ಕ್ಯಾಪ್ಟನ್ ಒಬ್ಬರೇ ಬ್ಯಾಟಿಂಗ್ ಮಾಡಿದ್ರೆ ಸಾಕೆ?

 

– ಶಶಿಧರ ಹೆಗಡೆ.  
‘‘ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ…,’’ ಎಂಬ ಆಡುಭಾಷೆಯ ಮಾತೊಂದಿದೆ. ಯಾರದ್ದಾದರೂ ತಪ್ಪು ಎತ್ತಿ ತೋರಿಸಲು ಹೀಗೆ ಹೇಳುವುದುಂಟು. ಆದರೆ, ಇದರ ಅರ್ಥವನ್ನು ಸರಳವಾಗಿ ಹಾಗೂ ಸಕಾರಾತ್ಮಕ ದೃಷ್ಟಿಯಿಂದಲೇ ಗ್ರಹಿಸೋಣ. ಅಂದರೆ ಮನೆಯ ಹಿರಿಯರು ಸಂಸ್ಕಾರವಂತರಾದರೆ ಅದು ಇತರರಿಗೂ ಬಳುವಳಿಯಾಗಿ ಹೋಗುತ್ತದೆ. ಹಿರಿಯರು ತಪ್ಪು ಹೆಜ್ಜೆಯಿಟ್ಟರೆ ಕಿರಿಯರು ಅದನ್ನು ಬಹುಬೇಗ ಕಲಿತುಕೊಂಡು ಬಿಡುತ್ತಾರೆ. ಹಾಗಾಗಿ ಕುಟುಂಬದ ಎಲ್ಲ ಸದಸ್ಯರ ಮೇಲೆ ಪ್ರಭಾವ ಬೀರಿ ಅವರನ್ನು ಸರಿದಾರಿಯಲ್ಲಿ ಕೊಂಡೊಯ್ಯುವ ಛಾತಿ ಮನೆಯ ಯಜಮಾನ/ ಯಜಮಾನತಿಗೆ ಇರಬೇಕಾಗುತ್ತದೆ. ಒಂದು ತಂಡದಲ್ಲೂ ಅಷ್ಟೇ. ಕ್ರಿಕೆಟ್ ತಂಡವನ್ನೇ ತೆಗೆದುಕೊಳ್ಳಿ. ತಂಡವನ್ನು ಮುನ್ನಡೆಸಲು ಕಪ್ತಾನ್ ಸಮರ್ಥನಿರಬೇಕು. ಕ್ಯಾಪ್ಟನ್ ಸ್ವತಃ ಕ್ರೀಡಾಸ್ಫೂರ್ತಿಯಿಂದ ಪುಟಿಯುತ್ತಿರಬೇಕು. ಎಂತಹ ಕಠಿಣ ಸನ್ನಿವೇಶದಲ್ಲೂ ಪಂದ್ಯವನ್ನು ಬಿಟ್ಟು ಕೊಡುವುದಿಲ್ಲವೆಂಬ ಛಲ ನಾಯಕನಲ್ಲಿರಬೇಕು. ಇಂತಹ ಕಪ್ತಾನನನ್ನು ಹೊಂದಿರುವ ತಂಡ ಸದಾ ಆತ್ಮವಿಶ್ವಾಸದಿಂದ ಬೀಗುತ್ತಿರುತ್ತದೆ. ಎದುರಾಳಿಗಳು ಬೆಂಕಿಯುಂಡೆಯಂತಹ ಬೌನ್ಸರ್ ಎಸೆದರೂ ಎದೆಗುಂದದೇ ಚೆಂಡನ್ನು ಬೌಂಡರಿ ಗೆರೆಯಾಚೆ ದಾಟಿಸುವ ಉತ್ಸಾಹ ಆಟಗಾರನಲ್ಲಿ ಚಿಮ್ಮುತ್ತಿರುತ್ತದೆ. ಪ್ರಸ್ತುತ ನಮ್ಮ ರಾಜ್ಯ ಸರಕಾರಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಕ್ಯಾಪ್ಟನ್. ಎಷ್ಟೇ ಕುಶಲ ಬ್ಯಾಟ್ಸ್‌ಮನ್‌ ಆಗಿದ್ದರೂ ಆತನ ನಿದ್ದೆಗೆಡಿಸುವ ಬೌನ್ಸರ್‌ನಂತೆಯೇ ಕೊರೊನಾ ಮಹಾಮಾರಿ ವಕ್ಕರಿಸಿದೆ. ಅದನ್ನು ಮೆಟ್ಟಿ ನಿಲ್ಲಲು ಯಡಿಯೂರಪ್ಪ ಪರಿಶ್ರಮ ವಹಿಸುತ್ತಿದ್ದಾರೆ. ಅವರ ತಂಡದ ಸದಸ್ಯರಲ್ಲಿ(ಸಚಿವ ಸಂಪುಟದ ಸದಸ್ಯರು) ಮಾತ್ರ ಅಂತಹ ಕಸುವು ಕಾಣಿಸುತ್ತಿಲ್ಲ!
