ನಮ್ಮ ಕಾಲಬುಡಕ್ಕೆ ಬಂದಾಗಲೇ ಕಷ್ಟ ಗೊತ್ತಾಗೋದು

ಧರ್ಮದ ಹೆಸರಿನಲ್ಲಿ ಹಾದಿ ತಪ್ಪಿರುವ ಒಂದು ವರ್ಗದ ಕೆಲವರನ್ನು ಸರಿದಾರಿಗೆ ತರಲು ಸಂಬಂಧಿಸಿದ ಧಾರ್ವಿುಕ ನಾಯಕರು ಯಾಕೆ ಪ್ರಯತ್ನಿಸಬಾರದು? ಕೆಲ ಮತಾಂಧರು ಮಾಡುವ ದುಷ್ಟ ಕಾರ್ಯದಿಂದ ಒಂದು ಉದಾತ್ತ ಧರ್ಮಕ್ಕೆ ಕಳಂಕ ಬರುತ್ತಿರುವುದನ್ನು ತಡೆಯುವುದಕ್ಕಾದರೂ ಧಾರ್ವಿುಕ ನಾಯಕರೆಲ್ಲ ಒಕ್ಕೊರಲ ಧ್ವನಿ ಮೊಳಗಿಸಿದರೆ ಒಳಿತಾಗಬಹುದು.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

 ಅಮೆರಿಕದಲ್ಲಿ ಗುಂಡಿನ ದಾಳಿ ನಡೆಯುವುದು ಹೊಸತೇನಲ್ಲ. ಪ್ರತಿ ವರ್ಷವೂ ಅಲ್ಲಿ ಅಂಥ ಹಲವು ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಹತ್ತಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಾರೆ. ಜಗತ್ತಿಗೆಲ್ಲ ‘ದೊಡ್ಡಣ್ಣ’ ಎಂದು ಬೀಗುವ ಆ ದೇಶಕ್ಕೆ ಇದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಇತರ ದೇಶಗಳ ಆಂತರಿಕ ವಿಚಾರಗಳಲ್ಲಿ ಮೂಗುತೂರಿಸಲು ಸ್ವಲ್ಪವೂ ಹಿಂಜರಿಯದ ದೇಶಕ್ಕೆ ಎಂಥ ಇಕ್ಕಟ್ಟು ನೋಡಿ! ಅಮೆರಿಕದ ಕೆಲ ರಾಜ್ಯಗಳಲ್ಲಿ ಮುಕ್ತ ಗನ್ ಲೈಸೆನ್ಸ್ ಕಾನೂನು ಇರುವುದು ಇದಕ್ಕೆ ಕಾರಣ. ಹೀಗಾಗಿ ಈ ಕಾನೂನನ್ನು ಮುಂದುವರಿಸಬೇಕೇ ಅಥವಾ ರದ್ದುಪಡಿಸಬೇಕೇ ಎಂಬುದರ ಕುರಿತು ಅನೇಕ ವರ್ಷಗಳಿಂದ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಲೇ ಇದೆ. ಗನ್ ಲೈಸೆನ್ಸಿಗೂ ಮತ್ತು ಸ್ಥಳೀಯ ಜೀವನ ಪದ್ಧತಿ, ಕೃಷಿ, ಉದ್ಯೋಗ ಇತ್ಯಾದಿಗಳಿಗೂ ನಂಟು ಇರುವುದರಿಂದ ಹಾಗೂ ಗನ್ ಇಟ್ಟುಕೊಳ್ಳುವುದು ಅಮೆರಿಕದ ಕೆಲ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಷ್ಠೆಯ ಪ್ರಶ್ನೆಯೂ ಆಗಿರುವ ಕಾರಣ ಗನ್ ಪರವಾನಗಿ ರದ್ದು ಮಾಡುವ ವಿಚಾರದಲ್ಲಿ ಅಲ್ಲಿನ ರಾಜಕೀಯ ಪಕ್ಷಗಳಲ್ಲೇ ಒಮ್ಮತ ಮೂಡುತ್ತಿಲ್ಲ. ಹೀಗಾಗಿ ಅಲ್ಲಿ ಮುಕ್ತ ಗನ್ ಲೈಸೆನ್ಸ್ ಕಾನೂನಿನ ಕುರಿತಾಗಿ ಒಂದು

ಒಮ್ಮತಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಮುಂದೆ ಕೂಡ ಒಮ್ಮತದ ತೀರ್ವನಕ್ಕೆ ಬರುವುದು ಕಷ್ಟವೇ ಆಗಬಹುದು.

ವಿಶೇಷ ಅಂದರೆ ಹಿಂದೆಲ್ಲ ಅಮೆರಿಕದಲ್ಲಿ ನಡೆಯುವ ಗುಂಡಿನ ದಾಳಿಗಳು ಅಲ್ಲಿನವರಿಗೆ ಮಾಮೂಲಿ ಘಟನೆಗಳು ಮಾತ್ರ ಆಗಿದ್ದವು. ಆದರೆ ಈಗ ಹಾಗಲ್ಲ, ಅಮೆರಿಕವೂ ಸೇರಿದಂತೆ ಇಡೀ ಹೊರ ಜಗತ್ತಿನ ಪಾಲಿಗೆ ಅದೊಂದು ಭಯಂಕರ ಸುದ್ದಿ. ಅದರಲ್ಲೂ ಈಚಿನ ವರ್ಷಗಳಲ್ಲಿ ಅಲ್ಲಿ ಸಾಮೂಹಿಕ ಗುಂಡಿನ ದಾಳಿ (ಮಾಸ್ ಶೂಟೌಟ್) ಪ್ರಕರಣಗಳು ಹೆಚ್ಚಿವೆ. ಒಂದು ನಿದರ್ಶನ ನೀಡಬೇಕೆಂದರೆ, ಈ ವರ್ಷದ 337 ದಿನಗಳಲ್ಲಿ 354 ಇಂಥ ಗುಂಡಿನ ದಾಳಿಗಳು ನಡೆದಿವೆ. 2013ರಲ್ಲಿ 363 ಗುಂಡಿನ ದಾಳಿಗಳು ನಡೆದಿದ್ದವು. ಮೊನ್ನೆ ಗುರುವಾರ ನಡೆದ ಗುಂಡಿನ ದಾಳಿ ಸಹ ಅಮೆರಿಕವೂ ಸೇರಿ ಇಡೀ ಜಗತ್ತಿನಲ್ಲಿ ಒಂದು ರೀತಿಯ ಆತಂಕ, ಆಘಾತ ಸೃಷ್ಟಿಸಿಬಿಟ್ಟಿದೆ.

