಿ ಹಿನ್ನೆಲೆಯ ಸಿದ್ದರಾಮಯ್ಯ ಅವರಂಥ ನಾಯಕರು ಪ್ರಣಬ್‌ ವ್ಯಕ್ತಿತ್ವದ ಅಂತಹ ಮೂಲ ಗುಣಗಳನ್ನೇ ಗುರುತಿಸಲಿಲ್ಲ ಎನ್ನುವುದು ಅಚ್ಚರಿದಾಯಕ.
ಪ್ರಣಬ್‌ ಮುಖರ್ಜಿ ಆರ್‌ಎಸ್‌ಎಸ್‌ ಶಿಬಿರಕ್ಕೆ ಭೇಟಿ ನೀಡಿದ್ದರ ಕುರಿತು ಕಾಂಗ್ರೆಸ್‌ ನಾಯಕರು ಆಕ್ಷೇಪ ಎತ್ತುವುದಕ್ಕೆ ಇರುವ ಹಿನ್ನೆಲೆ ಮಹಾತ್ಮ ಗಾಂಧಿ ಹತ್ಯೆಯ ಇತಿಹಾಸದೊಂದಿಗೆ ಬೆಸೆದುಕೊಂಡಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳುವ ಜರೂರತ್ತಿಲ್ಲ. ಗಾಂಧಿ ಹಂತಕ ಗೋಡ್ಸೆ ಆರ್‌ಎಸ್‌ಎಸ್‌ ಹಿನ್ನೆಲೆ ಉಳ್ಳವನಾಗಿದ್ದ ಎಂಬುದು ಆರ್‌ಎಸ್‌ಎಸ್‌ ವಿರೋಧಿಗಳು ಮಾಡುವ ಸವಕಲು ಆರೋಪ. ಗಾಂಧಿ ಹತ್ಯೆಗೂ ಆರ್‌ಎಸ್‌ಎಸ್‌ಗೂ ಸಂಬಂಧ ಸೂತ್ರ ಇಲ್ಲವೇ ಇಲ್ಲ ಎಂಬುದು ನ್ಯಾಯಾಲಯದಲ್ಲೇ ಸಾಬೀತಾಗಿದೆ, ಇತಿಹಾಸದ ಪುರಾವೆಗಳು ಸಾಕ್ಷೀಕರಿಸುತ್ತವೆ. ಆರ್‌ಎಸ್‌ಎಸ್‌ ಇದನ್ನು ಹೇಳುತ್ತಲೇ ಬಂದಿದೆ. ಆದರೂ ಮತ್ತೇಕೆ ಇನ್ನೂ ಆ ವರಾತ? ನ್ಯಾಯಾಲಯ, ಕಾನೂನು ಹೋರಾಟಗಳ ವಿಷಯ ಬಿಟ್ಟು, ವಾಸ್ತವಿಕ ಮತ್ತು ಐತಿಹಾಸಿಕ ಘಟನಾವಳಿಗಳ ಮೇಲೆ ಒಮ್ಮೆ ಕಣ್ಣು ಹಾಯಿಸೋಣ. ಗಾಂಧೀಜಿಗೂ ಆರ್‌ಎಸ್‌ಎಸ್‌ಗೂ ದ್ವೇಷ ಇತ್ತ? ವೈಚಾರಿಕ ಸಂಘರ್ಷ ಇತ್ತ? ಹೌದು ಎನ್ನುವುದಕ್ಕೆ ಒಂದೇ ಒಂದು ಪುರಾವೆಯೂ ಸಿಗುವುದಿಲ್ಲ. ಈ ಹೇಳಿಕೆಗೆ ಪುಷ್ಟಿ ಕೊಡಬಲ್ಲ ಕೆಲ ನಿದರ್ಶನಗಳನ್ನು ಗಮನಿಸಬೇಕು. ಅಸಹಕಾರ ಚಳವಳಿ ಆರಂಭಿಸಿದ್ದ ಗಾಂಧೀಜಿಯವರನ್ನು 1922ರಲ್ಲಿ ಬ್ರಿಟಿಷ್‌ ಸರಕಾರ ಬಂಧಿಸಿದಾಗ ನಾಗಪುರದಲ್ಲಿ ಬೃಹತ್‌ ಪ್ರತಿಭಟನೆ ಆಯೋಜನೆಯಾಗುತ್ತದೆ. ಆ ಪ್ರತಿಭಟನಾ ಸಭೆಯಲ್ಲಿ ಆರ್‌ಎಸ್‌ಎಸ್‌ ಸಂಸ್ಥಾಪಕ ಡಾ. ಕೆ.ಬಿ.ಹೆಡಗೇವಾರ್‌ ಭಾಷಣ ಮಾಡಿ ಗಾಂಧೀಜಿಯವರ ನಡೆ, ನುಡಿ, ವಿಚಾರಗಳನ್ನು ಬಲವಾಗಿ ಸಮರ್ಥಿಸುತ್ತಾರೆ. ಗಾಂಧೀಜಿಯವರನ್ನು ಬೆಂಬಲಿಸಿ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದ ಕಾರಣಕ್ಕೆ ಹೆಡಗೇವಾರ್‌ ಎರಡು ಬಾರಿ ಕಠಿಣ ಕಾರಾಗೃಹ ಶಿಕ್ಷೆಗೂ ಗುರಿಯಾಗುತ್ತಾರೆ. ಅಸಹಕಾರ ಚಳವಳಿ ಹಿನ್ನೆಲೆಯಲ್ಲಿ ಗಾಂಧೀಜಿ ಆರು ವರ್ಷ ಜೈಲು ಶಿಕ್ಷೆಗೆ ಒಳಗಾದ ಕಾರಣ 1922 ಮಾರ್ಚ್‌ 18ರಂದು ಹೆಡಗೇವಾರ್‌ ಗಾಂಧೀ ದಿನ ಹಮ್ಮಿಕೊಳ್ಳುತ್ತಾರೆ. ಅಲ್ಲಿ ಭಾಷಣ ಮಾಡಿದ ಹೆಡಗೇವಾರ್‌, ಗಾಂಧೀ ದಿನ ನಮಗೆ ಅತ್ಯಂತ ಪವಿತ್ರ, ಗಾಂಧೀಜಿಯವರ ತತ್ವಗಳು, ಅವರು ಅನುಸರಿಸುವ ಜೀವನ ಮೌಲ್ಯಗಳು ನಮಗೆ ದಾರಿದೀಪ ಎಂದು ಸಂದೇಶ ನೀಡುತ್ತಾರೆ.(ಗಾಂಧೀಜಿ ಕೃತಿ ಸಂಗ್ರಹ, ವಾಲ್ಯೂಮ್‌ 89, ಪುಟ 193/194ರಲ್ಲಿ ಉಲ್ಲೇಖ) ಅದಾಗಿ ಮೂರು ವರ್ಷ ನಂತರ ಅವರು 1925ರಲ್ಲಿ ಆರ್‌ಎಸ್‌ಎಸ್‌ ಸ್ಥಾಪಿಸಿದರು.
1934ರಲ್ಲಿ ತಮ್ಮ ಮನೆಯಲ್ಲಿ ತಂಗಿದ್ದ ಗಾಂಧೀಜಿಯವರನ್ನು ಜಮನಾಲಾಲ್‌ ಬಜಾಜ್‌ ಅವರು ವಾರ್ಧಾದಲ್ಲಿ ನಡೆಯುತ್ತಿದ್ದ ಆರ್‌ಎಸ್‌ಎಸ್‌ ಶಿಬಿರಕ್ಕೆ ಕರೆದುಕೊಂಡು ಹೋಗುತ್ತಾರೆ. ಶಿಬಿರಾರ್ಥಿಗಳ ಜೊತೆ ಗಾಂಧೀಜಿ ಮುಕ್ತವಾಗಿ ಚರ್ಚೆ ಮಾಡುತ್ತಾರೆ. ಶಿಬಿರದಲ್ಲಿ ಜಾತಿ ರಹಿತ ಸಹಬಾಳ್ವೆ ಮತ್ತು ಸ್ವಯಂಸೇವಕರ ಶಿಸ್ತು, ನಿಷ್ಠೆ ಗಾಂಧೀಜಿ ಮೇಲೆ ಅಪಾರ ಪ್ರಭಾವ ಬೀರುತ್ತದೆ. 1947 ಸೆ.16ರಂದು ದಿಲ್ಲಿಯ ಭಂಗೀ ಕಾಲನಿ ಶಾಖೆಗೆ ಗಾಂಧೀಜಿ ಭೇಟಿ ನೀಡಿ ಸುಮಾರು 500 ಸ್ವಯಂಸೇವಕರನ್ನು ಉದ್ದೇಶಿಸಿ ಭಾಷಣ ಮಾಡುತ್ತಾರೆ. ವಾರ್ಧಾ ಶಿಬಿರದ ಭೇಟಿ ಮೆಲುಕು ಹಾಕುತ್ತ ಸ್ವಯಂಸೇವಕರ ಶಿಸ್ತು, ನಿಷ್ಠೆಯನ್ನು ಕೊಂಡಾಡುತ್ತಾರೆ. ಆರ್‌ಎಸ್‌ಎಸ್‌ ಶಿಸ್ತಿನಿಂದ ಪ್ರಭಾವಿತನಾಗಿದ್ದೇನೆ ಎಂದು ಹೇಳುತ್ತಾರೆ. 1948 ಜ.30ರಂದು ಗೋಡ್ಸೆ, ಗಾಂಧಿ ಹತ್ಯೆ ಮಾಡಿದಾಗ ಆಗಿನ ಆರ್‌ಎಸ್‌ಎಸ್‌ ಮುಖ್ಯಸ್ಥ ಮಾಧವ ಸದಾಶಿವ ಗೋಳವಲ್ಕರ್‌(ಗುರೂಜಿ) ಅವರು ಗಾಂಧಿ ಪುತ್ರ ದೇವದಾಸ್‌ ಗಾಂಧಿ, ಪ್ರಧಾನಿ ನೆಹರು, ಗೃಹಮಂತ್ರಿ ಪಟೇಲರಿಗೆ ಶೋಕ ಸಂದೇಶ ಕಳುಹಿಸಿ, ‘‘ದೇಶ ಒಬ್ಬ ಶ್ರೇಷ್ಠ ನಾಯಕನನ್ನು ಕಳೆದುಕೊಂಡು ಶೂನ್ಯ ಆವರಿಸಿದೆ,’’ ಎಂದು ಮರುಗುತ್ತಾರೆ.
ತನ್ನಿಮಿತ್ತವಾಗಿ ಮುಂದಿನ 13 ದಿನ ಸ್ವಯಂಸೇವಕರು, ಸಂಘದ ಕಾರ್ಯಕರ್ತರು ಎಲ್ಲ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕೆಂದು ಗೋಳವಲ್ಕರ್‌ ಸೂಚನೆ ನೀಡುತ್ತಾರೆ. ಜ.31ರಂದು ಗೋಳವಲ್ಕರ್‌ ನೆಹರು, ಪಟೇಲರಿಗೆ ಬರೆದ ಪತ್ರದ ಸಮಗ್ರ ಭಾಗ ಗುರೂಜಿ ಸಮಗ್ರದಲ್ಲಿ ದಾಖಲಾಗಿದೆ. ಗಾಂಧೀಜಿಯವರ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ಸಾಂಗ್ಲಿಯಲ್ಲಿ ಸ್ಥಾಪನೆ ಮಾಡಿದ ಗಾಂಧೀಜಿ ಪ್ರತಿಮೆಯನ್ನು ಗೋಳವಲ್ಕರ್‌ ಅವರೇ ಅನಾವರಣ ಮಾಡುತ್ತಾರೆ. ಆ ವೇಳೆ ಭಾಷಣ ಮಾಡಿದ ಗೋಳವಲ್ಕರ್‌, ‘‘ಸಾಮಾನ್ಯನಾಗಿ ಹುಟ್ಟಿ ಅಸಾಮಾನ್ಯನಾಗಿ ಬದುಕಿದ ಮಹಾಪುರುಷ ಗಾಂಧೀಜಿ,’’ ಎಂದು ಕೊಂಡಾಡುತ್ತಾರೆ.