ದಿವ್ಯಶಕ್ತಿಯಿಲ್ಲ
ಇದು ಅತ್ಯಂತ ದುರ್ಬರ ಸನ್ನಿವೇಶ. ಇಂತಹ ವಿಪತ್ತಿನಲ್ಲಿ ಯಾವುದೇ ದಿವ್ಯಶಕ್ತಿಯನ್ನು ನಂಬಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಜನರ ಯೋಗಕ್ಷೇಮದ ದೃಷ್ಟಿಯಿಂದ ಸರಕಾರ ಹಗಲಿರುಳೂ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾರ್ಯ ನಿರ್ವಹಿಸಬೇಕಾಗುತ್ತದೆ. ಸರಕಾರದ ಮುಖ್ಯಸ್ಥರಾಗಿ ಯಡಿಯೂರಪ್ಪ ಅವರು ಆರಂಭದಲ್ಲೆ ಈ ಸೂಕ್ಷ್ಮವನ್ನು ಅರ್ಥ ಮಾಡಿಕೊಂಡರು. ಕೊರೊನಾ ನಿರ್ವಹಣೆಗೆ ಆಡಳಿತ ಯಂತ್ರವನ್ನು ಸಜ್ಜುಗೊಳಿಸಿದರು. ಸಂಪುಟದ ಸಹೋದ್ಯೋಗಿಗಳಿಗೂ ಜವಾಬ್ದಾರಿ ವಹಿಸಿ ಸ್ವತಃ ತಾವೇ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಪ್ರತಿ ದಿನವೂ ಸಭೆ ನಡೆಸುವುದರ ಮೂಲಕ ಕ್ಷಣಕ್ಷಣದ ಮಾಹಿತಿ ಪಡೆಯುತ್ತಿದ್ದಾರೆ. ಇದನ್ನು ಆಧರಿಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ನಿರ್ದೇಶನ ಕೊಡುತ್ತಿದ್ದಾರೆ. ಸಚಿವ ಸಂಪುಟದ ಸದಸ್ಯರಲ್ಲಿ ಯಡಿಯೂರಪ್ಪನವರೇ ಅತ್ಯಂತ ಹಿರಿಯರು. ಮುಖ್ಯಮಂತ್ರಿಯ ಹೊಣೆಗಾರಿಕೆಯನ್ನು ನಿರ್ವಹಿಸುವ ಕರ್ತವ್ಯಪ್ರಜ್ಞೆ ಅವರಲ್ಲಿ ಜಾಗೃತವಾಗಿದೆ. ನೇರ ಹೇಳುವುದಿದ್ದರೆ ಆಡಳಿತಾತ್ಮಕ ಚಟುವಟಿಕೆಯಲ್ಲಿ ಅವರು