ನೂತನ, ಸನಾತನ ಶಿಕ್ಷಣ ನೀತಿ!

ನೂತನ ಶಿಕ್ಷಣ ನೀತಿಗೂ ಭಾರತೀಯ ಪರಂಪರೆಯ ಶಿಕ್ಷಣಕ್ಕೂ ಸಂಬಂಧ ಇದೆಯಾ? ಸನಾತನ ವಿದ್ಯಾಭ್ಯಾಸ ಪದ್ಧತಿಯನ್ನು ಲಕ್ಷ್ಯದಲ್ಲಿಟ್ಟುಕೊಂಡು ಹೊಸ ನೀತಿಯನ್ನು ಸಿದ್ಧಪಡಿಸಲಾಗಿದೆ ಎಂದು ಕೆಲವರು ತಜ್ಞರು ಹೇಳುತ್ತಿದ್ದಾರೆ. ಅದು ಹೇಗೆ?

ಮಾಳವೀಯರ ತತ್ವ ಸಿದ್ಧಾಂತ
ನೂತನ ಶಿಕ್ಷಣ ನೀತಿಯನ್ನು ಭಾರತದ ದೊಡ್ಡ ಪಂಡಿತ, ಮದನ ಮೋಹನ ಮಾಳವೀಯರ ತತ್ವ ಸಿದ್ಧಾಂತದಂತೆ ವೈದಿಕ ಜ್ಞಾನ ಹಾಗೂ ವಿಜ್ಞಾನಗಳೆರಡನ್ನೂ ಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್‌ ಪೋಕ್ರಿಯಾಲ್‌ ಅವರು ಹಿಂದೆಯೇ ಹೇಳಿದ್ದರು. ಮಾಳವೀಯರು ಭಾರತೀಯ ಶಿಕ್ಷಣತಜ್ಞ, ಸಮಾಜ ಸುಧಾರಕ ಹಾಗೂ ರಾಜಕಾರಣಿಯಾಗಿದ್ದು, ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಬನಾರಸ್‌ ಹಿಂದೂ ಯೂನಿವರ್ಸಿಟಿಯ ಸ್ಥಾಪಕರಾದ ಅವರು, ವೈದಿಕ ಜ್ಞಾನ ಹಾಗೂ ಆಧುನಿಕ ವಿಜ್ಞಾನಗಳೆರಡರ ಸಂಗಮದಿಂದ ನಮ್ಮ ಶಿಕ್ಷಣ ರೂಪುಗೊಳ್ಳಬೇಕು ಎಂಬ ತತ್ವ ಪ್ರತಿಪಾದಿಸಿದ್ದರು.

