ಹೊಸ ಭಾರತಕ್ಕೆ ಹೊಸ ಶಿಕ್ಷಣ ನೀತಿ ದಿಕ್ಸೂಚಿ

‘2020ರ ಹೊಸ ಶಿಕ್ಷಣ ನೀತಿ’ಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. 34 ವರ್ಷಗಳ ಬಳಿಕ ಹೊಸ ನೀತಿಯನ್ನು ಜಾರಿಗೆ ತರಲಾಗುತ್ತಿದೆ. ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಪದ್ಧತಿಯಲ್ಲಿ ಆಮೂಲಾಗ್ರ ಬದಲಾವಣೆ, ಉನ್ನತ ಶಿಕ್ಷಣವನ್ನು ಮತ್ತಷ್ಟು ಸ್ಪರ್ಧಾತ್ಮಕಗೊಳಿಸುವ ಅಂಶಗಳು ಈ ನೀತಿಯಲ್ಲಿವೆ. ಎಲ್ಲಕ್ಕಿಂತ ಹೆಚ್ಚಾಗಿ ಇದು ‘ಭಾರತ ಕೇಂದ್ರಿತ ಶಿಕ್ಷಣ ನೀತಿ’ಯಾಗಿದ್ದು, ಮಕ್ಕಳ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ. ಹೊಸ ಭಾರತದಲ್ಲಿ ಹೊಸ ಶಿಕ್ಷಣ ನೀತಿಯು ‘ಹೊಸ ಯುಗ’ಕ್ಕೆ ದಾರಿ ದೀಪವಾಗಲಿದೆ.

– ಉನ್ನತ ಶಿಕ್ಷಣದಲ್ಲಿ ಭರ್ಜರಿ ಬದಲಾವಣೆ –

ಶೈಕ್ಷಣಿಕ ಕ್ರೆಡಿಟ್‌ ಬ್ಯಾಂಕ್‌ ಸ್ಥಾಪನೆ
ಹೊಸ ಶಿಕ್ಷಣ ನೀತಿಯಡಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಅವರು ಗಳಿಸಿದ ಕ್ರೆಡಿಟ್‌ಗಳ ಮೂಲಕ ಅಳೆಯಲಾಗುತ್ತದೆ. ವಿವಿಧ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಗಳಿಸಿದ ಕ್ರೆಡಿಟ್‌ಗಳನ್ನು ಡಿಜಿಟಲ್‌ ರೂಪದಲ್ಲಿ ಸಂಗ್ರಹಿಸಲು ‘ಅಕಾಡೆಮಿಕ್‌ ಬ್ಯಾಂಕ್‌ ಆಫ್‌ ಕ್ರೆಡಿಟ್‌’ (ಎಬಿಸಿ) ಸ್ಥಾಪನೆಯಾಗಲಿದೆ. ಇದರಲ್ಲಿ ಸಂಗ್ರಹವಾದ ಕ್ರೆಡಿಟ್‌ ಸ್ಕೋರ್‌ಗಳನ್ನು ಬೇರೊಂದು ವಿಷಯದಲ್ಲಿ ಗಳಿಸಿದ ಸ್ಕೋರ್‌ ಜತೆ ಸೇರಿಸಲು ಅಥವಾ ಬೇರೊಂದು ವಿಷಯಕ್ಕೆ ವರ್ಗಾವಣೆ ಮಾಡಲು ಸಾಧ್ಯವಿದ್ದು, ಅಂತಿಮ ವರ್ಷದ ಡಿಗ್ರಿಗೆ ಅವುಗಳನ್ನು ಒಟ್ಟಾರೆಯಾಗಿ ಪರಿಗಣಿಸಲಾಗುವುದು.

ಸುಲಭ ಎಂಟ್ರಿ, ಎಕ್ಸಿಟ್‌ಗೆ ಅವಕಾಶ
ಹೊಸ ಶಿಕ್ಷಣ ನೀತಿಯಲ್ಲಿ ಪದವಿ ಪೂರ್ವ ಮತ್ತು ಪದವಿ ಶಿಕ್ಷಣವು ವಿಲೀನವಾಗಲಿದ್ದು, ಶಿಕ್ಷಣವು 3 ಅಥವಾ 4 ವರ್ಷಗಳ ಅವಧಿಯದ್ದಾಗಿರುತ್ತದೆ. ಇಲ್ಲಿ ವಿದ್ಯಾರ್ಥಿಗಳು ಪೂರ್ಣ ಕೋರ್ಸ್‌ ಮುಗಿಸದೆ ಮಧ್ಯದಲ್ಲಿ ಕೋರ್ಸ್‌ನಿಂದ ನಿರ್ಗಮಿಸಬಹುದು. ಆದರೆ ಇದನ್ನು ಕೋರ್ಸ್‌ ಅಪೂರ್ಣ ಎಂದು ಪರಿಗಣಿಸುವುದಿಲ್ಲ. 1 ವರ್ಷ ಪೂರೈಸಿದ ಬಳಿಕ ವೃತ್ತಿಪರ ಶಿಕ್ಷಣ ಸೇರಿದಂತೆ ಅವರು ಆಯ್ಕೆ ಮಾಡಿಕೊಂಡಿದ್ದ ವಿಷಯದಲ್ಲಿ ಪ್ರಮಾಣ ಪತ್ರ ನೀಡಲಾಗುತ್ತದೆ. ವಿದ್ಯಾರ್ಥಿ 2 ವರ್ಷ ಪೂರೈಸಿದರೆ ಡಿಪ್ಲೊಮಾ ಪ್ರಮಾಣ ಪತ್ರ ದೊರೆಯಲಿದೆ. 3 ವರ್ಷ ಪೂರೈಸಿದರೆ ಪದವಿ ಪ್ರಮಾಣ ಪತ್ರ ದೊರೆಯಲಿದೆ. ವಿದ್ಯಾರ್ಥಿಯು ಐಚ್ಛಿಕವಾಗಿ 4 ವರ್ಷದ ಡಿಗ್ರಿಯನ್ನೂ ಆಯ್ದುಕೊಳ್ಳಬಹುದು.