ತಮ್ಮ ಸಹೋದ್ಯೋಗಿಗಳಿಗಿಂತ ಹೆಚ್ಚು ಕ್ರಿಯಾಶೀಲರಾಗಿದ್ದಾರೆ. ಈ ವಿಷಯದಲ್ಲಿ ಅವರಿಗೆ ವಯಸ್ಸು ಅಡ್ಡಿಯಾದಂತಿಲ್ಲ. ಯಡಿಯೂರಪ್ಪ ಅವರಲ್ಲಿರುವ ಚುರುಕುತನ, ಬದ್ಧತೆ ನೋಡಿಯಾದರೂ ಸಂಪುಟದ ಸದಸ್ಯರು ಜಾಗೃತರಾಗಬೇಕಿತ್ತು. ಕೊರೊನಾ ವಿರುದ್ಧದ ಹೋರಾಟದಲ್ಲಿ ಸಚಿವರುಗಳು ಮೈಚಳಿ ಬಿಟ್ಟು ಅಖಾಡಕ್ಕೆ ಧುಮುಖಬೇಕಿತ್ತು. ಆದರೆ, ಬೆರಳೆಣಿಕೆಯ ಸಚಿವರನ್ನು ಹೊರತು ಪಡಿಸಿದರೆ ಇತರರು ಅದೃಶ್ಯರಾದಂತಿದ್ದಾರೆ. ಅಂಥವರನ್ನು ಯಾವ ಮಸೂರ ಹಿಡಿದು ಹುಡುಕಬೇಕು ಎನ್ನುವುದು ಪ್ರಾಯಶಃ ಯಡಿಯೂರಪ್ಪ ಅವರಿಗೂ ತಲೆಬಿಸಿಯಾಗಿ ಕಾಡುತ್ತಿದ್ದಿರಬಹುದು. ಅಲ್ಲದಿದ್ದರೆ ಅಸಮರ್ಥರು, ಅಯೋಗ್ಯರು ಹಾಗೂ ಸಮಯ ಸಂದರ್ಭದ ಮಹತ್ವದ ಅರಿವಿಲ್ಲದವರನ್ನು ಬಲವಂತವಾಗಿ ತಮ್ಮ ಟೀಮ್‌ನೊಳಗೆ ನೂಕಿರುವ ‘ಆಯ್ಕೆಗಾರ’ರ ಸಂಬಂಧದಲ್ಲಿ ಸಹಾನುಭೂತಿ ಉಂಟಾಗಿರಬಹುದು.
ಟೀಮ್ ಗೆಲ್ಲಬೇಕಲ್ಲ?
ನಿಷ್ಣಾತ ಹಾಗೂ ನುರಿತ ಆಲ್‌ರೌಂಡರ್‌ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಎಲ್ಲ ಮಾಡಬಲ್ಲ. ಆಲ್‌ರೌಂಡರ್ ಮಾತ್ರ ಸೆಂಚುರಿ ಹೊಡೆದರೆ ಸಾಲದು. ಉಳಿದವರೂ ರನ್ ಪೇರಿಸಬೇಕಲ್ಲ? ಟೀಮ್ ಎಫರ್ಟ್ ಇಲ್ಲದಿದ್ದರೆ ಪಂದ್ಯ ಕೈತಪ್ಪುವ ಅಪಾಯವೇ ಹೆಚ್ಚು. ಕೊರೊನಾದಂತಹ ವಿಪತ್ತಿನ ವಿರುದ್ಧ ಸೆಣೆಸುವ ವಿಷಮ ಸನ್ನಿವೇಶದಲ್ಲಿ‌ ಸಿಎಂ ಯಡಿಯೂರಪ್ಪ ಸಹಜವಾಗಿ ಸೇನಾಧಿಪತ್ಯ ವಹಿಸಿಕೊಂಡಿದ್ದಾರೆ. ಈ ಯುದ್ಧರಂಗದಲ್ಲಿ ಅವರಷ್ಟು ಕೆಚ್ಚು ಸಂಪುಟದ ಸದಸ್ಯರಲ್ಲಿ ಇಲ್ಲವೆನ್ನುವುದು ಬರಿಗಣ್ಣಿಗಷ್ಟೇ ಅಲ್ಲ; ಒಳಗಣ್ಣಿಗೂ ಗೋಚರವಾಗುತ್ತಿಲ್ಲ. ಪುನಃ ಕ್ರಿಕೆಟ್‌ನ  ಪರಿಭಾಷೆಯಲ್ಲೆ ಹೇಳುವುದಾದರೆ ಈ ಸಂದರ್ಭದಲ್ಲಿ ಮೈದಾನದ ಮೂಲೆ ಮೂಲೆಯಲ್ಲೂ ಯಡಿಯೂರಪ್ಪ ಅವರೇ ಕಾಣಿಸುತ್ತಿದ್ದಾರೆ. ಬ್ಯಾಟಿಂಗ್, ಬೌಲಿಂಗ್, ಕೀಪಿಂಗ್, ಫೀಲ್ಡಿಂಗ್ ಎಲ್ಲವನ್ನೂ ಬಿಎಸ್‌ವೈ ತಾವೇ ನಿರ್ವಹಿಸಬೇಕಾದ ಪರಿಸ್ಥಿತಿಯಿದೆ. ಈ ದೃಷ್ಟಿಯಿಂದ ಸರಕಾರ ಹಾಗೂ ರಾಜ್ಯ ಬಿಜೆಪಿಯ ಮರ್ಯಾದೆಯನ್ನು ಯಡಿಯೂರಪ್ಪ ಉಳಿಸಿದ್ದಾರೆ. ಇಷ್ಟರ ಬಳಿಕವೂ ಒಂದು ತಂಡವಾಗಿ ಆಡಬೇಕಿರುವ ಸಚಿವರುಗಳಲ್ಲಿ ಅಂತಹ ಗಾಂಭೀರ್ಯ, ದಕ್ಷತೆ ಇಲ್ಲದಿರುವುದರಿಂದ ಇದೆಲ್ಲವೂ ಯಡಿಯೂರಪ್ಪ ಅವರ ವೈಯಕ್ತಿಕ ಸ್ಕೋರ್ ಎನಿಸಿಕೊಳ್ಳುತ್ತದೆ.
ಪ್ರತಿಪಕ್ಷಗಳಿಗೂ ಅರ್ಥವಾಗಿದೆ
ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ರಾಜ್ಯದಲ್ಲಿ ಅತ್ಯಂತ ಪ್ರಬಲ ಪ್ರತಿಪಕ್ಷವಿದೆ. ಪ್ರತಿಪಕ್ಷಗಳಲ್ಲೂ ಅನುಭವಿಗಳು ಹಾಗೂ ಅಪಾರ ಜನಬೆಂಬಲ ಹೊಂದಿದ ನಾಯಕರಿದ್ದಾರೆ. ವಿಪತ್ತಿನ ಸಂದರ್ಭದಲ್ಲಿ ಇಂತಹ ಪ್ರತಿಪಕ್ಷಗಳ ಸಲಹೆಗೂ ಅಷ್ಟೇ ಪ್ರಾಮುಖ್ಯವಿರುತ್ತದೆ. ಎದುರಾಳಿಗಳು ಆಡುವ ಮಾತುಗಳಲ್ಲಿ ರಾಜಕೀಯದ ಒಗ್ಗರಣೆಯ ಘಾಟು ಇರಬಹುದು. ಆಡಳಿತ ಪಕ್ಷದವರು ಇದನ್ನು ಸಮಚಿತ್ತದಿಂದ ಸ್ವೀಕರಿಸಬೇಕಾಗುತ್ತದೆ. ಪ್ರತಿಪಕ್ಷದವರು ಹೇಳಿದ್ದನ್ನು ಸಾರಾಸಗಟಾಗಿ ತಳ್ಳಿಹಾಕುವ ದಾಷ್ಟ್ರ್ಯ ಹಾಗೂ ಆನೆ ನಡೆದಿದ್ದೇ ದಾರಿಯೆನ್ನು ಅಹಂಕಾರ ಯಾವ ಆಳುವ ಪಕ್ಷಕ್ಕೂ ಶೋಭೆಯಲ್ಲ. ಸದ್ಯಕ್ಕೆ ರಾಜ್ಯದಲ್ಲಿ ಪ್ರತಿಪಕ್ಷದವರು ಇದೇ ವಿಷಯವನ್ನು ಜನರ ಮುಂದಿಡುತ್ತಿದ್ದಾರೆ. ಕೊರೊನಾ ನಿರ್ವಹಣೆ ವಿಚಾರದಲ್ಲಿ ಮುಖ್ಯಮಂತ್ರಿಯವರ ಬಗ್ಗೆ ಪ್ರತಿಪಕ್ಷಗಳಿಗೆ ತಕರಾರು ಇದ್ದಂತಿಲ್ಲ. ಬದಲಾಗಿ ಸಚಿವರ ಕಾರ್ಯವೈಖರಿ ಬಗ್ಗೆ ಆಕ್ರೋಶವಿದೆ. ನಮ್ಮ ಸಲಹೆಗಳನ್ನು ಸಚಿವರುಗಳು ಸ್ವೀಕರಿಸುತ್ತಿಲ್ಲ. ತಮ್ಮ ವಿರುದ್ಧವೇ ಮುಗಿಬಿದ್ದು ವೈಯಕ್ತಿಕ ನಿಂದನೆಗೆ ಇಳಿಯುತ್ತಿದ್ದಾರೆಂದು ಪ್ರತಿಪಕ್ಷದವರು ದೂರುತ್ತಿದ್ದಾರೆ. ಇಲ್ಲಿಯೂ ಅರ್ಥ ಮಾಡಿಕೊಳ್ಳಬೇಕಾದ ಸೂಕ್ಷ್ಮಾತಿ ಸೂಕ್ಷ್ಮ ಸಂಗತಿಯೆಂದರೆ ಪ್ರತಿಪಕ್ಷಗಳಿಗೂ ಯಡಿಯೂರಪ್ಪ ಅವರಂತಹ ಹಿರಿಯ ರಾಜಕಾರಣಿ ಈ ಹೊತ್ತಿನಲ್ಲಿ ಸ್ಪಂದಿಸುತ್ತಿರುವ ರೀತಿಗೆ ಮೆಚ್ಚುಗೆಯಿದೆ. ಹಾಗೆಯೇ ಇದರಲ್ಲೆ ಸಂಪುಟದ ಸದಸ್ಯರಿಗೆ ಪಾಠವೂ ಅಡಗಿದೆ.