ಸ್ಯಾನ್​ಫ್ರಾನ್ಸಿಸ್ಕೋ ನಗರದ ಅಂಗವಿಕಲರ ಪುನರ್ವಸತಿ ಕೇಂದ್ರದಲ್ಲಿ ನಡೆಯುತ್ತಿದ್ದ ಕ್ರಿಸ್​ವುಸ್ ಪಾರ್ಟಿಗೆ ನುಗ್ಗಿದ ಮೂವರು ಆಗಂತುಕರು ಯದ್ವಾತದ್ವಾ ಗುಂಡು ಹಾರಿಸಿ ಹದಿನಾಲ್ಕು ಮಂದಿಯನ್ನು ಕೊಂದು ಹಾಕಿದರು. ರಕ್ತಪಾತ ನಡೆಸಿದ ರೀತಿ ನೋಡಿದರೆ ಅದು ಭಯೋತ್ಪಾದಕ ಕೃತ್ಯ ಇದ್ದರೂ ಇರಬಹುದು ಎಂದು ಸ್ಥಳೀಯ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಅಧ್ಯಕ್ಷ ಬರಾಕ್ ಒಬಾಮ ಕೂಡ ಇದೇ ರೀತಿಯಲ್ಲಿ ಸಂದೇಹಿಸಿದ್ದು, ಕೂಲಂಕಷ ತನಿಖೆಯ ನಂತರ ವಾಸ್ತವ ಬಯಲಾಗಲಿದೆ ಎಂದಿದ್ದಾರೆ. ರಕ್ತಪಾತ ನಡೆಸಿದವರು ಸೈಯದ್ ಫಾರೂನ್ ಮತ್ತು ತಶ್​ಫಿನ್ ಮಲಿಕ್ ಎಂಬ ದಂಪತಿ. ಅದಕ್ಕಿಂತ ಹೆಚ್ಚಾಗಿ ಅವರಿಬ್ಬರೂ ಪಾಕಿಸ್ತಾನ ಮೂಲದವರಾಗಿರುವುದರಿಂದ ಇದು ಭಯೋತ್ಪಾದನಾ ಕೃತ್ಯವಿರಬಹುದೆಂಬ ಶಂಕೆಯನ್ನು ಇಮ್ಮಡಿಸಿದೆ. ವಿಧ್ವಂಸಕ ಕೃತ್ಯ ನಡೆಸಿದವರು ಮುಸ್ಲಿಂ ಸಮುದಾಯಕ್ಕೆ ಸೇರಿದವರು ಮತ್ತು ಅದರಲ್ಲೂ ಅವರು ಪಾಕಿಸ್ತಾನ ಮೂಲದವರು ಎಂದ ತಕ್ಷಣ ಹೊರ ಜಗತ್ತು ನೋಡುವ ರೀತಿಯೇ ಬೇರೆ ಆಗುತ್ತದೆ. ಇಂಥದೊಂದು ಭಾವನೆ ಮೂಡುವುದಕ್ಕೆ ಕಾರಣ ಇಲ್ಲ ಅನ್ನುವುದಾದರೂ ಹೇಗೆ?

ಸ್ವಲ್ಪ ಹಿನ್ನೋಟ ಹರಿಸೋಣ. ಭಯೋತ್ಪಾದನೆ ಮೊಳಕೆಯೊಡೆದದ್ದು ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ. ಆದರೆ ಅದರ ಕಹಿ ಅನುಭವ ಅತಿ ಹೆಚ್ಚು ಆದದ್ದು ಭಾರತಕ್ಕೆ. ಹಾಗೆ ನೋಡಿದರೆ ಭಯೋತ್ಪಾದನೆ ಜಾಗತಿಕ ಸ್ವರೂಪ ಪಡೆದುಕೊಳ್ಳಲು ಪಾಕಿಸ್ತಾನ ಎಷ್ಟು ಕಾರಣವೋ ಅಮೆರಿಕವೂ ಅಷ್ಟೇ ಹೊಣೆಗಾರ ಎಂಬುದನ್ನು ಮರೆಯಲಾದೀತೆ? ಈ ಮಾತಿಗೆ ಒಸಾಮಾ ಬಿನ್ ಲಾಡೆನ್ ಮತ್ತು ಅಲ್​ಕೈದಾ ಬೆಳೆದು ಬಂದ ರೀತಿಯ ಉದಾಹರಣೆಯೊಂದೇ ಸಾಕು. ಅದರ ಪರಿಣಾಮವನ್ನು ಭಾರತ ಅನುಭವಿಸಿದ್ದು ಏನು ಕಡಿಮೆಯೇ? ತೊಂಭತ್ತರ ದಶಕದಲ್ಲಿ ಜಮ್ಮು-ಕಾಶ್ಮೀರದಲ್ಲಿ ಆರಂಭವಾದ ಇಸ್ಲಾಮಿಕ್ ಭಯೋತ್ಪಾದನೆಯಿಂದ ಕಳೆದುಕೊಂಡ ಜೀವಗಳಿಗೆ, ಹರಿದುಹೋದ ರಕ್ತಕ್ಕೆ ಲೆಕ್ಕವಿಟ್ಟವರಾರು? ಇಂದಿಗೂ ಅದು ನಿಂತಿಲ್ಲವಲ್ಲ…

