ಪರಿವರ್ತನೆಯೆಂದರೆ ಕ್ರೇಜ್ ಹುಟ್ಟಿಸಿದಷ್ಟು ಸುಲಭವೇ?

ಜನರು ಸದಾ ಪರಿವರ್ತನೆ, ಸುಧಾರಣೆಯ ಬೆನ್ನುಹತ್ತಿ ಹುಡುಕುತ್ತಿರುತ್ತಾರೆ. ಅದರ ಲಾಭ ಯಾರೋ ಕೆಲವರಿಗೆ ಆಗುತ್ತದೆ. ಈ ಹುಡುಕಾಟ, ಆಯ್ಕೆ ಬದಲಾವಣೆಯ ಜಂಜಾಟದಲ್ಲಿ ಒಂದು ತಲೆಮಾರೇ ಕಳೆದುಹೋಗುವುದೂ ಇದೆ. ಇದು ಬಹಳ ದುಬಾರಿ.

ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಅಭೂತಪೂರ್ವ ವಿಕ್ರಮ ಸಾಧಿಸಿ ಹತ್ತಿರ ಹತ್ತಿರ ತಿಂಗಳಾಗುತ್ತ ಬಂತು. ಎಷ್ಟು ವಿಚಿತ್ರ ನೋಡಿ, ಈ ಒಂದೇ ತಿಂಗಳೊಳಗೆ ನಾವು ಎರಡು ಪರಸ್ಪರ ವಿರುದ್ಧದ ಮತ್ತು ವಿರೋಧಾಭಾಸದ ಬೆಳವಣಿಗೆಗೆ ಸಾಕ್ಷಿಯಾಗುತ್ತಿದ್ದೇವೆ! 

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಪ್ ನಿಚ್ಚಳ ಬಹುಮತ ಪಡೆಯುತ್ತದೆ ಎಂದು ಬಹುತೇಕ ಮಾಧ್ಯಮ ಸಮೀಕ್ಷೆಗಳು ಅಂದಾಜು ಮಾಡಿದ್ದವು. ಆದರೆ ಅದಕ್ಕೆ ಈ ಪರಿ ಬಹುಮತ ಸಿಗಬಹುದು ಎಂದು ಯಾರೂ ಊಹೆಯನ್ನೂ ಮಾಡಿರಲಿಲ್ಲ. ಎಷ್ಟೆಂದರೆ, ದೆಹಲಿ ಮತದಾರರು ನೀಡಿದ ಬೆಂಬಲ ಕಂಡು ಸ್ವತಃ ಅರವಿಂದ ಕೇಜ್ರಿವಾಲ್ ಮೂಕವಿಸ್ಮಿತರಾಗಿದ್ದರು, ಅಚ್ಚರಿ ವ್ಯಕ್ತಪಡಿಸಿದ್ದರು. ಜನ ಬೆಂಬಲ, ಅದರ ಹಿಂದಿರುವ ಅಗಾಧ ನಿರೀಕ್ಷೆಗಳ ಕುರಿತು ಯೋಚನೆ ಮಾಡಿದರೆ ಭಯವಾಗುತ್ತದೆ ಎಂದು ಉದ್ಗರಿಸಿದ್ದರು. ಈ ಮಾತು ನೂರಕ್ಕೆ ನೂರರಷ್ಟು ನಿಜವಲ್ಲವೆ? ದೆಹಲಿ ಚುನಾವಣಾ ಫಲಿತಾಂಶ ಕಂಡು ಇಡೀ ದೇಶವೇ ದಂಗಾಗಿಹೋಗಿತ್ತು. ದೇಶ-ವಿದೇಶಗಳ ಮಾಧ್ಯಮಗಳೂ ಅದೇ ರೀತಿಯಲ್ಲಿ ಪ್ರತಿಕ್ರಿಯಿಸಿದವು.

