ಒಂದು ಖಡಕ್ ಸರ್ಕಾರದ ಪರಿಣಾಮ ಏನು ಅಂದರೆ…

ಕಾಶ್ಮೀರದ ವಿಚಾರವಾಗಿ ಏರ್ಪಟ್ಟ ಶಿಮ್ಲಾ ಒಪ್ಪಂದದ ನಂತರವೂ ದೆಹಲಿಯಲ್ಲಿ ಬಿಡಾರ ಹೂಡಿ ದೇಶದ ಸಾರ್ವಭೌಮತೆಗೇ ಸವಾಲಾಗಿದ್ದ ವಿಶ್ವಸಂಸ್ಥೆಯ ಸೇನಾ ವೀಕ್ಷಕರ ತಂಡದ ನೆಲೆಯನ್ನು ಖಾಲಿಮಾಡಿಸಲು ಕೂಡಿ ಬಂತು ನೋಡಿ ಮುಹೂರ್ತ..

india-pakistan

ಕಾಶ್ಮೀರದ ವಿಚಾರದಲ್ಲಿ ಇನ್ನು ಮಾತುಕತೆ ಆಡಿದ್ದು ಸಾಕು ಅಂತ ಕಡ್ಡಿಮುರಿದಂತೆ ಹೇಳಿದ ಮೋದಿ ಸರ್ಕಾರ ಮಾಡಬಾರದ ಅಪರಾಧ ಮಾಡಿಬಿಟ್ಟಿತಾ? ಆ ಕಡೆ ಸೇನೆಯ ಅಧಿಕಾರದ ಹಪಾಹಪಿ, ಹಫೀಜ್ ಸಯೀದ್‍ನಂತಹ ಉಗ್ರರು ಮತ್ತು ಇಮ್ರಾನ್ ಖಾನ್‍ನಂತಹ ಅಪಕ್ವ ನಾಯಕರು ಶುರುಮಾಡಿರುವ ಆಂತರಿಕ ದಂಗೆಯಿಂದ ಪಾಕಿಸ್ತಾನ ದಿಕ್ಕೋದಿವಾಳಿ ಹಂತ ತಲುಪಿದ್ದರೆ, ಇತ್ತ ಭಾರತದಲ್ಲಿ ಪಾಕಿಸ್ತಾನದೊಂದಿಗೆ ಮಾತುಕತೆ ಬಂದ್ ಮಾಡಿದ್ದು ಸರಿಯೋ ತಪ್ಪೇ ಎಂಬ, ಉದ್ಯೋಗ ಇಲ್ಲದವರು ಮಾಡುವ ಚರ್ಚೆ ತೆರಪಿಲ್ಲದೇ ನಡೆಯತೊಡಗಿದೆ. ಏನು ಹೇಳುವುದು ಇವರ ಬುದ್ಧಿಗೆ!

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಆಗಸ್ಟ್ 25ರಂದು ದೆಹಲಿಯಲ್ಲಿ ಭಾರತ-ಪಾಕಿಸ್ತಾನಗಳ ನಡುವೆ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆ ಎಂಬ ಮತ್ತೊಂದು ಪ್ರಹಸನ ನಡೆದುಹೋಗಬೇಕಿತ್ತು. ಹಾಗಾಗಲಿಲ್ಲ. ಮಾತುಕತೆ ನಡೆದಿದ್ದರೆ ಏನು ಕಡಿದು ಕಟ್ಟೆ ಹಾಕುತ್ತಿದ್ದರು ಅಂತ ಕೇಳಿದರೆ ಯಾರಲ್ಲೂ ಉತ್ತರವಿಲ್ಲ. ಆ ವಿಚಾರ ಬೇರೆ. ಆದರೂ ಮಾತುಕತೆ ನಿಲ್ಲಿಸಿದ್ದು ಸರಿಯಲ್ಲ ಅಂತ ಹೇಳುವವರಿಗೇನೂ ಕಡಿಮೆಯಿಲ್ಲ. ಮಾತುಕತೆಭಂಗಕ್ಕೆ ಕಾರಣ ಯಾರು? ಭಾರತವೋ, ಪಾಕಿಸ್ತಾನವೋ? ಎಲ್ಲದಕ್ಕೂ ಪಾಕಿಸ್ತಾನದ ಉಡಾಫೆತನ, ಅವಿವೇಕದ ನಡವಳಿಕೆಯೇ ಕಾರಣವಲ್ಲವೇ? ಊಹೂಂ! ಅದನ್ನು ಯಾರೂ ಒಪ್ಪಿಕೊಳ್ಳುವುದಿಲ್ಲ. ಭಾರತದ ಸ್ವಘೋಷಿತ ರಾಜತಾಂತ್ರಿಕ ಪರಿಣತರಿಂದ ಹಿಡಿದು ಮಣಿಶಂಕರ್ ಅಯ್ಯರ್ ಅವರಂತಹ ಸವಕಳಿ ನಾಯಕರವರೆಗೆ ಯಾರೊಬ್ಬರೂ ವಾಸ್ತವ ಅರಿತು ಮಾತನಾಡಲು ಬಿಲ್‍ಕುಲ್ ತಯಾರಿಲ್ಲ.

