ಒಂದು ಸರ್ಕಾರ ಇಷ್ಟು ಬೇಗ ಹೊಳಪು ಕಳಕೊಂಡರೆ ಹೇಗೆ?

ಜಾತಿ ಬಲವಿಲ್ಲದೆ, ಕೃತಕ ಇಮೇಜು ಸೃಷ್ಟಿಸುವ ಗೋಜಿಗೆ ಹೋಗದೆ ಕೇವಲ ರಾಜಕೀಯ ಜಾಣ್ಮೆ ಮತ್ತು ಆಡಳಿತಾತ್ಮಕ ಕೈಚಳಕದಿಂದಲೇ ರಾಜಕೀಯ ಸವಾಲುಗಳನ್ನು ಮಾತ್ರವಲ್ಲ, ಚುನಾವಣೆಯನ್ನೂ ಜಯಿಸಬಹುದು ಎಂಬುದಕ್ಕೆ ಹೆಗಡೆ ಸರ್ಕಾರದ ಕಾಲಘಟ್ಟ ಒಂದು ಉತ್ತಮ ಉದಾಹರಣೆ ಆಗಬಲ್ಲದು.

Ramakrishna-Hegde

ಮೊದಲ ಬಾರಿ ರಾಜ್ಯದಲ್ಲಿ ಜನತಾ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದಾಗ ನಾವೆಲ್ಲ ಹನ್ನೆರಡು ಹದಿಮೂರು ವರ್ಷದ ಹುಡುಗರಾಗಿದ್ದಿರಬಹುದು. ಯಾವುದನ್ನೂ ಸೀರಿಯಸ್ ಆಗಿ ಗಮನಿಸುವ ವಯಸ್ಸು ಅದಲ್ಲ. ಆದರೂ ಅದೇಕೋ ರಾಮಕೃಷ್ಣ ಹೆಗಡೆ ಕಾಲದ ರಾಜಕೀಯ ನೆನಪುಗಳು ಇವತ್ತಿಗೂ ಮನಸ್ಸಿನಲ್ಲಿ ಹಸಿರಾಗಿ ಉಳಿದುಕೊಂಡಿವೆ. ಆ ಕಾಲದಲ್ಲಿ ಹೆಗಡೆ ಅಂದರೆ ಸಾಕು, ಎಲ್ಲರೂ ಅತ್ತ ಕತ್ತು ಹೊರಳಿಸುತ್ತಿದ್ದರು. ಆ ಸರ್ಕಾರ ಹೆಗಡೆ ಸರ್ಕಾರ ಅಂತಲೇ ಜನಜನಿತವಾಗಿತ್ತು. ಆ ಕಾಲದ ರಾಜಕೀಯ ಏರಿಳಿತಗಳ ವಿಚಾರ ಏನೇ ಇರಲಿ, ಅವರ ಆಡಳಿತದ ಛಾಪನ್ನು ಮಾತ್ರ ಅಳಿಸಲು ಸಾಧ್ಯವಿಲ್ಲ.
ಹಾಗೆ ನೋಡಿದರೆ ಗುಂಡೂರಾವ್ ಥರ ಆಳ್ತನ ಹೆಗಡೆಗೆ ಇರಲಿಲ್ಲ. ಆದರೂ ಅವರ ಕುಡಿನೋಟದಲ್ಲೇ ಒಂಥರಾ ಸೆಳೆತವಿತ್ತು. ಶಾರ್ಪ್ ಆದ ಕಣ್ಣೋಟದಲ್ಲೇ ಎಂಥದೋ ಆಕರ್ಷಣೆ ಇತ್ತು. ಆ ತುಟಿಯಂಚಿನ ಕಿರುನಗೆ, ರೊಮ್ಯಾಂಟಿಕ್ ನೋಟ..ಕುರುಚಲು ಗಡ್ಡ, ನಿಧಾನಗತಿಯಾದರೂ ಖಚಿತವಾದ ಮಾತು. ಒಂದು ವಿಷಯ ಮಾತನಾಡುವ ಹೊತ್ತಿಗೆ ಮನಸ್ಸಿನಲ್ಲಿ ಹತ್ತಾರು ವಿಚಾರ, ಹಲವಾರು ನೋಟಗಳು ಹಾದು ಹೋಗುವ ವೇಗ…ಅದೇ ಕಾರಣಕ್ಕೇ ಇರಬೇಕು ಒಮ್ಮೆ ಹೆಗಡೆಯವರ ಸೆಳೆತಕ್ಕೆ ಸಿಕ್ಕವರು ಮುಂದೆ ಸದಾ ಅವರ ಅಭಿಮಾನಿಯಾಗಿಬಿಡುತ್ತಿದ್ದರು. ಅಂಥ ಹೆಗಡೆ ಕೂಡ ಒಂದು ಹಳ್ಳಿ ಮೂಲೆಯಲ್ಲಿ ಹುಟ್ಟಿದ ಹುಡುಗನೇ. ಆದರೆ ಅವರು ರಾಜ್ಯದಲ್ಲಿ ಮಾತ್ರವಲ್ಲ, ರಾಷ್ಟ್ರಮಟ್ಟದಲ್ಲಿ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಮುತ್ಸದ್ಧಿ ಅಂತ ಗುರುತಿಸಿಕೊಂಡಿದ್ದು, ಗಮನ ಸೆಳೆಯುವ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದು, ಘಟಾನುಘಟಿಗಳನ್ನು ಹಿಂದೆ ಸರಿಸಿ ಮುಖ್ಯಮಂತ್ರಿಯಾಗಿ ಭಲೇ ಅನ್ನಿಸಿಕೊಂಡಿದ್ದು, ಆ ನಂತರ ಎದುರಾದ ರಾಜಕೀಯ ಸವಾಲುಗಳನ್ನು ಸಮರ್ಥವಾಗಿ ಎದುರಿಸಿದ್ದು ಇವೆಲ್ಲ ಅವರ ಸ್ವಸಾಮಥ್ರ್ಯ ಮತ್ತು ಬುದ್ಧಿವಂತಿಕೆಯಿಂದ ಮಾತ್ರ. ಯಾಕೆಂದರೆ ಅವರಲ್ಲಿನ ಅದಮ್ಯ ಆತ್ಮವಿಶ್ವಾಸ, ಆಗುಹೋಗುಗಳನ್ನು ಮುಂಚಿತವಾಗಿ ಗ್ರಹಿಸುವ ತೀಕ್ಷ್ಣಮತಿಯನ್ನು ಬಿಟ್ಟರೆ ಸಾಂಪ್ರದಾಯಿಕವಾಗಿ ರಾಜಕಾರಣಗಳಿಗಿರುವ ಬೇರಾವ ಹಿನ್ನೆಲೆ ಮುನ್ನೆಲೆಗಳೂ ಅವರಿಗಿರಲಿಲ್ಲ. ಆದರೂ ಒಬ್ಬ ರಾಜಕಾರಣಿಯಾಗಿ ಹೆಗಡೆಯನ್ನು ಈಗಲೂ ಜನರ ನೆನೆಯುವುದು ಅಂದು ಅವರು ನಡೆಸಿದ ಆಡಳಿತ ವೈಖರಿ, ಮೂಡಿಸಿದ ಹೊಸ ಸಂಚಲನ, ಆಡಳಿತಾತ್ಮಕವಾಗಿ ತೆಗೆದುಕೊಂಡ ಕೆಲ ಕ್ರಾಂತಿಕಾರಕ ಹೆಜ್ಜೆಗಳಿಂದಲೇ ಹೊರತು ಬೇರೆ ಯಾವುದರಿಂದಲೂ ಅಲ್ಲ. ನೋಡಿ ಹೆಗಡೆ ಸಮಕಾಲೀನ ಅದೆಷ್ಟು ಮಂದಿ ಮುಖ್ಯಮಂತ್ರಿಗಳಿದ್ದರು? ಅವರೆಲ್ಲ ಹೀಗೆ ನೆನಪಿನಲ್ಲಿ ಉಳಿದಿದ್ದಾರೆಯೇ? ಹಾಗಾದರೆ ಯಾಕೆ ಹೀಗೆ?