ಬಹು ವಿಷಯಗಳ ಶಿಕ್ಷಣಕ್ಕೆ ಆದ್ಯತೆ
ಪ್ರಸ್ತುತ ಒಂದೇ ವಿಷಯದಲ್ಲಿ ಶಿಕ್ಷಣ ನೀಡುತ್ತಿರುವ ಶೈಕ್ಷಣಿಕ ಸಂಸ್ಥೆಗಳು (ಉದಾ: ತಾಂತ್ರಿಕ ಶಿಕ್ಷಣ ಸಂಸ್ಥೆಗಳು, ತಾಂತ್ರಿಕ ವಿವಿಗಳು) ಇನ್ನು ಮುಂದೆ ಇರುವುದಿಲ್ಲ. ಇವು ಸಹ ಬಹುವಿಷಯಗಳ ಶಿಕ್ಷಣ ಸಂಸ್ಥೆಗಳಾಗಿ ಮಾರ್ಪಡಾಗಲಿವೆ. ಎಲ್ಲಾ ಶಿಕ್ಷಣ ಸಂಸ್ಥೆಗಳು ಹಾಗೂ ವಿವಿಗಳು 2030ರ ವೇಳೆಗೆ ಬಹು ವಿಷಯಗಳ ಶೈಕ್ಷಣಿಕ ಸಂಸ್ಥೆಗಳಾಗಿ ಬದಲಾಗಬೇಕೆಂಬ ಗುರಿಯನ್ನು ನೀಡಲಾಗಿದೆ.

ಎಂಫಿಲ್‌ಗೆ ತಿಲಾಂಜಲಿ
ಇನ್ನು ಮುಂದೆ ಎಂಫಿಲ್‌ ರದ್ದಾಗಲಿದೆ. ಪದವಿ ಪೂರ್ವ ಶಿಕ್ಷಣ 3 ಅಥವಾ ನಾಲ್ಕು ವರ್ಷಗಳು ಇರಲಿದ್ದು, 1 ಅಥವಾ 2 ವರ್ಷಗಳ ಸ್ನಾತಕೋತ್ತರ ಪದವಿ ಇರಲಿದೆ. ಏಕೀಕೃತ 5 ವರ್ಷದ ಬ್ಯಾಚಲರ್‌/ಮಾಸ್ಟರ್‌ ಡಿಗ್ರಿ ಆಯ್ಕೆಯೂ ಲಭ್ಯವಾಗಲಿದೆ.

ಜಿಲ್ಲೆಗೊಂದು ಬಹುವಿಷಯ ಕಾಲೇಜು
2030ರ ವೇಳೆಗೆ ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ದೊಡ್ಡ ಮಟ್ಟದ ಬಹು-ವಿಷಯಗಳ ಶೈಕ್ಷಣಿಕ ಸಂಸ್ಥೆಯನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ. 2040ರ ವೇಳೆಗೆ ದೇಶದ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಬಹು-ವಿಷಯಗಳ ಶಿಕ್ಷಣ ಸಂಸ್ಥೆಗಳಾಗಿ ಮಾರ್ಪಡಿಸಿ, ಪ್ರತಿಯೊಂದು ವಿಷಯದಲ್ಲೂ ಕನಿಷ್ಠ 3000 ವಿದ್ಯಾರ್ಥಿಗಳನ್ನು ಹೊಂದಿರುವಂತೆ ಮಾಡುವ ಗುರಿ ಇರಿಸಿಕೊಳ್ಳಲಾಗಿದೆ.

ಒಂದೇ ಕೇಂದ್ರೀಯ ನಿಯಂತ್ರಕ ವ್ಯವಸ್ಥೆ
ಎಲ್ಲಾ ಉನ್ನತ ಶೈಕ್ಷಣಿಕ ಸಂಸ್ಥೆಗಳನ್ನು ನಿಯಂತ್ರಿಸಲು ಯುಜಿಸಿ ಮಾದರಿಯಲ್ಲಿ ‘ಭಾರತೀಯ ಉನ್ನತ ಶಿಕ್ಷಣ ಮಂಡಳಿ’ (ಎಚ್‌ಇಸಿಐ) ಸ್ಥಾಪನೆಯಾಗಲಿದೆ. ಶಿಕ್ಷಕರ ತರಬೇತಿ ಸೇರಿದಂತೆ ಎಲ್ಲಾ ರೀತಿಯ ಶಿಕ್ಷಣಕ್ಕೆ ಇದು ಏಕ ಗವಾಕ್ಷಿ ನಿಯಂತ್ರಣ ಪ್ರಾಧಿಕಾರವಾಗಿರುತ್ತದೆ.