ಭಯೋತ್ಪಾದನೆಯಿಂದ ತಾನು ಅನುಭವಿಸುತ್ತಿರುವ ಕಷ್ಟಕೋಟಲೆಗಳ ಬಗ್ಗೆ ಭಾರತ ಎಷ್ಟು ವಿವರಿಸಿದರೂ, ಅಂಕಿಅಂಶಗಳ ಆಧಾರ ಕೊಟ್ಟು ಹೇಳಿದರೂ ಜಾಗತಿಕ ವೇದಿಕೆಗಳಲ್ಲಿ ಭಾರತದ ಮಾತಿಗೆ ಯಾವ ಕಿಮ್ಮತ್ತೂ ಇರಲಿಲ್ಲ. ಕಾಶ್ಮೀರದಲ್ಲಿ ಮತ್ತು ಆ ಮೂಲಕ ದೇಶದ ಇತರ ಭಾಗಗಳಲ್ಲಿ ಭಯೋತ್ಪಾದಕರು ನಡೆಸುವ ರಕ್ತಪಾತ ಏನಿದ್ದರೂ ಭಾರತದ ಆಂತರಿಕ ಸಮಸ್ಯೆ ಎಂದೇ ಅಮೆರಿಕ ಆದಿಯಾಗಿ ಪ್ರಪಂಚದ ಇತರ ದೇಶಗಳ ನಾಯಕರು ವ್ಯಾಖ್ಯಾನ ಮಾಡುತ್ತ ಬಂದರು. ಕಾಶ್ಮೀರದ ಭಯೋತ್ಪಾದನೆ ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಸಮಸ್ಯೆ ಎಂತಲೇ ಜಾಗತಿಕ ವೇದಿಕೆಗಳಲ್ಲಿ ಹೇಳಿಕೊಂಡು ಬರಲಾಯಿತು. ಆದರೆ ಯಾವಾಗ ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ಅಲ್​ಕೈದಾ ಉಗ್ರರು ವೈಮಾನಿಕ ದಾಳಿ ನಡೆಸಿ, ಕಟ್ಟಡವನ್ನು ಧ್ವಂಸಗೈದು ನೂರಾರು ಜನರ ರಕ್ತ ಹರಿಸಿದರೋ ಆಗ ಭಯೋತ್ಪಾದನೆಯ ಬಿಸಿ ಎಂಥದೆಂಬುದು ಎಂಬುದು ಹೊರ ಜಗತ್ತಿನ ನಿಜವಾದ ಅನುಭವಕ್ಕೆ ಬಂತು. ಯಾವುದಾದರೂ ಅಷ್ಟೆ ತಾನೆ? ನಮ್ಮ ಕಾಲಬುಡಕ್ಕೆ ಬಂದಾಗಲೇ ವಾಸ್ತವ ಅರಿವಾಗುವುದು. ಭಯೋತ್ಪಾದನೆಯೆಂಬ ಜಾಗತಿಕ ಪೀಡೆಯನ್ನು ಸಂಘಟಿತವಾಗಿ ದಮನ ಮಾಡಬೇಕೆಂಬ ಗಟ್ಟಿ ಧ್ವನಿ ಅಮೆರಿಕ ಆದಿಯಾಗಿ ಜಾಗತಿಕ ನಾಯಕರಿಂದ ಹೊರಟಿತು. ಅಮೆರಿಕ ಮೊಳಗಿಸಿದ ‘ವಾರ್ ಆನ್ ಟೆರರ್’ ಗರ್ಜನೆ ಒಸಾಮಾ ಬಿನ್ ಲಾಡೆನ್ನನ ಅವಸಾನದಲ್ಲಿ ಮುಕ್ತಾಯವಾಯಿತು.