ಪಾಕಿಸ್ತಾನದ ವಕ್ರಬುದ್ಧಿ ಎಂಥದ್ದು ನೋಡಿ. ಹೊಸ ಸರ್ಕಾರದ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ದೆಹಲಿಗೆ ಬಂದಿದ್ದ ಅಲ್ಲಿನ ಪ್ರಧಾನಿ ನವಾಜ್ ಷರೀಫ್ ಪ್ರಧಾನಿ ಮೋದಿಯನ್ನು ಭೇಟಿ ಮಾಡಿ ಕಾಶ್ಮೀರದ ವಿಚಾರವಾಗಿ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆಗೆ ಮರುಚಾಲನೆ ಕೊಡೋಣ ಅಂತ ತಿದಿಯೊತ್ತಿದ್ದರು. ಮಾತುಕತೆ ಪ್ರಸ್ತಾಪಕ್ಕೆ ಒಲ್ಲದ ಮನಸ್ಸಿಂದಲೇ ತಲೆ ಅಲ್ಲಾಡಿಸಿದ್ದರು ಮೋದಿ. ಆದರೆ ಪಾಕಿಸ್ತಾನಕ್ಕೆ ಮತ್ತದೇ ಹಳೇ ಜಡ್ಡು. ಮಾತುಕತೆಗೆ ಮುಹೂರ್ತ ನಿಗದಿ ಆಗುತ್ತಿದ್ದಂತೆ ಪಾಕಿಸ್ತಾನದ ಹೈಕಮಿಷನರ್ ಅಬ್ದುಲ್ ಬಸಿತ್ ಉಪದ್ವಾೃಪ ಮಾಡಿಬಿಟ್ಟರು. `ದೆಹಲಿಗೆ ಬನ್ನಿ, ಭಾರತದ ವಿದೇಶಾಂಗ ಕಾರ್ಯದರ್ಶಿ ಜತೆ ಮಾತುಕತೆ ಆಡುವ ಮುನ್ನ ನಾವೂ ನೀವೂ ಕುಳಿತು ಸಮಾಲೋಚನೆ ಮಾಡೋಣ’ ಅಂತ ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೆ ಆಹ್ವಾನ ನೀಡಿಬಿಟ್ಟರು. ಹಾಗಾದರೆ ಭಾರತದ ಸಾರ್ವಭೌಮತೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲವೇ? ಬೇಕಾದವರು ಬೇಕಾದ್ದನ್ನು ಮಾಡಿಹೋಗಲು ಇದೇನು ಪಾಕಿಸ್ತಾನ ಅಂದುಕೊಂಡರೇ ಅಬ್ದುಲ್ ಬಸಿತ್? ಅಷ್ಟಕ್ಕೂ ಹುರಿಯತ್ ನಾಯಕರು ಯಾರು? ದ್ವಿಪಕ್ಷೀಯ ಮಾತುಕತೆಯಲ್ಲಿ ಅಧಿಕೃತ ಹಕ್ಕು ಮಂಡಿಸಲು ಇವರೇನು ಕಾಶ್ಮೀರದ ಜನನಾಯಕರೇ? ಇವರಿಗೆ ಜನಾದೇಶ ಇದೆಯೇ? ಎಂದಾದರೂ ಇವರು ಕಾಶ್ಮೀರದ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆಯೇ? ಹುರಿಯತ್ ಸಂಘಟನೆಗೆ ರಾಜಕೀಯ ಅಥವಾ ಸಾಮಾಜಿಕ ಮಾನ್ಯತೆಯಾದರೂ ಇದೆಯೇ? ಈ ಪ್ರಶ್ನೆಗಳನ್ನು ಇದುವರೆಗೂ ಭಾರತದ ಯಾವುದೇ ಸರ್ಕಾರ ಕೇಳಿದ ಉದಾಹರಣೆಯಿಲ್ಲ. ಹುರಿಯತ್ ನಾಯಕರಿಗೆ ತಮ್ಮ ಜಾಗ ಎಲ್ಲಿ ಎಂದು ತೋರಿಸಲು ಈ ಮೇಲಿನ ನಾಲ್ಕಾರು ಪ್ರಶ್ನೆಗಳೇ ಸಾಕಿತ್ತು. ಮೋದಿ ಸರ್ಕಾರ ಈಗ ಮಾಡಿದ್ದು ಅದೇ ಕೆಲಸ. ನಲ್ವತ್ತು ಐವತ್ತು ವರ್ಷಗಳಿಂದ ಭಾರತದ ಏಕತೆ ಮತ್ತು ಸಾರ್ವಭೌಮತೆಗೆ ಸತತ ಸವಾಲು ಹಾಕುತ್ತ ಬಂದಿರುವ ಪ್ರತ್ಯೇಕತಾವಾದಿಗಳೊಂದಿಗೆ ಮಾತನಾಡುವುದಾದರೆ ಭಾರತ ಸರ್ಕಾರದೊಂದಿಗೆ ಮಾತನಾಡುವ ಜರೂರತ್ತಿಲ್ಲ ಅಂತ ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್, ಅಬ್ದುಲ್ ಬಸಿತ್‍ಗೆ ತಿಳಿಸಿ ಫೆÇೀನ್ ಕೆಳಗಿಟ್ಟರು. ಮಾತುಕತೆಯ ನಾಟಕಕ್ಕೆ ಆಸ್ಪದವೇ ಆಗಲಿಲ್ಲ. ಭಾರತದ ಈ ನಿಲುವು ತಪ್ಪು ಅಂತ ಹೇಳುವುದು ಹೇಗೆ?

2005ರ ಜನವರಿ ತಿಂಗಳು. ಪಾಕಿಸ್ತಾನದ ಆಗಿನ ಪ್ರಧಾನಿ ಶೌಕತ್ ಅಜೀಜ್ ಮತ್ತು ಭಾರತದ ಪ್ರಧಾನಿ ಮನಮೋಹನ್ ಸಿಂಗ್ ನಡುವೆ ಕಾಶ್ಮೀರದ ಕುರಿತು ಮಾತುಕತೆ ಏರ್ಪಾಟಾಗಿತ್ತು. ಆಗ ಮಾತುಕತೆ ನಿಶ್ಚಯಿಸಿದ್ದು ಪಾಕಿಸ್ತಾನದ ಸರ್ವಾಧಿಕಾರಿಯಾಗಿದ್ದ ಪರ್ವೇಜ್ ಮುಷರಫ್. ಆಗಲೂ ಇಂಥದ್ದೇ ಸಂದಿಗ್ಧ. ಪ್ರಧಾನಿ ಸಿಂಗ್ ಜತೆ ಮಾತುಕತೆ ನಡೆಸುವ ಪೂರ್ವದಲ್ಲಿ ಹುರಿಯತ್ ನಾಯಕರೊಂದಿಗೆ ಮಾತುಕತೆಗೆ ಪಾಕಿಸ್ತಾನ ವೇಳಾಪಟ್ಟಿ ಸಿದ್ಧಪಡಿಸಿತು. ಪಾಕಿಸ್ತಾನ ಆ ಬಗ್ಗೆ ಸೌಜನ್ಯಕ್ಕೂ ಭಾರತ ಸರ್ಕಾರದೊಂದಿಗೆ ಸಮಾಲೋಚಿಸಿರಲಿಲ್ಲ. ಶೌಕತ್ ಅಜೀಜ್ ದೆಹಲಿ ತಲುಪುವ ಹೊತ್ತಿಗೆ ಹುರಿಯತ್ ನಾಯಕರು ಕಾದು ಕುಳಿತಿದ್ದರು. ಪ್ರಧಾನಿ ಸಿಂಗ್‍ಗೆ ಪೀಕಲಾಟ ಶುರುವಾಯಿತು.

