ಸಾಂಕ್ರಾಮಿಕ ಸೃಷ್ಟಿಸಿದ ತಳಮಳ ಯಾತನೆಗಳೇ ಮುಂದಿನ ಸಾಹಿತ್ಯದ ದಾರಿ ದೀವಿಗೆಗಳಾಗಬಹುದು.
– ಡಾ. ರೋಹಿಣಾಕ್ಷ ಶಿರ್ಲಾಲು.
ಸಾಹಿತ್ಯ ಕಾಲಕಾಲಕ್ಕೆ ಹೊಸ ಮಾರ್ಗವನ್ನು ತನಗೆ ತಾನೇ ಶೋಧಿಸಿಕೊಳ್ಳುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ನೋಡಿದರೆ ಕೊರೊನಾ ಸೋಂಕು ಕೂಡ ಸಾಹಿತ್ಯ ಅಭಿವ್ಯಕ್ತಿಗೆ ಹೊಸದೊಂದು ಮಾರ್ಗವನ್ನು ಕಂಡುಕೊಳ್ಳಲು ಅವಕಾಶವಾಗಬಹುದು. ಸಾಹಿತ್ಯ ಚರಿತ್ರೆಯ ಕಾಲ ವಿಂಗಡನೆಯ ವಿಭಾಗ ಕ್ರಮದೊಳಗೆ ಇನ್ನು ಮುಂದೆ ಕೊರೊನಾ ಪೂರ್ವದ ಸಾಹಿತ್ಯ, ಕೊರೊನೋತ್ತರ ಸಾಹಿತ್ಯ ಎಂಬ ವಿಭಾಗಕ್ರಮಗಳೂ ಸೇರಬಹುದಾಗಿದೆ. ಕೇವಲ ವಿಭಾಗ ಕ್ರಮದ ದೃಷ್ಟಿಯಿಂದ ಮಾತ್ರವಲ್ಲ, ಸಾಹಿತ್ಯ ಕೃತಿಗಳ ಸಂವೇದನೆ, ವಸ್ತು-ವಿನ್ಯಾಸಗಳ ನೆಲೆಯಿಂದಲೂ ಈ ಹೊಸ ವಿಭಾಗ ಕ್ರಮಕ್ಕೆ ಅರ್ಥ ಬಂದೀತು. ಜಗತ್ತಿನ ಸಾಹಿತ್ಯದ ಮೇಲೆ ಕೈಗಾರೀಕರಣ, ಜಾಗತೀಕರಣಗಳು ವ್ಯಾಪಕವಾಗಿ ಪರಿಣಾಮವನ್ನು ಉಂಟುಮಾಡಿ ಹೊಸ ಸಿದ್ಧಾಂತಗಳ ಹುಟ್ಟು, ಹೊಸಬಗೆಯ ಅಭಿವ್ಯಕ್ತಿ ಮಾದರಿಗಳಿಗೆ ಚಾಲನೆ ದೊರೆತಂತೆ ಕೊರೊನಾ ಎನ್ನುವ ವಿದ್ಯಮಾನವೂ (ರೋಗ ಎನ್ನುವ ಸಾಮಾನ್ಯ ಸ್ತರದ ಆಚೆ ಕೊರೊನಾವು ಒಂದು ವಿದ್ಯಮಾನವಾಗಿದೆ) ಬಹು ಗಂಭೀರ ಪರಿಣಾಮವನ್ನು ಉಂಟುಮಾಡಿದೆ.
