ಕೊರೊನಾ ಸಂಕಷ್ಟದಲ್ಲಿರುವವರಿಗೆ ಭರವಸೆ ಬಾಗಿಲು‌..

ಡೋಂಟ್ ವರಿ, ಎಲ್ಲ ಬಾಗಿಲುಗಳೂ ಮುಚ್ಚಿಲ್ಲ!

ಲಾಕ್‌ಡೌನ್ ನಡುವೆಯೂ ಹಲವು ವಲಯಗಳಲ್ಲಿ ಚುರುಕಿನ ವಹಿವಾಟು ಕೊರೊನಾಘಾತದ ನಡುವೆಯೂ ಆಶಾಕಿರಣ
ನಾನಾ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ ಸೃಷ್ಟಿ ದಿನ ಬಳಕೆ ವಸ್ತು ತಯಾರಿ ಕಂಪನಿಗಳ ಷೇರು ವೌಲ್ಯ ವೃದ್ಧಿ, ಔಷಧ ರಫ್ತಿನಿಂದ ಭಾರಿ ಲಾಭ

– ಕೇಶವ ಪ್ರಸಾದ್ ಬಿ. ಬೆಂಗಳೂರು

ಕೊರೊನಾ ವೈರಸ್ ದೇಶದ ಆರ್ಥಿಕತೆ ಮೇಲೆ ಭಾರಿ ಪ್ರಹಾರ ಮಾಡಿದೆ. ಸುದೀರ್ಘ ಲಾಕ್‌ಡೌನ್‌ನಿಂದಾಗಿ ಕೈಗಾರಿಕೋದ್ಯಮಕ್ಕೆ ಗರ ಬಡಿದಂತಾಗಿರುವುದು ನಿಜ. ಹಾಗಂತ ಪೂರ್ಣ ನಿರಾಶರಾಗಬೇಕಿಲ್ಲ. ಕೊರೊನಾ ಬಿಕ್ಕಟ್ಟು ಹಲವು ಕ್ಷೇತ್ರಗಳಲ್ಲಿ ಬಂಡವಾಳ ಹೆಚ್ಚಿಸುತ್ತಿದೆ. ಉದ್ಯೋಗಾವಕಾಶ ಸೃಷ್ಟಿಸುತ್ತಿದೆ.

ದಿನ ಬಳಕೆಯ ವಸ್ತುಗಳ ಉತ್ಪಾದನೆ ಕಳೆದ ಹತ್ತಾರು ದಿನಗಳಿಂದ ಏರಿಕೆಯಾಗಿದೆ. ಔಷಧ, ನೈರ್ಮಲ್ಯ ಕುರಿತ ಉತ್ಪನ್ನಗಳ ಉತ್ಪಾದನೆಯೂ ವೃದ್ಧಿಸಿದೆ. ಆಹಾರೋತ್ಪನ್ನಗಳ ವಹಿವಾಟು ಮಂದಗತಿಯಲ್ಲಿದೆಯಾದರೂ ಸಂಪೂರ್ಣ ಕುಸಿದಿಲ್ಲ. ಗೋಧಿ ಹುಡಿ, ಖಾದ್ಯ ತೈಲ, ಅಕ್ಕಿ, ತೊಗರಿ ಇತ್ಯಾದಿಗಳ ಮಾರಾಟ ಮತ್ತು ಉತ್ಪಾದನೆ ವಹಿವಾಟು ಮತ್ತೆ ಚುರುಕಾಗಿದೆ. ತುರ್ತು ಸಂದರ್ಭದಲ್ಲಿ ಗ್ರಾಹಕರು ಈ ಉತ್ಪನ್ನಗಳನ್ನು ಎಂದಿಗಿಂತ ಸ್ವಲ್ಪ ಹೆಚ್ಚು ಖರೀದಿಸುತ್ತಿರುವುದರಿಂದ ಬೇಡಿಕೆ ಉಂಟಾಗಿದೆ.

ದೇಶದಲ್ಲಿ ನಿರುದ್ಯೋಗದ ಪ್ರಮಾಣ ಶೇ.20ಕ್ಕೂ ಹೆಚ್ಚು ಏರಿಕೆಯಾಗಬಹುದು ಎಂದು ಸಮೀಕ್ಷೆಯೊಂದು ಎಚ್ಚರಿಸಿದೆ. ಹೀಗಿದ್ದರೂ ಕೆಲ ವಲಯಗಳಲ್ಲಿ ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ. ಉದಾಹರಣೆಗೆ ಬಿಗ್ ಬಾಸ್ಕೆಟ್, ಫ್ಲಿಪ್ ಕಾರ್ಟ್ ಸೇರಿದಂತೆ ಇ-ಕಾಮರ್ಸ್ ಕಂಪನಿಗಳಲ್ಲಿ ನೇಮಕಾತಿ ಸಾವಿರಾರು ಸಂಖ್ಯೆಯಲ್ಲಿ ವೃದ್ಧಿಸಿದೆ. ಆನ್‌ಲೈನ್ ಫಾರ್ಮಸಿ ಕಂಪನಿಗಳೂ ನೇಮಕಾತಿ ಹೆಚ್ಚಿಸಲು ಪ್ಲ್ಯಾನ್ ಮಾಡಿವೆ. ಈ ಹಿಂದೆ ದೊಡ್ಡ ಶಾಪಿಂಗ್ ಮಾಲ್‌ಗಳ ಅಬ್ಬರಕ್ಕೆ ಮಂಕಾಗಿದ್ದ ಸಾಂಪ್ರದಾಯಿಕ ಕಿರಾಣಾ ಅಂಗಡಿಗಳ ವಹಿವಾಟು ಈಗ ದಿಢೀರ್ ವೃದ್ಧಿಸಿದೆ.

ಅಗತ್ಯ ವಸ್ತುಗಳ ಕಂಪನಿಗಳ ಷೇರಿಗೆ ಬೇಡಿಕೆ
ಕೊರೊನಾ ಪರಿಣಾಮ ಮುಂಬಯಿ ಷೇರು ಮಾರುಕಟ್ಟೆಯಲ್ಲಿ (ಬಿಎಸ್‌ಇ) ಸೂಚ್ಯಂಕಗಳು ಭಾರಿ ಕುಸಿದಿವೆ. ಹೀಗಿದ್ದರೂ, ದೈನಂದಿನ ಬಳಕೆಯ ಅಗತ್ಯ ವಸ್ತುಗಳನ್ನು ಉತ್ಪಾದಿಸುವ ಎಫ್‌ಎಂಸಿಜಿ ಕಂಪನಿಗಳು ಹಾಗೂ ಔಷಧ ಕಂಪನಿಗಳ ಷೇರುಗಳು ಮಾರ್ಚ್ 25ರ ನಂತರ ಶೇ.80ರತನಕ ವೃದ್ಧಿಸಿದೆ. ಲಾಕ್‌ಡೌನ್ ಘೋಷಿಸಿದ ನಂತರ ಬಿಎಸ್‌ಇ 500 ಇಂಡೆಕ್ಸ್ ಷೇರುಗಳ ಪೈಕಿ 377 ಷೇರುಗಳು ಈಗ ಸಕಾರಾತ್ಮಕವಾಗಿವೆ. ಇದರಲ್ಲಿ 213 ಕಂಪನಿಗಳ ಷೇರುಗಳ ದರ ಶೇ.10, 86ರದ್ದು ಶೇ.20ರಷ್ಟು ಏರಿಕೆ ದಾಖಲಿಸಿವೆ. ಅಕ್ಕಿ ಸಂಸ್ಕರಣೆ ಕಂಪನಿಗಳು ಹಾಗೂ ಸಕ್ಕರೆ ಕಾರ್ಖಾನೆಗಳ ಷೇರು ದರಗಳು ಲಾಕ್ ಡೌನ್ ಅವಧಿಯಲ್ಲಿ ಚೇತರಿಸಿವೆ. ಅಕ್ಕಿ ಸಂಸ್ಕರಿಸುವ ಕೆಆರ್‌ಬಿಎಲ್‌ನ ಷೇರು ದರ ಮಾರ್ಚ್ 25ರಂದು 99 ರೂ.ಗಳಿಂದ 173 ರೂ.ಗೆ ವೃದ್ಧಿಸಿತ್ತು.

ಎಥೆನಾಲ್‌ಗೆ ಬೇಡಿಕೆ
ಸಕ್ಕರೆ ಕಂಪನಿಗಳ ಷೇರು ದರ ಈಗ ಪ್ರಬಲವಾಗಿ ಚೇತರಿಸಿದೆ. ಹ್ಯಾಂಡ್ ಸ್ಯಾನಿಟೈಸರ್‌ಗಳ ತಯಾರಿಕೆಗೆ ಅಗತ್ಯವಾದ ಎಥೆನಾಲ್ ಅನ್ನು ಸಕ್ಕರೆ ಕಾರ್ಖಾನೆಗಳು ಉತ್ಪಾದಿಸುತ್ತಿವೆ. ಸುಮಾರು 45 ಡಿಸ್ಟಿಲರೀಸ್ ಮತ್ತು 564 ಇತರ ಉತ್ಪಾದಕರಿಗೆ ಎಥೆನಾಲ್ ಉತ್ಪಾದನೆಗೆ ಅನುಮತಿ ನಿಡಲಾಗಿದೆ. ಉತ್ತರಪ್ರದೇಶ, ಕರ್ನಾಟಕದಲ್ಲೂ ಸಕ್ಕರೆ ಕಾರ್ಖಾನೆಗಳಿಗೆ ಎಥೆನಾಲ್ ತಯಾರಿಸಲು ಅನುಮತಿ ನೀಡಲಾಗಿದೆ.

ಆರೋಗ್ಯ ವಲಯಕ್ಕೆ ಬಲ
ಕೇಂದ್ರ ಹಾಗೂ ರಾಜ್ಯ ಸರಕಾರಗಳು ತಮ್ಮ ಬಜೆಟ್‌ಗಳನ್ನೇ ಪುನಾರಚಿಸುವ ನಿರೀಕ್ಷೆ ಇದೆ. ಹೊಸ ಆಸ್ಪತ್ರೆ, ಔಷಧಗಳ ಉತ್ಪಾದನೆ, ರ್ತು, ಆರೋಗ್ಯ ಮೂಲ ಸೌಕರ್ಯಗಳಿಗೆ ಹೆಚ್ಚಿನ ಹೂಡಿಕೆಯಾಗಲಿದೆ. ಹ್ಯಾಂಡ್‌ವಾಶ್ ಮತ್ತು ಇತರ ನೈರ್ಮಲ್ಯ ಕುರಿತ ಉತ್ಪನ್ನಗಳಿಗೆ ದಿಢೀರ್ ಬೇಡಿಕೆ ಸುಧಾರಿಸಿದ್ದು, ಎಫ್ಎಂಸಿಜಿ ಕಂಪನಿಗಳು ಇದರ ತಯಾರಿಕೆ ಮತ್ತು ವಿತರಣೆ ಜಾಲವನ್ನು ಬಲಪಡಿಸುತ್ತಿವೆ.

ಕಚ್ಚಾ ತೈಲ ದರ ಇಳಿಕೆಯ ಲಾಭ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಪ್ರತಿ ಬ್ಯಾರೆಲ್‌ಗೆ 30 ಡಾಲರ್‌ಗಿಂತ ಕೆಳಗಿದೆ. ಇದರಿಂದ ಭಾರತಕ್ಕೆ ತೈಲ ಆಮದು ವೆಚ್ಚದಲ್ಲಿ ಗಣನೀಯ ಉಳಿತಾಯವಾಗುತ್ತಿದೆ. ಇದರ ಪ್ರಯೋಜನವನ್ನು ಸರಕಾರ ಆರ್ಥಿಕ ಪ್ರಗತಿಗೆ ಬಳಸಬಹುದು. ಒಂದು ಅಂದಾಜಿನ ಪ್ರಕಾರ ಬ್ಯಾರೆಲ್‌ಗೆ 5 ಡಾಲರ್ ಇಳಿದರೆ 7 ಶತಕೋಟಿ ಡಾಲರ್ (ಅಂದಾಜು 52,500 ಕೋಟಿ ರೂ.) ಉಳಿತಾಯವಾಗುತ್ತದೆ.

ಬಿಗ್ ಬಾಸ್ಕೆಟ್ 10,000 ನೇಮಕ
ಆನ್‌ಲೈನ್ ಮೂಲಕ ದಿನಸಿ ಉತ್ಪನ್ನಗಳನ್ನು ಮನೆಬಾಗಿಲಿಗೆ ತಂದು ಮಾರುವ ಬಿಗ್ ಬಾಸ್ಕೆಟ್‌ಗೆ ಲಾಕ್‌ಡೌನ್ ಪರಿಣಾಮ ಕಾರ್ಮಿಕರ ಕೊರತೆ ಉಂಟಾಗಿದ್ದು, ದೇಶದ 26 ನಗರಗಳಲ್ಲಿ 10,000 ಮಂದಿಯನ್ನು ನೇಮಿಸಲು ಮುಂದಾಗಿದೆ. ಇದೇ ಕ್ಷೇತ್ರದ ಗ್ರೊರ್ಸ್‌ 2,000 ಮಂದಿಯನ್ನು ನೇಮಕಾತಿ ಮಾಡಲಿದೆ. ವಲಸಿಗ ಕಾರ್ಮಿಕರು ತೆರಳಿರುವುದರಿಂದ ಇ-ಕಾಮರ್ಸ್ ಕಂಪನಿಗಳು ತೀವ್ರ ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿವೆ.  ಆನ್‌ಲೈನ್‌  ರಿಟೇಲರ್ಸ್‌ ಗಳೂ ಹೆಚ್ಚಿನ ಸಿಬ್ಬಂದಿ ನೇಮಕಾತಿಗೆ ಮುಂದಾಗಿವೆ.

ಕಿರಾಣಾ ಅಂಗಡಿಗಳಿಗೆ ಶುಕ್ರದೆಸೆ
ಮುಚ್ಚಿದ ಶಾಪಿಂಗ್ ಮಾಲ್, ಆನ್‌ಲೈನ್ ಕಂಪನಿಗಳಿಗೆ ಡಿಲಿವರಿ ಬಾಯ್ಸ್ ಕೊರತೆ ಇದೆ. ಚಲನವಲನಗಳ ನಿರ್ಬಂಧಗಳಿಂದ ಗ್ರಾಹಕರನ್ನು ಸಲೀಸಾಗಿ ತಲುಪಲು ಕಷ್ಟವಾಗುತ್ತಿದೆ. ಹೀಗಾಗಿ ಸಾಂಪ್ರದಾಯಿಕ ಕಿರಾಣಿ ಅಂಗಡಿಗಳು ಗ್ರಾಹಕರಿಗೆ ಆಪದ್ಭಾಂಧವರಂತಾಗಿವೆ. ಅಲ್ಲೀಗ ವಹಿವಾಟು ಸುಧಾರಿಸಿದೆ. ಹೊಸ ಉದ್ಯೋಗ ಭರವಸೆ ಸಿಕ್ಕಿದೆ.

ಮೇಕ್ ಇನ್ ಇಂಡಿಯಾಗೆ ಭವಿಷ್ಯ
ಲಾಕ್‌ಡೌನ್ ಮುಕ್ತಾಯವಾದ ನಂತರ ಭಾರತದ ಮೇಕ್ ಇನ್ ಇಂಡಿಯಾ ಅಭಿಯಾನ ಚುರುಕಾಗುವ ನಿರೀಕ್ಷೆ ಇದೆ. ಚೀನಾದಿಂದ ಅಮೆರಿಕ ಮೂಲದ ನೂರಾರು ಕಂಪನಿಗಳು ಈಗಾಗಲೇ ಭಾರತಕ್ಕೆ ಸ್ಥಳಾಂತರವಾಗಲು ಉತ್ಸುಕವಾಗಿವೆ. ಕೇಂದ್ರ ಸರಕಾರದ ಪ್ಯಾಕೇಜ್ ನೆರವು, ಹಳ್ಳಿಗೆ ಜನರ ಮರುವಲಸೆ, ನರೇಗಾ ಪರಿಣಾಮ ಗ್ರಾಮೀಣ ಪ್ರದೇಶಗಳ ಆರ್ಥಿಕತೆ ಭವಿಷ್ಯದ ದಿನಗಳಲ್ಲಿ ಚೇತರಿಸುವ ನಿರೀಕ್ಷೆ ಇದೆ.

ಔಷಧ ತುರ್ತು 1.26 ಲಕ್ಷ ಕೋಟಿ ರೂ.ಗೆ ಏರಿಕೆ ಸಂಭವ
ಅಮೆರಿಕ, ಬ್ರೆಜಿಲ್, ಶ್ರೀಲಂಕಾ ಸೇರಿದಂತೆ ಹಲವು ರಾಷ್ಟ್ರಗಳಿಗೆ ಭಾರತದಲ್ಲಿ ತಯಾರಾಗುವ ಮಲೇರಿಯಾ ಔಷಧದ ಪೂರೈಕೆ ಆರಂಭವಾಗಿದೆ. ಈ ನಡೆಯಿಂದ ಭಾರತ ಮತ್ತು ಹಲವು ರಾಷ್ಟ್ರಗಳ ಜತೆಗೆ ಹೊಸ ಔಷಧ ವ್ಯಾಪಾರ ಒಪ್ಪಂದಗಳು ಏರ್ಪಡಲಿದ್ದು, 2020ರಲ್ಲಿ ಔಷಧ ರ್ತು 1.26 ಲಕ್ಷ ಕೋಟಿ ರೂ.ಗೆ ಏರಿಕೆಯಾಗುವ ನಿರೀಕ್ಷೆ ಇದೆ. ದೇಶೀಯವಾಗಿಯೂ ಆಸ್ಪತ್ರೆ ಬೆಡ್, ಹೊದಿಕೆ, ಮಾಸ್ಕ್‌, ವೆಂಟಿಲೇಟರ್‌ಗಳ ಉತ್ಪಾದನೆ ಹಲವಾರು ಪಟ್ಟು ವೃದ್ಧಿಸಿದೆ.