ಶಿಕ್ಷಣದ ಘಟ್ಟಗಳ ಬದಲಾವಣೆ
ಹಳೆಯ ಶಿಕ್ಷಣ ನೀತಿಗೂ ಹೊಸ ಶಿಕ್ಷಣ ನೀತಿಗೂ ತಜ್ಞರು ಅನೇಕ ಬದಲಾವಣೆಗನ್ನು ಗುರುತಿಸಿದ್ದಾರೆ. ಅದರಲ್ಲಿ ಪ್ರಮುಖವಾದುದು, ಶಿಕ್ಷಣದ ಘಟ್ಟಗಳಲ್ಲಿ ಬದಲಾವಣೆ. ಮೊದಲು 10+2 ವಿಧಾನದಲ್ಲಿ ಶಿಕ್ಷಣವಿತ್ತು. ಮಗುವಿನ ಮೂರನೇ ವರ್ಷದಿಂದ ಎರಡು ವರ್ಷಗಳ ಪ್ಲೇಸ್ಕೂಲ್‌, ನಂತರ ಎರಡು ವರ್ಷ ಕಿಂಡರ್‌ ಗಾರ್ಟನ್‌, ನಂತರ ಒಂದರಿಂದ ಹತ್ತರವರೆಗೆ ಪ್ರೈಮರಿ ಹಾಗೂ ಸೆಕೆಂಡರಿ ಶಿಕ್ಷಣ, ನಂತರ ಎರಡು ವರ್ಷ ಪಿಯು- ಹೀಗೆ ಇರುತ್ತಿತ್ತು. ಈ ಶಿಕ್ಷಣ ವಿಧಾನದಲ್ಲಿ ಪ್ಲೇಸ್ಕೂಲ್‌ ನಂತರದ ಎರಡು ವರ್ಷಗಳಲ್ಲಿ (ಎಲ್‌ಕೆಜಿ, ಯುಕೆಜಿ) ಮಗುವಿನ ಮೇಲೆ ಕಲಿಕೆಯನ್ನು ಹೇರಲಾಗುತ್ತಿದೆ. ನೂತನ ಪದ್ಧತಿಯಲ್ಲಿ ಇದಕ್ಕೆ ಬದಲಾವಣೆ ಸೂಚಿಸಲಾಗಿದೆ. ಹೊಸ ಪದ್ಧತಿಯಲ್ಲಿ ಈ ಹಂತವನ್ನೂ ಪ್ರೈಮರಿಗೆ ಸೇರಿಸಲಾಗಿದೆ. ಇದನ್ನೇ 5+3+3+4 ಪದ್ಧತಿ ಎಂದು ಕರೆಯಲಾಗಿದೆ.

5+3+3+4 ಪದ್ಧತಿ ಹೇಗೆ?
ಮಗುವಿನ ಮೂರನೇ ವರ್ಷ ಈ ಪದ್ಧತಿ ಆರಂಭವಾಗುತ್ತದೆ. ಇಲ್ಲಿ ಮೂರನೇ ವರ್ಷದಿಂದ ಐದು ವರ್ಷಗಳ ಕಾಲ, ಅಂದರೆ ಮಗು ಮೂರು ವರ್ಷದ ಅಂಗನವಾಡಿ ಹಾಗೂ ನಂತರದ ಒಂದು ಮತ್ತು ಎರಡನೇ ಕ್ಲಾಸುಗಳನ್ನು ಒಂದು ಘಟಕವಾಗಿ ಕಲಿಯುತ್ತದೆ. ಈ ಘಟಕದಲ್ಲಿ ಅದಕ್ಕೆ ಯಾವುದೇ ಬಲವಂತದ ಕಲಿಕೆ ಇರುವುದಿಲ್ಲ. ಇದನ್ನು ಮುಗಿಸುವಷ್ಟರಲ್ಲಿ ಮಗುವಿನ ಪ್ರಾಯ 8 ಆಗಿರುತ್ತದೆ. ಇದು ಮಗುವಿನ ಮೆದುಳು ಬೆಳೆಯುವ, ಮೆದುಳಿನ ನರಕೋಶಗಳು ಪೂರ್ಣ ಸಾಮರ್ಥ್ಯ‌ವನ್ನು ಹೊಂದುವ ಕಾಲ. ಈ ಹಂತದಲ್ಲಿ ಅದಕ್ಕೆ ಭಾಷೆಯ ಕೌಶಲ್ಯ, ಆಟ- ಚಟುವಟಿಕೆ ಆಧಾರಿತ ಶಿಕ್ಷಣವನ್ನು ನೀಡಲಾಗುತ್ತದೆ. ಕೆಜಿ ವ್ಯವಸ್ಥೆ ಬಲಿಷ್ಠವಾಗುವುದಕ್ಕೆ ಮುನ್ನ, ಸುಮಾರು ಮೂರು ದಶಕಗಳ ಹಿಂದಿನರೆಗೂ ಮಗು 6ನೇ ವಯಸ್ಸಿನವರೆಗೆ ಯಾವ ಶಾಲೆಗೂ ಹೋಗುತ್ತಿರಲಿಲ್ಲ. ಗುರುಕುಲಗಳಲ್ಲಿ ಶಿಕ್ಷಣ ಅರಂಭವಾಗುತ್ತಿದ್ದುದು ಮಗುವಿನ ಸುಮರು 7-8ರ ವಯಸ್ಸಿನಿಂದ.