siddaramaiah-interview_052013023323

ದೆಹಲಿಯಲ್ಲಿ ಲೋಕಪಾಲ ಮಸೂದೆ ಕುರಿತು ಚರ್ಚೆ ನಡೆಯುತ್ತಿದ್ದರೆ ಕರ್ನಾಟಕದಲ್ಲಿ ಲೋಕಾಯುಕ್ತ ಸಂಸ್ಥೆ ಸಾಕಾರಗೊಂಡಿತು. ಗ್ರಾಮ ರಾಜ್ಯ, ರಾಮರಾಜ್ಯ, ಆಡಳಿತ ವಿಕೇಂದ್ರೀಕರಣ, ಗ್ರಾಮೀಣ ಜನರ ಕೈಗೆ ಅಧಿಕಾರ ಇತ್ಯಾದಿಗಳ ಕುರಿತು ಬೇರೆಯವರೆಲ್ಲ ಭಜನೆ ಮಾಡುತ್ತಿದ್ದರೇ ಕರ್ನಾಟಕದಲ್ಲಿ ಪಂಚಾಯತರಾಜ್ ವ್ಯವಸ್ಥೆ ಪರಿಣಾಮಕಾರಿಯಾಗಿ ಜಾರಿಗೆ ಬಂದಿತ್ತು. ಪಂಚಾಯತರಾಜ್ ಕಾಯ್ದೆಗೆ ತಿದ್ದುಪಡಿ ತಂದು ರಾಜಿವ್ ಗಾಂಧಿ ಒಳ್ಳೆ ಕೆಲಸ ಮಾಡಿದರು ನಿಜ, ಆದರೆ ಆಗ ಬಹುಪಾಲು ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರಗಳೇ ರಾಜೀವ್ ಆಶಯವನ್ನು ಅರ್ಥ ಮಾಡಿಕೊಂಡಿರಲಿಲ್ಲ!
ಬೇರೆ ಎಲ್ಲಾ ಬಿಟ್ಹಾಕಿ, ನಿಜವಾಗಿ ಕರ್ನಾಟಕದಲ್ಲಿ ಸರ್ಕಾರದಿಂದ ಅಭಿವೃದ್ಧಿ ಕೆಲಸಗಳೂ ಆಗ್ತಾವೆ ಅಂತ ಜನರಿಗೆ ಗೊತ್ತಾಗಿz್ದÉೀ ಹೆಗಡೆ ಸರ್ಕಾರದ ಕಾಲದಲ್ಲಿ. ಕುಗ್ರಾಮಗಳೂ ರಸ್ತೆ, ಕುಡಿಯುವ ನೀರು, ಕರೆಂಟು, ಶಾಲೆಗಳನ್ನೆಲ್ಲ ಕಂಡಿದ್ದು ಆವಾಗಲೇ. ವಿದ್ಯಾರ್ಥಿ ಬಸ್ ಪಾಸು, ಸ್ಕೂಲ್ ಯುನಿಫಾರ್ಮ್, ಪಡಿತರ ಅಕ್ಕಿ ಯೋಜನೆಗಳ ಕಮಾಲು ಕಡಿಮೆಯೇ? ವಿಧವಾ ವೇತನ, ವೃದ್ಧಾಪ್ಯ ವೇತನದಂಥ ಯೋಜನೆಗಳಿಂದ ಆದ ಸಹಾಯ ಕಡಿಮೆಯೇ? ಈಗಲೂ ಹಳ್ಳಿಗಳಲ್ಲಿ ನೀರು ಸಪ್ಲಾಯ್ ಮಾಡುವ ನೀರಿನ ತೊಟ್ಟಿ, ಬೋರ್‍ವೆಲ್‍ಗೆ ಹಾಕಿರುವ ಹ್ಯಾಂಡ್‍ಪಂಪ್‍ಗಳನ್ನು ಕಂಡಾಗ ನಮಗೆ ಬೇರೆಯವರು ನೆನಪಾಗಲು ಛಾನ್ಸೇ ಇಲ್ಲ. ಮೊದಲ ಬಾರಿ ಜಿಲ್ಲಾ ಪರಿಷತ್ತು ಅಸ್ತಿತ್ವಕ್ಕೆ ಬಂದಾಗ ಉಂಟಾದ ಸಂಚಲನವೇ ಬೇರೆ. ಹೆಗಡೆ ಭಾಷಣ ಕೇಳಲು ರಾಜ್ಯದುದ್ದಗಲಕ್ಕೂ ಜನರು ದಿನಗಟ್ಟಲೇ ಮೊದಲೇ ಟವೆಲ್ ಹಾಸಿ ಕುಳಿತುಕೊಳ್ಳುತ್ತಿದ್ದುದರಲ್ಲಿ ವಿಶೇಷವಿರಲಿಲ್ಲ, ಆದರೆ ಒಬ್ಬ ಜಿಲ್ಲಾ ಪರಿಷತ್ ಸದಸ್ಯನ ಭಾಷಣ ಕೇಳುವುದಕ್ಕೂ ಜನರು ಮುಗಿಬೀಳುತ್ತಿದ್ದರಲ್ಲ ಅದು ವಿಶೇಷ. ಅದಕ್ಕೆ ಹೆಗಡೆ ಸರ್ಕಾರದ ಜನಪ್ರಿಯತೆಯಲ್ಲದೆ ಬೇರೆ ಕಾರಣವಿಲ್ಲ. ಪ್ರತಿ ಸಲವೂ ನಮ್ಮ ಹಳ್ಳಿಗೆ ಒಂದು ಹೊಸ ಸವಲತ್ತು ಸಿಗುತ್ತದೆ ಅನ್ನುವ ಭರವಸೆ ಕಾರಣ.
ಜನಪರ ಕಾರ್ಯಕ್ರಮಗಳು ಮಾತ್ರವಲ್ಲ, ಒಬ್ಬ ನಿಜವಾದ ಜನನಾಯಕನಲ್ಲಿ ಇರಬೇಕಾದ ಇನ್ನೂ ಒಂದು ಮುಖ್ಯವಾದ ಕ್ವಾಲಿಟಿ ಹೆಗಡೆ ಅವರಲ್ಲಿತ್ತು. ಒಬ್ಬ ನಾಯಕ ಸಕ್ಸಸ್ ಆಗುವುದು ತಾನೊಬ್ಬ ಕೆಲಸ ಮಾಡುವುದರಿಂದಲ್ಲ, ತನ್ನ ಹಾಗೇ ಕೆಲಸ ಮಾಡುವವರ ಪಡೆ ಕಟ್ಟುವುದರಿಂದ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಹೆಗಡೆ ಅದನ್ನು ಹೇಳದೆಯೇ ಮಾಡಿ ತೋರಿಸಿದ್ದರು. ಕಾಂಗ್ರೆಸ್‍ನವರು ಮೂವತ್ತೈದು ವರ್ಷ ಕಾಲ ಅಭಿವೃದ್ಧಿಯ ಥಿಯರಿ ಹೇಳಿದ್ದರು. ಅದು ಪ್ರಾಕ್ಟಿಕಲ್ ಆಗಿ ಆಚರಣೆಗೆ ಬಂದದ್ದು ಹೆಗಡೆ ಸರ್ಕಾರದ ಕಾಲದಲ್ಲಿ. ಅಧಿಕಾರ ವಿಕೇಂದ್ರೀಕರಣ, ಯುವಕರ ಕೈಗೆ ಅಧಿಕಾರದ ಥಿಯರಿ ಹೇಳಿದ್ದು ಕಾಂಗ್ರೆಸ್ಸು, ಅದನ್ನು ಅಕ್ಷರಶಃ ಆಚರಣೆಗೆ ತಂದದ್ದು ಹೆಗಡೆ. ಸುಳ್ಳು ಅಂತೀರಾ? ಬಾಯಾರಿ ಬಸವಳಿದವರಿಗೆ ಬೋರ್‍ವೆಲ್ ನೀರು ಕೊಟ್ಟ ಕಾರಣಕ್ಕೆ ಪ್ರೀತಿಯಿಂದ `ನೀರ್ ಸಾಬ್’ ಅಂತಲೇ ಪ್ರೀತಿಯಿಂದ ಕರೆಸಿಕೊಂಡ ನಜೀರ್ ಸಾಬರಿಂದ ಹಿಡಿದು, ಈಗಲೂ ರಾಜಕಾರಣದಲ್ಲಿ ಚಾಲ್ತಿಯಲ್ಲಿರುವ ದೇಶಪಾಂಡೆ, ಸಿದ್ದರಾಮಯ್ಯನವರವರೆಗೆ ಯಾವ್ಯಾವುದೋ ಪಕ್ಷದಲ್ಲಿ ನೆಲೆ ಕಂಡುಕೊಂಡಿರುವ ಹತ್ತಾರು ನೇತಾಗಳಿಗೆ ಪ್ರೇರಣೆ ಯಾರು? ಹೆಗಡೆಯವರೇ ತಾನೆ? ತಾನು ಹುಟ್ಟಿ ಬೆಳೆದ ಸಮಾಜಕ್ಕೆ ಏನಾದರೂ ಮಾಡಲೇಬೇಕೆಂಬ ತುಡಿತದ ಕಿಡಿ ಹಚ್ಚಿ ರಾಜಕೀಯದಲ್ಲಿ ಯುವಪಡೆ ಕಟ್ಟಿದ್ದು ಹೆಗಡೆಯವರೇ ತಾನೆ? ಕಾಂಗ್ರೆಸ್‍ನಲ್ಲಿ ರಾಜಕೀಯ ಜನ್ಮ ಪಡೆದರೂ ನೆಹರು ಕಾಂಗ್ರೆಸ್ ಪಡಿಯಚ್ಚು `ಜೀ ಹುಜೂರ್’ ಸಂಸ್ಕøತಿಯನ್ನು ಅವರೆಂದಾದರೂ ಅಂಟಿಸಿಕೊಂಡಿದ್ದರೇ? ನೋ ಛಾನ್ಸ್!.
