ಹೊಣೆ ಮರೆತ ವರ್ತನೆ – ಜನಪ್ರತಿನಿಧಿಗಳು ಸಂಯಮದಿಂದ ವರ್ತಿಸಲಿ

ರಾಜ್ಯ ಕಾನೂನು ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರು ಕೋಲಾರದಲ್ಲಿ ಸಮಸ್ಯೆ ಹೇಳಿಕೊಳ್ಳಲು ಬಂದ ರೈತ ಮಹಿಳೆಯರಿಗೆ ಅವಾಚ್ಯ ಪದ ಬಳಸಿ ನಿಂದಿಸಿ ಸುದ್ದಿಯಾಗಿದ್ದಾರೆ. ಇದು ರಾಜ್ಯ ರೈತ ಸಂಘದವರ ಪ್ರತಿಭಟನೆ, ಪ್ರತಿಪಕ್ಷಗಳ ತೀವ್ರ ಟೀಕೆಗಳಿಗೂ ಕಾರಣವಾಗಿದ್ದು, ಮುಖ್ಯಮಂತ್ರಿ ಯಡಿಯೂರಪ್ಪನವರು ಕೂಡ ಮಾಧುಸ್ವಾಮಿಯವರ ನಡೆಯನ್ನು ಖಂಡಿಸಿದ್ದಾರೆ. ತದನಂತರ ಮಾಧುಸ್ವಾಮಿ ಅವರು ಕ್ಷಮೆ ಕೇಳಿದ್ದು, ಅಲ್ಲೂಕೂಡ ತಮ್ಮ ವರ್ತನೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಈ ಹಿಂದೆಯೂ ಅವರು ಕೆಲವು ಒರಟು ಮಾತನಾಡಿದ ಉದಾಹರಣೆ ಇವೆ. ಒಟ್ಟಾರೆಯಾಗಿ ಇದು ಜವಾಬ್ದಾರಿಯುತ ಜನ ಪ್ರತಿನಿಧಿಯೊಬ್ಬರು ನಡೆದುಕೊಳ್ಳಬೇಕಾದ ರೀತಿಯಲ್ಲ.
ಯಾರೂ ಸುಮ್ಮನೇ ‘ನಾಯಕ’ ಅನಿಸುವುದಿಲ್ಲ. ಹಿಂಬಾಲಿಸಲು ಒಂದಿಷ್ಟು ಜನ, ಹೇಳಲಿಕ್ಕೊಂದು ಅಧಿಕಾರ ಸ್ಥಾನ ಇದ್ದ ಮಾತ್ರಕ್ಕೇ ಯಾರೂ ನಾಯಕ ಎನಿಸುವುದಿಲ್ಲ. ಜನರ ಪ್ರೀತಿಯೂ ಸುಲಭವಾಗಿ ಸಿಗುವುದಿಲ್ಲ. ದಶಕಗಳಿಂದ ಜನಮನದಲ್ಲಿ ಪ್ರೀತಿಯ ಸ್ಥಾನ ಪಡೆದುಕೊಂಡ ಹಲವಾರು ಹಿರಿಯ ನಾಯಕರ ಇತಿಹಾಸವನ್ನು ಮಾಧುಸ್ವಾಮಿ ಅವರು ನೋಡಬಹುದು. ಅವರ್ಯಾರೂ ಜನತೆಯನ್ನು ತುಚ್ಛವಾಗಿ ನೋಡಿದವರಲ್ಲ. ತಮ್ಮ ಕ್ಷೇತ್ರದ ಪ್ರತಿಯೊಬ್ಬನನ್ನೂ ಪ್ರೀತಿಯಿಂದ, ವಿನಯದಿಂದ ಕಂಡವರು. ಅವರು ತಮಗೆ ಮತ ಹಾಕಿದ್ದಾರೋ ಇಲ್ಲವೋ ಎಂಬುದು ಕೂಡ ಅವರಿಗೆ ಮುಖ್ಯವಾಗುತ್ತಿರಲಿಲ್ಲ. ತಮ್ಮ ಕ್ಷೇತ್ರದಲ್ಲಿ ತಮಗೆ ಮತ ಹಾಕಿದವರಂತೆ, ಮತ ಹಾಕದವರಿಗೂ ಅವರು ಶಾಸಕರು ತಾನೆ? ಜನಪ್ರತಿನಿಧಿ ಇರಬೇಕಾದ್ದೇ ಹಾಗೆ. ಒಮ್ಮೆ ಆತ ಶಾಸಕನಾಗಿ ಆಯ್ಕೆಯಾದರೆ ಆತ ತನ್ನ ಕ್ಷೇತ್ರದ ಸಮಸ್ತ ಜನರ ಪ್ರತಿನಿಧಿ; ಸಚಿವನಾದರೆ ತನ್ನ ಇಲಾಖೆಯ ವ್ಯಾಪ್ತಿಯ ಪ್ರತಿಯೊಬ್ಬ ಫಲಾನುಭವಿಗೂ ಆತ ಉತ್ತರದಾಯಿ. ಫಲಾನುಭವಿಗಳ ಹೊಗಳಿಕೆಗೆ ಹೇಗೋ ಹಾಗೇ ಸಂತ್ರಸ್ತರ ಗೋಳಿಗೂ ಕಿವಿ ಕೊಡಬೇಕಾದ್ದು ಆತನ ಆದ್ಯ ಕರ್ತವ್ಯ. ಇದಕ್ಕೆ ಮುಖ್ಯವಾಗಿ ಬೇಕಾದ್ದು ಸಹನೆ, ಸಂಯಮ. ಈ ಸನ್ನಿವೇಶದಲ್ಲಿ ರೈತ ಮಹಿಳೆಯ ಅಹವಾಲನ್ನು ಪೂರ್ತಿಯಾಗಿ ಆಲಿಸುವ ಸೌಜನ್ಯವನ್ನೂ ಅವರು ತೋರಿಸಿಲ್ಲದಿರುವುದು ಕಾಣಿಸುತ್ತದೆ. ಸಂತ್ರಸ್ತರು ತುಸು ಮಟ್ಟಿಗೆ ಆಕ್ರೋಶಿತರಾಗಿದ್ದರೆ ಸಹಜ. ಆದರೆ ಅವರು ಔಚಿತ್ಯ ಮೀರದೆ ಇದ್ದಾಗ, ಮಂತ್ರಿಗಳು ಕೂಡ ಕೆರಳದೆ ಪರಿಸ್ಥಿತಿಯನ್ನು ನಿಭಾಯಿಸುವ ಸಾಧ್ಯತೆ ಇದ್ದೇ ಇತ್ತು.