ಈಗ ಅದೇ ಆಪ್‍ನಲ್ಲಿ ಆಗುತ್ತಿರುವ ಆಂತರಿಕ ಬೆಳವಣಿಗೆಗಳನ್ನು ನೋಡಿ. ಎಲ್ಲವೂ ಮರುಆಲೋಚನೆ ಮಾಡುವಂತೆ ಆಗಿದೆ. ಎಲ್ಲೆಲ್ಲಿಂದಲೋ ಬಂದು ಸೇರಿಕೊಂಡವರೇ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರಾಗಿ ಆಯ್ಕೆಯಾಗಿರುವುದರಿಂದ ಅವರನ್ನೆಲ್ಲ ಸಂಭಾಳಿಸುವುದು ಕೇಜ್ರಿವಾಲ್‍ಗೆ ಮುಂದೊಂದು ದಿನ ದೊಡ್ಡ ತಲೆನೋವಾಗಬಹುದೆಂಬ ಸಣ್ಣ ಅನುಮಾನ, ಆತಂಕವೂ ಇತ್ತು. ಆದರೆ ಅದು ಇಷ್ಟು ಬೇಗ ಆಗುತ್ತದೆಂದು ಯಾರೂ ಅಂದುಕೊಂಡಿರಲಿಲ್ಲ. ನಿಜವಾಗಿ ಹೇಳಬೇಕೆಂದರೆ ಈ ಪರಿ ಗೆಲುವು ಪಡೆದ ಕಾರಣಕ್ಕಾಗಿಯಾದರೂ ಆಂತರಿಕ ಭಿನ್ನಮತವನ್ನು ಕನಿಷ್ಠ ಆರು ತಿಂಗಳ ಮಟ್ಟಿಗಾದರೂ ಆ ಪಕ್ಷದ ನಾಯಕರು ಅದುಮಿಟ್ಟುಕೊಳ್ಳಬಹುದಿತ್ತು. ಅದೂ ಆಗಲಿಲ್ಲ. ಹಾಗಾದರೆ ಇದು ಯಾರ ತಪ್ಪು? ಜನತಂತ್ರ ವ್ಯವಸ್ಥೆಯದ್ದೇ? ಅಥವಾ ಕ್ರಾಂತಿಯ ಹುಮ್ಮಸ್ಸಿನಲ್ಲಿ ಹಿಂದೆಮುಂದೆ ಆಲೋಚನೆ ಮಾಡದ ಆಪ್ ನಾಯಕತ್ವದ ಲೆಕ್ಕಾಚಾರ ತಪ್ಪಿತೇ? ಯೋಚನೆ ಮಾಡಬೇಕು. ಕೇಜ್ರಿವಾಲ್ ವಿರುದ್ಧ ಖ್ಯಾತ ನ್ಯಾಯವಾದಿ ಪ್ರಶಾಂತ್ ಭೂಷಣ್ ಮಾಡಿರುವ ಆರೋಪಗಳ ಹಿನ್ನೆಲೆಯಲ್ಲಿ ಈ ಎರಡೂ ಅಂಶಗಳಿಗೆ ಹೆಚ್ಚಿನ ಮಹತ್ವ ಬಂದಿದೆ.

ನಿಜಾರ್ಥದಲ್ಲಿ ದೆಹಲಿಯಲ್ಲಿ ಈಗ ಆಗಿರುವ ಬೆಳವಣಿಗೆಯನ್ನು `ರಾಜಕೀಯ ಪ್ರತಿಕ್ರಿಯೆ’ ಎಂದು ಕರೆಯಬಹುದೇ ಹೊರತು ಪರಿವರ್ತನೆ ಅಥವಾ ಕ್ರಾಂತಿ ಎಂದು ಕರೆಯುವುದು ಅಷ್ಟು ಸಮಂಜಸವಲ್ಲ ಎನ್ನುವುದು ನನ್ನ ಭಾವನೆ. ಏಕೆಂದರೆ ಪರಿವರ್ತನೆ ಎಂಬುದು ಅಷ್ಟು ಸುಲಭದಲ್ಲಿ ದಕ್ಕುವ ಸಂಗತಿಯಲ್ಲ. ಅಥವಾ ಒಂದು ವೇಳೆ ಇದು ಪರಿವರ್ತನೆಯೇ ಆಗಿದ್ದರೆ ಅದನ್ನು ನಾವು ಶಾಶ್ವತ ಪರಿಹಾರ ಎಂದು ಭಾವಿಸುವ ಕಾರಣವಿಲ್ಲ. ಇಲ್ಲಿ ಸಮಸ್ಯೆ ಇರುವುದು ಕೇಜ್ರಿವಾಲ್ ಅವರಲ್ಲಲ್ಲ. ಅಥವಾ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರಬೇಕೆಂದು ಬಯಸುವ ಅವರ ಬದ್ಧತೆಯನ್ನು ನಾವು ಪ್ರಶ್ನೆ ಮಾಡಬೇಕಿಲ್ಲ ಅಥವಾ ಅನುಮಾನಿಸಬೇಕಿಲ್ಲ. ನಾವು ಯೋಚನೆ ಮಾಡಬೇಕಾದ್ದು ಅಥವಾ ಎಚ್ಚರಿಕೆ ವಹಿಸಬೇಕಾದ್ದು ಪರಿವರ್ತನೆ ತರುವ ಧಾವಂತದಲ್ಲಿ ಮುಂದಡಿ ಇಟ್ಟಿರುವ ಕೇಜ್ರಿವಾಲ್ ಜತೆಗೆ ಸೇರಿಕೊಂಡಿರುವ ಅವರ ಜತೆಗಾರರ ವಿಷಯದಲ್ಲಿ. ಇಲ್ಲಿ ಪ್ರಮುಖವಾಗುವುದು ಜನಮಾನಸದಲ್ಲಿ ತಕ್ಷಣದ ಭಾವನಾತ್ಮಕ ಅಲೆಯ ಪರಿಣಾಮದಿಂದ ಉಂಟಾಗುವ ಪರಿವರ್ತನೆಗಿಂತ, ಯಾವ ರೀತಿಯ ಬದಲಾವಣೆ ತರಲು ಅಧಿಕಾರದ ಕೈಗಳು ಹದಗೊಂಡಿವೆ, ಸಮರ್ಥವಾಗಿವೆ ಎಂಬುದು. ಪರಿವರ್ತನೆಗೆ ಸಂಕಲ್ಪ ತೊಟ್ಟಿರುವ ಮನಸ್ಸುಗಳು ಅದೆಷ್ಟು ಪರಿಪಕ್ವವಾಗಿವೆ ಎನ್ನುವುದು. ಏಕೆಂದರೆ ವ್ಯಕ್ತಿ ನಿರ್ಮಾಣ ಮತ್ತು ಸಮೂಹದಲ್ಲಿನ ಪ್ರತಿಕ್ರಿಯೆ ಇವೆರಡೂ ಬೇರೆಬೇರೆಯಾದವು. ವ್ಯವಸ್ಥೆಯಲ್ಲಿ ಬದಲಾವಣೆ ತರಬಲ್ಲ, ಸಮರ್ಥ ನೇತೃತ್ವ ನೀಡಬಲ್ಲ ವ್ಯಕ್ತಿತ್ವ ಸಾಮೂಹಿಕ ಸನ್ನಿವೇಶದಲ್ಲಿ, ಯಾವುದೋ ಅಲೆಯಲ್ಲಿ ಅಥವಾ ರಾತ್ರಿ ಬೆಳಗಾಗುವುದರೊಳಗೆ ನಿರ್ಮಾಣವಾಗುವುದು ಕಷ್ಟಸಾಧ್ಯ. ಹಾಗಾಗುವಲ್ಲಿ ದೀರ್ಘ ಕಾಲದ ಪರಿಶ್ರಮ, ತಪಸ್ಸು, ಬದ್ಧತೆ, ಕಾಲಕಾಲಕ್ಕೆ ವಿವಿಧ ಹಂತಗಳಲ್ಲಿ ಸಿಗುವ ಅನುಭವ, ತರಬೇತಿ, ಸಮರ್ಪಣಾಭಾವ ಇವೆಲ್ಲವೂ ಪ್ರಮುಖ ಪಾತ್ರ ವಹಿಸುತ್ತವೆ. ಕೇಜ್ರಿವಾಲ್‍ರಂಥ ನಾಯಕರ ಜತೆಗೆ ಅವರಷ್ಟೇ ಶಕ್ತಿ ಸಾಮಥ್ರ್ಯ ಮತ್ತು ಬದ್ಧತೆಯುಳ್ಳ ಅದೆಷ್ಟು ಮಂದಿ ನಾಯಕರು ಇದ್ದಾರೆಂಬುದನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಇದು ಕೇವಲ ಕೇಜ್ರಿವಾಲ್‍ಗೆ ಸಂಬಂಧಿಸಿದ ವಿಷಯ ಎಂದಷ್ಟೇ ಭಾವಿಸಬೇಕಿಲ್ಲ. ನರೇಂದ್ರ ಮೋದಿಯ ಸಂದರ್ಭದಲ್ಲೂ ಈ ಮಾತು ಅನ್ವಯವಾಗುತ್ತದೆ.