ಪ್ರಿಪರೇಟರಿ, ಮಿಡಲ್‌
ಪ್ರಿಪರೇಟರಿ ಸ್ಕೂಲ್‌ ಮೂರು ವರ್ಷಗಳ ಎರಡು ಹಂತಗಳಲ್ಲಿ ಹರಡಿಕೊಂಡಿದೆ. ಈ ಹಂತಗಳಲ್ಲಿ ವಿದ್ಯಾರ್ಥಿಯು ಆಟ ಮತ್ತು ಚಟುವಟಿಕೆ ಆಧಾರಿತವಾದ ಕಲಿಕೆಯಿಂದ ಹೆಚ್ಚಿನ ಉನ್ನತವಾದ ಭಾಷಾ ಕಲಿಕೆ, ಜ್ಞಾನದ ಕಲಿಕೆ, ಕೌಶಲ್ಯಗಳ ಕಲಿಕೆಯತ್ತ ಚಲಿಸುತ್ತಾನೆ. ಗಣಿತ, ವಿಜ್ಞಾನ, ಕಲೆ, ಮಾನವೀಯ ಶಾಸ್ತ್ರಗಳತ್ತ ಹೋಗುತ್ತಾನೆ. 8ರಿಂದ 14ನೇ ವರ್ಷದವರೆಗೆ ಈ ಕಲಿಕೆ ಸಾಗುತ್ತದೆ. ಅಷ್ಟು ಹೊತ್ತಿಗೆ ವಿದ್ಯಾರ್ಥಿಯು ಹದಿಹರೆಯ ತಲುಪಿರುತ್ತಾನೆ. ಸ್ವಂತ ನಿರ್ಣಯ ಮಾಡುವ ಸಾಮರ್ಥ್ಯ‌ ಹೊಂದಿರುತ್ತಾನೆ. ದೈಹಿಕವಾಗಿ ಹಾಗೂ ಮಾನಸಿಕವಾಗಿ ಬೆಳೆದಿರುತ್ತಾನೆ. ಪ್ರಾಚೀನ ಗುರುಕುಲ ಪದ್ಧತಿಯಲ್ಲೂ ಹೀಗೇ ಇತ್ತು. ಉದಾಹರಣೆಗೆ, ಆರಂಭದ ನಾಲ್ಕಾರು ವರ್ಷಗಳಲ್ಲಿ ವಿದ್ಯಾರ್ಥಿ ಆಶ್ರಮ ವ್ಯವಸ್ಥೆಗೆ ಹೊಂದಿಕೊಳ್ಳುತ್ತಿದ್ದ. ನಂತರ ಆತನ ಆಳವಾದ ಕಲಿಕೆ ಆರಂಭವಾಗುತ್ತಿತ್ತು.