ಆರ್ಟ್ಸ್, ಕಾಮರ್ಸ್‌, ಸೈನ್ಸ್‌ ಗೋಡೆ ಇಲ್ಲ
ಹೊಸ ಶಿಕ್ಷಣ ನೀತಿಯು, ಮಾತೃ ಭಾಷೆಯಲ್ಲಿ ಶಿಕ್ಷಣ ನೀಡುವುದಕ್ಕೆ ಒತ್ತು ನೀಡುವುದಲ್ಲದೆ, ಯಾವುದೇ ವಿದ್ಯಾರ್ಥಿ ತನ್ನ ಶೈಕ್ಷಣಿಕ ಹಿನ್ನೆಲೆಯನ್ನು ಲೆಕ್ಕಿಸದೆ ಯಾವುದೇ ವಿಷಯವನ್ನು ಓದಲು ಅವಕಾಶ ನೀಡುತ್ತದೆ. ಅಂದರೆ ಎಂಜಿನಿಯರಿಂಗ್‌ ವಿದ್ಯಾರ್ಥಿಯು ಇತಿಹಾಸ ಓದಬಹುದು. ಕಲಾ ವಿಭಾಗದ ವಿದ್ಯಾರ್ಥಿಯು ಭೌತಶಾಶ್ತ್ರ ಅಥವಾ ಗಣಿತವನ್ನು ಒಂದು ವಿಷಯವಾಗಿ ಆಯ್ದುಕೊಳ್ಳಬಹುದು.

ಸಾಮಾನ್ಯ ಪ್ರವೇಶ ಪರೀಕ್ಷೆ
ಎಲ್ಲಾ ವಿವಿಗಳಲ್ಲಿ ಪ್ರವೇಶಕ್ಕೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (ಎನ್‌ಟಿಎ) ಏಕರೀತಿಯ ಸಾಮಾನ್ಯ ಪರೀಕ್ಷೆಯನ್ನು ನಡೆಸಲಿದೆ. ಆದರೆ ಆಯಾ ವಿಷಯಗಳಿಗೆ ತಕ್ಕಂತೆ ವಿಭಿನ್ನ ಪ್ರಶ್ನೆ ಪತ್ರಿಕೆಗಳನ್ನು ಒದಗಿಸಲಿದೆ.

– ಭಾರತದಲ್ಲಿ ಕ್ಯಾಂಪಸ್‌ ಸ್ಥಾಪಿಸಲು 100 ವಿದೇಶಿ ಕಾಲೇಜುಗಳಿಗೆ ಅನುಮತಿ
– ಸಂಶೋಧನೆಗೆ ಆದ್ಯತೆ ನೀಡಲು ಉನ್ನತ ಶಿಕ್ಷಣ ಸಂಸ್ಥೆಗಳ ಮರು ವರ್ಗೀಕರಣ
– 2035ರ ವೇಳೆಗೆ 50% ಸರಾಸರಿ ದಾಖಲಾತಿ ಅನುಪಾತ
– ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲೂ ಕಲೆ, ಸಂಗೀತ, ನೃತ್ಯ, ಸಾಹಿತ್ಯ ಸೇರಿದಂತೆ ಹಲವು ವಿಷಯಗಳ ಬೋಧನೆ

ಪಠ್ಯ ಗಣನೀಯ ಇಳಿಕೆ

ಮುಖ್ಯವಾದ ವಿಷಯ: ಎಲ್ಲ ವಿಷಯಗಳ ಪಠ್ಯವು ಅಗತ್ಯವಾದ ಬಹುಮುಖ್ಯವಾದ್ದನ್ನು ಮಾತ್ರ ಹೊಂದಿರಬೇಕು.

ವಿಮರ್ಶಾತ್ಮಕ ಚಿಂತನೆ: ಸಮಗ್ರ ಶಿಕ್ಷಣಕ್ಕೆ ವಿಮರ್ಶಾತ್ಮಕ ಚಿಂತನೆ, ತನಿಖೆ, ಸಂಶೋಧನೆ, ಚರ್ಚೆ ಮತ್ತು ವಿಶ್ಲೇಷಣಾತ್ಮಕ ಆಧರಿತ ಬೋಧನೆ ಹಾಗೂ ಕಲಿಕಾ ಪದ್ಧತಿಗಳ ಅಳವಡಿಕೆ.

ಸಂವಾದಿ ತರಗತಿಗಳು: ಸಂವಾದಿ ಬೋಧನೆಯು ಪಠ್ಯದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಮತ್ತು ವಿದ್ಯಾರ್ಥಿಗಳಲ್ಲಿ ಪ್ರಶ್ನೆ ಕೇಳುವ ಪದ್ಧತಿಗೆ ಉತ್ತೇಜನ ನೀಡುತ್ತದೆ.

ಪ್ರಯೋಗಾತ್ಮಕ ಕಲಿಕೆ: ತರಗತಿಯಲ್ಲಿ ತಮಾಷೆ, ರಚನಾತ್ಮಕ, ಸಹಯೋಗ ಮತ್ತು ಪರಿಶೋಧನಾತ್ಮಕ ಚಟುವಟಿಕೆಗಳ ಮೂಲಕ ಪ್ರಯೋಗಾತ್ಮಕ ಕಲಿಕೆ ಮತ್ತು ವಿದ್ಯಾರ್ಥಿಯ ಕಲಿಕೆಯ ಆಳವನ್ನು ಹೆಚ್ಚಿಸುವುದು.