ಪಾಕಿಸ್ತಾನವು ಭಾರತ ಸರ್ಕಾರದೊಂದಿಗೆ ಮಾತುಕತೆ ನಡೆಸುವ ಪೂರ್ವದಲ್ಲಿ ಹುರಿಯತ್ ನಾಯಕರೊಂದಿಗೆ ಮಾತುಕತೆ ನಡೆಸಕೂಡದು. ಹಾಗೆಮಾಡಿದರೆ ಅದು ಕೇವಲ ಪ್ರಧಾನಮಂತ್ರಿಗಲ್ಲ, ಇಡೀ ಭಾರತಕ್ಕೆ ಅಪಮಾನ ಮಾಡಿದಂತೆ. ದಯವಿಟ್ಟು ಅದಕ್ಕೆ ಅವಕಾಶ ಕೊಡಬೇಡಿ” ಎಂದು ಪ್ರಧಾನಿ ಸಿಂಗ್ ತಮ್ಮ ಅಧಿಕೃತ ಸಂಧಾನಕಾರರ ಮೂಲಕ ಪಾಕಿಸ್ತಾನ ಹಾಗೂ ಹುರಿಯತ್ ನಾಯಕರಾದ ಮೀರ್‍ವಾಜ್ ಉಮರ್ ಫರೂಖ್, ಬಿಲಾಲ್ ಲೋನ್ ಮತ್ತಿತರರಿಗೆ ಪರಿಪರಿಯಾಗಿ ಬೇಡಿಕೊಂಡರು. ಭಾರತದ ಪ್ರಧಾನಿಯ ತಳಮಳವನ್ನು ಆಲಿಸಲು ಹುರಿಯತ್ ನಾಯಕರಾಗಲಿ, ಪಾಕಿಸ್ತಾನದ ಆಡಳಿತಗಾರರಾಗಲಿ ಬಿಲ್‍ಕುಲ್ ತಯಾರಾಗಲಿಲ್ಲ. ಪೂರ್ವನಿಗದಿಯಂತೆ ಶೌಕತ್ ಅಜೀಜ್ ಮೊದಲು ಹುರಿಯತ್ ನಾಯಕರೊಂದಿಗೆ ಮಾತುಕತೆ ನಡೆಸಿದರು. ನಂತರ ಪ್ರಧಾನಿ ಸಿಂಗ್ ಜತೆಗೆ ಮಾತುಕತೆಗೆ ಕುಳಿತರು. ವಿಧಿಯಿರಲಿಲ್ಲ, ಮನಮೋಹನ್ ಸಿಂಗ್ ಹ್ಯಾಪುಮೋರೆ ಹಾಕಿಕೊಂಡು ಶೌಕತ್ ಅಜೀಜ್‍ರನ್ನು ಎದುರುಗೊಂಡರು. ಪಾಕಿಸ್ತಾನದೊಂದಿಗಿನ ಮಾತುಕತೆ ನಾಟಕ ಅದೇ ಮೊದಲೂ ಅಲ್ಲ, ಕೊನೆಯದೂ ಅಲ್ಲ. ಕಳೆದ ಹತ್ತು ವರ್ಷಗಳಲ್ಲೇ ಮೂವತ್ತು ಬಾರಿ ವಿವಿಧ ಹಂತಗಳಲ್ಲಿ ಮಾತುಕತೆ ನಡೆದಿದೆ. ದೆಹಲಿ, ದುಬೈ, ಕಠ್ಮಂಡು, ಕೊಲಂಬೋ, ಬ್ಯಾಂಕಾಕ್, ಲಾಹೋರ್ ಮತ್ತೊಂದು ಮಗದೊಂದು ಸೇರಿ ಲೆಕ್ಕ ಹಾಕಿದರೆ ಇನ್ನೂರಾ ಐವತ್ತು ಗಂಟೆಗೂ ಹೆಚ್ಚು ಕಾಲ ಭಾರತ-ಪಾಕ್ ನಾಯಕರು ಕುರ್ಚಿ ಬಿಸಿಮಾಡಿದ್ದಾರೆ. ಹೋಗಲಿ ಮಾತುಕತೆ ಪರಿಣಾಮ ಏನು? ಏನೂ ಇಲ್ಲ. ಹಾಗಿದ್ದರೆ ಮೋದಿ ಸರ್ಕಾರವೂ ಇದೇ ಹಾದಿಯನ್ನು ತುಳಿಯಬೇಕಿತ್ತೇ?

