– ಪ್ರಕಾಶ್ ಬಬ್ಬೂರು ಹಿರಿಯೂರು.
ರೈತರು ಬೆಳೆದ ಈರುಳ್ಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲವೆಂದು ವಿಡಿಯೊ ಮಾಡಿ ಅಳಲು ತೋಡಿಕೊಂಡಿದ್ದ ರೈತ ಮಹಿಳೆ ಹಿರಿಯೂರಿನ ಕಾಟನಾಯಕಹಳ್ಳಿ ಗ್ರಾಮದ ವಸಂತ ಕುಮಾರಿ ಅವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಫೋನ್ ಮಾಡಿ ಆತ್ಮಸ್ಥೈರ್ಯ ತುಂಬಿದ್ದಾರೆ. ಇದರ ಬೆನ್ನಿಗೇ ಅಧಿಕಾರಿಗಳ ದಂಡೇ ಕಾಟನಾಯಕಹಳ್ಳಿಗೆ ದೌಡಾಯಿಸಿದೆ. ಈ ಮೂಲಕ, ಈ ಮಹಿಳೆ ಈರುಳ್ಳಿಗೆ ಮಾರ್ಕೆಟ್ ಸಿಗುವಂತೆ ಮಾಡಿದ್ದಾರೆ.
ಪತಿ ಪ್ರತಾಪ್ ಜತೆಗೊಡಿ ವಸಂತಕುಮಾರಿ ಸುಮಾರು ಮೂರೂವರೆ ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದಾರೆ. 130 ಚೀಲ ಇಳುವರಿ ಬಂದಿದೆ. ಆದರೆ ಕೊರೊನಾ ಲಾಕ್‌ಡೌನ್‌ನಿಂದ ಸರಿಯಾದ ಬೆಲೆ ಸಿಗದೆ ಮಾರಾಟ ಮಾಡಲಾಗದೆ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಈ ಗ್ರಾಮದ ಬಹುತೇಕ ರೈತರು ಕೂಡ ಕಟಾವು ಮಾಡಿ ಬೆಲೆ ಸಿಗದೇ ಕಂಗಾಲಾಗಿದ್ದರು. ಖರೀದಿದಾರರು ಕ್ವಿಂಟಾಲ್‌ಗೆ ಕೇವಲ 150ರಿಂದ 250 ರೂ.ಗೆ ಕೇಳುತ್ತಿದ್ದರು.
ಗ್ರಾಮದ ರೈತನೊಬ್ಬ ತಾನು ಬೆಳೆದ 80 ಪ್ಯಾಕೆಟ್‌ಗಳಲ್ಲಿ 40 ಚೀಲ ಈರುಳ್ಳಿ ಕೊಳೆತು ಜಮೀನಿನಲ್ಲೇ ಸುರಿದು ಬಂದಿದ್ದಾನೆ. ಉಳಿದ 40 ಪ್ಯಾಕೇಟ್‌ಗಳನ್ನು ಕೇವಲ ಒಂದಕ್ಕೆ 150 ರೂ.ನಂತೆ ಮಾರಾಟ ಮಾಡಿ ನಷ್ಟ ಅನುಭವಿಸಿದ್ದಾನೆ. ಈ ಘಟನೆ ಕಣ್ಣಾರೆ ಕಂಡ ಮಹಿಳೆ ರೈತರ ನಿಜವಾದ ತೊಂದರೆಯನ್ನು ವಿಡಿಯೊ ಮಾಡಿ ಹಂಚಿಕೊಂಡಿದ್ದರು.