ಗಾಂಧೀಜಿ ಮತ್ತು ಆರ್‌ಎಸ್‌ಎಸ್‌ ನಡುವೆ ಕಂದಕ ತೋಡುವ ಪ್ರಯತ್ನಗಳು ಈಗ ಮಾತ್ರವಲ್ಲ, ಆಗಲೂ ನಡೆಯುತ್ತಿದ್ದವು. ಆರ್‌ಎಸ್‌ಎಸ್‌ ಕಟ್ಟರ್‌ ಹಿಂದೂ ಸಂಘಟನೆ, ಅದು ಮುಸ್ಲಿಮರ ವಿರುದ್ಧ ದ್ವೇಷ ಬಿತ್ತುತ್ತಿದೆ ಎಂದು ಕ್ವಿಟ್‌ ಇಂಡಿಯಾ ಚಳವಳಿ ಸಂದರ್ಭದಲ್ಲಿ ಆಗಿನ ದೆಹಲಿ ಕಾಂಗ್ರೆಸ್‌ ಅಧ್ಯಕ್ಷ ರು ಉರ್ದುವಿನಲ್ಲಿ ಗಾಂಧೀಜಿಗೆ ಪತ್ರ ಬರೆದು ದೂರುತ್ತಾರೆ. ಆ ಕುರಿತು ಗಾಂಧೀಜಿ ನೇರವಾಗಿ ಗೋಳವಲ್ಕರ್‌ ಅವರಲ್ಲೇ ವಿವರಣೆ ಕೇಳುತ್ತಾರೆ. ‘‘ಆರ್‌ಎಸ್‌ಎಸ್‌ ಹಿಂದೂಗಳ ಸಾಂಸ್ಕೃತಿಕ, ಸಾಮಾಜಿಕ ಸಂಘಟನೆ, ಹಿಂದೂಗಳ ಸೇವೆಯೇ ನಮ್ಮ ಪರಮ ಗುರಿ,’’ ಎಂಬ ವಿವರಣೆಯನ್ನು ಗೋಳವಲ್ಕರ್‌ ನೀಡಿದಾಗ, ‘‘ನಾನೂ ಕೂಡ ಸನಾತನ ಹಿಂದೂ, ಹಾಗಾಗಿ ಮನುಷ್ಯರು ಮಾತ್ರವಲ್ಲ, ಸಕಲ ಜೀವಜಗತ್ತನ್ನು ನಾನು ಪ್ರೀತಿಸುತ್ತೇನೆ,’’ ಎಂದು ಗಾಂಧೀಜಿ ಉದ್ಘಾರ ತೆಗೆಯುತ್ತಾರೆ. ಆ ಕುರಿತ ಉಲ್ಲೇಖಗಳು ಈಗಲೂ ಲಭ್ಯ. ಆರ್‌ಎಸ್‌ಎಸ್‌ ತನ್ನ ಸೇವಾ ವಿಸ್ತಾರಕ್ಕಾಗಿ ಅಂದಿನಿಂದ ಇಂದಿನವರೆಗೆ ಹಮ್ಮಿಕೊಳ್ಳುತ್ತಿರುವ ಕಾರ್ಯಚಟುವಟಿಕೆಗಳು ಯಾವುವು ಎಂಬುದನ್ನು ಗಮನಿಸಿದರೆ ಆ ಎಲ್ಲವೂ ಗಾಂಧಿಗೆ ಪ್ರಿಯವಾದವೇ. ಗ್ರಾಮೀಣಾಭಿವೃದ್ಧಿಗೆ ಆದ್ಯತೆ, ಗೋ ಸಂರಕ್ಷ ಣೆ ಕಾರ್ಯಕ್ರಮ, ಸಾವಯವ ಕೃಷಿಗೆ ಪೋಷಣೆ, ಜನಜಾತಿಗಳ ನಡುವೆ ಸಾಮಾಜಿಕ ಸಾಮರಸ್ಯ ಬೆಳೆಸುವುದು, ಮಾತೃಭಾಷಾ ಶಿಕ್ಷ ಣ ಪ್ರಸಾರಕ್ಕೆ ಉತ್ತೇಜನ ಕೊಡುವುದು, ಸ್ವದೇಶಿ ಆರ್ಥಿಕತೆ ಬೆಳೆಸುವುದು ಇತ್ಯಾದಿ ಇತ್ಯಾದಿ. ಇವೆಲ್ಲವೂ ಮೂಲಭೂತವಾಗಿ ಗಾಂಧಿ ತತ್ವದ ಪ್ರಚಾರ ಮತ್ತು ಪ್ರಸಾರವೇ ತಾನೆ? ಈ ಕಾರ್ಯಕ್ರಮಗಳನ್ನು ಕಾಂಗ್ರೆಸ್‌ ಹಮ್ಮಿಕೊಳ್ಳುವುದಾದರೆ ಆರ್‌ಎಸ್‌ಎಸ್‌ ಮತ್ತು ಕಾಂಗ್ರೆಸ್‌ ನಡುವೆ ಭಿನ್ನಾಭಿಪ್ರಾಯ ಏರ್ಪಡಲು ಕಾರಣಗಳೇ ಸಿಗಲಾರವು.
ಗಾಂಧೀಜಿ ಮಾತ್ರವಲ್ಲ, ಆರ್‌ಎಸ್‌ಎಸ್‌ ವಿಷಯದಲ್ಲಿ ಅಂಬೇಡ್ಕರ್‌ ನಿಲುವು ಏನಿತ್ತು ಎಂಬುದೂ ಸಹ ಇಲ್ಲಿ ಪ್ರಮುಖವಾಗುತ್ತದೆ. 1939ರಲ್ಲಿ ಅಂಬೇಡ್ಕರ್‌ ಪುಣೆಯ ಆರ್‌ಎಸ್‌ಎಸ್‌ ಶಾಖೆಗೆ ಭೇಟಿ ಕೊಟ್ಟಿದ್ದರು. ಆರ್‌ಎಸ್‌ಎಸ್‌ ಕಾರ್ಯಕರ್ತರ ನಡುವೆ ನಿಜವಾದ ಭ್ರಾತೃತ್ವ ಕಂಡೆ, ಜಾತಿ, ಮತ ಮರೆತು ಎಲ್ಲರೂ ಒಂದಾಗುವುದು ಅನನ್ಯವಾದುದು ಎಂದು ಅಂಬೇಡ್ಕರ್‌ ಹೇಳಿರುವುದಕ್ಕೆ ಉಲ್ಲೇಖಗಳು ಸಿಗುತ್ತವೆ. 1952ರ ಚುನಾವಣೆಯಲ್ಲಿ ಅಂಬೇಡ್ಕರ್‌ ನೇತೃತ್ವದ ಪರಿಶಿಷ್ಟ ಜಾತಿ ಫೆಡರೇಶನ್‌ ಅಂದಿನ ಜನಸಂಘದ ಜೊತೆಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುತ್ತದೆ. ಹಿರಿಯ ಆರ್‌ಎಸ್‌ಎಸ್‌ ಮುಖಂಡ ದತ್ತೋಪಂಥ ಠೇಂಗಡಿ ಅವರೇ ಬಾಂದ್ರಾ ಕ್ಷೇತ್ರದಲ್ಲಿ ಅಂಬೇಡ್ಕರರ ಚುನಾವಣಾ ಏಜೆಂಟ್‌ ಆಗಿರುತ್ತಾರೆ. ಈಗಿನ ಸನ್ನಿವೇಶದಲ್ಲಿ ಈ ಎಲ್ಲ ಸಂಗತಿಗಳು ಮಹತ್ವ ಪಡೆದುಕೊಳ್ಳುವುದು ಬೇಡವೆ?