ಇಂದು ಪ್ರತಿಯೊಬ್ಬ ಜನಪ್ರತಿನಿಧಿಯ ವರ್ತನೆಯನ್ನೂ ಸುತ್ತ ಇರುವ ನೂರಾರು ಜನರಂತೆ, ಕ್ಯಾಮೆರಾ ಕಣ್ಣುಗಳ ಮೂಲಕ ಕೋಟ್ಯಂತರ ಜನರು ನೋಡುತ್ತಿರುತ್ತಾರೆ. ಒಂದು ಹದ ತಪ್ಪಿದ ವರ್ತನೆಯಿಂದ, ಆತ ದಶಕಗಳ ಕಾಲದಿಂದ ಕಾಪಾಡಿಕೊಂಡು ಬಂದಿರುವ ವರ್ಚಸ್ಸಿಗೆ ಧಕ್ಕೆ ಬಂದುಬಿಡಬಹುದು; ಅಥವಾ ಜತನದಿಂದ ಕಟ್ಟಿಕೊಂಡು ಬಂದಿರುವ ಕೃತಕ ವರ್ಚಸ್ಸು ಕಳಚಿ ಬಯಲಾಗಿಬಿಡಬಹುದು. ಹೀಗಾಗಿ ಸಾರ್ವಜನಿಕ ವರ್ತನೆ ಎಂಬುದು ಸಾರ್ವಜನಿಕ ಬಾಳಿನಲ್ಲಿ ಇರುವವರಿಗೆ ಬಹುಮುಖ್ಯ. ಜನರು ಸಚಿವರ ಬಳಿಗೆ ಬಂದು ತಮ್ಮ ಅಹವಾಲು ಹೇಳಿಕೊಳ್ಳುವುದು, ಸಚಿವರು ಅದನ್ನು ಪರಿಹರಿಸಲು ಪ್ರಯತ್ನಿಸುವುದು- ಇದು ಪ್ರಜಾಪ್ರಭುತ್ವದ ಒಂದು ಬಹುಮುಖ್ಯ ಅಂಶವೇ ಆಗಿದೆ. ಜನತೆ ದೂರು ಹೇಳಿಕೊಳ್ಳುತ್ತಿದ್ದಾರೆ ಎಂದ ಮಾತ್ರಕ್ಕೆ ಅವರನ್ನು ಕ್ಷುಲ್ಲಕವಾಗಿ ಕಾಣಬಹುದಾದ ಹಕ್ಕೇನೂ ಸಚಿವರಿಗೆ ಬರುವುದಿಲ್ಲ. ಹಾಗೆ ನೋಡಿದರೆ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು; ಜನಪ್ರತಿನಿಧಿಗಳು ಅವರ ಸೇವಕರಷ್ಟೇ. ಸಚಿವರಿಗೆ ರೇಗುವ ಹಕ್ಕೇ ಇಲ್ಲ ಮಾತ್ರವಲ್ಲ, ಪ್ರಜೆಗಳ ಅಳಲನ್ನು ಆದ್ಯತೆಯಿಂದ ಪರಿಗಣಿಸಿ ಕೆಲಸಕ್ಕಿಳಿಯಬೇಕಾದ ಕರ್ತವ್ಯವೂ ಇದೆ. ಯಾವ ದೃಷ್ಟಿಯಿಂದ ನೋಡಿದರೂ ಇದು ಸಚಿವರ ಕಡೆಯಿಂದ ಆಗಿರುವ ಕರ್ತವ್ಯಚ್ಯುತಿ, ಪ್ರಜಾವಿರೋಧಿ ವರ್ತನೆ ಹಾಗೂ ಅಸಂಸ್ಕೃತ ನಡವಳಿಕೆ. ಈ ಮಾತುಗಳನ್ನು ಸಂತ್ರಸ್ತರಿಗೆ ಬಿಸ್ಕೆಟ್ ಬಿಸಾಡುವ ಜನಪ್ರತಿನಿಧಿಗಳಿಗೂ ಅನ್ವಯಿಸಬಹುದು. ಜವಾಬ್ದಾರಿಯುತ ಸ್ಥಾನದಲ್ಲಿರುವ ಎಲ್ಲರೂ ಇದರಿಂದ ಪಾಠ ಕಲಿಯಬೇಕು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top