ಸೆಕೆಂಡರಿ ಶಿಕ್ಷಣ ವ್ಯವಸ್ಥೆ
ವಿದ್ಯಾರ್ಥಿಯ 14ನೇ ವರ್ಷದಿಂದ 18ನೇ ವರ್ಷದವರೆಗೆ ಆತ ಬಹು-ಆಗಮನ ಹಾಗೂ ಬಹು- ನಿರ್ಗಮನದ ಸೆಕೆಂಡರಿ ಶಿಕ್ಷಣ ವ್ಯವಸ್ಥೆಗೆ ಸೇರಿಕೊಳ್ಳುತ್ತಾನೆ. ಇಲ್ಲಿ ಆತ ಒಂದು, ಎರಡು, ಮೂರು ಮತ್ತು ನಾಲ್ಕು ವರ್ಷಗಳಲ್ಲಿ ಯಾವುದೇ ವರ್ಷದಿಂದ ಪ್ರಮಾಣ ಪತ್ರ ಪಡೆದು ಕಲಿಕೆ ಮುಗಿಸಬಹುದು. ಇಲ್ಲಿ ಬಹುಶಿಸ್ತೀಯ ಕಲಿಕೆಯಿರುತ್ತದೆ. ತಂತ್ರಜ್ಞಾನ ಶಿಕ್ಷಣ, ವಿಜ್ಞಾನ ವಿಷಯ, ಕಲಾ ವಿಷಯ- ಹೀಗೆ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ವಿದ್ಯಾರ್ಥಿಗಿರುತ್ತದೆ. ವಿದ್ಯಾರ್ಥಿಯ ಕ್ರಿಯಾಕೌಶಲಗಳನ್ನು ಆಧರಿಸಿ ಇಲ್ಲಿ ಕಲಿಕೆ ರೂಪುಗೊಂಡಿರುವ ಕಾರಣ, ಇದನ್ನು ಮುಗಿಸಿದ ವಿದ್ಯಾರ್ಥಿ ನೇರವಾಗಿ ಉದ್ಯೋಗ ಹುಡುಕುವುದಕ್ಕೆ ಅಥವಾ ತನ್ನದೇ ಉದ್ಯಮ ಅಥವಾ ಜೀವನವಿಧಾನ ಆರಂಭಿಸಲು ಸಮರ್ಥನಾಗಿರುತ್ತಾನೆ. ಇಲ್ಲಿಂದ ಆತ ವಿಶ್ವವಿದ್ಯಾಲಯ ಕಲಿಕೆಗೆ ತೆರಳಬಹುದು. ಪ್ರಾಚೀನ ಗುರುಕುಲದಲ್ಲಿ ಹದಿನೆಂಟನೇ ವರ್ಷಕ್ಕೆ ವಿದ್ಯಾರ್ಥಿ ಬದುಕಿಗಾಗಿ ಹೊರಟುಬಿಡುತ್ತಿದ್ದ.

ಹೆಸರು ಬದಲಾವಣೆ
ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಹೆಸರನ್ನು ಶಿಕ್ಷಣ ಸಚಿವಾಲಯ ಎಂದು ಬದಲಿಸಲಾಗುತ್ತದೆ. 2018ರಲ್ಲಿ ನಡೆದ ‘ಭಾರತೀಯ ಶಿಕ್ಷಣ ಮಂಡಲ’ ಸಮಾವೇಶದಲ್ಲಿ ಈ ಹೆಸರು ಬದಲಾವಣೆಗಾಗಿ ಒತ್ತಾಯಿಸಲಾಗಿತ್ತು. ‘ಮಾನವ ಸಂಪನ್ಮೂಲ’ ಎಂಬ ಹೆಸರಿನಲ್ಲಿ ಮನುಷ್ಯರನ್ನು ಮಲ್ಟಿನ್ಯಾಶನಲ್‌ ಕಂಪನಿಗಳಿಗೆ ಮಾನವ ಸಂಪನ್ಮೂಲವಾಗಿ ಸಿದ್ಧಪಡಿಸಿ ಒದಗಿಸಿಕೊಡುವ ಚಿಂತನೆಯಿದೆ; ಆದರೆ ‘ಶಿಕ್ಷಣ’ದಲ್ಲಿ ಮಗುವಿನ ಸರ್ವಾಂಗೀನ ಶಿಕ್ಷಣದತ್ತ ಕೇಂದ್ರೀಕರಿಸಲಿದೆ ಎಂಬುದು ಇದರ ಹಿಂದಿರುವ ಚಿಂತನೆ.