ಕ್ರಿಯಾಶೀಲ ಹೊಸಬರು
ಹಾಗೆ ನೋಡಿದರೆ ಕಾಂಗ್ರೆಸ್-ಜೆಡಿಎಸ್ ತೊರೆದು ಬಂದು ರಾಜಕೀಯ ಅಜ್ಞಾತವಾಸವನ್ನೂ ಅನುಭವಿಸಿದ ಬಳಿಕ ಸಂಪುಟ ಸೇರ್ಪಡೆಯಾದ ಹೊಸಬರೇ ಕ್ರಿಯಾಶೀಲರಾಗಿದ್ದಾರೆ. ಅವರಲ್ಲಿ ಎಸ್.ಟಿ.ಸೋಮಶೇಖರ್, ಡಾ: ಸುಧಾಕರ್, ಬಿ.ಸಿ.ಪಾಟೀಲ್, ಕೆ.ಗೋಪಾಲಯ್ಯ, ಅವರನ್ನು ಹೆಸರಿಸಬಹುದು. ಈ ಸಚಿವರುಗಳು ತಮಗೆ ವಹಿಸಲಾದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವತ್ತ ಲಕ್ಷ್ಮ್ಯಹರಿಸಿದ್ದಾರೆ. ಲಾಕ್‌ಡೌನ್‌ ಘೋಷಣೆಯಾಗುತ್ತಿದ್ದಂತೆ ರೈತರು ಬೆಳೆದ ಹಣ್ಣು, ತರಕಾರಿಯನ್ನು ಗ್ರಾಹಕರು ನೇರವಾಗಿ ಕೊಂಡುಕೊಳ್ಳುವ ವ್ಯವಸ್ಥೆಯನ್ನು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಾಡಿಸಿದ್ದರು. ಹಾಗೆಯೇ ಎಪಿಎಂಸಿಗಳಿಗೆ ಬರುವ ರೈತರ ಸುರಕ್ಷತೆಗೆ ಗಮನ ಹರಿಸಿದರು. ಸಿಎಂ ಪರಿಹಾರ ನಿಧಿಗೆ ಸಹಕಾರ ಇಲಾಖೆ ಅಧೀನದ ಸಂಘ, ಸಂಸ್ಥೆಗಳಿಂದ 50.80 ಕೋಟಿ ರೂ. ಸಂಗ್ರಹಿಸಿ ಕೊಟ್ಟಿರುವುದೂ ಗಮನಾರ್ಹ. ಕೃಷಿ ಸಚಿವ ಬಿ.ಸಿ.ಪಾಟೀಲರೂ ರೈತರಲ್ಲಿ ಧೈರ್ಯ ತುಂಬುವ ಕೆಲಸ ಮಾಡಿದರು. ಈ ಇಬ್ಬರೂ ಸಚಿವರು ಈಗಾಗಲೇ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಇನ್ನು ಹೊಸ ಸಚಿವರ ಪೈಕಿ ಡಾ.ಕೆ.ಸುಧಾಕರ್ ಕೋವಿಡ್-19 ಉಸ್ತುವಾರಿ ಆಗಿರುವುದರಿಂದ ಅವರ ಬಗ್ಗೆ ವಿಶೇಷವಾಗಿ ಉಲ್ಲೇಖಿಸಬೇಕಾಗಿಲ್ಲ. ವಲಸೆ ಬಂದವರಲ್ಲಿ ರಮೇಶ್ ಜಾರಕಿಹೊಳಿ, ಆನಂದ್ ಸಿಂಗ್ ಹೊರತು ಪಡಿಸಿದರೆ ಇತರರು ಮೊದಲ ಬಾರಿಗೆ ಸಂಪುಟ ಸೇರಿದವರಾಗಿದ್ದಾರೆ. ಈ ಪೈಕಿ ಸುಧಾಕರ್ ಸ್ವತಃ ವೈದ್ಯರು. ಸೋಮಶೇಖರ್ ಸಹಕಾರ ಕ್ಷೇತ್ರದ ಹಿನ್ನೆಲೆಯಿಂದ ಬಂದವರು. ಈ ಅನುಭವವೀಗ ಅವರ ನೆರವಿಗೆ ಬಂದಂತಿದೆ. ಕ್ಷೇತ್ರ, ವಿಷಯ ಜ್ಞಾನ ಹೊಂದಿದವರಿಗೆ ಸಂಬಂಧಿಸಿದ ಇಲಾಖೆ ವಹಿಸುವುದು ಈ ದೃಷ್ಟಿಯಿಂದ ಉತ್ತಮ.