ಲಾಡೆನ್ನನ ಅಂತ್ಯವೇನೋ ಆಯಿತು, ನಿಜ. ಆದರೆ ಭಯೋತ್ಪಾದನೆ ಅಂತ್ಯ ಅಷ್ಟು ಸುಲಭದಲ್ಲಿ ಆಗುತ್ತದೆಯೇ? ಏಕೆಂದರೆ ಭಯೋತ್ಪಾದಕ ಮಾನಸಿಕತೆ, ಧಾರ್ವಿುಕ ಅಸಹಿಷ್ಣುತೆ ಇಂದು ಜಗತ್ತಿನಾದ್ಯಂತ ಬಲವಾಗಿ ವ್ಯಾಪಿಸಿಕೊಂಡಿದೆ. ಅದರ ಪರಿಣಾಮವಾಗಿ ಹತ್ತಾರು, ನೂರಾರು ಲಾಡೆನ್​ಗಳು ಬಲಿತುಕೊಂಡಿದ್ದಾರೆ. ಅದು ಕೇವಲ ಇಸ್ಲಾಮೇತರ ಜಗತ್ತು ಎದುರಿಸಬೇಕಾದ ಸವಾಲಲ್ಲ, ಜಾಗತಿಕ ಪ್ರಜ್ಞಾವಂತ ಮುಸ್ಲಿಂ ಸಮುದಾಯಕ್ಕೆ ಕೂಡ ದೊಡ್ಡ ಸವಾಲೇ ಆಗಿದೆ ಎಂಬುದು ನಮ್ಮ ಗಮನದಲ್ಲಿರಬೇಕು.

ಹೌದೋ ಅಲ್ಲವೋ ನೋಡಿ. ಅಮೆರಿಕದ ಮೇಲೆ ಲಾಡೆನ್ ಬಂಟರು ದಾಳಿ ನಡೆಸುವ ಪೂರ್ವದಲ್ಲಿ ಭಯೋತ್ಪಾದನೆ ವಿರುದ್ಧ ಧ್ವನಿ ಎತ್ತಿದ್ದ ಏಕೈಕ ದೇಶ ಭಾರತವಾಗಿತ್ತು. ಯಾವಾಗ ತನ್ನ ಪ್ರತಿಷ್ಠೆಯ ಸಂಕೇತದಂತಿದ್ದ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ದಾಳಿಯಾಯಿತೋ ಆಗ ಅಮೆರಿಕ ಮೊದಲ ಬಾರಿಗೆ ಇಸ್ಲಾಮಿಕ್ ಭಯೋತ್ಪಾದನೆ ವಿರುದ್ಧ ಧ್ವನಿ ಎತ್ತಿತು. ಲಾಡೆನ್ನನ ಅಲ್​ಕೈದಾ ವಿಭಜನೆಗೊಂಡು ಇರಾಕ್, ಸಿರಿಯಾ, ಜೋರ್ಡಾನ್​ಗಳಲ್ಲಿ 2003ರಲ್ಲಿ ತಲೆ ಎತ್ತಿದ ಐಸಿಸ್ ಸಂಘಟನೆ ಇಂದು ಇಡೀ ಜಗತ್ತಿಗೆ ಹೇಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ ಎಂಬುದನ್ನು ಪ್ರತ್ಯೇಕವಾಗಿ ವಿವರಿಸಬೇಕಿಲ್ಲ. ಅದು ಎಸಗುತ್ತಿರುವ ಕುಕೃತ್ಯಗಳು ಒಂದಾ ಎರಡಾ? ಎಷ್ಟು ವಿಚಿತ್ರ ನೋಡಿ. ಇಂದು ಜಗತ್ತನ್ನು ಕಂಟಕವಾಗಿ ಕಾಡುತ್ತಿರುವ ಇಸ್ಲಾಮಿಕ್ ಭಯೋತ್ಪಾದನೆ ಮೊಳಕೆಯೊಡೆದದ್ದು ಅಫ್ಘಾನಿಸ್ತಾನದಲ್ಲಿ.