———————

ಸಾರ್ವತ್ರೀಕರಣಗೊಂಡ ಪ್ರಾಥಮಿಕ, ಪ್ರೌಢ ಶಿಕ್ಷ ಣ

ಹೊಸ ಪದ್ಧತಿ: 10+2 ಬದಲಿಗೆ 5+3+3+4
ರಾಷ್ಟ್ರೀಯ ಶಿಕ್ಷ ಣ ನೀತಿ-2020 ಪ್ರಾಥಮಿಕ, ಮಾಧ್ಯಮಿಕ ಮತ್ತು ಪದವಿ ಪೂರ್ವ ಶಿಕ್ಷಣ ಪದ್ಧತಿಯನ್ನು ಆಮೂಲಾಗ್ರ ಪರಿಷ್ಕರಿಸಲಿದೆ. ಹೊಸ ನೀತಿಯ ಪ್ರಕಾರ 10 ಪ್ಲಸ್‌ 2 ಪದ್ಧತಿಯನ್ನು 5+3+3+4 ಆಗಿ ಬದಲಿಸಲಾಗಿದೆ. ಅಂದರೆ, ಮೊದಲ ಐದು ವರ್ಷದ ಶಿಕ್ಷಣವನ್ನು ‘ಮೂಲಭೂತ ಶಿಕ್ಷ ಣ’ ಹಂತ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಪೂರ್ವ ಪ್ರಾಥಮಿಕದ ಮೂರು ವರ್ಷ ಹಾಗೂ 1ನೇ ಹಾಗೂ 2ನೇ ತರಗತಿಗಳನ್ನು ಸೇರಿಸಲಾಗಿದೆ. ಮುಂದಿನ ಮೂರು ವರ್ಷ(3ರಿಂದ 5ನೇ ತರಗತಿ)ಗಳು ‘ಸಿದ್ಧತಾ ಹಂತ’ವಾಗಿದ್ದರೆ, ನಂತರದ 3 ವರ್ಷ(6ರಿಂದ 8ನೇ ತರಗತಿ) ‘ಮಧ್ಯಮ ಹಂತ’ದ ಶಿಕ್ಷಣವಾಗಿರುತ್ತದೆ. ಕೊನೆಯ ನಾಲ್ಕು ವರ್ಷಗಳು(9ರಿಂದ 12ನೇ ತರಗತಿ) ‘ಪ್ರೌಢ ಶಿಕ್ಷಣ ಹಂತವಾಗಿರುತ್ತದೆ. ಇದರೊಂದಿಗೆ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಸಾರ್ವತ್ರಿಕರಣಗೊಳಿಸಲಾಗಿದೆ.
ಮೊದಲ 5 ವರ್ಷ: ಮೂಲಭೂತ ಹಂತ
ನಂತರದ 3 ವರ್ಷ: ಸಿದ್ಧತಾ ಹಂತ
ನಂತರದ 3 ವರ್ಷ: ಮಧ್ಯಮ ಹಂತ
ಕೊನೆಯ 5 ವರ್ಷ: ಪ್ರೌಢ ಹಂತ

5ನೇ ತರಗತಿ ತನಕ ಮಾತೃಭಾಷೆಯಲ್ಲೇ ಶಿಕ್ಷ ಣ
ಸಾಧ್ಯವಿದ್ದಲ್ಲಿ ಕನಿಷ್ಠ 5ನೇ ತರಗತಿಯವರೆಗೂ ಮಾತೃಭಾಷೆ, ಪ್ರಾದೇಶಿಕ ಅಥವಾ ಸ್ಥಳೀಯ ಭಾಷೆಯಲ್ಲೇ ಶಿಕ್ಷಣ ನೀಡಬೇಕು ಮತ್ತು ಅದನ್ನು 8ನೇ ತರಗತಿ ಅಥವಾ ಅದಕ್ಕಿಂತ ಹೆಚ್ಚಿನ ತರಗತಿಯವರೆಗೂ ವಿಸ್ತರಿಸಬಹುದು. ಹಾಗೆಯೇ, ‘ಭಾರತೀಯ ಭಾಷೆಗಳು’ ಫನ್‌ ಪ್ರಾಜೆಕ್ಟ್ ಅಥವಾ ಚಟುವಟಿಕೆಯನ್ನು ಪ್ರತಿ ವಿದ್ಯಾರ್ಥಿಗೆ ನೀಡಬೇಕು. ತ್ರಿಭಾಷಾ ಸೂತ್ರದಡಿ ಕಲಿಕೆ ಸಾಗಬೇಕು. ಹಾಗೆಯೇ, ಕನ್ನಡವೂ ಸೇರಿದಂತೆ ಎಲ್ಲ ಶಾಸ್ತ್ರೀಯ ಭಾಷೆಗಳು ಲಭ್ಯವಾಗಿರಬೇಕು.