ಕೊರೊನಾದಿಂದ ಲೋಕ ಬದುಕಿನ ಬಹುತೇಕ ವಲಯಗಳು ಸ್ಥಗಿತಗೊಂಡಂತೆ, ಸೃಷ್ಟಿಶೀಲವಾದ, ಸೃಜನಶೀಲವಾದ ಮನಸುಗಳು ಸ್ಥಗಿತಗೊಂಡಿರಬಹುದೇ ಎಂದು ಯೋಚಿಸಿದರೆ, ಖಂಡಿತವಾಗಿಯೂ ಇಲ್ಲ ಎನ್ನಬೇಕು. ಹೊರಜಗತ್ತು ಪೂರ್ಣವಾಗಿ ಸ್ಥಗಿತಗೊಂಡ ಸ್ಥಿತಿಯಲ್ಲೂ ಕವಿಯ ಒಳಜಗತ್ತಿನ ಪಯಣ ಹೊಸಬಗೆಯಿಂದ ಅರಂಭಗೊಂಡಿರುತ್ತದೆ. ಹೀಗಾಗಿ ಕೊರೊನಾ ಲಾಕ್‌ಡೌನ್ ವೇಳೆಯಲ್ಲೂ ಹತ್ತಾರು ಹೊಸಬಗೆಯ ಸಾಹಿತ್ಯ ಕೃತಿಗಳು ಹುಟ್ಟಿಕೊಂಡಿದೆ. ಇದರಿಂದ ಸ್ಪಷ್ಟವಾಗುವ ಸಂಗತಿ ಎಂದರೆ ಸಾಹಿತ್ಯ ಕ್ಷೇತ್ರದಲ್ಲಿನ ಜೀವಂತಿಕೆ ಈ ಸಂದರ್ಭದಲ್ಲಿ ನಷ್ಟವಾಗಲಿಲ್ಲ, ಅಥವಾ ಕುಗ್ಗಿ ಹೋಗಲಿಲ್ಲ.
ನಮ್ಮಲ್ಲಿ ಇಂದು ಕೊರೊನೋತ್ತರ ಆರ್ಥಿಕತೆಯ ಬಗ್ಗೆ, ಕೊರೊನೋತ್ತರ ಶಿಕ್ಷಣ ವ್ಯವಸ್ಥೆಯ ಬಗ್ಗೆ, ಕೊರೊನೋತ್ತರ ಅಂತಾರಾಷ್ಟ್ರೀಯ ಸಂಬಂಧಗಳ ಬಗ್ಗೆ, ಉದ್ಯೋಗ ಸೃಷ್ಟಿಯ ಬಗ್ಗೆ, ಆರೋಗ್ಯ ಸೇವೆಗಳ ಬಗ್ಗೆ ಚರ್ಚೆಗಳಾಗುತ್ತಿದೆ. ಇವುಗಳಿಗೆ ಹೋಲಿಸಿದರೆ ಕೊರೊನೋತ್ತರ ಯುಗದ ಸಾಹಿತ್ಯ ವಿಷಯದ ಬಗ್ಗೆ ಇನ್ನೂ ಗಂಭೀರವಾದ ಚರ್ಚೆಗಳು ಆರಂಭಗೊಂಡಿಲ್ಲ. ನವ್ಯೋತ್ತರ, ವಸಾಹತೋತ್ತರ, ಆಧುನಿಕೋತ್ತರ ಮೊದಲಾದ ವಿಮರ್ಶೆಯ ತಾತ್ವಿಕ ಪರಿಭಾಷೆಗಳಂತೆ ಕೊರೊನೋತ್ತರ ಎನ್ನುವ ಒಂದು ಹೊಸ ಪರಿಭಾಷೆ ಮುಂದೆ ವಿಮರ್ಶೆಯ ಚೌಕಟ್ಟಿನೊಳಗೆ ಜಾಗ ಪಡೆದುಕೊಳ್ಳಬಹುದು.
ಕೊರೊನಾ ಈಗ ಕೇವಲ ಹರಡುವ ಒಂದು ವೈರಸ್ ಮಾತ್ರವಾಗಿರದೆ, ಅದರಾಚೆಗೆ ಅದು ನಮ್ಮ ಸಂವೇದನೆಯನ್ನು ತಟ್ಟುವ, ಮುಟ್ಟುವ, ರೂಪಿಸುವ ಸಂಗತಿಯೂ ಆಗಿದೆ. ಹೀಗಾಗಿ ನಮ್ಮನ್ನು ನಾವೇ ಒಮ್ಮೆ ತಿರುಗಿ ನೋಡುವಂತೆ ಮಾಡಿತು. ಕೊರೊನಾ ಸದ್ಯದ ಮನುಕುಲ ಎದುರಿಸುತ್ತಿರುವ ಅತ್ಯಂತ ತೀವ್ರವಾದ ತಲ್ಲಣವೇ ಆಗಿದೆ, ನಾವು ಅದಕ್ಕೆ ಸಾಕ್ಷಿಯಾಗಿದ್ದೇವೆ. ಒಂದು ಕ್ರೌಂಚ ಹಕ್ಕಿಗೆ ಚುಚ್ಚಿದ ಬಾಣ ಹಾಗೂ ಅದರ ಹಿಂದೆ ಕೇಳಿಬಂದ ಹಕ್ಕಿಯ ಆರ್ತನಾದ ಒಂದು ಶ್ರೇಷ್ಠವಾದ ರಾಮಾಯಣ ಕೃತಿಯ ಹುಟ್ಟಿಗೆ ಕಾರಣವಾಯಿತು. ಭೀಕರ ಯುದ್ಧವು ಉಂಟುಮಾಡಿದ ಪರಿಣಾಮವು ‘ವಾರ್ ಆಂಡ್ ಪೀಸ್’ನಂತಹ ಮಹಾ ಕಲಾಕೃತಿಯೊಂದರ ಮೂಲಕ ಪ್ರಕಟವಾಯಿತು. ನಮ್ಮ ಇಂದಿನ ಸ್ಥಿತಿಗತಿ ಇದಕ್ಕಿಂತ ಭಿನ್ನವಾದುದೇನೂ ಅಲ್ಲ. ನೋಡನೋಡುತ್ತಿದ್ದಂತೆ ದೇಶ, ಭಾಷೆಗಳ ಗಡಿಗಳನ್ನು ಮೀರಿ ಲಕ್ಷಾಂತರ ಜನ ಕಣ್ಮುಂದೆಯೇ ಏದುಸಿರು ಬಿಡುತ್ತಾ ಕೊನೆಯುಸಿರೆಳೆದಿದ್ದಾರೆ. ದಾರಿಯಲ್ಲಿ ನಡೆಯುತ್ತಲೇ ಕುಸಿದು ಪ್ರಾಣ ಕಳೆದುಕೊಂಡಿದ್ದಾರೆ. ಬದುಕುವುದಕ್ಕಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುತ್ತಿದ್ದಾರೆ. ಹತ್ತಿರದ ಬಂಧುಗಳ ಕಣ್ಣೆದುರೆ ಪ್ರಾಣ ಕಳೆದುಕೊಂಡಿದ್ದಾರೆ. ಆಸ್ಪತ್ರೆಗಳ ಕಾರಿಡಾರ್‌ನಲ್ಲಿ ಒಂದರ ಪಕ್ಕ ಒಂದರಂತೆ ಪ್ಲಾಸ್ಟಿಕ್‌ನಿಂದ ಸುತ್ತಿದ ಹೆಣಗಳನ್ನು ಜೋಡಿಸಿಟ್ಟಿದ್ದಾರೆ. ಮನುಷ್ಯ ತನ್ನ ಪ್ರೀತಿಪಾತ್ರರಿಂದಲೆ ದೂರವಾಗುವ, ಹಾಗೆ ದೂರದಲ್ಲೆ ಶವವಾಗುವ, ಆ ಶವವನ್ನೂ ಕೂಡ ಸಮೀಪದಿಂದ ನೋಡಲಾಗದ ಸನ್ನಿವೇಶದಲ್ಲಿ ಬದುಕುತ್ತಿರುವ ಸಂದರ್ಭದಲ್ಲಿ ಹುಟ್ಟಿದ ತಲ್ಲಣ ಮುಂದಿನ ಶ್ರೇಷ್ಠ ಸಾಹಿತ್ಯ ಕೃತಿಗಳ ಹುಟ್ಟಿಗೆ ಕಾರಣವಾಗಬಹುದು.
ನಮ್ಮ ಸಾಹಿತ್ಯದ ಸ್ವರೂಪವೇ ಮುಂದೆ ಹೊಸ ತಿರುವನ್ನು ಪಡೆದುಕೊಳ್ಳಬಹುದು. ಒಂದು ಛಂದೋಪ್ರಕಾರದಿಂದ ಇನ್ನೊಂದು ಛಂದೋಪ್ರಕಾರಕ್ಕೆ ನಮ್ಮ ಮಹಾಕಾವ್ಯಗಳು ಹೊರಳಿಕೊಂಡಂತೆ, ಮಹಾಕಾವ್ಯಗಳಿಂದ ಕವಿತೆಯ ಸಂಕ್ಷಿಪ್ತತೆಗೆ ಹೊರಳಿಕೊಂಡಂತೆ, ನವೋದಯದ ಪ್ರಕೃತಿ ಪ್ರೀತಿ – ನಾಡು-ದೇಶಪ್ರೇಮಗಳ ತೀವ್ರತೆಯಿಂದ ನವ್ಯದ ವ್ಯಕ್ತಿಯ ಆಂತರ್ಯದ ತೊಳಲಾಟಕ್ಕೆ ಹೊರಳಿದಂತೆ, ಬಂಡಾಯ ದಲಿತದ ಸಮೂಹ ನೆಲೆಯ ನೋವಿಗೆ ಸ್ಪಂದಿಸಲು ಶೈಲಿ-ಭಾಷೆಯಲ್ಲಿ ಪಲ್ಲಟವಾದಂತೆ ಬಹುಶಃ ಈ ಕೊರೊನಾ ಭೀಕರತೆಯೂ ಸಾಹಿತ್ಯ ಅಭಿವ್ಯಕ್ತಿಯ ಪಲ್ಲಟಕ್ಕೆ ಕಾರಣವಾಗಬಹುದು.