ಈಗ ಜೂನ್‌ 6, 2018ರಂದು ಪ್ರಣಬ್‌ ಮುಖರ್ಜಿ ನಾಗಪುರದ ಆರ್‌ಎಸ್‌ಎಸ್‌ ಶಿಬಿರಕ್ಕೆ ಭೇಟಿ ಮಾಡಿದ ಪ್ರಕರಣಕ್ಕೆ ಮತ್ತೆ ಬರೋಣ. ಪ್ರಣಬ್‌ ನಿಸ್ಪೃಹ, ನಿರುಮ್ಮಳವಾದ ಮನಸ್ಸಿನಿಂದ ಆರ್‌ಎಸ್‌ಎಸ್‌ ಶಿಬಿರಕ್ಕೆ ಭೇಟಿ ನೀಡಿದ್ದರು ಎಂಬುದರಲ್ಲಿ ಅನುಮಾನ ಬೇಡ. ಸಣ್ಣ ಪುಟ್ಟ ಸ್ವಾರ್ಥಗಳಿಗೋಸ್ಕರ ನಾನು ಆರ್‌ಎಸ್‌ಎಸ್‌, ನಾನು ಬಿಜೆಪಿ, ನಾನು ಕಾಂಗ್ರೆಸ್‌, ನಾನು ಮತ್ತೊಂದು ಎಂದು ಹೇಳಿಕೊಳ್ಳುವ ಕ್ಷ ುಲ್ಲಕ ಜನರನ್ನು ನಾವು ಹಾದಿ ಬೀದಿಯಲ್ಲಿ ಕಾಣುವುದು ನಿಜ. ಪ್ರಣಬ್‌ ನಾಗಪುರಕ್ಕೆ ಭೇಟಿ ನೀಡುವಾಗ ಮಾಜಿ ರಾಷ್ಟ್ರಪತಿ ಆಗಿದ್ದರು ಎಂಬುದು ಗೊತ್ತಿರಲಿ. ಅದು ಅವರ ಜೀವನದಲ್ಲಿ ಅಲಂಕರಿಸಬಹುದಾದ ಕಟ್ಟಕಡೆಯ ಹುದ್ದೆಯೂ ಹೌದು. ಹಾಗೆಯೇ ಬೇರೆಲ್ಲ ಕಾಂಗ್ರೆಸ್‌ ನಾಯಕರು ಒತ್ತಡ ಹಾಕಿದ್ದು ಒತ್ತಟ್ಟಿಗಿರಲಿ, ತಾನು ಅತಿಯಾಗಿ ಪ್ರೀತಿಸುವ ಪುತ್ರಿ ಶರ್ಮಿಷ್ಠಾ ಮುಖರ್ಜಿ ಬಹಿರಂಗವಾಗಿ ಟೀಕೆ, ವಿರೋಧ ವ್ಯಕ್ತಪಡಿಸಿದ್ದಕ್ಕೂ ತಲೆಕೆಡಿಸಿಕೊಳ್ಳಲಿಲ್ಲ. ಅದೆಲ್ಲದರ ಬಳಿಕ ನಾಗಪುರದಲ್ಲಿ ಆರ್‌ಎಸ್‌ಎಸ್‌ ಶಿಬಿರ ಉದ್ದೇಶಿಸಿ ಪ್ರಣಬ್‌ ಮಾಡಿದ ಭಾಷಣ ಇನ್ನೂ ಆಸಕ್ತಿದಾಯಕ. ‘‘ನನ್ನ ದೇಶ ಭಾರತದ ಬಗ್ಗೆ, ರಾಷ್ಟ್ರ, ರಾಷ್ಟ್ರೀಯತೆ ಮತ್ತು ದೇಶಪ್ರೇಮದ ಬಗ್ಗೆ ನನ್ನ ಗ್ರಹಿಕೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಂದಿದ್ದೇನೆ,’’ ಎಂದು ಪ್ರಣಬ್‌ ಖಚಿತವಾಗಿ ಹೇಳುತ್ತಾರೆ. ‘‘ರಾಷ್ಟ್ರೀಯತೆ ಕೇವಲ ಯಾರೋ ಒಬ್ಬರಿಗೆ ಸೇರಿದ್ದಲ್ಲ ಎಂದು ಗಾಂಧೀಜಿ ಹೇಳಿದ್ದಾರೆ. ಹಿಂದೂ, ಮುಸ್ಲಿಂ ಮತ್ತು ಇತರ ಮತಧರ್ಮಗಳ ಸಂಗಮದಿಂದಲೇ ಭಾರತದ ರಾಷ್ಟ್ರೀಯತೆ ಹುಟ್ಟಿದೆ ಎಂದು ಪಂಡಿತ್‌ ನೆಹರು ಪ್ರತಿಪಾದಿಸಿದ್ದರು,’’ ಎಂಬುದನ್ನು ಆರ್‌ಎಸ್‌ಎಸ್‌ ಸರಸಂಘಚಾಲಕರ ಎದುರು ಒತ್ತಿ ಹೇಳುತ್ತಾರೆ. ‘‘ನಾನು ಕಣ್ಣುಮುಚ್ಚಿ ಇಡೀ ಭಾರತದ ಚಿತ್ರಣವನ್ನು ಒಂದು ತುದಿಯಿಂದ ಮತ್ತೊಂದು ತುದಿವರೆಗೆ ಸ್ಮರಿಸಿಕೊಂಡಾಗ ರೋಮಾಂಚನವಾಗುತ್ತದೆ. ತ್ರಿಪುರಾದಿಂದ ದ್ವಾರಕ, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಅಸಂಖ್ಯ ಜಾತಿ, ಮತಧರ್ಮಗಳ ಜನರನ್ನು ಒಂದೇ ಸಂವಿಧಾನ ಶಾಶ್ವತವಾಗಿ ಪೋಣಿಸಿದೆ,’’ ಎಂದು ಹೇಳಿ ಭಾವುಕರಾಗುತ್ತಾರೆ.
ಹಾಗಾದರೆ ಭಾರತದ ಪ್ರಜಾತಂತ್ರದ ಪ್ರತಿಮೆಯನ್ನು ಹೊಳಪುಗೊಳಿಸಲು ಇಂತಹ ಸಂವಾದಗಳು ಬೇಡವೇ? ಇದು ಐತಿಹಾಸಿಕ, ಇದೊಂದು ಬೆಂಚ್‌ ಮಾರ್ಕ್‌ ಎಂಬುದರಲ್ಲಿ ಅನುಮಾನ ಬೇಡ.
