ಸಾಮೂಹಿಕ ಥಳಿತ, ಹತ್ಯೆ ನಿಲ್ಲಲಿ – ಪಾಲ್ಘರ್ ಘಟನೆಯ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ

ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಗಡಚಿಂಚಲೆಯಲ್ಲಿ ಇಬ್ಬರು ಸಾಧುಗಳು ಮತ್ತು ಅವರ ಕಾರು ಚಾಲಕನನ್ನು ಸಾಮೂಹಿಕವಾಗಿ ಥಳಿಸಿ, ಭೀಕರವಾಗಿ ಕೊಲೆ ಮಾಡಿದ ಘಟನೆ ಮತ್ತೆ ಸದ್ದು ಮಾಡುತ್ತಿದೆ. ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಈ ಘಟನೆ ಸಂಬಂಧ ಕಠಿಣ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿ, ಉನ್ನತ ತನಿಖೆಗೆ ಆದೇಶಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೂರಕ್ಕೂ ಹೆಚ್ಚು ಜನರನ್ನು ಬಂಧಿಸಿ ವಿಚಾರಣೆ ಮಾಡಲಾಗುತ್ತಿದೆ. ಆದರೆ, ಮಹಾರಾಷ್ಟ್ರದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳು ತಮ್ಮದೇ ಆದ ಕೆಸರೆರಚಾಟದಲ್ಲಿ ತೊಡಗಿಕೊಂಡಿರುವುದು ತಲೆತಗ್ಗಿಸುವ ವಿಚಾರವಾಗಿದೆ.
ಇಬ್ಬರು ಸಾಧುಗಳು ಮತ್ತು ಚಾಲಕನೊಂದಿಗೆ ಮುಂಬಯಿನ ಕಾಂಡಿವಲಿ ಪ್ರದೇಶದಿಂದ ಅಂತ್ಯ ಸಂಸ್ಕಾರವೊಂದರಲ್ಲಿ ಭಾಗವಹಿಸಲು ಗುಜರಾತ್‌ನ ಸೂರತ್‌ಗೆ ಕಾರಿನಲ್ಲಿ ಹೋಗುತ್ತಿದ್ದಾಗ ಮಾರ್ಗಮಧ್ಯೆ ಪಾಲ್ಘರ್ ಜಿಲ್ಲೆಯ ಗಡಚಿಂಚಲೆ ಎಂಬಲ್ಲಿ ಅವರ ವಾಹನ ಅಡ್ಡಗಟ್ಟಲಾಗಿತ್ತು. ಮಕ್ಕಳ ಕಳ್ಳರೆಂದು ಆರೋಪಿಸಿ ಅವರನ್ನು ಕಾರಿನಿಂದ ಹೊರಗೆಳೆದು ನೂರಾರು ಜನರಿದ್ದ ತಂಡವು ಅವರ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿತ್ತು. ದುರದೃಷ್ಟ ಎಂದರೆ, ಸ್ಥಳದಲ್ಲೇ ಹಾಜರಿದ್ದ ಪೊಲೀಸರು ಮೂಕಪ್ರೇಕ್ಷಕರಾಗಿದ್ದರು. ಪೊಲೀಸರ ಈ ನಿಷ್ಕ್ರಿಯತೆಯೂ ಈಗ ವ್ಯಾಪಕ ಟೀಕೆಗೆ ಗುರಿಯಾಗಿದೆ. ಆತಂಕದ ಸಂಗತಿ ಏನೆಂದರೆ, ಈ ಸಾಮೂಹಿಕ ಥಳಿತ ಮತ್ತು ಕೊಲೆ ಮಾಡಿದ ಘಟನೆಗೆ ವದಂತಿಗಳೇ ಕಾರಣವಾಗಿರುವುದು. ಮಕ್ಕಳ ಕಳ್ಳರು ಎಂಬ ವದಂತಿಯೇ ಇದಕ್ಕೆ ಕಾರಣ. ವರ್ಷದ ಹಿಂದೆ ಇಂಥದ್ದೇ ವದಂತಿ ನಂಬಿ ಬೆಂಗಳೂರಿನಲ್ಲಿ ಒಬ್ಬರನ್ನು ಇದೇ ರೀತಿಯಾಗಿ ಜನರು ಕೊಲೆ ಮಾಡಿದ್ದರು. ಅದಕ್ಕೂ ಮೊದಲು ದೇಶದ ವಿವಿಧೆಡೆ ನಾನಾ ವಿಧದ ವದಂತಿಗಳನ್ನು ನಂಬಿ ಇಂಥ ಹೃದಯ ವಿದ್ರಾವಕ ಘಟನೆಗಳು ನಡೆದಿವೆ. ಇವೆಲ್ಲವೂ ವದಂತಿಗಳ ಪ್ರಭಾವದಿಂದಲೇ ನಡೆದಿರುವಂಥದ್ದು, ಇದಕ್ಕೆ ವಾಟ್ಸ್ಆ್ಯಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳು ಇಂಧನ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಈ ಹೊಸ ಕಾಲದ ಸಂವಹನ ವೇದಿಕೆಗಳಾಗಬೇಕಿದ್ದ ಈ ಜಾಲತಾಣಗಳು ಸುಳ್ಳು ಸುದ್ದಿಗಳು, ವದಂತಿಗಳ ವಾಹಕಗಳಾಗುತ್ತಿರುವುದು ದುರದೃಷ್ಟಕರ. ಈ ತಾಣಗಳ ಮೂಲಕ ಹರಡುವ ಸುಳ್ಳು ಸುದ್ದಿಗಳು ಎಷ್ಟೋ ಜನರ ಪ್ರಾಣ ಹರಣಕ್ಕೆ ಕಾರಣವಾಗಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ವಾಟ್ಸ್ಆ್ಯಪ್, ಫೇಸ್ಬುಕ್ ಮತ್ತು ಟ್ವಿಟರ್‌ನಂಥ ಸಾಮಾಜಿಕ ಜಾಲತಾಣಗಳನ್ನು ಉತ್ತರದಾಯಿಗಳನ್ನಾಗಿಸುವ ಪ್ರಯತ್ನವನ್ನು ಮಾಡುತ್ತ ಬಂದಿದೆ. ಇನ್ನೂ ಆ ನಿಟ್ಟಿನಲ್ಲಿ ಸಂಪೂರ್ಣ ಯಶಸ್ಸು ಸಾಧಿಸಲು ಸಾಧ್ಯವಾಗಿಲ್ಲ.