ಅಲ್ಲಿ ಅಲ್​ಕೈದಾ ಸಂಘಟನೆ ಬೆಳೆಯಲು ಕಾರಣವಾದದ್ದು ಎರಡು ಬಲಾಢ್ಯ ದೇಶಗಳಾದ ಅಮೆರಿಕ ಮತ್ತು ರಷ್ಯಾ.

ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ಅಲ್​ಕೈದಾ ಉಗ್ರರು ದಾಳಿ ಮಾಡಿದ ನಂತರ ಭಾರಿ ಮುಜುಗರಕ್ಕೆ ಒಳಗಾದ ಅಮೆರಿಕ ಆ ಉಗ್ರ ಸಂಘಟನೆಯ ನಿರ್ನಾಮಕ್ಕೆ ಸಂಕಲ್ಪ ಮಾಡಿತು. ಅಲ್​ಕೈದಾದಿಂದ ಸಿಡಿದು ಸಿರಿಯಾ, ಇರಾಕ್ ಮತ್ತಿತರ ಇಸ್ಲಾಮಿಕ್ ದೇಶಗಳಲ್ಲಿ ಅಟ್ಟಹಾಸ ಮೆರೆಯುತ್ತಿರುವ ಐಸಿಸ್ ದಮನಕ್ಕೆ ರಷ್ಯಾ ರಣರಂಗಕ್ಕಿಳಿದಿದೆ. ಆ ಬೆನ್ನಲ್ಲೇ ಬ್ರಿಟನ್ ಕೂಡ ಇದೀಗ ಐಸಿಸ್ ಉಗ್ರರನ್ನು ಮಟ್ಟಹಾಕಲು ಕಾರ್ಯಾಚರಣೆಗೆ ಇಳಿದಿದೆ. ಪ್ಯಾರಿಸ್ ದಾಳಿಯ ನಂತರ ಆಕ್ರೋಶಗೊಂಡಿರುವ ಫ್ರಾನ್ಸ್ ಕೂಡಾ ಐಸಿಸ್ ಉಗ್ರರ ಮೇಲೆ ಮುಗಿಬಿದ್ದಿದೆ.