ಭಾರತೀಯ ಭಾಷೆಗಳ ಕಲಿಕೆ
ಈಗಿನ ಶಿಕ್ಷಣ ಪದ್ಧತಿ ಇಂಗ್ಲಿಷ್‌ನ ಮೇಲೆ ಬಹುವಾಗಿ ಅವಲಂಬಿತವಾಗಿದೆ. ಹೀಗಾಗಿ ಭಾರತೀಯ ಮೌಲ್ಯಗಳನ್ನು ಮಕ್ಕಳಲ್ಲಿ ರೂಢಿಸಲು ಸಾಧ್ಯವಾಗುತ್ತಿಲ್ಲ. ಭಾರತೀಯ ಮೌಲ್ಯಗಳು ಮಕ್ಕಳಿಗೆ ಅರ್ಥವಾಗಬೇಕಿದ್ದರೆ ಅದು ಭಾರತೀಯ ಭಾಷೆಗಳ ಮೂಲಕವೇ ಆಗಬೇಕು. ಭಾರತದ ‘ಗುರು’ ಎಂಬ ಪದ ಕೊಡುವ ಚಿತ್ರಣವನ್ನು ಇಂಗ್ಲಿಷ್‌ನ ‘ಟೀಚರ್‌’ ಎಂಬುದು ನೀಡಲಾರದು. ಹೀಗಾಗಿ ಇಲ್ಲಿ ಭಾರತೀಯ ಭಾಷೆಗಳಿಗೆ ಆದ್ಯತೆ ನೀಡಲಾಗಿದ್ದು, ತ್ರಿಭಾಷಾ ಸೂತ್ರಕ್ಕೆ ಮನ್ನಣೆ ನೀಡಲಾಗಿದೆ. ಹಿಂದಿ ಮಾತನಾಡುವ ರಾಜ್ಯಗಳು ಹಿಂದಿ, ಇಂಗ್ಲಿಷ್‌ ಹಾಗೂ ಯಾವುದಾದರೊಂದು ದಕ್ಷಿಣ ಭಾರತೀಯ ಭಾಷೆಯನ್ನು, ದಕ್ಷಿಣ ಭಾರತದ ರಾಜ್ಯಗಳು ಮಾತೃಭಾಷೆ, ಇಂಗ್ಲಿಷ್‌ ಹಾಗೂ ಹಿಂದಿಯನ್ನು ಕಲಿಯುವುದು ಸೂತ್ರ. ಮಾತೃಭಾಷೆಯ ಮೇಲೆ ಹೆಚ್ಚಿನ ಒತ್ತು ಬಿದ್ದಿದೆ. ಇದು ಸ್ಥಳೀಯ ಭಾಷಿಕ ಪರಂಪರೆಯನ್ನು ಉಳಿಸುವ ಬೆಳೆಸುವ ಯತ್ನ.

ಬೌದ್ಧಿಕ- ವೃತ್ತಿಪರ
ಹೊಸ ಶಿಕ್ಷಣ ನೀತಿ, ವಿಶ್ವವಿದ್ಯಾಲಯ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಎರಡು ಪ್ರಮುಖ ಧಾರೆಗಳನ್ನು ಸೃಷ್ಟಿಸುವ ಮಾತಾಡಿದೆ- ಅಕಾಡೆಮಿಕ್‌ ಹಾಗೂ ವೃತ್ತಿಪರ. ವೃತ್ತಿಪರ ಧಾರೆಯಲ್ಲಿ ತಾಂತ್ರಿಕ, ತಂತ್ರಜ್ಞಾನ, ಕೌಶಲಾಧಾರಿತವಾದ ಜ್ಞಾನಕ್ಕೆ ಹೆಚ್ಚು ಒತ್ತು ಹಾಗೂ ಅಕಾಡೆಮಿಕ್‌ನಲ್ಲಿ ಬೋಧನೆ, ಮಾನವಿಕ ವಿಷಯಗಳತ್ತ ಹೆಚ್ಚಿನ ಒತ್ತು ನೀಡಲಾಗುತ್ತದೆ. ಎರಡೂ ಒಂದಲ್ಲ ಒಂದು ರೀತಿಯಲ್ಲಿ ಮನುಷ್ಯನನ್ನು ತನ್ನದೇ ಆದ ಗಳಿಕೆಯ ದಾರಿಯತ್ತ ಮುನ್ನಡೆಸುತ್ತವೆ. ಅದರಲ್ಲೂ ಹೆಚ್ಚು ಒತ್ತನ್ನು ಕೌಶಲ ಕಲಿಕೆಗೆ, ವೃತ್ತಿಪರ ಕಲಿಕೆಗೆ ನೀಡಲಾಗಿದೆ. ಇದು ವಿದ್ಯಾರ್ಥಿಯು ತನ್ನ ಹದಿನೆಂಟನೇ ವರ್ಷದಲ್ಲಿ ಸೆಕೆಂಡರಿ ಶಿಕ್ಷಣದಿಂದ ಹೊರಬರುವಷ್ಟರಲ್ಲಿ ಒಂದಲ್ಲ ಒಂದು ಬಗೆಯ ಗಳಿಕೆಗೆ ಸಿದ್ಧವಾಗಿರುವಂತೆ ತಯಾರು ಮಾಡಿರುತ್ತದೆ.