ಇಷ್ಟೆಲ್ಲಾ ಯಾಕೆ ಹೇಳಬೇಕಾಯಿತು ಅಂದರೆ… ಈಗ ರಾಜ್ಯದ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರ ಕುರುಚಲು ಗಡ್ಡದಿಂದ ಹಿಡಿದು ಅವರ ಹಾವಭಾವ, ಮಾತಿನ ಧಾಟಿಯವರೆಗೆ ಎಲ್ಲದರಲ್ಲೂ ಹೆಗಡೆಯವರ ಛಾಪನ್ನು ಬಹಳಷ್ಟು ಮಂದಿ ಕಾಣುತ್ತಿದ್ದಾರೆ ಅನ್ನುವುದಕ್ಕೆ. ಹಾಗಾದರೆ ಸಿದ್ದರಾಮಯ್ಯನವರ ಆಡಳಿತಕ್ಕೂ ಆ ಟಚ್ ಸಿಗುವುದು ಬೇಡವೇ? ಮೊದಲ ಬಾರಿ ಹೆಗಡೆ ಸರ್ಕಾರಕ್ಕೆ ಪೂರ್ಣ ಬಹುಮತ ಇರಲಿಲ್ಲ. ಆದರೆ ಅಲ್ಪಾವಧಿಯಲ್ಲೇ ಜನರಲ್ಲಿ ಹೊಸ ಭರವಸೆ ಮೂಡಿಸಿ, ಜನರ ನಾಡಿಮಿಡಿತದ ಮೇಲೆ ಹಿಡಿತ ಸಾಧಿಸಿ ಅಗ್ನಿಪರೀಕ್ಷೆ ಎದುರಿಸಿ ಸೈ ಎನಿಸಿಕೊಂಡರು. ಅಂಥz್ದÉೀ ನಿರೀಕ್ಷೆಯನ್ನು ಈಗ ಸಿದ್ದರಾಮಯ್ಯ ಸರ್ಕಾರದ ಮೇಲೂ ಜನರು ಇರಿಸಿಕೊಂಡಿದ್ದರು ಎಂದರೆ ಅತಿಶಯೋಕ್ತಿ ಆಗಲಾರದು. ಹಾಗಾದರೆ ಸಿದ್ದರಾಮಯ್ಯ ಸರ್ಕಾರದ ಕಳೆದ ಆರು ತಿಂಗಳ ಕಾರ್ಯಶೈಲಿಯಿಂದ ಅಂಥ ಭರವಸೆ ಮೂಡಿಸಲು ಸಾಧ್ಯವಾಗಿದೆಯೇ? ಅವಲೋಕನ ಮಾಡಿಕೊಳ್ಳಲೇಬೇಕು.