ಪ್ರತಿ ವರ್ಷ ಇಲ್ಲ ಪರೀಕ್ಷೆ
ಹಾಲಿ ವ್ಯವಸ್ಥೆಯಲ್ಲಿ ಪ್ರತಿ ವರ್ಷ ಪರೀಕ್ಷೆಗಳನ್ನು ಕೈಗೊಳ್ಳಲಾಗುತ್ತಿದೆ. ಹೊಸ ನೀತಿಯ ಪ್ರಕಾರ 3, 5 ಮತ್ತು 8ನೇ ತರಗತಿಗೆ ಮಾತ್ರ ಪರೀಕ್ಷೆ ಇರಲಿದೆ. ಉಳಿದ ವರ್ಷ ತರಗತಿಗಳ ಮೌಲ್ಯಮಾಪನವು ‘ನಿಯಮಿತ ಮತ್ತು ರಚನಾತ್ಮಕ’ ಶೈಲಿಯದ್ದಾಗಿರುತ್ತದೆ. ಅಂದರೆ, ಸ್ಪರ್ಧಾತ್ಮಕ ಆಧರಿತ, ಕಲಿಕಾ ಉತ್ತೇಜನ ಮತ್ತು ಅಭಿವೃದ್ಧಿ, ವಿಶ್ಲೇಷಣೆ, ವಿಮರ್ಶಾತ್ಮಕ ಚಿಂತನೆ ಮತ್ತು ಪರಿಕಲ್ಪನೆಯಂಥ ಸ್ಪಷ್ಟತೆಯನ್ನು ಮೂಡಿಸುವ ಅತ್ಯುತ್ತಮ ಕೌಶಲದ ಶಿಕ್ಷಣವನ್ನು ಇದು ಒದಗಿಸುತ್ತದೆ.

ತ್ರಿಭಾಷಾ ಸೂತ್ರ, ಸಂಸ್ಕೃತಕ್ಕೆ ಆದ್ಯತೆ
ತ್ರಿಭಾಷಾ ಸೂತ್ರದ ಅನ್ವಯ ಶಾಲೆಯಲ್ಲಿ ಶಿಕ್ಷಣ ನೀಡಬೇಕು. ವಿಶೇಷವಾಗಿ ಸಂಸ್ಕೃತ ಐಚ್ಛಿಕ ಭಾಷೆಯಾಗಿ ಎಲ್ಲ ಶಾಲೆಗಳಲ್ಲಿ ಲಭ್ಯ ಇರಬೇಕು. ಇದು ಉನ್ನತ ಶಿಕ್ಷಣಕ್ಕೂ ಅನ್ವಯ. ಸಂಸ್ಕೃತ ವಿಶ್ವ ವಿದ್ಯಾಲಯಗಳೂ ಸಂಸ್ಕೃತಕ್ಕೆ ಮಾತ್ರವೇ ಸಿಮೀತವಾಗದೇ ಬಹುಕೋರ್ಸ್‌ಗಳನ್ನು ಕಲಿಸಬೇಕು.

ಬೋರ್ಡ್‌ ಎಕ್ಸಾಮ್‌ ಪದ್ಧತಿ ಪರಿಷ್ಕರಣೆ
10 ಮತ್ತು 12ನೇ ತರಗತಿಗಳಿಗೇ ಮಾತ್ರ ಬೋರ್ಡ್‌ ಎಕ್ಸಾಮ್‌ ಇರುತ್ತದೆ. ಹಾಗೆಯೇ, ಈ ಪರೀಕ್ಷೆಯಲ್ಲಿ ಬಹಳಷ್ಟು ಬದಲಾವಣೆಗಳನ್ನು ತರಲಾಗುತ್ತಿದೆ. ಸಿಬಿಎಸ್‌ಇಯಲ್ಲಿ ಗಣಿತ ಇರುವಂತೆ ಎಲ್ಲ ಕೋರ್ಸ್‌ಗಳನ್ನು ಎರಡು ಭಾಷೆಗಳಲ್ಲಿ ನೀಡಲಾಗುತ್ತದೆ. ರಾಜ್ಯಗಳಲ್ಲೂ ಬೋರ್ಡ್‌ ಪರೀಕ್ಷೆಗಳು ಜ್ಞಾನಾಧಾರಿತ ಪರೀಕ್ಷೆಗಳಾಗಿರಲಿವೆ ಹೊರತು ಕಲಿಕೆಯ ಉದ್ದೇಶ ಮಾತ್ರವೇ ಆಗಿರುವುದಿಲ್ಲ. ಪ್ರತಿ ವಿಷಯವೂ ಆಬ್ಜಿಕ್ಟಿವ್‌ ಮತ್ತು ವಿವರಣಾತ್ಮಕ ಪರೀಕ್ಷೆ ಹೊಂದಿರುತ್ತದೆ.

6ನೇ ಕ್ಲಾಸ್‌ನಿಂದಲೇ ಕೋಡಿಂಗ್‌!
ಗಣಿತದ ಪರಿಕಲ್ಪನೆಗಳು, ವೈಜ್ಞಾನಿಕ ವಿಚಾರಗಳು ಈ ಶಿಕ್ಷಣದ ಭಾಗವಾಗಿರಲಿವೆ. ಸಹ ಪಠ್ಯಗಳಾದ ಕ್ರೀಡೆ, ವೃತ್ತಿಪರ, ಕಲೆ, ವಾಣಿಜ್ಯ, ವಿಜ್ಞಾನ ಸೇರಿ ಎಲ್ಲವೂ ಇದೇ ಹಂತದಲ್ಲಿರಲಿವೆ. ಹಾಗಾಗಿ ವಿದ್ಯಾರ್ಥಿಗಳು ತಮ್ಮ ಆಯ್ಕೆಯನುಸಾರವಾಗಿ ವಿಷಯಗಳನ್ನು ತೆಗೆದುಕೊಳ್ಳಬಹುದು. ಹಾಗೆಯೇ 6ನೇ ತರಗತಿಯಿಂದಲೇ ಕೋಡಿಂಗ್‌ ಕಲಿಕೆಗೆ ಅವಕಾಶ ಕಲ್ಪಿಸಲಾಗುತ್ತಿದೆ.