ಮಾತುಕತೆ ನಿಲ್ಲಿಸಿದ್ದು ಮಾತ್ರವಲ್ಲ, ಮೋದಿ ಸರ್ಕಾರ ಎಂಥ ಷಾಕ್ ಟ್ರೀಟ್‍ಮೆಂಟ್ ಕೊಟ್ಟಿತ್ತು ಗೊತ್ತೇ? ಅತ್ತ ಪಾಕಿಸ್ತಾನ ಹುರಿಯತ್ ನಾಯಕರೊಂದಿಗಿನ ಮಾತುಕತೆಯ ನಾಟಕಕ್ಕೆ ಬಣ್ಣ ಹಚ್ಚಿಕೊಂಡು ಅಣಿಯಾಗುತ್ತಿದ್ದರೆ, ಇತ್ತ ಜುಲೈ 9ರಂದೇ ಭಾರತ ಸರ್ಕಾರ, ಕಾಶ್ಮೀರದ ವಿಚಾರದಲ್ಲಿ ತನ್ನ ನಿಲುವು ಏನೆಂಬುದನ್ನು ತಿಳಿಸಿ, ಅರವತ್ತು ವರ್ಷಗಳಿಂದ ತೊಳಸಾಟ ನಡೆಸುತ್ತಿದ್ದ ವಿಶ್ವಸಂಸ್ಥೆ ಮತ್ತು ಪಾಕಿಸ್ತಾನ ಸರ್ಕಾರ ಎರಡಕ್ಕೂ ಸರಿಯಾದ ತಪರಾಕಿ ಕೊಟ್ಟಿತ್ತು. ದೆಹಲಿಯ ಪುರಾನಾ ಕಿಲ್ಲಾ ರಸ್ತೆಯ 14-ಬಿ ಬಂಗಲೆಯಲ್ಲಿ ಆರು ದಶಕಗಳಿಂದ ಬಿಡಾರ ಹೂಡಿದ್ದ ವಿಶ್ವಸಂಸ್ಥೆಯ ಸೇನಾ ವೀಕ್ಷರರ ತಂಡ (United Nations Military Observer Group in India and Pakistan-UNMOGIP) ಕ್ಕೆ ತಕ್ಷಣ ಗಂಟುಮೂಟೆ ಕಟ್ಟಿ ಜಾಗ ಖಾಲಿಮಾಡಿ ಎಂದು ಸರ್ಕಾರ ನೋಟಿಸ್ ನೀಡಿತ್ತು. ವಿಚಿತ್ರ ಅಂದರೆ ಆ ತಂಡದಲ್ಲಿ ಪಾಕಿಸ್ತಾನದ ಪ್ರತಿನಿಧಿ ಇರಲೇಇಲ್ಲ. ಸೇನಾ ವೀಕ್ಷಕರ ತಂಡದ ಮುಖ್ಯಸ್ಥ ಘಾನಾ ಮೂಲದ ಮೇಜರ್ ಜನರಲ್ ದೆಲಾಲಿ ಜಾನ್ಸನ್ ಸಕ್ಕಿ ಭಾರತ ಸರ್ಕಾರದ ನೋಟಿಸ್ ಕಂಡು ಬೆವರು ಒರೆಸಿಕೊಳ್ಳುವುದನ್ನು ಬಿಟ್ಟು ಅನ್ಯಮಾರ್ಗವೇ ಇರಲಿಲ್ಲ.