ಯೆಸ್, ಅಧಿಕಾರದ ಪ್ರಮಾಣ ಮಾಡಿದ ಮರುಕ್ಷಣದಲ್ಲಿ ಅನ್ನಭಾಗ್ಯ ಯೋಜನೆ ಘೋಷಣೆ ಮಾಡಿದ ದಿನ ಅಂತಹ ಒಂದು ಸಂಚಲನ ಉಂಟಾಗಿದ್ದು ನಿಜ. ಆದರೆ ಅದೇ `ಅನ್ನಭಾಗ್ಯ’ ಸರ್ಕಾರದ ಹೊಳಪನ್ನು ಹೆಚ್ಚಿಸಿದೆಯೇ? ಶಾಲಾ ಮಕ್ಕಳಿಗೆ ಅಹಿಂದ ಟೂರು ಯೋಜನೆ ಬೇಕಿತ್ತೇ? ಆ ನಡೆ ತಪ್ಪು ಎಂಬುದು ತಡವಾಗಿ ಸರ್ಕಾರಕ್ಕೆ ಅರ್ಥವಾಯಿತು. ಕಬ್ಬು ಬೆಳೆಗಾರರ ಕಷ್ಟಕ್ಕೆ ಸ್ಪಂದಿಸಿದ್ದು ತಡವಾಯಿತು ಅಂತ ಅವಘಡ ಸಂಭವಿಸಿದ ಮೇಲೆ ಅನ್ನಿಸಿದರೆ ಏನು ಪ್ರಯೋಜನ ಹೇಳಿ. ಪೂರ್ವಾಪರ ಯೋಚನೆ ಮಾಡದೆ ಸಿಇಟಿ ಕಾಯ್ದೆ ಜಾರಿ ಮಾಡಲು ಹೊರಟು ಹಿಂದಡಿ ಇಟ್ಟದ್ದರಿಂದ ಸರ್ಕಾರದ ಘನತೆ ಗೌರವ ಹೆಚ್ಚಬಹುದೇ? ಹೀಗೆಲ್ಲ ಮಾಡುವುದರಿಂದ ಅಂಬೇಡ್ಕರ್, ಜಗಜೀವನರಾಂ, ದೇವರಾಜ ಅರಸು ಇತಿಹಾಸದ ಮರುಸೃಷ್ಟಿ ಸಾಧ್ಯವಾಗತ್ತಾ ಹೇಳಿ?
ಈ ಹಿಂದೆ ಯಡಿಯೂರಪ್ಪನವರಿಗಿದ್ದ ರಾಜಕೀಯ ಜಂಜಾಟ, ಅನಿವಾರ್ಯತೆಗಳೆಲ್ಲ ಸಿದ್ದರಾಮಯ್ಯನವರಿಗೆ ಇಲ್ಲ, ಹೌದು ತಾನೆ? ಹಾಗಾದರೆ ಸಂಪುಟ ವಿಸ್ತರಣೆ ಮಾಡುವುದಕ್ಕೆ ಯಾತಕ್ಕೆ ಹಿಂದೇಟು ಹಾಕ್ತಿದ್ದೀರಿ? ಆಡಳಿತ ಸುಧಾರಣಾ ಆಯೋಗದ ಶಿಫಾರಸಿಗೆ ಅನುಸಾರ ಮೊದಲೇ ಸಂಪುಟದ ಗಾತ್ರ ಕಿರಿದಾಗಿದೆ. ಅದರಲ್ಲೂ ಐದು ಸ್ಥಾನಗಳನ್ನು ಭರ್ತಿ ಮಾಡದೇ ಇರುವುದು ನ್ಯಾಯವೇ? ಡಿಕೆಶಿ ಬೇಡ ಅಂದರೆ ಮತ್ತೊಬ್ಬರು. ತಮಗೆ ಬೇಕಾದವರನ್ನೇ ಆಯ್ಕೆ ಮಾಡಿಕೊಂಡು ಸಂಪುಟ ಸಂಕಟಕ್ಕೆ ಪೂರ್ಣವಿರಾಮ ಹಾಕಬಹುದಲ್ಲ? ವಿಧಾನಸೌಧದ ಮುಂದೆ `ಹೌಸ್‍ಫುಲ್’ ಅನ್ನೋ ಬೋರ್ಡ್ ನೇತು ಹಾಕಿಬಿಡಿ. ಒಂದು ತಲೆಬೇನೆ ಕಮ್ಮಿ ಆಗುತ್ತದೆ. ಹೋಗಲಿ ನಿಗಮ ಮಂಡಳಿಗಳಿಗಾದರೂ ನೇಮಕ ಮಾಡಬಹುದಲ್ಲವೇ? ಕಾಂಗ್ರೆಸ್ ಕಾರ್ಯಕರ್ತರು ಹತ್ತು ವರ್ಷ ವನವಾಸ ಅನುಭವಿಸಿದ್ದಾರೆ, ಅವರ ಕೈಗೊಂದಿಷ್ಟು ಕೆಲಸ ಕೊಡೋದು ಬೇಡವೇ? ಕನಿಷ್ಠಪಕ್ಷ ಅಕಾಡೆಮಿಗಳಿಗಾದರೂ ನೇಮಕ ಮಾಡಬಹುದಿತ್ತಲ್ಲವೇ? ತಲುಪಬೇಕಿರುವ ಗಮ್ಯ ಐವತ್ತು ಕಿಲೋಮೀಟರ್ ಮ್ಯಾರಥಾನ್, ಕೈಕಾಲುಗಳನ್ನೆಲ್ಲ ಕಟ್ಟಿಸಿಕೊಂಡು ಗುರಿ ತಲುಪಲು ಸಾಧ್ಯವೇ? ಗುರಿ ತಲುಪಲಾಗದಿದ್ದರೆ ಕಳಂಕ ಬರುವುದು ಕಾಂಗ್ರೆಸ್ ಪಕ್ಷಕ್ಕಿಂತ ಹೆಚ್ಚಾಗಿ ಸರ್ಕಾರದ ಸೂತ್ರ ಹಿಡಿದಿರುವ ಮುಖ್ಯಮಂತ್ರಿಗೇ ಅಲ್ಲವೇ…
ಬಾಕಿ ಎಲ್ಲ ಅತ್ಲಾಗಿರಲಿ, ಇನ್ನೂ ಆರು ತಿಂಗಳಾಗಿಲ್ಲ, ಬಿಜೆಪಿ ಸರ್ಕಾರ ಖಾಲಿ ಖಜಾನೆ ಬಿಟ್ಟು ಹೋಗಿರುವುದರಿಂದ ಮುಂದೆ ಏನು ಮಾಡುವುದು ಎಂಬುದೇ ತೋಚುತ್ತಿಲ್ಲ ಎಂದು ಅಲವತ್ತುಕೊಳ್ಳುತ್ತಿದ್ದೀರಿ. ಅಧಿಕಾರಕ್ಕೆ ಬಂದ ಮೊದಲ ದಿನವೇ ಆ ಬಗ್ಗೆ ಯೋಚನೆ ಮಾಡಬೇಕಿತ್ತಲ್ಲವೇ? ಬಜೆಟ್ ಕರಗಿಸುವ ಯೋಜನೆಗಳನ್ನೇ ಒಂದರ ಮೇಲೊಂದರಂತೆ ಘೋಷಣೆ ಮಾಡಿ ಕೊರತೆ ಬಜೆಟ್ ಬಗ್ಗೆ ಕರುಬುವುದು ಶೋಭೆ ತರುತ್ತದೆಯೇ? ನೀವು ಐದು ವರ್ಷದ ಹಿಂದೆ ಬೊಟ್ಟು ಮಾಡಿದರೆ ಅವರು ಐವತ್ತು ವರ್ಷಗಳ ಕಡೆ ಬೆರಳು ತೋರುವುದಿಲ್ಲವೇ? ಅವೆಲ್ಲ ಮುಗಿಯದ ಪ್ರಶ್ನೆಗಳು.