ಎಷ್ಟೊಂದು ಕಾಕತಾಳೀಯ ನೋಡಿ. ಸುಮಾರು ಇಪ್ಪತ್ತು ದಿನಗಳ ಹಿಂದಿನ ಮಾತು. ಲಂಡನ್​ನ ವೆಂಬ್ಲೆ ಸ್ಟೇಡಿಯಂನಲ್ಲಿ ಕಿಕ್ಕಿರಿದು ತುಂಬಿದ್ದ ಜನರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುತ್ತಿದ್ದರು. ಅಲ್ಲಿ ಮಾತನಾಡುತ್ತ- ‘ಜಾಗತಿಕ ಭಯೋತ್ಪಾದನೆ ನಿಮೂಲನೆಗೆ ವಿಶ್ವಸಂಸ್ಥೆ ಸಂಘಟಿತ ಪ್ರಯತ್ನ ಆರಂಭಿಸುವುದೊಂದೇ ಪರಿಹಾರ’ ಎಂದು ಅವರು ಹೇಳಿದರು. ಮೋದಿ ಭಾಷಣ ಪತ್ರಿಕೆಗಳಲ್ಲಿ ಮುದ್ರಣವಾಗಿ ಶಾಯಿ ಕೂಡ ಆರಿರಲಿಲ್ಲ. ಅಷ್ಟರಲ್ಲೇ ಫ್ರಾನ್ಸ್​ನ ಪ್ಯಾರಿಸ್​ನಲ್ಲಿ ಹಿಂದೆಂದೂ ಕಂಡು ಕೇಳರಿಯದ ಭೀಭತ್ಸ ಭಯೋತ್ಪಾದಕ ದಾಳಿ ನಡೆಯಿತು. ಅದರ ಪರಿಣಾಮ ಏನು ಕಡಿಮೆಯೇ? ಪ್ಯಾರಿಸ್ ದಾಳಿಯ ಬಳಿಕ ಪ್ರಪಂಚದ ಎಲ್ಲಾ ದೇಶಗಳು ಭಯೋತ್ಪಾದನೆಯನ್ನು ಹೆಡೆಮುರಿ ಕಟ್ಟಲು ಒಗ್ಗೂಡುವ ಪ್ರಕ್ರಿಯೆ ಶುರುವಾಗಿದೆ. ವಿಶ್ವಸಂಸ್ಥೆ ಭದ್ರತಾ ಸಮಿತಿ ಕೂಡ ಈ ನಿಟ್ಟಿನಲ್ಲಿ ನಿರ್ಣಯ ತೆಗೆದುಕೊಂಡಿದ್ದು ಸಾಮಾನ್ಯ ಬೆಳವಣಿಗೆಯಲ್ಲ. ಇದೆಲ್ಲದರ ಪರಿಣಾಮ ಜಾಗತಿಕವಾಗಿ ಇಸ್ಲಾಂ ಮತ್ತು ಇಸ್ಲಾಮೇತರ ಎಂಬ ಎರಡು ಬಣಗಳು ಭವಿಷ್ಯದಲ್ಲಿ ಸೃಷ್ಟಿಯಾಗುವುದನ್ನು ಯಾರೂ ತಡೆಯಲಾಗದು ಎಂದು ತೋರುತ್ತದೆ.

ಇಲ್ಲಿ ಒಂದು ಸಂಗತಿಯನ್ನು ಗಮನಿಸಲೇಬೇಕಿದೆ. ಪ್ರತಿ ಸಲ ಭಯೋತ್ಪಾದಕ ಘಟನೆಗಳು ನಡೆದಾಗ ಅದನ್ನು ಇಸ್ಲಾಮ್ೊಂದಿಗೆ ಸಮೀಕರಣ ಮಾಡಬಾರದು ಎಂಬ ವಾದವಿದೆ. ಒಂದು ರೀತಿಯಲ್ಲಿ ಅದು ಒಪ್ಪತಕ್ಕ ವಿಷಯವೂ ಹೌದು. ಆದರೆ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವವರಲ್ಲಿ ಬಹುಪಾಲು ಮಂದಿ ಒಂದು ಧರ್ಮ, ಒಂದೇ ಆಚರಣೆಯಲ್ಲಿ ಶ್ರದ್ಧೆ ಮತ್ತು ನಂಬಿಕೆಯನ್ನು ಇಟ್ಟುಕೊಂಡಿರುವವರೇ ಆಗಿರುವುದರಿಂದ ಆ ಎರಡನ್ನೂ ಬೇರ್ಪಡಿಸುವ ಬಗೆ ಹೇಗೆ ಎಂಬುದೇ ಮೂಲಭೂತ ಪ್ರಶ್ನೆಯಾಗಿದೆ. ಅಲ್ಲವೆ?