ನಮ್ಮ ಸಾಹಿತ್ಯದಲ್ಲಿ ಯುದ್ಧಗಳ ಭೀಕರತೆಯನ್ನು ವರ್ಣಿಸುವ ಹತ್ತಾರು ಮಹತ್ವದ ಕೃತಿಗಳಿವೆ. ಬಹುಶಃ ಇನ್ನು ಮುಂದೆ ಸಾಂಕ್ರಾಮಿಕ ರೋಗಕಾಲದ ಬದುಕಿನ ಕುರಿತಾಗಿ ಮಹತ್ವದ ಕೃತಿಗಳು ಬರಬಹುದು. ಮುಂದಿನ ತಲೆಮಾರಿಗೆ ಈ ಸಾಂಕ್ರಾಮಿಕ ಮಾಡಿದ ಭೀಕರ ಪರಿಣಾಮ, ಮಾನವ ಸಂಬಂಧಗಳ ತಳಮಳ ಇವುಗಳು ಉಳಿಯುವುದು ಇಂದಿನ ಟಿವಿ ವರದಿಗಳಿಂದ ಅಲ್ಲ. ಈ ನೋವಿನ ಭೀಕರತೆಯನ್ನು ಗ್ರಹಿಸಿ ಸೃಷ್ಟಿಸಿದ ಸಾಹಿತ್ಯದಿಂದ.
ಸಾಂಕ್ರಾಮಿಕ ರೋಗ ಮತ್ತು ಅದರ ಪರಿಣಾಮ ಆಧಾರಿತವಾದ ಸಾಹಿತ್ಯವೇ ಮುಂದಿನ ದಶಕದ ಬಹುಮುಖ್ಯ ಸಾಹಿತ್ಯವಾದೀತು. ಯಾಕೆಂದರೆ ಇದು ಈ ಶತಮಾನ ಎದುರಿಸಿದ ಬಹುದೊಡ್ಡ ದುರಂತ. ನಮ್ಮ ವರ್ತಮಾನದ ಬಹುಚಾಲ್ತಿಯ ಪದಗಳಾದ ವಲಸೆ, ಐಸೊಲೇಷನ್, ಲಾಕ್‌ಡೌನ್, ಸೋಷಿಯಲ್ ಡಿಸ್ಟೆನ್ಸಿಂಗ್ ಮತ್ತು ಸಾವು ಎನ್ನುವುದು ಕೇವಲ ಪದಗಳಷ್ಟೇ ಅಲ್ಲ. ಸಂವೇದನಾಶೀಲ ಮನಸ್ಸಿಗೆ ಇವುಗಳೆಲ್ಲವೂ ಒಂದೊಂದು ಲೋಕತಲ್ಲಣಗಳಾಗಿ ಕಾಣುತ್ತದೆ. ಸಾಹಿತ್ಯ ಇದನ್ನು ಗ್ರಹಿಸುವ ರೀತಿ ವಿಶಿಷ್ಟವಾಗಿರುತ್ತದೆ.