ಆಗಿದ್ದು ಆಯಿತು, ಮುಂದೆ ಬರುವುದು ಬಿರು ಬೇಸಿಗೆ. ಈಗಲೇ ಕರೆಂಟ್ ಕಿರಿಕಿರಿ ಶುರುವಾಗಿದೆ. ಬಿಜೆಪಿ ಸರ್ಕಾರದ ರೀತಿಯಲ್ಲಿ ಕರೆಂಟ್ ಖರೀದಿ ಮಾಡುವುದಿಲ್ಲ ಎಂದು ಹೇಳಿದ್ದೀರಿ, ಪರವಾಗಿಲ್ಲ, ಏನಾದರೂ ಮಾಡಿ ಕನಿಷ್ಠ ಹತ್ತು ತಾಸು ಕರೆಂಟ್ ಕೊಡಿ. ರಾಜ್ಯದಲ್ಲಿ ಕೈಗಾರಿಕಾ ಪ್ರಗತಿ ಕುಂಟುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಉದ್ಯೋಗ ಸೃಷ್ಟಿ ವೇಗ ಕಳೆದುಕೊಂಡಿದೆ ಎಂಬ ಅಭಿಪ್ರಾಯವಿದೆ. ಅತ್ತ ಕಡೆಯೂ ಸ್ವಲ್ಪ ನೋಡಬೇಕಲ್ಲವೇ? ಇನ್ನು ತೆರಿಗೆ ಸಂಗ್ರಹ ಸಮಾಧಾನ ತರುವಂತಿಲ್ಲ ಎಂದು ಈಗಾಗಲೇ ಘೋಷಿಸಿ ಆಗಿದೆ. ಕಳವಳಕಾರಿಯಲ್ಲವೇ? ಬೆಂಗಳೂರು ನಗರ ಮಾತ್ರವಲ್ಲ ರಾಜ್ಯದಲ್ಲಿ ಎಲ್ಲೇ ಹೋದರೂ ರಸ್ತೆಗಳಲ್ಲಿ ಮನುಷ್ಯರು ಓಡಾಡುವ ಹಾಗಿಲ್ಲ, ಹೊಸ ರಸ್ತೆ ಮಾಡಲಾಗದಿದ್ದರೆ ಪರವಾಗಿಲ್ಲ, ಹೊಂಡ ಮುಚ್ಚುವ ಕೆಲಸವಾದರೂ ತುರ್ತಾಗಿ ಆಗಬೇಕು. ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆ ಕುಡಿಯುವ ನೀರು, ಜಾನುವಾರು ಮೇವಿನ ಕೊರತೆ ಕಾಡತೊಡಗುತ್ತದೆ, ಅದಕ್ಕೇನಾಗಿದೆ ಸಿದ್ಧತೆ? ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು ಒಂದು ವರ್ಷ ಕಳೆದಿದೆ, ಚುನಾಯಿತ ಪ್ರತಿನಿಧಿಗಳ ಕೈಗೆ ಅಧಿಕಾರ ಬರೋ ಹಾಗೆ ಮಾಡಿದರೆ ನಿಮ್ಮ ಕೆಲಸ ತುಸು ಹಗುರಾಗಬಹುದು. ಹಾಗೆ ಮಾಡ್ತೀರಾ? ಇಷ್ಟೆಲ್ಲಾ ತಲೆಬಿಸಿಯನ್ನು ಕಟ್ಟಿಕೊಂಡು ಇನ್ಯಾವುದೋ ಅನಗತ್ಯ ವಿಷಯಗಳಿಗೆ ಯಾಕೆ ಕೈಹಾಕ್ತೀರಿ? ಇದನ್ನೇ ಮಾಧ್ಯಮಗಳು ಕೇಳ್ತಿರೋದು. ಅದು ತಪ್ಪಾ? ಯಾಕೆ ಚಡಪಡಿಕೆ, ಮಾಧ್ಯಮ ಟೀಕೆಗಳೆಲ್ಲಾ ರಾಜಕೀಯಪ್ರೇರಿತ ಅನ್ನುವ ಜಡ್ಜ್‍ಮೆಂಟ್ ಯಾತಕ್ಕೆ? ಈ ವಿಷಯದಲ್ಲೂ ಹೆಗಡೆ ಅವರೇ ರೋಲ್ ಮಾಡೆಲ್. ಅವರು ಮೀಡಿಯಾ ಟೀಕೆಯನ್ನು ಪ್ರೀತಿಸುತ್ತಿದ್ದರು, ಗೌರವಿಸುತ್ತಿದ್ದರು. ಎಷ್ಟೆಂದರೆ ಹೆಗಡೆ ಸರ್ಕಾರಕ್ಕೆ ಹೆಗಡೆಯವರೇ ಮಾಧ್ಯಮ ಸಲಹೆಗಾರ, ಪಿಆರ್‍ಓ, ಬ್ರಾಂಡ್ ಅಂಬಾಸಡರ್ ಎಲ್ಲವೂ ಆಗಿದ್ದರು. ಈಗೇಕೋ ಹಾಗೇ ಸುಮ್ಮನೆ ಹೆಗಡೆ ನೆನಪಾದರು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top