ಹಸಿರು ಕಾಣದ ಉತ್ತರ ಕರ್ನಾಟಕ – ವಿಶೇಷ ಅಭಿಯಾನ ನಡೆಸಿದರೂ ಫಲ ಕಾಣದ ಅರಣ್ಯೀಕರಣ

– ಶಶಿಧರ ಹೆಗಡೆ, ಬೆಂಗಳೂರು :

ಪ್ರತಿ ವರ್ಷ ಮುಂಗಾರಿನಲ್ಲಿ ರಾಜ್ಯಾದ್ಯಂತ ಕೋಟ್ಯಂತರ ಸಸಿಗಳನ್ನು ನೆಟ್ಟರೂ ಬರಡು ಪ್ರದೇಶದ ಜಿಲ್ಲೆಗಳು ಹಸಿರು ವಲಯದಿಂದ ಬಹಳ ದೂರವೇ ಉಳಿದಿವೆ. ಬ್ರಿಟಿಷ್ ಆಡಳಿತದ ಕಾಲದಿಂದಲೂ ‘ಫಾರೆಸ್ಟ್ ಡಿಸ್ಟ್ರಿಕ್ಟ್’ ಎನಿಸಿಕೊಂಡಿರುವ ಉತ್ತರ ಕನ್ನಡ ಮಾತ್ರ ಈಗಲೂ ರಾಜ್ಯದಲ್ಲಿ ಅತ್ಯಧಿಕ ಅರಣ್ಯ ಹೊಂದಿರುವ ಹಚ್ಚ ಹಸಿರಿನ ಜಿಲ್ಲೆಯೆಂಬ ಹೆಗ್ಗಳಿಕೆ ಉಳಿಸಿಕೊಂಡಿದೆ. ರಾಜ್ಯದ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಬಿಡುಗಡೆ ಮಾಡಿರುವ ವರದಿ ಅನುಸಾರ ಉತ್ತರ ಕನ್ನಡ ಜಿಲ್ಲೆ ಮಾತ್ರ ಹಚ್ಚ ಹಸಿರಿನ ವಲಯದಲ್ಲಿದೆ. ಮಲೆನಾಡು ಹಾಗೂ ಕರಾವಳಿ ಭಾಗದ ಇತರ ಜಿಲ್ಲೆಗಳು ತಿಳಿ ಹಸಿರಿನ ವಲಯದಲ್ಲಿವೆ. ಉತ್ತರ ಕರ್ನಾಟಕ, ಬಯಲುಸೀಮೆಯ ಬಹುತೇಕ ಜಿಲ್ಲೆಗಳು ಡೇಂಜರ್ ಝೋನ್‌ನಲ್ಲಿದೆ. ಅರಣ್ಯ ಪ್ರದೇಶದ ಪ್ರಮಾಣ ಅಂದಾಜಿಸಲು ಎರಡು ಬಗೆಯಲ್ಲಿ ಸಮೀಕ್ಷೆ ಕೈಗೊಳ್ಳಲಾಗಿತ್ತು. ಅದರಂತೆ ಮೊದಲ ವಿಧಾನದಲ್ಲಿ ರಾಜ್ಯದ ಒಟ್ಟಾರೆ ಅರಣ್ಯಕ್ಕೆ ಜಿಲ್ಲಾವಾರು ಅರಣ್ಯದ ಪಾಲು ಎಷ್ಟು ಎನ್ನುವುದನ್ನು ಗುರುತಿಸಲಾಗಿದೆ. ರಾಜ್ಯದ ಅರಣ್ಯಕ್ಕೆ ಶೇ.26.5ರಷ್ಟು ಕೊಡುಗೆ ನೀಡಿರುವ ಉತ್ತರ ಕನ್ನಡ ಜಿಲ್ಲೆ ಹಚ್ಚ ಹಸಿರು ವಲಯದಲ್ಲಿದೆ. ಚಾಮರಾಜನಗರ, ಶಿವಮೊಗ್ಗ, ಬೆಳಗಾವಿ ಜಿಲ್ಲೆಗಳು ತಿಳಿ ಹಸಿರಿನಲ್ಲಿವೆ. ಉಳಿದ ಜಿಲ್ಲೆಗಳು ಕಿತ್ತಳೆ, ಹಳದಿ ಹಾಗೂ ಕೆಂಪು ವಲಯದಲ್ಲಿವೆ. ಆಯಾ ಜಿಲ್ಲೆಯ ಭೌಗೋಳಿಕ ವಿಸ್ತೀರ್ಣದಲ್ಲಿ ಅರಣ್ಯದ ಪ್ರಮಾಣವೆಷ್ಟು ಎನ್ನುವುದು ಮತ್ತೊಂದು ವಿಧಾನದ ಸಮೀಕ್ಷೆ. ಇದರಲ್ಲಿಯೂ ಉತ್ತರ ಕನ್ನಡ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಚಾಮರಾಜನಗರ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. 