1949ರಲ್ಲಿ ನಡೆದ ಮೊದಲ ಕಾಶ್ಮೀರ ಯುದ್ಧದ ಮಾರನೇ ದಿನವೇ ವಿಶ್ವಸಂಸ್ಥೆ ತನ್ನ ಈ ಮಿಲಿಟರಿ ವೀಕ್ಷಕರ ತಂಡವನ್ನು ದೆಹಲಿಯಲ್ಲಿ ನಿಯೋಜಿಸಿತ್ತು. ಅಂದು ವಿಶ್ವಸಂಸ್ಥೆ ನಿರ್ದೇಶಿತ ಕದನ ವಿರಾಮವನ್ನು ಭಾರತ ಮತ್ತು ಪಾಕಿಸ್ತಾನಗಳು ಉಲ್ಲಂಘಿಸಿಲ್ಲ ಎಂಬುದನ್ನು ಖಾತರಿಪಡಿಸಿಕೊಳ್ಳುವುದು ಈ ತಂಡದ ಕೆಲಸ. ವಾಸ್ತವದಲ್ಲಿ ಶಿಮ್ಲಾ ಒಪ್ಪಂದದ ನಂತರದಲ್ಲಾದರೂ ವಿಶ್ವಸಂಸ್ಥೆಯ ತಂಡಕ್ಕೆ ಒಂದು ಕ್ಷಣವೂ ಭಾರತದಲ್ಲಿ ಉಳಿಯಗೊಡಬಾರದಿತ್ತು. ಹಾಗೆ ಮಾಡುವ ಬದಲು ಅಂದಿನಿಂದ ಇಂದಿನವರೆಗಿನ ಎಲ್ಲ ಸರ್ಕಾರಗಳೂ ವಿಶ್ವಸಂಸ್ಥೆಯ ಮಿಲಿಟರಿ ವೀಕ್ಷಕರಿಗೆ ಕಚೇರಿ, ಸಂಬಳ ಸಾರಿಗೆ ಸೇರಿ ಸಕಲ ಸವಲತ್ತುಗಳನ್ನೂ ಒದಗಿಸಿ ಹೊಟ್ಟೆ ಹೊರೆಯುತ್ತಲೇ ಬಂದವು. ಕೇಂದ್ರದ ಹೊಸ ಸರ್ಕಾರ ಮಾತ್ರ ಈ ಅನಿಷ್ಟವನ್ನು ಹೊರಗಟ್ಟಲು ತೀರ್ಮಾನಿಸಿಬಿಟ್ಟಿತ್ತು. ಹಾಗಾದರೆ ಭಾರತದ ಆತ್ಮಗೌರವ ಕಾಪಾಡಿಕೊಳ್ಳಲು ಇಷ್ಟು ವರ್ಷ ಬೇಕಾಯಿತೇ? ಕಾಶ್ಮೀರದ ವಿಷಯದಲ್ಲಿ ಹೊಸ ಸರ್ಕಾರದ ಮುಂದಿನ ನಡೆ ಏನೆಂಬುದನ್ನು ಅರಿಯಲು ಇದೊಂದೇ ನಿದರ್ಶನ ಸಾಕು ಅಂತ ತೋರುತ್ತದೆ.

ನಿಜ ಹೇಳಬೇಕೆಂದರೆ ಜಮ್ಮು-ಕಾಶ್ಮೀರದಲ್ಲಿ ಹುರಿಯತ್ ನಾಯಕರಿಗೆ ಈಗ ನಯಾಪೈಸೆ ಕಿಮ್ಮತ್ತಿಲ್ಲ. ಜನಬೆಂಬಲ ಕಳೆದುಕೊಂಡಿರುವ ಅವರು ಐಎಸ್‍ಐ-ಪ್ರೇರಿತ ಉಗ್ರರಿಂದ ಜೀವ ಬಚಾವು ಮಾಡಿಕೊಳ್ಳಲು ಪರದಾಡುತ್ತಿದ್ದಾರೆ. ಅರವತ್ತು ವರ್ಷಗಳಲ್ಲಿ ಪಾಕಿಸ್ತಾನದ ಅವಸ್ಥೆ, ದಟ್ಟ ದಾರಿದ್ರೃವನ್ನು ಕಣ್ಣಾರೆ ಕಂಡಿರುವ ಕಾಶ್ಮೀರಿಗಳು ಅತ್ತ ಕಡೆ ವಾಲುವ ಆಸೆ ಕೈ ಬಿಟ್ಟು, ಭಾರತದೊಂದಿಗೆ ಬಾಂಧವ್ಯ ಗಟ್ಟಿಮಾಡಿಕೊಳ್ಳಲು ಮನಸ್ಸು ಮಾಡಿದ್ದಾರೆ. ಈ ಕಾರಣದಿಂದ ಹುರಿಯತ್ ನಾಯಕರು ಕಾಶ್ಮೀರ ಕಣಿವೆಯಲ್ಲಿ ಸಂಪೂರ್ಣವಾಗಿ ಜನಬೆಂಬಲ ಕಳೆದುಕೊಳ್ಳುತ್ತಿರುವುದು ಪಾಕಿಸ್ತಾನದ ಐಎಸ್‍ಐ ಸೂತ್ರಧಾರರನ್ನೂ ಚಿಂತೆಗೀಡುಮಾಡಿದೆ. ಇದೆಲ್ಲದರ ಒಟ್ಟು ಪರಿಣಾಮದಿಂದಾಗಿ ಈಗ ಅಂತಿಮವಾಗಿ ಬಂದೂಕಿನ ನಳಿಕೆ ಹಿಡಿದು ಹುರಿಯತ್ ನಾಯಕರನ್ನು ಆಡಿಸುವ ಕೆಲಸಕ್ಕೆ ಐಎಸ್‍ಐ ಮುಂದಾಗಿದೆ. ಹೀಗಾಗಿ ಬಿಬಿಸಿ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಕಾಶ್ಮೀರ ಸಮಸ್ಯೆಗೆ ಶಾಂತಿಯ ಪರಿಹಾರ ಸೂತ್ರ ಮಂಡಿಸಿದ ಮೀರ್‍ವಾಜ್ ಉಮರ್ ಫರೂಕ್‍ನ ತಂದೆ ಮೌಲ್ವಿ ಫರೂಕ್, ಆತನ ಚಿಕ್ಕಪ್ಪ ಮೌಲ್ವಿ ಮುಷ್ತಾಕ್ ಅಹಮದ್ ಹಾಗೂ ಮತ್ತೊಬ್ಬ ಹುರಿಯತ್ ನಾಯಕ ಅಬ್ದುಲ್ ಗನಿ ಲೋನ್‍ರನ್ನು ಹತಾಶ ಐಎಸ್‍ಐ ಉಗ್ರರು ಗುಂಡಿಟ್ಟು ಕೊಂದುಹಾಕಿದ್ದಾರೆ. ಅಂಥದ್ದರಲ್ಲಿ ಅಸ್ತಿತ್ವವೇ ಇಲ್ಲದ ಹುರಿಯತ್ ನಾಯಕರನ್ನು ಪಾಕಿಸ್ತಾನ ತನ್ನ ದಾಳ ಮಾಡಿಕೊಳ್ಳುವುದನ್ನು ನೋಡಿಕೊಂಡು ಭಾರತ ಸರ್ಕಾರ ಸುಮ್ಮನೇ ಕೂರಬೇಕಿತ್ತೇ?

ಕಾಶ್ಮೀರದಲ್ಲಿ ಉಗ್ರರ ದಮನಕ್ಕೆ ಭಾರತ ಸರ್ಕಾರ ಸೇನೆಗೆ ಸಂಪೂರ್ಣ ಸ್ವಾತಂತ್ರೃ ನೀಡಿದೆ. ಅದರ ಪರಿಣಾಮ ಕಳೆದ ಒಂದೂವರೆ ತಿಂಗಳಲ್ಲಿ ಮೂವತ್ತಕ್ಕೂ ಹೆಚ್ಚು ಹಿಜಬುಲ್ ಉಗ್ರರರನ್ನು ನಮ್ಮ ಸೇನೆ ಹೆಣಹಾಕಿದೆ. ಗಡಿಯುದ್ದಕ್ಕೂ ಪಾಕಿಸ್ತಾನ ತೋಡಿಕೊಂಡಿರುವ ಕಳ್ಳ ಸುರಂಗಮಾರ್ಗಗಳನ್ನು ಪತ್ತೆ ಮಾಡಿ ಬಂದೋಬಸ್ತ್ ಮಾಡಲಾಗುತ್ತಿದೆ. ಬಹುಶಃ ಕಾಶ್ಮೀರದಲ್ಲಿ ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬರಲು ಇನ್ನೂ ನಾಲ್ಕು ತಿಂಗಳು ಬೇಕು. ಅಷ್ಟರ ಒಳಗಾಗಿ ಜಮ್ಮು-ಕಾಶ್ಮೀರ ಚುನಾವಣೆ ನಡೆಯುವುದಿದೆ. ಕಳೆದ ಲೋಕಸಭಾ ಚುನಾವಣೆ ಫಲಿತಾಂಶ ಮತ್ತು ಇತ್ತೀಚಿನ ದಿನಗಳಲ್ಲಿ ಕಾಶ್ಮೀರಿ ಜನರಲ್ಲಿ ಬಲಗೊಳ್ಳುತ್ತಿರುವ ಆತ್ಮವಿಶ್ವಾಸ ನೋಡಿದರೆ ಐವತ್ತು ವರ್ಷಗಳ ನಂತರ, ಮೊದಲ ಬಾರಿಗೆ ಭಾರತದೊಂದಿಗೆ ಟೊಂಕಕಟ್ಟಿ ನಿಲ್ಲಬಲ್ಲ ಬಲಿಷ್ಠ ಸರ್ಕಾರ ಕಾಶ್ಮೀರದಲ್ಲಿ ಅಸ್ತಿತ್ವಕ್ಕೆ ಬರುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ.