ಸಂಸ್ಕೃತಕ್ಕೆ ಒತ್ತು
ಸಂಸ್ಕೃತ ಕಲಿಕೆಗೆ ಉತ್ತೇಜನ ನೀಡಲಾಗಿದೆ. ಸಂಸ್ಕೃತ ಸನಾತನ ಭಾರತ ಕಾಪಾಡಿಕೊಂಡು ಜೀವನಮೌಲ್ಯಗಳ ಭಂಡಾರವಾಗಿದೆ. ಸಂಸ್ಕೃತ ವಿದ್ಯಾಲಯಗಳು ಕೂಡ ಮಲ್ಟಿಡಿಸಿಪ್ಲಿನರಿ ಸಂಸ್ಥೆಗಳಾಗಲಿವೆ. ತ್ರಿಭಾಷಾ ಸೂತ್ರದಲ್ಲಿ ಸಂಸ್ಕೃತಕ್ಕೂ ಸ್ಥಾನವಿದೆ. ಹೀಗಾಗಿ ಎಲ್ಲ ಮಕ್ಕಳೂ ಭಾರತೀಯ ಜ್ಞಾನ ಪರಂಪರೆಗೆ ಉತ್ತರಾಧಿಕಾರಿಗಳಾಗಲಿದ್ದಾರೆ.

ಡ್ರಾಪ್‌ಔಟ್‌ಗಳಿರುವುದಿಲ್ಲ
ಈ ಮೊದಲು ಬಡವರು ಪ್ರಾಥಮಿಕ ಶಿಕ್ಷಣದ ಏಳು ವರ್ಷಗಳಲ್ಲಿ ಅಥವಾ ಹೈಸ್ಕೂಲ್‌ ಶಿಕ್ಷಣದ ಮೂರು ವರ್ಷಗಳಲ್ಲಿ ಶಾಲೆ ಬಿಡುತ್ತಿದ್ದರು. ಆದರೆ ಈಗ ಶಿಕ್ಷಣ ಘಟ್ಟಗಳೇ ಐದು, ಮೂರು, ಮೂರು- ಹೀಗೆ ಒಡೆಯಲ್ಪಟ್ಟಿರುವುದರಿಂದ ಯಾರೂ ಡ್ರಾಪ್‌ಔಟ್‌ ಎನಿಸಿಕೊಳ್ಳುವುದಿಲ್ಲ; ಯಾಕೆಂದರೆ ಎಲ್ಲರೂ ಒಂದಲ್ಲ ಒಂದು ಪ್ರಮಾಣಪತ್ರ ಹೊಂದುವ ಸಾಧ್ಯತೆಯಿದೆ. ಇದು ಪ್ರಮಾಣಪತ್ರಗಳಿಗೆ ಇರುವ ಆದ್ಯತೆಯನ್ನು ಕಡಿಮೆ ಮಾಡಿ, ಕೌಶಲಕ್ಕೆ ಆದ್ಯತೆಯನ್ನು ಹೆಚ್ಚಿಸಲಿದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top