ಜನಗಳಿಗೆ ತಾವು ಹುಟ್ಟಿದ ಊರೇ ಸಂಚಾರಿ ವ್ಯವಸ್ಥೆಯ ಅಭಾವದಿಂದ ದೂರವಾದ ಚಿತ್ರಣ ಒಂದು ಕಡೆ, ಪಂಜಾಬ್‌ನ ಯಾವುದೋ ಒಂದು ಹಳ್ಳಿಗೆ ದೂರದ ಹಿಮಾಲಯ ಶುಭ್ರವಾಗಿ ಕಂಡ ದೃಶ್ಯ, ಮಹಾನಗರದ ಮಾಲಿನ್ಯ ತಗ್ಗಿದ ಸ್ಥಿತಿಯಲ್ಲಿ ಮನುಷ್ಯರಿಲ್ಲದ ಬೀದಿಗಳು ಶುಭ್ರವಾದುದು, ಹರಿವ ನದಿಯ ನೀರು ಸ್ಪಟಿಕ ಶುಭ್ರವಾದುದು… ಇವುಗಳೆಲ್ಲ ಮುಂದಿನ ಸಾಹಿತ್ಯ ಜಗತ್ತಿನ ಅಪೂರ್ವ ಸಂಕೇತಗಳಾಗಬಹುದು. ಜೀವಪ್ರೀತಿಯ ಆನುಭಾವಿಕ ಸ್ವರೂಪವನ್ನು ಈ ಸಂಕೇತಗಳು ಪಡೆಯಬಹುದು. ಬದುಕಿನ ಆದ್ಯತೆಗಳು ಯಾವುದು ಎನ್ನುವುದನ್ನು ಪುನರ್ ಪರಿಶೀಲಿಸುವ, ನಾವು ಯಾವುದನ್ನು ಅಗತ್ಯ, ಅನಿವಾರ್ಯ ಎಂದುಕೊಂಡಿದ್ದೆವೋ, ಅವುಗಳು ಬದುಕಿನ ಆಪತ್ತಿನ ಹೋರಾಟದ ಸಂದರ್ಭದಲ್ಲಿ ಅನಿವಾರ್ಯವಲ್ಲ ಎನ್ನುವುದನ್ನು ಅರ್ಥಮಾಡಿಸಿದ ಬಗೆಯನ್ನೂ ಸಾಹಿತ್ಯ ಸೂಕ್ಷ್ಮವಾಗಿ ಗ್ರಹಿಸಿ ಪ್ರಕಟಿಸುತ್ತದೆ.
ಬದುಕಿನ ಬಗೆಗೆ ಈವರೆಗೂ ಕಟ್ಟಿಕೊಂಡ ಕಲ್ಪನೆಗಿಂತ ಭಿನ್ನವಾದ ವಾಸ್ತವವೊಂದಕ್ಕೆ ಮುಖಾಮುಖಿಯಾದೆವು. ಈ ಬಗೆಯ ತೆರೆದುಕೊಳ್ಳುವಿಕೆ ಹೊಸಬಗೆಯ ಅಭಿವ್ಯಕ್ತಿಯ ಸಾಧ್ಯತೆಯನ್ನು ಹುಟ್ಟಿಸುತ್ತದೆ. ಕಾಲ್ಪನಿಕ ರಮ್ಯತೆಗಿಂತ ಭಿನ್ನವಾದ ಕಟುವಾಸ್ತವ ಎದುರು ಬಂದು, ಸಂಬಂಧಗಳ ದೂರ -ಸಾಮೀಪ್ಯ ಎಂದರೆ ಏನು ಎನ್ನುವುದನ್ನು ಹೊಸದಾಗಿ ನೋಡುವಂತೆ ಮಾಡಿದೆ. ಒಂದೆಡೆ ಮನುಷ್ಯರೆಲ್ಲರನ್ನೂ ಕಾಡಿದ ರೋಗದ ಭೀತಿ, ಇನ್ನೊಂದೆಡೆ ಸ್ವತಃ ಐಸೊಲೆಶನ್‌ಗೆ ಒಳಗಾದ ಜನರ ಅನುಭವ, ಲ್ಯಾಬ್ ರಿಪೋರ್ಟ್ ಪಾಸಿಟಿವ್ ಎಂದಾಗ ಉಂಟಾದ ತಳಮಳ, ತನ್ನವರಿಂದಲೇ ದೂರವಾದ ಸಂಕಟ, ನೆಗೆಟಿವ್ ಎನ್ನುವ ವರದಿ ಕೊಟ್ಟ ಸಂತೋಷ, ಲಾಕ್‌ಡೌನ್ ಘೋಷಿಸಿದಾಗ ಮನೆಯುಳ್ಳವರು ತಮ್ಮ ತಮ್ಮ ಮನೆ ಸೇರಿಕೊಂಡಾಗ ಉಂಟಾದ ಹಿತಾನುಭವ, ಮನೆಯೇ ಅಲ್ಲದ ಟೆಂಟ್ ಗುಡಿಸಲುಗಳನ್ನು ಬಿಟ್ಟು ಮನೆಯೇ ಇಲ್ಲದ ಊರಿಗೆ ಹೊರಟುನಿಂತ ವಲಸೆ ದಂಡು, ರೈಲ್ವೇ ಹಳಿಯ ಪಕ್ಕ ದಣಿವಾರಿಸಿಕೊಳ್ಳಲು ಲೋಕ ಮರೆತು ನಿದ್ರಿಸಿದಲ್ಲೇ ರುಂಡ -ಮುಂಡ ಛಿದ್ರಛಿದ್ರವಾದವರು, ಚೆಲ್ಲಿದ ರೊಟ್ಟಿಯ ಚಿತ್ರ, ಬಿಸಿಲಿಗೆ ನಡೆಯುತ್ತಲೇ ಒಡೆದ ಪಾದ, ನೂರಾರು ಮೈಲುಗಳಾಚೆಯಿಂದ ಅಪ್ಪನನ್ನು ಸೈಕಲ್ ಏರಿಸಿಕೊಂಡು ಸೈಕಲ್ ತುಳಿದು ಊರು ಸೇರಿದ ಬಾಲೆ, ದಾರಿ ನಡುವೆ ಪ್ರಾಣ ಬಿಟ್ಟ ಆಪ್ತ ಬಂಧುವಿನ ಅಂತ್ಯ ಸಂಸ್ಕಾರವನ್ನೂ ಮಾಡಲಾಗದೆ ಹೃದಯ ಕಲ್ಲುಮಾಡಿಕೊಂಡು ಮುಂದೆ ಸಾಗಿದ ಅನಿವಾರ್ಯತೆ, ಲಾಕ್‌ಡೌನ್ ಘೋಷಿಸುತ್ತಿದ್ದಂತೆ ಈವರೆಗೆ ತನ್ನ ಮುಗಿಲೆತ್ತರದ ಕಟ್ಟಡಗಳ ತುದಿಗೆ ಪ್ರಾಣದ ಹಂಗುತೊರೆದು ಇಟ್ಟಿಗೆ ಹೊತ್ತ ಕಾರ್ಮಿಕನ ಜತೆಗಿನ ಸಂಬಂಧವನ್ನೇ ಕಳಚಿಕೊಂಡು ಬರಿಗೈಯಲ್ಲಿ ಊರು ಕಡೆ ಅಟ್ಟಿದ ಮಾಲಿಕ, ಬಡ ಕಾರ್ಮಿಕನನ್ನು ತನ್ನ ತುತ್ತು ಕೊಟ್ಟು , ಕೈಗೊಂದಿಷ್ಟು ಕಾಸು ಕೊಟ್ಟು ಪೋಷಿಸಿದ ಸಹಕಾರ್ಮಿಕ, ಮರಳಿ ಬರುವ ಭರವಸೆಯೊಂದಿಗೆ ಗುಡಿಸಲಿನೊಳಗೆ ತನ್ನ ಹರುಕು ಮುರುಕು ಸ್ಕೂಲ್‌ಬ್ಯಾಗ್‌ನೊಳಗೆ ತಾನು ಮೂಡಿಸಿದ ಅಕ್ಷ ರಗಳ ಗುರುತಿನ ನೋಟ್‌ಬುಕ್‌ಗಳನ್ನು ಬಿಟ್ಟು ತಂದೆತಾಯಿಯರೊಂದಿಗೆ ಊರುಕಡೆ ಹೆಜ್ಜೆಹಾಕಿದ ಪುಟ್ಟ ಮಕ್ಕಳ ನಿರೀಕ್ಷೆಯ ಕಣ್ಣುಗಳು ಮುಂದಿನ ದಿನಗಳ ಸಾಹಿತ್ಯದ ಜೀವಪ್ರೀತಿಯ ಪ್ರತಿಮೆಗಳಾಗಬಹುದು. ವಿಮರ್ಶೆಯ ಲೋಕಕ್ಕೆ ಇವುಗಳನ್ನು ವಿವರಿಸಿಕೊಳ್ಳಲು ಹೊಸ ಪರಿಭಾಷೆಗಳು ಬೇಕಾದಿತು.