ಸಮಗ್ರ ಪ್ರಗತಿ ಕಾರ್ಡ್‌
– ಸ್ವ ಮೌಲ್ಯಮಾಪನ, ಮಗುವಿನ ಮೌಲ್ಯಮಾಪನ ಮತ್ತು ಶಿಕ್ಷಕರ ಮೌಲ್ಯಮಾಪನವು ಮಕ್ಕಳ ಪ್ರಗತಿ ಕಾರ್ಡ್‌ನಲ್ಲಿ ಅಡಕವಾಗಿರಬೇಕು.
– ಶಾಲಾ ವರ್ಷಗಳಲ್ಲಿ ಮಕ್ಕಳ ಬೆಳವಣಿಗೆಯ ಟ್ರ್ಯಾಕ್‌ ದಾಖಲಿಸಲು ಮತ್ತು ಮಕ್ಕಳಿಗೆ ತಮ್ಮ ವೃತ್ತಿ ಆಯ್ಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆ(ಎಐ) ಆಧರಿತ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಲಾಗುವುದು.
– ಈ ಸಮಗ್ರ ಪ್ರಗತಿ ಕಾರ್ಡ್‌ ಪೋಷಕರು ಮತ್ತು ಅವರ ಮಕ್ಕಳ ಶಿಕ್ಷಣ ಅಭಿವೃದ್ಧಿಯ ಅಡಕವಾಗಿರಬೇಕು.
– ಪಠ್ಯದಲ್ಲಿ ಸ್ಥಳೀಯತೆಗೆ ಆದ್ಯತೆ
– ಎಲ್ಲ ಪಠ್ಯಪುಸ್ತಕಗಳು ಅಗತ್ಯವಾಗಿರುವ ಮುಖ್ಯ ವಿಷಯವನ್ನು ಒಳಗೊಂಡಿರಬೇಕು ಮತ್ತು ಸ್ಥಳೀಯ ಹಾಗೂ ಸಂದರ್ಭದ ಅಗತ್ಯಕ್ಕೆ ಅನುಗುಣವಾಗಿ ಪಠ್ಯವನ್ನು ರೂಪಿಸಬೇಕು.
-ದೀಕ್ಷಾ ಡಿಜಿಟಲ್‌ ವೇದಿಕೆ ಉಚಿತ ಆವೃತ್ತಿ ಲಭ್ಯತೆಯೊಂದಿಗೆ ಕೈಗೆಟುಕುವ, ಉತ್ತಮ ಗುಣಮಟ್ಟದ ಪಠ್ಯ ಪುಸ್ತಕಗಳನ್ನು ಒದಗಿಸಲಾಗುವುದು.

ಲೋಕ ವಿದ್ಯಾ
ಭಾರತದಲ್ಲಿ ಲೋಕ ವಿದ್ಯಾ ಜ್ಞಾನ ಅಭಿವೃದ್ಧಿಪಡಿಸಿ, ಎಲ್ಲ ವಿದ್ಯಾರ್ಥಿಗಳಿಗೂ ಲಭ್ಯವಾಗುವಂತೆ ಮಾಡಲಾಗುವುದು.

ವೃತ್ತಿಪರ ವಿಷಯ ಕೌಶಲ
6ರಿಂದ 8ನೇ ತರಗತಿಯ ಎಲ್ಲ ಮಕ್ಕಳಿಗೆ ಸ್ಥಳೀಯ ವೃತ್ತಿಪರ ಕೌಶಲದ ಜ್ಞಾನ ನೀಡಲಾಗುವುದು. ಅಂದರೆ, ಬಡಿಗ, ಮಾಲಿ, ಕುಂಬಾರ, ಕಲಾವಿದ ಇತ್ಯಾದಿ ಕೌಶಲಗಳನ್ನು ಅಭಿವೃದ್ಧಿಪಡಿಸಲಾಗಿದೆ.

—-

ಹೊಸ ನೀತಿ ಅನುಷ್ಠಾನ ಯಾವಾಗ?

2021-22:
– ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟು ನಿರ್ಮಾಣ(ಎನ್‌ಎಸ್‌ಎಫ್‌ಎಸ್‌ಇ)
– ಶಿಕ್ಷಕರ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮದ ವಿನ್ಯಾಸ
2022-23: ಶಿಕ್ಷಕರಿಗೆ ರಾಷ್ಟ್ರೀಯ ವೃತ್ತಿಪರ ಗುಣಮಟ್ಟದ ಸಾಮಾನ್ಯ ಮಾರ್ಗದರ್ಶಿ ಸೂತ್ರ ಜಾರಿ(ಎನ್‌ಪಿಎಸ್‌ಟಿ)
2025-26:
– ಶಾಲೆಗಳಲ್ಲಿ ಮತ್ತು ಉನ್ನತ ಶಿಕ್ಷಣದಲ್ಲಿ ಕನಿಷ್ಠ ಶೇ.50ರಷ್ಟು ವಿದ್ಯಾರ್ಥಿಗಳು ವೃತ್ತಿಪರ ಶಿಕ್ಷಣಕ್ಕೆ ತೆರೆದುಕೊಳ್ಳಬೇಕು
– 3 ನೇ ತರಗತಿಯಿಂದ ಎಲ್ಲ ಕಲಿಯುವವರಿಗೆ ಪ್ರಾಥಮಿಕ ಶಾಲೆಗಳಲ್ಲಿ ಸಾರ್ವತ್ರಿಕ ಅಡಿಪಾಯದ ಸಾಕ್ಷರತೆಯನ್ನು ಸಾಧಿಸುವುದು.
2029-30:
– ಕನಿಷ್ಠ ಪದವಿ ಅರ್ಹತೆಯೊಂದಿಗೆ ಶಿಕ್ಷಕರ ಶಿಕ್ಷಣವನ್ನು ನಿಧಾನವಾಗಿ ಬಹುವಿಷಯ ಕಲಿಕೆಯ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಿಗೆ ಮಾರ್ಪಡಿಸಲಾಗುವುದು.
– ಎಲ್ಲ ಟೀಚರ್‌ ಎಜುಕೇಷನ್‌ ಇನ್ಸ್‌ಟಿಟ್ಯೂಷನ್‌ಗಳನ್ನು ಬಹುವಿಷಯ ಕಲಿಕೆಯ ಸಂಸ್ಥೆಗಳಾಗಿ ಬದಲಿಸಲಾಗುವುದು.
2040: ಹೊಸ ಶಿಕ್ಷ ಣ ನೀತಿಯ ಪೂರ್ಣ ಅನುಷ್ಠಾನ ಮತ್ತು ಜಾರಿಗೊಳಿಸಲಾದ ನೀತಿಯ ಸಮಗ್ರ ವಿಮರ್ಶಾತ್ಮಕ ಅಧ್ಯಯನ.