ಫಲ ಕೊಡದ ಅಭಿಯಾನ?

ಅರಣ್ಯ ಇಲಾಖೆ ಪ್ರತಿ ವರ್ಷ ಜೂನ್‌ನಲ್ಲಿ ರಾಜ್ಯಾದ್ಯಂತ ವಿಶೇಷ ಅಭಿಯಾನ ಕೈಗೊಂಡು ಗಿಡ ನೆಡಿಸುತ್ತದೆ. ಆದರೆ, ಉತ್ತರ ಕರ್ನಾಟಕ ಹಾಗೂ ಹಳೆ ಮೈಸೂರು ಭಾಗದ ಬಯಲುಸೀಮೆ ಜಿಲ್ಲೆಗಳಲ್ಲಿ ಅರಣ್ಯೀಕರಣ ನಿರೀಕ್ಷಿತ ಫಲ ಕೊಟ್ಟಂತಿಲ್ಲ. ನಿರ್ವಹಣೆ ಹಾಗೂ ನೀರಿನ ಅಭಾವದಿಂದಲೂ ಈ ಹಿನ್ನಡೆಯಾಗಿದೆ. ಉತ್ತರ ಕನ್ನಡದ ಭೌಗೋಳಿಕ ವಿಸ್ತೀರ್ಣದಲ್ಲಿ ಈ ಮೊದಲು ಶೇ.85ರಷ್ಟು ಕಾಡು ಇತ್ತು. ದಶಕಗಳ ಅವಧಿಯಲ್ಲಿ ಈ ಜಿಲ್ಲೆಯಲ್ಲೂ ಕಾಡಿನ ಪ್ರಮಾಣ ನಿಧಾನವಾಗಿ ಕರುಗುತ್ತಿದೆ. ಇತರ ಜಿಲ್ಲೆಗಳಲ್ಲೂ ಇದೇ ಪರಿಸ್ಥಿತಿಯಿದೆ. ಹಾಗಾಗಿ ಸುಸ್ಥಿರ ಅರಣ್ಯ ಅಭಿವೃದ್ಧಿಗೆ ಲಕ್ಷ್ಯ ವಹಿಸಬೇಕು ಎನ್ನುವುದು ತಜ್ಞರ ಸಲಹೆಯಾಗಿದೆ.

ಅರಣ್ಯ ಸಂರಕ್ಷ ಣೆ ಹಾಗೂ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಇದು ನಿರಂತರ ಪ್ರಕ್ರಿಯೆ. ಇದರ ಮೌಲ್ಯಮಾಪನವನ್ನೂ ಕೈಗೊಳ್ಳಲಾಗುತ್ತಿದೆ. -ಸಂಜಯ್ ಮೋಹನ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷ ಣಾಧಿಕಾರಿ. 

ಆಯಾ ಜಿಲ್ಲೆಯಲ್ಲಿ ಅರಣ್ಯ ಪ್ರಮಾಣ

1. ಉತ್ತರ ಕನ್ನಡ – 79.4%

2. ಚಾಮರಾಜನಗರ – 48.4%

3. ಕೊಡಗು – 32.8%

4. ಶಿವಮೊಗ್ಗ 32.7%

5. ಉಡುಪಿ 28.1%

ರಾಜ್ಯದ ಒಟ್ಟಾರೆ ಅರಣ್ಯದಲ್ಲಿ ಜಿಲ್ಲಾವಾರು ಅರಣ್ಯ ಪ್ರಮಾಣ

1. ಉತ್ತರ ಕನ್ನಡ – 26.5%

2. ಶಿವಮೊಗ್ಗ – 9% 

3. ಚಾಮರಾಜನಗರ – 9%

4. ಚಿಕ್ಕಮಗಳೂರು – 6.6%

5. ಬೆಳಗಾವಿ – 6.2%

6. ಕೊಡಗು – 4.4%

7. ದಕ್ಷಿಣ ಕನ್ನಡ – 4.2%

8. ಬಳ್ಳಾರಿ – 3.9%

9. ಉಡುಪಿ – 3.3%

10. ಬಾಗಲಕೋಟ 2.6%

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top