Jyoti-Basuಅದೆಲ್ಲ ಹೇಗೂ ಇರಲಿ. ದೆಹಲಿ ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿ, ಒಂದೆರಡು ಐತಿಹಾಸಿಕ ಮಹತ್ವದ ಸಂದರ್ಭಗಳನ್ನು ಪ್ರಸ್ತಾಪಿಸಿ ಮೂರು ವಾರಗಳ ಈ ಲೇಖನ ಸರಣಿಯನ್ನು ಇಲ್ಲಿಗೆ ಮುಕ್ತಾಯ ಮಾಡುತ್ತೇನೆ.ಹಾಗೆ ನೋಡಿದರೆ ರಾಜಕೀಯ ಸ್ಥಿತ್ಯಂತರದ ದೃಷ್ಟಿಯಿಂದ ನಮಗೆ ಸಿಗುವ ಉತ್ತಮ ಉದಾಹರಣೆ ಎಂದರೆ ಪಶ್ಚಿಮ ಬಂಗಾಳದ 34 ವರ್ಷಗಳ ಕಮ್ಯುನಿಸ್ಟ್ ಸರ್ಕಾರದ ಆಡಳಿತ. ಕಾಂಗ್ರೆಸ್ ಸರ್ಕಾರದ ದುರಾಡಳಿತದ ಫಲವಾಗಿ ಅಲ್ಲಿ ಎಡಪಕ್ಷಗಳು ಆಳಕ್ಕೆ ಬೇರು ಬಿಡುವಂತಾಯಿತು. ಸ್ವಾತಂತ್ರೃ ಬಂದ ತರುವಾಯದಿಂದಲೂ ಪಶ್ಚಿಮ ಬಂಗಾಳದಲ್ಲಿ ಎಡಪಂಥೀಯ ಪಕ್ಷಗಳು ಮತ್ತು ಇತರ ಸಂಘಟನೆಗಳು ಹೋರಾಟ, ಸಂಘಟನೆ ಮುಂದುವರೆಸಿಕೊಂಡು ಬಂದಿದ್ದವು. ಎಡಪಕ್ಷಗಳ ಗಮನದ ಕೇಂದ್ರ ಆ ರಾಜ್ಯದಲ್ಲಿರುವ ಬಹುಪಾಲು ಬಡವರು, ಶ್ರಮಿಕರು, ದಲಿತರೇ ಆಗಿದ್ದರು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇಷ್ಟೆಲ್ಲ ಆದರೂ ಈ ಹೋರಾಟಕ್ಕೆ ಒಂದು ಸ್ಪಷ್ಟ ದಿಕ್ಕು, ಸ್ವರೂಪ ಸಿಗಲು 1977ರ ತನಕ ಕಾಯಬೇಕಾಯಿತು. ಕಾಮನ್‍ವೆಲ್ತ್ ಕ್ರೀಡಾಗ್ರಾಮ ನಿರ್ಮಾಣದ ಹಗರಣ, 2ಜಿ ತರಂಗಾಂತರ ಹಗರಣ ಮತ್ತು ಇತ್ಯಾದಿ ಸಾಲುಸಾಲು ಹಗರಣಗಳು ದೆಹಲಿಯಲ್ಲಿ ಅಣ್ಣಾ ಹಜಾರೆ ಮತ್ತು ಕೇಜ್ರಿವಾಲರು ಭ್ರಷ್ಟಾಚಾರದ ವಿರುದ್ಧ ಸಿಡಿದೇಳಲು ಕಾರಣವಾಯಿತೋ ಹಾಗೇ 1972ರಲ್ಲಿ ಪಶ್ಚಿಮ ಬಂಗಾಳದ ವಿಧಾನಸಭೆಗೆ ನಡೆದ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ರಾಜಾರೋಷವಾಗಿ ನಡೆಸಿದ ಚುನಾವಣಾ ಅಕ್ರಮ ಅಲ್ಲಿನ ಜನಸಾಮಾನ್ಯರಲ್ಲಿ ಮಡುಗಟ್ಟಿದ್ದ ಆಕ್ರೋಶ ರಟ್ಟೆಗೆ ಬರುವಂತೆ ಮಾಡಿತು. ಆ ಚುನಾವಣೆಯಲ್ಲಿ ಅಕ್ಷರಶಃ ಕಾಂಗ್ರೆಸ್ ಪಕ್ಷ ವ್ಯಾಪಕ ಅಕ್ರಮವೆಸಗುವ ಮೂಲಕವೇ ಜಯಿಸಿ ಅಧಿಕಾರ ಗಳಿಸಿತು. ಆದರೆ ಒಂದು ಮಾತು ನಿಜ. ಕಾಂಗ್ರೆಸ್ ಪಕ್ಷವನ್ನು ಬಂಗಾಳದಲ್ಲಿ ಸಮೂಲ ನಾಶಮಾಡುವುದಕ್ಕೂ ಅದೇ ಚುನಾವಣೆ ನಾಂದಿ ಆಯಿತು. ಕಾಂಗ್ರೆಸ್ ಪಾಲಿಗೆ ಅದೇ ಚುನಾವಣೆ ಕೊನೆಯ ಗೆಲುವಾಯಿತು. ಕಾಂಗ್ರೆಸ್ ಆಡಳಿತ ಬದಲು ಕಮ್ಯುನಿಸ್ಟ್ ಆಡಳಿತ ಶುರುವಾಯಿತು. ಆದರೆ ಅದರಿಂದ ಬಂಗಾಳದ ಜನಜೀವನದ ಏನಾದರೂ ಹಸನಾಯಿತೇ? ಜನರ ಬದುಕು ಮತ್ತಷ್ಟು ದುರ್ಭರವಾಯಿತು. ಅದರ ಪರಿಣಾಮ ಮತ್ತೆ ಜನರು ಪರಿವರ್ತನೆಯ ಮತ್ತೊಂದು ಮಗ್ಗುಲಿಗೆ ಹೊರಳಲು 34 ವರ್ಷಗಳೇ ಹಿಡಿದವು.

ದೇಶದ ಮೇಲೆ ಹೇರಿದ್ದ ತುರ್ತು ಪರಿಸ್ಥಿತಿಯ ಬಳಿಕ 1977ರಲ್ಲಿ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಜನತಾಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬಂತು. ಅದಾದ ಕೆಲವೇ ತಿಂಗಳ ನಂತರ ವರ್ಷ ಪಶ್ಚಿಮ ಬಂಗಾಳದ ವಿಧಾನಸಭೆಗೆ ಚುನಾವಣೆ ನಡೆದು ಮೊದಲ ಬಾರಿಗೆ ಎಡಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಿತು. ಕಾಮ್ರೇಡ್ ಜ್ಯೋತಿಬಸು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಆದರೆ ಅದರ ಹಿಂದಿರುವುದು ರಕ್ತಸಿಕ್ತ ಇತಿಹಾಸ. ವ್ಯಾಪಕ ಹಿಂಸಾಚಾರಕ್ಕೆ ಕಾರಣವಾದ 1922ರ ಬಂಗಾಳ ವಿಧಾನಸಭಾ ಚುನಾವಣೆ ವೇಳೆ ಮತ್ತು ಅದಕ್ಕೂ ಹಿಂದಿನ ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ಎಡಪಕ್ಷಗಳು ನಡೆಸಿದ ಸಂಘರ್ಷಗಳಲ್ಲಿ ಎಡಪಕ್ಷಗಳ 110ಕ್ಕೂ ಹೆಚ್ಚು ಮಂದಿ ಅಮಾಯಕ ಕಾರ್ಯಕರ್ತರು ಪ್ರಾಣಾರ್ಪಣೆ ಮಾಡಿದ್ದರು. ಬಡ ರೈತರು, ರಿಕ್ಷಾ ಚಾಲಕರು, ಸಣ್ಣಪುಟ್ಟ ವ್ಯಾಪಾರಸ್ಥರು, ತಳಮಟ್ಟದ ಕಾರ್ಮಿಕರೇ ಪ್ರಾಣ ಕಳೆದುಕೊಂಡವರಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದರು.

ದೂರದೃಷ್ಟಿಯಿಲ್ಲದ ಎಡಪಕ್ಷಗಳು ಸುದೀರ್ಘ ಕಾಲ ಆ ರಾಜ್ಯದಲ್ಲಿ ಆಡಳಿತ ನಡೆಸಿದರೂ, ಕಾಂಗ್ರೆಸ್ ಪಕ್ಷವನ್ನು ಎದುರುಹಾಕಿಕೊಂಡು ಜೀವದ ಹಂಗನ್ನೂ ಲೆಕ್ಕಿಸದೆ ಹೋರಾಡಿದ ಲಕ್ಷಾಂತರ ದಲಿತರ, ರೈತರ, ಕಾರ್ಮಿಕರ ಬದುಕು ಬೆಳಕು ಕಾಣಲೇ ಇಲ್ಲ. ಲ್ಯಾಂಡ್ ಸೀಲಿಂಗ್‍ನಂತಹ ಮಹತ್ವದ ಕಾಯಿದೆಯನ್ನೇನೋ ಸರ್ಕಾರ ಜಾರಿ ಮಾಡಿತು. ಜಮೀನುದಾರರಿಂದ ಭೂಮಿಯನ್ನು ಹಿಂಪಡೆದು ಜಮೀನುರಹಿತ ಬಡಬಗ್ಗರಿಗೆ, ಉಳುಮೆ ಮಾಡುವವರಿಗೆ, ದಲಿತರಿಗೆ ಹಂಚಿಕೆ ಮಾಡುವ ಕ್ರಾಂತಿಕಾರಿ ಕೆಲಸಕ್ಕೆ ಕೈಹಾಕಿತು ನಿಜ. ಆದರೆ ಹಂಚಿದ ನಂತರ ಉಳುಮೆ ಮಾಡಲು ಪ್ರೋತ್ಸಾಹ ಕೊಡದ ಪರಿಣಾಮ, ಆ ಭೂಮಿ ಏನಾಗಲಿದೆ ಎಂಬುದನ್ನು ಪೂರ್ವಾಪರ ಆಲೋಚನೆ ಮಾಡದ ಪರಿಣಾಮ ಬಹುಪಾಲು ಕೃಷಿ ಜಮೀನು ಪಾಳುಬೀಳುವಂತಾಯಿತು. ಅದರಿಂದಾಗಿ ಆಹಾರ ಉತ್ಪಾದನೆಯಲ್ಲಿ ಪಶ್ಚಿಮ ಬಂಗಾಳ ಕುಸಿತ ಕಾಣುತ್ತಲೇ ಹೋಯಿತು. ಜಮೀನುದಾರರ ವಿರುದ್ಧ ಕೃಷಿ ಕಾರ್ಮಿಕರನ್ನು ಎತ್ತಿಕಟ್ಟಿದ್ದರಿಂದ ಸಹಜವಾಗಿ ಕೃಷಿ ಕಾರ್ಯಕ್ಕೆ ಭಾರಿ ಹಿನ್ನಡೆ ಆಯಿತು. ಕೈಗಾರಿಕೆಗಳ ಬೆಳವಣಿಗೆ ಪ್ರೋತ್ಸಾಹ ಕೊಡದೇ ಹೋದದ್ದರಿಂದ ಕಾರ್ಮಿಕರಿಗೆ ಹೊಸ ಉದ್ಯೋಗ ಸೃಷ್ಟಿಯಾಗಲಿಲ್ಲ. ಸರ್ಕಾರವೇ ಮುಂದೆ ನಿಂತು ಕಾರ್ಮಿಕರು ಮತ್ತು ಮಾಲೀಕರ ನಡುವೆ ಕಂದಕ ಸೃಷ್ಟಿಸಿದ್ದರ ಪರಿಣಾಮ ಇರುವ ಕೈಗಾರಿಕೆಗಳಿಗೂ ತುಕ್ಕುಹಿಡಿಯಿತು. ಕಮ್ಯುನಿಸ್ಟ್ ನಾಯಕರಿಗೆ ಇದರ ಪರಿಣಾಮ ಅರ್ಥವಾಗಲು 30 ವರ್ಷಗಳೇ ಹಿಡಿದವು. ಮಾಡಿದ ತಪ್ಪಿನ ಅರಿವಾಗಿ ಕಮ್ಯುನಿಸ್ಟ್ ಆಡಳಿತದ ಕೊನೇ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಎಚ್ಚೆತ್ತುಕೊಂಡು ಕೈಗಾರಿಕೀಕರಣಕ್ಕೆ ಪ್ರೋತ್ಸಾಹ ನೀಡುವ ತೀರ್ಮಾನ ತೆಗೆದುಕೊಂಡರು. ಅದರ ಪರಿಣಾಮವೇ ಸಿಂಗೂರಲ್ಲಿ ಟಾಟಾ ಕೈಗಾರಿಕೆ ಸ್ಥಾಪನೆ ರಾದ್ಧಾಂತವಾದದ್ದು. ಆದರೆ ಅಷ್ಟೊತ್ತಿಗಾಗಲೇ ಪಶ್ಚಿಮ ಬಂಗಾಳದ ಜನರು ಮಮತಾ ಬ್ಯಾನರ್ಜಿ ಕಡೆಗೆ ವಾಲಿದ್ದರು. ಆದರೇನು ಬಂತು? ಮಮತಾ ಆಡಳಿತದ ಧೋರಣೆಯೂ ಭಿನ್ನವಾಗಿರಲಿಲ್ಲ. ಕೇವಲ ಮೂರೂವರೆ ವರ್ಷಕ್ಕೆ ಮಮತಾ ಸಾಕೆಂಬ ತೀರ್ಮಾನಕ್ಕೆ ಅಲ್ಲಿನ ಜನರು ಬಂದಿರುವಂತೆ ಭಾಸವಾಗುತ್ತಿದೆ. ಹಾಗಾದರೆ ಮುಂದೇನಾಗುತ್ತದೆ? ಸ್ಪಷ್ಟತೆ ಸಿಗುತ್ತಿಲ್ಲ. ಜನರ ಗೋಳು ತಪ್ಪಿದ್ದಲ್ಲ. ಇಷ್ಟು ಮಾತ್ರ ಸತ್ಯ.

ಪಶ್ಚಿಮ ಬಂಗಾಳ ಮಾತ್ರವಲ್ಲ, ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿಯೇ 1982ರಲ್ಲಿ ಆಂಧ್ರದಲ್ಲಿ ಎನ್.ಟಿ.ರಾಮರಾವ್ ಅಧಿಕಾರದ ಚುಕ್ಕಾಣಿ ಹಿಡಿದರು. ಒಂದಲ್ಲ ಮೂರು ಸಾರಿ ಅವರು ಮುಖ್ಯಮಂತ್ರಿಯಾದರೂ ರಾಜ್ಯದ ಸ್ಥಿತಿ ಕೊಂಚವೂ ಬದಲಾಗಲಿಲ್ಲ. ಸ್ವತಃ ಎನ್‍ಟಿಆರ್ ನೈತಿಕವಾಗಿ ದುರ್ಬಲರಾದರು. ಆದ ಒಂದು ಒಳ್ಳೆಯ ಕೆಲಸ ಅಂದರೆ ಅಭಿವೃದ್ಧಿ ಕುರಿತು ಸ್ಪಷ್ಟ ಕಲ್ಪನೆ ಇದ್ದ ಚಂದ್ರಬಾಬು ತೆಲುಗುದೇಶಂ ಪಕ್ಷವನ್ನು ಹೈಜಾಕ್ ಮಾಡಿದರು. ಅದರ ಪರಿಣಾಮ ಆಂಧ್ರಪ್ರದೇಶಕ್ಕೆ ಒಂದಷ್ಟು ಒಳಿತಾಗಿದೆ. ತೆಲುಗುದೇಶಂ ಪಕ್ಷದ ಅಸ್ತಿತ್ವವೂ ಉಳಿದುಕೊಂಡಿದೆ.