ಪ್ರಜ್ಞಾವಂತರು ಎನಿಸಿಕೊಂಡಿರುವವರು ಹೀಗೆ ಮಾಡಬಹುದೇ? ಇಂದು ಜಗತ್ತಿನಾದ್ಯಂತ ಭಯೋತ್ಪಾದಕ ಚಟುವಟಿಕೆ ಅಂಕೆ ಮೀರಿ ಬೆಳೆಯಲು ಅತಿಯಾದ ಮತ್ತು ಅಂಧ ಧಾರ್ವಿುಕ ಶ್ರದ್ಧೆಯೂ ಕಾರಣ ಎಂಬುದು ಎಂಥವರ ಅನುಭವಕ್ಕೂ ಬರುವ ವಿಚಾರ. ಹಾಗಾದರೆ ಧರ್ಮದ ಹೆಸರಿನಲ್ಲಿ ಹಾದಿ ತಪ್ಪಿರುವ ಒಂದು ವರ್ಗದ ಕೆಲವರನ್ನು ಸರಿದಾರಿಗೆ ತರಲು ಸಂಬಂಧಿಸಿದ ಧಾರ್ವಿುಕ ನಾಯಕರು ಯಾಕೆ ಪ್ರಾಮಾಣಿಕವಾಗಿ ಪ್ರಯತ್ನಿಸಬಾರದು? ಕೆಲ ಮತಾಂಧರು ಮಾಡುವ ದುಷ್ಟ ಕಾರ್ಯದಿಂದ ಒಂದು ಉದಾತ್ತ ಧರ್ಮಕ್ಕೆ ಕಳಂಕ ಬರುತ್ತಿರುವುದನ್ನು ತಡೆಯುವುದಕ್ಕಾದರೂ ಧಾರ್ವಿುಕ ನಾಯಕರೆಲ್ಲ ಒಕ್ಕೊರಲ ಧ್ವನಿ ಮೊಳಗಿಸಿದರೆ ಒಳಿತಾಗಬಹುದು.

ಎರಡನೆಯದು ಮುಖ್ಯವಾಹಿನಿಗೆ ಬರುವ ವಿಚಾರ; ಇಡೀ ಜಗತ್ತು ಒಂದು ಕುಟುಂಬದ ಹಾಗೆ ಆಗಿರುವ ಇಂದಿನ ಆಧುನಿಕ ಸನ್ನಿವೇಶದಲ್ಲಿ ಸಮಾನ ಶಿಕ್ಷಣ, ಸಮಾನ ಜೀವನ, ಒಡನಾಟ, ಪರಸ್ಪರ ನಂಬಿಕೆಗಳನ್ನು ಗೌರವಿಸುವ ಪ್ರವೃತ್ತಿಯನ್ನು ಬೆಳೆಸುವುದು ಸಹ ಅನಿವಾರ್ಯ. ಈ ನಿಟ್ಟಿನಲ್ಲೂ ಸಂಬಂಧಿಸಿದವರು ಗಂಭೀರವಾಗಿ ಆಲೋಚನೆ ಮಾಡಬೇಕಾದ ಸನ್ನಿವೇಶ ನಿರ್ವಣವಾಗಿದೆ.

ಉತ್ತಮ ಜೀವನ ಪ್ರತಿಯೊಬ್ಬ ಜೀವಿಯ ಹಕ್ಕು ತಾನೆ? ಹಾಗಾದರೆ ಒಂದು ಧರ್ಮ, ಮತ ಅಥವಾ ನಂಬಿಕೆ ಉತ್ತಮ ಜೀವನದ ಹಕ್ಕನ್ನೇ ಕಸಿದುಕೊಳ್ಳಲು ಸಾಧ್ಯವೇ? ಪ್ರಜ್ಞಾವಂತರು ಆಲೋಚನೆ ಮಾಡಬೇಕಲ್ಲವೆ… ಈ ಜಗತ್ತನ್ನು ವಾಸಯೋಗ್ಯವಾಗಿಸುವ ಹೊಣೆ ಎಲ್ಲರ ಮೇಲೂ ಇದೆ ಮತ್ತು ಇದು ಯಾರೋ ಕೆಲವರಿಂದ ಆಗುವ ಕೆಲಸವಲ್ಲ ಎಂಬುದನ್ನು ಮರೆಯದಿರೋಣ. ಏನಂತೀರಿ?

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top