ಪ್ಲಾಸ್ಮಾ ದಾನಕ್ಕೆ 5 ಸಾವಿರ ರೂ. ಪ್ರೋತ್ಸಾಹ ಧನ

ಬೆಂಗಳೂರು: ಕೋವಿಡ್‌ನಿಂದ ಗುಣಮುಖರಾದವರು ಪ್ಲಾಸ್ಮಾ ಚಿಕಿತ್ಸೆಗೆ ರಕ್ತದಾನ ಮಾಡಿದರೆ 5 ಸಾವಿರ ರೂ. ಪ್ರೋತ್ಸಾಹ ಧನ ನೀಡುವುದಾಗಿ ರಾಜ್ಯ ಸರಕಾರ ಘೋಷಿಸಿದೆ.
ಬುಧವಾರ ಮಾತನಾಡಿದ ವೈದ್ಯ ಶಿಕ್ಷ ಣ ಸಚಿವ ಡಾ.ಕೆ.ಸುಧಾಕರ್, ‘‘ಪ್ಲಾಸ್ಮಾ ಚಿಕಿತ್ಸೆಯಿಂದ ಕೋವಿಡ್ ರೋಗಿಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದಕ್ಕಾಗಿ ಈ ಮೊದಲು ಕೊರೊನಾ ಸೋಂಕು ಪೀಡಿತರಾಗಿ ಸಂಪೂರ್ಣ ಗುಣಮುಖರಾದವರ ರಕ್ತವನ್ನು ನೀಡಬೇಕಾಗುತ್ತದೆ,’’ ಎಂದರು.

ಡಿಕ್ಟೇಟ್ ಮಾಡಬೇಡಿ
ಕೋವಿಡ್ ಟೆಸ್ಟ್ ಮಾಡದ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಖಾಸಗಿಯವರು ಸರಕಾರಕ್ಕೆ ಡಿಕ್ಟೇಟ್ ಮಾಡಬಾರದು ಎಂದು ಸಚಿವ ಡಾ.ಕೆ.ಸುಧಾಕರ್ ಎಚ್ಚರಿಕೆ ನೀಡಿದ್ದಾರೆ. ‘‘ಮುಂಬಯಿ ಮಹಾನಗರ ಪಾಲಿಕೆ ಅಲ್ಲಿನ ಶೇ.80ರಷ್ಟು ಖಾಸಗಿ ಆಸ್ಪತ್ರೆಗಳನ್ನು ವಶಕ್ಕೆ ತೆಗೆದುಕೊಂಡಿದೆ. ನಿಯಮಾನುಸಾರ ಅದಕ್ಕೆ ಅವಕಾಶವೂ ಇದೆ. ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಮುಂಬಯಿಗಿಂತ ಹೆಚ್ಚು ದರ ನಿಗದಿ ಮಾಡಲಾಗಿದೆ. ಖಾಸಗಿಯ ಕೊಡುಗೆ ಬಗ್ಗೆಯೂ ಸರಕಾರಕ್ಕೆ ಗೌರವವಿದೆ. ಇದನ್ನು ಅರ್ಥ ಮಾಡಿಕೊಳ್ಳಬೇಕು,’’ ಎಂದರು.
ಇದಲ್ಲದೆ 25 ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ ಸಚಿವ ಸುಧಾಕರ್,‘‘ಲ್ಯಾಬ್‌ಗಳಲ್ಲಿ ಉಪಕರಣಗಳ ಕೊರತೆ ನೀಗಿಸಬೇಕು. ವಾರದೊಳಗೆ ಎಲ್ಲ ಲ್ಯಾಬ್‌ಗಳನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಬೇಕು. ನಿತ್ಯ ಕನಿಷ್ಟ 500 ಟೆಸ್ಟ್ ಖಾಸಗಿ ಸಂಸ್ಥೆಗಳಲ್ಲಿ ನಡೆಸಬೇಕು. ವಾರದೊಳಗೆ ಒಟ್ಟಾರೆಯಾಗಿ ಪ್ರತಿ ದಿನದ ಟೆಸ್ಟ್ ಸಾಮರ್ಥ್ಯವನ್ನು 25 ರಿಂದ 30 ಸಾವಿರಕ್ಕೆ ಹೆಚ್ಚಿಸುವ ಗುರಿ ಹಾಕಿಕೊಳ್ಳಬೇಕು,’’ ಸೂಚಿಸಿದರು.

ಕೆಲಸಕ್ಕೆ ಕೈಕೊಟ್ಟ ವೈದ್ಯರ ಲೈಸೆನ್ಸ್ ಅಮಾನತು
ಬೆಂಗಳೂರು: ರಾಜಧಾನಿಯಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ವೈದ್ಯರ ಕೊರತೆ ಉಂಟಾಗಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ, ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಕೆಲಸ ಮಾಡದೇ ತಪ್ಪಿಸಿಕೊಂಡಿರುವ ವೈದ್ಯರು ಮತ್ತು ಶುಶ್ರೂಷಕರ ಲೈಸೆನ್ಸ್ ಮತ್ತು ನೋಂದಣಿ ಅಮಾನತುಗೊಳಿಸುವ ಎಚ್ಚರಿಕೆ ನೀಡಿದ್ದಾರೆ.
ಡಿಸಿಎಂ, ಬುಧವಾರ ಕೋವಿಡ್ ಕೇರ್ ಕೇಂದ್ರಗಳ ವ್ಯವಸ್ಥೆ, ಅವುಗಳ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಜತೆ ಮಹತ್ವದ ಸಭೆ ನಡೆಸಿದರು. ‘‘ನಿಯಂತ್ರಣಕ್ಕಾಗಿ ಹರಸಾಹಸ ಮಾಡುತ್ತಿರುವ ವೇಳೆಯಲ್ಲಿ ನಿರ್ಲಕ್ಷ್ಯ ಧೋರಣೆ ತಾಳಿರುವುದು ಅಮಾನವೀಯ. ಮುಂದೆ ಪರಿಸ್ಥಿತಿ ಕೈಮೀರಿ ಹೋಗಲಿದೆ ಎಂಬ ಜ್ಞಾನವೂ ಇಲ್ಲದಿದ್ದರೆ ಹೇಗೆ?’ ಎಂದು ಬೇಸರ ವ್ಯಕ್ತಪಡಿಸಿದರು.
‘‘ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಈ ಕ್ಲಿಷ್ಟ ಸಮಯದಲ್ಲಿ ಖಾಸಗಿ ವೈದ್ಯರು ಹೆದರಿ ಹಿಂದೆ ಸರಿಯುತ್ತಿರುವುದು ಸರಿಯಲ್ಲ. ಯುದ್ಧದ ಪರಿಸ್ಥಿತಿ ರಾಜ್ಯದಲ್ಲಿ ತಲೆದೋರಿದ್ದು, ಸೇವಾ ಮನೋಭಾವದಿಂದ ಕೆಲಸ ಮಾಡಬೇಕಾಗಿದೆ. ಸರಕಾರ ಎಲ್ಲ ರೀತಿಯ ರಕ್ಷ ಣೆ ನೀಡುತ್ತಿದೆ. ಕೂಡಲೇ ಸೇವೆಗೆ ಹಾಜರಾಗದ ವೈದ್ಯರು, ನರ್ಸ್‌ಗಳು ಹಾಗೂ ಪೂರಕ ಸಿಬ್ಬಂದಿಯ ಹೆಸರುಗಳನ್ನು ಪ್ರಕಟಿಸಲಾಗುವುದು,’’ ಎಂದು ಎಚ್ಚರಿಸಿದರು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top