ಲಾಕ್‌ಡೌನ್ ನಿರ್ಬಂಧ ಹಿನ್ನೆಲೆಯಲ್ಲಿ ಬಾಗಿಲು ತೆರೆಯಲಾಗದ ಕಾಲೇಜುಗಳು ಆನ್‌ಲೈನ್ ಕ್ಲಾಸ್ ನಡೆಸುತ್ತಿವೆ. ವ್ಯಾಪಕ ಅರಣ್ಯ ಪ್ರದೇಶ ಹೊಂದಿರುವ ಉತ್ತರ ಕನ್ನಡ ಜಿಲ್ಲೆಯ ಅನೇಕ ಹಳ್ಳಿಗಳಲ್ಲಿ ನೆಟ್‌ವರ್ಕ್ ಸಮಸ್ಯೆ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿ ಇದಕ್ಕೊಂದು, ವಿಭಿನ್ನ ಪರಿಹಾರ ಕಂಡುಕೊಂಡಿದ್ದು, 20 ಅಡಿ ಎತ್ತರದ ಮರ ಏರಿ ಆನ್‌ಲೈನ್ ಕ್ಲಾಸಿಗೆ ಹಾಜರಾಗುತ್ತಿದ್ದಾನೆ!
ಶಿರಸಿ ತಾಲೂಕು ಬಕ್ಕಳ ಗ್ರಾಮದ ಅಂಬಳಿಕೆ ಕಲ್ಲಗದ್ದೆ ಹಳ್ಳಿಯ ಶ್ರೀರಾಮ ಗೋಪಾಲ ಹೆಗಡೆ ಒಂದೂವರೆ ತಿಂಗಳಿಂದ ಮರ ಹತ್ತುವ ಮೂಲಕ ತನ್ನ ಸೆಲ್‌ಫೋನ್‌ಗೆ ಇಂಟರ್‌ನೆಟ್ ಸಂಪರ್ಕ ಪಡೆಯುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ ಕಾಲೇಜಿನಲ್ಲಿ ಎಂಎಸ್‌ಡಬ್ಲ್ಯೂ ಅಂತಿಮ ವರ್ಷದ ವಿದ್ಯಾರ್ಥಿಯಾಗಿರುವ ಶ್ರೀರಾಮ ಹೆಗಡೆ ತನ್ನ ಊರಿನ ಬೆಟ್ಟದಲ್ಲಿ ಇರುವ ಈ ಮರಕ್ಕೆ ಮುಕ್ಕಾಲು ಕಿಲೋಮೀಟರ್ ನಡೆದು ಹೋಗುತ್ತಾರೆ. ‘‘ನಮ್ಮ ಊರಿನಲ್ಲಿ ಬಿಎಸ್ಎನ್ಎಲ್ ನೆಟ್‌ವರ್ಕ್ ಮಾತ್ರ ಇದೆ. ಮನೆ ಬಳಿ ಸಿಗ್ನಲ್ ಸರಿಯಾಗಿ ಸಿಗುತ್ತಿಲ್ಲ. ಏನು ಮಾಡುವುದು. ಅದಕ್ಕಾಗಿ ಈ ಉಪಾಯ ಕಂಡುಕೊಂಡೆ,’’ ಎನ್ನುತ್ತಾರೆ ಶ್ರೀರಾಮ ಹೆಗಡೆ.
ಸಾಲ ಮಾಡಿ ಮೊಬೈಲ್ ಕೊಡಿಸಿದ ತಾಯಿ
ಪಿಯು ಓದುತ್ತಿರುವ ತನ್ನ ಮಗನ ಆನ್‌ಲೈನ್ ಕ್ಲಾಸ್‌ಗಾಗಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಗೌರಮ್ಮ ಎಂಬುವವರು ಸಾಲ ಮಾಡಿ ಸ್ಮಾರ್ಟ್ ಫೋನ್ ಕೊಡಿಸಿದ್ದಾರೆ. ಅತ್ತ ಅಂಗಡಿಯವರು 1500 ರೂ. ಹೆಚ್ಚಿನ ದರಕ್ಕೆ ಫೋನ್‌ಗಳನ್ನು ಮಾರಾಟ ಮಾಡಿ ಸುಲಿಗೆ ಮಾಡುತ್ತಿಧಿದ್ದಾರೆ.
ಗುಡ್ಡ ಹತ್ತೋ ಪರಿಸ್ಥಿತಿ!
ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲವು ಕಡೆ ವಿದ್ಯಾರ್ಥಿಗಳು ಮೊಬೈಲ್ ಸಿಗ್ನಲ್ ದೊರೆಯದೇ ಸುತ್ತಮುತ್ತಲ ಬಯಲು ಪ್ರದೇಶದಲ್ಲಿಯೋ, ಗುಡ್ಡ ಏರಿ ಕುಳಿತುಕೊಂಡೋ ತರಗತಿ ವೀಕ್ಷಣೆ ಮಾಡುತ್ತಿದ್ದಾರೆ. ವಿದ್ಯುತ್ ವ್ಯತ್ಯಯದಿಂದ ಟವರ್‌ಗಳು ಕೆಲಸ ಮಾಡದೇ, ಸರಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಅಷ್ಟೇ ಅಲ್ಲದೇ, ಖಾಸಗಿ ಮೊಬೈಲ್ ನೆಟ್‌ವರ್ಕ್‌ಗಳೂ ಸಿಗದಂತಾಗಿವೆ. ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕಡಿತದಿಂದ ಸರಕಾರದ ವ್ಯವಸ್ಥೆಯು ಪ್ರಯೋಜನಕ್ಕೆ ಬಾರದಂತಾಗಿದೆ.