ಸೆನ್ಸೆ ಕ್ಸ್ ಏರಿಕೆ
ಬಿಎಸ್‌ಇ ಷೇರು ಸೂಚ್ಯಂಕ ಗುರುವಾರ 1,265 ಅಂಕ ಜಿಗಿದು 31,159ಕ್ಕೆ ವಹಿವಾಟು ಮುಕ್ತಾಯಗೊಳಿಸಿದೆ. ಈ ವಾರ ಶೇ.13ರಷ್ಟು ಸುಧಾರಿಸಿದೆ. ಜಾಗತಿಕ ಷೇರುಪೇಟೆಯಲ್ಲೂ ಚೇತರಿಕೆ ಕಂಡು ಬಂದಿದೆ.

ಜಿಡಿಪಿ ಶೇ.4.8 ಸಂಭವ
ಪ್ರತಿಕೂಲ ಸನ್ನಿವೇಶದಲ್ಲೂ 2019-20ರ ಸಾಲಿನ ಜಿಡಿಪಿ ಶೇ.4.8ಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

ಜನತೆಯ ಆರೋಗ್ಯ ದೃಷ್ಟಿಯಿಂದ ಸರಕಾರ ಲಾಕ್‌ಡೌನ್ ಘೋಷಿಸಿದೆ. ಉತ್ಪನ್ನಘಿ, ಸೇವೆಗಳ ವಿನಿಮಯ, ಅನುಭೋಗ ಬಲವಂತವಾಗಿ ಕಡಿಮೆಯಾಗಿದೆ. ಹಾಗಂತ ಎಲ್ಲ ಉತ್ಪಾದನಾ ಚಟುವಟಿಕೆಗಳು ನಿಂತಿಲ್ಲ.
– ಡಾ. ಎಂ.ಆರ್. ನಾರಾಯಣ ಅರ್ಥಶಾಸಜ್ಞ

ಪ್ರತಿಯೊಂದು ವಿಪತ್ತಿನಲ್ಲೂ ಸಾಧಕ-ಬಾಧಕ ಅಂಶಗಳಿರುತ್ತವೆ. ಕೊರೊನಾ ರೋಗಿಗಳ ಚಿಕಿತ್ಸೆ ಭಾರತದಲ್ಲಿ ಚೆನ್ನಾಗಿದೆ. ಎಕಾನಮಿ ದೃಷ್ಟಿಯಿಂದ ಹೆಲ್ತ್‌ಕೇರ್, ಎ್ಎಂಸಿಜಿ ಮತ್ತಿತರ ವಲಯಗಳಲ್ಲಿ ಹೊಸ ಸಾಧ್ಯತೆಗಳು ಉಂಟಾಗಿದೆ. ಚೀನಾವನ್ನು ಮೀರಿ ಹೊಸ ವರ್ಚಸ್ಸಿನೊಂದಿಗೆ ಪ್ರಗತಿ ಸಾಧಿಸಲು ಈಗ ಅವಕಾಶ ಸೃಷ್ಟಿಯಾಗಿದೆ.
– ಆರ್.ಎಸ್ ದೇಶಪಾಂಡೆ ಮಾಜಿ ನಿರ್ದೇಶಕ, ಐಸಾಕ್

ಕೊರೊನಾ ಬಿಕ್ಕಟ್ಟಿನ ಪರಿಣಾಮ ಅಗತ್ಯ ವಸ್ತುಗಳ ಉತ್ಪಾದನೆ ದಿಢೀರ್ ವೃದ್ಧಿಸಿದೆ. ಆರೋಗ್ಯ ವಲಯದ ಸೇವೆಯೂ ಚುರುಕಾಗಿದೆ. ಆದರೆ ಸೇವಾ ಮನೋಭಾವದಿಂದ ಈ ಬೆಳವಣಿಗೆಯನ್ನು ಸ್ವೀಕರಿಸಬೇಕು.
-ಸಂಪತ್‌ರಾಮನ್, ಅಧ್ಯಕ್ಷ, ಅಸೊಚೆಮ್, ಕರ್ನಾಟಕ ಘಟಕ

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top