ತಪ್ಪಿಸಬಹುದಾಗಿದ್ದ ಪ್ರಹಸನ
ಕಾರ್ಮಿಕರು ಊರಿಗೆ ತೆರಳುವಾಗ ಮೆಜೆಸ್ಟಿಕ್‌ನಲ್ಲಿ ದೊಡ್ಡ ಪ್ರಹಸನವೇ ನಡೆದು ಹೋಯಿತು. ಸಾರಿಗೆ ಖಾತೆ ಹೊಂದಿರುವ ಡಿಸಿಎಂ ಲಕ್ಷ್ಮಣ ಸಂಗಪ್ಪ ಸವದಿ ಹಾಗೂ ಕಾರ್ಮಿಕ ಮಂತ್ರಿ ಶಿವರಾಮ ಹೆಬ್ಬಾರ ಮುಂಜಾಗ್ರತೆ ವಹಿಸಿದ್ದರೆ ಇದನ್ನು ತಪ್ಪಿಸಬಹುದಿತ್ತು. ಕಡೆಗೆ ಮುಖ್ಯಮಂತ್ರಿಯವರೇ ಮಧ್ಯೆ ಪ್ರವೇಶಿಸಿ ಕಾರ್ಮಿಕರಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಿದರು. ಆದರೆ, ಅಷ್ಟು ಹೊತ್ತಿಗೆ ಸರಕಾರಕ್ಕೆ ಇರಿಸುಮುರಿಸು ತರುವಷ್ಟು ಡ್ಯಾಮೇಜ್ ಆಗಿ ಹೋಗಿತ್ತು.
ಹಾಗಂತ ಯಡಿಯೂರಪ್ಪ ಅವರ ಸಂಪುಟದಲ್ಲಿ ಪ್ರಾಜ್ಞರು, ಜನಪರ ಕಾಳಜಿಯವರು ಇಲ್ಲವೇ ಇಲ್ಲವೆಂದಲ್ಲ. ಸಂಪುಟದಲ್ಲಿ ಮೂವರು ಉಪ ಮುಖ್ಯಮಂತ್ರಿಗಳಿದ್ದಾರೆ. ಅವರಲ್ಲಿ ಹಿರಿಯರಾದ ಗೋವಿಂದ ಕಾರಜೋಳ ಅವರು ಆಡಳಿತದ ದೃಷ್ಟಿಯಿಂದ ಸಿಎಂ ಅವರೊಂದಿಗೆ ನೆರಳಿನಂತೆ ಹಿಂಬಾಲಿಸುತ್ತಿದ್ದಾರೆ. ಡಿಸಿಎಂ ಅಶ್ವತ್ಥನಾರಾಯಣ ಅವರೂ ಆಡಳಿತದ ಕಾರ್ಯಭಾರದಲ್ಲಿ ಸಕ್ರಿಯರಾಗಿದ್ದಾರೆ. ಅದೇ ಲಕ್ಷ್ಮಣ ಸವದಿಯವರ ವಿಚಾರಕ್ಕೆ ಬಂದರೆ ‘‘ಸವದಿ ಸಾವ್ಕಾರ್, ಜರಾ ಸವಡು ಮಾಡ್ಕೋರಿ…,’’ ಎಂಬಂತಾಗಿದೆ! ಹಿರಿಯ ಸಚಿವರಾದ ಆರ್.ಅಶೋಕ್, ಸುರೇಶ್ ಕುಮಾರ್ ಕೊರೊನಾ ಸಂಕಷ್ಟ ಕಾಲದಲ್ಲಿ ಸಿಎಂಗೆ ಬೆಂಗಾವಲಾಗಿದ್ದಾರೆ. ಇವರ ಹೊರತಾಗಿಯೂ ಘಟಾನುಘಟಿಗಳು ಸಂಪುಟದಲ್ಲಿದ್ದಾರಲ್ಲ? ಅಂಥವರು ತಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚುವಂತೆ ಈ ವಿಪತ್ತಿನ ಸಂದರ್ಭದಲ್ಲಿ ಕ್ಷಮತೆ ತೋರಿದರೆ ಅವರಿಗೂ ಗೌರವ. ರಾಜ್ಯಕ್ಕೂ ಅನುಕೂಲ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top