ಎನ್‌ಇಪಿ ಭಾರತೀಯ ಶೈಕ್ಷಣಿಕ ವ್ಯವಸ್ಥೆಯ ಹೊಸ ಮೈಲುಗಲ್ಲು: ಪ್ರೊ. ಎಂ.ಕೆ.ಶ್ರೀಧರ್‌

‘‘ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು (ಎನ್‌ಇಪಿ)’ ಹೊಸ ಮೈಲುಗಲ್ಲಾಗಿದ್ದು, ಭಾರತೀಯ ಶೈಕ್ಷಣಿಕ ವ್ಯವಸ್ಥೆಯ ಮೇಲೆ ಅತ್ಯುತ್ತಮ ದೀರ್ಘಕಾಲೀನ ಪರಿಣಾಮಗಳು ಉಂಟಾಗಲಿವೆ,’’ ಎಂದು ಶಿಕ್ಷಣ ತಜ್ಞ ಹಾಗೂ ಎನ್‌ಇಪಿ ಕರಡು ಸಮಿತಿ ಸದಸ್ಯ ಪ್ರೊ.ಎಂ.ಕೆ.ಶ್ರೀಧರ್‌ ಅಭಿಪ್ರಾಯಪಟ್ಟರು.ಈ ಬಗ್ಗೆ ‘ವಿಜಯ ಕರ್ನಾಟಕ’ದೊಂದಿಗೆ ಮಾತನಾಡಿದ ಅವರು, ‘ಶಾಲಾ ಹಂತದಿಂದಲೇ ವೃತ್ತಿಪರ ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಎಲ್ಲಾ ಕೌಶಲಾಭಿವೃದ್ಧಿ, ಸರಕಾರಿ ಶಾಲೆಗಳ ಸಬಲೀಕರಣ, ಉನ್ನತ ಶಿಕ್ಷಣ ಮತ್ತು ಸಂಶೋಧನೆಗೆ ಒತ್ತು ನೀಡುವ ಮೂಲಕ ಸಶಕ್ತ ಮಾನವ ಸಂಪನ್ಮೂಲವನ್ನು ಸೃಷ್ಟಿಸುವುದು ಈ ನೀತಿಯ ಗುರಿಯಾಗಿದೆ’ ಎಂದರು.

ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ 3ರಿಂದ 6 ವರ್ಷದವರೆಗಿನ ಪೂರ್ವ ಪ್ರಾಥಮಿಕ ಶಾಲೆಯನ್ನು ‘ಶಿಕ್ಷಣ’ದಡಿಯಲ್ಲಿ ತಂದಿರುವುದು ಪ್ರಮುಖ ಅಂಶವಾಗಿದೆ. ಇದರಿಂದ ದೀರ್ಘಾವಧಿ ಪರಿಣಾಮಗಳುಂಟಾಗಲಿವೆ. ಸದ್ಯ, ‘ನಮ್ಮಲ್ಲಿ 6ರಿಂದ 18 ವರ್ಷ ವಯಸ್ಸಿನವರೆಗೆ ಎರಡು ಹಂತದ (10+2) ಶಿಕ್ಷಣ ಪದ್ಧತಿ ಜಾರಿಯಲ್ಲಿದೆ. ಆದರೆ, ಎನ್‌ಇಪಿಯಲ್ಲಿ 3ರಿಂದ 18 ವರ್ಷಗಳವರೆಗೆ ಒಟ್ಟು ನಾಲ್ಕು ಹಂತಗಳಲ್ಲಿ (5+3+3+4) ವಯೋಮಾನದ ಆಧಾರದ ಮೇಲೆ ಪಠ್ಯಕ್ರಮ ಮತ್ತು ಬೋಧನಾಕ್ರಮವನ್ನು ರೂಪಿಸಲು ಆದ್ಯತೆ ನೀಡಲಾಗಿದೆ. ಇದು ಮಕ್ಕಳ ಕಲಿಕೆಯ ಮೇಲೆ ಉತ್ತಮ ಪರಿಣಾಮ ಬೀರಲಿದೆ’’ ಎಂದು ತಿಳಿಸಿದರು.