ಕೊರೊನಾ ವಿರುದ್ಧ ಲಾಕ್‌ಡೌನ್‌ ಸಂದರ್ಭದಲ್ಲಿ ನಡೆದ ಸಾಧುಗಳ ಸಾಮೂಹಿಕ ಥಳಿತ ಮತ್ತು ಕೊಲೆಯು ಬೇರೆ ಬೇರೆ ಆಯಾಮಗಳನ್ನು ಪಡೆದುಕೊಳ್ಳುತ್ತಿರುವುದು ಕೂಡ ದುರದೃಷ್ಟಕರವಾಗಿದೆ. ಅಂದಿನ ಘಟನೆಯನ್ನು ಸ್ಥಳದಲ್ಲಿದ್ದ ಪೊಲೀಸರಾದರೂ ತಪ್ಪಿಸಬಹುದಿತ್ತು. ಸಣ್ಣ ವದಂತಿ ಕೂಡ ಗಂಭೀರ ಸ್ವರೂಪದ ಪರಿಣಾಮಕ್ಕೆ ಕಾರಣವಾಗಬಲ್ಲದು ಎಂಬುದಕ್ಕೆ ಪಾಲ್ಘರ್ ಘಟನೆ ಮತ್ತೊಂದು ಉದಾಹರಣೆಯಾಗಿದೆ. ಹಾಗಾಗಿ ಪೊಲೀಸರಷ್ಟೇ ಅಲ್ಲ, ಸಾಮಾನ್ಯ ಜನ ಕೂಡ ಈ ಸಂದರ್ಭದಲ್ಲಿ ಹೆಚ್ಚು ಜವಾಬ್ದಾರಿಯಿಂದ ವರ್ತಿಸಬೇಕಾದ ಅಗತ್ಯವಿದೆ. ಯಾವುದೇ ವದಂತಿಗೆ ಕಿವಿಗೊಡದೇ ಸತ್ಯವಾದ ಸಂಗತಿಗಳನ್ನು ತಿಳಿದುಕೊಳ್ಳುವತ್ತ ಗಮನಹರಿಸಬೇಕು. ಭವಿಷ್ಯದಲ್ಲಿ ಇಂಥ ಪ್ರಕರಣಗಳು ಮತ್ತೆ ಸಂಭವಿಸಿದಂತೆ ಸರಕಾರಗಳು ಹೆಚ್ಚಿನ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವನ್ನು ಈ ಘಟನೆ ಬಿಚ್ಚಿಟ್ಟಿದೆ. ಹಾಗೆಯೇ ಸಾಮಾಜಿಕ ಮಾಧ್ಯಮಗಳನ್ನು ಜವಾಬ್ದಾರಿಯಿಂದ ಬಳಸುವ ಹೊಣೆಗಾರಿಕೆಯನ್ನು ಎಲ್ಲರೂ ಪ್ರದರ್ಶಿಸುವುದು, ಸ್ವನಿಯಂತ್ರಣ, ಹೊಣೆಗಾರಿಕೆಯಿಲ್ಲದ ಸಂದೇಶಗಳನ್ನು ಮೊಳಕೆಯಲ್ಲೇ ಚಿವುಟುವ ಎಚ್ಚರ ಇವುಗಳೇ ಹೆಚ್ಚು ಪರಿಣಾಮಕಾರಿ. ಸುಳ್ಳು ಸುದ್ದಿ ಮತ್ತು ವದಂತಿಗಳನ್ನು ಹರಡದಂತೆ ನೋಡಿಕೊಳ್ಳುವಲ್ಲಿ ಜವಾಬ್ದಾರಿಯತ ನಾಗರಿಕರಾಗಿ ನಮ್ಮ ಕರ್ತವ್ಯವೂ ಇದೆ ಎಂಬುದನ್ನು ಮರೆಯಬಾರದು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top