ಎಲ್ಲಕ್ಕಿಂತ ಮುಖ್ಯವಾಗಿ ಈ ತಿಂಗಳ ಕೊನೆಯಲ್ಲಿ ಪ್ರಧಾನಿ ಮೋದಿ ಕೈಗೊಳ್ಳಲಿರುವ ಅಮೆರಿಕ ಪ್ರವಾಸ ಕಾಶ್ಮೀರದ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯುವ ಸಾಧ್ಯತೆಯನ್ನು ನಿರೀಕ್ಷಿಸಲಾಗುತ್ತಿದೆ. ಈ ಹಿಂದೆ ಇರಾಕ್ ವಿರುದ್ಧ ಯುದ್ಧ ಸಾರಿದ್ದ ಇರಾನ್ ಮೇಲೆ ಹತ್ತು ವರ್ಷ ಎಲ್ಲ ರೀತಿಯ ನಿರ್ಬಂಧ ಹೇರಿದ ಮಾದರಿಯಲ್ಲಿ, ಜಾಗತಿಕ ಭಯೋತ್ಪಾದನೆಗೆ ನೇರ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದೊಂದಿಗೆ ಸಂಬಂಧ ಕಡಿದುಕೊಳ್ಳುವಂತೆ ಮೋದಿ ಅಮೆರಿಕಕ್ಕೆ ತಾಕೀತು ಮಾಡಬಹುದೆಂದು ಪರಿಣತರು ಹೇಳುತ್ತಿದ್ದಾರೆ. ಭಾರತದ ಮಾರುಕಟ್ಟೆ ಬೇಕೋ ಅಥವಾ ಪಾಕಿಸ್ತಾನದ ದೋಸ್ತಿ ಬೇಕೋ ಎಂಬುದನ್ನು ನಿರ್ಧರಿಸಿ ಅಂತ ಅಮೆರಿಕಕ್ಕೆ ಭಾರತ ಖಡಾಖಂಡಿತವಾಗಿ ಹೇಳುವ ಸಾಧ್ಯತೆಯಿದೆ. ಭಾರತ ಈಗ ಮಾತುಕತೆ ನಿಲ್ಲಿಸಿರುವಂತೆ ಮುಂದೆ ಪಾಕಿಸ್ತಾನದೊಂದಿಗಿನ ಎಲ್ಲ ವ್ಯಾಪಾರ ವಹಿವಾಟುಗಳಿಗೂ ಬಹಿಷ್ಕಾರ ಹಾಕುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಅದೇ ರೀತಿ ಚೀನಾ ಸರ್ಕಾರವೂ ಪಾಕಿಸ್ತಾನದ ಸಹವಾಸ ಬಿಟ್ಟು ಭಾರತದ ಕಡೆ ವಾಲಿದರೆ ಭಯೋತ್ಪಾದನೆಗೆ ಕುಮ್ಮಕ್ಕು ಕೊಡುವ ಪಾಕಿಸ್ತಾನವನ್ನು ಯುದ್ಧ ಮಾಡದೆಯೇ ಹೆಡೆಮುರಿ ಕಟ್ಟಲು ಸಾಧ್ಯವಾದೀತು. ಒಟ್ಟಾರೆ ಪರಿಸ್ಥಿತಿಯನ್ನು ಅವಲೋಕಿಸಿದರೆ, ಜಮ್ಮು-ಕಾಶ್ಮೀರದ ಇತಿಹಾಸದಲ್ಲಿ ಹೊಸ ಶಕೆ ಆರಂಭವಾಗಲು ಬಹಳ ಕಾಲ ಹಿಡಿಯಲಿಕ್ಕಿಲ್ಲ ಎಂಬುದು ಈಗಿನ ಅಂದಾಜು. ಮುಂದೇನಾಗಲಿದೆ ಎಂಬುದನ್ನು ಕಾದು ನೋಡೋಣವಲ್ಲವೇ. ಯಾತಕ್ಕೆ ಆತುರ?

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top