ವಿಶೇಷ ಕಲಿಕೆಗೆ ಆದ್ಯತೆ: ಪ್ರಸ್ತುತ ಜಾರಿಯಲ್ಲಿರುವ ವ್ಯವಸ್ಥೆಯಲ್ಲಿ 9, 10, 11 ಮತ್ತು 12ನೇ ತರಗತಿಗಳಲ್ಲಿ ವಿದ್ಯಾರ್ಥಿಗಳು ಇಚ್ಛಿಸಿದ ವಿಷಯಗಳನ್ನು ವಿಶೇಷವಾಗಿ ಕಲಿಯಲು ಸಾಧ್ಯವಿಲ್ಲ. ಉದಾಹರಣೆಗೆ, ಪದವಿ ಪೂರ್ವ ಹಂತದಲ್ಲಿ ಕಲೆ, ವಾಣಿಜ್ಯ, ವಿಜ್ಞಾನ ಸೇರಿದಂತೆ ಇತರೆ ವಿಷಯಗಳನ್ನು ಪ್ರತ್ಯೇಕಿಸಿ ನಿಗದಿತ ವಿಷಯಗಳನ್ನಷ್ಟೇ ಐಚ್ಛಿಕ ವಿಷಯಗಳನ್ನಾಗಿ ಅಧ್ಯಯನ ಮಾಡುವ ಪದ್ಧತಿಯಿದೆ. ಆದರೆ, ಎನ್‌ಇಪಿಯಲ್ಲಿ ಈ ಪದ್ಧತಿಯನ್ನು ಕೈ ಬಿಡಲಾಗಿದೆ. ವಿದ್ಯಾರ್ಥಿಗಳು ಪಿಯುಸಿಗೆ ಸೇರಿದ ತಕ್ಷಣ ನಿಗದಿತ ವಿಷಯಗಳನ್ನಷ್ಟೇ ತೆಗೆದುಕೊಂಡು ಅಧ್ಯಯನ ಮಾಡುವ ಬದಲು, ಜ್ಞಾನದ ಎಲ್ಲಾ ಭಂಡಾರವನ್ನು ನೋಡಲು ಹಾಗೂ ತಾವು ಇಷ್ಟಪಟ್ಟ ವಿಷಯಗಳನ್ನು ತೆಗೆದುಕೊಂಡು ವಿಶೇಷವಾಗಿ ಅಧ್ಯಯನ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಶಾಲಾ ಕ್ಲಸ್ಟರ್‌ ನಿರ್ಮಾಣಕ್ಕೆ ಕ್ರಮ: ಸರಕಾರಿ ಶಾಲೆಗಳ ಅಭಿವೃದ್ಧಿ ಮತ್ತು ಸಮಗ್ರ ಕಲಿಕೆಯ ದೃಷ್ಟಿಯಿಂದ ಕನಿಷ್ಠ 15ರಿಂದ 20 ಶಾಲೆಗಳಿಗೊಂದರಂತೆ ‘ಕ್ಲಸ್ಟರ್‌’ಗಳನ್ನು ರಚನೆ ಮಾಡಬೇಕು. ಆ ಮೂಲಕ ಶಿಕ್ಷಕರ ಕೊರತೆ, ಆಟದ ಮೈದಾನ, ಗ್ರಂಥಾಲಯ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಲಭ್ಯವಿರುವ ಶಾಲೆಯಿಂದ ಎಲ್ಲಾ ಶಾಲೆಗಳು ಬಳಕೆ ಮಾಡಿಕೊಳ್ಳಬೇಕು. ಶಿಕ್ಷಕರ ಕೊರತೆಯಿರುವ ಶಾಲೆಗಳಿಗೆ, ಆಯಾ ಕ್ಲಸ್ಟರ್‌ ವ್ಯಾಪ್ತಿಯ ಶಿಕ್ಷಕರು ಹೋಗಿ ವಿಷಯವಾಗಿ ಪಾಠ, ಪ್ರವಚನಗಳನ್ನು ನಡೆಸಿಕೊಡಬೇಕು.

ಪದವಿ ಶಿಕ್ಷಣದ ಸಮಗ್ರ ಬದಲಾವಣೆ: ಪದವಿ ಶಿಕ್ಷಣದಲ್ಲಿ ಸಮಗ್ರವಾಗಿ ಬದಲಾವಣೆ ತರಲು ಎನ್‌ಇಪಿಯಲ್ಲಿ ಪ್ರಸ್ತಾಪಿಸಲಾಗಿದೆ. ಮುಖ್ಯವಾಗಿ ಪದವಿ ಶಿಕ್ಷಣವನ್ನು 3ರಿಂದ 4 ವರ್ಷಗಳ ‘ಲಿಬರಲ್‌ ಆರ್ಟ್ಸ್’ ರೀತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈ ಪದ್ಧತಿಯಲ್ಲಿ ಪದವಿಯನ್ನು 3 ಅಥವಾ 4 ವರ್ಷಗಳಿಗೆ ಸೀಮಿತಗೊಳಿಸಲಾಗಿದ್ದು, ವಿದ್ಯಾರ್ಥಿಗಳು ಎರಡು ಮೇಜರ್‌ ಹಾಗೂ ಮತ್ತೆರಡು ಮೈನರ್‌ ವಿಷಯಗಳನ್ನು ತೆಗೆದುಕೊಂಡು ಅಭ್ಯಾಸ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top