ಡಿಸಿ ಭರವಸೆ
ಸಿಎಂ ಕರೆ ಮಾಡಿದ ಬಳಿಕ ಜಿಲ್ಲಾಧಿಕಾರಿ ಕೂಡ ಮಹಿಳೆಗೆ ಕಾಲ್ ಮಾಡಿ ಮಾತನಾಡಿಧಿದ್ದಾರೆ. ‘‘ಖರೀದಿದಾರರ ಜತೆ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಮಾರಾಟದ ವ್ಯವಸ್ಥೆ ಮಾಡುತ್ತೇವೆ,’’ ಎಂದು ಧೈರ್ಯ ತುಂಬಿದ್ದಾರೆ. ತಕ್ಷ ಣವೇ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಡಾ. ತೋಟಯ್ಯ ಭೇಟಿ ನೀಡಿ ಗುಣಮಟ್ಟ ಅನುಸಾರ ದರ ನಿಗದಿಪಡಿಸಿ ಮಾರಾಟಕ್ಕೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
64 ಸಾವಿರ ಮೆಟ್ರಿಕ್ ಟನ್ ಬೆಳೆ
ಜಿಲ್ಲೆಯಲ್ಲಿಬೇಸಿಗೆ ಹಂಗಾಮಿಗೆ 3202 ಹೆಕ್ಟೇರ್‌ನಲ್ಲಿ 64 ಸಾವಿರ ಮೆಟ್ರಿಕ್ ಟನ್‌ಗಳಷ್ಟು ಈರುಳ್ಳಿ ಬೆಳೆಯಲಾಗಿದೆ. ಪ್ರತಿದಿನ 200 ಮೆಟ್ರಿಕ್ ಟನ್ ಮಾರಾಟ ಆಗುತ್ತಿದೆ. ದರ ಕುಸಿತ, ಸಾಗಣೆ ಸಮಸ್ಯೆ ಬೆಂಗಳೂರಿನ ಮಾರುಕಟ್ಟೆ ಕಷ್ಟ ಎನ್ನುವ ಕಾರಣಕ್ಕೆ ರೈತರು ಈರುಳ್ಳಿ ದಾಸ್ತಾನಿರಿಸಿಕೊಂಡಿದ್ದಾರೆ. ಈಗ ಶೇ.50ರಷ್ಟು ಉತ್ಪನ್ನ ಮಾತ್ರ ಮಾರಾಟ ಆಗಿದೆ. ಕಾಟನಾಯಕನಹಳ್ಳಿ ಪ್ರಕರಣ ಇಡೀ ರಾಜ್ಯದ ಈರುಳ್ಳಿ ಬೆಳೆಗಾರರ ಸಮಸ್ಯೆಗೆ ಪರಿಹಾರ ಆಗಬಹುದು ಎನ್ನುವ ಭರವಸೆ ಸಿಕ್ಕಿದೆ.
ಆ ಊರಲ್ಲಿ 5 ಸಾವಿರ ಚೀಲ ಈರುಳ್ಳಿ
ಈ ಗ್ರಾಮದಲ್ಲಿಯೇ ಸುಮಾರು 5 ಸಾವಿರಕ್ಕೂ ಹೆಚ್ಚು ಚೀಲಗಳಷ್ಟು (50 ಕೆಜಿ ಒಂದು ಚೀಲ) ಈರುಳ್ಳಿ ಬೆಳೆದಿದ್ದು, ಸರಿಯಾದ ಬೆಲೆಯಿಲ್ಲದೇ ಹಾಗೇ ಶೇಖರಿಸಿದ್ದಾರೆ. ಸುಮಾರು 50 ಎಕರೆಯಲ್ಲಿ ಬೆಳೆದ ಬಾಳೆ, ನೂರಾರು ಎಕರೆಯ ಸುಗಂಧರಾಜ ಹೂವು ಕೂಡಾ ಹಾಳಾಗಿದೆ.
ನಾವು ಈ ಬೆಳೆಗೆ ಸುಮಾರು 70 ಸಾವಿರ ರೂ. ವೆಚ್ಚ ಮಾಡಿದ್ದೇವೆ. ಈಗ ನೋಡಿದರೆ 200 ರಿಂದ 300 ರೂ. ರೇಟಿಗೆ ಕೇಳುತ್ತಿದ್ದಾರೆ. ಹೀಗಾದರೆ ವೆಚ್ಚಕ್ಕೂ ಸಾಲುವುದಿಲ್ಲ. ಇದನ್ನೇ ನಂಬಿ ಸಾಲಸೂಲ ಮಾಡಿದ್ದೇವೆ. ಆದರೆ ಈ ರೇಟಿಗೆ ನಮ್ಮ ಸಾಲ ಕೂಡ ತೀರುವುದಿಲ್ಲ. ರೈತರು ಆತ್ಮಹತ್ಯೆ ದಾರಿ ಹಿಡಿಯಬೇಕಾಗುತ್ತದೆ. ಹಾಗಾಗಿ ರೈತರ ಅನುಕೂಲಕ್ಕಾಗಿ ನಾನು ಹೀಗೆ ಮಾಡಿದೆ.
-ವಸಂತ ಕುಮಾರಿ ಕಾಟನಾಯಕಹಳ್ಳಿ
ತಾಲೂಕು ಅಧಿಕಾರಿಗಳು ಕಾಟನಾಯಕನಹಳ್ಳಿಗೆ ತೆರಳಿ ಈರುಳ್ಳಿ ಖರೀದಿಗೆ ವ್ಯವಸ್ಥೆ ಮಾಡಿದ್ದಾರೆ. ಜಿಲ್ಲೆಯಲ್ಲಿ 45 ಜನ ಸಗಟು ಖರೀದಿದಾರರು ಇದ್ದಾರೆ. ಎಪಿಎಂಸಿಯಲ್ಲಿ ಟ್ರೇಡ್ ಲೈಸೆನ್ಸ್ ಇರುವವರಿಗೆ ಖರೀದಿಸಲು ಸೂಚನೆ ನೀಡಲಾಗಿದೆ.
– ಡಾ. ಸವಿತಾ ತೋಟಗಾರಿಕೆ ಉಪ ನಿರ್ದೇಶಕಿ