ಎಲ್ಲದಕ್ಕಿಂತ ಮುಖ್ಯವಾಗಿ ದೃಢವಾದ ನಡೆಯಿಂದ ತಾನೊಬ್ಬ ನೈಜ ಮತ್ತು ವರಿಷ್ಠ ಕಾಂಗ್ರೆಸ್ಸಿಗ ಎಂಬುದನ್ನು ಪ್ರಣಬ್‌ ನಿರೂಪಿಸಿಬಿಟ್ಟರು. ಅದು ತಪ್ಪಾ? ಅದು ಅಪರಾಧವೇ? ದುರಂತ ಅಂದರೆ ದ್ವೇಷ ಬೇಡ, ಭ್ರಾತೃತ್ವ ಬೇಕು, ಸಹಬಾಳ್ವೆ, ಸಂವಹನ, ಸಂಸ್ಕೃತಿ ಬೇಕು ಎಂದ ಗಾಂಧೀಜಿ, ಅಂಬೇಡ್ಕರ್‌, ಗೋಳವಲ್ಕರ್‌, ನರೇಂದ್ರ ಮೋದಿಯವರ ವಾರಸುದಾರರೇ ಇಂದು ಕುರುಡಾಗಿ ದ್ವೇಷ ಕಾರುವುದರಲ್ಲಿ, ಕೂಗು ಮಾರಿಗಳಾಗುವುದರಲ್ಲಿ ಮುಳುಗಿಹೋಗುತ್ತಿದ್ದಾರೆ. ಅಂಥವರು ಬಳಸುವ ಅಸಾಂವಿಧಾನಿಕ ಭಾಷೆ, ಆಡುವ ತೂಕವಿಲ್ಲದ ಮಾತುಗಳನ್ನು ನೋಡಿದರೆ ಖೇದವಾಗುತ್ತದೆ.
ಕಡೆಯದಾಗಿ ಒಂದು ಮಾತು; ಬಹಳ ವರುಷಗಳವರೆಗೆ ಆರ್‌ಎಸ್‌ಸ್‌, ಬಿಜೆಪಿ ಕುರಿತು ಈ ದೇಶದ ಎಲ್ಲ ರಾಜಕೀಯ ಪಕ್ಷ ಗಳು, ವಿಚಾರವಾದಿಗಳು ಒಂದು ರೀತಿಯ ಅಸ್ಪೃಶ್ಯತೆಯನ್ನೇ ಆಚರಿಸಿಕೊಂಡು ಬಂದರು. ಆದರೆ, ಈ ದೇಶದ ಜನ ಆ ರೀತಿ ಮಾಡಲಿಲ್ಲ. ಅದರ ತಪ್ಪು-ಒಪ್ಪುಗಳನ್ನು ವಿಶ್ಲೇಷಿಸುತ್ತಲೇ, ಆ ರಾಜಕೀಯ ಪಕ್ಷ ದೊಂದಿಗೆ ಬೆರೆತರು, ಸಂವಾದಿಸಿದರು, ವಿಮರ್ಶೆ ಮಾಡಿದರು. ದೂರವಿಟ್ಟರು, ಮತ್ತೆ ಬೆರೆತರು. ಭಿನ್ನತೆಯೊಂದಿಗೆ ಬೆರೆಯುವುದು ಪ್ರಜಾಪ್ರಭುತ್ವದ ಬೆರಗು, ಅದು ಈ ದೇಶದ ಜನರಿಗಿದೆ. ಉತ್ತಮ ಸಮಾಜಕ್ಕೆ, ಆರೋಗ್ಯಪೂರ್ಣ ವ್ಯವಸ್ಥೆಗೆ ಟೀಕೆ, ವಿಮರ್ಶೆಗಳು ಬೇಕು, ಪರಸ್ಪರ ಸಂವಾದಗಳು, ಸಮನ್ವಯಗಳು ನಿರಂತರವಾಗಿ ನಡೆಯುತ್ತಿರಬೇಕು. ಖರ್ಗೆ, ಸಿದ್ದರಾಮಯ್ಯನವರೇ ಒಪ್ಪುವಿರಾ?

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top