ತೀವ್ರವಾದ ಸಂಕಟಕಾಲದಲ್ಲೇ, ಜನರಿಗೆ ಪ್ರಾರ್ಥಿಸುವ ಅಗತ್ಯವಿದ್ದಾಗಲೇ ಮುಚ್ಚಿದ ಗುಡಿಗಳು, ಚರ್ಚು, ಮಸೀದಿಗಳು. ಹಾಗಾದರೆ ತಮ್ಮ ಕೂಗು ಕೇಳುವವರಾರು ಎಂಬ ಸಂಕಟದ ನಡುವೆ ಕೊರೊನಾ ವಾರಿಯರ್‌ಗಳು ಜನರನ್ನು ಮಹಾಮಾರಿಯಿಂದ ರಕ್ಷಿಸಿದ ಸಂಗತಿ ನಮ್ಮ ಸೃಷ್ಟಿಶೀಲ ಸಂವೇದನೆಯನ್ನು ತಟ್ಟದಿರದು. ಸಂಕಷ್ಟ ಸಾಮೂಹಿಕವಾಗಿ ಬಂದಾಗ ಜೀವನದ ಸರಳ ಸತ್ಯಗಳು ಬುಡಮೇಲಾಗಿ ಬದುಕಿಗೆ ಹೊಸದೊಂದು ಆಸರೆಯ ಹುಡುಕಾಟ ಆರಂಭವಾಗುವುದು ಸಾಹಿತ್ಯಕ್ಕೆ ಮೂಲದ್ರವ್ಯವಾದೀತು. ವ್ಯಕ್ತಿ ತನ್ನ ಸುರಕ್ಷಿತ ಉದ್ಯೋಗ, ಒಳ್ಳೆಯ ಬ್ಯಾಂಕ್ ಬ್ಯಾಲೆನ್ಸ್, ಸುಂದರ ಸಂಸಾರ ಇವುಗಳಿದ್ದರೆ ಸುಖವಾಗಿರಬಹುದೆನ್ನುವ ಭ್ರಮೆ ಕಳಚಿ, ನೆರೆಮನೆಯ, ತಮ್ಮ ಬೀದಿಯ ಜನರೆಲ್ಲರೂ ಸುಖವಾಗಿರಲಿ, ರೋಗಬಾಧಿತರಾಗದಿರಲಿ ಎಂದು ಮನ ತುಂಬಾ ಹಾರೈಸಲು ಆರಂಭಿಸಿದ ಸನ್ನಿವೇಶ ಸೃಜನಶೀಲತೆಯ ಹೊಸ ಹೊಳಹು ಆಗಬಹುದು. ಹಾಗೆಂದು ಲೋಕ ನಿರಾಶೆಯಲ್ಲಿ ಕಳೆದುಹೋಗುವುದಿಲ್ಲ. ನಾಳೆಯ ಆಶಾವಾದವೇ ಸಾಹಿತ್ಯದೊಳಗೆಲ್ಲಾ ತುಂಬಬಹುದು. ಐರಿಶ್ ಕವಿ ರಿಚರ್ಡ್ ಹೆನ್ರಿಕ್‌ನ ‘ಲಾಕ್‌ಡೌನ್’ ಕವಿತೆಯ ಸಾಲುಗಳು ಅಂತಹ ಒಂದು ನಿದರ್ಶನವಾಗಬಹುದು.
“Yes there is fear,/ Yes there is isolation,/ Yes there is panic buying/ Yes there is sickness/ Yes there is ever death,/ But,/ They say that in Wuhan after so many years of noise,/ You can hear the birds again.”
ಮನುಷ್ಯ ಮತ್ತೆ ಮತ್ತೆ ಬದುಕನ್ನು ಹಸನಾಗಿಸಿ , ಹಸನ್ಮುಖಿಯಾಗಿ ಎದುರಿಸಲು ಮುಂದಡಿಯಿಡುವ ಚೈತನ್ಯವನ್ನು ಕಳೆದುಕೊಳ್ಳದೆ ಇರುವುದೇ ಸಾವಿರಾರು ವರ್ಷಗಳ ಮನುಕುಲದ ಅವಿಚ್ಛಿನ್ನ ಪರಂಪರೆಗೆ ಕೊಂಡಿಯಾಗಬಹುದು.