The chief minister of India's strife torn state of Assam, Prafulla Kumar Mahanta, smiles during a me..ಪ್ರಫುಲ್ಲ ಕುಮಾರ್ ಮಹಂತ ಅಸ್ಸಾಂನಲ್ಲಿ ಮಾಡಿದ ಕ್ರಾಂತಿಯೇನು ಕಡಿಮೆಯೇ? ವಿದ್ಯಾರ್ಥಿ ಸಂಘಟನೆ, ಹೋರಾಟದ ಮೂಲಕ ರಾಜಕೀಯಕ್ಕೆ ಬಂದ ಮಹಂತಾ ಅಸ್ಸಾಂ ಗಣಪರಿಷತ್ ಮೂಲಕ 1985ರಲ್ಲಿ ರಾಜಕೀಯ ಅಧಿಕಾರದ ಗದ್ದುಗೆಯೇರಿದರು. ಆದರೆ ರಾಜ್ಯದ ಜನತೆ ನಿರೀಕ್ಷೆ ಮಾಡಿದ್ದರಲ್ಲಿ ಒಂದಂಶವೂ ಈಡೇರಲಿಲ್ಲ. ಪಕ್ಷದ ವರಿಷ್ಠರ ವ್ಯಕ್ತಿಗತ ದೌರ್ಬಲ್ಯಗಳಿಂದಾಗಿ, ಆಡಳಿತದ ವೈಫಲ್ಯದಿಂದಾಗಿ ಎಜಿಪಿ ಅಲ್ಲಿ ಸಂಪೂರ್ಣ ಜನಮಾನಸದಿಂದ ದೂರವಾದರೆ ಅಚ್ಚರಿಯಿಲ್ಲ.

ಅಸ್ಸಾಂನಲ್ಲಿ ಕಾಂಗ್ರೆಸ್ ಪಕ್ಷ ನೆಲಕಚ್ಚಿ ದಶಕಗಳೇ ಕಳೆದವು. ಕಾಂಗ್ರೆಸ್‍ನಿಂದ ದೂರವಾದ ಅಸ್ಸಾಮಿಗಳು ಎಜಿಪಿ ಕೈಹಿಡಿದರು. ಆ ಪಕ್ಷದಿಂದ ಭ್ರಮನಿರಸನಗೊಂಡಾಗ ಬಿಜೆಪಿ ಕಡೆ ವಾಲುತ್ತಿದ್ದಾರೆ. ಅಂದರೆ ಜನರು ಇನ್ನೂ ಅತ್ಯುತ್ತಮ ಆಯ್ಕೆಯ ಹುಡುಕಾಟ ನಿಲ್ಲಿಸಿಲ್ಲ ಎಂದಾಯಿತು. ದೆಹಲಿಯಲ್ಲಿ ಆಗಿದ್ದೂ ಹಾಗೇ ಇರಬಹುದು. ಇದು ನಿಜಕ್ಕೂ ಪ್ರಜಾಪ್ರಭುತ್ವದ ಶಕ್ತಿ. ಆದರೆ, ಈ ಹುಡುಕಾಟದಲ್ಲಿ ಒಂದು ರಾಜ್ಯ ಅಥವಾ ದೇಶಕ್ಕೆ ಹತ್ತು ಇಪ್ಪತ್ತು, ಮೂವತ್ತು ವರ್ಷಗಳು ಬಹಳ ದುಬಾರಿ ಆಗಿಬಿಡುತ್ತವೆ ಎಂಬುದು ಒಪ್ಪಲೇಬೇಕಾದ ಸತ್ಯ. ಅಲ್ಲವೇ?

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top